ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಮಾನಸಿಕ ಆರೋಗ್ಯ / ಮನೋರೋಗಿಗಳಿಗೊಂದು ಆಂಬ್ಯುಲೆನ್ಸ್ !
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಮನೋರೋಗಿಗಳಿಗೊಂದು ಆಂಬ್ಯುಲೆನ್ಸ್ !

ಮನೋರೋಗಿಗಳಿಗೊಂದು ಆಂಬ್ಯುಲೆನ್ಸ್ !

-ಡಾ. ಪ್ರಶಾಂತ್ ಎನ್.ಆರ್.

ತುರ್ತು ಚಿಕಿತ್ಸೆ ಬೇಕಾದಾಗ, ಪ್ರಾಣ ಹೋಗುತ್ತಿರುವ ಸಂದರ್ಭಗಳಲ್ಲಿ ಆಂಬ್ಯುಲೆನ್ಸ್‌ನ ಉಪಯೋಗ ಎಲ್ಲರಿಗೂ ಪರಿಚಿತ. ಆದರೆ ‘ಮನೋರೋಗಿಗಳಿಗೂ ಅಂಬ್ಯುಲೆನ್ಸ್’ ಬೇಕೇ ಎಂದು ಅಚ್ಚರಿಯಾಗುವುದುಂಟು. ನಿಜ, ಮನೋರೋಗಗಳಿಂದಲೇ ಯಾರೂ ಸಾವಿಗೀಡಾಗುವುದಿಲ್ಲ. ಆದರೆ ತೀವ್ರತರದ ಮನೋರೋಗಗಳಿದ್ದವರು ವಿವೇಚನೆ ಕಳೆದುಕೊಂಡು ಹೊಡೆದು, ಬಡಿದು, ಕಡಿದು ಮಾಡಬಹುದು. ದೈಹಿಕ ಹಿಂಸೆ ಮಾಡಿಕೊಳ್ಳಬಹುದು, ಬೇರೆಯವರಿಗೂ ಹಿಂಸೆ ಮಾಡಬಹುದು. ರೋಗ ‘ಕೆರಳಿದಾಗ’ ವ್ಯಕ್ತಿಯೂ ಕೆರಳಿ, ರೋಷಮತ್ತನಾಗಿ ‘ಅಪಾಯಕಾರಿ’ ಆಗಿಬಿಡಬಹುದು. ಮನೋರೋಗದ ಕಾರಣ ಆ ವ್ಯಕ್ತಿಗೆ ತಾನೇನು ಮಾಡುತ್ತಿದ್ದೇನೆಂಬ ಪರಿವೆಯೇ ಇರಲಾರದು. ಸಾಧಾರಣವಾಗಿ ಹೊಡೆದು, ಬಡಿದು ಮಾಡುತ್ತಿರುವ ರೋಗಿಯನ್ನು ನೋಡಿದರೆ ಅವನನ್ನು ‘ಹೊಡೆದು ಬಡಿದೇ’ ದಾರಿಗೆ ತರಬೇಕು ಎಂದು ಮನೆಯವರಿಗೂ, ಇತರರಿಗೂ ಅನ್ನಿಸುತ್ತದೆ. ರೋಗಿ ಇತರರನ್ನು ಬಡಿಯುವುದು, ಇತರರೆಲ್ಲಾ ಸೇರಿ ರೋಗಿಯನ್ನು ಬಡಿಯುವುದೂ ನಡೆದು ಒಟ್ಟಿನಲ್ಲಿ ರಕ್ತಪಾತವೇ ಆಗಿಬಿಡಬಹುದು. ಮನೋರೋಗ ಇಷ್ಟೆಲ್ಲಾ ಹಿಂಸಾಚಾರಕ್ಕೆ ಕಾರಣ! ಇಂತಹ ರೋಗಿಗಳನ್ನು ಉಪಾಯವಾಗಿ ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್ ಬೇಕು. ರೋಗಿಯಿಂದ ಇತರರಿಗೂ, ಇತರರಿಂದ ರೋಗಿಗೂ ರಕ್ಷಣೆ ನೀಡಲು ಆಂಬ್ಯುಲೆನ್ಸ್!
ತೀವ್ರತರದ ಮನೋರೋಗಿಯೊಬ್ಬನ ವಿಚಾರಗಳು, ಭಾವನೆಗಳು ಸಮತೋಲನ ತಪ್ಪಿರುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ‘ತಾನೊಬ್ಬ ರೋಗಿ’ ಎಂಬ ಸ್ವ – ಅರಿವೇ ಅವರಿಗಿರುವುದಿಲ್ಲ. ಅವರಿಗೆ ಕಂಡುಬರುವ ಪ್ರಪಂಚವೆಲ್ಲಾ ಭ್ರಮೆಯಿಂದ ಕೂಡಿರುತ್ತದೆ. ಭ್ರಮಾಲೋಕದಲ್ಲಿ ಮುಳುಗಿರುವ ವ್ಯಕ್ತಿ, ತಾನೊಬ್ಬ ರೋಗಿಯೆಂದು ಅರಿಯದ ವ್ಯಕ್ತಿ . ಹೇಗೆ ಆಸ್ಪತ್ರೆಗೆ ಬಂದಾನು? ಹೇಗೆ ಮಾತ್ರೆ ನುಂಗಿಯಾನು? ಹೀಗೆ ಅನೇಕ ದಿನ ಮಾತ್ರೆ, ಔಷಧಿ ನುಂಗದೆ ಕ್ರಮೇಣ ರೋಗ ಕೆರಳುತ್ತದೆ. ಉದ್ರೇಕಗೊಳ್ಳುತ್ತಾನೆ. ಇಂತಹ ರೋಗಿಗಳು ಅನೇಕ ಬಾರಿ ಸ್ವಂತ ಸಂಬಂಧಿಗಳನ್ನೇ ಅನುಮಾನಿಸುತ್ತಾರೆ. ಅವರಿಂದ ದೂರವಿರಲು ಪ್ರಯತ್ನಿಸುತ್ತಾರೆ. ಹೀಗೆ ರೋಗಿಯೆಂದು ಅರಿಯದ, ಸಂಬಂಧಿಗಳನ್ನು ನಂಬದ, ಅವರ ಮಾತಿಗೆ ಕಿವಿಗೊಡದ, ಉದ್ರಿಕ್ತ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯುವುದು ಹೇಗೆ? ಮನೋರೋಗ ಚಿಕಿತ್ಸೆಯಲ್ಲಿ ಇದೊಂದು ಬಹುದೊಡ್ಡ ಸಮಸ್ಯೆ.
ವಿದೇಶಗಳಲ್ಲಿ ಬಹುತೇಕರು ಕುಟುಂಬದ ಜೊತೆ ಬಾಳುವುದಿಲ್ಲ. ಅಲ್ಲಿನ ಸಾಮಾಜಿಕ ವ್ಯವಸ್ಥೆಯಲ್ಲಿ ವಿಚಿತ್ರ ವರ್ತನೆಯ ದೂರು ಬಂದ ಕೂಡಲೇ ಪೊಲೀಸರು ಕಾರ್ಯಪ್ರವೃತ್ತರಾಗಿ ‘ಶಂಕಿತ ಮನೋರೋಗಿ’ಯನ್ನು ಆಸ್ಪತ್ರೆಗೆ ಒಯ್ದು ಬಲವಂತವಾಗಿ ಆಸ್ಪತ್ರೆ ಸೇರಿಸುತ್ತಾರೆ. ಆದರೆ ಭಾರತದಲ್ಲಿ ಈ ಹೊಣೆ ಕುಟುಂಬದ್ದೇ. ನೆರೆಹೊರೆಯವರ ಸಹಾಯದಿಂದ ಅವರು ರೋಗಿಯನ್ನು ಆಸ್ಪತ್ರೆಗೆ ಕರೆತರುತ್ತಾರೆ. ಆದರೆ ನಗರೀಕರಣದ ಕಾರಣದಿಂದ ಅನೇಕರು ಉದ್ಯೋಗಕ್ಕಾಗಿ ಕುಟುಂಬ ಬಿಟ್ಟು ಒಬ್ಬರೇ ನಗರಗಳಲ್ಲಿ ವಾಸಿಸುತ್ತಿರುತ್ತಾರೆ. ಕುಟುಂಬಗಳು ಒಡೆದು ಮೂವರು, ನಾಲ್ವರು ವ್ಯಕ್ತಿಗಳಿರುವ ಸಣ್ಣ ಸಣ್ಣ ಕುಟುಂಬಗಳಿರುತ್ತವೆ. ಈ ವ್ಯಕ್ತಿಗಳಿಗೆ ಮನೋರೋಗವಾದರೆ ಆಸ್ಪತ್ರೆಗೆ ಸಾಗಿಸುವುದು ಹೇಗೆ?
ಹೀಗಾಗಿ ಕರ್ನಾಟಕ ಸರ್ಕಾರ ‘ಮನೋರೋಗಿಗಳಿಗಾಗಿಯೇ ಆಂಬ್ಯುಲೆನ್ಸ್’ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಬೆಂಗಳೂರು ಮಹಾನಗರದ ವ್ಯಾಪ್ತಿಯಲ್ಲಿ ನಡೆಸುತ್ತಿದೆ. ತರಬೇತಾದ ನರ್ಸ್ ಹಾಗೂ ಚಾಲಕರು ಇದರ ಸಿಬ್ಬಂದಿಗಳು. ಮನೋರೋಗಿಯನ್ನು ಆಸ್ಪತ್ರೆಗೆ ಕರೆತರಲಾಗದೇ ಒದ್ದಾಡುತ್ತಿರುವ ಕುಟುಂಬದವರು ಫೋನ್ ಮಾಡಿದರೆ, ಈ ಸಿಬ್ಬಂದಿ ಮನೆಗೇ ಬಂದು ರೋಗಿಯನ್ನು ಮಾತಾಡಿಸಿ, ಮನವೊಲಿಸಿ ಆಸ್ಪತ್ರೆಗೆ ಕರೆತರುತ್ತಾರೆ. ಆಕಸ್ಮಾತ್ ಬಲವಂತಪಡಿಸಿಯೇ ಕರೆತರಬೇಕಾದಾಗ, ಹೆಚ್ಚು ಹೊಡೆದಾಟ, ಅನಾಹುತವಾಗದಂತೆ ಉಪಾಯ ಮಾಡಿ ರೋಗಿಯನ್ನು ನಿಗ್ರಹಿಸಿ, ಆಸ್ಪತ್ರೆಗೆ ಸೇರಿಸಲು ನೆರವಾಗುತ್ತಾರೆ.
ಬೆಂಗಳೂರಿನ ಬಡಾವಣೆಯಿಂದ ವ್ಯಕ್ತಿಯೊಬ್ಬರು ಕರೆ ಮಾಡಿದರು. 37 ವರ್ಷದ ತನ್ನ ತಮ್ಮ ಆ.ಛ್ಚಿ ಪದವೀಧರನಾಗಿದ್ದು ಕಳೆದ ನಾಲ್ಕು ವರ್ಷದಿಂದ ಮನೋರೋಗಕ್ಕೆ ತುತ್ತಾಗಿದ್ದಾನೆ. ಚಿಕಿತ್ಸೆಯನ್ನು ನಿರಾಕರಿಸುತ್ತಿದ್ದಾನೆ. ಮನೆಯವರನ್ನೂ ಹತ್ತಿರ ಸೇರಿಸೊಲ್ಲ. ಅವನ ವರ್ತನೆ ಸಹಿಸಲಾರದೇ ಅವನ ತಂದೆ ತಾಯಿಗಳೂ ಬೇರೆ ಮನೆ ಹೂಡಿದ್ದು, ಅವನೊಬ್ಬನೇ ಮನೆಯಲ್ಲಿ ಜೀವಿಸುತ್ತಿದ್ದಾನೆ! ನಾಲ್ಕು ವರ್ಷಗಳಿಂದ ಮನೆಯ ಹೊರಗೇ ಬಂದಿಲ್ಲ! ಅವನನ್ನು ಆಸ್ಪತ್ರೆಗೆ ಸೇರಿಸಲು ಸಹಾಯ ಬೇಕು ಎಂದರು.
ಪದವಿಯಲ್ಲಿ ಎಂಜಿನಿಯರ್ ಆಗಿದ್ದರೂ, ಕಳೆದ ನಾಲ್ಕು ವರ್ಷಗಳಿಂದ ಈತ ಮನೆ ಸೇರಿಬಿಟ್ಟಿದ್ದಾನೆ. ಸ್ನಾನವಿಲ್ಲ, ಚೌರವಿಲ್ಲ, ಹಲ್ಲುಜ್ಜೊಲ್ಲ, ಬಟ್ಟೆ ಬದಲಾಯಿಸೊಲ್ಲ, ಯಾರನ್ನೂ ಮನೆಗೆ ಸೇರಿಸೊಲ್ಲ, ತಂದೆ ತಾಯಿಗಳನ್ನೂ ಒಳಗೆ ಬಿಡೊಲ್ಲ. ಬಲವಂತವಾಗಿ ಹತ್ತಿರ ಹೋದರೆ ಹೊಡೆದು, ಬಡಿದು ಮಾಡುತ್ತಾನೆ. ಮನೆಯವರೇ ಅಂತಃಕರಣ ತಡೆಯದೇ ಹತ್ತಿರದ ಹೋಟೆಲ್‌ನಿಂದ ಊಟದ ವ್ಯವಸ್ಥೆ ಮಾಡಿದ್ದಾರೆ. ಹೋಟೆಲ್ ಹುಡುಗರು ದಿನಕ್ಕೆ ಮೂರು ಬಾರಿ ಕಿಟಕಿ ಮೂಲಕ ಆಹಾರದ ಪೊಟ್ಟಣ ತಲುಪಿಸಿ ಬರುತ್ತಾರೆ. ಅವನನ್ನು ಮನೆಯಿಂದ ಹೊರ ತರುವ, ಮನೋವೈದ್ಯರ ಬಳಿ ಕರೆದೊಯ್ಯುವ ಅನೇಕ ಪ್ರಯತ್ನಗಳು ವಿಫಲವಾಗಿವೆ. ಈ ವಿಶೇಷ ಆಂಬ್ಯುಲೆನ್ಸ್‌ನ ಮಾಹಿತಿ ದೊರೆತ ಕೂಡಲೇ ಅವರು ಕರೆ ಮಾಡಿದ್ದಾರೆ.
ಆಂಬ್ಯುಲೆನ್ಸ್ ಸಿಬ್ಬಂದಿ, ಪೊಲೀಸರ ಸಹಾಯವನ್ನೂ ಸಜ್ಜು ಮಾಡಿಕೊಂಡು ಮನೆ ತಲುಪಿದರು. ಪಾಳು ಬಿದ್ದು, ಭೂತ ಬಂಗಲೆಯಂತಿದ್ದ ಮನೆ. ಮನೆಯ ಮುಂದೆಲ್ಲ ಕಸ, ಧೂಳು, ಜೇಡ. ಅನೇಕ ಬಾರಿ ಹೆಸರನ್ನು ಕೂಗಿ, ಉತ್ತರ ಸಿಗದೇ ಬಾಗಿಲು ಬಡಿದಾಗ ಕಿಟಕಿಯಲ್ಲಿ ಮುಖವೊಂದು ಕಾಣಿಸಿತು! ಅಸ್ತವ್ಯಸ್ಥವಾಗಿ ಕೆದರಿದ್ದ ಗಂಟು ಗಂಟಾಗಿದ್ದ ಕೂದಲು, ದಾಡಿ, ಗುಳಿಬಿದ್ದ ಕಣ್ಣುಗಳೇ ಮುಖದ ಲಕ್ಷಣವಾಗಿದ್ದವು. ಪಾಸ್‌ಪೋರ್ಟ್ ಆಫೀಸಿನ ಮಾಹಿತಿ ಮೇರೆಗೆ ಬಂದಿದ್ದಾಗಿ ತಿಳಿಸಿ, ಆಸ್ಪತ್ರೆಗೆ ಬರಬೇಕೆಂದು ಹೇಳಿದಾಗ ಆ ವ್ಯಕ್ತಿ ಬಾಗಿಲು ತೆರೆಯಲಿಲ್ಲ. ಬಲವಂತವಾಗಿ ಬಾಗಿಲು ಮುರಿದು ಒಳನುಗ್ಗಿದರೆ, ಆತ ಒಳಗಿನ ಕೊಠಡಿಗೆ ಓಡಿ ಬಾಗಿಲು ಹಾಕಿಕೊಂಡು ಬಿಟ್ಟ! ಅವನನ್ನು ‘ಹಿಡಿಯಲು’ ಜೂಟಾಟವೇ ನಡೆದುಹೋಯ್ತು. ಧೂಳು, ಕಸಮಯವಾಗಿದ್ದ ನೆಲ, ಹಾಸಿಗೆ, ಮಂಚ, ಪೀಠೋಪಕರಣಗಳು. ಒಳಗೆಲ್ಲ ಉಸಿರುಗಟ್ಟುವ ವಾತಾವರಣ, ವಾಸನೆ! ನಾಲ್ಕು ವರ್ಷದಿಂದ ಕಸ ಗುಡಿಸಿಲ್ಲ! ನೆಲದ ಮೇಲೆಲ್ಲಾ ನಾಣ್ಯದ ರಾಶಿ! ಅವನ ಮೈಯಿಂದಲೂ ಸಹಿಸಲಾಗದ ದುರ್ವಾಸನೆ. ಬಟ್ಟೆಯೂ ಸವೆದು ಸವೆದು ಚಿಂದಿ, ಚಿಂದಿಯಾಗಿದೆ. ನಾಲ್ಕು ವರ್ಷದಿಂದ ಸ್ನಾನ ಮಾಡದ ಮೈಯೂ ಅಂಟು, ಅಂಟು. ಮನೆ ತುಂಬ ಧೂಳು ಹಿಡಿದು ಕೂತ ಕಂಪ್ಯೂಟರ್‌ಗಳು, ಎಲೆಕ್ಟ್ರಾನಿಕ್ ಸಲಕರಣೆಗಳು.
ಅಂತೂ ಇಂತೂ ಆ ಧೂಳು, ವಾಸನೆ ಮಧ್ಯೆ ಈ ರೋಗಿಯನ್ನು ಹಿಡಿದು ಅವನ ಹೋರಾಟದ ಮಧ್ಯೆ ಅವನಿಗೆ ಇಂಜೆಕ್ಷನ್ ಕೊಟ್ಟು ಮನೆಯಿಂದ ಹೊರತಂದು ಆಸ್ಪತ್ರೆಗೆ ಸೇರಿಸಿದರು. ನಾಲ್ಕು ವರ್ಷದಿಂದ ಚಿಕಿತ್ಸೆ ನಿರಾಕರಿಸಿದ್ದ ರೋಗಿಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಪ್ರಾರಂಭಿಸಲಾಯಿತು.
ಮನೋರೋಗಿಗಳ ಸಮಸ್ಯೆ ಉಳಿದ ರೋಗಿಗಳಂತಲ್ಲ . ರೋಗಿಯೂ ರೋಗದ ಪರಿವೆಯಿಲ್ಲದೆ ಚಿಕಿತ್ಸೆಯನ್ನೇ ನಿರಾಕರಿಸುತ್ತಾನೆ. ಚಿಕಿತ್ಸೆಗೆ ಒಳಗಾಗಲು ಪ್ರತಿಭಟಿಸುತ್ತಾನೆ. ಅವರನ್ನು ಆಸ್ಪತ್ರೆಗೆ ಒಯ್ಯುವಲ್ಲಿ ಬಸವಳಿಯುವ ಕುಟುಂಬಗಳಿಗೆ ಈ ‘ಮನೋರೋಗಿಗಳಿಗಾಗಿ ಆಂಬ್ಯುಲೆನ್ಸ್’ ಒಂದು ವರದಾನ.
ಮನೋರೋಗಿಗಳ ‘ಮನವೆಂಬ ನಾವೆ’ಯನ್ನು ದುರಸ್ತಿಗಾಗಿ ಗ್ಯಾರೇಜ್‌ಗೆ ಒಯ್ಯಲು ‘ಮನೋರೋಗಿಗಳಿಗಾಗಿ ಆಂಬ್ಯುಲೆನ್ಸ್’ ಬೇಕಾಗುತ್ತದೆ.

ಮೂಲ: ವಿಕ್ರಮ

3.01694915254
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top