অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮಧುಮೇಹ ಕಾಯಿಲೆಯು ಕಹಿಯಲ್ಲ ಸಿಹಿಯಾಗಿಸಿ

ಮಧುಮೇಹ ಕಾಯಿಲೆಯು ಕಹಿಯಲ್ಲ ಸಿಹಿಯಾಗಿಸಿ

ಮಧುಮೇಹ ಅಂದರೆ ಸಾವಲ್ಲ. ಇದ್ದೂ ಇಲ್ಲದಂತಹ ಬದುಕು ಬದುಕಬೇಕಾಗಿಯೂ ಇಲ್ಲ. ಜೀವನವನ್ನು ನೋಡುವ ದೃಷ್ಟಿಕೋನವನ್ನೂ ಬದಲಾಯಿಸಿಕೊಳ್ಳಬೇಕು. ನಾನು ಮಧುಮೇಹಿ ಎಂಬ ಕಹಿ ಭಾವನೆಯೊಂದಿಗೆ ಬದುಕುವುದನ್ನು ಬಿಟ್ಟು ಆ ಸತ್ಯವನ್ನು ಒಪ್ಪಿಕೊಳ್ಳಿ. ಆದರೆ ಅಪ್ಪಿಕೊಳ್ಳಬೇಡಿ. ನಿಮ್ಮ ಆರೋಗ್ಯದ ಸಮಸ್ಯೆಯ ಬಗ್ಗೆ ನಿಖರವಾಗಿ ತಿಳಿದುಕೊಂಡು ಬದುಕು ಬದಲಿಸಿಕೊಳ್ಳಿ.

ಮಧುಮೇಹ ಜೀವನದ ಒಂದು ಅತಿ ಚಿಕ್ಕ ಭಾಗ. ಅದುವೇ ಜೀವನವಲ್ಲ ಅಥವಾ ಜೀವನದ ಕೊನೆಯೂ ಅಲ್ಲ. ಸರಿಯಾದ ಚಿಕಿತ್ಸೆ ತೆಗೆದುಕೊಳ್ಳದೇ, ಉತ್ತಮ ಜೀವನಪದ್ಧತಿ ಅಳವಡಿಸಿಕೊಳ್ಳದಿದ್ದರೆ ಖಂಡಿತಾ ಸಮಸ್ಯೆ ಎದುರಾದೀತು, ಅದಕ್ಕೆ ಅವಕಾಶ ಬೇಡ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ.

ನಾವು ಸೇವಿಸುವ ಆಹಾರ ಜೀರ್ಣಗೊಂಡು ಸಣ್ಣ ಸಣ್ಣ ಭಾಗಗಳಾಗಿ ವಿಭಜನೆ ಹೊಂದಿ ರಕ್ತದ ಮೂಲಕ ಶರೀರದ ಬೇರೆ ಬೇರೆ ಅಂಗಗಳನ್ನು ತಲುಪಿ ನಮ್ಮ ಬೆಳವಣಿಗೆಗೆ ಬೇಕಾದ ಪೋಷಕಾಂಶ, ವಿವಿಧ ಪ್ರಕ್ರಿಯೆಗಳಿಗೆ ಬೇಕಾದ ಶಕ್ತಿಯನ್ನು ಒದಗಿಸುತ್ತದೆ. ನಮ್ಮ ಆಹಾರದ ಮುಖ್ಯ ಭಾಗವಾದ ಶರ್ಕರಪಿಷ್ಠವು ಪಚನಗೊಂಡು ಸಣ್ಣ ಸಣ್ಣ ಕಣಗಳಾಗಿ ಪರಿವರ್ತನೆಗೊಳ್ಳುತ್ತವೆ. ಇವು ರಕ್ತದ ಮೂಲಕ ಶರೀರದ ವಿವಿಧ ಭಾಗಗಳಿಗೆ ಸರಬರಾಜುಗೊಂಡು ಜೀವಕೋಶಗಳನ್ನು ತಲುಪುತ್ತವೆ. ಅಲ್ಲಿ ಅವು ಅಗತ್ಯವಿದ್ದಷ್ಟು ಶಕ್ತಿಯನ್ನು ಉತ್ಪಾದಿಸುತ್ತವೆ ಹಾಗೂ ಇನ್ನುಳಿದ ಹೆಚ್ಚಿನ ಭಾಗವು ಶೇಖರಣೆಗೊಳ್ಳುತ್ತವೆ. ಆದರೆ ಸಕ್ಕರೆಯ ಅಂಶವು ಜೀವಕೋಶಗಳನ್ನು ಸೇರದೆ ರಕ್ತದಲ್ಲಿಯೇ ಉಳಿದುಬಿಟ್ಟರೆ? ಅಂತಹ ಒಂದು ಸ್ಥಿತಿಯೇ ಮಧುಮೇಹ.

ಇದರಲ್ಲಿ ಮುಖ್ಯವಾಗಿ Type1, Type2 ಎಂಬ ಎರಡು ರೀತಿಯ ಮಧುಮೇಹಗಳಿದ್ದು, ಗರ್ಭಿಣಿಯರಲ್ಲಿ ಕಂಡುಬರುವ ಗೆಸ್ಟೇಶನಲ್ ಡಯಾಬಿಟಿಸ್ ಮೆಲಿಟಸ್ ಇದರ ಇನ್ನೊಂದು ವಿಧ. IDDM (Insulin Dependent Diabetes Mellitus) ಎಂದೂ ಕರೆಯಲಾಗುವ ಇದು ಹೆಸರೇ ಸೂಚಿಸುವಂತೆ ಇನ್ಸುಲಿನ್‌ನ ಕೊರತೆಯಿಂದಾಗಿ ಉಂಟಾಗುವ ತೊಂದರೆ.

ಗರ್ಭಿಣಿಯರಲ್ಲಿ ಕಂಡುಬರುವ ಮಧುಮೇಹವು ಮಹಿಳೆಯ ದೇಹದಲ್ಲಿ ಉಂಟಾಗುವ ರಸದೂತಗಳ ಏರುಪೇರಿನಿಂದಾಗಿ ಉಂಟಾಗುವಂತಹದ್ದು. ಅದು ಹೆರಿಗೆಯ ನಂತರ ತಾನಾಗಿಯೇ ಮೊದಲಿನ ಸಾಮಾನ್ಯ ಸ್ಥಿತಿಗೆ ತಲುಪುತ್ತದೆ. ಆದರೆ ವಂಶಪಾರಂಪರ್ಯವಾಗಿ ಮಧುಮೇಹವನ್ನು ಹೊಂದಿರುವ ಕುಟುಂಬದ ಮಹಿಳೆಯರಲ್ಲಿ ಹೆರಿಗೆಯ ನಂತರವೂ ಮಧುಮೇಹ ಮುಂದುವರಿಯುವ ಸಾಧ್ಯತೆಗಳಿದ್ದು ಆ ಬಗ್ಗೆ ಮುಂಜಾಗರೂಕತೆ ವಹಿಸಬೇಕು.

ಇದನ್ನು ಉಪಚರಿಸದೇ ಇದ್ದಲ್ಲಿ ಅದರಿಂದಾಗಿ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ. ಅವುಗಳೆಂದರೆ ನರಗಳಲ್ಲಿ ಉಂಟಾಗುವ ತೊಂದರೆ, ಕಣ್ಣಿನ ತೊಂದರೆ, ಡಯಾಬಿಟಿಸ್, ಮೂತ್ರಪಿಂಡದ ಸಮಸ್ಯೆ, ಗುಣವಾಗದ ಹುಣ್ಣು ಅಥವಾ ಗಾಯ, ರಕ್ತಸಂಚಾರದ ಕೊರತೆಯಿಂದಾಗಿ ಮಧುಮೇಹಿಗಳಲ್ಲಿ ಗಾಯಗಳು ಗುಣವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಕೆಲವೊಮ್ಮೆ ಗುಣವಾಗದೇ ಗ್ಯಾಂಗ್ರೀನ್ (ಕೊಳೆಯುವಿಕೆ) ಆಗುವ ಸಾಧ್ಯತೆಯೂ ಇದ್ದು ಇದಕ್ಕಿರುವ ಪರಿಹಾರವೆಂದರೆ ದೇಹದ ಆ ಭಾಗವನ್ನು ಕತ್ತರಿಸಿ ತೆಗೆಯುವುದು. 

ಗರ್ಭಿಣಿಯರಲ್ಲಿ ಕಂಡುಬರುವ ಮಧುಮೇಹವನ್ನು ಸರಿಯಾಗಿ ಉಪಚರಿಸದಿದ್ದರೆ ಅದು ಗರ್ಭದಲ್ಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಇದು ತಾಯಿ ಹಾಗೂ ಶಿಶು ಇಬ್ಬರಿಗೂ ಹಾನಿಕಾರಕ. ಮಧುಮೇಹವು ಯಾವುದೇ ವಿಧದ್ದಾಗಿರಲಿ, ಅವುಗಳ ಸಾಮಾನ್ಯ ಗುಣಲಕ್ಷಣಗಳು ಒಂದೇ ರೀತಿಯಿರುತ್ತವೆ ಹಾಗೂ ಕಂಡು ಹಿಡಿಯುವ ವಿಧಾನಗಳಲ್ಲಿಯೂ ವ್ಯತ್ಯಾಸಗಳಿಲ್ಲ. ಚಿಕಿತ್ಸಾ ವಿಧಾನದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಾಸಗಳು ಇರುತ್ತವಾದರೂ ಆಹಾರ-ವ್ಯಾಯಾಮ ಇತ್ಯಾದಿ ಜೀವನಶೈಲಿಯಲ್ಲಿನ ಬದಲಾವಣೆಗಳು ಇವುಗಳನ್ನು ಸ್ಥಿಮಿತದಲ್ಲಿಟ್ಟುಕೊಳ್ಳಲು ಸಹಕಾರಿಯಾಗುತ್ತವೆ.


ಆಹಾರಕ್ರಮಬದ್ಧವಾಗಿರಲಿ


ಮಧುಮೇಹವಿದ್ದವರು ಜೀವನಪೂರ್ತಿ ಸಿಹಿ ತಿನ್ನಲೇ ಬಾರದು ಎಂಬ ಅಲಿಖಿತ ಕಾನೂನು ಇದೆ. ಆದರೆ ಆಹಾರ ನಿಮ್ಮ ಹಿಡಿತದಲ್ಲಿದ್ದರೆ ಯಾವಾಗಲಾದರೊಮ್ಮೆ ಸಿಹಿ ತಿನಿಸು ಸ್ವಲ್ಪವಾದರೂ ಸೇವಿಸಬಹುದು. ಕಟ್ಟುನಿಟ್ಟಿನ ಆಹಾರಪದ್ಧತಿಯನ್ನು ಮಧುಮೇಹಿಗಳು ಅಳವಡಿಸಿಕೊಳ್ಳಲೇಬೇಕು.

ಅನ್ನಕ್ಕಿಂತಲೂ ಗೋಧಿ, ರಾಗಿ ಒಳ್ಳೆಯದು, ಅದಕ್ಕೆ ಕಾರಣವೇನೆಂದರೆ ಅನ್ನವು ಬೇಗ ಜೀರ್ಣಹೊಂದುವುದರಿಂದ ತಕ್ಷಣವೇ ತುಂಬ ಪ್ರಮಾಣದ ಸಕ್ಕರೆಯ ಅಂಶವು ರಕ್ತಕ್ಕೆ ಸೇರುತ್ತದೆ, ಆದರೆ ಗೋಧಿ ಅಥವಾ ರಾಗಿ ನಿಧಾನಕ್ಕೆ ಜೀರ್ಣಹೊಂದಿ ಸ್ವಲ್ಪ ಸ್ವಲ್ಪವಾಗಿ ಸಕ್ಕರೆಯನ್ನು ರಕ್ತಕ್ಕೆ ಬಿಡುಗಡೆಗೊಳಿಸುವುದರಿಂದ ರಕ್ತದ ಸಕ್ಕರೆಯ ಅಂಶ ಏರುಪೇರಾಗುವುದಿಲ್ಲ. ಹೆಚ್ಚು ಹಸಿ ತರಕಾರಿಗಳು, ಮೊಳಕೆ ಕಾಳುಗಳು, ಹಣ್ಣುಗಳ ಸೇವನೆ ಒಳ್ಳೆಯದು. ನವಿಲುಕೋಸು, ಎಲೆಕೋಸು, ಸೌತೆಕಾಯಿ, ಹಾಗಲಕಾಯಿ, ಸೋರೆಕಾಯಿ, ಪಡುವಲಕಾಯಿ, ಸೊಪ್ಪು ಇತ್ಯಾದಿ ಒಳ್ಳೆಯದು. ಆಧುನಿಕ ವೈದ್ಯಪದ್ಧತಿಯ ಪ್ರಕಾರ ಮಧುಮೇಹಿಗಳು ಒಮ್ಮೆಲೇ ತುಂಬ ಆಹಾರ ಸೇವಿಸುವುದರ ಬದಲು ಅದನ್ನೇ ವಿಂಗಡಿಸಿ 4-5 ಬಾರಿ ಆಹಾರ ಸೇವಿಸುವುದು ರಕ್ತದಲ್ಲಿ ಸಕ್ಕರೆಯ ಪ್ರಮಾಣದ ಏರುಪೇರನ್ನು ತಪ್ಪಿಸುತ್ತದೆ. ನುರಿತ ಆಹಾರತಜ್ಞರ ಸಲಹೆಯ ಮೇರೆಗೆ ಆಹಾರದಲ್ಲಿ ಬದಲಾವಣೆ ಮಾಡಿಕೊಂಡು ಕಟ್ಟುನಿಟ್ಟಿನಿಂದ ಪಾಲಿಸಿ.

ವ್ಯಾಯಾಮ, ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನಗಳನ್ನು ನಿತ್ಯವೂ ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು. ಆದರೆ ಇವುಗಳನ್ನು ವೈದ್ಯರ ಅನುಮತಿ ಮೇರೆಗೆ, ಸರಿಯಾಗಿ ತಿಳಿದಿರುವವರಿಂದ ಕಲಿತೇ ಅಭ್ಯಾಸ ಮಾಡುವುದೂ ಮುಖ್ಯ. ಧನಾತ್ಮಕವಾಗಿ ನಿಮ್ಮನ್ನು ನೀವು ಕೌಟುಂಬಿಕ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ. ನಿಮಗಿಷ್ಟವಾದ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ. ಮನಸು ಯಾವಾಗಲೂ ಸಂತಸದಿಂದಿರುವಂತೆ ನೋಡಿಕೊಳ್ಳಿ. ಸಮಸ್ಯೆಗಳು ಯಾವುದೇ ಇರಲಿ ಎದುರಿಸುವ ಧೈರ್ಯ ನಿಮ್ಮಲ್ಲಿರಲಿ.

ಇದಲ್ಲದೆಯೇ ಜೀವನವನ್ನು ನೋಡುವ ದೃಷ್ಟಿಕೋನವನ್ನೂ ಬದಲಾಯಿಸಿಕೊಳ್ಳಬೇಕು. ನಾನು ಮಧುಮೇಹಿ ಎಂಬ ಕಹಿ ಭಾವನೆಯೊಂದಿಗೆ ಬದುಕುವುದನ್ನು ಬಿಟ್ಟು ಆ ಸತ್ಯವನ್ನು ಒಪ್ಪಿಕೊಳ್ಳಿ. ಆದರೆ ಅಪ್ಪಿಕೊಳ್ಳಬೇಡಿ! ನಿಮ್ಮ ಆರೋಗ್ಯದ ಸಮಸ್ಯೆಯ ಬಗ್ಗೆ ನಿಖರವಾಗಿ ತಿಳಿದುಕೊಳ್ಳಿ. ವೈದ್ಯರೊಂದಿಗೆ ಮುಕ್ತವಾಗಿ ಚರ್ಚಿಸಿ. ಮಧುಮೇಹ ಜೀವನದ ಒಂದು ಅತಿ ಚಿಕ್ಕ ಭಾಗ. ಅದುವೇ ಜೀವನವಲ್ಲ ಅಥವಾ ಜೀವನದ ಕೊನೆಯೂ ಅಲ್ಲ. ಸರಿಯಾದ ಚಿಕಿತ್ಸೆ ತೆಗೆದುಕೊಳ್ಳದೇ, ಉತ್ತಮ ಜೀವನಪದ್ಧತಿ ಅಳವಡಿಸಿಕೊಳ್ಳದಿದ್ದರೆ ಖಂಡಿತಾ ಸಮಸ್ಯೆ ಎದುರಾದೀತು, ಅದಕ್ಕೆ ಅವಕಾಶ ಬೇಡ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ.

ಮೂಲ: ಡಾ.ಸುವರ್ಣಿನೀ ರಾವ್ ಕೊಣಲೆ

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate