অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ತೊದಲುವಿಕೆ ರೋಗವಲ್ಲ

ತೊದಲುವಿಕೆ ಸಾಮಾನ್ಯವಾಗಿ ಅನೇಕರಲ್ಲಿ ಕಂಡುಬರುವ ಲಕ್ಷಣ. ತೊದಲುವಿಕೆ ನಮ್ಮ ಆತಂಕದ ಒಂದು ವ್ಯಕ್ತತೆಯೇ ವಿನಃ ಇದು ರೋಗವಲ್ಲ. ಗಾಬರಿ ಅಥವಾ ಅಂಜಿಕೆಯಾದಾಗ ನಮ್ಮ ಕೈ ಕಾಲು ನಡುಗುವಿಕೆಯ ರೂಪದಲ್ಲಿ ಅಥವಾ ಮಲಮೂತ್ರ ವಿಸರ್ಜನೆ ರೂಪದಲ್ಲಿ ಭಯವನ್ನು ನಾವು ವ್ಯಕ್ತಪಡಿಸುವುದಿಲ್ಲವೇ, ಅದೇ ರೀತಿ ಅಡುಗೆ ಮನೆಯಲ್ಲಿ ತುಂಬಿಕೊಂಡಿರುವ ಹೊಗೆಯನ್ನು ಹೊರಹಾಕಲು ಎಲ್ಲ ಕಿಟಕಿ ಬಾಗಿಲುಗಳನ್ನು ತೆರೆದಾಗ ಆ ಹೊಗೆ ಯಾವರೀತಿ ಹೊರಹೋಗುತ್ತದೋ, ಹಾಗೆಯೇ ನಮ್ಮ ಆತಂಕ ಹಾಗೂ ದುಗುಡಗಳು ನಡುಕ, ತಲೆನೋವು, ವಿಸರ್ಜನೆ, ಸ್ನಾಯುಸೆಳೆತ ಹಾಗೂ ಇತರೆ ಅಂಗಾಂಗಗಳ ಪ್ರತಿಸ್ಪಂದನದ ಮೂಲಕವೂ ವ್ಯಕ್ತವಾಗುತ್ತದೆ. ಅದು ಗಂಟಲಿನ ಸ್ನಾಯುಗಳ ಮೂಲಕ ಪ್ರಕಟವಾದಾಗ ಅದನ್ನೇ ನಾವು ಗುಕ್ಕು ಅಥವಾ ಬಿಕ್ಕುವಿಕೆ ಅಥವಾ ತೊದಲುವಿಕೆ ಎಂದು ಕರೆಯುತ್ತೇವೆ.


ಯಾವಾಗ ತೊದಲುತ್ತೇವೆ?


ತೊದಲುವಿಕೆ ಹಲವಾರು ರೀತಿಯಲ್ಲಿ ಪ್ರಕಟವಾಗುತ್ತದೆ. ಮಾತು ಪ್ರಾರಂಭಿಸುವಾಗ ತೊಡಕಾಗುವುದು, ಸಂಭಾಷಿಸುವಾಗ ಮಧ್ಯೆ ಮಧ್ಯೆ ಉಚ್ಚಾರಣೆಗೆ ತೊಡಕಾಗುವುದು,ಕೆಲವೊಂದು ಕಠಿಣ ಶಬ್ದಗಳ ಉಚ್ಚಾರಣೆಗೆ ತೊಂದರೆಯಾಗುವುದು, ಸಂಭಾಷಣೆಯ ಗತಿಯನ್ನು ಮುಂದುವರಿಸಲು ತೊಡಕಾಗುವುದು ಹೀಗೆ ವಿವಿಧ ತೊದಲುವಿಕೆಯಿಂದಾಗಿ ವ್ಯಕ್ತಿ ನರಳಿ, ಖಿನ್ನತೆ ಅಥವಾ ಕೀಳರಿಮೆಯಿಂದ, ಚಿತ್ತಚಾಂಚಲತೆಯನ್ನು ಹೊಂದುತ್ತಾನೆ.

ನಾವು ತುಂಬಾ ಗಾಬರಿಯಾದಾಗ, ಸಭೆಯಲ್ಲಿ ಮಾತನಾಡುವಾಗ, ತಪ್ಪು ಮಾಡಿ ಸಿಕ್ಕಿಕೊಂಡಾಗ, ಆಕಸ್ಮಿಕ ಅವಘಡಗಳಿಗೆ ಸಿಲುಕಿದಾಗ, ವಿಚಲಿತರಾದಂತಾಗಿ ಸಾಮಾನ್ಯರಲ್ಲೂ ತೊದಲುವಿಕೆ ಕಾಣಿಸಿಕೊಳ್ಳುವುದುಂಟು. ವಯಸ್ಕರು ಬಲಭಾಗದ ಪಾರ್ಶ್ವವಾಯುವಿಗೆ ತುತ್ತಾಗಿದ್ದಾಗಲೂ ಈ ತೊದಲುವಿಕೆ ಸರ್ವೇಸಾಮಾನ್ಯ.

ತೊದಲುವಿಕೆ ಅಥವಾ ಬಿಕ್ಕುವಿಕೆ ಹೆಚ್ಚಾಗಿ ಊಟಮಾಡುವಾಗ, ಮಲಗಿದೊಡನೆ, ಗಾಢ ನಿದ್ರೆಯಲ್ಲಿದ್ದಾಗ ಅಥವಾ ನಸುಕಿನಲ್ಲಿ ಏಳುವಾಗ ಕಂಡುಬರುತ್ತದೆ. ಇದರಿಂದಾಗಿ ಆಗಿಂದಾಗ್ಗೆ ತಲೆನೋವು ಕಂಡುಬಂದು, ಅದು ಹೆಚ್ಚಾಗಿ ಮಿದುಳಿನ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ.


ಪಾಲಕರೇ ಗಮನಿಸಿ


ಚಿಕ್ಕಮಕ್ಕಳು ವಯೋಸಹಜವಾಗಿ ತಪ್ಪು ಮಾಡಿದಾಗ ನೀವು ಸಿಟ್ಟಿನಿಂದ ಹೊಡೆಯಲು ಪ್ರಯತ್ನಿಸಿದಾಗ, ಹೆದರಿಕೆಯಿಂದಾಗಿ ಅವರಲ್ಲಿ ತೊದಲುವಿಕೆ ಉಂಟಾಗುತ್ತದೆ. ಆಗ ನೀವು ಅವರನ್ನು ಮುದ್ದಿಸಲು ಪ್ರಾರಂಬಿಸಿದಾಗ,ಇದನ್ನೇ ಸದುಪಯೋಗ ಪಡಿಸಿಕೊಂಡು ಮಗು ನಿಮ್ಮ ಕೃಪೆಗಾಗಿ ಪದೇ ಪದೆ ಈ ರೀತಿ ಬಿಕ್ಕುವಿಕೆಯನ್ನು ರೂಢಿಸಿಕೊಳ್ಳುವುದರಿಂದ ಮುಂದೆ ಅದೇ ಅಭ್ಯಾಸವಾಗುವ ಸಂಭವವೂ ಇಲ್ಲದಿಲ್ಲ. ಆದ್ದರಿಂದ ಇಂತಹ ವಿಚಾರಗಳ ಕಡೆ ಪಾಲಕರು ಗಮನವಿಡುವುದು ಅವಶ್ಯ.


ಚಿಕಿತ್ಸೆ ಹೇಗೆ?


ಈ ರೀತಿಯ ಸಮಸ್ಯೆಯಿಂದ ಬಳಲುತ್ತಿರುವವರು ಅತಿಯಾಗಿ ಚಿಂತಿಸುವ ಅಗತ್ಯವಿಲ್ಲ. ಕಾರಣ ಇದಕ್ಕೆ ಸೂಕ್ತ ಚಿಕಿತ್ಸಾ ಕ್ರಮಗಳುಂಟು. ಇಂಥವರು ಸಮೀಪದ ಸ್ಪೀಚ್ ಥೆರಪಿಸ್ಟ್ ರನ್ನಾಗಲೀ ಅಥವಾ ಮನೋವೈದ್ಯರನ್ನಾಗಲೀ ಕಾಣುವುದು ಒಳಿತು. ಜೊತೆಗೆ ಉಚ್ಚಾರಣೆಯನ್ನು ಸರಳಗೊಳಿಸುವ ಕೆಲವೊಂದು ಸುಲಭ ಮಾತಿನ ಅಭ್ಯಾಸಗಳನ್ನು ರೂಢಿಸಿಕೊಂಡು ದಿನನಿತ್ಯ ಅಭ್ಯಾಸ ಮಾಡುವುದು. ಉಸಿರಾಟದ ಗತಿಯನ್ನು ನಿಯಂತ್ರಿಸುವ ಕಲೆಯನ್ನು ರೂಢಿಸಿಕೊಳ್ಳುವುದು. ಹಾಗೆಯೇ ದೀರ್ಘ ಕಾಲೀನ ಸೇವನೆಯ ಔಷಧಗಳನ್ನು ವೈದ್ಯರ ಸಲಹೆಯಂತೆ ಸೇವಿಸುವುದು, ಓದುವಾಗ ಹಾಗೂ ಸ್ನೇಹಿತರೊಂದಿಗೆ ಮಾತನಾಡುವಾಗ ದೊಡ್ಡ ಧ್ವನಿಯಲ್ಲಿ ಮಾತನಾಡುವುದರಿಂದ ನಿಮ್ಮ ತೊದಲುವಿಕೆಯನ್ನು ನೀವೇ ತಿದ್ದಿಕೊಳ್ಳಲು ಸಹಾಯಕವಾಗುತ್ತದೆ.

ಮೂಲ: ಪ.ನಾ.ಹಳ್ಳಿ.ಹರೀಶ್ ಕುಮಾರ್© 2006–2019 C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate