অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸಂತೋಷ

ಸಂತೋಷ

ಸಂತೋಷ ಎಂದರೇನು ? ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೊರಟು ಅದಕ್ಕೆ ಪ್ರತಿಯೊಬ್ಬ ವ್ಯಕ್ತಿ ಒಂದೊಂದು ವ್ಯಾಖ್ಯಾನ ನೀಡುತ್ತಾನೆ.  ಅದು ಅವನ ಆದ್ಯತೆಗಳು, ಅವನ ಇಂದಿನ ಸ್ಥಿತಿ-ಗತಿಗಳು, ಭವಿಷ್ಯದ ಯೋಜನೆಳು ಇತ್ಯಾದಿಗಳ ಮೇಲೆ ಅವಲಂಬಿತವಾಗಿರುತ್ತವೆ.  ಆದರೆ ನಾವು ನಿಜವಾಗಿಯೂ ಯಾವುದನ್ನು ಸಂತೋಷ ಎಂದು ಭಾವಿಸಿ ಅದರ ಬೆನ್ನು ಹತ್ತಿ ಪಡೆಯುತ್ತೇವೆಯೋ ಅದು ನಿಜವಾದ ಸಂತೋಷವೇ? ಎಂಬುದು ಪ್ರಶ್ನೆ.
ಅಂತರ್ಜಾಲದಲ್ಲಿ ವಿಹರಿಸುತ್ತಿದ್ದಾಗ ಕಥೆಯೊಂದು ಮನಸ್ಸನ್ನು ತೀವ್ರವಾಗಿ ತಾಕಿತು.  ಅದು ಹೀಗಿದೆ :
ಸಿಂಗಾಪುರದ ವೈದ್ಯರೊಬ್ಬರ ಕಥೆ ಇದು.
ಆ ವ್ಯಕ್ತಿ ಬಾಲ್ಯದಲ್ಲಿ ಒಂದು ಸಾಮಾನ್ಯ ಕುಟುಂಬದಲ್ಲಿ ಜನಿಸಿದವರು, ಎಲ್ಲ ಮಧ್ಯಮವರ್ಗದ typical model ನಂತೆ ಅವರಿಗೂ ಕೂಡ ಯಶಸ್ವಿಯಾಗಬೇಕು, ಶ್ರೀಮಂತನಾಗಬೇಕು, ಪ್ರಸಿದ್ಧನಾಗಬೇಕು ಎಂಬ ಕನಸು ಕಂಡು ಅದರ ಬೆನ್ನು ಹತ್ತಿ ಅದನ್ನು ಪಡೆದೂಬಿಟ್ಟರು.  ಆದರೆ ನಿಜವಾದ ಸಂತೋಷ ಸಿಕ್ಕಿತಾ? ಬಾಲ್ಯದಲ್ಲಿ ಆ ವ್ಯಕ್ತಿ ತರಗತಿಯಲ್ಲಿ ಮೊದಲಿಗರಾಗಿರುತ್ತಿದ್ದರು.  ವೈದ್ಯನಾಗುವ ಬಯಕೆಯಿಂದ ಪರಿಶ್ರಮದಿಂದ ಓದಿ ಒಳ್ಳೆಯ ಅಂಕಗಳಿಸಿ ವೈದ್ಯ ವೃತ್ತಿ ಆರಂಭಿಸಿದರು.  ಸಂಶೋಧನೆಯಲ್ಲಿ ಆಸಕ್ತಿ ತೋರಿಸಿ ಅಲ್ಲಿಯೂ ಯಶಸ್ವಿಯಾದರು.  ಆದರೆ ಈ ಎಲ್ಲ ಸಾಧೆಗಳು ಅವರಿಗೆ ಶ್ರೀಮಂತಿಕೆ ತಂದುಕೊಡಲಿಲ್ಲ.
ಒಂದು ಕಣ್ಣಿನ ಆಸ್ಪತ್ರೆಯಲ್ಲಿ ವೈದ್ಯರಾಗಿ ಜನರಿಗೆ ಬೆಳಕು ನೀಡುವ ವೃತ್ತಿ ಅವರದ್ದಾಗಿದ್ದರೂ ಶ್ರೀಮಂತಿಕೆಯ ಕಡೆಗಿನ ಒಲವು ಅವರಿಗೆ, Cosmetic Surgeon ವೃತ್ತಿ ಆಯ್ಕೆ ಮಾಡಿಕೊಳ್ಳುವಂತೆ ಮಾಡಿತು. ಒಬ್ಬ ಸಾಮಾನ್ಯ ವೈದ್ಯ ದಿನವೊಂದಕ್ಕೆ ಎಷ್ಟು ಗಳಿಸಬಹುದೋ, ಅಷ್ಟು ಹಣವನ್ನು ಒಬ್ಬ ವ್ಯಕ್ತಿಯ Cosmetic Surgery ಯಿಂದ ಪಡೆಯಬಹುದಾಗಿತ್ತು.  ಅಲ್ಲದೆ ಆ ವೃತ್ತಿಯಲ್ಲಿ glamor ಕೂಡ ಸೇರಿಕೊಂಡಿತ್ತು.   ಆ ವೈದ್ಯರು ಬಹುಬೇಗ ಶ್ರೀಮಂತರಾದರು.  ವಿಲಾಸೀ ಜೀವನದ ಎಲ್ಲ ಸೌಲಭ್ಯಗಳು ಅವರ ಕಾಲಡಿಯಲ್ಲಿದ್ದವು.  ಕಾರುಗಳು, ಬಂಗಲೆಗಳು ಪ್ರತಿವರ್ಷವೂ ಅವರ ಸಂಪತ್ತಿನಲ್ಲಿ ಹೊಸದಾಗಿ ಸೇರ್ಪಡೆಯಾಗುತ್ತಿದ್ದವು.
Ancology  ವಿಭಾಗದಲ್ಲಿ ಕೆಲವು ದಿನ ಅವರಿಗೆ ವೈದ್ಯರಾಗಿ ವೃತ್ತಿ ಅನುಭವವಿತ್ತು.  ರೋಗಿಗಳ ನೋವು ನರಳಾಟ, ಸಾವಿನ ಬಗೆಗಿನ ಭಯ, ನಿರಾಶೆ ಎಲ್ಲವನ್ನೂ ಹತ್ತಿರದಿಂದ ಕಂಡಿದ್ದರು.  ಆದರೆ ಅದ್ಯಾವುದೂ ಅವರೊಳಗಿನ ಸಂವೇದನೆಯನ್ನು ಮುಟ್ಟಲು ಸಾಧ್ಯವಾಗಿರಲಿಲ್ಲ. ರೋಗಿಗಳು ಅವರ ಪಾಲಿನ ವ್ಯಾಪಾರದ ಸಾಧನ ಮಾತ್ರವಾಗಿದ್ದರು.  ರೋಗಿಯ ನೋವನ್ನು ವೈದ್ಯಕೀಯ ಪರಿಭಾಷೆಯಲ್ಲಿ ಹೆಚ್ಚು ತಿಳಿದಿದ್ದರೇ ಹೊರತು  ರೋಗಿಯ ಭಾವಜಗತ್ತಿನ ಬಗ್ಗೆ ಅವರಿಗೆ ಅರಿವಿರಲಿಲ್ಲ.
ಕೊನೆಗಾಲದಲ್ಲಿ ಅಸಹಾಯಕನಾಗಿ ಬರುವ ರೋಗಿಯ ಮಾನಸಿಕ ತಲ್ಲಣಗಳ ಕುರಿತು ಅವರೆಂದೂ ತಲೆಕೆಡಿಸಿಕೊಂಡವರಲ್ಲ.  ಪ್ರತಿ ಹೊಸವರ್ಷದ ದಿನದಂದು ತಮ್ಮ ಕಾರಿನಲ್ಲಿ ಸುತ್ತಿ ತನ್ನ ಎಲ್ಲ ಸ್ನೇಹಿತರಿಗೆ ಶುಭಾಶಯ ತಿಳಿಸುವುದು ಅವರಿಗೆ ತುಂಬಾ ಖುಷಿ ನೀಡುವ ಕೆಲಸವಾಗಿತ್ತು.  ಆದರೆ ನಿಜವಾಗಿಯೂ ಅವರ ಸ್ನೇಹಿತರಿಗೆ ಸಂತೋಷವಾಗುತ್ತಿತ್ತೆ? ಎಂಬುದು ಪ್ರಶ್ನೆ. ಯಾಕೆಂದರೆ, ಅವರ ಸ್ನೇಹಿತರಲ್ಲಿ ಯಾರೂ ಆ ವೈದ್ಯರಿಗೆ ಸಮನಾದ ಯಶಸ್ಸು ಗಳಿಸಿದ ಅಥವಾ ಶ್ರೀಮಂತರಾದ ವ್ಯಕ್ತಿಗಳಾಗಿರಲಿಲ್ಲ.  ಕೆಲವರು ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದರು.  ಕೆಲವರು ದಿನನಿತ್ಯದ ಅವಶ್ಯಕತೆಗಳಿಗೆ ಬಹಳ ಪ್ರಯಾಸಪಡಬೇಕಿತ್ತು.  ಕೆಲವರು ಸ್ವಂತ ವಾಹನವೂ ಇಲ್ಲದೆ ಸಾರ್ವಜನಿಕ ಬಸ್ಸುಗಳಲ್ಲಿ ಓಡಾಡುತ್ತಿದ್ದರು.  ಅಂತಹ ಸ್ನೇಹಿತರು ವೈದ್ಯರ ವೆಭವ ಕಂಡು ಸಂತಸಪಡಲು ಹೇಗೆ ಸಾಧ್ಯ?
ಆ ಸ್ನೇಹಿತರು ಮೇಲ್ನೋಟಕ್ಕೆ ನಗುತ್ತ ಮಾತನಾಡಿದರೂ ಒಳಗೊಳಗೆ ಅಸೂಯೆ  ವೈದ್ಯರೊಂದಿಗೆ ತಮ್ಮ ಸ್ಥಿತಿಯನ್ನು ಹೋಲಿಸಿಕೊಂಡು ದುಃಖಪಡುವುದು ಇವುಗಳು ನಡದೇ ಇತ್ತು.  ವೈದ್ಯರಿಗೆ ಅದಾವುದರ ಬಗ್ಗೆ ಅಷ್ಟಾಗಿ ಗಮನವಿರಲಿಲ್ಲ,  ಅವರ ಸ್ನೇಹಿತರ ಸ್ಥಿತಿಯನ್ನು ಉತ್ತಮಪಡಿಸುವಂತಹ ಯಾವ ಆಲೋಚನೆಯನ್ನು ವೈದ್ಯರು ಮಾಡಲಿಲ್ಲ.
ಪತ್ರಿಕೆಗಳು, ದೃಶ್ಯಮಾಧ್ಯಮಗಳು ವೈದ್ಯರ ಸಾಧನೆಯನ್ನು ಬಣ್ಣಿಸಿ ಅವರನ್ನು ಒಬ್ಬ ಜನಪ್ರಿಯ ವ್ಯಕ್ತಿಯಾಗಿ ಮಾಡಿದ್ದವು.   ಹಲವಾರು ಪ್ರಶಸ್ತಿಗಳು ಅವರ ವೃತ್ತಿಪರ ಸಾಧನೆಯನ್ನು ಅರಸಿ ಬಂದಿದ್ದವು.  ಸಮಾಜದಿಂದ ಯಾವುದನ್ನು ಸುಖ-ಸಂತೋಷ ಎಂದು ಬಹುಜನ ಸಮ್ಮತವಾಗಿ ಮಾನ್ಯ ಮಾಡಲಾಗಿದೆಯೋ ಅವೆಲ್ಲ ಅವರ ಬಳಿ ಇತ್ತು.
ಆದರೆ ಒಂದು ದಿನ ಇದ್ದಕ್ಕಿದ್ದಂತೆ ವೈದ್ಯರಿಗೆ ಬೆನ್ನುನೋವು ಕಾಣಿಸಿಕೊಂಡಿತು.  ಅವರು ತಮ್ಮ ಅತಿಯಾದ ಕೆಲಸದಿಂದ ಆದ ಪರಿಣಾಮ ಎಂದು ತಿಳಿದು ಸ್ವಲ್ಪ ವಿಶ್ರಾಂತಿ ಪಡೆದರು.  ಆದರೆ ಸಮಸ್ಯೆ ಬಗೆಹರಿಯಲಿಲ್ಲ.  Slip Disc ಸಮಸ್ಯೆ ಇರಬಹುದೆಂದು ಸಹಪಾಠಿಗಳು ಹೇಳಿದರು. ಆ ಸಮಸ್ಯೆಯೂ ಅವರಿಗೆ ಇರಲಿಲ್ಲ.  ಹಲವು ರೀತಿಯ ಪರೀಕ್ಷೆಗಳಿಂದ ಎಲುಬಿನ ಕ್ಯಾನ್ಸರ್ 4ನೇ ಹಂತದಲ್ಲಿದೆ ಎಂಬುದು ತಿಳಿಯಿತು ಮತ್ತು ಅದು ಮೆದುಳಿನವರೆಗೆ ವ್ಯಾಪಿಸಿದೆ.  ಲಕ್ಷಾಂತರ ಕ್ಯಾನ್ಸರ್ ಕೋಶಗಳು ಅವರ ದೇಹದ ಕಣ-ಕಣದಲ್ಲಿ ಬೆಳೆದುಬಿಟ್ಟಿದೆ ಎಂದು ದೃಢಪಟ್ಟಿತು.
ಎಲ್ಲ ವೈದ್ಯಕೀಯ ವರದಿಗಳನ್ನು ಬಹಳ ಚೆನ್ನಾಗಿಯೇ ಅರ್ಥಮಾಡಿಕೊಳ್ಳಬಲ್ಲವರಾದ ವೈದ್ಯರು ಈ ವರದಿ ಮಾತ್ರ ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ.  ಅವರಿಗೆ ಕಾಲು ಕೆಳಗಿನ ಭೂಮಿಯೇ ಕುಸಿದಂತಾಯಿತು.  ಆದರೆ ಅದೇ ಸತ್ಯ ಆಗಿತ್ತು.  ಯಶಸ್ಸಿನ ಉತ್ತುಂಗದ ಸ್ಥಿತಿಯಲ್ಲಿದ್ದಾಗ ಅವರನ್ನು ಪಾತಾಳಕ್ಕೆ ತಳ್ಳಿದಂತಾಗಿತ್ತು.  ಅವರ ಬಳಿ ಇದ್ದ ಕಾರು, ಬಂಗಲೆ, ಹಣ, ಯಶ್ಸು ಅದ್ಯಾವುದೂ ಅವರ ಸಹಾಯಕ್ಕೆ ಬರುವಂತಿರಲಿಲ್ಲ.ತಮ್ಮ ಸ್ಥಿತಿಗಾಗಿ ವೈದ್ಯರು ದುಃಖಿಸಿ ಖಿನ್ನತೆಗೆ ಒಳಗಾದರು.  ಅವರ ಬಳಿ ಇದ್ದ ಅಪಾರ ಹಣದ ಬಲದಿಂದ ಅವರಿಗೆ ಉನ್ನತವಾದ ತಂತ್ರಜ್ಞಾನದ ಚಿಕಿತ್ಸೆ ದೊರೆಯಿತು.  ಆದರೂ ಅವರು ಬದುಕುಳಿಯುವ ಅವಧಿ ಕೇವಲ 3-4 ತಿಂಗಳಿನದು ಮಾತ್ರವಾಗಿತ್ತು.
ಒಬ್ಬ ರೋಗಿಯಾಗಿ ಇತರ ವೈದ್ಯರಿಂದ ಚಿಕಿತ್ಸೆ ತೆಗೆದುಕೊಳ್ಳುವಾಗ ಅವರಿಗೆ ರೋಗಿಯೊಬ್ಬನ ತಲ್ಲಣಗಳು ಅರಿವಾಯಿತು.  ಜೀವನ ಎಂದರೇನು? ಸಂತೋಷ ಎಲ್ಲಿದೆ?  ತಾನು ಎಲ್ಲಿ ಎಡವಿದೆ? ಎಂಬುದರ ಬಗ್ಗೆ ಯೋಚಿಸಿದಾಗ ಅವರು ಕಂಡುಕೊಂಡ ಸತ್ಯ ಏನೆಂದರೆ ಅವರು ಅಂದುಕೊಂಡ  ಸಂತೋಷದ ವ್ಯಾಖ್ಯಾನ ಅವರಿಗೆ ಜೀವನದಲ್ಲಿ ಮೊದಲ ಬಾರಿಗೆ ಇಷ್ಟವಾಗಲಿಲ್ಲ.  ಜೀವನದಲ್ಲಿ ಒಮ್ಮೆಯೂ ಇತರರ ನೋವುಗಳಿಗೆ ಸ್ಪಂದಿಸಲಿಲ್ಲ.  ಕಷ್ಟಗಳಿಗೆ ಸಹಾಯ ಮಾಡಲಿಲ್ಲ ಎಂಬುದು ಅವರಿಗೆ ಅರ್ಥವಾದಾಗ ಸಮಯ ಬಹಳ ಮುಂದೆ ಸರಿದು ಹೋಗಿತ್ತು.
ತಮ್ಮ ಕೊನೆಯ ದಿನಗಳನ್ನು ಎಣಿಸುತ್ತಿರುವಾಗಲೇ ತಮ್ಮ ಜೀವನದ ಕುರಿತಾಗಿ ದಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ ಒಬ್ಬ ವೈದ್ಯ ಹೇಗಿರಬೇಕು.  ಅದಕ್ಕಿಂತ ಹೆಚ್ಚಾಗಿ ಒಬ್ಬ ಮನುಷ್ಯ ಯಾವ ರೀತಿ ನಡೆದುಕೊಳ್ಳಬೇಕು? ಐಶ್ವರ್ಯಕ್ಕೆ ಎಷ್ಟು ಮಹತ್ವ ಕೊಡಬೇಕು?    ರೋಗಿಯ ನಿರೀಕ್ಷೆಗಳು, ಮನುಷ್ಯತ್ವ, ನಂಬಿಕೆ, ಪ್ರೀತಿ ವಿಶ್ವಾಸಗಳು ಇತ್ಯಾದಿಗಳ ಮಹತ್ವ ವಿವರಿಸಿದರು.  “ನೀವು ನೀವಾಗಿಯೇ ಇರಬೇಕು, ಮನೆಯವರು, ಸುತ್ತಲಿನವರು, ಮಾಧ್ಯಮಗಳು ವಿವರಿಸುವ ಯಶಸ್ಸಿನ ಬೆನ್ನು ಹತ್ತಬೇಡಿ.  ಜೀವನಕ್ಕೆ ಐಶ್ವರ್ಯದ ಅವಶ್ಯಕತೆ ಇದೆ.  ಆದರೆ ಐಶ್ವರ್ಯವೇ ಜೀವನ ಅಲ್ಲ. ಇತರರ ಜೀವನ ಸಹ್ಯ ಗೊಳಿಸುವ ಕೆಲಸ ವೈದ್ಯರದು, ಅದನ್ನು ಮಾಡಿ” ಎಂದರು.ಸಾವಿನಂಚಿನಲ್ಲಿರುವ ವೈದ್ಯ ಹೇಳಿದ ಮಾತುಗಳು ಎಷ್ಟು ಅರ್ಥಪೂರ್ಣವಾದವುಗಳಲ್ಲವೇ?
ನಾವೆಲ್ಲರೂ ನಮ್ಮ ಸುತ್ತಮುತ್ತಲಿನ ಜನ ಸಾಯುವುದನ್ನು ನೋಡುತ್ತಿರುತ್ತೇವೆ.  ಆದರೆ ನಾವು ಶಾಶ್ವತರಾದವರು, ಸಾವು ನಗೆ ಬರಲಾರದು ಎಂಬ ಭಾವಿಸಿ ಅವರವರ ಆಯಸ್ಸು ಅಷ್ಟೇ ಇತ್ತು ಎಂದು ಮಾತನಾಡಿ ಸುಮ್ಮನಾಗುತ್ತೇವೆ.  ಆದರೆ ನಿಜವಾಗಲೂ ಸಾವು ನಮ್ಮೊಂದಿಗೆ ಮುಖಾ-ಮುಖಿ ಆದಾಗ ಪ್ರತಿಕ್ರಿಯೆ ಇಷ್ಟೆ ತಣ್ಣಗಿರುತ್ತದೆಯೇ? ಅದು ಸಾಧ್ಯ ಇಲ್ಲ. ನಾವು ಎಷ್ಟು ದಿನ ಬದುಕಿರುತ್ತೇವೆ ಎಂಬ ಬಗ್ಗೆ ನಮಗೆ ಖಚಿತವಾಗಿ ಗೊತ್ತಿಲ್ಲ.  ಆದರೆ ಇರುವಷ್ಟು ದಿನ ನಮ್ಮೊಂದಿಗೆ ಇರುವ  ಇತರ ಜೀವಗಳೊಂದಿಗೆ, ಅವರ ಭಾವಗಳೊಂದಿಗೆ ಬೆಸೆದು ಅವರ ಬದುಕಿನ ಭಾರವನ್ನು ಸ್ವಲ್ಪ ಹಗುರ ಮಾಡಬಾರದೇಕೆ? ಮಾನವೀಯ ಸಂವೇದನೆ ನಮ್ಮೆಲ್ಲರ ಬದುಕಿನ ಅವಶ್ಯಕತೆ.
ಭೌತಿಕವಾಗಿ ನಾವು ಅಳಿದ ನಂತರವೂ ಇತರರ ಮನಸ್ಸಿನಲ್ಲಿ ಜೀವಂತವಾಗಿರಬೇಕು. ಅದಕ್ಕೆ ಸಂವೇದನಾಶೀಲರಾಗಿ, ಸಹಾಯ ಮಾಡುವ ಮನೋಭಾವದವರಾಗಿ, ಕರುಣೆ-ದಯೆ-ಪ್ರೀತಿ-ಮಾನವೀಯತೆ ಉಳ್ಳವರಾಗಿ ನಾವು ಬದಲಾಗಬೇಕು ಬರುವ ನಾಳೆಗಳು ನಮ್ಮ ಬದುಕಿನಲ್ಲಿ ಯಾವ ನೋವುಗಳು, ಖಾಯಿಲೆಗಳು ಹೊತ್ತು ತರುತ್ತವೆ ಯಾರಿಗಾದರೂ ಗೊತ್ತೇ? ಕಾಣದ ಸಂತೋಷದ ಬೆನ್ನುಹತ್ತಿ ಅದನ್ನು ಪಡೆಯುವುದರೊಳಗೆ ನಾವು ಇರುತ್ತೇವೆಯಾ? ಎಂಬ ಬಗ್ಗೆ ನಮಗೆ ಗೊತ್ತಿಲ್ಲ. ಅದಕ್ಕಾಗಿ ಸಂತೃಪ್ತಿಗಾಗಿ ಬದುಕಬಾರದು. ಸಂತೃಪ್ತಿಯಿಂದ ಬದುಕಬೇಕು. ಜೀವನದಲ್ಲಿ ಯಾವುದು ನಮ್ಮ ಆದ್ಯತೆಯಾಗಿರಬೇಕು? ಎಂಬುದರ ಬಗ್ಗೆ ನಮಗೆ  ಸ್ಪಷ್ಟತೆಯಿರಬೇಕು.  Live and Let Live others happily ಎಂಬುದು ನಮ್ಮ ಜೀವನದ ಸೂತ್ರವಾಗಬೇಕು. ನಮ್ಮ ಅಲ್ಪ ಜೀವಿತಾವಧಿಯಲ್ಲಿ ಈ ಜಗತ್ತನ್ನು ಇನ್ನೂ ಸುಂದರವಾಗಿ ಮಾಡೋಣ, ಆಗಬಹುದೇ?

ಮೂಲ: ವಿಕ್ರಮ

ಕೊನೆಯ ಮಾರ್ಪಾಟು : 2/19/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate