অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಗಂಡಸರಿಗೂ ಬಂಜೆತನದ ಭೀತಿ!

ಗಂಡಸರಿಗೂ ಬಂಜೆತನದ ಭೀತಿ!

ಗಂಡಸರಲ್ಲೂ ಬಂಜೆತನ ಕಾಡುತ್ತದೆ ಎಂಬ ಕಲ್ಪನೆಯೇ ಇತ್ತೀಚಿನವರೆಗೂ ಇರಲಿಲ್ಲ. ಮಕ್ಕಳಾಗದಿದ್ದರೆ ಅವನ ಲೈಂಗಿಕ ಶಕ್ತಿ ಮತ್ತು ಪುರುಷತ್ವದ ಬಗ್ಗೆ ಸಂದೇಹ ಮೂಡುತ್ತಿತ್ತೇ ಹೊರತು ನಿರ್ವೀರ್ಯದ ಬಗ್ಗೆ ಯಾರೂ ತಲೆ ಕೆಡೆಸಿಕೊಳ್ಳುತ್ತಿರಲಿಲ್ಲ. ಭಾರತೀಯ ವೈದ್ಯಕೀಯ ಕ್ಷೇತ್ರದಲ್ಲೂ ಈ ಬಗ್ಗೆ ಚರ್ಚೆಯಾಗಿದ್ದೂ ತುಂಬಾ ಕಡಿಮೆ.

ಕಾಲ ಬದಲಾದಂತೆ ವೈದ್ಯಕೀಯ ಕ್ಷೇತ್ರದ ಸಂಶೋಧನೆಗಳು ಬಂಜೆತನಕ್ಕೆ ಹೆಣ್ಣೊಬ್ಬಳೇ ಹೊಣೆಯಲ್ಲ ಎಂಬುದನ್ನು ಸಾಬೀತು ಪಡಿಸಿದವು. ಬಂಜೆತನಕ್ಕೆ ಮಹಿಳೆಯಷ್ಟೇ ಪುರಷನೂ ಕಾರಣ ಎಂದು ನಿರೂಪಿಸಿದಾಗ ಗಂಡಸರ ಲೋಕ ಸದ್ದಿಲ್ಲದೆ ಕನಲಿತು!

ಅಹಂಗೆ ಪೆಟ್ಟು: ನಲುಗಿದ ಪುರುಷಲೋಕ
‘ಗಂಡಸರಲ್ಲೂ ಬಂಜೆತನ ಹೆಚ್ಚುತ್ತಿದೆ’ ಎಂಬ ಸುದ್ದಿ  ಆರಂಭದಲ್ಲಿ ಪಥ್ಯವಾಗಲಿಲ್ಲ. ನಿರ್ವೀರ್ಯ ಪುರುಷರ ಸಂಖ್ಯೆ ದಿನದಿಂದ ದಿನಕ್ಕೆ  ಹೆಚ್ಚಾಗುತ್ತಿದೆ ಎಂದು ವೈದ್ಯಲೋಕ ತಿಳಿಸಿದಾಗ ಗಂಡಸರು ಬೆಚ್ಚಿಬಿದ್ದರು.

ಈ ಹಿಂದೆ ಶೇ 20ರಷ್ಟಿದ್ದ ಪುರುಷರ ಬಂಜೆತನ ಪ್ರಮಾಣ ಶೇ 40ಕ್ಕೆ ಏರಿದೆ. ಈಗ ಗಂಡಸರು ‘ಒಣ ಪ್ರತಿಷ್ಠೆ’ ಮತ್ತು ‘ಅಹಂ’  ಬದಿಗಿಟ್ಟು ಬಂಜೆತನಕ್ಕೆ ಪರಿಹಾರ ಕಂಡುಕೊಳ್ಳಲು ಮುಂದಾಗತೊಡಗಿದ್ದಾರೆ. ಭಾರತದ ವೈದ್ಯಕೀಯ ಕ್ಷೇತ್ರದಲ್ಲಿ ಇಲ್ಲಿಯವರೆಗೂ ಹೆಚ್ಚಿಗೆ ಚರ್ಚೆಯಾಗದ ವಿಷಯವೆಂದರೆ ‘ಗಂಡಸರ ಬಂಜೆತನ’ ಎನ್ನುತ್ತಾರೆ ಮಣಿಪಾಲ್‌–ಅಂಕುರ್‌ ಆಸ್ಪತ್ರೆಯ ವೈದ್ಯ ಡಾ. ಎಸ್‌.ಎಸ್‌. ವಾಸನ್‌.

ಶೇಕಡಾ 40ಕ್ಕಿಂತಲೂ ಅಧಿಕ ಪ್ರಕರಣಗಳಲ್ಲಿ ಪುರುಷ ನಿರ್ವೀರ್ಯನಾಗಿರುವುದು ಸಾಬೀತಾ­ಗಿದೆ. ಮಗುವನ್ನು ಪಡೆಯಲು ದಂಪತಿಯ ಸತತ ಪ್ರಯತ್ನದ ಹೊರತಾಗಿ ಒಂದು ವರ್ಷ­ವಾ­ದರೂ ಗರ್ಭ ಧರಿಸದಿದ್ದರೆ ಆಗ ದಂಪತಿಯಲ್ಲಿ ಬಂಜೆತನದ ಸಮಸ್ಯೆ ಇರಬಹುದು ಎಂದು ಶಂಕಿಸಬಹುದು.

ದಂಪತಿಯನ್ನು ಪ್ರತ್ಯೇಕವಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿ ತಾತ್ಕಾಲಿತ ಬಂಜೆತನ (infertility) ಅಥವಾ ಶಾಶ್ವತ ಬಂಜೆತನವನ್ನು (sterility) ನಿರ್ಧರಿಸಲಾಗುತ್ತದೆ. ದೈಹಿಕ ಮತ್ತು ಮನೋಲೈಂಗಿಕ ಆರೋಗ್ಯದ ಸಮಸ್ಯೆಗಳನ್ನು ಪತ್ತೆ ಮಾಡಿ ಚಿಕಿತ್ಸೆ ನಿರ್ಧರಿಸಲಾಗುತ್ತದೆ ಎನ್ನುತ್ತಾರೆ ಪುರುಷರ ಬಂಜೆತನ ನಿವಾರಣೆ ಚಿಕಿತ್ಸೆಯಲ್ಲಿ ಪರಿಣತರಾಗಿರುವ ಡಾ. ವಾಸನ್‌.

ಪುರುಷತ್ವ, ಷಂಡತನದ ತಪ್ಪು ಕಲ್ಪನೆ
ಗಂಡಸರ ಸಂತಾನೋತ್ಪತ್ತಿ ಶಕ್ತಿಯಲ್ಲಿ ದೋಷ ಇದೆ ಎಂದರೆ ಅವನ ಪುರುಷತ್ವ ಅಥವಾ ಲೈಂಗಿಕ ಶಕ್ತಿಯ ಬಗ್ಗೆ ಸಂದೇಹ ಪಡಬೇಕಿಲ್ಲ. ಲೈಂಗಿಕವಾಗಿ ಎಲ್ಲ ರೀತಿಯಲ್ಲೂ ಸರ್ವ ಶಕ್ತರಾದ ಪುರುಷರಲ್ಲಿಯೂ ಆರೋಗ್ಯವಂತ ವೀರ್ಯಾಣುಗಳ  ಕೊರತೆ ಕಂಡು ಬರುತ್ತದೆ.  ಮಕ್ಕಳಾಗದಿರುವ ಸಾಧ್ಯತೆ ಹೆಚ್ಚುತ್ತದೆ. ವೀರ್ಯಾಣುಗಳ ಸಂಖ್ಯೆ ಕ್ಷೀಣಿಸಿ, ಮಕ್ಕಳಾಗದಿದ್ದರೆ ಗಂಡಸಿನಲ್ಲಿ ಲೈಂಗಿಕ ಶಕ್ತಿ ಇಲ್ಲ ಎಂದು ಭಾವಿಸಬೇಕಿಲ್ಲ.

ದೈಹಿಕ ಮತ್ತು ಮಾನಸಿಕವಾಗಿ ಸದೃಢರಾದ ಪುರುಷರು ನಿರ್ವೀರ್ಯರಾಗಿದ್ದರೆ ಅಥವಾ ಅವರ ವೀರ್ಯದಲ್ಲಿ ವೀರ್ಯಾಣುಗಳ ಕೊರತೆ ಕಂಡುಬಂದಲ್ಲಿ ಮಕ್ಕಳಾಗುವುದು ಸಾಧ್ಯವಿಲ್ಲ ಎನ್ನುವುದು ಡಾ. ವಾಸನ್‌ ಅಭಿಮತ.ಬಂಜೆತನ ಅಥವಾ ನಿರ್ವೀರ್ಯ ಸಮಸ್ಯೆ ಇರುವ ಪುರುಷರ ಲೈಂಗಿಕ ಜೀವನ ಸಹಜವಾಗಿರುತ್ತದೆ.  ತನ್ನ ಸಂಗಾತಿಯನ್ನು ಲೈಂಗಿಕವಾಗಿ ತೃಪ್ತಿಪಡಿಸುವ ಸಾಮರ್ಥ್ಯ ಹೊಂದಿರುತ್ತಾರೆ.

ಶಿಶ್ನದ ನಿಮಿರುವಿಕೆ ಸಮಸ್ಯೆ, ನರದೌರ್ಬಲ್ಯ, ಷಂಡತನದ ಹೊರತಾಗಿಯೂ ಆರೋಗ್ಯವಂತ ವೀರ್ಯಾಣುಗಳ ಸಂಖ್ಯೆಯಲ್ಲಿಯ  ಕುಸಿತವೂ  ಸಂತಾನಹೀನತೆಗೆ ಕಾರಣವಾಗಬಲ್ಲದು.

ಲೈಂಗಿಕ ಸಮಸ್ಯೆ ಮಾನಸಿಕ ರೋಗವಲ್ಲ
ವೃಷಣಕ್ಕೆ ರಕ್ತ ಪೂರೈಸುವ ಅತಿ ಚಿಕ್ಕ ರಕ್ತ ನಾಳಗಳಲ್ಲಿಯ ಸಾಮಾನ್ಯ  ತೊಂದರೆಯಾದ ಸಿರಬಾವು [Varicocele] ತೊಂದರೆಗಳು ಭಾರತದ ಗಂಡಸರಲ್ಲಿನ ಶೇ ೪೦ರಷ್ಟು ಬಂಜೆತನಕ್ಕೆ ಕಾರಣವಾಗಿವೆ. ಗಂಡಸರ ಬಂಜೆತನ ಅಥವಾ ಸಂತಾನಹೀನತೆ ಖಂಡಿತ ಮಾನಸಿಕ ರೋಗ ಅಥವಾ ದೌರ್ಬಲ್ಯವಲ್ಲ. ಶೇ 70–75ರಷ್ಟು ಲೈಂಗಿಕ ಸಮಸ್ಯೆ ಜನನೇಂದ್ರೀಯ ಮತ್ತು ವೃಷಣಗಳ ನ್ಯೂನತೆಗಳಿಗೆ ಸಂಬಂಧಿಸಿದ್ದು.

ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು, ಆಧುನಿಕ ಶ್ರಮರಹಿತ ಜೀವನಶೈಲಿ, ವಂಶವಾಹಿ ಕಾರಣಗಳು, ನರದೌರ್ಬಲ್ಯ, ಒತ್ತಡ, ಧೂಮಪಾನ, ಮದ್ಯ ಸೇವನೆ, ಆಮ್ಲಜನಕ ಪೂರೈಕೆಯಲ್ಲಿ ಕೊರತೆ, ಜನನೇಂದ್ರೀಯ ಅಥವಾ ವೃಷಣಗಳಿಗೆ ಅಪಘಾತದಲ್ಲಿ  ಪೆಟ್ಟು, ಶಿಶ್ನ ಮತ್ತು ವೃಷಣಕ್ಕೆ ರಕ್ತ ಪೂರೈಸುವ ರಕ್ತನಾಳಗಳು ಚಿಕ್ಕದಾಗಿ ಗಡಸಾಗುವುದು... ಇವು ಪುರುಷರಲ್ಲಿಯ ಬಂಜೆತನಕ್ಕೆ ಕಾರಣವಾಗುವ ಅಂಶಗಳು.ಹೆಚ್ಚುತ್ತಿರುವ ಮೊಬೈಲ್‌, ಲ್ಯಾಪ್‌ಟಾಪ್‌ ಮತ್ತು ಕಂಪ್ಯೂಟರ್‌ಗಳ ಬಳಕೆಯಿಂದ ಅವುಗಳ ವಿಕಿರಣಗಳು ವೀರ್ಯ ಉತ್ಪಾದನೆಯ ಮೇಲೆ ನೇರವಾಗಿ ದುಷ್ಪರಿಣಾಮ ಬೀರುತ್ತವೆ.

ಬೆಳೆಯುತ್ತಿರುವ ನಗರಗಳು ಹಲವು ಹೊಸ ರೋಗಗಳಿಗೂ ಕಾರಣವಾಗಿವೆ. ಫಾಸ್ಟ್ ಫುಡ್, ರಾತ್ರಿ ಪಾಳಿಗಳಲ್ಲಿ ಕೆಲಸ, ಯಾಂತ್ರಿಕ ಜೀವನ,   ಒತ್ತಡ, ಐಷಾರಾಮಿ ಮತ್ತು ಜಡವಾದ ಜೀವನಶೈಲಿಗಳು ಯುವಕರ ಲೈಂಗಿಕ ಜೀವನದ ಮೇಲೆ ಅವರಿಗೆ ಗೊತ್ತಿಲ್ಲದಂತೆ ದುಷ್ಪಪರಿಣಾಮ ಬೀರುತ್ತಿವೆ.

ಹೃದಯಾಘಾತದ ಮುನ್ಸೂಚನೆ
ಪುರುಷರ ಜನನೇಂದ್ರೀಯಕ್ಕೆ ರಕ್ತ ಪೂರೈಸುವ ರಕ್ತನಾಳಗಳಲ್ಲಿ ತೊಂದರೆ ಕಾಣಿಸಿಕೊಂಡು ಜನನೇಂದ್ರೀಯ ನಿಮಿರುವಿಕೆ ಸಾಮರ್ಥ್ಯ ಕಳೆದು­ಕೊಳ್ಳುತ್ತದೆ. ಇದು ಮುಂದೆ ಸಂಭವಿಸುವ ಹೃದಯಾಘಾತದ ಮುನ್ಸೂಚನೆಯೂ ಆಗಿರುತ್ತದೆ. ಹೃದಯ ಸಮಸ್ಯೆ ಕಾಣಿಸಿಕೊಳ್ಳುವ ಎರಡು ಅಥವಾ ಮೂರು ವರ್ಷಗಳ ಮೊದಲೇ ಶಿಶ್ನದ ರಕ್ತನಾಳಗಳಲ್ಲಿ ತೊಂದರೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ ನಿಮಿರುವಿಕೆ ತೊಂದರೆ ಕಾಣಿಸಿದ ಕೂಡಲೇ ಯಾವುದೇ ಅಳಕು ಇಲ್ಲದೇ ಗಂಡಸರು ಸೂಕ್ತ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಬೇಕು. ಇದರಿಂದ ಮುಂದಾಗುವ ಹೃದಯಾ­ಘಾತ ತಡೆಯಬಹುದು (ಆ್ಯಂಡ್ರೋಲಾ­ಜಿಸ್ಟ್‌ ) ಎನ್ನುತ್ತಾರೆ ಡಾ. ವಾಸನ್‌.

ಇದಲ್ಲದೆ ಜನನೇಂದ್ರಿಯಗಳ ಬೆಳವಣಿಗೆ ಹಾಗೂ ರಚನೆಯಲ್ಲಿ ತೊಂದರೆಗಳಿದ್ದಾಗಲೂ ಬಂಜೆತನ ಉಂಟಾಗಬಹುದು. ಹುಟ್ಟಿನಿಂದಲೇ ವೃಷಣಗಳು ಹೊಟ್ಟೆಯೊಳಗೆ  ಉಳಿದುಬಿಟ್ಟಿದ್ದರೆ  ವಿರ್ಯಾಣು ಉತ್ಪಾದನೆಗೆ ತೊಂದರೆಯಾಗಬಹುದು.

ಪುರುಷ ಹಾರ್ಮೋನ್ ಟೆಸ್ಟೋ­ಸ್ಟಿ­ರಾನ್  ಮತ್ತು ವೀರ್ಯಾಣು  ಉತ್ಪಾದನೆ ಕೇಂದ್ರಗಳಾದ  ವೃಷಣಗಳ ತಾಪಮಾನ ದೇಹದ ಉಷ್ಣತೆಗಿಂತಲೂ  ಜಾಸ್ತಿಯಾದರೆ ವೀರ್ಯಾಣುಗಳ ಸಂಖ್ಯೆ, ಅವುಗಳ ಆರೋಗ್ಯ, ಗಾತ್ರ, ಆಕಾರ, ಚಲನೆ,  ವಂಶಿವಾಹಿ ಮತ್ತು ಡಿಎನ್‌ಎ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದು ಬಂಜೆತನಕ್ಕೆ ಕಾರಣವಾಗಬಹುದು.

ಪ್ರತಿ ಒಂದು ಮಿಲಿ ಮೀಟರ್ ಗೆ ವೀರ್ಯಾಣುಗಳ ಸಂಖ್ಯೆ 20 ಮಿಲಿಯನ್‌ಗಿಂತ ಕೆಳಗೆ ಕುಸಿದಲ್ಲಿ  ವೀರ್ಯ ಕೊರತೆಯಿಂದ  ಬಂಜೆತನ ಕಾಡಲು ಆರಂಭವಾಗುತ್ತದೆ. ಆರಂಭದಲ್ಲಿಯೇ ಚಿಕಿತ್ಸೆ ಪಡೆಯುವುದು ಉತ್ತಮ ಎಂಬುದು ಡಾ. ವಾಸನ್‌ ಅವರ ಸಲಹೆ.

ಟೆಕ್ಕಿಗಳಿಗೆ ಕಾಡುತ್ತಿರುವ ಬಂಜೆತನ
ಬಂಜೆತನ ನಿವಾರಣೆ, ಆರೋಗ್ಯವಂತ ವೀರ್ಯಾಣುಗಳ ಸಂಖ್ಯೆ ಹೆಚ್ಚಳ, ವೃಷಣದ ಸಿರಬಾವು (ವೆರಿಕೋಸಿಲ್‌) ನಿಮಿರುವಿಕೆ, ನರದೌರ್ಬಲ್ಯದ ಚಿಕಿತ್ಸೆಗೆ ಈಗ ಅತ್ಯಾಧುನಿಕ ತಂತ್ರಜ್ಞಾನ ಲಭ್ಯವಿದೆ  ಈ ಮೊದಲು ಡ್ರೈವರ್‌ಗಳು, ಬಹುಕಾಲ ಕುಳಿತು ಅಥವಾ ದೀರ್ಘಕಾಲ ನಿಂತುಕೊಂಡು ಕೆಲಸ ಮಾಡುವ ಪುರುಷರಲ್ಲಿ ಈ ತೊಂದರೆ ಕಂಡುಬರುತ್ತಿತ್ತು. ಹೆಚ್ಚು ಶಾಖ ಇರುವಲ್ಲಿ, ಎಕ್ಸ್‌ರೇ ಹಾಗೂ ವಿಕಿರಣ ವಿಭಾಗಗಳಲ್ಲಿ ಕೆಲಸ ಮಾಡುವವರಲ್ಲಿ ಬಂಜೆತನದ ಪ್ರಮಾಣ ಜಾಸ್ತಿಯಿರುತ್ತದೆ. ಇತ್ತೀಚೆಗೆ ಈ ಗುಂಪಿಗೆ ಸೇರ್ಪಡೆಯಾಗಿದ್ದು ಸಾಫ್ಟವೇರ್‌ ಎಂಜಿನಿಯರ್‌ಗಳು.

'ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಜಾಗತಿಕ ಸಮಸ್ಯೆಯಾಗಿದೆ. ಅಧ್ಯಯನದ ಪ್ರಕಾರ ವೀರ್ಯಾಣುಗಳ ಪ್ರಮಾಣ ಪ್ರತಿ ವರ್ಷ ಶೇ 2ರಷ್ಟು ಕಡಿಮೆಯಾಗುತ್ತಿದೆ. ಈ ಪ್ರಮಾಣ ಹೀಗೆಯೇ ಮುಂದು­ವರಿದರೆ ಮುಂದಿನ 50 ವರ್ಷಗಳಲ್ಲಿ ಸಂತಾನೋತ್ಪತ್ತಿ ಶಕ್ತಿ ಇಲ್ಲದ ಗಂಡಸರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತದೆ ಎನ್ನುವ ಆತಂಕವೂ ಕೇಳಿಬರುತ್ತಿದೆ. ಜೊತೆಗೆ  ವೀರ್ಯದಾನಕ್ಕೆ ಬೇಡಿಕೆ ಹೆಚ್ಚುವ ಸಾಧ್ಯತೆಯೂ ಇದೆ.

ಇಂದಿನ ದಂಪತಿ ಲೈಂಗಿಕ ಸಮಸ್ಯೆಗಳನ್ನು ತಮ್ಮ ಮಲಗುವ ಕೋಣೆಯ ನಾಲ್ಕು ಗೋಡೆಗಳ ನಡುವೆ ಮುಚ್ಚಿಟ್ಟು ನಿಟ್ಟುಸಿರು ಬಿಡುತ್ತಿಲ್ಲ. ಯಾವ ಹಿಂಜರಿಕೆ ಇಲ್ಲದೆ  ವೈದ್ಯರ ಬಳಿ ಬಂದು ಸಮಸ್ಯೆಗೆ ಪರಿಹಾರ ಕಂಡು­ಕೊಳ್ಳುತ್ತಿದ್ದಾರೆಎಂದು ಮೆಡಿಸೆಕ್ಸ್‌ ಫೌಂಡೇಷನ್‌ ನಿರ್ದೇಶಕ ಮತ್ತು ಲೈಂಗಿಕ, ಮನೋ ಚಿಕಿತ್ಸಕ
ಡಾ. ವಿನೋದ ಛೆಬ್ಬಿ ಸಮಾಧಾನ ಪಡುತ್ತಾರೆ.ದೇಹ ಮತ್ತು ಮನಸುಗಳ ಮಿಲನವಾಗಬೇಕು. ಅದಕ್ಕೆ ಸ್ವಾಸ್ಥ್ಯಮಯ ಬದುಕು  ಸದ್ಯದ ತುರ್ತು ಅಗತ್ಯಗಳಲ್ಲಿ ಒಂದು.

ಕೊನೆಯ ಮಾರ್ಪಾಟು : 6/19/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate