ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಮಾನಸಿಕ ಆರೋಗ್ಯ / ವಿವಾಹದಲ್ಲಿ ಲೈಂಗಿಕ ಸಮಸ್ಯೆಗಳು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ವಿವಾಹದಲ್ಲಿ ಲೈಂಗಿಕ ಸಮಸ್ಯೆಗಳು

ವಿವಾಹದಲ್ಲಿ ಲೈಂಗಿಕ ಸಮಸ್ಯೆಗಳು

ಇವತ್ತಿನ ಯಾವುದೇ ಭಾಷೆಯ ವರ್ತಮಾನ ಪತ್ರಿಕೆ ಅಥವಾ ನಿಯತಕಾಲಿಕಗಳನ್ನು ನೋಡಿದರೆ ನಿಮಗೆ ಖಂಡಿತವಾಗಿ ಕಾಣುವುದು ಲೈಂಗಿಕಶಕ್ತಿಯನ್ನು ಹೆಚ್ಚುಮಾಡುವ ಔಷಧಿಗಳ ಜಾಹಿರಾತುಗಳು. ಎಷ್ಟೇ ಸೂಚ್ಯವಾಗಿ ಸಂದೇಶಗಳನ್ನು ನೀಡಿದರೂ ಎಲ್ಲರಿಗೂ (ಮಕ್ಕಳಿಗೂ ಕೂಡ!) ತಿಳಿಯುವ ಅಂಶವೆಂದರೆ ಕಾಮವನ್ನು ಹೆಚ್ಚುಹೆಚ್ಚಾಗಿ ಅನುಭವಿಸುವುದಕ್ಕಾಗಿ ಇವುಗಳನ್ನು ಬಳಸಬೇಕೆಂಬುದು. ಮಾತ್ರೆಗಳು, ಟಾನಿಕ್, ಪುಡಿ, ತೈಲಗಳು ಮುಂತಾದ ರೂಪದಲ್ಲಿರುವ ಇವುಗಳಿಗೆ ಭಾರೀ ಬೇಡಿಕೆ ಇರಲೇಬೇಕು. ಅದಿಲ್ಲದಿದ್ದರೆ ಜಾಹಿರಾತುಗಳಿಗಾಗಿ ಇದರ ತಯಾರಕರು ಇಷ್ಟೆಲ್ಲಾ ದೊಡ್ಡ ಮೊತ್ತದಲ್ಲಿ ರಾಷ್ಟ್ರದಾದ್ಯಂತ ಹಣ ವೆಚ್ಚಮಾಡಲು ಹೇಗೆ ಸಾಧ್ಯ? ಇಂತಹ ಕಂಪನಿಗಳು ಮಾತ್ರವಲ್ಲ, ರಸ್ತೆ ಬದಿಯಲ್ಲಿ ಸಣ್ಣ ಗುಡಾರ ಕಟ್ಟಿಕೊಂಡು ಲೈಂಗಿಕ ತೊಂದರೆಗಳಿಗೆ ಔಷಧ ಕೊಡುವವರೂ ಕೂಡ ಒಳ್ಳೆ ವ್ಯಾಪಾರ ನಡೆಸುತ್ತಾರೆ. ಹೀಗೆ ಜಾಹಿರಾತುಗಳ ಮೂಲಕ ಮತ್ತು ರಸ್ತೆ ಬದಿಯಲ್ಲಿ ಮಾರಾಟವಾಗುವ ಔಷಧಗಳು ವೈಜ್ಞಾನಿಕವಾಗಿ ತಯಾರಾಗಿ ಸರ್ಕಾರದಿಂದ ಮಾನ್ಯತೆ ಪಡೆದವುಗಳಲ್ಲ ಎನ್ನುವುದನ್ನು ಎಲ್ಲರೂ ನೆನಪಿಡಬೇಕು.

ಮದುವೆಯಾದವರೂ ಕೂಡ ಲೈಂಗಿಕ ವಿಚಾರಗಳ ಬಗೆಗೆ ಮಾತನಾಡುವುದಿರಲಿ, ಅದರ ಬಗೆಗೆ ವೈಜ್ಞಾನಿಕವಾಗಿ ಬರೆದಿರುವುದನ್ನು ಓದಲೂ ಕೂಡ ಮುಜುಗರ ಪಟ್ಟುಕೊಳ್ಳುತ್ತಾರೆ. ಹಾಗಾಗಿ ತಮ್ಮ ಸಮಸ್ಯೆಗಳನ್ನು ಯಾರಲ್ಲೂ (ವೈದ್ಯರಲ್ಲಿ ಅಥವಾ ಆಪ್ತಸಲಹೆಗಾರರಲ್ಲಿ ಕೂಡ) ಹೇಳಿಕೊಳ್ಳಲಾರದೆ ಇಂತಹ ನಕಲಿ ಔಷಧಿಗಳಿಗೆ ಹಣ ಚೆಲ್ಲುತ್ತಾರೆ. ಎಲ್ಲಾ ವೈದ್ಯರುಗಳು ಖಚಿತವಾಗಿ ಹೇಳುವಂತೆ ಈ ತರದ ಔಷಧಗಳಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಅದೂ ಅಲ್ಲದೆ ಇಂತಹ ಔಷಧಗಳಲ್ಲಿ ಯಾವ ಅಂಶಗಳು ಎಷ್ಟು ಪ್ರಮಾಣದಲ್ಲಿವೆ ಎಂದು ನಿರ್ದಿಷ್ಟವಾಗಿ ನಮೂದಿಸಿರುವುದಿಲ್ಲ. ಹಾಗಾಗಿ ಅನುಕೂಲವಾಗುವುದಿರಲಿ, ಕೆಲವೊಮ್ಮೆ ಇವುಗಳಿಂದ ಅಪಾಯವೂ ಆಗುವ ಸಾಧ್ಯತೆ ಇರುತ್ತದೆ. ಒಂದಾದ ಮೇಲೊಂದರಂತೆ ಎಲ್ಲಾ ಔಷಧಗಳನ್ನು ಪ್ರಯೋಗ ಮಾಡಿ ನಿರಾಸೆಹೊಂದಿದವರನ್ನು ನಾನು ನೋಡಿದ್ದೇನೆ.

ಎಲ್ಲವೂ ಮಾನಸಿಕ!
ನಾಡಿನ ಹೆಸರಾಂತ ಲೈಂಗಿಕ ತಜ್ಞರಾದ ಡಾ. ವಿನೋದ್ ಛಬ್ಬಿಯವರ ಬಳಿ ಇತ್ತೀಚೆಗೆ ದಾಂಪತ್ಯ ಚಿಕಿತ್ಸೆಯ ಬಗೆಗೆ ವಿಶೇಷ ತರಬೇತಿಗಾಗಿ ಹೋಗಿದ್ದೆ. ಕಳೆದ ಇಪ್ಪತ್ತು ಮೂವತ್ತು ವರ್ಷಗಳಿಂದ ಲೈಂಗಿಕ ಮತ್ತು ದಾಂಪತ್ಯ ಸಮಸ್ಯೆಗಳ ವಿಚಾರದಲ್ಲಿ ಆಪ್ತಸಲಹೆ ಮತ್ತು ಮನೋಚಿಕಿತ್ಸೆ ನೀಡುತ್ತಿರುವ, ಅವರ ಪ್ರಕಾರ ಸಾವಿರಕ್ಕೆ 2-3 ಜನರಲ್ಲಿ ಮಾತ್ರ ಲೈಂಗಿಕ ಸಮಸ್ಯೆಗಳು ದೈಹಿಕ ಕಾರಣಗಳಿಗಾಗಿ ಬಂದಿರುತ್ತವೆ. ಉಳಿದಂತೆ ಎಲ್ಲಾ ಸಮಸ್ಯೆಗಳು ಮಾನಸಿಕ ಕಾರಣಗಳಿಂದಾಗಿ ಉಂಟಾಗಿರುತ್ತದೆ. ತಪ್ಪು ತಿಳುವಳಿಕೆಗಳು, ಭಯ, ಆತಂಕ, ಸಂಸಾರದಲ್ಲಿ ಹೊಂದಾಣಿಕೆ ಇಲ್ಲದಿರುವುದು ಮುಂತಾದ ಕಾರಣಗಳಿಂದಾಗಿ ದಂಪತಿಗಳು ಲೈಂಗಿಕ ತೊಂದರೆ ಅನುಭವಿಸುತ್ತಿರುತ್ತಾರೆ. ದೈಹಿಕವಾಗಿ ಸಧೃಡರಾಗಿರುವ ಇಂತಹ ದಂಪತಿಗಳನ್ನು ಔಷಧಿಗಳಿಂದ ಗುಣಪಡಿಸಲು ಹೇಗೆ ಸಾಧ್ಯ? ಕೆಲವೊಂದು ಔಷಧಿಗಳು ತಾತ್ಕಲಿಕ ಪರಿಹಾರ ನೀಡಿದರೂ ಇವುಗಳಿಂದ ಅಡ್ಡಪರಿಣಾಮಗಳಿರುತ್ತವೆ. ಹೆಚ್ಚಿನ ಜನ ಒಮ್ಮೆ ಔಷಧದ ಹೆಸರು ತಿಳಿದುಕೊಂಡು ತಮಗೆ ಬೇಕಾದಂತೆ ಉಪಯೋಗಿಸುತ್ತಾರೆ. ವೈದ್ಯರ ಸಲಹೆ ಇಲ್ಲದೆ ಇಂತಹ ಔಷಧಿಗಳ ಬಳಕೆ ತೀರಾ ಅಪಾಯಕಾರಿಯಾಗಬಹುದು. ಔಷಧಗಳ ಬದಲಾಗಿ ತಜ್ಞರಿಂದ ಆಪ್ತಸಲಹೆ ಮತ್ತು ಮನೋಚಿಕಿತ್ಸೆಗಳನ್ನು ಪಡೆದರೆ ಹೆಚ್ಚಿನ ಸಂದರ್ಭಗಳಲ್ಲಿ ಇಂತಹ ದಂಪತಿಗಳು ವಯಸ್ಸಿನ ತಡೆಯಿಲ್ಲದೆ ಸುಖವಾಗಿ ಸಾಂಸಾರಿಕ ಜೀವನ ಮುಂದುವರೆಸಿಕೊಂಡು ಹೋಗಬಹುದು.

ಆಪ್ತಸಲಹೆಕಾರನಾಗಿ ನಾನು ನೋಡಿದಂತೆ ಯುವಕರಷ್ಟೇ ಅಲ್ಲದೆ, ಮಧ್ಯವಯಸ್ಸಿನ ದಂಪತಿಗಳಲ್ಲಿ ಕೂಡ ಲೈಂಗಿಕ ತೊಂದರೆಯನ್ನು ಅನುಭವಿಸುತ್ತಿರುವವರು ಸಾಕಷ್ಟು ಜನರಿದ್ದಾರೆ. ಇವರಲ್ಲಿ ಎಷ್ಟೋ ಜನ ವಿವಿಧ ರೀತಿಯ ನಕಲಿ ಔಷಧಿಗಳನ್ನು ಸೇವಿಸಿ ನಿರಾಸೆ ಹೊಂದಿದ್ದರೆ ಇನ್ನೂ ಕೆಲವರು ಎಲ್ಲ ವಿಚಾರಗಳನ್ನೂ ತಮ್ಮಲ್ಲೇ ಅಡಗಿಸಿಕೊಂಡು, ಕುಟುಂಬದಲ್ಲಿ ಶಾಂತಿ ನೆಮ್ಮದಿ ಕಳೆದುಕೊಂಡು ಕೊರಗುತ್ತಿರುತ್ತಾರೆ. ಇನ್ನು ಕೆಲವರು ವಿವಾಹಬಾಹಿರ ಸಂಬಂಧಗಳಲ್ಲಿ ತೊಡಗಿ ನಿರಾಸೆಯನ್ನೂ ಜೊತೆಗೆ ಖಾಯಿಲೆಗಳನ್ನೂ ಆಹ್ವಾನಿಸಿಕೊಂಡಿದ್ದಾರೆ. ಇಂತವರು ಸ್ವಲ್ಪ ತಾಳ್ಮೆ ವಹಿಸಿ ಸೂಕ್ತ ಆಪ್ತಸಲಹೆ ಪಡೆದಲ್ಲಿ ವಿವಾಹ ಬಂಧನದೊಳಗೇ ಸಂಪೂರ್ಣ ತೃಪ್ತಿಯನ್ನು ಕಾಣಲು ಸಾಧ್ಯ.

ಚಿಕ್ಕ ವಯಸ್ಸಿನ ಎಷ್ಟೋ ಯವಕರು ತಾತ್ಕಲಿಕ ಪರಿಹಾರ ನೀಡುವ ಔಷಧಗಳ ಮೊರೆ ಹೋಗಿ ತಮ್ಮ ವೈವಾಹಿಕ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂತವರಿಗೂ ಕೂಡ ಮನೋಚಿಕಿತ್ಸೆ ಉತ್ತಮವಾಗಿ ಕೆಲಸಮಾಡುತ್ತದೆ.

ಲೈಂಗಿಕ ಸಮಸ್ಯೆಗಳ ಬಗೆಗೆ ತಜ್ಞರೊಡನೆ ಮಾತನಾಡಲು ಮುಜುಗರಪಟ್ಟುಕೊಂಡು, ಮುಂದೂಡಿದಷ್ಟೂ ಸಮಸ್ಯೆಗಳ ತೀವ್ರತೆ ಹೆಚ್ಚಾಗಿ ಪರಿಹಾರಕ್ಕೆ ಹೆಚ್ಚು ಸಮಯ ಬೇಕಾಗಬಹುದು. ಶೇ 90ಕ್ಕಿಂತ ಜಾಸ್ತಿ ಸಂದರ್ಭಗಳಲ್ಲಿ ಔಷಧಿಗಳ ಅಗತ್ಯವಿರುವುದಿಲ್ಲ ಎನ್ನುವುದನ್ನು ಜನಸಾಮಾನ್ಯರು ಮರೆಯಬಾರದು. ಔಷಧಗಳನ್ನು ಬಳಸಲೇಬೇಕಾದಲ್ಲಿ ವೈದ್ಯರ ಸಲಹೆಯಂತೆ ಮಾತ್ರ ಮುಂದುವರೆಯಬೇಕು. ಜಾಹಿರಾತುಗಳು ಅಥವಾ ರಸ್ತೆ ಬದಿಯ ನಕಲಿ ವೈದ್ಯರುಗಳನ್ನು ನಂಬಿ ಹಣ ಮತ್ತು ಆರೋಗ್ಯ ಎರಡನ್ನೂ ಕಳೆದುಕೊಳ್ಳಬಾರದು.

ಮೂಲ : ಕರುನಾಡು.

3.03100775194
Mallesh Apr 14, 2017 09:25 AM

ನನ್ನ ಪತ್ನಿ ನನ್ನ ಜೊತೆ ಪ್ರೀತಿಯಿಂದ ಇರದೆ ಸದ ತವರು ಮನೆಯಲ್ಲೇ ಇರುತ್ತಾಳೆ ನನ್ನನ್ನು ತಿರಸ್ಕಾರದಿಂದ ಕಾಣುತ್ತಾಳೆ ಎರಡು ಬಾರಿ ಗರ್ಭವತಿ ಯಾಗಿ ಗರ್ಭ ಪಾತ ಆಗಿ ದೆ ಮುಂದೆ ಹೇಗೆ

ಮಹಾಂತೇಶ Sep 04, 2016 10:04 PM

ನಿಮಗೆ ತಿಳಿಸುವ ವಿಷಯ ನಮಗೆ ಮದುವೆ ಆಗಿ 6 ವರ್ಷ ಆಯಿತು ನಮಗೆ ಮಕ್ಕಳಿಲ್ಲ ನಾವು ನಮ್ಮ ಸುತ್ತ ಮುತ್ತ ಇರುವ ವೈದ್ಯರ ಬಳಿ ತೋರಿಸಿದೆ ಆದರೂ ಮಕ್ಕಳಿಲ್ಲ ಅದಕೇ ನಾವು ದವಾಖಾಣ ತೋರಿಸಿದೆ ನಿಲ್ಲಿಸಿದೆವೆ ಅದರ ನಂತರ ನಮಗೆ ಒಂದು ಸಮಸ್ಯೆ ಸುರುವಾಹಿತು ಅದು ನಮ್ಮ ಲೈಂಗಿಕ ಸಂಪರ್ಕ ನಡೆಸುವಾಗ ನನ್ನ ಪತ್ನಿಗೆ ಲೈಂಗಿಕ ಸಂಪರ್ಕ ನಡಿಸುವಕು ಸಾದ್ಯವಿಲ್ಲ ಈಗ ಇ ಸಮಸ್ಯೆಯ ಕಾರಣ ಎನು ಯನುವ ತಿಳಿಸಿರಿ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top