অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಆಹಾರದಿಂದ ಸ್ತನ ಕ್ಯಾನ್ಸರ್

ಆಹಾರದಿಂದ ಸ್ತನ ಕ್ಯಾನ್ಸರ್

ಇತ್ತೀಚೆಗೆ ಮಹಿಳೆಯರು ಅನುಭವಿಸುತ್ತಿರುವ ಕಾಯಿಲೆಗಳಲ್ಲಿ ಅರ್ಥರೈಟಿಸ್ (ಸಂಧಿವಾತ) ಮತ್ತು ಸ್ತನ ಕ್ಯಾನ್ಸರ್ ಪ್ರಮುಖವಾದವು. ಎರಡು ಸಮಸ್ಯೆಗಳಿಗೂ ಕಾರಣ ಜೀವನಶೈಲಿ. ಆಧುನಿಕ ಜೀವನಶೈಲಿಯೇ ಈ ಸಮಸ್ಯೆಗೆ ಕಾರಣ ಎಂಬುದನ್ನು ಹಲವು ಸಂಶೋಧನೆಗಳು ದೃಢಪಡಿಸಿವೆ. 35 ವರ್ಷದ ನಂತರ ಮಹಿಳೆಯರ ಆರೋಗ್ಯದಲ್ಲಿ ಗಣನೀಯ ಪ್ರಮಾಣದ ಬದಲಾವಣೆಗಳಾಗುತ್ತವೆ. ಈ ಹಂತದಲ್ಲಿ ಪ್ರತಿ ಮಹಿಳೆಯೂ ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆಯಾದರೂ ಆರೋಗ್ಯ ತಪಾಸಣೆ ಮಾಡಿಸಲೇಬೇಕು. 35 ವರ್ಷ ಮೇಲ್ಪಟ್ಟ ಮಹಿಳೆಯರು ಸ್ತನ ಕ್ಯಾನ್ಸರ್ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಲೇಬೇಕು ಎನ್ನುತ್ತವೆ ಸಂಶೋಧನೆಗಳು. ಅದರಲ್ಲೂ ಹೆಚ್ಚು ಕೊಬ್ಬಿನಂಶವಿರುವ ಆಹಾರಪದಾರ್ಥಗಳನ್ನು ಸೇವಿಸುವ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತದೆ. ದೇಹದ ತೂಕ ಹೆಚ್ಚಿದಷ್ಟೂ ಸ್ತನ ಕ್ಯಾನ್ಸರ್ ಅಪಾಯ ಹೆಚ್ಚು. ಪೌಷ್ಟಿಕಾಂಶವಿರುವ ಹಣ್ಣು-ತರಕಾರಿಯಂಥ ಆಹಾರ ಸೇವಿಸದೆ ಕೊಬ್ಬಿನಂಶ ಹೇರಳವಾಗಿರುವ ಜಂಕ್ ಫುಡ್, ಫಾಸ್ಟ್ ಫುಡ್‌ಗಳನ್ನು ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶ ಸಿಗದೆ, ಬೊಜ್ಜು ಬೆಳೆಯುತ್ತದೆ. ಇದರಿಂದ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಎಂಬುದನ್ನು ಇತ್ತೀಚಿನ ಸಂಶೋಧನೆಯೊಂದು ದೃಢಪಡಿಸಿದೆ. ತಡವಾಗಿ ಮದುವೆಯಾಗುವುದು, ಅಥವಾ ಮಕ್ಕಳಾಗುವುದರಿಂದಲೂ ಸ್ತನ ಕ್ಯಾನ್ಸರ್ ಬರಬಹುದು. ಕ್ರಮಬದ್ಧವಲ್ಲದ ಆಹಾರ ಪದ್ಧತಿಯೂ ಇದಕ್ಕೆ ಕಾರಣವಾಗಬಹುದು. ನಿಯಮಿತವಾದ ವಾಕಿಂಗ್, ಯೋಗ, ಧ್ಯಾನಗಳಿಂದಾಗಿ ದೇಹದ ಆರೋಗ್ಯದ ಸಮತೋಲನ ಕಾಯ್ದುಕೊಳ್ಳಬಹುದು. ಇದು ದೇಹದ ತೂಕವನ್ನೂ ಇಳಿಸಿ ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆಗೊಳಿಸುತ್ತದೆ. ಸ್ತನ ಕ್ಯಾನ್ಸರ್‌ನ ಮೊದಲ ಮೂರು ಹಂತದವರೆಗೆ ರೋಗಿಯ ದೇಹದಲ್ಲಿ ಯಾವುದೇ ಲಕ್ಷಣಗಳೂ ಗೋಚರಿಸುವುದಿಲ್ಲ. ಆದ್ದರಿಂದ ಇದನ್ನು ಪತ್ತೆಹಚ್ಚುವುದು ತೀರಾ ಕಷ್ಟದ ಕೆಲಸ. ಇದೀಗ ಹಲವು ಆಸ್ಪತ್ರೆಗಳಲ್ಲಿ ಸ್ತನ ಕ್ಯಾನ್ಸರ್ ಪರೀಕ್ಷೆಗೆಂದು ಯಂತ್ರಗಳು ಬಂದಿವೆ. ಸ್ವಯಂ ರೋಗಿಯೇ ಪರೀಕ್ಷೆ ಮಾಡಿಕೊಳ್ಳಬಹುದು. ಖರ್ಚೂ ಹೆಚ್ಚಿಲ್ಲ. ಏನೂ ಆಗಿಲ್ಲ ಎಂದು ನಿರ್ಲಕ್ಷಿಸುವುದರಿಂದ ಮುಂದೊಮ್ಮೆ ಹೆಚ್ಚಿನ ಅಪಾಯಕ್ಕೆ ತುತ್ತಾಗುವ ಪ್ರಸಂಗ ಬರಬಹುದು. ಈ ರೋಗ ಯಾವುದೇ ಸೂಚನೆ ನೀಡದೆ ಬರುವುದರಿಂದ ಸಾಧ್ಯವಾದಷ್ಟು ನಿಗಾ ವಹಿಸುವುದು ಉತ್ತಮ. 35 ವರ್ಷ ಮೇಲ್ಪಟ್ಟ ಮಹಿಳೆಯರಷ್ಟೇ ಅಲ್ಲ, ಹದಿಹರೆಯದ ಯುವತಿಯರಲ್ಲೂ ಈ ಸಮಸ್ಯೆ ಇತ್ತೀಚೆಗೆ ಕಂಡುಬರುತ್ತಿದೆ. ಆದ್ದರಿಂದ ಪ್ರತಿಯೊಬ್ಬ ಮಹಿಳೆಯೂ ತನ್ನ ಜೀವನ ಶೈಲಿಯಲ್ಲಿ ಶೀಘ್ರವೇ ಬದಲಾವಣೆ ತಂದುಕೊಳ್ಳುವುದು ಅಗತ್ಯವಾಗಿ ಆಗಬೇಕಾದ ಕೆಲಸ. ಅಷ್ಟೇ ಅಲ್ಲ, ಯಾವುದೇ ಮುಜುಗರವಿಲ್ಲದೆ, ಇದೊಂದು ಸಹಜ ಸಮಸ್ಯೆ ಎಂಬಂತೆ ವೈದ್ಯರನ್ನು ಕಾಣುವುದು, ನಿಯಮಿತವಾಗಿ ಪರೀಕ್ಷೆ ಮಾಡಿಕೊಳ್ಳುವುದು ಸಹ ಅಷ್ಟೇ ಮುಖ್ಯವಾದುದು.

ಮೂಲ: ವಿಕ್ರಮ

ಕೊನೆಯ ಮಾರ್ಪಾಟು : 4/27/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate