অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸಮಸ್ಯೆಗಳು

ವಿದೇಶಗಳಲ್ಲಿರುವ ಭಾರತೀಯರ ಮಾನಸಿಕ ಸಮಸ್ಯೆಗಳು

- ಡಾ| ಸಿ. ಆರ್. ಚಂದ್ರಶೇಖರ್

ಉದ್ಯೋಗವನ್ನೂ, ಒಳ್ಳೆಯ ಭವಿಷ್ಯವನ್ನೂ ಅರಸುತ್ತಾ, ತಾಯ್ನಾಡನ್ನು ಬಿಟ್ಟು, ಹೊರದೇಶಗಳಿಗೆ ಹೋಗುವ ಭಾರತೀಯರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಪ್ರತಿಭೆಗೆ ಮನ್ನಣೆ, ಕೈತುಂಬಾ ಸಂಬಳ, ಉತ್ತಮ ಮಟ್ಟದ ಜೀವನ ವಿಧಾನಗಳಿರುವ ವಿದೇಶಗಳಲ್ಲಿರುವ ಭಾರತೀಯರು ಸಂತೋಷ, ತೃಪ್ತಿಯಿಂದ ಇರುವರು ಎಂದು ಹೇಳಲಾದೀತೇ? `ನಾವು ಕನಸು ಮನಸಿನಲ್ಲಿ ಊಹಿಸಲಾಗದಷ್ಟು ವೈಭೋಗವನ್ನು ಇಲ್ಲಿ ಕಂಡಿದ್ದೇವೆ. ಹಣವಿದೆ. ಸುಖಕೊಡುವ ವಸ್ತುಗಳಿವೆ. ವಿಸ್ಮಯ ಪಡುವ ವೈಜ್ಞಾನಿಕ ಸಲಕರಣೆಗಳಿವೆ. ಆದರೇನು ಮನಸ್ಸಿಗೆ ನೆಮ್ಮದಿ ಇಲ್ಲ. ಏನೋ ಅತೃಪ್ತಿ ನಮ್ಮನ್ನೂ ಕಾಡುತ್ತದೆ’ ಎಂದು ವಿದೇಶಗಳಲ್ಲಿರುವ ಭಾರತೀಯರು ಹೇಳುತ್ತಾರೆ. ಅನೇಕ ರೀತಿಯ ಮಾನಸಿಕ ಒತ್ತಡಗಳು ಅವರನ್ನೂ ಕಾಡುತ್ತವೆ. ಉದಾಹರಣೆಗೆ-

 

(೧) ಸಾಂಸ್ಕೃತಿಕ ಗೊಂದಲ (culture Shock): ಪ್ರಾರಂಭದಲ್ಲಿ ಪಾಶ್ಚಿಮಾತ್ಯ ಜೀವನಶೈಲಿ, ಸುಖನೀಡುವ ವಿವಿಧ ಸಲಕರಣೆಗಳು, ವ್ಯವಸ್ಥಿತ ಸಮಾಜವನ್ನು ಬೆರಗುಗಣ್ಣಿನಿಂದ ನೋಡಿ, ನಮ್ಮ ಭಾರತದ ಅವ್ಯವಸ್ಥೆಗೆ ಹೋಲಿಸಿದರೆ, ಈ ನಾಡು ಸ್ವರ್ಗ ಎಂದು ಭಾವಿಸಿ ಖುಷಿ ಪಡುವ ಭಾರತೀಯರು, ಕ್ರಮೇಣ ತಮ್ಮ ಸಂಸ್ಕೃತಿಗೂ ಈ ಸಂಸ್ಕೃತಿಗೂ ಇರುವ ಅನೇಕ ವ್ಯತ್ಯಾಸಗಳನ್ನು ಅರಗಿಸಿಕೊಳ್ಳಲಾರರು. ವಿಪರೀತ ಸ್ಫರ್ಧೆ, ಅಮಾನವೀಯ ಸಂಬಂಧಗಳು, ಎಲ್ಲವನ್ನೂ ಹಣದಿಂದಲೇ ಅಳೆಯುವ ಪ್ರವೃತ್ತಿ, ಭಾವನಾತ್ಮಕ ಸಂಬಂಧಗಳ ಅಭಾವ ಕ್ರಮೇಣ ದೊಡ್ಡ ಕೊರತೆಯನ್ನುಂಟುಮಾಡುತ್ತದೆ. ತಮ್ಮ ಮಕ್ಕಳು ಅಲ್ಲಿನ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕೇ ಅಥವಾ ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕೇ ಎಂದು ನಿರ್ಧರಿಸಲಾರರು. ಯಾವುದೇ ದೇಶದ ಸ್ಥಳೀಯರು, ವಿದೇಶೀಯರನ್ನು ತಮ್ಮವರು ಎಂದು ಪೂರ್ಣವಾಗಿ ಒಪ್ಪಿಕೊಳ್ಳರು. ಸ್ವಲ್ಪ ಮಟ್ಟಿನ ಅಪನಂಬಿಕೆ, ಅವಿಶ್ವಾಸ, ಮತ್ಸರವನ್ನೂ ತೋರಿಸಿಯೇ ತೋರಿಸುತ್ತಾರೆ. ಮುಕ್ತ ಮನಸ್ಸಿನಿಂದ ಬೆರೆಯುವುದಿಲ್ಲ. ಹೀಗಾಗಿ ಅನೇಕ ಭಾರತೀಯರು ಸ್ಥಳೀಯರಿಗೆ ಪರಕೀಯರಾಗಿಯೇ ಉಳಿಯುತ್ತಾರೆ. ಇಲ್ಲವೇ ಹೆಚ್ಚು ಹೆಚ್ಚಾಗಿ ಭಾರತೀಯರೊಂದಿಗೇ ಒಡನಾಡಲು ಇಷ್ಟಪಟ್ಟು, ಸ್ಥಳೀಯರಿಂದ ಮತ್ತಷ್ಟು ದೂರವಾಗುತ್ತಾರೆ. ತಮ್ಮ ಸಂಸ್ಕೃತಿಯನ್ನೂ, ವಿದೇಶದ ಸಂಸ್ಕೃತಿಯನ್ನೂ ತುಲನೆ ಮಾಡುತ್ತಾ, ಯಾವುದು ಸರಿ ಎಂದು ನಿರ್ಧರಿಸಲಾಗದೇ ಗೊಂದಲಕ್ಕೀಡಾಗುತ್ತಾರೆ.

 

(೨) ಒಂಟಿತನದ ಭಾವನೆ: ಕೆಲಸಕ್ಕೆ ಹೋಗದವರಲ್ಲಿ, ಒಂಟಿತನದ ಭಾವನೆ ಹೆಚ್ಚು. ಮನೆಯಲ್ಲಿ ಮನೆಗೆಲಸ ಮುಗಿಸಿ, ಬಿಡುವಿನ ವೇಳೆಯನ್ನು ಹೇಗೆ ಕಳೆಯುವುದೆನ್ನುವುದು ವಿದೇಶದಲ್ಲಿರುವ ಭಾರತೀಯ ಗೃಹಿಣಿಯರಿಗೆ ಒಂದು ದೊಡ್ಡ ಸಮಸ್ಯೆ. ಟಿವಿ ನೋಡುವುದು, ವೀಡಿಯೋ ಗೇಮ್ಸ್ ಆಡುವುದು, ಓದುವುದು, ಶಾಪಿಂಗ್ ಹೋಗುವುದು ಬೇಸರವಾಗತೊಡಗುತ್ತದೆ. ಹಾಗೆಯೇ ಸ್ನೇಹಿತರೊಂದಿಗೆ, ಪರಿಚಯದವರೊಂದಿಗೆ ಎಷ್ಟು ಹೊತ್ತು ಫೋನ್‌ನಲ್ಲಿ ಮಾತನಾಡಲು ಸಾಧ್ಯ.

 

(೩) ತಮ್ಮ ಮತ್ತು ಮಕ್ಕಳ ಭವಿಷ್ಯ: ದುಡಿಯುವ ಅವಧಿಯಲ್ಲಿ ನಾವೇನೋ ಇಲ್ಲಿದ್ದೇವೆ, ದುಡಿಯುತ್ತೇವೆ, ಸುಖಪಡುತ್ತೇವೆ, ಹಣ ಸಂಪತ್ತನ್ನೂ ಗಳಿಸುತ್ತೇವೆ. ಆದರೆ ದೇಶ ನಮ್ಮ ದೇಶವಾಗಲು ಸಾಧ್ಯವಿಲ್ಲ. ನಮ್ಮ ಮಕ್ಕಳು ಇಲ್ಲೇ ಇದ್ದು, ಈ ದೇಶದ ನಾಗರೀಕರಾಗಬೇಕೆ, ಸ್ಥಳೀಯರ ಜೊತೆಗೆ ಮದುವೆ ಸಂಬಂಧ ಬೆಳೆಸಬೇಕೇ, ವಾಪಾಸ್ ಭಾರತಕ್ಕೆ ಹೋಗಿಬಿಡೋಣವೇ. ಅಲ್ಲಿ ಹೋಗಿ ಏನು ಮಾಡುವುದು. ಅಲ್ಲಿನ ಜೀವನ ಶೈಲಿಗೆ ಹೊಂದಿಕೊಳ್ಳಲು ಸಾಧ್ಯವೇ. ನಾವು ತ್ರಿಶಂಕು ಸ್ಥಿತಿಗೆ ಒಳಗಾದೆವಲ್ಲ. ಇಲ್ಲಿಯೂ ಸಲ್ಲುವುದಿಲ್ಲ ಅಲ್ಲಿಯೂ (ಭಾರತದಲ್ಲಿ) ಸಲ್ಲುವುದಿಲ್ಲ. ತಮ್ಮ ಭವಿಷ್ಯವೇನು -ಈ ಅನಾಥ ಪ್ರಜ್ಞೆ ಹಲವರನ್ನು ಕಾಡತೊಡಗುತ್ತದೆ.

 

(೪) ಅಗತ್ಯಗಳಿಗೆ ಗುಲಾಮನಾಗುವುದು: ಗ್ರಾಹಕ ಸಂಸ್ಕೃತಿಯಲ್ಲಿ ಅಗತ್ಯಗಳಿಗೆ ಕೊನೆಯೇ ಇಲ್ಲ. ಇಷ್ಟಿದ್ದರೆ ಮತ್ತಷ್ಟು ಬೇಕು, ಮತ್ತಷ್ಟು ಸಿಕ್ಕಿದರೆ, ಇನ್ನಷ್ಟು ಬೇಕು. ಬೇಕುಗಳ ಪೂರೈಕೆ ಆಗದಿದ್ದರೆ, ಎಲ್ಲವನ್ನೂ ಕಳೆದುಕೊಂಡಂತಹ ಅನುಭವ, ತೃಪ್ತಿಯೇ ಇಲ್ಲ. ದೇಹಕ್ಕೆ ನಾವು ಸುಖ ಕೊಟ್ಟಷ್ಟು, ಅದು ಮತ್ತಷ್ಟು ಬೇಕು ಎನ್ನುತ್ತದೆ. ದೇಹ ಸೋಮಾರಿಯಾಗುತ್ತದೆ. ಬೊಜ್ಜು ಬೆಳೆಯುತ್ತದೆ. ಮನಸ್ಸು ಸದಾ ವಿಷಯ ಸುಖಗಳನ್ನಷ್ಟೇ ಬಯಸುತ್ತದೆ. ಹೀಗಾಗಿ ಮನಸ್ಥೈರ್ಯ ಕುಗ್ಗುತ್ತದೆ. ಆತ್ಮ ವಿಶ್ವಾಸ ತಗ್ಗುತ್ತದೆ. ಅಗತ್ಯಗಳ ಪೂರೈಕೆಗಾಗಿ ಚಡಪಡಿಸುತ್ತಾ, ಸದಾ ಒತ್ತಡದಲ್ಲಿದ್ದು, ಮೈ ಮನಸ್ಸುಗಳು ದುರ್ಬಲವಾಗತೊಡಗುತ್ತವೆ. ಪರಿಣಾಮ, ಮನೋದೈಹಿಕ ಬೇನೆಗಳು, ಖಿನ್ನತೆ, ಆತಂಕದಂತಹ ಮನೋಬೇನೆಗಳು, ಮದ್ಯಪಾನ ಮಾದಕ ವಸ್ತುಗಳ ದುರ್ಬಳಕೆ, ಅಪರಾಧ, ಆತ್ಮಹತ್ಯಾ ಪ್ರವೃತ್ತಿಗಳು ವಿದೇಶದಲ್ಲಿರುವ ಭಾರತೀಯರನ್ನು ಹೆಚ್ಚಾಗಿ ಕಾಡುತ್ತವೆ. ಚಿಕ್ಕವಯಸ್ಸಿನಲ್ಲೇ ಹೃಧಯಾಘಾತ, ಪಾರ್ಶ್ವವಾಯು, ಸಿಹಿಮೂತ್ರ ರೋಗ, ಅಧಿಕ ರಕ್ತದೊತ್ತಡ, ಕ್ಯಾನ್ಸರ್ ಹೆಚ್ಚು ಸಾಮಾನ್ಯವಾಗುತ್ತಿದೆ.

 

ಪರಿಹಾರ

ವಿದೇಶಗಳಲ್ಲಿರುವ ಭಾರತೀಯರು ತಮ್ಮ ಧೋರಣೆ, ಜೀವನಶೈಲಿಯಲ್ಲಿ ಕೆಲವು ಮಾರ್ಪಾಟುಗಳನ್ನು ಮಾಡಿಕೊಂಡರೆ, ಒತ್ತಡದ ದುಷ್ಪರಿಣಾಮಗಳನ್ನೂ ತಗ್ಗಿಸಬಹುದು. ತಮ್ಮ ಮೈಮನಸ್ಸುಗಳ ಆರೋಗ್ಯವನ್ನೂ ವೃದ್ಧಿಸಿಕೊಳ್ಳಬಹುದು.

(೧) ಆಸೆ-ಅಗತ್ಯಗಳನ್ನು ತಗ್ಗಿಸಿ, ಸರಳ ಜೀವನ ಶೈಲಿಯನ್ನು ರೂಢಿಸಿಕೊಳ್ಳವುದು. ಹಣ-ವಸ್ತುಗಳ ಸಂಪಾದನೆಯೇ ಜೀವನದ ಗುರಿಯಾಗಬಾರದು.


(೨) ಹಿತ ಮಿತ ಆಹಾರ ಸೇವನೆ: ಆದಷ್ಟು ನೈಸರ್ಗಿಕ ಆಹಾರವನ್ನು ಸೇವಿಸುವುದು. ಸಿಹಿ, ಕೊಬ್ಬು, ಸಿದ್ಧ ಪಡಿಸಿದ ಆಹಾರಗಳನ್ನೂ ಸೇವಿಸಬಾರದು.


(೩) ದಿನ ನಿತ್ಯ ವ್ಯಾಯಾಮ


(೪) ಸೃಜನಶೀಲ ಚಟುವಟಿಕೆಗಳು: ಸಾಹಿತ್ಯ, ಕಲೆ, ನೃತ್ಯ, ಸಂಗೀತದಂತಹ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗುವುದು.


(೫) ಕಷ್ಟ ಸುಖ -ನೋವು ನಲಿವುಗಳನ್ನೂ ಆತ್ಮೀಯರಲ್ಲಿ ಹೇಳಿಕೊಳ್ಳುವುದು.


(೬) ಪ್ರಕೃತಿಯೊಂದಿಗೆ ಆದಷ್ಟು ಸಮೀಪದಲ್ಲಿರುವುದು. ಗಿಡ ಮರ ನದಿ ಬೆಟ್ಟಗಳಿರುವ ಸ್ಥಳಗಳಿಗೆ ಆಗಾಗ ಭೇಟಿಕೊಡುವುದು.


(೭) ಯೋಗ, ಧ್ಯಾನ, ಧಾರ್ಮಿಕ ಚಟುವಟಿಕೆಗಳು, ಧಾರ್ಮಿಕ ಗ್ರಂಥಗಳ ಪಠಣ, ಆಧ್ಯಾತ್ಮಿಕ ಚಿಂತನೆ.


(೮) ದಾನ, ಧರ್ಮ ಪರೋಪಕಾರದಂತಹ ಸಾಮಾಜಿಕ ಸೇವಾಕಾರ್ಯಗಳಲ್ಲಿ ತೊಡಗುವುದು.

(ವಿಳಾಸ: ನಿಮ್ಹಾನ್ಸ್, ಬೆಂಗಳೂರು)

ಕೊನೆಯ ಮಾರ್ಪಾಟು : 3/5/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate