অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಶ್ರೀಮಂತರನ್ನೂ ಬಿಡದ ಮನೋರೋಗ

ಶ್ರೀಮಂತರನ್ನೂ ಬಿಡದ ಮನೋರೋಗ

ನಿಸರ್ಗದ ಅನೇಕ ವಿದ್ಯಾಮಾನಗಳು ಹೇಗೆ ಬಡವ, ಶ್ರೀಮಂತರೆಂದು ತಾರತಮ್ಯ ಮಾಡುವುದಿಲ್ಲವೋ ಹಾಗೇ ಮನೋರೋಗಗಳೂ… ದರಿದ್ರ, ಧನಿಕರೆಂಬ ಭೇದವಿಲ್ಲ! ಮಾನವ ನಿರ್ಮಿತ ಭೇದಗಳಿಂದ ಬಡವರು ಹೆಚ್ಚು ಸಮಸ್ಯೆಗೊಳಗಾಗುವರೆಂದು ಮೇಲ್ನೋಟಕ್ಕೆ ಅನ್ನಿಸುತ್ತದೆ. ಧನಿಕರಿಗೆ ಹಣವನ್ನು ಸುರಕ್ಷಿತವಾಗಿಡುವ ಚಿಂತೆ ಒಂದೇ ಇರುತ್ತದೆ; ಬಡವರಿಗೆ ನೂರಾರು ಚಿಂತೆಗಳಿರುತ್ತವೆ ಎಂದು ಒಂದು ಸಾಮಾನ್ಯ ನಂಬಿಕೆ. ಆದೇ ಮನೋರೋಗ, ಮಿದುಳಿಗೆ ಸಂಬಂಧಿಸಿದ್ದು. ಮಿದುಳಿಗೆ ಬಡವ, ಶ್ರೀಮಂತನೆಂಬ ಭೇದವಿಲ್ಲ. ಬಡವನ ಮಿದುಳಿಗೆ ಅಂಟುವಷ್ಟೇ, ಧನಿಕರ ಮಿದುಳೂ ಖಾಯಿಲೆಗೆ ಒಳಗಾಗಬಲ್ಲದು!
36 ವರ್ಷದ ಅವಿವಾಹಿತ ಮಗನನ್ನು ವೃದ್ಧ ತಂದೆ-ತಾಯಿಗಳು ಮನೋ ವೈದ್ಯರಲ್ಲಿಗೆ ಕರೆತಂದರು. ಸಾಧಾರಣವಾಗಿ ತಮ್ಮನ್ನು ಮಾತೇ ಆಡಿಸದ ಮಗ ಕಳೆದ ಹತ್ತು ದಿನಗಳಿಂದ ಮಾತಾಡಿಸುತ್ತಿದ್ದಾನೆ! ನಮ್ಮ ಹಿಂದೆ ಮುಂದೆಯೇ ಸುತ್ತುತ್ತಿದ್ದಾನೆ. ನಿದ್ರೆ ಸರಿಯಾಗಿ ಮಾಡುತ್ತಿಲ್ಲ. ಈ ಮುಂಚೆಯೂ ಅವನು ಹೀಗೆ ವರ್ತಿಸಲಾರಂಭಿಸಿದಾಗ, ಅದು ಮನೋರೋಗದ ಲಕ್ಷಣವೆಂದು ವೈದ್ಯರು ತಿಳಿಸಿದ್ದರು. ಅವನಿಗೆ ತಪಾಸಣೆ ಮಾಡಬೇಕಿದೆ ಎಂದು ಅವರ ಕೋರಿಕೆ.
ಆಗರ್ಭ ಶ್ರೀಮಂತರು ಈ ತಂದೆ-ತಾಯಿ. ತಲೆ ತಲಾಂತರದಿಂದ ಬೆಳೆದು ಬಂದ ಆಸ್ತಿ ಪಾಸ್ತಿ, ಜಮೀನು, ಹಣ. ಇವರಿಗೆ ಇಬ್ಬರು ಮಕ್ಕಳು. ಮೊದಲನೆಯವ ಮನೋರೋಗಿ. ಎರಡನೇ ಮಗ ಇಂಜಿನಿಯರ್. ಮನೆಯಲ್ಲಿ ಯಾವುದಕ್ಕೂ ಕೊರತೆ ಇಲ್ಲ. ಕೋಟ್ಯಂತರ ಮೌಲ್ಯದ ಸಂಪತ್ತು!
ಈ ಹುಡುಗ ಹುಟ್ಟಿದಾಗಿನಿಂದ ಮೌನಿ. ಹೆಚ್ಚು ಚಟುವಟಿಕೆ, ಮಾತುಕತೆ ಇಲ್ಲ. ಯಾರಾದರೂ ಇವನಿಗೆ ಜೋರು ಮಾಡಿದರೂ, ಹೆದರಿ ಸುಮ್ಮನೆ ಜಾಗ ಖಾಲಿ ಮಾಡಿಬಿಡುತ್ತಿದ್ದ. 8 ವರ್ಷದವನಿದ್ದಾಗ ಓದಿಗೆ ಅನುಕೂಲವಾಗಲೆಂದು, ಸಂಬಂಧಿಕರ ಮನೆಯಲ್ಲಿ ಬಿಟ್ಟರು. ಮುಂದಿನ 12 ವರ್ಷ ತಂದೆ-ತಾಯಿಯಿಂದ ದೂರ ಉಳಿದು ಬೇರೆ ಬೇರೆ ಊರಲ್ಲಿ ಓದಿದ. 10ನೇ ತರಗತಿಯಲ್ಲಿ ಫಸ್ಟ್‌ಕ್ಲಾಸ್ ಪಡೆದ. ಅಲ್ಲಿಂದ ಮುಂದೆ ಅವನ ಸಮಸ್ಯೆ ಪ್ರಾರಂಭವಾಯಿತು.
ನಿಧಾನವಾಗಿ ಅವನ ಓದುವ ಸಾಮರ್ಥ್ಯ ಕುಂದಿತು. 2ನೇ ಪಿಯುಸಿ ನಾಪಾಸಾದ. ಮತ್ತೆ ಕಟ್ಟಿ ಪಾಸಾದ. ತಂದೆ ತಾಯಿ ಡೊನೇಷನ್ ಕೊಟ್ಟು ಇಂಜಿನಿಯರಿಂಗ್‌ಗೆ ಸೇರಿಸಿದರು. ಅಲ್ಲಿ ಪಾಠ ಅರ್ಥವಾಗುತ್ತಿಲ್ಲವೆಂದು ಕಾರಣ ಹೇಳಿ ವಾಪಸ್ಸು ಬಂದುಬಿಟ್ಟ. ಬಿ.ಕಾಂ.ಗೆ ಸೇರಿಸಿದರು. ನಾಮ್‌ಕೇವಾಸ್ತೆ ಕಾಲೇಜಿಗೆ ಹೋಗುತ್ತಿದ್ದ. ಮೂರು ವರ್ಷದಲ್ಲಿ ಪಾಸೂ ಆದ. ಸ್ವಲ್ಪ ದಿನ ಎಂಬಿಎಗೆ ಹೋಗಿ ಅದನ್ನು ಬಿಟ್ಟು ಬಿಟ್ಟ.
ನಂತರ ಬಿಸಿನೆಸ್ ಮಾಡುತ್ತೇನೆಂದು ಹಠ ಮಾಡಲು ಶುರು ಮಾಡಿದ. ಈ ಮೌನಿ, ಬಿಸಿನೆಸ್ ಮಾಡುತ್ತಾನೆಯೇ? ಎಂದು ತಂದೆ-ತಾಯಿಗಳಿಗೆ ಅನುಮಾನ. ಸ್ನೇಹಿತರ ಮಾತಿಗೆ ಮರುಳಾಗಿ, ತಂದೆಯನ್ನು ಬಲವಂತಪಡಿಸಿ ಅನೇಕ ಲಕ್ಷ ಪಡೆದು ಸ್ನೇಹಿತರ ಮಾತಿನಂತೆ ಬಿಸಿನೆಸ್ ಶುರು ಮಾಡಿದ. ಕೆಲವು ದಿನಗಳ ನಂತರ ಏನೋ ವ್ಯಾವಹಾರಿಕ ಸಮಸ್ಯೆ ಎದುರಾಯಿತು. ಸಮಸ್ಯೆ ಪರಿಹರಿಸುವ ಬದಲು ಬಿಸಿನೆಸ್ ಅನ್ನೇ ಮುಚ್ಚಿ ಬಿಟ್ಟ. ಹೀಗೆ ಸ್ನೇಹಿತರ ಸಲಹೆ ಪ್ರಕಾರ ಹೊಸ ಬಿಸಿನೆಸ್ ಯೋಚಿಸುವುದು, ತಂದೆ ತಾಯಿಗಳಿಂದ ಬಲವಂತವಾಗಿ ಲಕ್ಷಗಟ್ಟಲೆ ಹಣ ಪಡೆಯುವುದು, ಏನಾದರೂ ಸಮಸ್ಯೆ ಎದುರಾದರೆ ಹಣವನ್ನು ಅಲ್ಲೇ ಬಿಟ್ಟು ಮನೆಗೆ ವಾಪಸ್ಸಾಗುವುದು- ಹೀಗೆ ನಾಲ್ಕೈದು ಬಾರಿ ನಡೆಯಿತು.
ಹತ್ತು ವರ್ಷಗಳ ಹಿಂದೆ ಈತ ಒಬ್ಬ ಸ್ವಾಮೀಜಿಯ ಭಕ್ತನಾದ. ಆಶ್ರಮದಲ್ಲೇ ಉಳಿದುಬಿಟ್ಟ. ಸ್ವಾಮೀಜಿಯ ಕೃಪೆಯಿಂದ ಅವನ ಜೀವನದ ಎಲ್ಲಾ ಸಮಸ್ಯೆ ಪರಿಹಾರವಾಗುವುದೆಂದು ಅವನ ನಂಬಿಕೆ. ಕೆಲದಿನಗಳ ನಂತರ ಯಾರೋ ಹೇಳಿದರೆಂದು ತಲೆ ಬೋಳಿಸಿಕೊಂಡು, ಉರಿ ಬಿಸಿಲಲ್ಲಿ ತಪಸ್ಸು ಮಾಡುತ್ತ ಕೂರಲಾಂಭಿಸಿದ. ಜೊತೆಗೆ ನೀರೂ ಕುಡಿಯದ ನಿಟ್ಟುಪವಾಸ ವ್ರತ. ಇವನ ತಪಸ್ಸನ್ನು ನೋಡಲಾಗದೆ ಆಶ್ರಮದವರೇ ತಂದೆ-ತಾಯಿಗಳನ್ನು ಕರೆಸಿ ಇವನನ್ನು ಮನೆಗೆ ಕರೆದೊಯ್ಯಲು ಹೇಳಿದರು. ತಂದೆ-ತಾಯಿಗೆ ಗುರುತೇ ಹತ್ತದಂತಾಗಿದ್ದ. ಮನೆಗೆ ಬಂದವನು, ಪೂರಾ ಎರಡು ದಿನ ಕುಳಿತ ಕುರ್ಚಿಯಲ್ಲೇ ಕುಳಿತಿದ್ದ. ಊಟ, ನೀರು, ನಿದ್ರೆ ಇಲ್ಲ, ಮಾತಿಲ್ಲ. ಕೊನೆಗೆ ಇದು ಮನೋರೋಗವಿರಬಹುದು ಎಂದು ಅನುಮಾನಿಸಿ ಅವನನ್ನು ಮನೋವೈದ್ಯರಲ್ಲಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು. ಹುಷಾರಾದ. ಆದರೂ ಅವನ ವರ್ತನೆ ಅಸಹಜವಾಗಿಯೇ ಉಳಿಯಿತು.
ಆಗಾಗ ದೇವಸ್ಥಾನದ ಮೈಕಿನಲ್ಲಿ ನನ್ನ ಬಗ್ಗೆ ಏನೋ ಹೇಳುತ್ತಾರೆ ಎನ್ನುವುದು, ಜನರೆಲ್ಲ ನನ್ನನ್ನು ಹಿಜಡಾ ಎಂಬಂತೆ ನೋಡುತ್ತಾರೆ ಎನ್ನುವುದು, ವಾಸ್ತು ಪ್ರಕಾರ ಎಲ್ಲವೂ ಇರಬೇಕೆನ್ನುವುದು, ಚಿಕ್ಕ ಚಿಕ್ಕ ಕಾರಣಕ್ಕೂ ಗುಡಿಗೆ ಹೋಗಿ ನಮಸ್ಕರಿಸಬೇಕೆನ್ನುವುದು, ರಾತ್ರಿ ಹೊತ್ತು ಹೂಕೋಸು ಅಡುಗೆ ಮಾಡಲೇ ಬಾರದೆನ್ನುವುದು, ಟಿ.ವಿಯಲ್ಲಿ ನನ್ನ ಬಗ್ಗೆಯೇ ಕಾರ್ಯಕ್ರಮಗಳು ಬರುತ್ತವೆ ಎನ್ನುವುದು – ಹೀಗೆಲ್ಲ ಅವನ ನಡವಳಿಕೆ.
ಅವಿಭಕ್ತ ಕುಟುಂಬದ ನನ್ನ ಪಾಲು ನನಗೆ ಈಗಲೇ ಬೇಕೆಂದು ಹಠ ಮಾಡಿ, ಹಲವಾರು ಲಕ್ಷಗಳನ್ನು ಪಡೆದು ಬ್ಯಾಂಕಿನಲ್ಲಿಟ್ಟ. ಹತ್ತಾರು ಲಕ್ಷ ಹಣವನ್ನು ಉಳಿತಾಯ ಖಾತೆಯಲ್ಲೇ ಇಟ್ಟ. ಎಫ್‌ಡಿ ಮಾಡಿದರೆ ಲಾಭವೆಂದರೂ ಕೇಳುವುದಿಲ್ಲ. ಸಾವಿರಾರು ರೂಪಾಯಿಗಳನ್ನು ಪರ್ಸಿನಲ್ಲಿಟ್ಟುಕೊಂಡು ಓಡಾಡುತ್ತಾನೆ. ಎಲ್ಲೋ ಇಟ್ಟು ಮರೆತೇ ಬಿಡುತ್ತಾನೆ. ಯಾರೂ ಸ್ನೇಹಿತರಿಲ್ಲ. ಬೆಳಿಗ್ಗೆ ಹೊರಟು ಸಂಜೆ ಬರುತ್ತಾನೆ. ಎಲ್ಲಿ ಹೋಗ್ತಾನೋ ಹೇಳುವುದಿಲ್ಲ. ಕಿಡಿಗೇಡಿಗಳ ಮಾತನ್ನು ನಂಬಿ ಹೊಸ ಹೊಸ ಬಿಸಿನೆಸ್ ಯೋಚಿಸುತ್ತಲೇ ಇರುತ್ತಾನೆ. ಸಾಮರ್ಥ್ಯ ಇಲ್ಲದ ಈತ ಸುಮ್ಮನಾದರೂ ಇದ್ದರೆ ನಾವೇ ಅವನನ್ನು ಸಾಕಿಬಿಡಬಹುದು ಎಂದು ತಂದೆ-ತಾಯಿಗಳ ಅಭಿಮತ. ಹೋಗಲಿ, ಯಾವುದಾದರೂ ಬಡಹುಡುಗಿಯನ್ನು ಹುಡುಕಿ ಮದುವೆ ಮಾಡಿದರೆ ಆಕೆ ಇವನನ್ನು ನೋಡಿಕೊಳ್ಳಬಹುದೆಂದು ಇವರು ಯೋಚಿಸಿದರೆ, ಆತ ಮದುವೆಗೆ ಸುತರಾಂ ಒಪ್ಪುತ್ತಿಲ್ಲ.
ಇವನ ಭವಿಷ್ಯವನ್ನು ಕುರಿತು ಯೋಚಿಸಿ ತಂದೆ-ತಾಯಿ ಜರ್ಜರಿತ ರಾಗಿದ್ದಾರೆ. ಅಪಾರ ಶ್ರೀಮಂತಿಕೆ ಇದ್ದರೂ ಮನಸ್ಸಿಗೆ ನೆಮ್ಮದಿಯಿಲ್ಲ. ಈ ಯುವಕನಿಗೆ ಸುಲಭದಲ್ಲಿ ಗುಣವಾಗದ ಮನೋರೋಗವಿದೆ. ನಿರಂತರವಾಗಿ ಔಷಧಿ ಉಪಯೋಗಿಸಿದರೆ ಗುಣವಾಗುವ ಸಾಧ್ಯತೆ ಇದೆ. ಆದರೆ ಈತ ಸ್ವಲ್ಪ ಗುಣವಾದ ತಕ್ಷಣ ಔಷಧಿ ನಿಲ್ಲಿಸಿ ಬಿಡುತ್ತಾನೆ. ಯಾರ ಮಾತೂ ಕೇಳುವುದಿಲ್ಲ.
ಶ್ರೀಮಂತಿಕೆಯಿಂದ ಎಲ್ಲಾ ಸಮಸ್ಯೆಗಳನ್ನೂ ಪರಿಹರಿಸಲಾಗದು. ಈ ಯುವಕನ ಮನೋರೋಗವನ್ನು ಹತೋಟಿಗೆ ತಂದು, ವೃದ್ಧಾಪ್ಯದಲ್ಲಿರುವ ತಂದೆ ತಾಯಿಗಳ ಮನವೆಂಬ ನಾವೆಯನ್ನು ನೆಮ್ಮದಿಯಿಂದ ತೇಲುವಂತೆ ಮಾಡಲು ಮನೋವೈದ್ಯರು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ.

ಡಾ. ಪ್ರಶಾಂತ್.ಎನ್.ಆರ್

ಮೂಲ: ವಿಕ್ರಮ

ಕೊನೆಯ ಮಾರ್ಪಾಟು : 4/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate