ಪಿತ್ತಕೋಶದಲ್ಲಿ ಕಲ್ಲು ಉಂಟಾಗುವುದು ಇಂದು ಸಾಮಾನ್ಯವಾಗಿದೆ. ಇದಕ್ಕೆ ಕಾರಣಗಳು ಹಲವು. ಆದರೆ ಈ ಸಮಸ್ಯೆಯ ಮತ್ತು ಅದರ ಪರಿಹಾರದ ಬಗೆಗಿನ ಮಾಹಿತಿ ಹೆಚ್ಚಿನವರನ್ನು ಇನ್ನೂ ಮುಟ್ಟಿಲ್ಲ ಎಂದೇ ಹೇಳಬಹುದು. ಅದಲ್ಲದೆ, ಕೆಲವೊಂದು ಅಪನಂಬಿಕೆಗಳಿಂದಾಗಿಯೂ ಹಲವೊಮ್ಮೆ ಸೂಕ್ತ ಪರಿಹಾರ ಕಂಡುಕೊಳ್ಳುವಲ್ಲಿ ರೋಗಿಗಳು ವಂಚಿತರಾಗುತ್ತಾರೆ. ಜನಸಾಮಾನ್ಯರ ಮನಸ್ಸಿನಲ್ಲಿ ಇರಬಹುದಾದ ಸಂಶಯಗಳನ್ನು ಈ ಪ್ರಶ್ನೋತ್ತರದ ಮೂಲಕ ಪರಿಹರಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.
ಪಿತ್ತಕೋಶ ಎಂದರೇನು? ಅದರ ಕಾರ್ಯವೇನು?
ಪಿತ್ತಕೋಶ ಎಂದರೆ, ಉದರದಲ್ಲಿ ಪಿತ್ತಜನಕಾಂಗ (ಲಿವರ್)ದ ಕೆಳಭಾಗದಲ್ಲಿ ಪಿತ್ತಜನಕಾಂಗದ ನಾಳಕ್ಕೆ ಅಂಟಿಕೊಂಡಂತೆ ಇರುವ ಒಂದು ಅಂಗ. ಪಿತ್ತಜನಕಾಂಗದಲ್ಲಿ ಉತ್ಪಾದಿತವಾಗುವ ಪಿತ್ತರಸದ ತುಸು ಭಾಗವನ್ನು ಶೇಖರಿಸಿ ಇಟ್ಟುಕೊಳ್ಳುವುದೇ ಪಿತ್ತಕೋಶದ ಕೆಲಸ. ಪಿತ್ತಕೋಶದ ನಾಳ ಹಾಗೂ ಪಿತ್ತ ಜನಕಾಂಗದ ನಾಳ ಒಟ್ಟು ಸೇರಿಕೊಂಡು ಸಾಮಾನ್ಯ ಪಿತ್ತನಾಳವಾಗಿ ಮಾರ್ಪಟ್ಟು, ಸಣ್ಣ ಕರುಳಿಗೆ ಜೋಡಣೆಯಾಗುತ್ತದೆ. ಸಣ್ಣ ಕರುಳಿನಲ್ಲಿ ಜಿಡ್ಡುಯುಕ್ತ ಆಹಾರದ ಪಚನಕ್ರಿಯೆಯಲ್ಲಿ ಪಿತ್ತರಸದ ಪಾತ್ರ ಮಹತ್ವದ್ದು.
ಆದರೆ ಪಿತ್ತರಸ ಸ್ರವಿಸುವುದು ಪಿತ್ತಜನಕಾಂಗದಲ್ಲಿಯೇ ಹೊರತು ಪಿತ್ತಕೋಶದಲ್ಲಲ್ಲ ಎಂಬುದು ಗಮನಿಸಬೇಕಾದ ಅಂಶ.
ಪಿತ್ತಕೋಶದ ಕಲ್ಲಿನ ರೋಗ ಲಕ್ಷಣಗಳೇನು?
ಪಿತ್ತಕೋಶದಲ್ಲಿ ಕಲ್ಲಿನ ಇರುವಿಕೆಯಿಂದಾಗಿ ನಿರ್ದಿಷ್ಟ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎನ್ನುವಂತಿಲ್ಲ. ಕೆಲವರಿಗಂತೂ ಕಲ್ಲುಗಳ ಇರುವಿಕೆಯ ಅರಿವೇ ಇರುವುದಿಲ್ಲ. ಇನ್ನು ಕೆಲವರಿಗೆ ಊಟದ ನಂತರ ಉದರದ ಮೇಲಾºಗದಲ್ಲಿ ಹಿಡಿದಿಟ್ಟ ಅನುಭವ ಅಥವಾ ನೋವು ಕಾಣಿಸಬಹುದು. ಹಲವರು ಇದನ್ನು "ಗ್ಯಾಸ್ಟ್ರಿಕ್' ಸಮಸ್ಯೆ ಎಂದುಕೊಳ್ಳುವುದುಂಟು.
ಅಂದರೆ ಅದಕ್ಕಿಂತ ಹೆಚ್ಚಿನ ಸಮಸ್ಯೆ ಪಿತ್ತಕೋಶದ ಕಲ್ಲಿನಿಂದ ಉಂಟಾಗುವ ಸಾಧ್ಯತೆ ಇಲ್ಲವೇ?
ಖಂಡಿತಾ ಇದೆ. ಪಿತ್ತಕೋಶದ ಉರಿಯೂತ, ಪಿತ್ತನಾಳದ ಸೋಂಕು, ಪಿತ್ತ ನಾಳದೊಳಕ್ಕೆ ಕಲ್ಲು ಜಾರಿ ಸೇರಿಕೊಳ್ಳುವುದರಿಂದ ಉಂಟಾಗುವ ವಿಶಿಷ್ಟ ಕಾಮಾಲೆ, ಮೇದೋಜೀರಕಾಂಗದ ಉರಿಯೂತ... ಇತ್ಯಾದಿ ಗಂಭೀರ ಸಂಕೀರ್ಣತೆಗಳು ಪಿತ್ತಕೋಶದ ಕಲ್ಲಿನಿಂದ ಉಂಟಾಗಬಹುದು. ಇವು ಪ್ರಾಣಾಂತಿಕವಾಗಿ ಪರಿಣಮಿಸುವ ಸಾಧ್ಯತೆಯೂ ಇದೆ. ಈ ರೀತಿಯ ಗಂಭೀರ ಸಮಸ್ಯೆಗಳು ಯಾವಾಗ ಉಂಟಾಗಬಹುದು ಎಂದು ಊಹಿಸುವುದು ಅಸಾಧ್ಯವಾದ್ದರಿಂದ, ಆರೋಗ್ಯ ಇನ್ನೂ ಚೆನ್ನಾಗಿ ಇರುವಾಗಲೇ ಸಣ್ಣದೊಂದು ಶಸ್ತ್ರಚಿಕಿತ್ಸೆಯ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದು ಒಳ್ಳೆಯದು.
ಪಿತ್ತಕೋಶದಲ್ಲಿ ಕಲ್ಲು ಇದೆ ಎಂದು ತಿಳಿಯುವ ಬಗೆ ಹೇಗೆ?
ಮೇಲ್ಕಾಣಿಸಿದ "ಗ್ಯಾಸ್ಟ್ರಿಕ್' ಅನುಭವವಾಗುವವರಿಗೆ ಅಥವಾ ಇತರ ಸಂಕೀರ್ಣತೆಗಳು ಆಗಲೇ ಕಾಣಿಸಿಕೊಂಡಿರುವವರಿಗೆ ವೈದ್ಯರು ಉದರದ ಅಲ್ಟ್ರಾಸೌಂಡ್ ಮಾಡಲು ಸೂಚಿಸುತ್ತಾರೆ. ಅಲ್ಟ್ರಾಸೌಂಡ್ ಸ್ಕ್ಯಾನ್‌ನಲ್ಲಿ ಪಿತ್ತಕೋಶದಲ್ಲಿನ ಕಲ್ಲು ಸ್ಪಷ್ಟವಾಗಿ ಗೋಚರಿಸುತ್ತದೆ. ಕಲ್ಲುಗಳ ಸಂಖ್ಯೆ, ಗಾತ್ರ, ಸ್ಥಾನ ಇತ್ಯಾದಿ ವಿವರಗಳು ಮತ್ತು ಸಂಭವನೀಯ ಸಂಕೀರ್ಣತೆಯ ಮಾಹಿತಿಯೂ ಸ್ಕ್ಯಾನ್ ಮಾಡುವುದರಿಂದ ಲಭ್ಯವಾಗುತ್ತದೆ.
ಪಿತ್ತ ಕೋಶದ ಕಲ್ಲುಗಳಿಂದ ಯಾವುದೇ ಸಮಸ್ಯೆಗಳಿಲ್ಲದ ವ್ಯಕ್ತಿಗಳಲ್ಲಿ ಇತರೆ ಕಾರಣಗಳಿಗಾಗಿ ಉದರದ ಸ್ಕ್ಯಾನ್ ಮಾಡಿಸಿಕೊಂಡಾಗ ಪಿತ್ತಕೋಶದಲ್ಲಿನ ಕಲ್ಲು ಪತ್ತೆಯಾಗುವುದು ಸಾಮಾನ್ಯ. ಉದಾಹರಣೆಗೆ, ಗರ್ಭಕೋಶ ಅಥವಾ ಅಂಡಾಶಯದ ಸಮಸ್ಯೆ ಇರುವವರಲ್ಲಿ ಅದಕ್ಕೋಸ್ಕರ ಮಾಡಲಾಗುವ ಅಲ್ಟ್ರಾಸೌಂಡ್ ಸ್ಕ್ಯಾನ್‌ನಲ್ಲಿ ಪಿತ್ತಕೋಶದಲ್ಲಿನ ಕಲ್ಲು ಪತ್ತೆಯಾಗುವುದು ವಿರಳವೇನಲ್ಲ.
ಪಿತ್ತಕೋಶದ ಕಲ್ಲಿನ ಪರಿಹಾರ ಹೇಗೆ?
ಪಿತ್ತಕೋಶದಲ್ಲಿನ ಕಲ್ಲಿನಿಂದಾಗಿ ವ್ಯಕ್ತಿಗೆ ರೋಗಲಕ್ಷಣಗಳು ಅಥವಾ ಅದರಿಂದಾಗುವ ಸಂಕೀರ್ಣತೆಗಳು ಇವೆ ಎಂದಾದಲ್ಲಿ, ಆತನಿಗೆ/ಆಕೆಗೆ ಶಸ್ತ್ರಚಿಕಿತ್ಸೆಯೊಂದೇ ಪರಿಹಾರ. ಪಿತ್ತಕೋಶದ ಸೋಂಕಿನಿಂದಾಗಿ ಕೀವು ಕಟ್ಟಿಕೊಂಡಿದ್ದಲ್ಲಿ, ಕೆಲವೊಮ್ಮೆ ತುರ್ತು ಶಸ್ತ್ರಕ್ರಿಯೆಯೂ ಬೇಕಾಗುವುದಿದೆ. ಸಾಮಾನ್ಯವಾಗಿ ಉದರ ದರ್ಶಕ ವಿಧಾನದಿಂದ ಶಸ್ತ್ರಕ್ರಿಯೆ ನಡೆಸಲಾಗುತ್ತದೆ. ಆದರೆ ಪಿತ್ತಕೋಶದಲ್ಲಿ ಕೀವು ತುಂಬಿಕೊಂಡಿರುವ ಸಂದರ್ಭದಲ್ಲಿ ಉದರಕ್ಕೆ ಗಾಯಮಾಡಿಯೇ ಶಸ್ತ್ರಕ್ರಿಯೆ ನಡೆಸಬೇಕಾಗಬಹುದು.
ಪಿತ್ತಕೋಶದ ಕಲ್ಲಿನಿಂದ ಯಾವುದೇ ಸಮಸ್ಯೆ ಅಥವಾ ನೋವು ಇಲ್ಲದಿರುವ ವ್ಯಕ್ತಿಗಳಲ್ಲಿ ಶಸ್ತ್ರಚಿಕಿತ್ಸೆಯ ಆವಶ್ಯಕತೆಯ ಬಗ್ಗೆ "ಇದಮಿತ್ಥಂ' ಎಂಬ ಖಚಿತ ಸಲಹೆ ಅಸಾಧ್ಯ.
ಸಾಮಾನ್ಯವಾಗಿ ಕಡಿಮೆ ವಯಸ್ಸಿನವರಲ್ಲಿ ಪಿತ್ತಕೋಶದಲ್ಲಿ ಹಲವಾರು ಕಲ್ಲುಗಳಿದ್ದಾಗ, ರೋಗಿಗೆ ಡಯಾಬಿಟಿಸ್ ಇದ್ದಾಗ ಅಥವಾ ಪಿತ್ತಕೋಶ ಹಾನಿಯಾಗಿರುವ ಸೂಚನೆ ಸ್ಕ್ಯಾನ್‌ನಲ್ಲಿ ಸಿಕ್ಕಿದಾಗ ಶಸ್ತ್ರಕ್ರಿಯೆ ಮಾಡಿಸಿಕೊಳ್ಳುವ ಸಲಹೆಯನ್ನು ರೋಗಿಗೆ ಕೊಡಲಾಗುತ್ತದೆ. ಏಕೆಂದರೆ, ಈ ತೆರನ ವ್ಯಕ್ತಿಗಳಲ್ಲಿ ಒಂದಲ್ಲ
ಒಂದು ದಿನ ಗಂಭೀರ ಸಂಕೀರ್ಣತೆಯ ಸಾಧ್ಯತೆ ಹೆಚ್ಚು.
ಪಿತ್ತಕೋಶವನ್ನೇ ತೆಗೆಯುವುದರಿಂದ ಆರೋಗ್ಯಕ್ಕೇನೂ ಹಾನಿಯಿಲ್ಲವೇ?
ಇದೊಂದು ಹೆಚ್ಚಾಗಿ ಕೇಳಲಾಗುವ ಪ್ರಶ್ನೆ.. ದೇಹದ ಆರೋಗ್ಯ ಸಂರಕ್ಷಣೆಯಲ್ಲಿ ಪಿತ್ತಕೋಶದ ಪಾತ್ರ ಅಷ್ಟು ಮಹತ್ವದ್ದಲ್ಲ. ಪಿತ್ತಕೋಶ ಪಿತ್ತವನ್ನು ಉತ್ಪಾದಿಸುವ ಜಾಗವಲ್ಲ. ಅಲ್ಲಿ ತುಸು ಪಿತ್ತ ಸ್ವಲ್ಪ ಕಾಲ ಶೇಖರಣೆಯಾಗುತ್ತದಷ್ಟೆ. ಪಿತ್ತಕೋಶದಲ್ಲಿ ಕಲ್ಲು ಇದ್ದಾಗ, ಹೆಚ್ಚಿನ ಬಾರಿ ಪಿತ್ತಕೋಶ ಸಮರ್ಪಕವಾಗಿ ಕೆಲಸ ಮಾಡುತ್ತಿರುವುದಿಲ್ಲ. ಒಂದು ವೇಳೆ ಕಲ್ಲುಗಳನ್ನು ಮಾತ್ರ ತೆಗೆದು ಪಿತ್ತಕೋಶವನ್ನು ಹಾಗೆಯೇ ಬಿಟ್ಟಲ್ಲಿ, ಕೆಲ ತಿಂಗಳೊಳಗೆ ಮತ್ತೆ ಕಲ್ಲುಗಳು ಉಂಟಾಗುವುದು ಶತಸಿದ್ಧ.
ಪಿತ್ತಕೋಶವನ್ನು ತೆಗೆಯುವುದರಿಂದ ವ್ಯಕ್ತಿಯ ಆರೋಗ್ಯ ಅಥವಾ ಪಚನ ಕ್ರಿಯೆಯಲ್ಲಿ ಯಾವುದೇ ಏರುಪೇರು ಉಂಟಾಗುವುದಿಲ್ಲ ಎಂಬುದು ಅಧ್ಯಯನಗಳಿಂದ ದೃಢಪಟ್ಟಿದೆ.
ಮೂತ್ರ ಜನಕಾಂಗ (ಕಿಡ್ನಿ) ದ ಕಲ್ಲುಗಳನ್ನು ಹಲವೊಮ್ಮೆ ಶಸ್ತ್ರಕ್ರಿಯೆ ಇಲ್ಲದೇ ನಿವಾರಿಸುವ ಸಾಧ್ಯತೆ ಇರುವಾಗ ಪಿತ್ತಕೋಶದ ಕಲ್ಲುಗಳನ್ನೇಕೆ ಹಾಗೆಯೇ ನಿವಾರಿಸಬಾರದು?
ಈ ಪ್ರಶ್ನೆ ರೋಗಿಯ ಮನಸ್ಸಿನಲ್ಲಿ ಉಂಟಾಗುವುದು ಸಹಜವಾದರೂ ಉತ್ತರ ಸರಳವಲ್ಲ. ಮೊದಲನೆಯದಾಗಿ ಪಿತ್ತಕೋಶದಲ್ಲಿ ಕಲ್ಲು ಉಂಟಾಗುವಷ್ಟರಲ್ಲಿ, ಪಿತ್ತಕೋಶದ ಕಾರ್ಯಕ್ಷಮತೆ ಕುಂಠಿತವಾಗಿರುತ್ತದೆ. ಪಿತ್ತಕೋಶದ ಅಸಮರ್ಪಕ ಕಾರ್ಯವೇ ಕಲ್ಲುಗಳಿಗೆ ಕಾರಣ. ಹೀಗಿರುವಾಗ ಪಿತ್ತಕೋಶವನ್ನು ತೆಗೆಯದೆ ಬರೀ ಕಲ್ಲುಗಳನ್ನು ತೆಗೆದರೆ ಸಮಸ್ಯೆ ಮರುಕಳಿಸುತ್ತದೆ.
ಅದಲ್ಲದೆ, ಕಿಡ್ನಿಯ ಕಲ್ಲುಗಳ ರಚನೆ ಹಾಗೂ ಸಾಂದ್ರತೆಗೂ ಪಿತ್ತಕೋಶದಲ್ಲಿನ ಕಲ್ಲುಗಳ ರಚನೆ ಹಾಗೂ ಸಾಂದ್ರತೆಗೂ ಅಜಗಜಾಂತರವಿದೆ. ಆದ್ದರಿಂದಲೇ ಪಿತ್ತಕೋಶದ ಕಲ್ಲುಗಳನ್ನು ಕಿಡ್ನಿಯ ಕಲ್ಲುಗಳಂತೆ ತರಂಗಗಳ ಬಳಕೆಯಿಂದ ಹೊರಗಿನಿಂದಲೇ ಪುಡಿ ಮಾಡುವ ಪ್ರಯತ್ನಗಳು ಅಷ್ಟೊಂದು ಯಶಸ್ವಿಯಾಗಿಲ್ಲ. ಪಿತ್ತಕೋಶವನ್ನು ಉದರ ದರ್ಶಕದ ಮೂಲಕ ತೆಗೆಯುವ ಶಸ್ತ್ರಕ್ರಿಯೆ ಬಹು ಸರಳ ಹಾಗೂ ಸುರಕ್ಷಿತ ಚಿಕಿತ್ಸೆಯಾದ್ದರಿಂದ, ಇತರ ಚಿಕಿತ್ಸಾ ಮಾರ್ಗಗಳ ಆವಿಷ್ಕಾರದ ಪ್ರಯತ್ನ ಸಾಕಷ್ಟು ಮುಂದುವರೆದಿಲ್ಲ.
ಪಿತ್ತಕೋಶದ ಉದರದರ್ಶಕ ಶಸ್ತ್ರಕ್ರಿಯೆ ದುಬಾರಿಯೇ?
ಅಲ್ಲವೇ ಅಲ್ಲ, ಉದರ ದರ್ಶಕ ಚಿಕಿತ್ಸೆ ಈಗ ಎಲ್ಲರಿಗೂ ಎಟಕುವಂತಾಗಿದೆ. ಹಾಗೆ ನೋಡಿದರೆ, ಹಳೆಯ ರೀತಿಯಲ್ಲಿ ಗಾಯ ಮಾಡಿ ಪಿತ್ತಕೋಶ ತೆಗೆಯುವ ಶಸ್ತ್ರಕ್ರಿಯೆಯೇ ಹೆಚ್ಚು ದುಬಾರಿ ಎನ್ನಬಹುದು. ಏಕೆಂದರೆ ಅದರಲ್ಲಿ ರೋಗಿ ಹಲವು ದಿನಗಳನ್ನು ಆಸ್ಪತ್ರೆಯಲ್ಲಿ ಕಳೆಯಬೇಕಾಗುತ್ತದೆ. ಉದರ ದರ್ಶಕ ವಿಧಾನದಲ್ಲಿ 2-3 ದಿನಗಳಲ್ಲಿ ರೋಗಿ ಮನೆ ಸೇರಬಹುದು.
ಪಿತ್ತಕೋಶದಲ್ಲಿ ಕಲ್ಲು ಉಂಟಾಗದಂತೆ ತಡೆಯುವುದು ಸಾಧ್ಯವೇ?
ಸಮಸ್ಯೆಯನ್ನು 100% ನಿರ್ಬಂಧಿಸುವಂತಹ ಯಾವುದೇ ಉಪಾಯ ಇಲ್ಲದಿದ್ದರೂ, ಆಹಾರ ಸೇವನೆಯಲ್ಲಿ ಸಮತೋಲನ ಹಾಗೂ ಬೊಜ್ಜನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದರಿಂದ ಪಿತ್ತಕೋಶದಲ್ಲಿನ ಕಲ್ಲಿನ ಸಾಧ್ಯತೆಯನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.
ಡಾ| ಶಿವಾನಂದ ಪ್ರಭು,
ಪ್ರೊಫೆಸರ್, ಸರ್ಜರಿ ವಿಭಾಗ,
ಕೆಎಂಸಿ ಆಸ್ಪತ್ರೆ, ಅತ್ತಾವರ, ಮಂಗಳೂರು
ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ:
ಮುಖ್ಯಸ್ಥರು,
ಸರ್ಜರಿ ವಿಭಾಗ, ಕೆ.ಎಂ.ಸಿ., ಮಣಿಪಾಲ.
ಮೂಲ: ಸಂಗ್ರಹ: ಆರೋಗ್ಯವಾಣಿ
ಕೊನೆಯ ಮಾರ್ಪಾಟು : 6/3/2020