ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಹದಿಹರೆಯದಲ್ಲಿ ಮನ

ಹದಿಹರೆಯದಲ್ಲಿ ಮನವೆಂಬ ಮರ್ಕಟನ ಮೇಲೆ ಹತೋಟಿ...

ನಮ್ಮ ಸಹಪಾಠಿಯೊಬ್ಬನಿದ್ದ. ಮಹಾನ್ ಮರೆಗುಳಿ. ಅದೆಷ್ಟು ಮರೆಗುಳಿಯೆಂದರೆ ಕಾಲೇಜಿಗೆ ಹೊರಟವನು ನಡುವೆ ಯಾರಾದರೂ ಮಾತಿಗೆ ಸಿಕ್ಕಿದರೆ ಕಾಲೇಜು ಮರೆತು ಅವರೊಡನೆ ವಾಪಸು ಹೊರಟುಬಿಡುತ್ತಿದ್ದ. ಎಷ್ಟೋ ಸಾರಿ ಊಟ ತರುವುದನ್ನು ಮರೆಯುತ್ತಿದ್ದ. ಅನೇಕ ಬಾರಿ ರಜೆಯಲ್ಲಿ ಊರಿಗೆ ಹೊರಡುವುದನ್ನು ಮರೆತು ಮಲಗಿಬಿಡುತ್ತಿದ್ದ. ಆದರೆ ಇಂತಹ ಮರೆಗುಳಿ ಎಂದಿಗೂ ಡಿಸ್ಟಿಂಕ್ಷನ್ ಗಿಂತ ಕಡಿಮೆ ತೆಗೆದವನಲ್ಲ. ಎಲ್ಲಾ ವಿಷಯಗಳಲ್ಲೂ ನೂರಕ್ಕೆ ತೊಂಬತ್ತಕ್ಕಿಂತ ಹೆಚ್ಚು! ಎಲ್ಲರಿಗೂ ಇದೊಂದು ಮಹದಚ್ಚರಿಯ ವಿಷಯ. ಇಂತಹ ಮರೆಗುಳಿಗೆ ಹೇಗೆ ಹೆಚ್ಚು ಅಂಕ ತೆಗೆಯಲು ಸಾಧ್ಯ? ಇದಕ್ಕೆ ಆ ಮರೆಗುಳಿ ಗೆಳೆಯ ಸರಳವಾದ ಉತ್ತರ ಹೇಳುತ್ತಿದ್ದ..

"ಒಮ್ಮೆ ತಂದೆ ತಾಯಿಯ ಕೈಹಿಡಿದು ನಡೆಯುವುದನ್ನು ಕಲಿತ ಮೇಲೆ ಮತ್ತೆ ಮತ್ತೆ ನಡೆಯುವುದನ್ನು ನೆನಪಿಸಬೇಕೆ? ಕಾರು ಓಡಿಸುವುದನ್ನು ಕಲಿತ ಮೇಲೆ ಪದೇ ಪದೇ ನೆನೆಸಿಕೊಳ್ಳಬೇಕೆ? ಇವೆಲ್ಲ ಸಹಜವಾಗಿ ನಮ್ಮನ್ನು ಒಳಗೊಳ್ಳುತ್ತವೆ. ನಾವು ಪಠ್ಯದಲ್ಲಿ ಓದುವ ವಿಷಯಗಳೂ ಅಷ್ಟೇ..! ನಮ್ಮೊಳಗೆ ಸಹಜವಾಗಿ ಬೆರೆತುಹೋಗಬೇಕು ಉಸಿರಿನ ರೀತಿ!" ಎನ್ನುತ್ತಿದ್ದ. ವಿಷಯಗಳನ್ನು ಅರ್ಥಮಾಡಿಕೊಳ್ಳಬೇಕು. ಆಗ ಬಾಯಿಪಾಠ ಮಾಡುವ ಅವಶ್ಯಕತೆಯಿಲ್ಲ. ಪದೇ ಪದೇ ಓದುವ ಅವಶ್ಯಕತೆಯಿಲ್ಲ. ಮರೆಯುವ ಪ್ರಮೇಯವೇ ಇಲ್ಲ!
ಇಂತಹ ಸರಳ ಪಾಠ ಎಲ್ಲರಿಗೂ ಅನ್ವಯಿಸುತ್ತದೆ. ಕೆಲ ಸರಳ ಸೂತ್ರಗಳನ್ನು ದಡ್ಡ ಜಾಣ ಎಂಬ ಬೇಧಗಳೇ ಇಲ್ಲವಾಗಿಬಿಡುತ್ತವೆ! ಎಲ್ಲರೂ ಜಾಣರೇ ಆಗಿಬಿಡುತ್ತಾರೆ.

ಯಾವತ್ತೂ ದೂರದ ಪರಿಣಾಮಗಳನ್ನೇ ಲೆಕ್ಕ ಹಾಕಿ ಮುಂದುವರಿಯಬೇಕು. ಓದಿನಲ್ಲೂ ಸಹ! ಪಠ್ಯಗಳು ಮಾರುಕಟ್ಟೆಯಲ್ಲಿ ದೊರೆತ ದಿನದಿಂದಲೇ ದಿನಕ್ಕೊಂದು ಬಾರಿ ಅವುಗಳ ಕಡೆ ಕಣ್ಣಾಡಿಸತೊಡಗಬೇಕು. ಎಲ್ಲವೂ ಅರ್ಥವಾಗದಿದ್ದರೂ ಕೆಲ ಮೂಲಭೂತ ವಿಷಯಗಳು ತಲೆಗೆ ಹೋಗುತ್ತವೆ. ಆಗ ತರಗತಿಯಲ್ಲಿ ಶಿಕ್ಷಕರು ಪಾಠ ಮಾಡುವಾಗ ಅರ್ಥ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಪಾಠ ಮಾಡಿದ ದಿನ ಒಮ್ಮೆ ಓದಿಬಿಟ್ಟರೆ ಬಹುತೇಕ ಪಾಠ ಮನನವಾಗಿಬಿಡುತ್ತದೆ. ಭೌತಶಾಸ್ತ್ರ, ಗಣಿತದಂತಹ ಲೆಕ್ಕ ಆಧಾರಿತ ವಿಷಯಗಳಿದ್ದರೆ ತರಗತಿಯಲ್ಲಿ ಶಿಕ್ಷಕರು ಬಿಡಿಸತೊಡಗುತ್ತಿದ್ದಂತೆ ಮನೆಯಲ್ಲಿ ಅದೇ ರೀತಿಯ ಲೆಕ್ಕಗಳನ್ನು ಪಠ್ಯದಿಂದ ಆರಿಸಿಕೊಂಡು ಮಾಡತೊಡಗಬೇಕು. ಮಾದರಿ ಲೆಕ್ಕಗಳನ್ನು ಕಡ್ಡಾಯವಾಗಿ ಮನನ ಮಾಡಿಕೊಳ್ಳಬೇಕು. ಅರ್ಥವಾಗದಿದ್ದರೆ ಶಿಕ್ಷಕರನ್ನು ಕೇಳಬೇಕು. ಕೆಲ ಸಮಯ ಶಿಕ್ಷಕರು ಬಿಡುವಾಗಿರುವುದಿಲ್ಲ. ಅದರಲ್ಲೂ ಸರಕಾರಿ ಶಾಲೆ/ಕಾಲೇಜುಗಳಾದರೆ ಶಿಕ್ಷಕರ ಹೆಚ್ಚು ಗುಮಾಸ್ತಿಕೆಯ ಕೆಲಸಗಳಲ್ಲೇ ಕಳೆದುಹೋಗುವುದರಿಂದ ಅವರೂ ಬಿಡುವಾಗುವುದು ಕಷ್ಟ. ಅದರಲ್ಲೂ ಪಟ್ಟು ಬಿಡದೇ ಹಿಂಬಾಲಿಸಿ ಕೇಳುತ್ತಿದ್ದರೆ ಶಿಕ್ಷಕರು ನಿಮಗಾಗಿ ಸಮಯ ಮಾಡಿಕೊಂಡೇ ಮಾಡಿಕೊಳ್ಳುತ್ತಾರೆ. ಜೊತೆಗೆ ಅವರೊಡನೆ ನಿಮ್ಮ ಸಂಬಂಧ ಗಟ್ಟಿಯಾಗುತ್ತದೆ. ತರಗತಿಯಲ್ಲೂ ಶಿಕ್ಷಕರು ನಿಮ್ಮನ್ನು ಗುರುತಿಸತೊಡಗುತ್ತಾರೆ. ಆ ವಿಶ್ವಾಸ ನಿಮ್ಮನ್ನು ನೀವು ಓದಿನಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತದೆ.

ಕೆಲವರಿಗೆ ಪಾಠವು ಒಂದೇ ಸಾರಿ ಓದಿದರೆ ತಲೆಗೆ ಹೋಗುವುದಿಲ್ಲ. ಆಗ ಮತ್ತೆ ಮತ್ತೆ ಓದಿ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಆದರೆ ಬಾಯಿ ಪಾಠ ಮಾಡಬಾರದು. ಗೊತ್ತಾಗದ ವಿಷಯಗಳನ್ನು ಮೊದಲೇ ಹೇಳಿದಂತೆ ಶಿಕ್ಷಕರ ಬಳಿ ಹೋಗಿ ಕೇಳಿ ತಿಳಿದುಕೊಳ್ಳಬೇಕು. ಅರ್ಥವಾಗುವವರೆಗೆ ಪ್ರಯತ್ನವನ್ನು ಯಾವುದೇ ಕಾರಣಕ್ಕೂ ಬಿಡಬಾರದು.

ಮೊಬೈಲ್ ಇಂಟರ್ ನೆಟ್ ಗಳ ಕಾಲದಲ್ಲಿ ಮನಸ್ಸಿನ ಚಂಚಲತೆಯನ್ನು ಹಿಡಿತದಲ್ಲಿಟ್ಟುಕೊಳ್ಳುವುದು ಕಷ್ಟವೂ ಹೌದು. ಅದರಲ್ಲೂ ಹದಿವಯಸ್ಸು ಹೆಂಡ ಕುಡಿದ ಕೋತಿಯ ಮನಸ್ಸು! ಇಂತಹ ವಿಚಲಿತಗೊಳಿಸುವ ಸಲಕರಣೆಗಳಿಂದ ದೂರವಿರಲು ಬೇರೆ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿ ಜೀವನವೆಂದರೆ ಬರಿಯ ಓದು ಮಾತ್ರವಲ್ಲ. ಹವ್ಯಾಸ, ಆಟಗಳಿಗೂ ಸಮಯ ಮೀಸಲಿಡಬೇಕು. ಮೇಲೆ ಹೇಳಿದ ಓದಿನ ಕ್ರಮವನ್ನು ಪಾಲಿಸಲು ಹೆಚ್ಚು ಸಮಯ ಬೇಕಾಗುವುದಿಲ್ಲ. ದಿನಕ್ಕೆ ಮೂರರಿಂದ ನಾಲ್ಕು ತಾಸು ವ್ಯಯಿಸಿದರೂ ಸಾಕು! ಉಳಿದ ಸಮಯವನ್ನು ಹವ್ಯಾಸಗಳಿಗೆ, ಆಟಗಳಿಗೆ ಮೀಸಲಿಡಬಹುದು. ಹವ್ಯಾಸಗಳನ್ನು ಹೊಂದುವುದು ಮನಸ್ಸನ್ನು ಪ್ರಫುಲ್ಲಿತವಾಗಿ ಇಡುತ್ತದೆ. ಮನಸ್ಸು ಪ್ರಫುಲ್ಲಿತವಾಗಿದ್ದಷ್ಟುಏಕಾಗ್ರತೆ ಹೆಚ್ಚುತ್ತದೆ. ಯೋಗ ಪ್ರಾಣಾಯಾಮಗಳನ್ನು ಅಭ್ಯಾಸ ಮಾಡಿದರೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡಕ್ಕೂ ಒಳ್ಳೆಯದು. ನೃತ್ಯ, ಸಂಗೀತ ಚಿತ್ರಕಲೆ ಮತ್ತಿತರೆ ಕೆಲಸಗಳಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳುವುದು. ಇದಾವುದೂ ಬೇಡವೆಂದರೆ ಮನೆ ಕೆಲಸಗಳಲ್ಲಿ ತೊಡಗಿಕೊಳ್ಳಬಹುದು.

ಓದು ಮತ್ತು ಹವ್ಯಾಸಗಳನ್ನು ಸಮಯ ನಿಗದಿಪಡಿಸಿಕೊಂಡು ಪಾಲಿಸತೊಡಗಿದರೆ ಅದೊಂದು ಜೀವನ ಪೂರ್ತಿ ಪಾಲಿಸಬಹುದಾದ ಒಳ್ಳೆಯ ಜೀವನಕ್ರಮವಾಗುತ್ತದೆ. ದೇಹ ಮತ್ತು ಮನಸ್ಸುಗಳೆರಡೂ ಶಿಸ್ತಿಗೆ ಒಳಪಡುತ್ತವೆ. ಆಗ ಓದು ಮತ್ತು ಜೀವನ ಎರಡೂ ಭಾರವೆನಿಸುವುದಿಲ್ಲ..!

-  ಸಿಂಧು

ಮೂಲ : ಕನ್ನಡ ಪ್ರಭ

2.94690265487
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top