অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಶ್ವಾಸನಾಳದ ರೋಗ

ಯಮಯಾತನೆ ನೀಡುವ ಶ್ವಾಸನಾಳದ ರೋಗಕ್ಕೆ ಪರಿಹಾರವೇನು?

ಸಾಮಾನ್ಯವಾಗಿ ಶ್ವಾಸಸಂಬಂಧಿ ರೋಗ ಎಂದರೆ ಅಸ್ತಮಾ ಒಂದೇ ಎಂದು ಜನರ ಭಾವನೆಯಾಗಿದೆ. ಆದರೆ ದೇಹದ ವಿವಿಧ ಭಾಗಗಳಂತೆ ಶ್ವಾಸಕೋಶವೂ ವಿವಿಧ ತೊಂದರೆಗೆಳಿಗೆ ತುತ್ತಾಗುತ್ತದೆ. ಅದರಲ್ಲಿ ಪ್ರಮುಖವಾದುದು ಬ್ರಾಂಕೈಟಿಸ್ (ಗಂಟಲೂತ, ಶ್ವಾಸನಾಳದ ರೋಗ). ಬ್ರಾಂಕೈ ಅಥಾ ಬ್ರಾಂಖೈ ಅಂದರ ಶ್ವಾಸನಳಿಕೆ. ಶ್ವಾಸಕೋಶದ ಮುಖ್ಯ ಕೆಲಸವೆಂದರೆ ಮೂಗಿನ ಮೂಲಕ ಗಾಳಿಯನ್ನು ಒಳಗೆಳೆದುಕೊಂಡು ಗಾಳಿಯಿಂದ ಆಮ್ಲಜನಕವನ್ನು ಶೇಖರಿಸಿ ರಕ್ತದಮೂಲಕ ದೇಹಕ್ಕೆ ಪೂರೈಸುವುದು (ಉಶ್ವಾಸ) ಮತ್ತು ದೇಹದ ವಿವಿಧ ಭಾಗಗಳಿಂದ ರಕ್ತ ಹೊತ್ತು ತಂದಿದ್ದ ಇಂಗಾಲದ ಡೈ ಆಕ್ಸೈಡ್ ಹೊರಹಾಕುವುದು (ನಿಃಶ್ವಾಸ). ಶ್ವಾಸನಳಿಕೆ ಎದೆಯಭಾಗದಲ್ಲಿ ಎರಡು ಕವಲುಗಳಾಗಿ ಎಡ ಮತ್ತು ಬಲ ಶ್ವಾಸಕೋಶಗಳನ್ನು ಪ್ರವೇಶಿಸಿದ ಬಳಿಕ ಸಾವಿರಾರು ಕವಲುಗಳಾಗಿ ಅಂತಿಮವಾಗಿ ಅತಿಸೂಕ್ಷ್ಮವಾದ ಭಾಗಗಳನ್ನು ತಲುಪುತ್ತದೆ. ಈ ಸೂಕ್ಷ್ಮ ಅಂಗಕ್ಕೆ ಆಲ್ವಿಯೋಲಸ್(alveolus)(ಏಕವಚನ) ಅಥವಾ ಆಲ್ವಿಯೋಲೈ (alveoli)(ಬಹುವಚನ) ಎಂದು ಕರೆಯಲಾಗುತ್ತದೆ. ಇಲ್ಲಿಯೇ ಗಾಳಿಯಿಂದ ಆಮ್ಲಜನಕ ಹೀರಲ್ಪಡುತ್ತದೆ.

ಯಾವುದೋ ಕಾರಣದಿಂದ ಈ ಭಾಗದಿಂದ ಹಿಡಿದು ಕವಲೊಡೆದಿದ್ದ ಶ್ವಾಸನಾಳದಿಂದ ಮೂಗಿನ ವರೆಗಿನ ಗಾಳಿಯ ಕೊಳವೆಗಳಲ್ಲಿ ಎಲ್ಲಿಯಾದರೂ ಸೋಂಕು ಅಥವಾ ತೊಂದರೆ ಉಂಟಾದರೆ ಆಲ್ವಿಯೋಲೈ ಗಳಿಂದ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕ ದೇಹಕ್ಕೆ ಪೂರೈಕೆಯಾಗುವುದಿಲ್ಲ. ದೇಹದ ರಕ್ತನಾಳ ಸಮಸ್ಯೆ: ನಿರ್ಲಕ್ಷಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ!

ಈ ಪಥದಲ್ಲಿ ಎಲ್ಲಿ ತೊಂದರೆ ಉಂಟಾಗಿದೆ ಎಂಬ ಕಾರಣವನ್ನು ಆಧರಿಸಿ ರೋಗವನ್ನು ಗುರುತಿಸಲಾಗುತ್ತದೆ. ಒಂದು ವೇಳೆ ಆಲ್ವಿಯೋಲೈಗಳಲ್ಲೇ ತೊಂದರೆ ಇದ್ದು ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕ ಹೀರದೇ ಇದ್ದರೆ ಬ್ರಾಂಖೈಟಿಸ್ ಎಂದೂ ಆಲ್ವಿಯೋಲೈಗಳಲ್ಲಿ ತೊಂದರೆ ಇಲ್ಲದೆ ಶ್ವಾಸಕೊಳವೆಗಳಲ್ಲಿ ತೊಂದರೆಯಾಗಿ ಗಾಳಿ ಸರಾಗವಾಗಿ ಒಳಬರಲು ಮತ್ತು ಹೊರಹೋಗಲು ಅಡ್ಡಿಯಾಗುವಂತಿದ್ದರೆ ಅಸ್ತಮಾ ಎಂದೂ ಕರೆಯಲಾಗುತ್ತದೆ. ಈ ತೊಂದರೆಗಳನ್ನು ಸೂಕ್ತ ಪರೀಕ್ಷೆಗಳಿಂದ ಗುರುತಿಸಿ ಔಷಧಿಗಳ ಮೂಲಕ ತೊಂದರೆಯನ್ನು ಗುಣಪಡಿಸಬಹುದು.

ಬ್ರಾಂಖೈಟಿಸ್ ನಿಂದ ಕೆಮ್ಮು, ಸುಸ್ತು, ಎದೆಯಲ್ಲಿ ನೋವು, ಉಸಿರಾಡಲು ಕಷ್ಟವಾಗುವುದು, ಜ್ವರ, ಮೈಕೈ ನೋವು ಮೊದಲಾದ ತೊಂದರೆಗಳು ಎದುರಾಗುತ್ತವೆ. ಅತಿ ಹೆಚ್ಚಿನ ಬ್ರಾಂಖೈಟಿಸ್ ತೊಂದರೆ ಇದ್ದವರಿಗೆ ಒಂದೊಂದು ನಿಮಿಷ ಕಳೆಯುವುದೂ ದುಸ್ತರವಾಗಿ ಪರಿಣಮಿಸಬಹುದು. ಈ ರೋಗ ಒಮ್ಮೆಲೇ ಉಲ್ಬಣಾವಸ್ಥೆಗೆ ತಲುಪುವುದಿಲ್ಲ. ಏಕೆಂದರೆ ನಮ್ಮ ರೋಗ ನಿರೋಧಕ ಶಕ್ತಿ ಇದರ ವಿರುದ್ದ ಸತತವಾಗಿ ಹೋರಾಡುತ್ತಾ ತೊಂದರೆಯನ್ನು ಸರಿಪಡಿಸಲು ಯತ್ನಿಸುತ್ತಲೇ ಇರುತ್ತದೆ.

ಹೆಚ್ಚಿನವರು ಇದೇ ಕಾರಣದಿಂದ ನಾಳೆಗೆ ಸರಿಹೋಗಬಹುದು ಎಂಬ ನಂಬಿಕೆಯಿಂದ ದಿನ ದೂಡುತ್ತಾ

ನಿಧಾನವಾಗಿ ಉಲ್ಬಣಾವಸ್ಥೆಗೆ ತಲುಪುತ್ತಾರೆ. ಹಾಗಾಗಿ ಪ್ರಾರಂಭಿಕ ಸ್ಥಿತಿಯಲ್ಲಿಯೇ ರೋಗವನ್ನು ಗುರುತಿಸಿ ಚಿಕಿತ್ಸೆ ಪಡೆದರೆ ಪರಿಣಾಮ ಶೀಘ್ರವಾಗಿ ಪಡೆಯಬಹುದು. ಈ ಚಿಕಿತ್ಸೆಯನ್ನು ಮನೆಯಲ್ಲಿಯೇ ಲಭ್ಯವಿರುವ ಆಹಾರವಸ್ತುಗಳಿಂದ ಬ್ರಾಂಖೈಟಿಸ್ ರೋಗವನ್ನು ದೂರವಿರಿಸಬಹುದು. ಆದರೆ ಈ ಚಿಕಿತ್ಸೆಗಳನ್ನು ನಿಮ್ಮ ವೈದ್ಯರ ಸಲಹೆಯ ಬಳಿಕವೇ ಸೇವಿಸಲು ತೊಡಗುವುದು ಅವಶ್ಯ.

ಲಿಂಬೆ ರಸ

ಲಿಂಬೆರಸದಲ್ಲಿ ಕಫವನ್ನು ಕರಗಿಸುವ ಶಕ್ತಿಯಿರುವುದರಿಂದ ಶ್ವಾಸನಳಿಕೆಯಲ್ಲಿ ಅಂಟಿಕೊಂಡಿರುವ ಕಫವನ್ನು ತೊಲಗಿಸಲು ನೆರವಾಗುತ್ತದೆ. ದಿನಕ್ಕೊಂದು ಲೋಟದಲ್ಲಿ ಅರ್ಧಲಿಂಬೆಯಷ್ಟು ಲಿಂಬೆರಸವನ್ನು ಕುಡಿಯುವುದು ಶ್ರೇಯಸ್ಕರ. ಜೊತೆಗೇ ಗಂಟಲಿನ ಇತರ ತೊಂದರೆಗಳಾದ ಕೆಮ್ಮು, ನೆಗಡಿ, ಗಂಟಲ ಕೆರೆತ ಮೊದಲಾದ ತೊಂದರೆಗಳೂ ನಿವಾರಣೆಯಾಗುತ್ತದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿರುವ ಪ್ರತಿಜೀವಕ (antibiotic) ಹಾಗೂ ವೈರಸ್ ಜೀವಕ (anti-viral) ಗುಣಗಳು ಬ್ರಾಂಖೈಟಿಸ್ ರೋಗವನ್ನು ನಿಯಂತ್ರಣದಲ್ಲಿಡಲೂ ನೆರವಾಗುತ್ತದೆ. ಇದಕ್ಕಾಗಿ ಕೆಲವು ಬೆಳ್ಳುಳ್ಳಿಯ ಎಸಳುಗಳನ್ನು ಸುಲಿದು ಜಜ್ಜಿ ಒಂದು ಲೋಟ ಹಾಲಿನಲ್ಲಿ ಕುದಿಸಿ. (ಒಂದು ಲೋಟಕ್ಕೆ ಸುಮಾರು ಆರರಿಂದ ಎಂಟು ಎಸಳುಗಳ ಪ್ರಮಾಣದಲ್ಲಿ). ಈ ಬಿಸಿಹಾಲನ್ನು ಮಲಗುವ ಮುನ್ನ ಕುಡಿಯುವುದರಿಂದ ಶೀಘ್ರವೇ ಬ್ರಾಂಖೈಟಿಸ್ ನಿಯಂತ್ರಣಕ್ಕೆ ಬರುತ್ತದೆ.

ಶುಂಠಿ

ಶೀತಕ್ಕೆ ರಾಮಬಾಣವಾಗಿರುವ ಶುಂಠಿ (ಹಸಿ ಅಥವಾ ಒಣಶುಂಠಿ) ಬ್ರಾಂಖೈಟಿಸ್ ಗೂ ಉತ್ತಮ ಪರಿಹಾರವಾಗಿದೆ. ಶುಂಠಿಯ ಸೇವನೆಯಿಂದ ಶ್ವಾಸನಳಿಕೆಗಳ ಕವಲುಗಳಲ್ಲಿ ಸೋಂಕು ಉಂಟಾಗಿದ್ದರೆ ಅದನ್ನು ನಿವಾರಿಸುತ್ತದೆ. ಜೊತೆಗೇ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ದೇಹ ಸ್ವಾಭಾವಿಕವಾಗಿ ಈ ರೋಗದ ವಿರುದ್ದ ಹೋರಾಡಲು ಹೆಚ್ಚು ಸಮರ್ಥವಾಗುತ್ತದೆ. ಇದಕ್ಕಾಗಿ ಸುಮಾರು ಅರ್ಧ ಇಂಚು ಹಸಿಶುಂಟಿಯನ್ನು ಅಥವಾ ಒಂದು ಚಿಕ್ಕ ಚಮಚ ಶುಂಠಿಯ ಪುಡಿಯನ್ನು ನಿಮ್ಮ ಚಹಾದಲ್ಲಿ ಮಿಶ್ರಣ ಮಾಡಿ ಸಕ್ಕರೆಯ ಬದಲಿಗೆ ಜೇನನ್ನು ಸೇರಿಸಿ ದಿನಕ್ಕೆರಡು ಲೋಟ ಕುಡಿಯಿರಿ.

ಸಾಸಿವೆ

ಒಗ್ಗರಣೆಗೆ ಉಪಯೋಗಿಸುವ ಸಾಸಿವೆಯೂ ಬ್ರಾಂಕೈಟಿಸ್ ರೋಗ ನಿವಾರಣೆಗೆ ಸಹಕರಿಸಬಲ್ಲದು. ಇದಕ್ಕಾಗಿ ಮೊದಲು ಸುಮಾರು ಇನ್ನೂರು ಗ್ರಾಂ ಸಾಸಿವೆಯನ್ನು ನುಣ್ಣಗೆ ಅರೆದು ನೀರಿನೊಂದಿಗೆ ಮಿಶ್ರಣ ಮಾಡಿಕೊಳ್ಳಿ. ಸುಮಾರು ದೋಸೆಹಿಟ್ಟಿನ ಹದಕ್ಕೆ ಬಂದ ಬಳಿಕ ಸ್ವಚ್ಛವಾದ ಒಂದು ಬಟ್ಟೆಯ ಅರ್ಧಭಾಗದ ಮೇಲೆ ಸವರಿ ಇನ್ನರ್ಧಭಾಗವನ್ನು ಮೇಲೆ ಮಡಚಿ. ಲೇಪನ ಬದಿಗಳಿಂದ ಸೋರಿ ಹೋಗದಂತೆ ಬಟ್ಟೆಯನ್ನು ಒಂದು ಸ್ಟಾಪ್ಲರ್ ನಿಂದ ಬಂಧಿಸಿ. ಈ ವ್ಯವಸ್ಥೆಗೆ ಸಾಸಿವೆ ಪ್ಲಾಸ್ಟರ್ (mustard plaster) ಎಂದು ಕರೆಯುತ್ತಾರೆ. ಚಿಕಿತ್ಸೆಗೆ ಮುನ್ನ ಸ್ವಲ್ಪ ಆಲಿವ್ ಎಣ್ಣೆಯನ್ನು ರೋಗಿಯ ಎದೆಗೆ ಸವರಿ ಈ ಪ್ಲಾಸ್ಟರ್ ಅನ್ನು ಎದೆಯ ಮೇಲೆ ಹರಡಿ. ಎದೆ ಸ್ವಲ್ಪ ಬಿಸಿಯಾಗುವ ಮತ್ತು ಉರಿಯುವ ಅನುಭವವಾಗುತ್ತದೆ. ರೋಗಿಗೆ ಈ ಅವಧಿಯಲ್ಲಿ ಸಾಕಷ್ಟು ಕುಡಿಯಲು ನೀರು ಮತ್ತು ಹಣ್ಣಿನ ರಸಗಳನ್ನು ನೀಡಿ (ವಿಟಮಿನ್ ಸಿ ರಸಗಳು ಉತ್ತಮ). ಸುಮಾರು ಅರ್ಧ ಘಂಟೆ ಅಥವಾ ಒಂದು ಘಂಟೆ (ರೋಗಿಗೆ ಅನುಕೂಲವಾದಷ್ಟು ಕಾಲ) ಈ ಪ್ಲಾಸ್ಟರ್ ಹಾಗೇ ಇರಲಿ. ಒಂದು ವೇಳೆ ರೋಗಿಯ ಚರ್ಮ ಹೆಚ್ಚು ಸಂವೇದಿಯಾಗಿದ್ದು ಉರಿ ಎನಿಸಿದರೆ ತಕ್ಷಣ ತೆಗೆದುಬಿಡಿ. ನೆನಪಿಡಿ, ಈ ಚಿಕಿತ್ಸೆ ಮಕ್ಕಳಿಗೆ, ಗರ್ಭಿಣಿಯರಿಗೆ ಮತ್ತು ವೃದ್ಧರಿಗೆ ಸೂಕ್ತವಲ್ಲ. ಈ ಚಿಕಿತ್ಸೆ ವಾರಕ್ಕೆರಡು ಬಾರಿ ನಡೆಸುವುದರಿಂದ ಉತ್ತಮ ಪರಿಣಾಮ ನಿರೀಕ್ಷಿಸಬಹುದು.

ನೀಲಗಿರಿ ಎಣ್ಣೆ

ನೀಲಗಿರಿ ಎಣ್ಣೆಯಲ್ಲಿರುವ ಜೀವಿರೋಧಿ (antibacterial) ಗುಣಗಳು ಬ್ರಾಂಖೈಟಿಸ್ ನಿವಾರಣೆಗೆ ನೆರವಾಗುತ್ತದೆ. ಇದರಿಂದ ತಡೆಗೊಂಡಿದ್ದ ಶ್ವಾಸಕೊಳವೆಯ ಕವಲುಗಳು ತೆರೆದು ಉಸಿರಾಟ ಸರಾಗವಾಗುತ್ತದೆ. ಇದಕ್ಕಾಗಿ ಒಂದು ಲೋಟ ನೀರನ್ನು ಕುದಿಸಿ ಕೆಲವು ತೊಟ್ಟು ನೀಲಗಿರಿ ಎಣ್ಣೆಯನ್ನು ಚಿಮುಕಿಸಿ. ಈಗ ನೀರಿನ ಮೇಲಿನಿಂದ ಆವಿಯಾಗಿ ಬರುವ ನೀಲಗಿರಿ ಎಣ್ಣೆಯ ಹಬೆಯನ್ನು ಮೂಗಿನಿಂದ ಉಸಿರಾಡಿ. ಹೆಚ್ಚು ಪರಿಣಾಮಕ್ಕಾಗಿ ತಲೆಯನ್ನು ಒಂದು ದಪ್ಪನೆಯ ಟವೆಲ್ ಅಥವಾ ಬಟ್ಟೆಯಿಂದ ಆವರಿಸಿ ಹಬೆ ವ್ಯರ್ಥವಾಗದಂತೆ ನೋಡಿಕೊಳ್ಳಿ. ಒಂದೆರಡು ನಿಮಿಷಗಳ ಕಾಲ ಸತತವಾಗಿ ಹಬೆಯನ್ನು ಉಸಿರಾಡಿ. ವಾರಕ್ಕೆರಡು ಅಥವಾ ಮೂರು ಬಾರಿ ಈ ಚಿಕಿತ್ಸೆಯನ್ನು ಪುನರಾವರ್ತಿಸುವುದರಿಂದ ಉತ್ತಮ ಪರಿಣಾಮ ದೊರಕುತ್ತದೆ.

ಸಾವೋರಿ (Savory)

ಸಾವೋರಿ ಎಂಬ ಹೆಸರಿನ ಗಿಡಮೂಲಿಕೆ ಬ್ರಾಂಖೈಟಿಸ್ ಗೆ ಆಯುರ್ವೇದ ಸೂಚಿಸುವ ಚಿಕಿತ್ಸೆಯಾಗಿದೆ. ಇದರಿಂದ ಶ್ವಾಸಕೋಶಗಳಲ್ಲಿ ಶೇಖರವಾಗಿದ್ದ ಕಫ ಕರಗಿ ಉಸಿರಾಟ ಸರಾಗವಾಗುತ್ತದೆ. ಒಂದು ಲೋಟ ಕುದಿಯುವ ನೀರಿಗೆ ಅರ್ಧ ಚಮಕ್ಕಿಂತಲೂ ಕಡಿಮೆ ಪ್ರಮಾಣದ ಒಣಎಲೆಗಳ ಪುಡಿ ಸೇರಿಸಿ ಕುಡಿಯಿರಿ. ದಿನಕ್ಕೊಂದು ಲೋಟ ಬ್ರಾಂಖೈಟಿಸ್ ಗೆ ಉತ್ತಮ ಪರಿಹಾರ ನೀಡಬಲ್ಲುದು. ಅರಿಶಿನ (turmeric)

ಅರಿಶಿನದ ಉರಿಯೂತ ನಿವಾರಕ (anti-inflammatory) ಗುಣಗಳು ಬ್ರಾಂಖೈಟಿಸ್ ನಿವಾರಣೆಗೂ ನೆರವಾಗುತ್ತವೆ. ಮೊದಲಾಗಿ ಅರಿಶಿನ ಕೆಮ್ಮಿಗೆ ಕಾರಣವಾದ ಕ್ರಿಮಿಗಳನ್ನು ಕೊಂದು ಕಫ ನಿವಾರಿಸುವ ಮೂಲಕ ಶ್ವಾಸಕೋಶದ ಮೇಲೆ ಬೀಳುವ ಒತ್ತಡವನ್ನು ಕಡಿಮೆಗೊಳಿಸುತ್ತದೆ. ಇದಕ್ಕಾಗಿ ಒಂದು ಲೋಟ ಹಾಲಿಗೆ ಒಂದು ಟೀ ಚಮಚ ಅರಿಶಿನದಪುಡಿ ಸೇರಿಸಿ ದಿನಕ್ಕೆ ಮೂರು ಬಾರಿ ಖಾಲಿಹೊಟ್ಟೆಯಲ್ಲಿ ಕುಡಿಯಿರಿ. ಸುಮಾರು ಮುಕ್ಕಾಲು ಘಂಟೆಯ ಬಳಿಕ ನಿಮ್ಮ ನಿತ್ಯದ ಆಹಾರಗಳನ್ನು ಸೇವಿಸಿ. ಒಂದು ವೇಳೆ ನಿಮಗೆ ಅಲ್ಸರ್, ಮೂತ್ರಕೋಶದಲ್ಲಿ ಕಲ್ಲುಜಾಂಡೀಸ್ ಮತ್ತು ಹುಳಿತೇಗಿನ ತೊಂದರೆ ಇದ್ದರೆ ಈ ಚಿಕಿತ್ಸೆ ಅನುಸರಿಸಬೇಡಿ.

ಉಪ್ಪುನೀರು

ದಿನಕ್ಕೆ ಹಲವು ಬಾರಿ ಉಪ್ಪುನೀರಿನಲ್ಲಿ ಬಾಯಿ ಮುಕ್ಕಳಿಸಿ. ಸಾಧ್ಯವಾದಷ್ಟು ಮೇಲಕ್ಕೆ ತಲೆ ಎತ್ತಿ ಗಳಗಳ ಮಾಡಿ. ಇದರಿಂದ ಕಿರುನಾಲಿಗೆಯ ಬಳಿಕ ಸೋಂಕು ನಿವಾರಣೆಯಾಗಿ ಬ್ರಾಂಖೈಟಿಸ್ ಹತೋಟಿಗೆ ಬರುತ್ತದೆ. ಒಂದು ಲೋಟಕ್ಕೆ ಒಂದು ದೊಡ್ಡ ಚಮಚ ಉಪ್ಪು ಉತ್ತಮ. ಅಯೋಡೈಸ್ಡ್ ಗಿಂತಲೂ ಸಾಮಾನ್ಯ ಕಲ್ಲುಪ್ಪು ಹೆಚ್ಚು ಪರಿಣಾಮಕಾರಿಯಾಗಿದೆ.

ಈರುಳ್ಳಿ

ಈರುಳ್ಳಿ ಸಹಾ ಬ್ರಾಂಖೈಟಿಸ್ ಚಿಕಿತ್ಸೆಗೆ ಪರಿಣಾಮಕಾರಿಯಾಗಿದೆ. ಇದಕ್ಕಾಗಿ ಒಂದು ಹಸಿ ನೀರುಳ್ಳಿಯನ್ನು ಮಿಕ್ಸಿಯಲ್ಲಿ ಸ್ವಲ್ಪವೇ ನೀರು ಸೇರಿಸಿ ನುಣ್ಣಗೆ ಅರೆಯಿರಿ. ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ ಒಂದು ಚಮಚ ಖಾಲಿ ಹೊಟ್ಟೆಯಲ್ಲಿ ಸೇವಿಸಿ.

ಎಪ್ಸಮ್ ಉಪ್ಪು (epsom salt)

ಎಪ್ಸಮ್ ಉಪ್ಪು ಎಂಬ ಹೆಸರಿನಲ್ಲಿ ದೊರಕುವ ಮಗ್ನೇಶಿಯಂ ಸಲ್ಫೇಟ್ ಸಹಾ ಬ್ರಾಂಖೈಟಿಸ್ ನ ಚಿಕಿತ್ಸೆಗೆ ಪರಿಣಾಮಕಾರಿಯಾಗಿದೆ. ಇದರ ಉಪಯೋಗಕ್ಕೆ ಸ್ನಾನದ ಬೋಗುಣಿ (bath tub) ಅವಶ್ಯವಾಗಿದೆ. ಈ ಬೋಗುಣಿಯಲ್ಲಿ ದೇಹ ಮುಳುಗುವಷ್ಟು ನೀರು ತುಂಬಿಸಿ ಸುಮಾರು ಕಾಲು ಕೇಜಿ ಎಪ್ಸಮ್ ಉಪ್ಪು ಸೇರಿಸಿ. ಈ ನೀರಿನಲ್ಲಿ ನಿಮ್ಮ ದೇಹ ಸುಮಾರು ಅರ್ಧ ಘಂಟೆ ಮುಳುಗಿರಲಿ. ಅಷ್ಟೂ ಹೊತ್ತು ಸರಾಗವಾಗಿ ಉಸಿರಾಡಿ. ಈ ಚಿಕಿತ್ಸೆ ಬ್ರಾಂಖೈಟಿಸ್ ಉಲ್ಬಣಗೊಂಡಿದ್ದಾಗ ಮಾತ್ರ ಅನುಸರಿಸಬೇಕು.

ನೀರು ಕುಡಿಯಿರಿ

ದೇಹದ ಎಲ್ಲಾ ಅವಶ್ಯಕತೆಗೆ ನೀರು ಅಗತ್ಯವಿರುವಂತೆ ಬ್ರಾಂಖೈಟಿಸ್ ಗೂ ನೀರು ಉತ್ತಮವಾಗಿದೆ. ಇಡಿಯ ದಿನ ಘಂಟೆಗೊಂದು ಲೋಟ ನೀರು ಕುಡಿಯುತ್ತಿರುವುದರಿಂದ ದೇಹ ನೈಸರ್ಗಿಕವಾಗಿ ಬ್ರಾಂಖೈಟಿಸ್ ವಿರುದ್ದ ಹೋರಾಡಲು ಹೆಚ್ಚು ಸಮರ್ಥವಾಗುತ್ತದೆ.

ದಾಲ್ಚಿನ್ನಿ ಎಲೆ (bay leaf)

ಒಣ ದಾಲ್ಚಿನ್ನಿ ಎಲೆಗಳನ್ನೂ ಬ್ರಾಂಖೈಟಿಸ್ ಚಿಕಿತ್ಸೆಗೆ ಬಳಸಬಹುದು. ಇದಕ್ಕಾಗಿ ಕೆಲವು ದಾಲ್ಚಿನ್ನಿಯ ಒಣ ಎಲೆಗಳನ್ನು ಬಿಸಿನೀರಿನಲ್ಲಿ ಮುಳುಗಿಸಿ ಸುಮಾರು ಒಂದು ನಿಮಿಷದ ಬಳಿಕ ರೋಗಿಯ ಎದೆಯ ಮೇಲೆ ಇಡಿ. ಇದೇ ವೇಳೆ ಹೆಚ್ಚಿನ ಎಲೆಗಳನ್ನು ಬಿಸಿನೀರಿನಲ್ಲಿ ಮುಳುಗಿಸಿಡಿ. ಒಂದು ನಿಮಿಷದ ಬಳಿಕ ಅಥವಾ ಎದೆಯ ಮೇಲಿದ್ದ ಎಲೆಗಳು ತಣ್ಣಗಾದಂತೆ ಈ ಎಲೆಗಳನ್ನು ತೆಗೆದು ಕುದಿನೀರಿನಲ್ಲಿದ್ದ ಎಲೆಗಳನ್ನು ಇಡಿ. ತಣ್ಣಗಿನ ಎಲೆಗಳನ್ನು ಪುನಃ ಬಿಸಿನೀರಿನಲ್ಲಿ ಮುಳುಗಿಸಿ ಈ ಕ್ರಿಯೆಯನ್ನು ಎಂಟರಿಂದ ಹತ್ತು ಬಾರಿ ಪುನರಾವರ್ತಿಸಿ. ವಾರಕ್ಕೆರಡು ಅಥವಾ ಮೂರು ಬಾರಿ ಈ ಚಿಕಿತ್ಸೆ ನಡೆಸಬಹುದು. ಪ್ರತಿದಿನವೂ ಹೊಸ ಎಲೆಗಳನ್ನೇ ಬಳಸಿ.

ಜೇನುತುಪ್ಪ

ಬಿಸಿನೀರಿನಲ್ಲಿ ಜೇನು ಸೇರಿಸಿ ಕುಡಿಯುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಜೇನಿನ ಪ್ರತಿಜೀವಕ (antibiotic) ಹಾಗೂ ವೈರಸ್ ಜೀವಕ (anti-viral) ಗುಣಗಳು ರೋಗ ನಿವಾರಣೆಗೆ ನೆರವಾಗುತ್ತವೆ. ಪ್ರತಿದಿನದ ನಿಮ್ಮ ಟೀಯಲ್ಲಿ ಸಕ್ಕರೆ ಬದಲಿಗೆ ಜೇನು ಸೇವಿಸಿ ಕುಡಿಯುವ ಮೂಲಕವೂ ಜೀವನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು.

ಬಾದಾಮಿ

ಬಾದಾಮಿಯಲ್ಲಿರುವ ಮೆಗ್ನೀಶಿಯಂ, ಕಾಲ್ಸಿಯಂ ಮತ್ತು ಪೊಟ್ಯಾಶಿಯಂ ಬ್ರಾಂಖೈಟಿಸ್ ನಿವಾರಣೆಗೆ ನೆರವಾಗುತ್ತವೆ. ಪ್ರತಿದಿನ ರಾತ್ರಿ ಮಲಗುವ ಮುನ್ನ ನಾಲ್ಕರಿಂದ ಆರು ಬಾದಾಮಿಗಳನ್ನು ತಿಂದು ಬಿಸಿಹಾಲು ಕುಡಿದು ಮಲಗುವ ಮೂಲಕ ಆರೋಗ್ಯ ಉತ್ತಮಗೊಳ್ಳುತ್ತ

ಎಳ್ಳು ಮತ್ತು ಅಗಸೆ ಬೀಜಗಳು

ಸಮಪ್ರಮಾಣದಲ್ಲಿ ಬಿಳಿಎಳ್ಳು ಮತ್ತು ಅಗಸೆ ಬೀಜಗಳನ್ನು ದಪ್ಪನಾಗಿ ಅರೆದು ಸ್ವಲ್ಪ ಜೇನುತುಪ್ಪ ಮತ್ತು ಚಿಟಿಕೆಯಷ್ಟು ಉಪ್ಪು ಸೇರಿಸಿ ಪ್ರತಿದಿನ ರಾತ್ರಿ ಮಲಗುವ ಮುನ್ನ ಒಂದು ಚಮಚ ಸೇವಿಸುವುದರಿಂದ ಬ್ರಾಂಖೈಟಿಸ್ ಶೀಘ್ರ ಹತೋಟಿಗೆ ಬರುತ್ತದೆ.

ಮೂಲ : ಬೋಲ್ಡ್ ಸ್ಕೈ

ಕೊನೆಯ ಮಾರ್ಪಾಟು : 4/17/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate