অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಬೆರಳ ಸಿಪ್ಪೆ

ಬೆರಳ ಸಿಪ್ಪೆ

ಈರುಳ್ಳಿ ತಿರುಳಿನಂತೆ ಬೆರಳ ಸಿಪ್ಪೆಯೇಳುವುದನ್ನು ತಡೆಯುವುದು ಹೇಗೆ?

ನಮ್ಮ ಕೈ ಮತ್ತು ಮತ್ತು ಕಾಲುಬೆರಳುಗಳಲ್ಲಿ ಉಗುರಿನ ಹಿಂಭಾಗದ ಚರ್ಮದಲ್ಲಿ ಕೂದಲಿಲ್ಲ ಅಲ್ಲದೇ ಈ ಭಾಗದ ಚರ್ಮ ತುಂಬಾ ತೆಳುವಾಗಿದೆ ಹಾಗೂ ಸೂಕ್ಷ್ಮಸಂವೇದಿಯಾಗಿದೆ. ಆದ್ದರಿಂದಲೇ ದೇಹದಲ್ಲಿ ಯಾವುದಾದರೂ ಪೋಷಕಾಂಶದ ಕೊರತೆಯಾದರೆ ಈ ಚರ್ಮ ಸುಲಭವಾಗಿ ಬಿರುಕು ಬಿಡುತ್ತದೆ ಹಾಗೂ ಮೇಲ್ಪದರ ಈರುಳ್ಳಿ ಸಿಪ್ಪೆಯಂತೆ ತೆಳ್ಳಗೆ ಏಳುತ್ತದೆ.

ಉಗುರಿನ ಕಡೆಯಿಂದ ಸಿಪ್ಪೆಯಿದ್ದು ಮೇಲ್ಭಾಗದಲ್ಲಿ ಗಟ್ಟಿಯಾಗಿ ಅಂಟಿಕೊಂಡಿರುತ್ತದೆ. ಇದನ್ನು ಕೀಳಲು ಹೋದರೆ ಮೇಲ್ಭಾಗದ ಚರ್ಮವೂ ಸುಲಿದು ಬರುವುದರಿಂದ ಇದನ್ನು ಕೀಳಲು ಯತ್ನಿಸುವುದು ಸಲ್ಲದು. ಆದರೆ ಅದಕ್ಕೂ ಮಿಗಿಲಾಗಿ ಸೂಕ್ತ ಆರೈಕೆಯ ಮೂಲಕ ಈ ಸಂಭವ ಬರದೇ ಇರದಂತೆ ನೋಡಿಕೊಳ್ಳುವುದು ಜಾಣತನ.

ಸಾಮಾನ್ಯವಾಗಿ ಆಹಾರದಲ್ಲಿ ಕೆಲವು ಪೋಷಕಾಂಶಗಳ ಕೊರತೆ ಅಥವಾ ಔಷಧಿಗಳ ಅಡ್ಡಪರಿಣಾಮದಿಂದಾಗಿ ಈ ಚರ್ಮ ಪರೆಯೇಳುತ್ತದೆ. ಈ ಸ್ಥಿತಿ ತಾತ್ಕಾಲಿಕವಾಗಿದೆ. ಸೂಕ್ತ ಚಿಕಿತ್ಸೆ ಮತ್ತು ಪೋಷಕಾಂಶಗಳ ಮೂಲಕ ಈ ತೊಂದರೆಯನ್ನು ನಿವಾರಿಸಿಕೊಳ್ಳಬಹುದು. ಇದಕ್ಕಾಗಿ ಹಲವು ಮನೆಮದ್ದುಗಳೂ ಲಭ್ಯವಿವೆ. ಈ ವಿಧಾನಗಳನ್ನು ಅನುಸರಿಸಿ ಶೀಘ್ರವಾಗಿ ಹೊಸಚರ್ಮ ಬರಲು ಸಾಧ್ಯವಾಗುತ್ತದೆ. ಇದಕ್ಕಾಗಿ ಫಲಕಾರಿಯಾದ ಹದಿನಾರು ವಿಧಾನಗಳನ್ನು ಇಲ್ಲಿ ನೀಡಲಾಗಿದೆ.

ಉಗುರುಬೆಚ್ಚನೆಯ ನೀರಿನ ಬಳಕೆ

ಉಗುರುಬೆಚ್ಚನೆಯ ನೀರಿನಲ್ಲಿ ಬೆರಳತುದಿಗಳನ್ನು ಸುಮಾರು ಹತ್ತುನಿಮಿಷಗಳವರೆಗೆ ಮುಳುಗಿಸಿಡುವುದರಿಂದ ಉತ್ತಮ ಪರಿಣಾಮ ದೊರಕುತ್ತದೆ. ಇದರಿಂದ ಪೊರೆ ಎದ್ದ ಚರ್ಮ ನಿಧಾನವಾಗಿ ಒಣಗಿ ಬುಡಸಡಿಲಗೊಂಡು ಸುಲಭವಾಗಿ ಕಳಚಿಕೊಳ್ಳುತ್ತದೆ. ಶೀಘ್ರವಾಗಿ ಈ ಸ್ಥಳದಲ್ಲಿ ಹೊಸ ಮತ್ತು ಆರೋಗ್ಯವಂತ ಚರ್ಮ ಬೆಳೆಯುತ್ತದೆ. ಈ ವಿಧಾನವನ್ನು ಪ್ರತಿದಿನ ಸಂಜೆಯ ಹೊತ್ತಿನಲ್ಲಿ ಮಾಡುವುದು ಉತ್ತಮ. ಸಾಧ್ಯವಾದಷ್ಟು ಸೋಪಿನ ಬಳಕೆ ಸಲ್ಲದು.

ಒಣಫಲಗಳನ್ನು ಸೇವಿಸಿ

ನಿಮ್ಮ ಆಹಾರದಲ್ಲಿ ವೈವಿಧ್ಯತೆ ಇರಬೇಕು. ಅದರಲ್ಲಿ ಕೆಲವೊಮ್ಮೆ ಒಣಫಲಗಳೂ ಒಳಗೊಂಡಿರಬೇಕು. ಒಣಫಲಗಳಿಂದ ದೊರಕುವ ಪೋಷಕಾಂಶಗಳ ಕೊರತೆಯಿಂದಾಗಿ ಚರ್ಮ ಸುಲಿಯುತ್ತದೆ. ಇದಕ್ಕಾಗಿ ವಿವಿಧ ಒಣಫಲಗಳನ್ನು ಸೇವಿಸಿ. ಬಾದಾಮಿ, ಅಕ್ರೋಟು, ಕುಂಬಳ ಬೀಜ, ಪಿಸ್ತಾ, ಗೋಡಂಬಿ, ಹುರಿದ ನೆಲಗಡಲೆ ಮೊದಲಾದ ಒಣಫಲಗಳನ್ನು ಸೇವಿಸಿ. ಒಣ ಅಂಜೂರ, ಮಾವು ಮೊದಲಾದ ಫಲಗಳನ್ನೂ ಸೇವಿಸಬಹುದು.

ಆರ್ದ್ರತೆಯನ್ನು ಹೆಚ್ಚಿಸಿ

ಚರ್ಮದಲ್ಲಿ ಆರ್ದ್ರತೆ (moisture) ಕಡಿಮೆಯಾದಾಗಲೂ ಚರ್ಮ ಸುಲಭವಾಗಿ ಬಿರಿಬಿಡುತ್ತದೆ. ನಾವು ದಿನದಲ್ಲಿ ಹಲವು ಬಾರಿ ಕೈತೊಳೆದರೂ ನಮ್ಮ ಚರ್ಮ ನೇರವಾಗಿ ನೀರನ್ನು ಹೀರಲಾರದು. ಆದ್ದರಿಂದ ಚರ್ಮ ಹೀರುವ ಪ್ರಮಾಣದಲ್ಲಿ ಆರ್ದ್ರತೆಯನ್ನು ಹೊಂದಿರುವ ಕ್ರೀಮುಗಳು (moisturizer) ಔಷಧಿ ಅಂಗಡಿಯಲ್ಲಿ ದೊರಕುತ್ತದೆ, ಈ ಕ್ರೀಮ್ ಅನ್ನು ಪ್ರತಿ ಬಾರಿ ಕೈತೊಳೆದ ಬಳಿಕ ಹಚ್ಚಿಕೊಳ್ಳಬೇಕು ಮತ್ತು ಒಣಗಲು ಬಿಡಬೇಕು. ದಿನ ಕಳೆದಂತೆ ಚರ್ಮ ಆರ್ದ್ರತೆಯನ್ನು ಹೀರಿ ಬಿರಿಬಿಡುವ ತೊಂದರೆ ಕಡಿಮೆಯಾಗುತ್ತದೆ.

ಜೇನು ಮತ್ತು ಲಿಂಬೆರಸದ ಚಿಕಿತ್ಸೆ

ಉಗುರುಗಳ ಹಿಂಬದಿ ಬಿರಿಬಿಡುವುದನ್ನು ಮತ್ತು ಪೊರೆಯೇಳುವುದನ್ನುಉ ತಡೆಯಲು ಲಿಂಬೆ ಮತ್ತು ಜೇನಿನ ಮಿಶ್ರಣ ಅತ್ಯಂತ ಫಲಕಾರಿಯಾಗಿದೆ. ಇದಕ್ಕಾಗಿ ಒಂದು ಬೋಗುಣಿಯಲ್ಲಿ ಉಗುರುಬೆಚ್ಚನೆಯ ನೀರನ್ನು ತುಂಬಿಸಿ ಸಮಪ್ರಮಾಣದಲ್ಲಿ ಒಂದು ಚಮಚ ಜೇನು ಮತ್ತು ಲಿಂಬೆರಸವನ್ನು ಮಿಶ್ರಣ ಮಾಡಿ ಕೈಗಳನ್ನು ಮುಳುಗಿಸಿಡಿ. ಸುಮಾರು ಹತ್ತರಿಂದ ಹದಿನೈದು ನಿಮಿಶ ಮುಳುಗಿಸಿಟ್ಟ ಬಳಿಕ ಬಟ್ಟೆಯಲ್ಲಿ ಒರೆಸಿಕೊಳ್ಳಿ, ಸೋಪು ಬಳಸಬೇಡಿ. ಬಳಿಕ ಉತ್ತಮ ಮಾಯಿಶ್ಚರೈಸರ್ ಕ್ರೀಂ ಹಚ್ಚಿ ಅಥವಾ ವಿಟಮಿನ್ ಇ ಇರುವ ಎಣ್ಣೆಯಿಂದ ನವಿರಾಗಿ ಮಸಾಜ್ ಮಾಡಿಕೊಳ್ಳಿ. ಪರ್ಯಾಯವಾಗಿ ಆಲಿವ್ ಎಣ್ಣೆಯನ್ನೂ ಹಚ್ಚಬಹುದು. ಇದರಿಂದ ಚರ್ಮದಲ್ಲಿ ಆರ್ದ್ರತೆ ಹೆಚ್ಚುತ್ತದೆ ಮತ್ತು ಚರ್ಮ ಬಿರಿಬಿಡುವುದು ಕೊನೆಗೊಳ್ಳುತ್ತದೆ.

ನಿಮ್ಮ ಆಹಾರದಲ್ಲಿ ಪ್ರೋಟೀನ್ ವಿಪುಲವಾಗಿರಲಿ

ತೂಕ ಇಳಿಸುವ ಭರದಲ್ಲಿ ಊಟ ಬಿಡುವವರಿಗೆ ಈ ತೊಂದರೆ ಹೆಚ್ಚಾಗಿ ಕಾಡುತ್ತದೆ. ಏಕೆಂದರೆ ಚರ್ಮದ ಆರೈಕೆಗೆ ಪ್ರೋಟೀನುಗಳು ಅತ್ಯಗತ್ಯವಾಗಿವೆ. ಚರ್ಮದ ಜೀವಕೋಶಗಳು ಬೆಳೆಯುವಲ್ಲಿ ಪ್ರೋಟೀನುಗಳು ನೆರವಾಗುತ್ತವೆ. ಇದಕ್ಕಾಗಿ ಮೊಟ್ಟೆ, ಕೋಳಿ ಮಾಂಸ, ಮೊಳಕೆ ಬರಿಸಿದ ಕಾಳುಗಳನ್ನು ಹೆಚ್ಚಾಗಿ ಸೇವಿಸಿ. ಇದರಿಂದ ತೂಕ ಕೊಂಚ ಏರುವ ಸಂಭವವಿದೆಯಾದರೂ ಆರೋಗ್ಯಕ್ಕಿಂತ ಮಿಗಿಲಾದುದಲ್ಲ.

ಆಲಿವ್ ಎಣ್ಣೆ

ಒಂದು ವೇಳೆ ಸುಲಿತ ಈಗತಾನೇ ಪ್ರಾರಂಭವಾಗಿದ್ದರೆ ಪ್ರತಿದಿನ ಸಂಜೆ ಆಲಿವ್ ಎಣ್ಣೆಯನ್ನು ಮಾತ್ರ ನಯವಾಗಿ ಮಸಾಜ್ ಮಾಡಿ ಒಣಗಲು ಬಿಡಿ. ಇಡಿಯ ರಾತ್ರಿ ಇದ್ದರೂ ಒಳ್ಳೆಯದು. ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸುವುದನ್ನು ಕಡಿಮೆಗೊಳಿಸಿ.

ಸೌತೆಕಾಯಿ

ಎಳೆಸೌತೆಯ ಸಿಪ್ಪೆ ಸುಲಿದು ಬೀಜವನ್ನು ತೆಗೆದು ತಿರುಳನ್ನು ಅರೆದು ಸಿಪ್ಪೆ ಸುಲಿದಲ್ಲಿ ದಪ್ಪನಾಗಿ ಹಚ್ಚಿ. ಒಂದು ಬಟ್ಟೆಯ ಪಟ್ಟಿಮಾಡಿ ಅದರಲ್ಲಿ ಅರೆದ ತಿರುಳನ್ನಿರಿಸಿ ಎಲ್ಲಾ ಬೆರಳುಗಳಿಗೆ ಸುತ್ತಿದರೂ ಸರಿ. ಸುಮಾರು ಹದಿನೈದು ನಿಮಿಷಗಳವರೆಗೆ ಹಾಗೇ ಇರಲು ಬಿಟ್ಟು ಬಳಿಕ ತೆಗೆಯಿರಿ. ಈಗ ಚರ್ಮ ಕೊಂಚ ನೆರಿಗೆಯಾಗಿರುತ್ತದೆ, ಇದನ್ನು ತೊಳೆಯದೇ ಸ್ವಲ್ಪ ಒಣಗಲು ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಇದನ್ನು ದಿನಕ್ಕೆರಡು ಬಾರಿ ಪುನರಾವರ್ತಿಸಿ.

ಶ್ರೀಗಂಧ, ಅರಿಸಿನ, ಜೇನು ಮತ್ತು ಆಲಿವ್ ಎಣ್ಣೆ

ಮೇಲಿನ ಎಲ್ಲವನ್ನೂ ಸಮಪ್ರಮಾಣದಲ್ಲಿ ಬೆರೆಸಿ ಲೇಪನವನ್ನು ತಯಾರಿಸಿ. ಇದನ್ನು ಚರ್ಮಕ್ಕೆ ಹಚ್ಚಿ ಅರ್ಧಘಂಟೆ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದು ಒಣಗಲು ಬಿಡಿ.

ಮೊಸರು

ಈಗತಾನೇ ಚರ್ಮ ಬಿರಿಯಲು ತೊಡಗಿದ್ದರೆ ಮೊಸರು ಉತ್ತಮ ಆರೈಕೆ ನೀಡಬಲ್ಲದು. ಮೊಸರಿಗೆ ನೀರು ಹಾಕದೇ ಹಾಗೇ ನೇರವಾಗಿ ಚರ್ಮಕ್ಕೆ ಹಚ್ಚಿ ಅರ್ಧಘಂಟೆ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದು ಒಣಗಲು ಬಿಡಿ.

ಕೊಬ್ಬರಿ ಎಣ್ಣೆ

ಯಾವುದೇ ಸುಗಂಧವನ್ನು ಸೇರಿಸದ ಅಪ್ಪಟ ಕೊಬ್ಬರಿ ಎಣ್ಣೆ ಬಿರಿದ ಚರ್ಮಕ್ಕೆ ಉತ್ತಮವಾಗಿದೆ. ಕೊಬ್ಬರಿ ಎಣ್ಣೆಯನ್ನು ಕೊಂಚವೇ (ಕರಗುವಷ್ಟು ಮಾತ್ರ) ಬಿಸಿಮಾಡಿ ಬಿರಿದ ಚರ್ಮಕ್ಕೆ ಹಚ್ಚಿ ರಾತ್ರಿಯಿಡೀ ಒಣಗಲು ಬಿಡಿ. ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ

ಹರಳೆಣ್ಣೆ

ಹರಳೆಣ್ಣೆಯನ್ನು ನೇರವಾಗಿ ಬಿರಿದ ಚರ್ಮದ ಮೇಲೆ ಹಚ್ಚಿ ನಯವಾಗಿ ಎರಡು ನಿಮಿಷಗಳವರೆಗೆ ಮಸಾಜ್ ಮಾಡಿ. ನಂತರದ ಹತ್ತು ನಿಮಿಷಗಳವರೆಗೆ ಒಣಗಲು ಬಿಡಿ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಸೇಬುಹಣ್ಣು

ಪ್ರತಿದಿನ ಒಂದು ಸೇಬುಹಣ್ಣನ್ನು ತಿನ್ನಿ. ಇದರಿಂದ ಹೊಸಚರ್ಮ ಬೆಳೆಯಲು ಹೆಚ್ಚಿನ ಪೌಷ್ಟಿಕಾಂಶಗಳು ದೊರಕುತ್ತವೆ.

ಪಪ್ಪಾಯಿ

ಚೆನ್ನಾಗಿ ಹಣ್ಣಾದ ಪಪ್ಪಾಯಿಯ ಸಿಪ್ಪೆ ಮತ್ತು ಬೀಜಗಳನ್ನು ನಿವಾರಿಸಿ ಹಿಚುಕಿ ಲೇಪನದಂತೆ ಮಾಡಿಕೊಳ್ಳಿ. ಇದನ್ನು ಚರ್ಮಕ್ಕೆ ಹಚ್ಚಿ ಅರ್ಧಘಂಟೆ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದು ಒಣಗಲು ಬಿಡಿ.

ಆಲಿವ್ ಎಣ್ಣೆ, ಗುಲಾಬಿ ನೀರು, ಲಿಂಬೆ, ಲಿಂಬೆಯ ಬಿಳಿಭಾಗದ ಮಿಶ್ರಣ

ಮೇಲಿನ ಎಲ್ಲವನ್ನೂ ಸಮಪ್ರಮಾಣದಲ್ಲಿ ಬೆರೆಸಿ ತಯಾರಿಸಿದ ಮಿಶ್ರಣವನ್ನು ಪ್ರತಿದಿನ ಹಚ್ಚಿ ಒಣಗಲು ಬಿಡಿ.

ಮೂಲ : ಬೋಲ್ಡ್ ಸ್ಕೈ (http://www.boldsky.com/)

ಕೊನೆಯ ಮಾರ್ಪಾಟು : 10/14/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate