ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಮಾನಸಿಕ ಆರೋಗ್ಯ / ಪದೇ ಪದೇ ಮನೆ ಬಿಟ್ಟು ಹೋಗುವ ತಾಯಿ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಪದೇ ಪದೇ ಮನೆ ಬಿಟ್ಟು ಹೋಗುವ ತಾಯಿ

ಪದೇ ಪದೇ ಮನೆ ಬಿಟ್ಟು ಹೋಗುವ ತಾಯಿ

ಭಾರತ ದೇಶದಲ್ಲಿ ಜನಸಂಖ್ಯೆ ಅಪಾರ. ಅನಕ್ಷರತೆ, ಅಜ್ಞಾನವೂ ಅಪಾರ. ಆರೋಗ್ಯದ ಬಗ್ಗೆಯೂ ಅತೀವ ಅಜ್ಞಾನ. ೋಗಿಗಳನ್ನೂ, ರೋಗವನ್ನೂ ಗುರುತಿಸಲಾಗದಷ್ಟು ಅಜ್ಞಾನ. ಈ ಪಾಡು ದೈಹಿಕ ರೋಗಗಳಿಗೇ ಉಂಟು. ಇನ್ನು ಮನೋರೋಗದ ವಿಷಯವಂತೂ ಕೇಳುವ ಹಾಗೇ ಇಲ್ಲ! ಸುಶಿಕ್ಷಿತರಲ್ಲೇ. ಮನೋರೋಗ ಗುರುತಿಸಲು ಅಜ್ಞಾನವಿರುವಾಗ, ಅಶಿಕ್ಷಿತರ ಪಾಡೇನು? ಮನೋರೋಗಕ್ಕೆ ಚಿಕಿತ್ಸೆ ಕೊಡಲು ಶ್ರಮಿಸಬೇಕಾದಷ್ಟೇ, ಮನೋರೋಗಗಳ ಬಗ್ಗೆ ಅರಿವು ಮೂಡಿಸಲೂ ಮನೋವೈದ್ಯರು ಶ್ರಮಿಸಬೇಕಾಗುತ್ತದೆ. ಸರ್ಕಾರ ಸಮೂಹ ಮಾಧ್ಯಮಗಳ ಮೂಲಕ ಸಾರ್ವಜನಿಕರಲ್ಲಿ ಮನೋವ್ಯಾಧಿಗಳ ಬಗ್ಗೆ ಅರಿವು ಮೂಡಿಸಲು ಸತತ ಪ್ರಯತ್ನ ನಡೆಸಿದ್ದರೂ, ಈ ಮಾಹಿತಿ ತಲುಪದ ಅಸಂಖ್ಯ ರೋಗಿಗಳು, ಕುಟುಂಬಗಳು ಇನ್ನೂ ಇವೆ.
ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಕೇವಲ 30 ಕಿ.ಮೀ. ದೂರದ ಊರಲ್ಲಿ ಒಂದು ಕುಟುಂಬ ಮನೋರೋಗಿ ತಾಯಿಯನ್ನು ಮನೋರೋಗವೆಂದು ತಿಳಿಯದೇ ನಾಲ್ಕು ವರ್ಷಗಳಿಂದ ಚಿಕಿತ್ಸೆಯಿಲ್ಲದೇ ಸಾಕುತ್ತಿದೆ!
ಸುಮಾರು 50 ವರ್ಷ ವಯಸ್ಸಿನ ಾಯಿಯನ್ನು 25 ವರ್ಷದ ಮಗ ಮನೋವೈದ್ಯರಲ್ಲಿಗೆ ಕರೆತಂದ. ಕಳೆದ ನಾಲ್ಕು ವರ್ಷದಿಂದ ತಾಯಿಯ ವರ್ತನೆ ವಿಚಿತ್ರವಾಗಿದೆಯೆಂದೂ, ಆಕೆ ಪದೇ ಪದೇ ಮನೆ ಬಿಟ್ಟು ಹೋಗಿ ಬಿಡುತ್ತಾಳೆಂದೂ, ಮನೆ, ಮಕ್ಕಳ ಬಗ್ಗೆ ಗಮನವೇ ಇಲ್ಲವೆಂದೂ ಅವನ ದೂರು. ಅವನಿಗೂ ಈ ಸಮಸ್ಯೆಗೆ ಏನು ಮಾಡುವುದೆಂದು ಗೊತ್ತಿರಲಿಲ್ಲ. ಸಂಘವೊಂದರ ಸದಸ್ಯನಾದ ಇವನು ಹಿರಿಯರ ಬಳಿ ಚರ್ಚಿಸುವಾಗ, ಅವರ ಸಲಹೆ ಮೇರೆಗೆ ತಾಯಿಯನ್ನು ಮನೋವೈದ್ಯರ ಬಳಿ ಕರೆತಂದಿದ್ದಾನೆ.
ಈಕೆ 5ನೇ ತರಗತಿವರೆಗೆ ಓದಿದ್ದಾಳೆ. ಮದುವೆಯಾಗಿ 26 ವರ್ಷಗಳಾಗಿವೆ. ಮೂವರು ಮಕ್ಕಳು. 25 ವರ್ಷದ ಮಗ, 22 ವರ್ಷದ ಮಗಳು, 16 ವರ್ಷದ ಚಿಕ್ಕ ಮಗಳು. ಮೊದಲ ಮಗಳ ವಿವಾಹವಾಗಿದೆ. ಕಳೆದ 4 ವರ್ಷಗಳಲ್ಲಿ ಇವಳ ಗಂಡ, ಮಾವ ಇಬ್ಬರೂ ತೀರಿಕೊಂಡಿದ್ದಾರೆ. ಇವರಿಬ್ಬರ ಸಾವಿನ ನಂತರ ಈಕೆಯ ವರ್ತನೆ ಬದಲಾಗಿದೆ. ಮೊದಲ ಕೆಲವು ತಿಂಗಳು ಮಂಕಾಗಿದ್ದಾಳೆ. ಮಕ್ಕಳು, ಕುಟುಂಬದವರ ಬಳಿ ತನ್ನ ವೇದನೆ ಹೇಳಿಕೊಂಡಿದ್ದಾಳೆ. ಮುಂದೆ ನಾನೊಬ್ಬಳೇ ಹೇಗೆ ಮಕ್ಕಳನ್ನು ಬೆಳೆಸುವುದು, ಮದುವೆ ಮಾಡುವುದು, ಸಂಸಾರ ನಿಭಾಯಿಸುವುದು ಎಂದು ಇವಳ ಚಿಂತೆ.
ಆದರೆ ಕಳೆದುದೊಂದು ವರ್ಷದಿಂದ ಇವಳ ಚರ್ಯೆ ಬದಲಾಗಿದೆ. ಅಕ್ಕಪಕ್ಕದ ಮನೆಗಳಲ್ಲಿರುವ ಅಣ್ಣಂದಿರು, ಅತ್ತಿಗೆಯರು ನನ್ನನ್ನು ಬೈತಾರೆ, ಹೊಡೀತಾರೆ ಎಂದು ದೂಷಿಸಲಾರಂಭಿಸಿದಳು. ಅಣ್ಣಂದಿರ ಬಳಿ ನನಗೆ ಬೇರೊಂದು ಮನೆ ಕಟ್ಟಿಸಿಕೊಡಿ ಎಂದು ಜಗಳವಾಡಲು ಪ್ರಾರಂಭಿಸಿದಳು. ಕಷ್ಟದಿಂದ ತಂತಮ್ಮ ಸಂಸಾರ ಸಾಗಿಸುತ್ತಿದ್ದ ಈ ಅಣ್ಣಂದಿರು ಇವಳಿಗೆ ಹೇಗೆ ಮನೆ ಕಟ್ಟಿಸಿಕೊಟ್ಟಾರು! ಕ್ರಮೇಣ ಒಬ್ಬಳೇ ತನಗೆ ತಾನೇ ಮಾತನಾಡಲು ಶುರು ಮಾಡಿದಳು. ‘ನನಗ್ಯಾರೂ ಇಲ್ಲ, ಗಂಡನಿಲ್ಲ, ಮಕ್ಕಳಿಲ್ಲ,  ನನಗಿನ್ನೊಂದು ಮದುವೆ ಮಾಡಿ, ನಾನಿಲ್ಲಿರೋದಿಲ್ಲ, ಆಂಧ್ರಕ್ಕೆ ಹೋಗಿಬಿಡುತ್ತೇೆ’ ಎಂದು ಬಡಬಡಿಸುತ್ತಿದ್ದಳು. ಪಕ ಪಕ ಪಕನೇ ಜೋರಾಗಿ ನಗುತ್ತಿದ್ದಳು. ಇವಳ ವಿಚಿತ್ರ ವರ್ತನೆಗೆ ಕಾರಣ ವಿಚಾರಿಸಿದರೆ ‘ನಾನು ಹಾಗೆಲ್ಲಿ ನಡೆದುಕೊಂಡೆ? ನಿಮಗೇ ತಲೆ ಸರಿಯಲ್ಲ’ ಎಂದು ಬಿಡುತ್ತಿದ್ದಳು. ಮನೆಯ ಬಗ್ಗೆ ಗಮನವೇ ಇಲ್ಲ. ಅಡುಗೆಯಾಗಲೀ, ಶುದ್ಧತೆಯಾಗಲೀ ಯಾವುದರ ಗಮನವಿಲ್ಲ. ಸ್ವಂತ ತಾನೂ ಸ್ನಾನ ಮಾಡಲು, ಹಲ್ಲುಜ್ಜಲು, ತಲೆ ಬಾಚಿಕೊಳ್ಳಲು ಮರೆತು ಬಿಡುತ್ತಿದ್ದಳು. ಬೇರೆಯವರು ನೆನಪು ಮಾಡಬೇಕಿತ್ತು ಅಥವಾ ಬಲವಂತ ಮಾಡಬೇಕಿತ್ತು. ಮುಟ್ಟಿನ ಸಮಯದಲ್ಲೂ ಶುದ್ಧವಾಗಿರುತ್ತಿರಲಿಲ್ಲ. ಯಾರಾದರೂ ಅತಿಥಿಗಳು ಮನೆಗೆ ಬಂದರೆ, ವಾತನಾಡಿಸಿದರೆ, ನೀವ್ಯಾರು ಕೇಳೋಕೆ ಏಕೆ ಬಂದ್ರಿ ಎಂದು ಅವರ ಮೇಲೆ ಗುರ‌್ರೆನ್ನುತ್ತಾಳೆ.
ಇಷ್ಟಲ್ಲದೇ ಆಗಾಗ ತನ್ನ ಬಟ್ಟೆಬರೆಗಳನ್ನು ಒಂದು ಚೀಲದಲ್ಲಿ ಹಾಕಿಕೊಂಡು ಆಂಧ್ರದಲ್ಲಿ ಒಂದು ಹಳ್ಳಿಗೆ ಹೊರಟು ಬಿಡುತ್ತಾಳೆ. ಅಲ್ಲಿ ಆೆಯ ಅನೇಕ ಸಂಬಂಧಿಕರಿದ್ದಾರೆ. ಅವರ ಮನೆಗಳಿಗೆ ಹೋಗಿ ‘ನನಗೆ ಮನೆ ಕೊಡಿ, ಜಮೀನು ಕೊಡಿ, ಕಡ್ಲೆಾಯಿ ಕೊಡಿ’ ಎಂದು ಕೇಳುತ್ತಾಳೆ. ಅಸಂಬದ್ಧವಾಗಿ ಮಾತಾಡುತ್ತಾಳೆ. ಇವಳ ಪರಿಸ್ಥಿತಿ ನೋಡಿ ಅವರು ಕನಿಕರದಿಂದ ಊಟ ಹಾಕುತ್ತಾರೆ. ಇವಳನ್ನು ಮನೇಲಿ ಇಟ್ಟುಕೊಳ್ಳಲು ಅವರು ತಯಾರಿಲ್ಲ. ಈಕೆ ಆ ಊರಿನ ಮೈದಾನದಲ್ಲೋ, ಾಲಾ ಆವರಣದಲ್ಲೋ ಮಲಗಿ ಕಾಲ ಹಾಕುತ್ತಾಳೆ. ಮರುದಿನ ಮತ್ತೆ ಬೇರೆ ಮನೆಗೆ ಹೋಗಿ ಅದೇ ಮನೆ, ಜಮೀನು, ಕಡ್ಲೆಕಾಯಿ ಬೇಡಿಕೆ ಮುಂದಿಡುತ್ತಾಳೆ. ಅವರು ಇವಳ ತಾಯಿಗೋ, ಮಗನಿಗೋ ಫೋನ್ ಮಾಡುತ್ತಾರೆ. ಇವರು ಅವಳನ್ನು ಕರೆತರಲು ಹೋಗುತ್ತಾರೆ.
ಇವರನ್ನು ಕಂಡ ಕೂಡಲೇ ಆಕೆ ಬೇರೆಲ್ಲಿಗೋ ಹೊರಟು ಬಿಡುತ್ತಾಳೆ. ಇವರು ಅವಳನ್ನು ಹಿಂಬಾಲಿಸಿದರೆ ಇವರನ್ನು ತಳ್ಳುತ್ತಾಳೆ, ಹೊಡೆಯುತ್ತಾಳೆ. ಇವರು ತಾಳ್ಮೆಯಿಂದ ಅವಳನ್ನು ಸಮಾಧಾನಪಡಿಸಿ ಕರೆದುಕೊಂಡು ಬರುತ್ತಾರೆ. ಹೀಗೆ ಕಳೆದ ವರ್ಷದಲ್ಲಿ 10-12 ಬಾರಿ ನಡೆದು ಹೋಗಿದೆ. ಇವರು ಬೇಸತ್ತು ಸುಮ್ಮನಿದ್ದರೆ 15-20 ದಿನವಾದರೂ ಅವಳು ಬರುವುದಿಲ್ಲ, ಆ ಊರಿನ ಸಂಬಂಧಿಕರು ಪದೇ ಪದೇ ಫೋನು ಮಾಡಿ ಇವರನ್ನು ಎಚ್ಚರಿಸುತ್ತಿರುತ್ತಾೆ. ಕಷ್ಟಪಟ್ಟು ಕರೆತಂದರೆ 15-20 ದಿನದ ನಂತರ ಮತ್ತೆ ಗಂಟುಮೂಟೆ ಕಟ್ಟಿ ಹೊರಡು ಬಿಡುತ್ತಾಳೆ!
ಆಸ್ಪತ್ರೆಯಲ್ಲಿ ಉಪಾಯ ಮಾಡಿ ಈಕೆಯನ್ನು ಮನೋವೈದ್ಯರು ಉಳಿಸಿಕೊಂಡರು. ಕಳೆದೆರಡು ವಾರದಿಂದ ನಿರಂತರ ಚಿಕಿತ್ಸೆಯ ನಂತರ ಅವಳು ಸ್ವಲ್ಪ ಗುಣಮುಖವಾಗಿ್ದಾಳೆ. ಈ ಮುಂಚೆ ನಾನು ಅಸಂಬದ್ಧವಾಗಿ ನಡೆದುಕೊಳ್ಳುತ್ತಿದ್ದೆ ಎಂಬ ಅರಿವು ಮೂಡತೊಡಗಿದೆ. ಸಿಟ್ಟು ಕಡಿಮೆಯಾಗಿದೆ. ಅವಳನ್ನು ನೋಡಿಕೊಳ್ಳಲು ಆಸ್ಪತ್ರೆಯಲ್ಲೇ ತಂಗಿರುವ ತಾಯಿಗೆ ಸಮಾಧಾನವಾಗಿದೆ.
ಈಕೆಗೆ ‘ಸ್ಕಿಜೋಫ್ರೀನಿಯಾ’ ಎಂಬ ತೀವ್ರತರದ ಮನೋರೋಗವಾಗಿತ್ತು. ಚಿಕಿತ್ಸೆಯಿಂದ ಗುಣವಾಗುತ್ತಿದ್ದಾಳೆ. ಆದರೂ ನಾಲ್ಕು ವರ್ಷದಿಂದ ಈಕೆಯ ರೋಗವನ್ನು ಯಾರೂ ಗುರುತಿಸಿರಲಿಲ್ಲ. ವೃಥಾ ರೋಗಿಯೂ, ಮನೆಯವರೂ ಹಿಂಸೆ ಪಡುತ್ತಾ ಬದುಕಿದ್ದರು.
ಇಂದಿಗೂ ಮನೋರೋಗದ ಬಗ್ಗೆ ಸಮಾಜದಲ್ಲಿ ವ್ಯಾಪಕ ಅಜ್ಞಾನವಿದೆ. ಸಾರ್ವಜನಿಕರಲ್ಲಿ ಈ ಬಗ್ಗೆ ತಿಳಿವಳಿಕೆ ಹೆಚ್ಚಿಸಿ, ಇಡೀ ಸಮಾಜದ ‘ಮನವೆಂಬ ನಾವೆ’ಯ ಸ್ವಾಸ್ಥ್ಯ ರಕ್ಷಣೆ ಮಾಡಬೇಕಿದೆ.

ಮೂಲ: ವಿಕ್ರಮ

2.93939393939
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top