ಹಂದಿಜ್ವರಕ್ಕೆ ತುತ್ತಾದವರ ವಿವರಗಳು ಪತ್ರಿಕೆಗಳ ಮುಖಪುಟವನ್ನು ತುಂಬುತ್ತಿವೆ. ಭಾರತದಲ್ಲಿಯೂ ಹಲವೆಡೆ ಹಂದಿಜ್ವರ ಮತ್ತು ಹೆಚ್1ಎನ್1 ಜ್ವರ ವ್ಯಾಪಿಸುತ್ತಿರುವ ಸಂಗತಿ ಕಳವಳಕಾರಿಯಾಗಿದೆ. ವಾಸ್ತವವಾಗಿ ಯಾವುದೇ ರೋಗ ನಿಜವಾಗಿ ಆವರಿಸುವುದಕ್ಕಿಂತ ಇದರ ಕುರಿತಾದ ಭಯವೇ ಹೆಚ್ಚು ಆತಂಕ ಹುಟ್ಟಿಸುತ್ತದೆ.
ಜ್ವರ ಬೇರೆ ಕಾರಣದಿಂದ ಬಂದಿದ್ದು ಲಕ್ಷಣಗಳು ಹಂದಿಜ್ವರಕ್ಕೆ ಹೋಲಿಕೆ ಕಂಡುಬಂದರೆ ಅಕ್ಕಪಕ್ಕದವರು ಇದು ರೋಗಿಯ ಕಡೆಗಾಲ ಎಂಬಂತೆ ವರ್ತಿಸುವುದರಿಂದ ಮಾನಸಿಕವಾಗಿ ಧೃತಿಗೆಡುವ ರೋಗಿ ಜ್ವರಕ್ಕಿಂತ ಹೆಚ್ಚಾಗಿ ಭಯದ ಕಾರಣವೇ ಮರಣವನ್ನಪ್ಪಿರುವ ಎಷ್ಟೋ ಘಟನೆಗಳಿವೆ
ಆದ್ದರಿಂದ ಯಾವುದೇ ಜ್ವರದ ಲಕ್ಷಣಗಳು ಕಂಡುಬಂದರೆ ಧೃತಿಗೆಡದೇ ಮೊತ್ತ ಮೊದಲು ವೈದ್ಯಕೀಯ ತಪಾಸಣೆಗೆ ಒಳಗಾಗುವುದು ಅತ್ಯಂತ ಅಗತ್ಯವಾಗಿದೆ. ಸೂಕ್ತ ಪರೀಕ್ಷೆಗಳ ಬಳಿಕ ಪರಿಣಿತರು ಈ ಜ್ವರಕ್ಕೆ ಕಾರಣ ಹಾಗೂ ಜ್ವರದ ಬಗ್ಗೆ ನೀಡುವ ಸ್ಪಷ್ಟ ಮಾಹಿತಿಯನ್ನೇ ಪರಿಗಣಿಸಬೇಕೇ ವಿನಃ ಅಕ್ಕಪಕ್ಕದವರು ನೀಡುವ ಹೋಲಿಕೆಯ ಅಂಶಗಳನ್ನಲ್ಲ. ವಾಸ್ತವವಾಗಿ ಸಾಮಾನ್ಯ ಜ್ವರದ ಲಕ್ಷಣಗಳಿಗೂ ಹಂದಿಜ್ವರದ ಲಕ್ಷಣಗಳಿಗೂ ಹೆಚ್ಚು ವ್ಯತ್ಯಾಸ ಮೇಲ್ನೋಟಕ್ಕೆ ಕಂಡುಬರುವುದಿಲ್ಲ. ಹಾಗಾಗಿ ಸಾಮಾನ್ಯ ಫ್ಲೂ ಜ್ವರವನ್ನೇ ಹಂದಿಜ್ವರವೆಂದೇ ತಪ್ಪಾಗಿ ಅರ್ಥೈಸಿಕೊಂಡ ಪ್ರಕರಣಗಳೂ ನೂರಾರಿವೆ.
ಎರಡೂ ವಿಧದ ರೋಗಗಳ ಬಾಹ್ಯ ಲಕ್ಷಣಗಳು ಒಂದೇ ತೆರನಾಗಿ ಕಂಡುಬಂದರೂ ರೋಗಿಯ ರಕ್ತಪರೀಕ್ಷೆಯ ಮೂಲಕ ಹಲವು ಮಾಹಿತಿಗಳನ್ನು ಪಡೆಯಬಹುದು. ಈ ಮಾಹಿತಿಗಳಿಂದ ರೋಗಿಗೆ ಜ್ವರ ಬಂದಿರುವ ಕಾರಣವನ್ನು ಕಂಡುಹಿಡಿದು ಅದಕ್ಕೆ ಸೂಕ್ತವಾದ ಔಷಧಿಗಳನ್ನು ನೀಡುವ ಮೂಲಕ ಖಾಯಿಲೆ ಗುಣಪಡಿಸಬಹುದು. ಒಂದು ವೇಳೆ ಹಂದಿಜ್ವರವೇ ಆಗಿದ್ದರೆ, ಹಾಗೂ ಇನ್ನೂ ಪ್ರಾರಂಭಿಕ ಹಂತದಲ್ಲಿದ್ದರೆ ಅದಕ್ಕೆ ಸೂಕ್ತ ಚಿಕಿತ್ಸೆ ಲಭ್ಯವಿದೆ. ಇದಕ್ಕೆ ಆಸ್ಪತ್ರೆಗೆ ದಾಖಲಿಸುವ ಅಗತ್ಯವಿದೆಯೇ ಇಲ್ಲವೇ ಎಂಬುದನ್ನು ವೈದ್ಯರೇ ನಿರ್ಧರಿಸುತ್ತಾರೆ.
ಪ್ರಯೋಗಾಲಯದ ಪರೀಕ್ಷಾ ಫಲಿತಾಂಶವೇ ನಿಜವಾದ ಸ್ಪಷ್ಟನೆಯಾಗಿದೆ ಸಿಡಿಸಿ ನೀಡಿದ ಮಾಹಿತಿಯ ಪ್ರಕಾರ ಅಮೇರಿಕಾ ದೇಶವೊಂದರಲ್ಲಿಯೇ ಸಾಮಾನ್ಯ ಜ್ವರ ಕಂಡು ಬಂದ ಎರಡು ಲಕ್ಷ ಜನರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಅದರಲ್ಲಿ ಮೂವತ್ತಾರು ಸಾವಿರ ಜನರ ರೋಗ ಉಲ್ಬಣಗೊಂಡು ಸಾವಿನಲ್ಲಿ ಅಂತ್ಯ ಕಂಡಿದೆ. ಅದರಲ್ಲಿ ಮಕ್ಕಳ ಮತ್ತು ವೃದ್ಧರ ಸಂಖ್ಯೆ ಗಣನೀಯವಾಗಿರುವುದು ಕಂಡುಬಂದಿದೆ. ಅವರ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಕುಂಠಿತವಾಗಿರುವುದೇ ಕಾರಣ ಎಂದು ವೈದ್ಯರು ಅಭಿಪ್ರಾಯ ಪಡುತ್ತಾರೆ.
ನಮ್ಮೆಲ್ಲರಿಗೂ ಮೈಲಿ ಅಥವಾ ಸೀತಾಳ (small pox) ಎಂಬ ಜ್ವರ ಜೀವಮಾನದಲ್ಲೊಂದು ಬಾರಿ ಬಂದು ಹೋಗಿದೆ. ಒಮ್ಮೆ ಬಂದ ಬಳಿಕ ಇಡಿಯ ಜೀವಮಾನ ಇನ್ನೊಮ್ಮೆ ಬರುವುದಿಲ್ಲ, ಏಕೆಂದರೆ ಈ ರೋಗಕ್ಕೆ ಕಾರಣವಾದ ವೈರಸ್ಸುಗಳನ್ನು ಹೊಡೆದೋಡಿಸಲು ನಮ್ಮ ದೇಹದ ರೋಗನಿರೋಧಕ ಶಕ್ತಿ ಸಫಲವಾಗಿರುತ್ತದೆ. ಇದೇ ರೀತಿ ಹೆಚ್1ಎನ್1 ಜ್ವರ ನಮ್ಮ ದೇಹಕ್ಕೆ ಹೊಸದಾಗಿದೆ. ಇದನ್ನು ನಿಗ್ರಹಿಸುವ ಶಕ್ತಿಯನ್ನು ನಮ್ಮ ದೇಹದ ರೋಗನಿರೋಧಕ ವ್ಯವಸ್ಥೆ ಇನ್ನೂ ಹೊಂದಿಲ್ಲದ ಕಾರಣ ಈ ಜ್ವರಕ್ಕೆ ನಾವೆಲ್ಲರೂ ಸುಲಭವಾಗಿ ಬಲಿಯಾಗುತ್ತೇವೆ. ಇದರಿಂದ ಈ ಜ್ವರ ಹರಡುವ ವೇಗ ಅತ್ಯಂತ ಹೆಚ್ಚಾಗಿದೆ.
ಕೊನೆಯ ಮಾರ್ಪಾಟು : 7/1/2020
ಈ ರೋಗ ಹರಡುವ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿ ಚಿಕಿತ್ಸ...
ವಿವಿಧ ಸಾಮಾನ್ಯ ರೋಗಗಳು ಬಗ್ಗೆಗಿನ ಮಾಹಿತಿಯನ್ನು ಇಲ್ಲಿ ತಿ...