ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಮಾನಸಿಕ ಆರೋಗ್ಯ / ವೈದ್ಯರೇ ಮನೋರೋಗಿಯಾದಾಗ…..
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ವೈದ್ಯರೇ ಮನೋರೋಗಿಯಾದಾಗ…..

ವೈದ್ಯರೇ ಮನೋರೋಗಿಯಾದಾಗ…..

‘ ವೈದ್ಯೋ ನಾರಾಯಣೋ ಹರಿಃ ‘ ಎಂದು ಭಾರತದಲ್ಲೊಂದು ನಂಬಿಕೆ. ವೈದ್ಯರು ದೇವರ ಸಮಾನ. ಖಾಯಿಲೆಯಿಂದ ಮುಕ್ತಿ ಕೊಡುವ ನಾರಾಯಣ ಎಂದು ಇಂದಿಗೂ ಬಹುಮಂದಿ ನಂಬುತ್ತಾರೆ. ಆದರೆ ವೈದ್ಯರೂ ಮನುಷ್ಯರೇ ತಾನೆ? ಉಳಿದ ಮನುಜರಂತೆ ಅದೇ ರಕ್ತ, ಮಾಂಸ, ಮಜ್ಜೆಗಳಿಂದ ತಯಾರಾದ ದೇಹವುಳ್ಳವರು. ಅವರಿಗೇ ಖಾಯಿಲೆ ಎಂದು ತಿಳಿದು ಬಂದಾಗ ರೋಗಿಯೊಬ್ಬನಿಗೆ ಪೆಚ್ಚೆನಿಸುವುದು. ವೈದ್ಯನ ಚಿಕಿತ್ಸಕ ಸಾಮರ್ಥ್ಯದ ಮೇಲೆ ಅನುಮಾನ ಬರುವುದು ಸಹಜ. ತನಗೆ ಬರುವ ಖಾಯಿಲೆಯನ್ನೇ ಗುರುತಿಸಿ ತಡೆಯಲಾಗದವನು, ಬೇರೊಬ್ಬರ ಖಾಯಿಲೆಯನ್ನು ಏನು ತಾೇ ಗುಣಪಡಿಸಬಲ್ಲ ಎನ್ನಿಸುತ್ತದೆ. ಆದರೆ ಇಂದಿನ ಕಲುಷಿತ ವಾತಾವರಣ, ಹದಗೆಟ್ಟ ಜೀವನ ಶೈಲಿಯಲ್ಲಿ ವೈದ್ಯರೂ ರೋಗಿಗಳಾಗಬಲ್ಲರು. ಅದೂ ಪೋಷಕರಿಬ್ಬರೂ ವೈದ್ಯರಾಗಿದ್ದಾಗಲೂ…
40 ವರ್ಷದ ಅವಿವಾಹಿತ ವೈದ್ಯೆಯನ್ನು ಪೋಷಕರು ಮನೋವೈದ್ಯರಲ್ಲಿಗೆ ಕರೆತಂದರು. ಕರೆತಂದ ಪೋಷಕರಿಬ್ಬರೂ ವೈದ್ಯರು ಹಾಗೂ ಸ್ಪೆಷಲಿಸ್ಟ್‌ಗಳು. ಈ ಮಗಳು ಮನೆೆ ಬರುವ ಅತಿಥಿಗಳನ್ನು ಅವಮಾನಿಸುವುದು, ಅವರ ಮೇಲೆ ಹಲ್ಲೆ ಮಾಡುವುದು, ಮನೆಯ ಸಾಮಾನು ಸರಂಜಾಮುಗಳನ್ನು ಸುಡುವುದು, ಒಡೆಯುವುದು ಮಾಡುತ್ತ್ತಿದ್ದಾಳೆಂದು ಅವರ ದೂರು.
ಈ ಇಬ್ಬರು ಸ್ಪೆಷಲಿಸ್ಟ್ ಡಾಕ್ಟರ್‌ಗಳಿಗೆ ಈಕೆ ಮೊದಲನೇ ಮಗಳು. ಮದುವೆಯಾದ ಹತ್ತು ವರ್ಷಗಳ ನಂತರ ಮೊದಲ ಮಗಳು ಹುಟ್ಟಿದಳು. ಎರಡು ವರ್ಷದ ಅಂತರದಲ್ಲಿ ಮತ್ತಿಬ್ಬರು ಹೆಣ್ಣು ಮಕ್ಕಳ ಜನನ. ಚಿಕ್ಕಂದಿನಿಂದ ಮೊದಲ ಮಗಳು ಒಂಟಿ. ಬೇರೆ ಮಕ್ಕಳ ಜೊತೆ ಬೆರೆಯಳು, ಸ್ವಂತ ತಂಗಿಯರ ಜೊತೆ ಕೂಡ. ಓದಿನಲ್ಲಿ ಸಾಧಾರಣ. ಯಾವ ಹವ್ಯಾಸವಿಲ್ಲ, ಕ್ರೀಡೆ, ನೃತ್ಯದಲ್ಲಿ ಆಸಕ್ತಿಯಿಲ್ಲ.
ವೃತ್ತಿಯ ಕರೆಯ ಮೇಲೆ ದಂಪತಿಗಳಿಬ್ಬರೂ ಮಕ್ಕಳ ಜೊತೆ ಎಂಟು ವರ್ಷ ಹೊರದೇಶದಲ್ಲಿದ್ದರು. ಆಮೇಲೆ ಸರ್ಕಾರಿ ಆದೇಶದ ಮೇರೆಗೆ ಗ್ರಾಮವೊಂದಕ್ಕೆ ಮರಳಿದರು. ನಂತರ ಇಬ್ಬರೂ ವೈದ್ಯರು ತಮ್ಮ ತಮ್ಮ ಸ್ನಾತಕೋತ್ತರ ಪದವಿ ಪಡೆಯುವ ಪ್ರಯತ್ನದಲ್ಲಿ ಮುಳುಗಿಬಿಟ್ಟರು. ಮಕ್ಕಳು ಹೇಗೆ ಬೆಳೆದರೆಂಬುದೂ ಅವರಿಗೆ ನೆನಪಿಲ್ಲ!
ಪಿ.ಯು.ಸಿಯಲ್ಲಿ ಮೊದಲ ಮಗಳು ಸಾಧಾರಣ ಅಂಕ ಪಡೆದು ಪಾಸಾದಳು. ಆದರೆ ಅವಳಿಗೆ ನಾನೂ ತಂದೆ-ತಾಯಿಯಂತೆ ವೈದ್ಯೆಯಾಗಬೇಕೆಂಬ ಹಠ. ಬೇರೇನೂ ಓದಲು ತಯಾರಿಲ್ಲ. ಅವರಿವರ ಕಾಲುಕಟ್ಟಿ ತಂದೆ-ತಾಯಿಗಳು ಅವಳಿಗೆ ಖಾಸಗಿ ಕಾಲೇಜಿನಲ್ಲಿ ಸೀಟು ಕೊಡಿಸಿದರು. 
ನಂತರದ ದಿನಗಳಲ್ಲಿ ತಂದೆ-ತಾಯಿಗಳು ಸೈಟುಕೊಳ್ಳುವ, ಮನೆ ಕಟ್ಟುವ ಚಟುವಟಿಕೆಗಳಲ್ಲಿ ಮಗ್ನರಾಗಿಬಿಟ್ಟರು. ಒಂದು ದಿನ ಮಗಳ ವೈದ್ಯಕೀಯ ಕಾಲೇಜಿನಿಂದ ಫೋನು ಬಂತು- ಮಗಳು ಹುಚ್ಚಾಗಿಬಿಟ್ಟಿದ್ದಾಳೆಂದು. ಆಗ ಎಚ್ಚೆತ್ತ ತಂದೆ-ತಾಯಿಗಳು ಕಾಲೇಜಿಗೆ ಓಡಿದರು. ಯಾರ ಜೊತೆಗೂ ಬೆರೆಯೊಲ್ಲ, ಮೌನವಾಗಿ ಶತಪಥ ಹಾಕುತ್ತಿರು್ತಾಳೆ, ಹಾಸ್ಟೆಲ್ ಮೆಸ್‌ಗೆ ದುಡ್ಡು ಕಟ್ಟೊಲ್ಲವೆಂದು ದೂರು ಬಂತು. ಮಗಳನ್ನು ವಿಚಾರಿಸಿದರೆ ಏನೂ ಉತ್ತರವಿಲ್ಲ ಎಂದುಕೊಂಡು ರೂಂ ಬದಲಾಯಿಸಿದರೆ ಆಕೆ ಸರಿ ಹೋಗಬಹುದು, ಬೇರೆ ರೂಂ ವ್ಯವಸ್ಥೆ ಮಾಡಿ ತಂದೆ-ತಾಯಿ ಮರಳಿದರು.
ಮೂರು ತಿಂಗಳ ನಂತರ, ಒಂದು ದಿನ ಆಕೆ ಹಾಸ್ಟೆಲ್ ತೊರೆದು ಮನೆೇ ಬಂದು ಬಿಟ್ಟಳು. ಕಾಲೇಜಿಗೆ ಹೋಗೊಲ್ಲವೆಂದಳು. ಮನೆಯಲ್ಲಿ ಮಾತಿಲ್ಲ, ಕತೆಯಿಲ್ಲ. ಮೌನವಾಗಿ ಗಂಟೆಗಟ್ಟಲೆ ಕೊಠಡಿಯೊಳಗೇ ಸುಮ್ಮನೆ ಕುಳಿತಿರುತ್ತಿದ್ದಳು. ಈಗ ಆತಂಕಗೊಂಡ ತಂದೆ ತಾಯಿ ಅವಳನ್ನು ಮನೋವೈದ್ಯರ ಬಳಿ ಕರೆದೊಯ್ದರು. ಮನೋರೋಗದ ಔಷಧಿ ಪ್ರಯೋಗ ನಡೆಯಿತು. ಚೇತರಿಸಿಕೊಂಡ ಈಕೆ ಮತ್ತೆ ಕಾಲೇಜು ಸೇರಿ, ಓದು ಮುಗಿಸಿ ವೈದ್ಯೆಯಾಗಿಬಿಟ್ಟಳು!
ನಂತರ ಸ್ನಾತಕೋತ್ತರ ಪದವಿಗೆ ಪ್ರಯತ್ನ ಶುರುವಾಯಿತು. ಅನೇಕ ಪ್ರಯತ್ನಗಳ ನಂತರ ಸೀಟೂ ಸಿಕ್ಕಿತು. ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುಾಗಲೇ ಒಮ್ಮೆ ನಿದ್ರೆ ಮಾತ್ರೆ ನುಂಗಿ ಆತ್ಮಹತ್ಯೆಗೆ ಪ್ರಯತ್ನಿಸಿದಳು. ಹುಷಾರಾಗಿ ಮನೆಗೆ ಬಂದಳು. 
ಪದವಿಯ ಅಂತಿಮ ಪರೀಕ್ಷೆಗೆ ಹಾಜರಾಗಲಿಲ್ಲ. ಮನೆ ಸೇರಿಬಿಟ್ಟಳು. ಎರಡು ಮೂರು ಕಡೆ ಕೆಲಸಕ್ಕೆ ಹೋಗುವ ಪ್ರಯತ್ನವೂ ನಡೆಯಿತು. ಹೆಚ್ಚು ದಿನ ಎಲ್ಲೂ ಉಳಿಯಲಿಲ್ಲ. ಕಳೆದ ಹತ್ತು ವರ್ಷಗಳಿಂದ ಮನೆಯೊಳಗೆ ಇದ್ದಾಳೆ!
ತಂದೆ-ತಾಯಿಗಳು ಏನಾದರೂ ಚರ್ಚಿಸಿದರೆ, ಆಕೆ ಸಹಿಸೊಲ್ಲ. ಇಬ್ಬರೂ ಒಬ್ಬರನ್ನೊಬ್ಬರು ಮಾತನಾಡಿಸಬಾರದೆಂದು ತಾಕೀತು ಮಾಡುತ್ತಾಳೆ. ಜಾಸ್ತಿ ಮಾತಾಡುವ ತಾಯಿಯನ್ನು ಹೆದರಿಸಲು ಮೇಜಿನ ಮೇಲೆ ಒಂದು ದೊಣ್ಣೆ ಇಟ್ಟಿದ್ದಾಳೆ. ಹೊಡೆಯುತ್ತೇನೆಂದು ಹೆದರಿಸುತ್ತಾಳೆ. 
ತಾಯಿ ಮಲಗಿದ್ದಾಗ ಆಕೆ ಮೇಲೆ ಕಾಫಿ, ಟೀ, ನೀರು ಸುರಿಯುತ್ತಾಳೆ. ಮನೆಯ ಕೆಲಸದವರನ್ನು ಪೊರಕೆ ಹಿಡಿದು ಹೊಡೆಯಲು ಅಟ್ಟಿಸಿಕೊಂಡು ಬರುತ್ತಾಳೆ. ಮನೆಗೆ ಅತಿಥಿಗಳು ಬಂದರೆ, ಮುಚ್ಚಿದ ಬಾಗಿಲ ಹಿಂದೆ ನಿಂತು ಜೋರಾಗಿ ಬೈಯ್ಯುತ್ತಾಳೆ. ಮೊನ್ನೆ ಸೋದರ ಮಾವ ಮನೆಗೆ ಬಂದಾಗ ತಿಂಡಿ ಇಟ್ಟಿದ್ದ ಟೀಪಾಯಿ ಒದ್ದು ಎಲ್ಲ ತಿಂಡಿ, ಕಾಫಿ ಉರುಳಿಸಿ ಪೇಚಾಟವಾಗಿ ಹೋಯಿತು. ಇನ್ನೊಮ್ಮೆ ಅತಿಥಿಗಳನ್ನು ಸ್ವಾಗತಿಸಲು ತಂದೆ ತಾಯಿ ಹೊರಬಾಗಿಲಲ್ಲಿ ನಿಂತಿದ್ದಾಗ, ಒಳಗಿನಿಂದ ಆಕೆ ಚಿಲಕ ಹಾಕಿಕೊಂಡು ಅನೇಕ ಗಂಟೆ ತೆಗೆಯಲೇ ಇಲ್ಲ! ಹಳೆಯ ದಾಖಲೆಗಳಿಗೆ ವಸ್ತುಗಳಿಗೆ ಮನೆಯಲ್ಲೇ ಬೆಂಕಿ ಹಚ್ಚಿ ಬಿಡುತ್ತಾಳೆ. 
ಮನೋವೈದ್ಯರ ಬಳಿಯೂ ಬರುವುದಿಲ್ಲ. ಔಷಧಿಯನ್ನೂ ತೆಗೆದುಕೊಳ್ಳುವುದಿಲ್ಲ. ಸ್ವತಃ ವೈದ್ಯಳಾದ ಈಕೆ ಹೀಗೇಕೆ ಮನೋರೋಗಿ ಯಾಗಿಬಿಟ್ಟಳು? ತಂದೆ ತಾಯಿ ಇಬ್ಬರೂ ಸ್ಪೆಷಲಿಸ್ಟ್ ವೈದ್ಯರಾಗಿದ್ದೂ ಏಕೆ ಅವಳನ್ನು ಸರಿಪಡಿಸಲಾಗಲಿಲ್ಲ ಎಂಬ ಪ್ರಶ್ನೆಗಳು ಮನೋವೈದ್ಯರನ್ನು ಕಾಡಿದವು.
ಮನೋರೋಗ, ಮಿದುಳಿ ರೋಗದ ಪ್ರಕಟೀಕರಣ. ಈಕೆಯ ಎಲ್ಲಾ ವರ್ತನೆ ಗಳೂ ಮಿದುಳಿನ ಬೇರೆ ಬೇರೆ ಭಾಗದ ಅನಾರೋಗ್ಯದ ಲಕ್ಷಣಗಳು. ಇದನ್ನು ಪ್ರಾರಂಭದಲ್ಲೇ ಗುರುತಿಸಿ, ಬೇಗ ಚಿಕಿತ್ಸೆ ಕೊಡಿಸಿದ್ದಿದ್ದರೆ ಗುಣಪಡಿಸಬಹುದಿತ್ತು. ಆದರೆ ತಂದೆ ಾಯಿಗಳಿಬ್ಬರೂ ವೈದ್ಯರಾಗಿದ್ದರೂ ತಂತಮ್ಮ ವೃತ್ತಿಯಲ್ಲಿ ಮುಳುಗಿ ಹೋಗಿ ಮಗಳ ಖಾಯಿಲೆಯನ್ನೇ ಗುರುತಿಸಲಾಗದೇ ಇದ್ದರು. ವೈದ್ಯರೂ ಮನೋರೋಗ ಲಕ್ಷಣಗಳ ಬಗ್ಗೆ ಅಜ್ಞಾನಿಗಳು!
ಈಗಲೂ ಮಗಳ ಮನೋರೋಗಕ್ಕೆ ನೀನೇ ಕಾರಣವೆಂದು ಒಬ್ಬರನ್ನೊಬ್ಬರು ದೂಷಿಸುತ್ತಾ, ಕಾದಾಡುತ್ತಾ ಕುಳಿತ ತಂದೆ ತಾಯಿಯರನ್ನು ವೈದ್ಯರು ಸಮಾಧಾನಗೊಳಿಸಿದರು. ವೈದ್ಯೆಯ ಹುಳುಕು ಹತ್ತಿದ ಮನವೆಂಬ ನಾವೆಯನ್ನು ರೋಗ ಮುಕ್ತಗೊಳಿಸಲು ದಾರಿಗಳನ್ನು ಹುಡುಕಹತ್ತಿದರು.

- ಡಾ. ಪ್ರಶಾಂತ್‍.ಎನ್‍.ಆರ್‍

ಮೂಲ: ವಿಕ್ರಮ

3.0306122449
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top