অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಜೈವಿಕ ಮತ್ತು ಪರಿಸರ ವಿಧಾನಗಳು

ಜೈವಿಕ ಮತ್ತು ಪರಿಸರ ವಿಧಾನಗಳು

ಸೊಳ್ಳೆಗಳ ಉತ್ಪತ್ತಿಯನ್ನು ನಿಯಂತ್ರಿಸಲು ಜೈವಿಕ ಹಾಗೂ ಪರಿಸರ ನಿಯಂತ್ರಣ ವಿಧಾನಗಳನ್ನು ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳಲಾಗುವುದು. ಈ ವಿಧಾನದಲ್ಲಿ ಕೀಟನಾಶಕದ ಬಳಕೆ ಇಲ್ಲದೆ ಪರಿಸರದಲ್ಲಿ ಮಾರ್ಪಾಡು ಹಾಗೂ ನೈಸರ್ಗಿಕ ಜೀವಿಗಳನ್ನು ಬಳಸಿ ನೀರಿನಲ್ಲಿ ಸೊಳ್ಳೆಗಳ ಉತ್ಪತ್ತಿಯನ್ನು ನಿಯಂತ್ರಿಸಲಾಗುವುದು. ಈ ವಿಧಾನಗಳ ಬಳಕೆಯಿಂದ ಪರಿಸರವನ್ನು ಕಾಪಾಡಿಕೊಂಡು ಸೊಳ್ಳೆಗಳ ಉತ್ಪತ್ತಿಯನ್ನು ನಿಯಂತ್ರಿಸಲಾಗುವುದು. ಇವು ಕೀಟನಾಶಕದ ನಿಯಂತ್ರಣಕ್ಕಿಂತ ಸರಳ ಹಾಗೂ ಶಾಶ್ವತ ವಿಧಾನಗಳು.

ಈ ವಿಧಾನಗಳನ್ನು ಕೆಳಕಂಡಂತೆ ವಿಂಗಡಿಸಬಹುದು –

ಉತ್ಪತ್ತಿ ತಾಣಗಳ ನಿವಾರಣೆ : ಶೇಖರಿಸಿದ ನೀರನ್ನು ವಾರಕೊಮ್ಮೆಯಾದರೂ ಖಾಲಿ ಮಾಡಿ ನೀರನ್ನು ಬದಲಿಸುವುದು, ನೀರಿನ ಶೇಖರಣಾ ಪಾತ್ರೆ ಹಾಗೂ ತೊಟ್ಟಿಗಳಿಗೆ ಸೊಳ್ಳೆ ಪ್ರವೇಶಿಸಲಾಗದಂತ ಮುಚ್ಚಳಗಳನ್ನು ಒದಗಿಸುವುದು, ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವುದನ್ನು ಗಮನಿಸಿದರೆ ಅವನ್ನು ಕೂಡಲೆ ನಾಶ ಮಾಡುವುದು, ಇವೇ ಈ ಕಾರ್ಯಾಚರಣೆಯಲ್ಲಿ ಕೈಗೊಳ್ಳುವ ಕೆಲವು ಕ್ರಮಗಳು. ಇದರಿಂದಾಗಿ ಸೊಳ್ಳೆಗಳ ಉತ್ಪತ್ತಿಯನ್ನು ತಡೆಗಟ್ಟಬಹುದು. ಈ ಕಾರ್ಯಾಚರಣೆಯನ್ನು ಹೆಚ್ಚಾಗಿ ಪಟ್ಟಣ ಪ್ರದೇಶಗಳಲ್ಲಿ ಅಳವಡಿಸಲು ಸಾಧ್ಯ.

ಪರಿಸರ ಮಾರ್ಪಾಡು  : ಈ ಕಾರ್ಯಾಚರಣೆಯಲ್ಲಿ ಪರಿಸರದಲ್ಲಿ ಹೆಚ್ಚು ಕಾಲ ನೀರು ನಿಲ್ಲುವ ಪ್ರದೇಶಗಳನ್ನು ಗುರುತಿಸಿ ಆ ಸ್ಥಳದ ಪರಿಸರದಲ್ಲಿ ಬದಲಾವಣೆಯನ್ನು ತಂದು ಸೊಳ್ಳೆಗಳ ಉತ್ಪತ್ತಿಯನ್ನು ನಿಲ್ಲಿಸಲಾಗುವುದು. ಇವು ನೀರಿನ ಗುಂಡಿಗಳನ್ನು ಮುಚ್ಚುವುದರಿಂದ, ಚರಂಡಿಗಳಲ್ಲಿ ಅಥವಾ ನೀರಿನ ಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವ ಹಾಗೆ ಮಾಡುವುದರಿಂದ, ಉಪಯೋಗದಲ್ಲಿ ಇಲ್ಲದಿರುವ ಬಾವಿಗಳನ್ನು ಇ.ಪಿ.ಎಸ್. ಬೀಡ್‍ಗಳಿಂದ ಅಥವಾ ಪೂರ್ಣವಾಗಿ ಮುಚ್ಚುವುದರಿಂದ, ಇಂಗು ತೊಟ್ಟಿಗಳ ಮೂಲಕ ನೀರು ನಿಲ್ಲದಂತೆ ಮಾಡುವುದರಿಂದ, ಹೀಗೆ ಅನೇಕ ರೀತಿಗಳಲ್ಲಿ ಪರಿಸರದ ಬದಲಾವಣೆಗಳನ್ನು ತಂದು ಸೊಳ್ಳೆಗಳ ಉತ್ಪತ್ತಿಯನ್ನು ತಡೆಗಟ್ಟುವುದು ಸಾಧ್ಯ ಇದನ್ನು ಹಳ್ಳಿ ಪ್ರದೇಶಗಳಲ್ಲಿ ಅಳವಡಿಸುವ ಸಾಧ್ಯತೆ ಹೆಚ್ಚು.

ಜೈವಿಕ ವಿಧಾನಗಳು: ಈ ಕಾರ್ಯಾಚರಣೆಯಲ್ಲಿ ಪರಿಸರದಲ್ಲಿ ದೊರೆಯುವ ಸೊಳ್ಳೆ ಮರಿಗಳನ್ನು ನಾಶಮಾಡಬಲ್ಲ ಜೀವಾಣುಗಳು (ವೈರಾಣು, ಬ್ಯಾಕ್ಟೀರಿಯಾ, ಫಂಗೈ, ಕೀಟಗಳು, ಲಾರ್ವಾಹಾರಿ ಮೀನುಗಳು, ಪರಾವಲಂಬಿಗಳು ಮತ್ತು ಇತ್ಯಾದಿ) ಸೊಳ್ಳೆಗಳ ನಿಯಂತ್ರಣ ಮಾಡುವುದರಲ್ಲಿ ಉಪಯೋಗಕ್ಕೆ ಬರುವುವು. ಇವು ಸೊಳ್ಳೆಗಳ ಲಾರ್ವಾಗಳ ಮೇಲೆ ಪರಿಣಾಮ ಬೀರಿ ಅವು ಸೊಳ್ಳೆಗಳಾಗಿ ಪರಿವರ್ತನೆ ಹೊಂದುವುದನ್ನು ತಪ್ಪಿಸುವುವು. ಈ ಕಾರ್ಯಾಚರಣೆಯಲ್ಲಿ ಉಪಯೋಗಿಸಲಾಗುವ ವಿಧಾನ ನೀರಿನ ಪ್ರಮಾಣ, ನೀರಿನ ಉಪಯೋಗ ಹಾಗೂ ಸ್ಥಳವನ್ನು ಅವಲಂಬಿಸಿರುವುದು.

ಲಾರ್ವಾಹಾರಿ ಮೀನುಗಳ ಬಗ್ಗೆ ತಿಳಿಯಬೇಕಾದ ಕೆಲವು ವಿಷಯಗಳು :

ಪರಿಸರದಲ್ಲಿ ಹಲವಾರು ಜಾತಿಯ ಲಾರ್ವಾಹಾರಿ ಮೀನುಗಳನ್ನು ನೋಡಬಹುದು. ಗ್ಯಾಂಬೂಸಿಯಾ ಹಾಗೂ ಗಪ್ಪಿ ಮೀನುಗಳು ಸಣ್ಣ ಗಾತ್ರವಾಗಿದ್ದು, ಸುಲಭವಾಗಿ ಬೆಳೆಸಬಹುದಾಗಿದ್ದು, ಯಥೇಚ್ಚವಾಗಿ ವೃದ್ದಿ ಹೊಂದುವ ಶಕ್ತಿ ಇರುವ ಮೀನುಗಳು. ಮಲೇರಿಯ ನಿಯಂತ್ರಣ ಕಾರ್ಯಕ್ರಮದ ಈ ಕಾರ್ಯಾಚರಣೆಯಲ್ಲಿ ಅನೇಕ ವರ್ಷಗಳಿಂದ ಈ ಮೀನುಗಳನ್ನು ಉಪಯೋಗಿಸುತ್ತಾ ಬಂದಿದ್ದೇವೆ. ಅವನ್ನು ಗುರುತಿಸಲು ಬೇಕಾದ ವಿಷಯಗಳು ಹೀಗಿವೆ.

ಗ್ಯಾಂಬೂಸಿಯಾ ಮೀನು :

•             ಗಂಡು ಮೀನು 4.5 ಸೆಂ.ಮೀ, ಹೆಣ್ಣು ಮೀನು 5-6 ಸೆಂ.ಮೀ ಗಾತ್ರದ ಬೆಳವಣಿಗೆ ಹೊಂದಿರುತ್ತವೆ.

•             ಬೆನ್ನಿನ ಹಾಗೂ ಗುದದ ಈಜು ರೆಕ್ಕೆಗಳ ಮೂಲ ಒಂದೇ ರೇಖೆಯಲ್ಲಿ ಇರುವುದಿಲ್ಲ.

•             ಬಾಲದ ಈಜು ರೆಕ್ಕೆ ಗುಂಡಗಿರುತ್ತದೆ.

•             ಬೆನ್ನಿನ ಹಾಗೂ ಬಾಲದ ಈಜು ರೆಕ್ಕೆಗಳಲ್ಲಿ ಕಪ್ಪು ಚುಕ್ಕೆಗಳಿರುತ್ತವೆ.

ಗಪ್ಪಿ ಮೀನು :

•             ಗಂಡು ಮೀನು 2.5 ಸೆಂ.ಮೀ, ಹೆಣ್ಣು ಮೀನು 4 ಸೆಂ.ಮೀ ಗಾತ್ರದ ಬೆಳವಣಿಗೆ ಹೊಂದಿರುತ್ತವೆ.

•             ಬೆನ್ನಿನ ಹಾಗೂ ಗುದದ ಈಜು ರೆಕ್ಕೆಗಳ ಮೂಲ ಒಂದೇ ರೇಖೆಯಲ್ಲಿ ಇರುತ್ತವೆ.

•             ಗಂಡು ಮೀನಿನ ಬಾಲದ ಈಜು ರೆಕ್ಕೆ ಚೂಪಾಗಿ ಇರುತ್ತವೆ.

•             ಬೆನ್ನು ಹಾಗೂ ಬಾಲದ ಈಜು ರೆಕ್ಕೆಗಳಲ್ಲಿ ಕಪ್ಪು ಚುಕ್ಕೆ ಇರುವುದಿಲ್ಲ.

•             ಗಂಡು ಮೀನುಗಳು ವಿವಿಧ ಬಣ್ಣಗಳನ್ನು ಹೊಂದಿರಬಹುದು.

ಈ ಮೀನುಗಳನ್ನು ಮೀನುಗಾರಿಕೆ ಇಲಾಖೆಯಿಂದ ಪಡೆಯಬಹುದು. ಅವನ್ನು ನೀರಿನ ಬಕೇಟ್‍ಗಳಲ್ಲಿ ಸಾಗಿಸಿ ಅದಕ್ಕಾಗಿಯೇ ತಯಾರಿಸಿದ ತೊಟ್ಟಿಗಳು, ಬಾವಿ, ನೀರಾವರಿ ತೊಟ್ಟಿಗಳು ಅಥವಾ ನಿಗಧಿತ ಜಾಗಕ್ಕೆ ವರ್ಗಾಯಿಸಿ ಅವನ್ನು ಬೆಳೆಸಬೇಕು. ಮೀನುಗಳನ್ನು ಹೆಚ್ಚು ಬಿಸಿಲಿಲ್ಲದ ಸಮಯದಲ್ಲಿ ವರ್ಗಾಯಿಸುವುದು ಉತ್ತಮ.

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಳಪಟ್ಟಿರುವ ಎಲ್ಲಾ ಹಳ್ಳಿಗಳಲ್ಲೂ ಭೌಗೋಳಿಕ ಸಮೀಕ್ಷಣೆ ನಡೆಸಿ, ಹಳ್ಳಿಗಳ ಪ್ರಕಾರವಾಗಿ ಇರುವ ಬಾವಿ, ಕೆರೆ, ಕುಂಟೆ, ಕಾಲುವೆ ಇತ್ಯಾದಿ ನೀರಿನ ತಾಣಗಳನ್ನು ಗುರುತಿಸಿ ನಕ್ಷೆಗಳನ್ನು ತಯಾರಿಸಬೇಕು. ನಂತರ ಈ ನೀರಿನ ತಾಣಗಳಲ್ಲಿ ಮೀನುಗಳನ್ನು ವರ್ಗಾಯಿಸಬೇಕು. ಆರೋಗ್ಯ ಕಾರ್ಯಕರ್ತರು ಹಳ್ಳಿಗಳಿಗೆ ಸಮೀಕ್ಷಣೆಗೆ ಹೋದಾಗ ಈ ನೀರಿನ ತಾಣಗಳಲ್ಲಿ ನೀರು ಹಾಗೂ ಮೀನುಗಳು ಇರುವುದನ್ನು ಕಂಡು ಬರಬೇಕು. ಮೀನುಗಳು ಇಲ್ಲವಾದಲ್ಲಿ ಅವುಗಳನ್ನು ಮತ್ತೆ ವರ್ಗಾಯಿಸಬೇಕು.

ಕೆರೆ ಕುಂಟೆಗಳಲ್ಲಿ ಮೀನು ಬಿಡುವ ಮುನ್ನ ನೀರಿನಲ್ಲಿ ಹೆಚ್ಚಾಗಿ ಗಿಡ, ಹುಲ್ಲು ಬೆಳೆದಿದ್ದಲ್ಲಿ, ಅವನ್ನು ಪಂಚಾಯಿತಿಯವರ ಮೂಲಕ ಶುದ್ದಗೊಳಿಸಿ ನಂತರವೆ ಮೀನು ಬಿಡುವ ಕಾರ್ಯಾಚರಣೆ ಹಮ್ಮಿಕೊಳ್ಳಬೇಕು. ಹಾಗೆಯೇ ಕೆರೆ ಬಾವಿಗಳ ಅಂಚನ್ನು ಪಂಚಾಯಿತಿಯವರ ಮೂಲಕ ಸರಿಪಡಿಸುವುದರಿಂದ, ಈ ಕಾರ್ಯಾಚರಣೆ ಯಶಸ್ವಿಯಾಗಲು ಅನುಕೂಲವಾಗುವುದು. ಇದೇ ರೀತಿ ಬಾವಿಗಳಲ್ಲಿ ಕಸ ಕಡ್ಡಿಗಳನ್ನು ತೆಗೆದು ನಂತರ ಮೀನನ್ನು ವರ್ಗಾಯಿಸುವುದರಿಂದ, ಅವುಗಳ ಕಾರ್ಯಕ್ಷಮತೆ ಹೆಚ್ಚುತ್ತದೆ.

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate