অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

‘ಬಾಂಬ್ ಇಟ್ಟಿದ್ದು ನಾನೇ!’ ಎಂದ ಮನೋರೋಗಿ

‘ಬಾಂಬ್ ಇಟ್ಟಿದ್ದು ನಾನೇ!’ ಎಂದ ಮನೋರೋಗಿ

-ಡಾ. ಪ್ರಶಾಂತ್ ಎನ್.ಆರ್.

ಮನೋರೋಗಿಗಳೆಂದರೆ ಹುಚ್ಚು, ತಿಕ್ಕಲು, ಲೂಸು, ಕ್ರ್ಯಾಕು ಎಂದೆಲ್ಲಾ ಸಮಾಜ ಅಡ್ಡ ಹೆಸರಿಟ್ಟಿದೆ. ಬೇರಾವ ರೋಗಿಗಳಿಗೂ ಈ ವಿಧ ಹೆಸರಿಂದ ಗುರುತಿಸಿಕೊಳ್ಳುವ ಭಾಗ್ಯ ಇಲ್ಲ! ಮನೋರೋಗಿಗಳು ತಮ್ಮದೇ ಲೋಕದಲ್ಲಿ ಕಳೆದುಹೋಗಿರುತ್ತಾರೆ; ಭ್ರಮೆಗಳಲ್ಲಿ ಮುಳುಗಿರುತ್ತಾರೆ; ಸುತ್ತಮುತ್ತಲ ಘಟನೆಗಳ ಪರಿವೇ ಇರುವುದಿಲ್ಲ ಎಂದೆಲ್ಲ ಸಮಾಜ ನಂಬುತ್ತದೆ. ಎಲ್ಲಾ ಸಂದರ್ಭಗಳಲ್ಲೂ ಇದು ಸತ್ಯವಲ್ಲ. ಮನೋರೋಗಿಗಳೂ ಸಾಮಾನ್ಯ ಮನುಷ್ಯರಷ್ಟೇ ಸುತ್ತಮುತ್ತಲನ್ನು ಗಮನಿಸುತ್ತಿರುತ್ತಾರೆ. ಆದರೆ ಅವರ ಖಾಯಿಲೆಯ ಕಾರಣದಿಂದ ಘಟನೆಗಳು ಬೇರೆ ರೀತಿಯಲ್ಲಿ ಕಾಣಬಹುದು. (ಉದಾ: ಯಾರಾದರೂ ಬೀದಿಯಲ್ಲಿ ಉಗುಳಿದರೆ ಮನೋರೋಗಿಯೊಬ್ಬ ನನ್ನನ್ನು ಅವಮಾನಿಸಲೆಂದೇ ಹಾಗೆ ಉಗಿದಿದ್ದು ಎಂದು ಭಾವಿಸಬಹುದು) ಅಥವಾ ಅವರು ಖಾಯಿಲೆಯ ಕಾರಣದಿಂದ ಅಸಹಜವಾಗಿ ಪ್ರತಿಕ್ರಿಯಿಸಬಹುದು. ಮನೋರೋಗಿಯೊಬ್ಬನ ಇಂತಹ ಅಸಹಜ ಪ್ರತಿಕ್ರಿಯೆ ಸಮಾಜದಲ್ಲಿ ಹೊಸ ಗೊಂದಲ ಹುಟ್ಟು ಹಾಕಬಹುದು!
ಒಂದು ನಗರ. ಅಲ್ಲಿನ ಮನೋವೈದ್ಯರ ಬಳಿ ತಾಯಿಯೊಬ್ಬಳು ತನ್ನ 17 ವರ್ಷದ ಮಗನನ್ನು ಕರೆತಂದಳು. ಕಾಲೇಜಿನಿಂದ ‘ಇವನನ್ನು ಮನೋವೈದ್ಯರಿಗೆ ತೋರಿಸಿ’ ಎಂದು ವಾಪಸ್ಸು ಕಳಿಸಿದ್ದಾರೆ. ಈತ ನೋಡಿದರೆ ಓದಿನ ಬಗ್ಗೆ ಗಮನಿಸದೆ ಏನೇನೋ ವಿಚಿತ್ರವಾಗಿ ಮಾತನಾಡುತ್ತಿದ್ದಾನೆ ಎಂದು ತಾಯಿಯ ಕೊರಗು.
ಪಿಯುಸಿ ವಿದ್ಯಾರ್ಥಿ. ಒಬ್ಬನೇ ಮಗ. ತಂದೆ ಸಣ್ಣ ವ್ಯಾಪಾರಸ್ಥ. ತಾಯಿ ಗೃಹಿಣಿ. ಚಿಕ್ಕಂದಿನಿಂದ ಈತ ಓದಿನಲ್ಲಿ ಜಾಣ. ನಾಚಿಕೆ ಸ್ವಭಾವ. ಆದರೂ ಸ್ನೇಹಿಜೀವಿ. ಮಗನನ್ನು ಚೆನ್ನಾಗಿ ಓದಿಸಿ ಒಳ್ಳೇ ಉದ್ಯೋಗ ಗಿಟ್ಟಿಸಿಕೊಂಡರೆ ನಮ್ಮ ಬಡತನದ ಜೀವನ ಮುಗಿಯುತ್ತದೆ ಎಂದು ತಂದೆ-ತಾಯಿಯ ಕನಸು. ಇವನೂ ಅವರ ಆಸೆ, ಕನಸು ಚಿಗುರುವಂತೆ ಪ್ರತಿ ಕ್ಲಾಸಿನಲ್ಲೂ ಚೆನ್ನಾಗಿ ಓದುತ್ತಲೇ  ಇದ್ದ.
ಮೂರು ತಿಂಗಳ ಹಿಂದೆ ಸಮಸ್ಯೆ ಉದ್ಭವವಾಯಿತು. ಒಂದು ದಿನ ಇವನಿಗೆ ಒಂದು ಕನಸು ಬಿತ್ತು. ಕೋತಿಯೊಂದು ಕನಸಿನಲ್ಲಿ ಬಂದು ದೇಶಭಕ್ತಿಯ ಅವಶ್ಯಕತೆ, ದೇಶಕ್ಕಾಗಿ ಇವನು ಮಾಡಬೇಕಾದ ತ್ಯಾಗ, ಬಲಿದಾನ, ಕರ್ತವ್ಯಗಳ ಬಗ್ಗೆ ಹೇಳಿದಂತೆ ಕಂಡಿತು. ಅಷ್ಟೆ ಅಲ್ಲದೇ ಆ ಕೋತಿ ವಿಕ್ರಮಾದಿತ್ಯನಿಗೆ ಬೇತಾಳ ಹೇಳಿದಂತೆ ‘ನೀನು ದೇಶ ಸೇವೆ ಮಾಡದಿದ್ದರೆ ಮೆಂಟಲ್ ಆಗಿ ಬಿಡ್ತೀಯ’ ಎಂದು ಬೆದರಿಸಿತು. ನಿದ್ದೆಯಿಂದೆದ್ದ ಈ ಹುಡುಗ ಕೋತಿಯ ಸಲಹೆಗಳನ್ನು ಕಾರ್ಯರೂಪಕ್ಕಿಳಿಸಲು ಸಜ್ಜಾದ!
ಮರುದಿನದಿಂದ ಈತ ಏಕಾಏಕಿ ರಾಷ್ಟ್ರಭಕ್ತನಾಗಿಬಿಟ್ಟ. ಎಲ್ಲ ಸ್ನೇಹಿತರ ಜೊತೆ ರಾಷ್ಟ್ರದ್ದೇ ಮಾತು. ರಾಷ್ಟ್ರಕ್ಕೆ ಆಘಾತ ಮಾಡುತ್ತಿರುವ ಆತಂಕವಾದದ ಬಗ್ಗೆ ಚರ್ಚೆ ಮಾಡಲು ಪ್ರಾರಂಭಿಸಿದ. ಬರೀ ಸ್ನೇಹಿತರ ಜೊತೆ ಅಲ್ಲದೇ, ಅಧ್ಯಾಪಕರಿಗೂ ತರಗತಿಯ ಮಧ್ಯದಲ್ಲಿ ರಾಷ್ಟ್ರದ ಸಮಸ್ಯೆಗಳ ಬಗ್ಗೆ, ಪರಿಹಾರಗಳ ಬಗ್ಗೆ ಪ್ರಶ್ನೆ ಕೆಳಲು ಪ್ರಾರಂಬಿಸಿದ. ಕಾಲೇಜಿನ ಭದ್ರತೆ ಬಗ್ಗೆಯೂ ಕಾಳಜಿ ವಹಿಸಿದ. ಕಾಲೇಜಿನ ಭದ್ರತೆ ಬಿಗಿಪಡಿಸಬೇಕೆಂದು ಪ್ರಾಂಶುಪಾಲರಲ್ಲಿ ದೂರಿದ. ಅವರ ಜೊತೆ ಚರ್ಚೆಗಿಳಿದ. ತನ್ನ ಸಲಹೆಗಳನ್ನು ಜಾರಿಗೊಳಿಸಲೇಬೇಕೆಂದು ಹಠ ಹಿಡಿದ. ಚಳವಳಿ ಮಾಡುತ್ತೇನೆಂದು ಬೆದರಿಸಿದ. ಇವನ ಕಳಕಳಿ ಎಲ್ಲಗೂ ಸರಿ ಎನ್ನಿಸಿದರೂ, ಇವನು ಅತೀ ಹಠ ಮಾಡುತ್ತಿರುವುದು, ಅವಸರ ಮಾಡುತ್ತಿರುವುದು, ಓದನ್ನು ನಿರ್ಲಕ್ಷಿಸಿ ಇದೇ ಚಿಂತನೆಯಲ್ಲಿರುವುದು ಎಲ್ಲರಿಗೂ ಕಿರಿಕಿರಿಯಾಗ ತೊಡಗಿತು. ಪ್ರಾಂಶುಪಾಲ ಇವನನ್ನು ಮನೋವೈದ್ಯರಲ್ಲಿ ತೋರಿಸಲು ಫೋನಿನ ಮೂಲಕ ತಂದೆ-ತಾಯಿಗಳಿಗೆ ಸೂಚನೆ ಕೊಟ್ಟರು.
ಮನೆಗೆ ಬಂದ ಈತ ತಾಯಿಗೆ ನಾನು ಕಾಲೇಜು ಬಿಟ್ಟು ಬಿಡುತ್ತೇನೆ. ಪೊಲೀಸ್ ಕೆಲಸಕ್ಕೆ ಸೇರಿ ಭಯೋತ್ಪಾದಕರನ್ನು ಬಲಿ ಹಾಕುತ್ತೇನೆ ಎಂದೆಲ್ಲ ಬಡಬಡಿಸಿದ. ದಿನವೆಲ್ಲ ಇದೇ ಮಾತು. ಮನೆಯಲ್ಲೂ ಸದಾ ಟಿವಿ ನೋಡುತ್ತಿದ್ದ. ಯಾವಾಗಲೂ ಭಯೋತ್ಪಾದನೆ ಸುದ್ದಿಯನ್ನೇ ಕೇಳುತ್ತಿದ್ದ. ಬಿಟ್ಟರೆ ಅಪರಾಧದ ಸುದ್ದಿಗಳು, ಇನ್ನು ಕೆಲವೇ ದಿನಗಳಲ್ಲಿ ಇವೆಲ್ಲಕ್ಕೂ ಅಂತ್ಯ ಬೀಳುತ್ತದೆ. ನಾನೇ ಇವೆಲ್ಲವನ್ನೂ ನಿವಾರಿಸುತ್ತೇನೆ ಎಂದ. ರಾತ್ರಿಯೆಲ್ಲ ಮಲಗುತ್ತಲೇ ಇರಲಿಲ್ಲ.
ಈ ವಿಚಿತ್ರ ನಡವಳಿಕೆ ನೋಡಿ ಅವನ ತಂದೆ-ತಾಯಿ ಅವನನ್ನು ಮನೋ ವೈದ್ಯರಲ್ಲಿಗೆ ಕರೆ ತಂದರು. ವೈದ್ಯರ ಬಳಿ ತಾನು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಭಯೋತ್ಪಾದನೆ ನಿವಾರಿಸುವ ಬಗ್ಗೆ ಚರ್ಚಿಸಲು ಯತ್ನಿಸುತ್ತಿರುವುದಾಗಿ ಹೇಳಿದ. ಇವನ ಎಲ್ಲ ವರ್ತನೆ ಗಮನಿಸಿದ ವೈದ್ಯರು ಇವನಿಗೆ ಮನೋರೋಗವಾಗಿದೆಯೆಂದು ನಿರ್ಧರಿಸಿ ಔಷಧಿ ಬರೆದುಕೊಟ್ಟರು. ಈತ ಮೂರು ದಿನದ ನಂತರ ಔಷಧಿ ಉಪಯೋಗಿಸಲೇ ಇಲ್ಲ.
ಈ ಮಧ್ಯೆ ಇವನು ಪೊಲೀಸ್ ಕಮಿಷನರ್ ಕಚೇರಿಗೆ ಹೋದ. ಸಿಬಿಐ ಆಫೀಸಿಗೆ ಹೋದ. ನನ್ನನ್ನು ಕೆಲಸಕ್ಕೆ ಸೇರಿಸಿಕೊಳ್ಳಿ, ಭಯೋತ್ಪಾದಕರನ್ನು ಹಿಡಿಯಲು ಸಹಾಯ ಮಾಡುತ್ತೇನೆಂದ. ಅವರು ಇವನನ್ನು ಬೈದು ಕಳಿಸಿದರು.  ಇದೇ ಸಮಯದಲ್ಲಿ ನಗರದಲ್ಲಿ ಒಂದು ಬಾಂಬ್ ಸ್ಫೋಟವಾಯಿತು.  ಅಪರಾಧಿಗಳು ಪತ್ತೆಯಾಗಲಿಲ್ಲ. ಪೊಲೀಸರು ಅಪರಾಧಿಗಳನ್ನು ಹಿಡಿಯಲು ಹರ ಸಾಹಸ ಶುರು ಮಾಡಿದರು. ಇವನು ಪೊಲೀಸ್ ಕಮಿಷನರ್‌ಗೆ  ‘ಬಾಂಬ್ ಇಟ್ಟಿದ್ದು ನಾನೇ’ ಎಂದು ಟ್ವೀಟ್ ಮಾಡಿದ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಇವನನ್ನು ಪತ್ತೆ ಹಚ್ಚಿ ಬಂಧಿಸಿದರು. ನಿಜವಾದ ಅಪರಾಧಿಗಳನ್ನು ಹಿಡಿಯಲು ಶ್ರಮಿಸುತ್ತಿದ್ದ ಪೊಲೀಸರಿಗೆ, ಇವನು ಮನೋರೋಗಿ, 17 ವರ್ಷದ ಹುಡುಗ ಎಂದು ತಿಳಿದಾಗ ನಿರಾಸೆಯಾಯಿತು. ಆದರೂ ಕಾನೂನು ರೀತ್ಯ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಇವನಿಗೆ ಚಿಕಿತ್ಸೆ ಕೊಡಿಸಿ ಎಂದು ನಿರ್ದೇಶಿಸಿ, ಇವನನ್ನು ದೋಷಮುಕ್ತ ಎಂದು ನ್ಯಾಯಾಧೀಶರು ಘೋಷಿಸಿದರು.
ಹದಿವಯಸ್ಸು ಮನೋರೋಗಕ್ಕೆ ಹೆಚ್ಚು ಬಲಿಯಾಗುತ್ತದೆ. ಈತ ಕೋತಿ ಕನಸಿನ ಪ್ರಭಾವಕ್ಕೆ ಸಿಲುಕಿ ಹೀಗೆಲ್ಲ ನಡೆದುಕೊಂಡಿದ್ದ. ನನ್ನನ್ನು ಅ್ಞಠಿಜಿ ಛ್ಟ್ಟಿಟ್ಟಜಿಠಿ ಟ್ಠಿಗೆ ಸೇರಿಸಿಕೊಳ್ಳದಿದ್ದರಿಂದ ಹೀಗೆಲ್ಲ ಮಾಡಿದೆ ಎಂದು ಸಮಜಾಯಿಷಿ ಕೊಟ್ಟ.
ಸಮಾಜವು ಹತ್ತಾರು ಸಂಘರ್ಷಗಳಲ್ಲಿ ಸಿಲುಕಿದಾಗ (ಉದಾ: ಯುದ್ಧ, ಚುನಾವಣೆ, ಕೋಮು ಘರ್ಷಣೆ, ಪ್ರಾಕೃತಿಕ ಪ್ರಕೋಪಗಳು ಇತ್ಯಾದಿ) ಇದಕ್ಕೆ ಮನೋರೋಗಿಗಳೂ ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯಿ ಸುತ್ತಾರೆ. ಇವರ ವರ್ತನೆ ಈ ಮೇಲಿನ ಉದಾಹರಣೆಯಂತೆ ಪ್ರಹಸನವೂ ಆಗಬಹುದು ಅಥವಾ ಸಮಸ್ಯೆ ಉಲ್ಬಣವಾಗಬಹುದು. ಮನೋರೋಗಿಯೊಬ್ಬ ಪೂಜಾ ಸ್ಥಳದಲ್ಲಿ ಮಾಂಸ ಹಾಕಿದರೆ, ವಿಗ್ರಹ ಭಂಜನೆ ಮಾಡಿದರೆ ಹೊಸದೊಂದು ಕೋಮುಗಲಭೆಯೇ ಉದ್ಭವಿಸಬಹುದು.
ಮನೋರೋಗಿಗಳು ಪರಿಣಾಮಗಳ ಪರಿವೆ ಇಲ್ಲದೆ ಮಾಡುವ ಕುಕೃತ್ಯಗಳ ಬಗ್ಗೆ ಸಮಾಜ ಜಾಗರೂಕವಾಗಿದ್ದು, ಅವರನ್ನು ಶಿಕ್ಷಿಸದೆ, ಚಿಕಿತ್ಸೆಗೊಳಪಡಿಸಿ, ಸಮಾಜದ ಶಾಂತಿಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ.

ಮೂಲ: ವಿಕ್ರಮ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate