অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮೂತ್ರದ ಬಣ್ಣ

ಮೂತ್ರದ ಬಣ್ಣ

ಮೂತ್ರದ ಬಣ್ಣದಲ್ಲಿ ಏರುಪೇರಾದರೆ ಅಪಾಯ ಕಟ್ಟಿಟ್ಟ ಬುತ್ತಿ..!

ನಮ್ಮ ಶರೀರದ ತ್ಯಾಜ್ಯಗಳು ದ್ರವರೂಪ ಮತ್ತು ಘನರೂಪದಲ್ಲಿ ಹೊರಹೋಗುತ್ತವೆ. ದ್ರವರೂಪದ ತ್ಯಾಜ್ಯ ಮೂತ್ರದ ರೂಪದಲ್ಲಿ ಪ್ರತಿ ಎರಡು ಅಥವಾ ಮೂರು ಗಂಟೆಗೊಮ್ಮೆ ಹೊರಹೋಗುತ್ತಲೇ ಇರಬೇಕು. ಈ ಅವಧಿ ಹೆಚ್ಚಾದರೆ ಮೂತ್ರದ ಬಣ್ಣ ಗಾಢವಾಗುತ್ತಾ ಹೋಗುತ್ತದೆ. ಅಂದರೆ ಮೂತ್ರದಲ್ಲಿ ಸಂಗ್ರಹವಾದ ವಿಷಕಾರಿ ವಸ್ತುಗಳು ಹೆಚ್ಚುತ್ತಾ ಹೋಗುತ್ತವೆ.

 

ನಮ್ಮ ಮೂತ್ರಪಿಂಡಗಳು ಸತತವಾಗಿ ನಮ್ಮ ರಕ್ತವನ್ನು ಶುದ್ದೀಕರಿಸುತ್ತಾ ಕಲ್ಮಶಗಳನ್ನು ನೀರಿನೊಂದಿಗೆ ಮಿಶ್ರಣಮಾಡಿ ಹೊರಹಾಕುತ್ತದೆ(filtration) ಮತ್ತು ಉಪಯುಕ್ತವಾದುದನ್ನು ರಕ್ತದೊಡನೆ ಕಳುಹಿಸುತ್ತಾ ಇರುತ್ತದೆ (reabsorption). ಆದರೆ ಕೆಲವೊಮ್ಮೆ ಅನಾರೋಗ್ಯದ ಕಾರಣ ದೇಹದಿಂದ ಹೊರಹೋಗಬಾರದ ಪೋಷಕಾಂಶಗಳೂ ಹೊರಹೋಗುತ್ತವೆ, ಅಂತೆಯೇ ಹೊರಹೋಗಬೇಕಾದ ವಿಷಕಾರಿ ವಸ್ತುಗಳು ರಕ್ತದಲ್ಲಿಯೇ ಉಳಿದುಬಿಡುತ್ತವೆ.

ಇವೆರಡೂ ಅಪಾಯಕಾರಿ ಸ್ಥಿತಿಗಳಾಗಿವೆ. ಮೂತ್ರದ ಪರೀಕ್ಷೆಯ ಮೂಲಕ ಈ ಅಂಶಗಳನ್ನು ಪತ್ತೆಹಚ್ಚಬಹುದು. ಆದರೆ ಮೂತ್ರದ ಬಣ್ಣವನ್ನು ಗಮನವಿಟ್ಟು ನೋಡಿದರೆ ಇದರಲ್ಲಿ ಇಂತಹ ಅಂಶವಿದೆ ಎಂದು ಸ್ಥೂಲವಾಗಿ ಅಂದಾಜಿಸಬಹುದು. ಮೂತ್ರದ ಬಣ್ಣದ ಮೂಲಕ ದೇಹ ಹಲವು ಕಾಯಿಲೆಗಳ ಮುನ್ಸೂಚನೆಯನ್ನೂ ನೀಡುತ್ತದೆ. ಸೂಕ್ತಕಾಲಕ್ಕೆ ಚಿಕಿತ್ಸೆ ನೀಡುವ ಮೂಲಕ ಉಲ್ಬಣವಾಗಬಹುದಾಗಿದ್ದ ತೊಂದರೆಯನ್ನು ಮೂಲದಲ್ಲಿಯೇ ಚಿವುಟಿದರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ವೈದ್ಯರೂ ಈ ಮಾತನ್ನೇ ಸಮರ್ಥಿಸುತ್ತಾರೆ. ಇದಕ್ಕಾಗಿ ಮೂತ್ರದ ಬಣ್ಣದ ಅವಲೋಕನಾ ಕ್ರಮವನ್ನು ಈ ಲೇಖನದ ಮೂಲಕ ವಿವರಿಸಲ್ಪಟ್ಟಿದೆ. ಈ ಸೂಚನೆಗಳಲ್ಲಿ ಸೂಚಿಸಿರುವ ಬಣ್ಣದ ಮೂತ್ರ ಖಚಿತವಾದರೆ ತಕ್ಷಣ ವೈದ್ಯರನ್ನು ಕಂಡು ಸೂಕ್ತ ಪರೀಕ್ಷೆಗೊಳಪಟ್ಟು ಚಿಕಿತ್ಸೆ ತೆಗೆದುಕೊಳ್ಳುವುದು ಅತಿ ಅಗತ್ಯವಾಗಿದೆ.

ಸೂಚನೆ: ಯಾವುದೇ ಸ್ಥಿತಿಯಲ್ಲಿ ಮೂತ್ರದ ಬಣ್ಣಕ್ಕೂ ಹಿಂದಿನ ಮೂತ್ರದಿಂದ ಈಗಿನ ಮೂತ್ರದ ಸಮಯಕ್ಕೂ ನೇರ ಸಂಬಂಧವಿದೆ. ಅಂದರೆ ಒಮ್ಮೆ ಮೂತ್ರಕ್ಕೆ ಹೋಗಿ ಬಂದ ಅರ್ಧಗಂಟೆಯಲ್ಲಿಯೇ ಮತ್ತೆ ಹೋದರೆ ಇರುವ ಬಣ್ಣಕ್ಕೂ ಎರಡು ಗಂಟೆಗಳ ನಂತರದ ಬಣ್ಣಕ್ಕೂ ವ್ಯತ್ಯಾಸವಿರುತ್ತದೆ. ಇದೇ ಕಾರಣದಿಂದ ವೈದ್ಯರು ಸಾಮಾನ್ಯವಾಗಿ ಎರಡು ಗಂಟೆಗಳ ನಂತರದ ಮೂತ್ರವನ್ನು ಒಂದು ಮಾನದಂಡವಾಗಿ ಪರಿಗಣಿಸುತ್ತಾರೆ. ಇದೇ ರೀತಿ ಕೆಳಗಿನ ಸೂಚನೆಗಳು ಎರಡು ಗಂಟೆಗಳ ಕಾಲದ ಮೂತ್ರ ಎಂದು ಪರಿಗಣಿಸಿ.

ಬಹುತೇಕ ಪಾರದರ್ಶಕವಾಗಿರುವುದು

ಹೊಟ್ಟೆ ತುಂಬಾ ನೀರು ಕುಡಿದ ಬಳಿಕ ಕೊಂಚ ಹೊತ್ತಿನಲ್ಲಿಯೇ ಮೂತ್ರವಿಸರ್ಜನೆಯಾದರೆ ಬಹುತೇಕ ಮೂತ್ರ ಪಾರದರ್ಶಕವಾಗಿರುತ್ತದೆ. ಏಕೆಂದರೆ ಮೂತ್ರಕೋಶಗಳು ಹೆಚ್ಚಿನ ನೀರನ್ನು ಸಂಗ್ರಹಿಸಿಟ್ಟು ಕೊಳ್ಳಲಾಗದೇ ಹೆಚ್ಚುವರಿ ನೀರನ್ನು ಹೊರಹಾಕುತ್ತದೆ. ಇದಕ್ಕೂ ಮುನ್ನ ಸಂಗ್ರಹವಾಗಿದ್ದ ಲವಣಗಳು ಕರಗಿ ನಸುವಾದ ಹಳದಿ ಬಣ್ಣ ಇರುತ್ತದೆ. ಇದೇ ಕಾರಣಕ್ಕೆ ಒಮ್ಮೆಲೇ ತುಂಬಾ ಪ್ರಮಾಣದ ನೀರನ್ನು ಕುಡಿಯುವ ಬದಲು ಸ್ವಲ್ಪ ಸ್ವಲ್ಪನಾಗಿ ಪ್ರತಿ ಗಂಟೆಗೆ ಅಥವಾ ಎರಡು ಗಂಟೆಗಳಿಗೊಮ್ಮೆ ಕುಡಿಯುವುದನ್ನು ವೈದ್ಯರು ಸಲಹೆ ನೀಡುತ್ತಾರೆ. ಆದರೆ ತುಂಬಾ ಹೆಚ್ಚು ನೀರು ಕುಡಿಯುವುದೂ ಅಪಾಯಕಾರಿಯಾಗಿದೆ. ಏಕೆಂದರೆ ಹೊಟ್ಟೆಯಲ್ಲಿರುವ ಜಠರರಸ ಮತ್ತು ಕರುಳುಗಳ ರಸಗಳು ಹೆಚ್ಚಿನ ನೀರಿನಿಂದಾಗಿ ತಿಳಿಗೊಂಡು ಜೀರ್ಣಕ್ರಿಯೆಗೆ ಅಡ್ಡಿಯಾಗುತ್ತದೆ. (water intoxication), ಅಲ್ಲದೇ ದೇಹಕ್ಕೆ ಅಗತ್ಯವಾದ ಲವಣಗಳೂ ಈ ಹೆಚ್ಚಿನ ನೀರನ್ನು ಹೊರದೂಡುವ ಪ್ರಕ್ರಿಯೆಯಲ್ಲಿ ಹೊರಹೋಗುತ್ತವೆ. ಇದು ಅತಿ ಅಪಾಯಕಾರಿ ಸ್ಥಿತಿಯಲ್ಲದಿದ್ದರೂ ಆತಂಕವನ್ನಂತೂ ಹುಟ್ಟುಹಾಕುತ್ತದೆ. ಆದ್ದರಿಂದ ದೇಹ ಸಾಕು ಎಂದು ಸೂಚನೆ ನೀಡಿದಾಗ ನೀರು ಕುಡಿಯುವುದನ್ನು ನಿಲ್ಲಿಸಿಬಿಡಿ.

ಬಣ್ಣವಿಲ್ಲದೇ ಇರುವುದು

ನೀರು ಕುಡಿದ ಬಳಿಕ ಕೊಂಚ ವೇಳೆಯ ನಂತರ ವಿಸರ್ಜಿಸಿದ ಮೂತ್ರ ಸ್ವಲ್ಪವೂ ಬಣ್ಣವಿಲ್ಲದೇ ಇದ್ದರೆ ಅಥವಾ ಪೂರ್ಣವಾಗಿ ಪಾರದರ್ಶಕವಾಗಿದ್ದರೆ ಇದು ಮಧುಮೇಹದ ಸೂಚನೆಯಾಗಿರಬಹುದು. ಜೊತೆಗೆ ಪದೇ ಪದೇ ಮೂತ್ರಕ್ಕೆ ಅವಸರವಾಗುತ್ತಿದೆಯೇ ಮತ್ತು ಪದೇ ಪದೇ ನೀರಡಿಕೆಯಾಗುತ್ತಿದೆಯೇ ಎಂದು ಗಮನಿಸಿ. ಈ ಸೂಚನೆಗಳು ಮಧುಮೇಹದ ಸ್ಪಷ್ಟ ಸೂಚನೆಗಳಾಗಿವೆ. ಕೂಡಲೇ ವೈದ್ಯರಿಂದ ಅಥವಾ ಪ್ರಮಾಣೀಕೃತ ವೈದ್ಯಕೀಯ ತಪಾಸಣಾ ಪ್ರಯೋಗಾಲಯದಲ್ಲಿ ಮಧುಮೇಹದ ಪರೀಕ್ಷೆ ಮಾಡಿಸಿಕೊಳ್ಳಿ.

ತೆಳುಹಳದಿ (ಒಣಹುಲ್ಲಿನ ಬಣ್ಣ ಅಥವಾ ತೆಳುವಾದ ಜೇನಿನ ಬಣ್ಣ)

ಭತ್ತದ ಹುಲ್ಲು ಒಣಗಿದ ಬಳಿಕ ತಿರುಗುವ ನಸು ಹಳದಿ ಬಣ್ಣದಲ್ಲಿ ಮೂತ್ರವಿದ್ದರೆ ಇದು ಆರೋಗ್ಯಕರ ಎಂದು ತಿಳಿದುಕೊಳ್ಳಬೇಕು. ಇದಕ್ಕೂ ತಿಳಿಯಾಗಿದ್ದರೆ ಅಥವಾ ಗಾಢವಾಗಿದ್ದರೆ ಆರೋಗ್ಯದಲ್ಲಿ ಏರುಪೇರಿನ ಲಕ್ಷಣವಾಗಿದೆ. ಗಾಢವಾಗಿದ್ದರೆ ಮೂತ್ರದಲ್ಲಿ ಲವಣಗಳು ಹೆಚ್ಚಾಗಿವೆ ಎಂದೂ ನಸುವಾಗಿದ್ದರೆ ಕಡಿಮೆಯಾಗಿವೆ ಎಂದೂ ತಿಳಿಯಬೇಕು. ಗಾಢ ಬಣ್ಣದ ಮೂತ್ರ ಕೊಂಚ ಕಟುವಾಸನೆಯಿಂದ ಕೂಡಿರುತ್ತದೆ. ಕೆಲವೊಮ್ಮೆ ನಾವು ಸೇವಿಸಿದ ಆಹಾರದ ಕಾರಣವೂ (ಉದಾಹರಣೆಗೆ ಬೀಟ್ ರೂಟ್) ಮೂತ್ರ ಗಾಢವಾಗಬಹುದು. ಆದರೆ ಎಲ್ಲಿಯವರೆಗೆ ಮೂತ್ರದ ಬಣ್ಣ ಹಳದಿಯಾಗಿರುತ್ತದೆಯೋ ಅಲ್ಲಿಯವರೆಗೆ ಆತಂಕವಿಲ್ಲ.

ಕಂದು ಬಣ್ಣದಿಂದ ಕೂಡಿದ್ದರೆ

ಒಂದು ವೇಳೆ ಮೂತ್ರ ಕಂದು ಬಣ್ಣದಿಂದಿದ್ದರೆ (ಕಾಫಿಯ ಡಿಕಾಕ್ಷನ್ ಗೆ ನೀರು ಸೇರಿಸಿದರೆ ಯಾವ ಬಣ್ಣ ಬರಬಹುದೋ ಅಂತಹ ಬಣ್ಣ) ಯಕೃತ್ ನ ತೊಂದರೆಯನ್ನು ಸೂಚಿಸುತ್ತದೆ. ಯಕೃತ್ (liver) ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲದಿದ್ದಲ್ಲಿ ಪಿತ್ತದ ಲವಣಗಳು ಮಲದ ಮೂಲಕ ದೇಹದಿಂದ ವಿಸರ್ಜಿಸಬೇಕಾಗಿದ್ದುದು ಮೂತ್ರದ ಮೂಲಕ ವಿಸರ್ಜಿಸಲ್ಪಡುತ್ತವೆ. ಈ ಲವಣಗಳೇ ಕಂದು ಬಣ್ಣಕ್ಕೆ ಕಾರಣವಾಗಿದೆ. ಕೂಡಲೇ ವೈದ್ಯರ ಬಳಿ ತಪಾಸಣೆಗೊಳಪಡುವುದು ಕ್ಷೇಮ.

ಗುಲಾಬಿ ಬಣ್ಣ ಅಥವಾ ನಸುಗೆಂಪು ಬಣ್ಣ ಹೊಂದಿದ್ದರೆ

ದಾಳಿಂಬೆ ಕಾಳುಗಳ ರಸವನ್ನು ನೀರಿನಲ್ಲಿ ಹಿಂಡಿದರೆ ಬರುವ ಬಣ್ಣದಲ್ಲಿ ಮೂತ್ರವಿದ್ದರೆ ಆ ಮೂತ್ರದಲ್ಲಿ ರಕ್ತಕಣಗಳಿವೆ ಎಂದು ತಿಳಿಯಬೇಕು. ಮೂತ್ರದಲ್ಲಿ ರಕ್ತ ಸೇರುವ ಸ್ಥಿತಿಗೆ hematuria ಎಂದು ಕರೆಯುತ್ತಾರೆ. ಇದು ಕೊಂಚ ಅಪಾಯಕಾರಿ ಸೂಚನೆಯಾಗಿದೆ. ಇದಕ್ಕೆ ಕಾರಣಗಳು ಮೂತ್ರನಾಳದಲ್ಲಿ ಸೋಂಕು, ಮೂತ್ರಪಿಂಡಗಳಲ್ಲಿ ಅಥವಾ ಮೂತ್ರಕೋಶದಲ್ಲಿ ಕಲ್ಲುಗಳ ಇರುವಿಕೆ, ಮೂತ್ರಪಿಂಡಗಳ ಕ್ಯಾನ್ಸರ್, ಪ್ರಾಸ್ಟ್ರೇಟ್ ಗ್ರಂಥಿಯಲ್ಲಿ ಊತ, ಮೂತ್ರಕೋಶದಲ್ಲಿ ಊತ ಮೊದಲಾದವು ಮೂತ್ರದಲ್ಲಿ ರಕ್ತ ಸೇರಲು ಕಾರಣವಾಗುತ್ತದೆ. ಸಾಮಾನ್ಯವಾಗಿ ಈ ಪರಿಯ ಮೂತ್ರದಲ್ಲಿ ಉರಿ ಅಥವಾ ನೋವು ಸಹಾ ಇರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಮೂತ್ರ ವಿಸರ್ಜನೆ ತ್ರಾಸದಾಯಕವಾಗಿಯೂ ಇರುತ್ತದೆ.

ನಸುನೀಲಿ ಬಣ್ಣ ಹೊಂದಿದ್ದರೆ

ಯಾವುದೋ ಕಾರಣದಿಂದ ಕಿಣ್ವವೊಂದು ಅನುವಂಶಿಕವಾಗಿ ಉಪಸ್ಥಿತವಿದ್ದರೆ ಮೂತ್ರ ನಸುನೀಲಿ ಬಣ್ಣದಲ್ಲಿರುತ್ತದೆ. porphyria ಎಂದು ಕರೆಯಲ್ಪಡುವ ಈ ಸ್ಥಿತಿ ಅತಿ ಅಪರೂಪವಾಗಿದೆ. ಈ ಸ್ಥಿತಿ ನರಸಂಬಂಧಿ ಮತ್ತು ಚರ್ಮರೋಗಗಳಿಗೆ ಕಾರಣವಾಗುವ ಮುನ್ಸೂಚನೆಯಾಗಿದೆ.

ಹಸಿರು ಬಣ್ಣ ಹೊಂದಿದ್ದರೆ

ಸಾಮಾನ್ಯವಾಗಿ ಚರ್ಮದಲ್ಲಿ ಯಾವುದಾದರೂ ಮುಳ್ಳು ಚುಚ್ಚಿಕೊಂಡರೆ ಕೆಲವು ದಿನಗಳ ಬಳಿಕ ಆ ಮುಳ್ಳಿನ ಸುತ್ತ ಕೀವು ತುಂಬಿಕೊಂಡು ಮುಳ್ಳನ್ನು ಸಡಿಲಗೊಳಿಸಿ ಕೀವಿನ ಮೂಲಕ ಹೊರದಬ್ಬುತ್ತದೆ. ಇಂದು ಒಂದು ರೀತಿಯ ನಮ್ಮ ದೇಹದ ರಕ್ಷಣಾ ವ್ಯವಸ್ಥೆಯಾಗಿದೆ. ಕೆಲವೊಮ್ಮೆ ಯಾವುದೋ ಕಾರಣದಿಂದ ಮೂತ್ರನಾಳದ ಒಳಭಾಗದಲ್ಲಿ ಅತಿಸೂಕ್ಷ್ಮವಾದ ಗೀರುಗಳಾದರೆ ಆ ಗೀರುಗಳಲ್ಲಿಯೂ ಕೀವು ತುಂಬಿಕೊಳ್ಳುತ್ತದೆ. ಈ ಕೀವು ಹೊರಬಂದು ಮೂತ್ರದೊಡನೆ ಹೊರಬರುತ್ತದೆ. ಈ ಕೀವು ಮೂತ್ರಕ್ಕೆ ನಸು ಹಸಿರು ಬಣ್ಣ ನೀಡುತ್ತದೆ. ಕೆಲವೊಮ್ಮೆ ಶತಾವರಿಯ ಸೇವನೆಯೂ ಮೂತ್ರದಲ್ಲಿ ಹಸಿರು ಬಣ್ಣ ಬರುವಂತೆ ಮಾಡುತ್ತದೆ. ಕೇವಲ ಒಂದೆರಡು ಬಾರಿ ಮೂತ್ರ ಹಸಿರು ಬಣ್ಣಕ್ಕಿದ್ದು ಬಳಿಕ ನಸು ಹಳದಿಯಾದರೆ ಈ ತೊಂದರೆ ತಾತ್ಕಾಲಿಕ ಎಂದು ತಿಳಿದುಕೊಳ್ಳಬೇಕು. ಒಂದು ವೇಳೆ ಎರಡನೆಯ ದಿನವೂ ಮೂತ್ರ ಹಸಿರು ಬಣ್ಣಕ್ಕಿದ್ದರೆ ವೈದ್ಯರನ್ನು ಕಾಣುವುದು ಅಗತ್ಯವಾಗಿದೆ.

ಮೂತ್ರದಲ್ಲಿ ನೊರೆ ಇದ್ದರೆ

ಮೂತ್ರ ನೊರೆಭರಿತವಾಗಿದ್ದು ನೊರೆಗುಳ್ಳೆಗಳು ಬಹಳ ಹೊತ್ತಿನವರೆಗೂ ಒಡೆಯದೇ ಇದ್ದಲ್ಲಿ ಮೂತ್ರದಲ್ಲಿ ಪ್ರೋಟೀನುಗಳು ಅಡಕವಾಗಿವೆ ಎಂದು ತಿಳಿದುಕೊಳ್ಳಬೇಕು. ತಕ್ಷಣ ವೈದ್ಯರಿಂದ ತಪಾಸಣೆ ಅಗತ್ಯವಾಗಿದೆ.ಮೂತ್ರಪಿಂಡಗಳ ವೈಫಲ್ಯ ಮತ್ತು ಪಿತ್ತಕೋಶದ ಕಾರ್ಯವೈಖರಿಯಲ್ಲಿ ಏರುಪೇರು ಈ ನೊರೆಗೆ ನೇರವಾದ ಕಾರಣವಾಗಿವೆ.

ಮೂತ್ರ ಹಾಲಿನ ಅಥವಾ ಮೋಡದ ಬಣ್ಣದಲ್ಲಿದ್ದರೆ

ಈಗ ತಾನೇ ಹಾಲನ್ನು ನೀರಿನಲ್ಲಿ ಸೇರಿಸಿದಾದ ಅತ್ತ ಪೂರ್ಣ ಬೆಳ್ಳಗೂ ಅಲ್ಲದೇ ತೆಳುವಾಗಿದ್ದರೆ ಅಪಾಯದ ಸಂಕೇತವಾಗಿದೆ. ಸಾಮಾನ್ಯವಾಗಿ ಲೈಂಗಿಕವಾಗಿ ಹರಡುವ ರೋಗವಾದ ಗೋನೋರಿಯಾ ವೈರಸ್ ಗಳು ದೇಹವನ್ನು ಆವರಿಸಿದರೆ ಮೂತ್ರ ಹೊರಬರುತ್ತಿರುವಾಗ ಬಿಳಿ ಕಪ್ಪು ಬಣ್ಣಗಳ ಮಿಶ್ರಣದಂತೆ (ಮೋಡದಂತೆ) ಇರುತ್ತದೆ. ನಸು ಬೆಳ್ಳಗಿದ್ದರೆ ಮೂತ್ರನಾಳ, ಮೂತ್ರಕೋಶ, ಮೂತ್ರಪಿಂಡಗಳ ಸೋಂಕು ಇರುವುದನ್ನು ಸೂಚಿಸುತ್ತದೆ. ಮಹಿಳೆಯರಲ್ಲಿ ಮಾಸಿಕ ಋತುಸ್ರಾವ ಹೆಚ್ಚಾಗಿದ್ದರೆ ಸಹಾ ಮೂತ್ರ ಮೋಡದಂತಿರುತ್ತದೆ.

ಕಪ್ಪು ಬಣ್ಣಕ್ಕಿದ್ದರೆ

ಒಂದು ವೇಳೆ ಮೂತ್ರ ಕೋಕಾ ಕೋಲಾದಷ್ಟು ಕಪ್ಪಗಿದ್ದರೆ ಮೂತ್ರದಲ್ಲಿ ದೇಹದಲ್ಲಿ ಅನಗತ್ಯವಾದ ಯಾವುದೋ ರಾಸಾಯನಿಕ ಸೇರಿಕೊಂಡಿದೆ ಎಂದು ತಿಳಿಯಬಹುದು. ಸಾಮಾನ್ಯವಾಗಿ ಮಾದಕದ್ರವ್ಯ ವ್ಯಸನಿಗಳಲ್ಲಿ ಈ ಬಣ್ಣ ಕಾಣಿಸಿಕೊಳ್ಳುತ್ತದೆ. ಈ ಬಣ್ಣ ಕಂಡ ಮರುಕ್ಷಣವೇ ವೈದ್ಯರನ್ನು ಸಂಪರ್ಕಿಸಲೇಬೇಕು.

ಮಧುಮೇಹಿಗಳಿಗೆ ಮೂತ್ರ ಪರೀಕ್ಷೆ ಅಗತ್ಯತೆ ಏನು?

ಮಧುಮೇಹಿಗಳು ಸಾಮಾನ್ಯವಾಗಿ ಪಾಲಿಸಬೇಕಾದ ಗುರಿಗಳೇನು? ಮೇಲ್ಕಂಡ ಕೋಷ್ಟಕದಲ್ಲಿ ಸೂಚಿಸಿರುವ ಗುರಿಗಳು ವೈಯಕ್ತಿಕವಾಗಿ ಬದಲಾವಣೆಗೆ ಒಳಪಟ್ಟಿರುತ್ತದೆ. ವ್ಯಕ್ತಿಯ ವಯಸ್ಸು, ದೇಹ ಸ್ಥಿತಿ ಹಾಗೂ Low sugar (Hypoglycemia) ಬಗ್ಗೆ ತಿಳುವಳಿಕೆ ಕೂಡಾ ಗಣನೆ ಬರುತ್ತದೆ.

ಮೂಲ : ಬೋಲ್ಡ್ ಸ್ಕೈ (http://www.boldsky.com/)© 2006–2019 C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate