অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಬೀಜದೊಳಗಿನ ವೃಕ್ಷ

ಬೀಜದೊಳಗಿನ ವೃಕ್ಷ

‘ಹಗುರವಾಗಿ ಪ್ರಯಾಣಿಸಿ, ಶೀಘ್ರವಾಗಿ ಬನ್ನಿ’ ಇದು ಸಂತರು ಹೇಳುವ ಮಾತು. ಋಣಾತ್ಮಕ ಭಾವನೆಗಳ ಭಾರ ಇಲ್ಲದೇ ಇರುವಾಗ ನೀವು ಆರೋಗ್ಯಕರವಾದ, ಸಂತಸಮಯವಾದ ಸ್ಥಿತಿಯನ್ನು ಬೇಗನೇ ತಲುಪುತ್ತೀರಿ.

ನಮಗೆ ಸತ್ಯದ ಅರಿವಿಲ್ಲದೇ ಇರುವುದರಿಂದ ಋಣಾತ್ಮಕ ವಿಚಾರಧಾರೆಯನ್ನು ನಾವು ಅಪ್ಪಿಕೊಂಡಿರುತ್ತೇವೆ. ಆಳವಾಗಿ ಯೋಚಿಸಿದಾಗ ಅದು ಅರಿವಾಗುತ್ತದೆ. ಕೆಲ ಸನ್ನಿವೇಶಗಳಲ್ಲಿ ಸಿಟ್ಟಾಗುವುದು, ನೋವು ಉಣ್ಣುವುದು, ಕಸಿವಿಸಿಗೆ ಒಳಗಾಗುವುದು, ದರ್ಪ, ಅಹಂಕಾರ ಪ್ರದರ್ಶಿಸುವುದು ಸಹಜ ಎಂದು ನಾವು ಅಂದುಕೊಂಡಿರುತ್ತೇವೆ. ಅದು ನಮ್ಮ ನಡವಳಿಕೆಯ ಭಾಗವಾಗಿರುತ್ತದೆ. ಹಾಗಾದರೆ ಸತ್ಯ ಏನು?

  • ಸದಾ ದೂರುವುದರ ಬದಲಿಗೆ ನಮಗಿರುವ ಅನುಕೂಲಗಳ ಕುರಿತೂ ಯೋಚಿಸಬೇಕು. ಸಂತಸದ ಬಾಗಿಲು ಮುಚ್ಚಿಕೊಂಡಾಗ ನಾವು ವರ್ಷಗಟ್ಟಲೇ ಅದರ ಬಗ್ಗೆ ಗೊಣಗುತ್ತ ಇರುತ್ತೇವೆ. ಆದರೆ, ಗೊಣಗುವುದನ್ನು ಬಿಟ್ಟು ಮುಚ್ಚಿದ ಬಾಗಿಲಿನಿಂದ ದೂರ ಸರಿದಾಗ ನಮಗಿರುವ ಸೌಲಭ್ಯ, ಅನುಕೂಲಗಳ ಕುರಿತು ಗಮನ ನೀಡಿದಾಗ ಏನಾಶ್ಚರ್ಯ ಮತ್ತೊಂದು ಅವಕಾಶದ ಹೆಬ್ಬಾಗಿಲು ನಮಗಾಗಿ ತೆರೆಯುತ್ತದೆ
  • ಮತ್ತೊಬ್ಬರು ನಮ್ಮನ್ನು ಬಲವಾಗಿ ತಳ್ಳಿದಾಗ ನಮಗೆ ಯಾವುದರ ಅಗತ್ಯವಿದೆಯೋ ಅದರತ್ತ ನಾವು ಚಲಿಸಿರುತ್ತೇವೆ. ಈ ಬಗ್ಗೆ ಯೋಚಿಸಿ. ನಮ್ಮಲ್ಲಿ ಎಷ್ಟೊಂದು ಶಕ್ತಿ ಹುದುಗಿದೆ. ನಾವೊಂದು ಪುಟ್ಟ ಬೀಜದಲ್ಲಿ ಅಡಗಿರುವ ಬೃಹತ್ ಮರ. ಏಕಾಏಕಿ ಬಂದ ತೋಟದ ಮಾಲಿಯೊಬ್ಬ ಈ ಬೀಜವನ್ನು ಒರಟೊರಟಾಗಿ ನೆಲದೊಳಗೆ ಹಾಕುತ್ತಾನೆ. ಮಣ್ಣಿನಿಂದ ಅದನ್ನು ಮುಚ್ಚುತ್ತಾನೆ. ನಾವೆಷ್ಟು ಸಿಟ್ಟಿಗೆದ್ದಿರುತ್ತೇವೆ. ಆದರೂ, ಒಂದು ದಿನ ಗಿಡವಾಗಿ ಮೊಳಕೆಯೊಡೆದು ದೊಡ್ಡ ವೃಕ್ಷವಾಗಿ ಬೆಳೆಯುತ್ತೇವೆ. ಆ ಒರಟುತನ ನಮಗೆ ಬದುಕಿನ ಮಾಂತ್ರಿಕತೆಯನ್ನು ಪರಿಚಯಿಸುತ್ತದೆ.
  • ಯಾರಾದರೂ ಒರಟಾಗಿ ಮಾತನಾಡಿದರೂ ನೊಂದುಕೊಳ್ಳಬೇಡಿ. ನಮ್ಮ ಬಗೆಗಿನ ಸತ್ಯ ಹೇಳಿದ್ದಕ್ಕಾಗಿ ಅವರಿಗೆ ಕೃತಜ್ಞರಾಗಿರಿ. ಅಂತಹ ಸಂದರ್ಭಗಳಲ್ಲಿ ನಾವು ನಮ್ಮದೇ ಆದ ಬಿಲ ತೋಡಿಕೊಂಡು ಅದರೊಳಗೆ ವಿಶ್ರಮಿಸಿಕೊಳ್ಳುವುದನ್ನು ಕಲಿಯುತ್ತೇವೆ. ಇಂತಹ ಸತ್ಯಗಳು ಎಷ್ಟೇ ಕಟುವಾಗಿದ್ದರೂ ಚಳಿಗಾಲದಂತೆ ಅವು ನಮ್ಮ ಅನಾರೋಗ್ಯಕರ ಎಲೆಗಳನ್ನು ಉದುರಿಸಲು ನೆರವಾಗುತ್ತವೆ. ನೀವು ಮತ್ತೆ ಚಿಗುರೊಡೆಯುತ್ತೀರಿ. ಸಮೃದ್ಧಿ ಹೊಂದುತ್ತೀರಿ.
  • ಬದುಕು ಅಂದರೆ ಕಷ್ಟ, ಕಾರ್ಪಣ್ಯಗಳು ಇದ್ದೇ ಇರುತ್ತವೆ. ಅನಗತ್ಯ ವಸ್ತುಗಳು ನಮ್ಮ ಕೈಗೆ ಬರುತ್ತವೆ. ಹಾಗೆಯೇ ನಮಗೆ ಬೇಕಾದದ್ದು ಸಹ ನಮಗೆ ಸಿಗುತ್ತದೆ. ಹಾಗೆಯೇ ಎಷ್ಟೋ ಸಲ ನಮಗೆ ಬೇಡವಾದುದ್ದು ನಮ್ಮ ಹತ್ತಿರ ಬರುವುದಿಲ್ಲ. ನಮಗೆ ಬೇಕಾಗಿರುವುದು ಸಹ ನಮಗೆ ದಕ್ಕುವುದಿಲ್ಲ. ಬದುಕು ಅಚ್ಚರಿಯ ಕಂತೆ. ಯಾವುದೋ ಒಂದು ನಮಗೆ ಸಿಕ್ಕುವವರೆಗೆ ಅದನ್ನು ನಾವು ಮಿಸ್ ಮಾಡಿಕೊಳ್ಳುತ್ತಿದ್ದೆವು ಎಂಬುದು ಅರಿವಾಗುವುದೇ ಇಲ್ಲ. ನಿಮ್ಮ ಬಯಕೆಗಳನ್ನೆಲ್ಲ ತೊರೆದುಬಿಡಿ. ಯಾವ ಬಯಕೆಗಳನ್ನು ಹೊಂದದೇ ಇರುವುದು ಸಹ ಸಂತಸವನ್ನು ತರುತ್ತದೆ. ಆಗ ನೀವು ಸೂರ್ಯನಂತೆ ನಿಮ್ಮದೇ ಕಾಂತಿಯಲ್ಲಿ ಉಜ್ವಲವಾಗಿ ಬೆಳಗುತ್ತ ಇರುತ್ತೀರಿ.
  • ನಾವು ಬಲಶಾಲಿಯಾಗಿದ್ದೂ ಸೃಜನಶೀಲತೆಯಿಂದ ಇರಬಹುದು. ಅಸಹಾಯಕರಾಗದೆಯೂ ನಾವು ಬಯಸುವ ಬದಲಾವಣೆಯನ್ನು ತರಬಹುದು ಎಂದು ಅರಿತುಕೊಳ್ಳಬೇಕು. ಬದುಕುಳಿಯಲು ಕಷ್ಟಪಡಬೇಕು ಎಂಬ ತಪ್ಪಾದ ಭಾವನೆಯನ್ನು ನಾವೆಲ್ಲ ಹೊಂದಿದ್ದೇವೆ. ನಿಜವಾಗಿಯೂ ಹಳೆಯದನ್ನೆಲ್ಲ ತೊರೆದು ಹೊಸದರತ್ತ ಮುಖ ಮಾಡಬೇಕಾದರೆ ನಾವು ಸೃಜನಶೀಲರಾಗಿರಬೇಕು. ಯಾರ ಬಗ್ಗೆಯೂ ಪೂರ್ವಾಗ್ರಹಪೀಡಿತರಾಗದೆಯೇ ವಿಶಾಲ ದೃಷ್ಟಿಕೋನದಿಂದ ನೋಡಬೇಕು. ಏನೂ ಮಾಡದೇ ಆಲಸಿಗಳಂತೆ ಕಾಣುವವರನ್ನು ನೀವು ಭೇಟಿಯಾದರೆ, ಒಂದು ಕ್ಷಣ ನಿಂತು ಯೋಚಿಸಿ.
  • ನಿಮಗೆ ವಿಶ್ರಾಂತಿಯ ಅಗತ್ಯವಿದೆ. ಯಾವುದರ ಬಗ್ಗೆಯೂ ಚಿಂತಿಸದೇ ಮುಕ್ತವಾಗಿ ಬದುಕನ್ನು ಆಸ್ವಾದಿಸಿ. ಹಳೆಯ ಮಾನಸಿಕ ಸಂಕೋಲೆಗಳನ್ನೆಲ್ಲ ಕಿತ್ತೊಗೆದು ಹೊಸದಾದ ವಿಶಾಲ ದೃಷ್ಟಿಕೋನ ಬೆಳೆಸಿಕೊಳ್ಳಿ. ನಿಮಗೆ ಯಾವುದರ ಅಗತ್ಯವಿದೆಯೋ ಅದನ್ನೇ ಬದುಕು ಪ್ರತಿಫಲಿಸುತ್ತದೆ. “ಅವನೊಬ್ಬ ಆಲಸಿ, ಯಾವುದಕ್ಕೂ ಪ್ರಯೋಜನವಿಲ್ಲ’ ...ಇತ್ಯಾದಿ ಹೇಳಿಕೆಗಳನ್ನು ನೀಡಬೇಡಿ.
  • ಅಸ್ವಸ್ಥರಾದಾಗಲೂ ಅಷ್ಟೇ. ರೋಗ ಬಂತು ಎಂದು ಚಿಂತಿತರಾಗಬೇಡಿ. ವ್ಯಾಯಾಮ, ವಿಶ್ರಾಂತಿ ಹಾಗೂ ಆರೋಗ್ಯಕರ ಆಹಾರ ಸೇವಿಸಲು ಇದು ಸಕಾಲ ಎಂದುಕೊಳ್ಳಿ. ಸಂಘರ್ಷಮಯ ವಿಚಾರಗಳ ಬದಲಾಗಿ ಸೌಹಾರ್ದಯುತ ಭಾವನೆ, ಶಾಂತಿ ನಿಮ್ಮನ್ನು ಆವರಿಸಲಿ. ಬೇರೇ ರೀತಿಯಾಗಿ ಯೋಚಿಸುವುದು ಅಂದರೆ ಹೊಸ ಭಾಷೆಯನ್ನು ಕಲಿತಂತೆ.

ವಿಜ್ಞಾನಿಗಳು ಕಂಡುಕೊಂಡಂತೆ ನಮ್ಮ ಮಿದುಳಿನ ಬಹುದೊಡ್ಡ ಭಾಗವಾದ ನಿಯೊಕಾರ್ಟೆಕ್ಸ್ ನಿಧಾನವಾಗಿ, ತರ್ಕಬದ್ಧವಾಗಿ ಮತ್ತು ಅನುಮಾನದಿಂದ ಕೆಲಸ ಮಾಡುತ್ತದೆ. ಅದಕ್ಕಾಗಿ ನಾವು ಅಷ್ಟೊಂದು ವಿರೋಧಿಸುತ್ತೇವೆ. ಈ ವಿರೋಧಿ ಮನೋಭಾವದ ಬೇರು ನಮ್ಮ ಬಾಲ್ಯದಲ್ಲಿ ಇರಬಹುದು. ನಮ್ಮ ಮೇಲೆ ಅಧಿಕಾರ ಚಲಾಯಿಸುವ ಹಿರಿಯರನ್ನು ವಿರೋಧಿಸುವುದು ಅಭ್ಯಾಸವಾಗಿ ನಾವು ಇತರ ಎಲ್ಲ ಸಂಗತಿಗಳನ್ನೂ ವಿರೋಧಿಸಬಹುದು.

ಈ ವಿರೋಧಿಸುವ ಮನೋಭಾವ ಬೇರೇಬೇರೇ ವ್ಯಕ್ತಿಗಳಲ್ಲಿ ಬೇರೇಬೇರೆ ರೀತಿಯಲ್ಲಿ ಪ್ರಕಟವಾಗುತ್ತದೆ. ಅಜೀರ್ಣ ಸಹ ಅಲರ್ಜಿಕಾರಕ ಎಂದು ಹೆಸರಿಟ್ಟು ಕೆಲವು ಆಹಾರಗಳಿಗೆ ನಾವು ತೋರುವ ಪ್ರತಿರೋಧವಾಗಿರುತ್ತದೆ. ಆ ಪ್ರತಿರೋಧ ಚರ್ಮದ ಮೇಲಿನ ಗುಳ್ಳೆಯಾಗಿ, ಅಸಾಧ್ಯ ತಲೆನೋವಾಗಿ ವ್ಯಕ್ತವಾಗುತ್ತದೆ. ಆಗ, ನಾವು ಔಷಧ ಸೇವಿಸುವುದನ್ನು ಸಹ ಪ್ರತಿರೋಧಿಸುತ್ತೇವೆ.

ನನ್ನ ವಿದ್ಯಾರ್ಥಿಯೊಬ್ಬರಿಗೆ ಹೀಗೆ ಎಲ್ಲವನ್ನೂ ಪ್ರತಿರೋಧಿಸುವ ಅಭ್ಯಾಸವಿತ್ತು. ಆಕೆ ಪೌಷ್ಟಿಕಾಂಶ ತಜ್ಞರನ್ನು ಭೇಟಿಯಾಗಲು ಹೋಗುವಾಗ ನನ್ನ ಸಲಹೆ ಕೇಳಿದಳು. ‘ಅವರ ಸಲಹೆ ಪಡೆದುಕೊ. ಆದರೆ, ಆ ಸಲಹೆಯನ್ನು ವಿರೋಧಿಸಬೇಡ’ ಎಂದು ನಾನು ಹೇಳಿದೆ. ಆಕೆ ಅವರ ಸಲಹೆ ಪಡೆದು ಅದನ್ನು ಪ್ರಯೋಗಿಸಿದಳು. ೧೩ ಕೆ.ಜಿ. ತೂಕ ಕಳೆದುಕೊಂಡಳು. ಆಕೆ, ತೂಕ ಕರಗಿಸಲು ಈ ಹಿಂದೆ ಮಾಡಿದ ಎಲ್ಲ ಯತ್ನಗಳಿಗಿಂತ ಈ ಬಾರಿಯ ಪ್ರಯತ್ನ ಫಲ ನೀಡಿತ್ತು.

ನಮ್ಮ ಆರೋಗ್ಯದ ಇತಿಹಾಸದಲ್ಲಿ ಋಣಾತ್ಮಕ ಭಾವನೆಗಳು ನಮಗೆ ಹೆಚ್ಚು ಕಿರಿಕಿರಿ ಉಂಟು ಮಾಡುತ್ತವೆ. ಏಕೆಂದರೆ ನಾವು ಆ ಸಮಯದಲ್ಲಿ ಚೂರು, ಚೂರಾಗಿರುತ್ತೇವೆ. ಪ್ರೀತಿಸುವ, ಸ್ವೀಕರಿಸುವ ವಿಚಾರಗಳು ನಮ್ಮಲ್ಲಿ ಉಲ್ಲಾಸ, ಉತ್ಸಾಹ ಮೂಡಿಸುತ್ತವೆ. ಏಕೆಂದರೆ ಆಗ ನಾವು ಪೂರ್ಣವಾಗಿರುತ್ತೇವೆ.ನಿಮ್ಮ ಇಡೀ ಜೀವನದಲ್ಲಿ ನೀವು ‘ಧನ್ಯವಾದಗಳು’ ಎಂದಷ್ಟೇ ಹೇಳಿದ್ದರೂ ಅಷ್ಟೇ ಸಾಕಾಗುತ್ತದೆ. ಹೌದು, ಥ್ಯಾಂಕ್ಯೂ ಎಂದು ಹೇಳಿ. ಮಿದುಳನ್ನು ಹಗುರವಾಗಿಸಿಕೊಳ್ಳಿ.

ಮೂಲ :ಭರತ್ ಮತ್ತು ಶಾಲನ್ ಸವೂರ್ಪ್ರಜಾವಾಣಿ (http://www.prajavani.net/)

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate