ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಮೈಗ್ರೇನ್‌

ಈ ತಲೆನೋವಿನಲ್ಲೂ ಅಷ್ಟೆ. ಹಲವು ವಿಧಗಳು. ಶೀತದಿಂದ, ಮಿದುಳು ಗಡ್ಡೆಯಿಂದ, ಸ್ನಾಯುಗಳ ಒತ್ತಡ ಹೆಚ್ಚಿದಾಗ, ಜ್ವರದಿಂದ, ಸೋಂಕು ರೋಗದಿಂದ ಹೀಗೆ ಪಟ್ಟಿ ಉದ್ದ.ಇವುಗಳಲ್ಲಿ ಮುಖ್ಯವಾದದ್ದು, ಸಾಮಾನ್ಯವಾದದ್ದು ಮೈಗ್ರೇನ್ ಅಥವಾ ಈ ಹಿಂದೆ ಜನ ಕರೆಯುತ್ತಿದ್ದಂತೆ ‘ಅರ್ಧ ತಲೆನೋವು’.

ಈ ಅಳಲು ನಿಮ್ಮದೂ ಹೌದೆ


‘ತಲೆನೋವು ತುಂಬಾ ಸಾಮಾನ್ಯ.  ತಲೆ ಇದ್ದವರಿಗೆಲ್ಲಾ ತಲೆನೋವು ಬರತ್ತೆ.  ಅದಕ್ಯಾಕೆ ಇಷ್ಟು ತಲೆಕೆಡಿಸಿಕೊಳ್ಳೋದು?’ ಎಂದು ಮೂಗು ಮುರಿಯುತ್ತೀರಾ?  ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ನಮ್ಮಲ್ಲಿ 90 ಶೇ  ಜನ ಯಾವಾಗಲಾದರೊಂದು ಸಲ ತಲೆನೋವಿನಿಂದ ಬಳಲಿದರೆ, 16-17 ಶೇ ಜನ ತಲೆನೋವಿನಿಂದ ನರಳುತ್ತಿರುತ್ತಾರೆ.  ಜೀವನದ ಗುಣಮಟ್ಟದಲ್ಲಿ ತೊಂದರೆಗೊಳಗಾಗುತ್ತಾರೆ.

ಈ ತಲೆನೋವಿನಲ್ಲೂ ಅಷ್ಟೆ.  ಹಲವು ವಿಧಗಳು.  ಶೀತದಿಂದ, ಮಿದುಳು ಗಡ್ಡೆಯಿಂದ, ಸ್ನಾಯುಗಳ ಒತ್ತಡ ಹೆಚ್ಚಿದಾಗ, ಜ್ವರದಿಂದ, ಸೋಂಕು ರೋಗದಿಂದ ಹೀಗೆ ಪಟ್ಟಿ ಉದ್ದ.ಇವುಗಳಲ್ಲಿ ಮುಖ್ಯವಾದದ್ದು, ಸಾಮಾನ್ಯವಾದದ್ದು ಮೈಗ್ರೇನ್ ಅಥವಾ ಈ ಹಿಂದೆ ಜನ ಕರೆಯುತ್ತಿದ್ದಂತೆ ‘ಅರ್ಧ ತಲೆನೋವು’.

ಅಂದಹಾಗೆ ಮೈಗ್ರೇನ್ ತಲೆನೋವು ಸಾಮಾನ್ಯವಾಗಿ ‘ಅರ್ಧ’ವಾಗಿ ಕಾಣಿಸಿಕೊಂಡರೂ, ಮುಂಭಾಗದಲ್ಲೋ, ಹಿಂದೆಯೋ ಅಥವಾ ತಲೆಯ ಮಧ್ಯ ಭಾಗದಲ್ಲೋ ಕಾಣಿಸಿಕೊಳ್ಳಬಹುದು).  ವಿಶ್ವ ಆರೋಗ್ಯ ಸಂಸ್ಥೆ ಇದನ್ನು ರಕ್ತಹೀನತೆ (ಅನೀಮಿಯಾ) ಯ ನಂತರ ಎರಡನೆಯ ಅತಿಸಾಮಾನ್ಯ ಆರೋಗ್ಯ ಸಮಸ್ಯೆಯಾಗಿ ಗುರುತಿಸಿದೆ.

ಮೈಗ್ರೇನ್ ತಲೆನೋವಿನ ಲಕ್ಷಣಗಳು ಸುಲಭವಾಗಿ ಪ್ರತಿಯೊಬ್ಬರಿಗೂ ಗುರುತಿಸಲು ಸಾಧ್ಯವಿರುವಂಥವು. ಅವು ಸಾಕಷ್ಟು ನಿರ್ದಿಷ್ಟವಾಗಿ ಕಂಡುಬರುತ್ತವೆ.  ಅವುಗಳನ್ನು ಹೀಗೆ ಗುರುತಿಸಬಹುದು.

ತೀವ್ರ, ಪಟಪಟ ಹೊಡೆಯುವ ನೋವು ತಲೆಯ ಒಂದು ಅಥವಾ ಎರಡೂ ಭಾಗಗಳಲ್ಲಿ, ಜೊತೆಗೇ ಕಣ್ಣು ನೋವು.ತಲೆನೋವು ತೀವ್ರವಾಗುವಾಗ ಹೊಟ್ಟೆ ತೊಳಸುವಿಕೆ, ವಾಂತಿಯಾಗುವುದು, ಕೆಲವೊಮ್ಮೆ ವಾಂತಿಯಾದ ಮೇಲೆ ತಲೆನೋವು ಕಡಿಮೆಯಾಗುತ್ತದೆ.

ಈ ಸಮಯದಲ್ಲಿ ಪ್ರಖರ ಬೆಳಕನ್ನು ಸಹಿಸದಿರುವುದು, ಜೋರಾದ ಶಬ್ಧ ಆಗದಿರುವುದು (ಹಾಗಾಗಿಯೇ ಹೆಚ್ಚಿನವರು ಈ ತಲೆನೋವಿನ ಸಮಯದಲ್ಲಿ ನಿಶ್ಯಬ್ಧವಾಗಿ ಕತ್ತಲೆ ಕೋಣೆಯಲ್ಲಿ, ಗಟ್ಟಿಯಾಗಿ ತಲೆಗೆ ಪಟ್ಟಿ ಕಟ್ಟಿ ಮಲಗುವುದು).ಕಣ್ಣು ಮಂಜಾಗುವುದು, ಮಿಂಚಿನ ರೀತಿಯಲ್ಲಿ ಚುಕ್ಕಿಗಳು ಕಾಣುವುದು.

ಹಾಗಿದ್ದರೆ ಈ ಮೈಗ್ರೇನ್ ತಲೆನೋವು ಉಂಟಾಗುವ ಕಾರಣ?  ನಮ್ಮ ಮಿದುಳು ರಾಸಾಯನಿಕಗಳ - ನರವಾಹಕಗಳ ಆಗರ. ಅದರಲ್ಲಿ ಕೆಲವು ರಾಸಾಯನಿಕಗಳು ಹೆಚ್ಚಾದೊಡನೆ ರಕ್ತನಾಳಗಳು ಅಗಲವಾಗುತ್ತವೆ.  ಪಕ್ಕದ ನರಗಳ ಮೇಲೆ ಒತ್ತಡ ಉಂಟುಮಾಡಿ ನೋವನ್ನು ತರುತ್ತವೆ.

ಅನುವಂಶಿಕತೆಯೂ ಮೈಗ್ರೇನ್‌ನಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.  (‘ನಮ್ಮಮ್ಮನಿಗೂ ಇದೇ ತರ, ನಮ್ಮ ಅಣ್ಣ - ಅಕ್ಕನಿಗೂ ಇದೇ ಮೈಗ್ರೇನ್ ಇದೆ’ ಎನ್ನುವ ತರಹ).ಒಂದು ತಲೆನೋವಿನ ‘ಅವಧಿ’ಗೆ ಕೆಲವು ಅಂಶಗಳು ಕಾರಣವಾಗಬಹುದು.  ಈ ಅಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು.

ನಿದ್ರಾಹೀನತೆ, ಉಪವಾಸ, ಅನಿಯಮಿತ ಊಟ-ತಿಂಡಿ , ಪ್ರಖರ ಬೆಳಕು, ಬಿಸಿಲು, ಪರಿಮಳ ,ಮಾನಸಿಕ ಒತ್ತಡ, ಮದ್ಯಪಾನ ,ಅತಿಯಾದ ಕಾಫಿ ಸೇವನೆ ,ಫಾಸ್ಟ್ ಫುಡ್‌ಗಳಲ್ಲಿ ಉಪಯೋಗಿಸುವ ಮಾನೋ ಸೋಡಿಯಂ ಗ್ಲುಬಮೇಟ್, ಋತುಸ್ರಾವ ಮೈಗ್ರೇನ್ ತಲೆನೋವು ಮಹಿಳೆಯರಲ್ಲಿ ಹೆಚ್ಚು.

ಮಹಿಳೆಯರು ತಮ್ಮ ಎಲ್ಲಾ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸುವಂತೆಯೇ ಇದನ್ನೂ ನಿರ್ಲಕ್ಷಿಸುತ್ತಾರೆ.ಆದರೆ ಶೇಕಡ 50 ರಷ್ಟು ಜನರಲ್ಲಿ ತಲೆನೋವು ಮತ್ತೆ ಮತ್ತೆ ಬರತೊಡಗುತ್ತದೆ. 
ನೋವಿನಮಾತ್ರೆ ‘ಯಾವುದಾದರು’ ಸಾಲುವುದಿಲ್ಲ.  ಕ್ರಮೇಣ ಒಂದು ಬಾರಿ 2-3, ಪ್ರತಿದಿನ ಮಾತ್ರೆ ನುಂಗುವ ಅಭ್ಯಾಸ ಆರಂಭವಾಗುತ್ತದೆ.  ಇದು ತಲೆನೋವನ್ನು ಕಡಿಮೆ ಮಾಡದೇ, ಹೆಚ್ಚಾಗಿಸುತ್ತದೆ.  ‘ನೋವು ಶಮನಗೊಳಿಸುವ ಮಾತ್ರೆಯಿಂದ ಮರುಕಳಿಸುವ ತಲೆನೋವು’  ಆಗಿ ಮೈಗ್ರೇನ್  ಇನ್ನೂ ತೀವ್ರವಾಗುತ್ತದೆ.

ವೈದ್ಯರನ್ನು ಕಾಣುವುದು ಈ ಹಂತದಲ್ಲಿ.  ಬಹಳಷ್ಟು ಜನರಲ್ಲಿ ಖಿನ್ನತೆ - ನಿದ್ರಾಹೀನತೆಯ ಸಮಸ್ಯೆಗಳೂ ಇರುತ್ತವೆ ಎನ್ನುವುದು ಗಮನಾರ್ಹ.  ಈ ಹಂತದಲ್ಲಿ ಮೊದಲು ‘ನೋವಿನ ಮಾತ್ರೆ ನುಂಗುವ ಚಟ, ಟೀ-ಕಾಫಿ ಅತಿ ಸೇವನೆ ಬಿಡಿಸುವ’ ತಲೆನೋವು ವೈದ್ಯರದ್ದಾಗುತ್ತದೆ.

ವೈದ್ಯರನ್ನು ಕಾಣುವಾಗ


ತಲೆನೋವು ನಿಮಗೆ ತಿಂಗಳಿಗೆ 2 ಬಾರಿಗಿಂತ ಹೆಚ್ಚು ಬರುತ್ತಿದ್ದರೆ ನೀವು ವೈದ್ಯರನ್ನು ಕಾಣಲೇಬೇಕು.  ಅದಕ್ಕಿಂತ ಕಡಿಮೆಯಿದ್ದಾಗ ವೈದ್ಯರ ಸಲಹೆಯಂತೆ ‘ನೋವುಶಮನಕಾರಿ’ ಮಾತ್ರೆಯನ್ನು ಉಪಯೋಗಿಸಬಹುದು.

  • ನೋವು ಬರುವ ವೇಳೆ - ದಿನಗಳ ಅಂತರ
  • ನೋವು ಎಲ್ಲಿ ಬರುತ್ತದೆ, ಎಷ್ಟು ಹೊತ್ತು?
  • ನಿಮ್ಮ ರಕ್ತಸಂಬಂಧಿಗಳಲ್ಲಿ ಈ ರೀತಿಯ ತಲೆನೋವು ಇದೆಯೇ?
  • ಯಾವುದೇ ಔಷಧಿ ನೀವು ಉಪಯೋಗಿಸುತ್ತಿದ್ದೀರಾ?
  • ಋತುಸ್ರಾವದ ಸಮಯದಲ್ಲಿ ತಲೆನೋವು ಬರುವುದೇ?
  • ತಲೆನೋವಿಗೆ ಕಾರಣವಾಗಬಹುದಾದ ಬಿಸಿಲು, ಪ್ರಯಾಣ ನಿದ್ರಾಹೀನತೆ, ಮಾನಸಿಕ ಒತ್ತಡ, ಖಿನ್ನತೆ ಮೊದಲಾದ ಅಂಶಗಳನ್ನು ವೈದ್ಯರ ಬಳಿ ಚರ್ಚಿಸಿ.

ವೈದ್ಯರು ನಿಮ್ಮ ಪೂರ್ಣ ಪರೀಕ್ಷೆಯ ನಂತರ ನಿಮ್ಮ ತಲೆನೋವಿಗೆ ಮುಂಜಾಗ್ರತೆಗೆ ಔಷಧಿಗಳನ್ನು ಆರಂಭಿಸಬಹುದು.  ಇವು ‘ನೋವುಶಮನಕಾರಿ’ ಗುಳಿಗೆಗಳಲ್ಲಿ.  ತಲೆನೋವು ಬಂದಾಗ ಇವು ಪರಿಣಾಮ ಬೀರುವುದಿಲ್ಲ.  ಬದಲಾಗಿ ಒಳಗಿನ ಕಾರಣವನ್ನು ಮಿದುಳಿನಲ್ಲಿ ಸರಿಪಡಿಸುತ್ತವೆ.

ತಲೆನೋವು ಬರದಂತೆ ತಡೆಗಟ್ಟುತ್ತವೆ.  ಈ ಮಾತ್ರೆಗಳನ್ನು ನಿಮ್ಮ ತಲೆನೋವಿನ ದೀರ್ಘಕಾಲಿಕತೆಯ ಆಧಾರದ ಮೇಲೆ 3 ರಿಂದ 6 ತಿಂಗಳವರೆಗೆ ತೆಗೆದುಕೊಳ್ಳಬೇಕು.  “ಒಂದು ತಿಂಗಳು ಔಷಧ ತೆಗೆದುಕೊಳ್ಳುವಾಗ ತಲೆನೋವು ಇರಲಿಲ್ಲ.  ಮಾತ್ರೆ ಬಿಟ್ಟ ತಕ್ಷಣ ಮತ್ತೆ ಬಂತು” ಎಂದು ದೂರುವ, ವೈದ್ಯರನ್ನು ಬದಲು ಮಾಡುವ ರೋಗಿಗಳು ಇದನ್ನು ವಿಶೇಷವಾಗಿ ಗಮನಿಸಬೇಕು.

ಹೀಗೆ ಮೈಗ್ರೇನ್ ತಲೆನೋವು ತಡೆಗಟ್ಟಬಹುದಾದ, ಸುಲಭವಾಗಿ ಗುಣಪಡಿಬಹುದಾದ ಆರೋಗ್ಯ ಸಮಸ್ಯೆ.  ವೈದ್ಯರ ಬಳಿ ಬಂದು ಚಿಕಿತ್ಸೆ ಪಡೆಯಲು ಮುಂದಾಗಿ, ಸರಿಯಾಗಿ ಚಿಕಿತ್ಸೆ ಪಡೆಯುವುದಷ್ಟೇ ಅದರ ಸುಲಭ ಪರಿಹಾರ.

ಮೂಲ : ಪ್ರಜಾವಾಣಿ

2.96330275229
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top