ಈ ವಾರ ಸೂರ್ಯನ ಪ್ರಖರ ಕಿರಣಗಳು ಚರ್ಮದ ಮೇಲೆ ಮಾಡುವ ಪರಿಣಾಮಗಳನ್ನು ತಿಳಿದುಕೊಳ್ಳುವ. ಈ ಅರಿವು ಇದ್ದರೆ ಚರ್ಮವನ್ನು ಆರೈಕೆ ಮಾಡುವುದು ಸುಲಭವಾಗುತ್ತದೆ. ನೇರಳಾತೀತ ಕಿರಣಗಳೊಂದಿಗೆ ನೇರ ಸಂಪರ್ಕಕ್ಕೆ ಬಂದಾಗ ಚರ್ಮ ಹಾನಿಗೀಡಾಗಿ, ವಯಸ್ಸಿಗೆ ಮುಂಚೆಯೇan ಕಾಂತಿಹೀನವಾಗುತ್ತದೆ. ಚರ್ಮದ ಮೇಲೆ ನೆರಿಗೆ ಮೂಡುವುದಕ್ಕೂ ನೇರಳಾತೀತ ಕಿರಣಗಳೇ ಶೇ 90 ರಷ್ಟು ಕಾರಣಕರ್ತವಾಗಿರುತ್ತವೆ.
ನೇರಳಾತೀತ ಕಿರಣಗಳೆಂದರೇನು ? ಕಿರಣಗಳ ಗುಣಮಾನವನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ. ಯುವಿಸಿ,100 ರಿಂದ 290 ಎನ್‌ಎಂ, ಯುವಿಬಿ 290 ರಿಂದ 320 ಎನ್‌ಎಂ, ಯುವಿಎ 320 ರಿಂದ 400ಎನ್‌ಎಂ ಎಂದು ತರಂಗಾಂತರದ ಆಧಾರದ ಮೇಲೆ ವಿಂಗಡಿಸಲಾಗಿದೆ. ಇದರಲ್ಲಿ ಯುವಿಸಿಯನ್ನು ಓಝೋನ್ ಪದರವು ಸಂಪೂರ್ಣವಾಗಿ ಹೀರಿಕೊಳ್ಳುತ್ತದೆ. ಇದರಿಂದಾಗಿ ಚರ್ಮದ ಮೇಲೆ ಯುವಿಸಿ ಕಿರಣಗಳ ಪ್ರಭಾವ ಏನೂ ಆಗುವುದಿಲ್ಲ.
ಆದರೆ ಯುವಿಬಿ ಕಿರಣಗಳ ಕಿರಿಕಿರಿಯೇ ತುಸು ಹೆಚ್ಚು ಎನ್ನಬಹುದು. ಪ್ರತಿದಿನ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಬಿಸಿಲಿಗೆ ನೇರವಾಗಿ ಮೈ ಒಡ್ಡಬಾರದು. ನಿಮ್ಮ ನೆರಳು ನಿಮಗಿಂತ ಚಿಕ್ಕದಾಗಿ ಕಂಡು ಬರುತ್ತಿದ್ದರೆ ಯುವಿಬಿ ಕಿರಣಗಳು ಪ್ರಖರವಾಗಿವೆ ಎಂದೇ ಅರ್ಥ. ಈ ಸಮಯದಲ್ಲಿ ಮೈಮುಚ್ಚುವ ಬಟ್ಟೆ ಧರಿಸಿರಬೇಕು. ಸನ್‌ಸ್ಕ್ರೀನ್ ಅಥವಾ ಸನ್‌ಬ್ಲಾಕ್ ಲೋಷನ್‌ಗಳಿಲ್ಲದೆ ಮನೆಯಿಂದಾಚೆ ಹೊರಡಬಾರದು. ಈ ಕಿರಣಗಳು ಅತಿಯಾದಷ್ಟೂ ಚರ್ಮ ಸುಡುತ್ತದೆ.
ಯುವಿಎ ಕಿರಣಗಳು ಯುವಿಬಿಗಿಂತಲೂ ಹಾನಿಕಾರಿಯಾಗಿರುತ್ತವೆ. ಯುವಿಬಿ ಕೇವಲ ಚರ್ಮದ ಮೇಲ್ಮೈಯನ್ನು ಹಾನಿ ಮಾಡಿದರೆ,ಇವು ಚರ್ಮದ ಆಳಕ್ಕಿಳಿದು ತಮ್ಮ ಪ್ರಭಾವವನ್ನು ತೋರುತ್ತವೆ. ಇದಕ್ಕೆ ಬೇಸಿಗೆಯೇ ಆಗಬೇಕೆಂದಿಲ್ಲ. ಯುವಿಎ ಕಿರಣಗಳು ವರ್ಷವಿಡೀ ಚರ್ಮದ ಮೇಲೆ ಪರಿಣಾಮ ಬೀರುತ್ತಲೇ ಇರುತ್ತವೆ. ಈ ಕಿರಣಗಳಿಂದ ಚರ್ಮ ನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಚರ್ಮದ ಜೀವಕೋಶಗಳು ಮರುಹುಟ್ಟು ಪಡೆಯುವ ಶಕ್ತಿ ಕ್ಷೀಣಿಸುತ್ತದೆ. ನೆರಿಗೆ ಬೀಳುತ್ತವೆ. ಶಾಶ್ವತವಾದ ಕಲೆಗಳೂ ಮೂಡಬಹುದು.
ಚರ್ಮದ ಒಳಪದರಿಗಿಳಿಯುವುದರಿಂದ ಮೇಲ್ಪದರನ್ನು ಘಾಸಿಗೊಳಿಸುತ್ತದೆ. ಮೇಲ್ಪದರದ ಆಳಕ್ಕಿಳಿಯುವುದರಿಂದ ವಯಸ್ಸಿಗೆ ಮೊದಲೇ ಚರ್ಮ ನೆರೆಗಟ್ಟಬಹುದು. ಚರ್ಮದ ಸ್ಥಿತಿಸ್ಥಾಪಕತ್ವವನ್ನು ಕಳೆಯುವಂಥ ಕೋಶಗಳು ಅತಿ ಹೆಚ್ಚು ಪ್ರಮಾಣದಲ್ಲಿ ಹುಟ್ಟಿಕೊಳ್ಳುತ್ತವೆ. ಚರ್ಮವು ತನ್ನ ಸಹಜ ಸ್ಥಿತಿಸ್ಥಾಪಕ ಗುಣವನ್ನು ಕಳೆದುಕೊಳ್ಳುತ್ತ ಹೋಗುತ್ತದೆ.
ಹೀಗಾಗಿ ಮೇಲ್ಪದರ ಘಾಸಿಗೊಳ್ಳುತ್ತದೆ. ಈ ಕ್ರಿಯೆ ಮೇಲಿಂದಮೇಲೆ ಜರುಗಿದಾಗ ಚರ್ಮ ಹಾನಿಗೊಳಗಾಗುತ್ತದೆ. ಚರ್ಮದ ಮೇಲ್ಪದರ ಶಿಥಿಲಗೊಳ್ಳುವ ಪ್ರಕ್ರಿಯೆ ಹೆಚ್ಚಾದಂತೆಲ್ಲ ಚರ್ಮದ ಕ್ಯಾನ್ಸರ್‌ಗೂ ಕಾರಣವಾಗಬಹುದು. ಚರ್ಮದ ಕೋಶಗಳು ಪ್ರಖರ ಬಿಸಿಲಿಗೆ ಒಳಗಾದಾಗ ಜೀವಕೋಶಗಳ ಮರುಹುಟ್ಟಿನ ಪ್ರಕ್ರಿಯೆ ಅಪೂರ್ಣವಾಗತೊಡಗುತ್ತದೆ. ಈ ಅಸಹಜ ಬೆಳವಣಿಗೆಯಿಂದ ಚರ್ಮಕ್ಕೆ ಹಾನಿ ಉಂಟಾಗುತ್ತದೆ. ಇವು ನಿಧಾನವಾಗಿ ಕ್ಯಾನ್ಸರ್ ಕಣಗಳಾಗಿ ಬೆಳೆಯಲೂಬಹುದು.
ಲಿಂಫೋಸೈಟ್ಸ್ ಎಂದು ಕರೆಯಲಾಗುವ ಬಿಳಿರಕ್ತಕಣಗಳು ಚರ್ಮದ ಸುರಕ್ಷೆಗಾಗಿ ಶ್ರಮಿಸುತ್ತವೆ. ಚರ್ಮದ ಮೇಲಿನ ದಾಳಿಯನ್ನು ತಡೆಯಲು ಚರ್ಮದಲ್ಲಿಯೇ ಇರುವ ನಿರೋಧಕ ಲ್ಯಾಂಗರ್‌ಹ್ಯಾನ್ಸ್ ಕೋಶಗಳೂ ಅದಕ್ಕಾಗಿ ಶ್ರಮಿಸುತ್ತವೆ. ಆದರೆ ಸೂರ್ಯನ ಪ್ರಖರ ಕಿರಣಗಳಿಂದಾಗಿ ದೇಹದಲ್ಲಿ ರಾಸಾಯನಿಕ ಕ್ರಿಯೆ ಜರುಗುತ್ತದೆ.ಚರ್ಮದ ಕೋಶಗಳ ಹುಟ್ಟಿನ ಸಂಖ್ಯೆ ತಗುತ್ತದೆ. ಎಲ್ಲ ಸಮಸ್ಯೆಗಳಿಗೂ ಪರಿಹಾರವೆಂದರೆ ಸೂರ್ಯನ ಪ್ರಖರ ಕಿರಣಗಳಿಂದ ಹಾನಿಗೊಳಗಾಗದಂತೆ ಎಚ್ಚರಿಕೆ ವಹಿಸಬೇಕು. ಮೈಮುಚ್ಚುವ ಬಟ್ಟೆಗಳನ್ನು ಧರಿಸಬೇಕು. ಸೂಕ್ತ ಸನ್‌ಸ್ಕ್ರೀನ್‌ಗಳನ್ನು ಪ್ರತಿ ನಾಲ್ಕು ಗಂಟೆಗೆ ಒಮ್ಮೆ ಲೇಪಿಸಿಕೊಳ್ಳಬೇಕು.
ಮೂಲ :ಡಾ.ಚೈತ್ರಾ ವಿ. ಆನಂದ ಕಾಸ್ಮೋಡರ್ಮ ಸ್ಕಿನ್ ಅಂಡ್ ಹೇರ್ ಕ್ಲಿನಿಕ್, ಪ್ರಜಾವಾಣಿ (http://www.prajavani.net/)
ಕೊನೆಯ ಮಾರ್ಪಾಟು : 10/15/2019
ನಮ್ಮ ಕೈ ಮತ್ತು ಮತ್ತು ಕಾಲುಬೆರಳುಗಳಲ್ಲಿ ಉಗುರಿನ ಹಿಂಭಾಗದ...
ನೀರಿನ ಬಳಿಕ ನಮ್ಮ ದೇಹಕ್ಕೆ ಅಮೃತಸಮಾನವಾದ ದ್ರವ ಎಂದಿದ್ದರೆ...