ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ನಿದ್ರಾಹೀನತೆ

ಇನ್ಸೋಮ್ನಿಯಾ… ಅಂದರೆ ಅತಿಯಾದ ನಿದ್ರಾಹೀನತೆ. ಈ ಸಮಸ್ಯೆ ಹಲವರನ್ನು ಕಾಡುತ್ತದೆ.

ಇನ್ಸೋಮ್ನಿಯಾ… ಅಂದರೆ ಅತಿಯಾದ ನಿದ್ರಾಹೀನತೆ. ಈ ಸಮಸ್ಯೆ ಹಲವರನ್ನು ಕಾಡುತ್ತದೆ. ಕೆಲವರಿಗಂತೂ, ಮಾನಸಿಕ ಮತ್ತು ದೈಹಿಕವಾಗಿ ಎಷ್ಟೇ ಸುಸ್ತಾಗಿದ್ದರೂ ರಾತ್ರಿ ನಿದ್ದೆ ಬಾರದು. ಅತಿಯಾದ ಒತ್ತಡ, ತಲೆಬಿಸಿ, ಯೋಚನೆಗಳೇ ಇದಕ್ಕೆ ಮುಖ್ಯಕಾರಣ. ಅಷ್ಟೇ ಅಲ್ಲದೆ ಸೇವಿಸುವ ಆಹಾರದಲ್ಲಿ ಕ್ರಮಬದ್ಧತೆ ಇಲ್ಲದಿರುವುದೂ ನಿದ್ರಾಹೀನತೆಗೆ ಕಾರಣವಾಗಬಹುದು ಎಂಬುದು ತಜ್ಞರ ಅಭಿಪ್ರಾಯ. ಈ ಅತಿಯಾದ ನಿದ್ರಾಹೀನತೆಯಿಂದ ವ್ಯಕ್ತಿ ಪಾರ್ಶ್ವವಾಯುವಿಗೆ ತುತ್ತಾಗುವ ಸಂಭವ ಹೆಚ್ಚು ಎಂಬುದನ್ನು ಇತ್ತೀಚಿನ ಸಂಶೋಧನೆಯೊಂದು ಬಯಲುಮಾಡಿದೆ.

ಮೊದಲೆಲ್ಲ ತೀರಾ ವಯಸ್ಸಾದವರಲ್ಲಿ ಕಾಣಿಸಿಕೊಳ್ಳುತ್ತಿದ್ದ ಪಾರ್ಶ್ವವಾಯುವಿನ ಸಮಸ್ಯೆ ಇದೀಗ 18-35 ವರ್ಷದ ಒಳಗಿನ ಯುವಕರಲ್ಲೂ ಕಾಣಿಸಿಕೊಳ್ಳತೊಡಗಿದೆ. ಯುವ ಜನರಲ್ಲಿ ಈ ಸಮಸ್ಯೆ ಕಾಡುವುದಕ್ಕೆ ಪ್ರಮುಖವಾಗಿ ನಿದ್ರಾಹೀನತೆಯೇ ಕಾರಣ ಎಂಬುದು ಇತ್ತೀಚಿನ ಸಂಶೋಧನೆಯಿಂದ ತಿಳಿದುಬಂದ ಅಂಶ. ನಿದ್ರಾಹೀನತೆಯ ಸಮಸ್ಯೆ ಇರುವವರಿಗೆ ಮಧುಮೇಹದ ಸಮಸ್ಯೆಯೂ ಇದ್ದರಂತೂ ಅಂಥವರಲ್ಲಿ ಪಾರ್ಶ್ವಾಘಾತದ ಸಾಧ್ಯತೆಗಳು ಹೆಚ್ಚು.

ನಿದ್ದೆಗೆಡುವುದರಿಂದ ಸಹಜವಾಗಿಯೇ ರಕ್ತದೊತ್ತಡ ಹೆಚ್ಚುತ್ತದೆ. ಅಲ್ಲದೆ ಮನಸ್ಸು ವಿವಿಧ ಯೋಚನೆಗಳಿಂದ ವಿಕಾರಗೊಂಡು ಕ್ರೋಧಗೊಳ್ಳುತ್ತದೆ. ಎಷ್ಟೇ ಕಷ್ಟಪಟ್ಟರೂ ನಿದ್ದೆ ಬಾರದಿದ್ದಾಗ ವ್ಯಕ್ತಿ ಸಹಜವಾಗಿಯೇ ಕುಪಿತಗೊಳ್ಳುತ್ತಾನೆ. ಮನಸ್ಸು ಆತನ ಹಿಡಿತದಲ್ಲಿರದೆ, ನಿಯಂತ್ರಣ ತಪ್ಪುತ್ತದೆ. ಒಂದೆರಡು ದಿನ ನಿದ್ದೆ ಇಲ್ಲದಿದ್ದರೇನೇ ಕಷ್ಟಪಡಬೇಕಾಗುತ್ತದೆ. ಅಂಥಾದ್ದರಲ್ಲಿ ಪ್ರತಿದಿನವೂ ನಿದ್ದೆಯಿಲ್ಲದಿದ್ದರೆ ವ್ಯಕ್ತಿಯ ಪಾಡು ದೇವರಿಗೇ ಪ್ರೀತಿ. ಯಾವ ಕೆಲಸದಲ್ಲೂ ತನ್ನನ್ನು ತಾನು ತೊಡಗಿಸಿಕೊಳ್ಳದೆ, ಏಕಾಗ್ರತೆಯಿಲ್ಲದೆ ಆತ ಪರದಾಡಬೇಕಾಗುತ್ತದೆ.

ಇತ್ತೀಚೆಗೆ ಪಾರ್ಶ್ವಾಘಾತದಿಂದ ಬಳಲುತ್ತಿರುವ ಮುಕ್ಕಾಲು ಪ್ರತಿಶತ ಜನರು ನಿದ್ರಾಹೀನತೆಯಿಂದ ಬಳಲುತ್ತಿರುವುದು ಗಮನಕ್ಕೆ ಬಂದಿದೆ. ಪಾರ್ಶ್ವಾಘಾತದಿಂದ ತಪ್ಪಿಸಿಕೊಳ್ಳುವುದಕ್ಕೆ ದೇಹ ಅಗತ್ಯವಿರುವಷ್ಟು ನಿದ್ದೆಯನ್ನು ಪಡೆಯಲೇಬೇಕು ಎನ್ನುತ್ತಾರೆ ತಜ್ಞರು. ಅರೆ ಕ್ಷಣದಲ್ಲಿ ದೇಹದ ಯಾವುದಾದರೊಂದು ಭಾಗವನ್ನು ನಿಷ್ಕ್ರಿಯಗೊಳಿಸಿ ಕೊನೆಗೆ ಜೀವನಪರ್ಯಂತ ವ್ಯಕ್ತಿ ಹೆಣಗಾಡುವಂತೆ ಮಾಡುವ ಈ ಸಮಸ್ಯೆಗೆ ಮುನ್ನೆಚ್ಚರಿಕೆಯಲ್ಲದೆ ಬೇರೆ ದಾರಿಯಿಲ್ಲ. ಏಕೆಂದರೆ ಒಮ್ಮೆ ವ್ಯಕ್ತಿ ಪಾರ್ಶ್ವಾಘಾತಕ್ಕೆ ತುತ್ತಾದರೆ ಮತ್ತೆ ಮೊದಲಿನಂತಾಗುವುದು ತೀರಾ ಕಷ್ಟ. ನಿಯಮಿತ ವ್ಯಾಯಾಮದಿಂದ ಪರಾವಲಂಬಿಯಾಗದಂತೆ ಮಾಡಬಹುದೇ ಹೊರತು ವ್ಯಕ್ತಿ ಮೊದಲಿನಂತೇ ಆಗುವುದು ಸವಾಲಿನ ವಿಚಾರ.

ಈ ಎಲ್ಲಾ ಕಾರಣಗಳಿಂದ ಪ್ರತಿಯೊಬ್ಬ ವ್ಯಕ್ತಿಯೂ ದೇಹಕ್ಕೆ ಅವಶ್ಯವಿರುವಷ್ಟು ನಿದ್ದೆಯನ್ನು ಮಾಡಲೇಬೇಕು. ಎಷ್ಟೇ ಒತ್ತಡವಿರಲಿ, ತಲೆಬಿಸಿಯಿರಲಿ ಮನಸ್ಸು ಇವನ್ನೆಲ್ಲ ಮರೆತು ಉತ್ಸಾಹದಿಂದಿರುವಂಥ ವಾತಾವರಣವನ್ನು ನಾವೇ ಸೃಷ್ಟಿಸಿಕೊಳ್ಳಬೇಕಾಗುತ್ತದೆ. ಮನಸ್ಸನ್ನು ಹತೋಟಿಯಲ್ಲಿಡಲು ಧ್ಯಾನ, ಪ್ರಾಣಾಯಾಮವನ್ನು ಇಂದು ಎಲ್ಲ ತಜ್ಞರೂ ಸೂಚಿಸುತ್ತಿದ್ದಾರೆ. ಅತಿಯಾದ ನಿದ್ದೆ ದೇಹಕ್ಕೆ ಎಷ್ಟು ಹಾನಿಕರವೋ, ನಿದ್ರಾಹೀನತೆಯೂ ಅಷ್ಟೇ ಹಾನಿಕರ.

ಮೂಲ: ವಿಕ್ರಮ

3.00869565217
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top