অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಬಾಲ್ಯದ ಆರೋಗ್ಯ

ಬಾಲ್ಯದ ಆರೋಗ್ಯ

  1. ಚಿಹ್ನೆಗಳು ಮತ್ತು ರೋಗ ಲಕ್ಷಣಗಳು
  2. ಅಪಾಯ ಪೂರಕ‌ ಅಂಶಗಳು
  3. ಮುನ್ನೆಚ್ಚರಿಕೆಯ ಚಿಹ್ನೆಗಳು
  4. ಅರಿವಿನ  ಅಥವಾ ಮೂಡ್‌ ಸೂಚಕಗ‌ಳು
  5. ಖಿನ್ನತೆಯ ದೈಹಿಕ ಚಿಹ್ನೆಗಳು
  6. ಶಿಕ್ಷಕರಿಗೆ ಸಲಹೆಗಳು
  7. ಹೆತ್ತವರಿಗೆ ಸಲಹೆಗಳು
  8. ಬಾಲ್ಯದ ಖನ್ನತೆಗೆ ಚಿಕಿತ್ಸೆಗಳು
  9. ಬಾಲ್ಯದಲ್ಲಿರುವ ಕೆಲವು ಸಾಮಾನ್ಯ ತೊಂದರೆಗಳು
  10. ಮಕ್ಕಳ ಬಾಯಿಯ ಆರೋಗ್ಯ ರಕ್ಷಣೆ
  11. ಮಕ್ಕಳ ಪೆರಿಯೋಡಾಂಟಲ್‌ ಕಾಯಿಲೆ ವಿಧಗಳು
  12. ಪೆರಿಯೋಡಾಂಟಲ್‌ ಕಾಯಿಲೆಯ ಲಕ್ಷಣಗಳು
  13. ತಾರುಣ್ಯ ಹಾಗೂ ಬಾಯಿಯ ಆರೈಕೆ
  14. ಪೋಷಕರಿಗೆ ಸಲಹೆಗಳು
  15. ಮಕ್ಕಳಲ್ಲಿ ಹೆಚ್ಚಾಗುತ್ತಿದೆ ಬಾಲನೆರೆ ಸಮಸ್ಯೆ
  16. ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ದೊಡ್ಡ ಸಮಸ್ಯೆಯೇ
  17. ಮಗು ಬೆರಳು ಕಚ್ಚುತ್ತಿದೆಯೇ
  18. ಮಕ್ಕಳ ನೆನಪಿನ ಶಕ್ತಿ ಹೆಚ್ಚಿಸುವ ಆಹಾರಗಳು
  19. ಮಕ್ಕಳು ಚಟುವಟಿಕೆಯುಳ್ಳವರಾಗುವುದು ಹೇಗೆ?
  20. ಮಕ್ಕಳ ಊಟದ್ದೇ ಚಿಂತೆಯೇ?
  21. ನೆನಪಿನ ಶಕ್ತಿ ಹೆಚ್ಚಿಸುವ ಆಹಾರ
  22. ಮೊಗ್ಗಿನೆದೆಯ ಮುಚ್ಚಲು
  23. ಚಿನ್ನು ಆರೋಗ್ಯಕ್ಕೆ ಹೊನ್ನು
  24. ಸ್ವರ್ಣಪ್ರಾಶನ ಎಂದರೇನು ?
    1. ತಪ್ಪು ತಿಳಿವಳಿಕೆ ಹಾಗೂ ಪರಿಣಾಮ
  25. ಮೃದುಬಟ್ಟೆ
  26. ಕಂದನ ಕಣ್ಣು
    1. ರಕ್ಷಣೆ ಹೇಗೆ ?
    2. ಮಕ್ಕಳ ತಂಪು ಕನ್ನಡಕ ಖರೀದಿ ಮುಂಚೆ:
  27. ಪದ ಉಚ್ಛಾರ
  28. ತೇಗು
  29. ಮಕ್ಕಳ ಅತಿಸಾರದ ನಿವಾರಣೆಗೆ 7 ಸರಳ ಮನೆ ಮದ್ದುಗಳು
    1. ಮೆಂತ್ಯೆ
    2. ಶುಂಠಿ
    3. ಸೇಬು ಹಣ್ಣಿನ ಸೈಡರ್ ವಿನೇಗರ್
    4. ಬಾಳೆಹಣ್ಣು
    5. ಮೊಸರು
    6. ಬಿಳಿ ಅನ್ನ
    7. ಆಲೂಗಡ್ಡೆ
  30. ಕ್ಲಬ್ ಫೂಟ್
  31. ಬೊಜ್ಜು
  32. ಆರೋಗ್ಯಕ್ಕೆ ಮನೆ ಮದ್ದು
  33. ಪುರುಷನಾಗುವಾಗ

ಡಾ| ಲತಾ ಕೆ.ಎಸ್‌. ,ಅಸೋಸಿಯೇಟ್‌ ಪ್ರೊಫೆಸರ್‌, ಮನೋರೋಗ ಚಿಕಿತ್ಸಾ ವಿಭಾಗ, ಕೆ.ಎಂ.ಸಿ. ಆಸ್ಪತ್ರೆ, ಮಣಿಪಾಲ. |

ರಿಷಬ್‌ 8 ವರ್ಷದ  ಬಾಲಕ. ಆತ ನೋಡಲು ಸುಂದರವಾಗಿದ್ದ ಮತ್ತು ಹೆತ್ತವರ ಮುದ್ದಿನ ಒಬ್ಬನೇ ಮಗನಾಗಿದ್ದ. ಆತನ ತಂದೆ-ತಾಯಿ ನೌಕರಿಯಲ್ಲಿದ್ದರು, ಮತ್ತು ಯಾವಾಗಲೂ ತಮ್ಮ ಕೆಲಸ-ಕಾರ್ಯಗಳಲ್ಲಿ ವ್ಯಸ್ತರಾಗಿರುತ್ತಿದ್ದರು. ಆದ್ದರಿಂದ, ರಿಷಬ್‌ ಹುಟ್ಟಿದ ಸ್ವಲ್ಪ  ಸಮಯದಲ್ಲೇ ಅವನನ್ನು ದೂರದ ಊರಿನಲ್ಲಿರುವ ಆವನ ಸೋದರ ಆತ್ತೆಯ ಬಳಿ ಬಿಡಲಾಯಿತು.

ರಿಷಬ್‌ನ ಹೆತ್ತವರು ಆತನನ್ನು 3 ತಿಂಗಳಿಗೊಮ್ಮೆಯಂತೆ  ಭೇಟಿಮಾಡಿ ಬರುತ್ತಿದ್ದರು. ಆತನ ಸೋದರತ್ತೆಯ ಮಕ್ಕಳು ಬೆಳೆದು ದೊಡ್ಡವ ರಾಗಿ ಬೇರೆ ಊರಿನಲ್ಲಿ  ನೌಕರಿಯಲ್ಲಿದ್ದುದ ರಿಂದ, ರಿಷಬ್‌ಗ  ಅಲ್ಲಿ  ಯಾವುದೇ ರೀತಿಯ ತೊಂದರೆಗಳು ಇರಲಿಲ್ಲ. ಆದ್ದರಿಂದ, ಸಹಜ ವಾಗಿಯೇ  ಆವನು ಅತ್ತೆ ಮತ್ತು ಮಾವರಿಗೆ  ಹೊಂದಿಕೊಂಡಿದ್ದನು. ಆವನು ಅಲ್ಲಿ ಆರೋಗ್ಯದಿಂದ  ಮತ್ತು ಸಂತೋಷದಿಂದಿದ್ದನು.

ರಿಷಬ್‌ನನ್ನು ಶಾಲೆಗೆ ಸೇರಿಸುವ ಸಮಯದಲ್ಲಿ, ಅವನ ಹೆತ್ತವರು ಆವನನ್ನು ವಾಪಸು ಕರೆತಂದರು ಮತ್ತು ಒಂದು ಒಳ್ಳೆಯ ಶಾಲೆಯಲ್ಲಿ  ಅವನಿಗೆ ಪ್ರವೇಶವನ್ನು  ಸಹ ಪಡೆದರು. ಆದರೆ, ಅತ್ತೆಯ ಮನೆಯಿಂದ ಹೆತ್ತವರ ಮನೆಗೆ ಸ್ಥಳಾಂತರವಾದದ್ದು , ಮಗುವಿ ನಲ್ಲಿ  ತುಂಬಾ ರೀತಿಯ ಬದಲಾವಣೆಗಳಾಗಲು ಕಾರಣವಾಯಿತು. ಎಲ್ಲ ವಿಧಗಳಲ್ಲಿಯೂ  ಸಹಜವಾಗಿಯೇ ವರ್ತಿಸುತ್ತಿದ್ದ  ರಿಷಬ್‌, ಇತ್ತೀಚೆಗೆ ಮೌನವಾಗಿರುವುದು, ಚಂಚಲ ಮನಸ್ಸನ್ನು  ಹೊಂದಿರುವುದು, ಯಾವಾಗಲೂ ದುಃಖ ಪಡುವುದು, ತಿನ್ನಲು ನಿರಾಕರಿಸು ವುದು, ಆಟ ಆಡುವುದರಲ್ಲಿ   ನಿರಾಸಕ್ತಿ ತೋರಿಸುವುದು, ನೆಮ್ಮದಿ ಇಲ್ಲದಂತೆ  ಇರುವುದು ಮತ್ತು  ಶಾಲೆಗೆ ಹೋಗಲು ನಿರಾಕರಿಸುವುದು...  ಮುಂತಾದ  ವರ್ತನೆಗಳನ್ನು  ತೋರಿಸಲು ಪ್ರಾರಂಭಿಸಿದನು. ಹೆತ್ತವರು ಮಗುವನ್ನು  ಮಕ್ಕಳ ಮಾನಸಿಕ ತಜ್ಞರ ಬಳಿ ಕರೆದೊಯ್ದಾಗ, ಆವರು ಮಗುವಿನ ಈ ವರ್ತನೆಯನ್ನು   ಮಗು ""ಬಾಲ್ಯದ ಖನ್ನತೆಯಿಂದ  ನರಳುತ್ತಿದೆ '  ಎಂದು ರೋಗ ನಿರ್ಣಯ ಮಾಡಿದರು. ತಜ್ಞರ ಜೊತೆ ಇನ್ನೂ ಹೆಚ್ಚಿನ ಮಾತುಕತೆಗಳು, ಹೆತ್ತವರಿಗೆ ಮಗುವನ್ನು  ಕರೆ ತರುವ ನಿರ್ಧಾರದಲ್ಲಿ  ದೃಢತೆ ಇರಲಿಲ್ಲ ಎಂಬ ವಿಚಾರವನ್ನು  ಹೊರಹಾಕಿತ್ತು. ಅಲ್ಲದೆ , ಮಗುವನ್ನು  ನೋಡಿಕೊಳ್ಳುವಲ್ಲಿ ಆವರು ಸಂಪೂರ್ಣವಾಗಿ ಸಿದ್ಧರಾಗಿರಲಿಲ್ಲ. ಹಾಗೆಯೇ,  ಮಗುವಿನ ತಂದೆಗೆ ಮಗುವನ್ನು ಇಷ್ಟು   ಬೇಗ ಕರೆತರುವುದು ಇಷ್ಟವಾಗಿಲ್ಲದಿದ್ದುದರಿಂದ, ಮಗುವಿನ ಜೊತೆಯಲ್ಲಿ  ಸೌಹಾರ್ದಯುತ ಸಂಬಂಧವಿರಲಿಲ್ಲ. ಅಷ್ಟಲ್ಲದೆ ಹೆತ್ತವರ ನಡುವೆಯೂ ಕೂಡಾ ಅಷ್ಟೇನೂ ಸಾಮರಸ್ಯವಿರಲಿಲ್ಲ.

ಒಂದು ಕಾಲದಲ್ಲಿ  ವಾಡಿಕೆಯಲ್ಲಿದ್ದ  ಯೋಚನೆಗಳ ಪ್ರಕಾರ, ಚಿಕ್ಕ ಮಕ್ಕಳು ಖನ್ನತೆಗೆ ಒಳಗಾಗುವ  ಪ್ರಮಾಣ ತುಂಬಾ ಕಡಿಮೆ. ಅಲ್ಲದೆ, ಅಂತಹ ಪ್ರಸಂಗಗಳು  ಹೆಚ್ಚು  ಸಮಯ ಉಳಿಯುವುದಿಲ್ಲ.""ಸುಮಾರು 14 ವರ್ಷ ಪ್ರಾಯದ ಸರಿಸುಮಾರು 11 ಮಕ್ಕಳಲ್ಲಿ 1 ಮಗುವು ಒಂದಲ್ಲ  ಒಂದು ವಿಧದ ಖನ್ನತೆಗೆ ಒಳಗಾಗುತ್ತದೆ. ಹಾಗೆಯೇ, ಒಂದು ವೇಳೆ ಮಗುವಿನ ಖನ್ನತೆಯನ್ನು   ತಡೆಯದಿದ್ದರೆ, ಆಥವಾ ಮೊದಲ ಹಂತದಲ್ಲೇ ಅದಕ್ಕೆ ಚಿಕಿತ್ಸೆ ನೀಡದೇ ಹೋದರೆ,  ಅದು ಮರುಕಳಿಸುವ ಅಪಾಯವು ಹೆಚ್ಚಿರುತ್ತದೆ ಮತ್ತು ಅನಂತರದ ಪ್ರತಿಯೊಂದು  ಘಟನೆಯು ಕೂಡ ಗಂಭೀರವಾಗಿರಬಹುದು.'

ಮಕ್ಕಳ ಖನ್ನತೆಯನ್ನು ಕಂಡು ಪತ್ತೆಹಚ್ಚಲು, ಅದರ  ಚಿಹ್ನೆ ಮತ್ತು ಲಕ್ಷಣಗಳ ಬಗ್ಗೆ   ತಿಳಿದು ಕೊಳ್ಳುವುದು ಅತಿ ಮುಖ್ಯವಾಗುತ್ತದೆ. ಯಾಕೆಂದರೆ, ಮಕ್ಕಳಿಗೆ ಹಿರಿಯರಂತೆ ಸ್ಟಷ್ಟ ವಾಗಿ ತಮ್ಮ ಭಾವನೆಗಳನ್ನು  ಶಬ್ದಗಳ‌  ಮೂಲಕ ಹಂಚಿಕೊಳ್ಳಲು ಬರುವುದಿಲ್ಲ .  ಅವರು ಹಿರಿಯರಂತೆ ಬಂದು, ""ನಾನು ಖನ್ನತೆಗೆ ಒಳಗಾಗಿದ್ದೇನೆ ' ಎಂದು ಹೇಳುವುದಿಲ್ಲ. ಅದಕ್ಕಿಂತಲೂ ಹೆಚ್ಚಾಗಿ, ತಾವು ಅಸಾಮಾನ್ಯ ವಾಗಿ ವರ್ತಿಸುತ್ತಿದ್ದೇವೆ ಎಂಬುದು ಅವರ ಅರಿವಿಗೆ  ಬರುವುದಿಲ್ಲ.  ಮಕ್ಕಳು ಹಿರಿಯರ ನಿಯಂತ್ರಣ  ಪ್ರಪಂಚದಲ್ಲಿ ಬದುಕುವುದರಿಂದ,  ಅವರು  ಬಲಹೀನರಾಗಿರುತ್ತಾರೆ. ಹಾಗಾಗಿ, ಇದು ಹೆತ್ತವರಲ್ಲಿ ಮಕ್ಕಳ ಖನ್ನತೆಯ ಚಿಹ್ನೆಗಳನ್ನು  ತಿಳಿಯುವಂತಹ ಮತ್ತು  ಮಗು ತೊಂದರೆಯಲ್ಲಿರುವಾಗ ಸಹಾಯಮಾಡು ವಂತಹ ಜವಾಬ್ದಾರಿಯನ್ನು  ಹೆಚ್ಚಿಸುತ್ತದೆ.

ಬಾಲ್ಯದ ಖನ್ನತೆ ಎನ್ನುವುದು  ಚಿಕ್ಕಮಕ್ಕಳಲ್ಲಿ ಪ್ರಚಲಿತವಿದೆ. ಆದ್ದರಿಂದ, ಹಿರಿಯರು ಖನ್ನತೆಯ ಮೊದಲ ಹಂತದ ಚಿಹ್ನೆಗಳನ್ನು ಕಂಡುಹಿಡಿಯುವುದು ಅತಿ ಮುಖ್ಯ ವಾಗುತ್ತದೆ. ಈ ರೀತಿ ಮಾಡುವ ಸಕಾಲಿಕ ಹಸ್ತಕ್ಷೇಪವು, ಈ ತೊಂದರೆಯ ದೀರ್ಘ‌ಕಾಲದ  ನಕಾರಾತ್ಮಕ ಪರಿಣಾಮಗಳನ್ನು ತಡೆಯುವಲ್ಲಿ  ಸಹಾಯಮಾಡಬಹುದು.

ಚಿಹ್ನೆಗಳು ಮತ್ತು ರೋಗ ಲಕ್ಷಣಗಳು

ಹಿರಿಯರ ಮತ್ತು ಮಕ್ಕಳ ಖನ್ನತೆಯ ಅಂಶಗಳಲ್ಲಿ ವ್ಯತ್ಯಾಸವಿರಬಹುದು. ಆದರೆ, ಚಿಕ್ಕ ಮಕ್ಕಳ ಕೆಲವೊಂದು ರೋಗಲಕ್ಷಣಗಳು ಹಿರಿಯರ ರೋಗಲಕ್ಷಣಗಳನ್ನೂ ಒಳಗೊಂಡಿರಬಹುದು. ಅವುಗಳೆಂದರೆ

  • ನಿರುತ್ಸಾಹದ ಮನೋಭಾವ.
  • ಪದೇ ಪದೇ ದುಃಖ ಪಡುವುದು ಅಥವಾ ಅಳುವುದು.
  • ಆಸಕ್ತಿಯನ್ನು  ಕಳೆದುಕೊಳ್ಳುವುದು ಅಥವಾ ದೈನಂದಿನ ಚಟುವಟಿಕೆಗಳಲ್ಲಿ ಆನಂದವನ್ನು ಕಳೆದುಕೊಳ್ಳುವುದು.
  • ತೂಕದಲ್ಲಿ  ಮತ್ತು  ಹಸಿವೆಯಲ್ಲಿ ಬದಲಾವಣೆ ಕಂಡು ಬರುವುದು.
  • ನಿದ್ರಿಸುವುದರಲ್ಲಿ ತೊಂದರೆ.
  • ಆಯಾಸ ಅಥವಾ ಚೈತನ್ಯ ಕುಂದುವುದು.
  • ಹೊಟ್ಟೆನೋವು ಅಥವಾ ತಲೆನೋವಿನಂತಹ  ದೈಹಿಕ ಲಕ್ಷಣಗಳ ಬಗ್ಗೆ ಪದೇ ಪದೇ  ದೂರು ಹೇಳುವುದು.
  • ನಿಷ್ಪ್ರಯೋಜಕ ಅಥವಾ ಅಪರಾಧಿ ಭಾವನೆ ಹೊಂದಿರುವುದು.
  • ಕಡಿಮೆ ಸ್ವಗೌರವ ಅಥವಾ ಸ್ವಾಭಿಮಾನ ಹೊಂದಿರುವುದು.
  • ಯೋಚಿಸುವುದರಲ್ಲಿ ಮತ್ತು ಏಕಾಗ್ರತೆಯಲ್ಲಿ ತೊಂದರೆಯನ್ನು ಅನುಭವಿಸುವುದು.
  • ಆತ್ಮಹತ್ಯಾಕಾರಕ ಯೋಚನೆಗಳು.
  • ನಿರಾಕರಣೆ  ಅಥವಾ ವೈಫಲ್ಯದ ಬಗ್ಗೆ ಅತಿಯಾದ ಸಂವೇದನಾಶೀಲತೆಯನ್ನು ಹೊಂದಿರುವುದು.
  • ದುಷ್ಟ ಮುಖದ ಚಿತ್ರಗಳನ್ನು  ಅಥವಾ ಪೈಂಟಿಂಗ್ಸ್‌ಗಳನ್ನು ಬಿಡಿಸುತ್ತಿರುವುದು.
  • ತಮಗೆ ಅಥವಾ ಇತರರಿಗೆ ನೇರವಾಗಿ ಆಕ್ರಮಣಕಾರಿಯಾಗಿರುವಂತಹ ವಸ್ತುಗಳ  ಜೊತೆಯಲ್ಲಿ ಆಟ ಆಡುವುದು ಅಥವಾ ಸತತವಾಗಿ ದುಃಖಕರ ವಿಷಯಗಳಲ್ಲಿ  ತೊಡಗಿಕೊಳ್ಳುವುದು.

ಅದಾಗ್ಯೂ, ಖನ್ನತೆಯನ್ನು ಹೊಂದಿರುವ ಮಕ್ಕಳು ಯಾವಾಗಲೂ ""ಖನ್ನತೆಯ ಮೂಡನ್ನು ' ಪ್ರದರ್ಶಿಸುವುದಿಲ್ಲ. ಅದರ ಬದಲು, ಅವರು ಹೆಚ್ಚು  ಸಿಡುಕುತ್ತಾರೆ ಆಥವಾ ಕೋಪಗೊಂಡಂತೆ ಕಂಡುಬರುತ್ತಾರೆ ಮತ್ತು ಅದರ  ಪರಿಣಾಮವಾಗಿ, ಭಾವನೆಗಳನ್ನು  ವ್ಯಕ್ತಪಡಿಸುವಂತಹ ವರ್ತನೆಗಳನ್ನು ತೋರಿಸುತ್ತಾರೆ (ಉದಾ: ವಸ್ತುಗಳನ್ನು  ಎಸೆಯುವುದು, ಬಾಗಿಲನ್ನು  ದಢಾರನೆ ಮುಚ್ಚುವುದು... ಇತ್ಯಾದಿ). ಖನ್ನತೆಯನ್ನು  ಹೊಂದಿರುವ ಮಕ್ಕಳು ಹೆಚ್ಚು ಹೆಚ್ಚು  ದೈಹಿಕ ರೋಗಲಕ್ಷಣಗಳ ಬಗ್ಗೆ ಕೂಡಾ ದೂರನ್ನು ಹೇಳಬಹುದು ಅಥವಾ ಅವನ/ಅವಳ ಭಾವನೆಗಳನ್ನು ಹಂಚಿಕೊಳ್ಳಲು  ಅಸಾಧ್ಯವಾಗಿರುವ ಕಾರಣದಿಂದಾಗಿ ಹೆಚ್ಚು  ಹೆಚ್ಚು ಭಯವನ್ನು ಪ್ರದರ್ಶಿಸಬಹುದು.

ಅಪಾಯ ಪೂರಕ‌ ಅಂಶಗಳು

ಈ ಕೆಳಗಿನ ಅಂಶಗಳು ಕೂಡಾ ಮಕ್ಕಳಲ್ಲಿ ಖನ್ನತೆಗೆ ಕಾರಣವಾಗಬಹುದು.ಅವುಗಳೆಂದರೆ:

  • ಒಂದು ವೇಳೆ ಹೆತ್ತವರು ಖನ್ನತೆಯನ್ನು  ಹೊಂದಿದ್ದರೆ, ವಂಶಪಾರಂಪರ್ಯದ ಮೂಲಕ ಮಗು  ಕೂಡಾ ಖನ್ನತೆಗೆ ಒಳಗಾಗುವ ಸಾಧ್ಯತೆಯ ಅಪಾಯ ಹೆಚ್ಚಿರುತ್ತದೆ.
  • ಒತ್ತಡದ ಜೀವನ ಅಥವಾ ಮಗು ಬೆಳೆಯುವ ಪರಿಸರದ ಅಂಶಗಳು ಕೂಡಾ ಮಗು ಖನ್ನತೆಗೆ ಒಳಪಡುವಲ್ಲಿ ಮಹತ್ವದ ಪಾತ್ರವನ್ನು  ವಹಿಸುತ್ತವೆ.(ಉದಾ: ಹೆತ್ತವರನ್ನು ಕಳೆದು ಕೊಳ್ಳುವುದು, ವಿಚ್ಛೇದನ, ಅಥವಾ ಸ್ನೇಹಿತರೊಂದಿಗಿನ ಭೇದಭಾವ ಸಂಬಂಧಿತೊಂದರೆಗಳು, ಶೈಕ್ಷಣಿಕ ತೊಂದರೆಗಳು, ಸಂಬಂಧಗಳಲ್ಲಿ ತೊಂದರೆಗಳು, ಅಥವಾ ನಷ್ಟ, ಅಸೌಖ್ಯ ಮತ್ತು ಇತರ ಸಾಮಾಜಿಕ ಸನ್ನಿವೇಶಗಳು).
  • ದೈಹಿಕವಾದ ಅಥವಾ ಮಾನಸಿಕವಾದ ತೊಂದರೆಗಳು ಅಸೌಖ್ಯಕ್ಕೆ ಕಾರಣವಾಗಿ, ಖನ್ನತೆ ಉಂಟಾಗಬಹುದು.
  • ಶೋಷಣೆಗೆ ಒಳಗಾದ ಅಥವಾ ಕಡೆಗಣಿಕೆಗೆ ಒಳಗಾದ  ಮಕ್ಕಳು ಕೂಡಾ ಖನ್ನತೆಗೆ ಈಡಾಗಬಹುದು. ಬೇರೆ  ರೀತಿಯ ಆಘಾತಕ್ಕೊಳಗಾದ, ಅಥವಾ ದೀರ್ಘ‌ಕಾಲದ ಅಸೌಖ್ಯಕ್ಕೆ ಒಳಗಾದ ಮಕ್ಕಳು ಕೂಡಾ ಖನ್ನತೆಗೆ ಒಳಗಾಗುವ ಅಪಾಯವು ಹೆಚ್ಚಿರುತ್ತದೆ.

ಮುನ್ನೆಚ್ಚರಿಕೆಯ ಚಿಹ್ನೆಗಳು

ಬಾಲ್ಯದ ಖನ್ನತೆಯನ್ನು ತೋರಿಸುವ ಎಚ್ಚರಿಕೆಯ ಚಿಹ್ನೆಗಳು ಬಹಳಷ್ಟಿವೆ. ಅವುಗಳಲ್ಲಿ ಕೆಲವೊಂದು ಶಾಲೆಯ ಅಥವಾ ವರ್ತನೆಯ ಚಿಹ್ನೆಗಳೆಂದರೆ:

  • ಹೆಚ್ಚಾದ ಚಿತ್ತಕ್ಷೋಭೆ ಅಥವಾ ಅತಿ ಚಟುವಟಿಕೆ.
  • ಶೈಕ್ಷಣಿಕ ಸಾಧನೆಯಲ್ಲಿ ಅಕಾರಣ ಹಿನ್ನಡೆ.
  • ಸ್ನೇಹಿತರ ಗುಂಪಿನಿಂದ ಹಿಂದೆ ಸರಿಯುವುದು.
  • ವಿಚ್ಛಿದ್ರಕಾರಿ ವರ್ತನೆಗಳು (ಗಂಡು ಮಕ್ಕಳಲ್ಲಿ ಈ ವರ್ತನೆಗಳು ಸಾಮಾನ್ಯವಾಗಿರುತ್ತವೆೆ).
  • ದೈಹಿಕ ದೂರುಗಳು.

ಅರಿವಿನ  ಅಥವಾ ಮೂಡ್‌ ಸೂಚಕಗ‌ಳು

  • ಏಕಾಗ್ರತೆಯ ತೊಂದರೆಗಳು.
  • ನಕಾರಾತ್ಮಕ  ಸ್ವ-ಗೌರವ.
  • ವೈಫಲ್ಯದ ನಿರೀಕ್ಷೆ.
  • ಸಿಡುಕುವುದು ಅಥವಾ ಮುಂಗೋಪ  ಪ್ರದರ್ಶಿಸುವುದು.
  • ದುಃಖದಿಂದ  ಕೂಡಿದ  ಮನಃಸ್ಥಿತಿ.
  • ಅಪರಾಧಿ ಮನೋಭಾವ.

ಖಿನ್ನತೆಯ ದೈಹಿಕ ಚಿಹ್ನೆಗಳು

  • ನಿದ್ರಿಸುವುದಕ್ಕೆ ತೊಂದರೆ ಪಡುವುದು.
  • ಹಸಿವಿನ ವಿನ್ಯಾಸದಲ್ಲಿ   ಬದಲಾವಣೆ.
  • ಚಲನೆಯಲ್ಲಿ ಅಥವಾ ಚಟುವಟಿಕೆಗಳಲ್ಲಿ ಬದಲಾವಣೆ.
  • ಪದೇ ಪದೇ ಆಯಾಸಗೊಳ್ಳುತ್ತಿರುವ  ಬಗ್ಗೆ ಆಗಾಗ ದೂರುಗಳು.

ತೊಂದರೆಗೆ ಪೂರಕವಾದ ಇತರ ಸ್ಥಿತಿಗಳು

ಸಾಮಾನ್ಯವಾಗಿ, ಖನ್ನತೆಯೊಂದೇ ಕಂಡುಬರುವುದು ಬಹಳ ಅಪರೂಪ. ಇದು ಹೆಚ್ಚಾಗಿ ಬೇರೆ ತೊಂದರೆಗಳ ಜೊತೆಯಲ್ಲಿ ಕಂಡುಬರುತ್ತದೆ. (ಉದಾ:ಆತಂಕ, ಗಮನಶಕ್ತಿಯಲ್ಲಿ ಕೊರತೆ ಮತ್ತು ಅತಿಚಟುವಟಿಕೆಯ ತೊಂದರೆಗಳು). ಆದುದರಿಂದ, ಚಿಕಿತ್ಸೆಯ ಸಮಯದಲ್ಲಿ ಇವುಗಳನ್ನು  ಕೂಡಾ ಗಣನೆಗೆ ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ.

ಶಿಕ್ಷಕರಿಗೆ ಸಲಹೆಗಳು

  • ಶಿಕ್ಷಕರು ಖನ್ನತೆಗೆ ಒಳಗಾಗಿರುವ ಮಕ್ಕಳೊಂದಿಗೆ ಬೆಂಬಲ ನೀಡುವಂತಹ  ಸಂಬಂಧಗಳನ್ನು ಬೆಳೆಸಿಕೊಳ್ಳುವಂತಹ ಪ್ರಯತ್ನವನ್ನು  ಮಾಡಬೇಕು. ಖನ್ನತೆಗೆ ಒಳಗಾಗಿರುವ ಮಕ್ಕಳು, ತಮ್ಮ ಸಿಡುಕುತನದಿಂದ ಅಥವಾ  ಪ್ರೇರಣೆಯಲ್ಲಿನ ಕೊರತೆಗಳಿಂದಾಗಿ ಶೈಕ್ಷಣಿಕ ವಿಷಯಗಳಲ್ಲಿ ಕಡಿಮೆ ಆಸಕ್ತಿಯನ್ನು  ಹೊಂದಿರುವ ಕಾರಣದಿಂದ, ಶಿಕ್ಷಕರು ಹೇಳಿದ ಕೆಲಸಗಳನ್ನು  ಮಾಡಲು ತೊಂದರೆ  ಪಡಬಹುದು.
  • ಉತ್ತಮ ಬಾಂಧವ್ಯವನ್ನು ಬೆಳೆಸುವುದು ಯಶಸ್ವಿ ಚಿಕಿತ್ಸೆಯ ಒಂದು ಅವಿಭಾಜ್ಯ ಅಂಗ ಎಂಬುದನ್ನು ಶಿಕ್ಷಕರು  ಗಮನದಲ್ಲಿಟ್ಟುಕೊಳ್ಳಬೇಕು. ಖನ್ನತೆಗೆ ಒಳಪಟ್ಟ  ಮಗುವಿನ ಜೊತೆಯಲ್ಲಿ ಗುಣಾತ್ಮಕ  ಸಂಬಂಧವನ್ನು ಬೆಳಸುವಲ್ಲಿ ಶಿಕ್ಷಕರು ತೊಂದರೆ  ಪಟ್ಟರೂ  ಕೂಡಾ, ಈ ಪ್ರಯತ್ನವು ಇನ್ನೊಂದು  ರೀತಿಯಲ್ಲಿ ಲಾಭದಾಯಕವಾಗಬಹುದು.
  • ಶಿಕ್ಷಕರೊಂದಿಗಿನ ನಿಯಮಿತವಾದ  ವಿಚಾರಣೆ ಅಥವಾ ಹಿರಿಯರ ಬೆಂಬಲಗಳು, ಮಗುವಿನ ಮೂಡ್‌ ಮತ್ತು ವರ್ತನೆಗಳನ್ನು  ಪರೀಕ್ಷಿಸಿ  ಉತ್ತಮಗೊಳಿಸುವಲ್ಲಿ ಸಹಾಯ ಮಾಡಬಹುದು.
  • ಮಗು ಯಾವಾಗಲೂ, ಯಾವುದಾದರೊಂದು ಕೆಲಸಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು ತಮ್ಮ  ಪ್ರಯತ್ನವನ್ನು  ಮಾಡಬೇಕು ಮತ್ತು ಅವನನ್ನು / ಅವಳನ್ನು ಯಾವುದಾದರೊಂದು ಕೆಲಸದಲ್ಲಿ ತೊಡಗಿಸಿಕೊಳ್ಳುವಂತೆ ಹೆಚ್ಚು ಹೆಚ್ಚು ಪ್ರಚೋದನೆ ನೀಡಬೇಕು.
  • ಖನ್ನತೆಗೆ ಒಳಗಾಗಿರುವ ಮಗು, ತನ್ನ ಒತ್ತಡವನ್ನು ಸಹಿಸಿಕೊಳ್ಳಲಾರದಂತಹ ಸ್ಥಿತಿಯಲ್ಲಿರುವುದರಿಂದ ಅಥವಾ ಅದರ ಸುಲಭವಾಗಿ ಬಿಟ್ಟುಬಿಡುವ ಪ್ರವೃತ್ತಿಯಿಂದಾಗಿ, ಆವರಿಗೆ ಕೊಡುವ ಕೆಲಸದಲ್ಲಿ ರಿಯಾಯಿತಿ ನೀಡುವ ಅಗತ್ಯವಿದೆ.
  • ಖನ್ನತೆಯೊಂದಿಗೆ ಗಮನಶಕ್ತಿಯ ಮತ್ತು ಏಕಾಗ್ರತೆಗಳ ತೊಂದರೆಗಳಿಂದಾಗಿ, ಖನ್ನತೆಗೊಳಗಾಗಿರುವ ಮಗುವಿಗೆ ಕೊಟ್ಟಿರುವ ಕೆಲಸಗಳನ್ನು ಪೂರ್ತಿಮಾಡಲು ಬಾಹ್ಯ ಬೆಂಬಲದ  ಅಗತ್ಯ ಆಥವಾ ಹೆಚ್ಚು ಸಮಯಾವಕಾಶ ಬೇಕಾಗಬಹುದು.
  • ಮಕ್ಕಳಿಗೆ,ದಿನವಿಡೀ ಉಲ್ಲಾಸದಾಯಕ ವಾತಾವರಣವನ್ನು  ಶಿಕ್ಷಕರು ಕಲ್ಪಿಸುವ ಪ್ರಯತ್ನ ಮಾಡುವಂತೆ ಶಿಕ್ಷಕರನ್ನು ಪ್ರೋತ್ಸಾಹಿಸಬೇಕು.
  • ಮಗು ಅತಿ ಹೆಚ್ಚು ಆಸಕ್ತಿ ವಹಿಸುವ ಚಟುವಟಿಕೆಗಳಿಂದ ಮಗುವನ್ನು ಬಲವಂತವಾಗಿ ಹೊರಗೆಳೆಯುವ ಮೂಲಕ ಶಿಕ್ಷಿಸಬೇಡಿ. ಇದರಿಂದ ಮಗುವಿನ ಖನ್ನತೆಯ ರೋಗಲಕ್ಷಣಗಳು ಇನ್ನಷ್ಟು ಹೆಚ್ಚಾಗುತ್ತವೆ.
  • ಮಕ್ಕಳು ತಪ್ಪಿನ ಕಡೆಗೆ ಹೆಚ್ಚು ಗಮನಕೊಡುತ್ತಿರುವ ಸಮಯದಲ್ಲಿ, ಅವನು/ ಆವಳು ಒಳ್ಳೆಯ ಕೆಲಸ  ಮಾಡಿದಾಗ ಮಗುವನ್ನು ಪ್ರಶಂಸಿಸುವ ಅಭ್ಯಾಸ ಬೆಳೆಸಿಕೊಳ್ಳಿ.  ತಪ್ಪು ಮಾಡಿದಾಗ ಹೆಚ್ಚು ಒರಟಾಗಿ ಟೀಕೆ ಮಾಡಬೇಡಿ.

ಹೆತ್ತವರಿಗೆ ಸಲಹೆಗಳು

  • ಹೆತ್ತವರು  ಖನ್ನತೆಗೆ ಒಳಗಾದ  ಮಕ್ಕಳನ್ನು ಸಮಾಜಸ್ನೇಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು. (ಉದಾ: ಆಟ, ಕ್ಲಬ್‌ಗಳು, ಸಂಗೀತ ಪಾಠಗಳು ... ಇತ್ಯಾದಿಗಳು).
  • ನಿಮ್ಮ ಮಗುವಿನ ಖನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡಲು, ಅವರ ಜೀವನ ಶೈಲಿಯಲ್ಲಿ ನಿಯಮಿತವಾದ ವ್ಯಾಯಾಮದ ಪಟ್ಟಿಯನ್ನು ತಯಾರು ಮಾಡಿ. (ಉದಾ.,ನಡೆಯುವುದು, ಬೈಕ್‌ ಓಡಿಸುವುದು... ಇತ್ಯಾದಿಗಳು).
  • ನಿಮ್ಮ  ಮಗುವು ಸ್ವಗೌರವವನ್ನು ಅಥವಾ ಸ್ವಾಭಿಮಾನವನ್ನು ಹೆಚ್ಚು ಹೊಂದಲು, ಅವರ  ಶಕ್ತಿಯನ್ನು  ಅವರಿಗೆ  ತಿಳಿಸಿಕೊಡಿ.
  • ಮನೆಯಲ್ಲಿ  ಸಾಕುಪ್ರಾಣಿಗಳನ್ನು ಸಾಕಿರಿ ಮತ್ತು ನಿಮ್ಮ ಮಗುವು  ಅವುಗಳ ಅರೈಕೆಯಲ್ಲಿ ತೊಡಗಿಕೊಳ್ಳುವಂತೆ  ಮಾಡಿ. (ಉದಾ., ನಾಯಿ,ಬೆಕ್ಕು, ಹಕ್ಕಿಗಳು...ಇತ್ಯಾದಿ),
  • ಒಳ್ಳೆಯ  ಕೆಲಸ ಮಾಡಿದಾಗ , ಪದೇ ಪದೇ ಅವರನ್ನು  ಶ್ಲಾಘಿಸಿ ಮತ್ತು ಗುಣಾತ್ಮಕ ವಾದ ಪ್ರತಿಕ್ರಿಯೆಗಳನ್ನು  ನೀಡಿರಿ.
  • ನಿಮ್ಮ ಮಗುವಿನ ದಿನನಿತ್ಯದ ಕೆಲಸಕಾರ್ಯಗಳಲ್ಲಿ ದೃಢತೆಯನ್ನು ಕಾಪಾಡಿ.
  • ನಿಯಮಿತವಾಗಿ ಒಂದೇ ಸಮಯಕ್ಕೆ ಮಲಗುವ ಅಭ್ಯಾಸವನ್ನು  ಇಟ್ಟುಕೊಳ್ಳಿ.
  • ಕೌಟುಂಬಿಕ ಮನರಂಜನಾ ಚಟುವಟಿಕೆಗಳನ್ನು ಯೋಜನೆ ಮಾಡಿ.
  • ಭಾವನೆಗಳನ್ನು  ಆರೋಗ್ಯಕರ ರೀತಿಯಲ್ಲಿ ಪ್ರದರ್ಶಿಸುವಂತಹ ವರ್ತನೆಗಳಿಗೆ ಪ್ರಚೋದನೆ ನೀಡಿರಿ.

ಬಾಲ್ಯದ ಖನ್ನತೆಗೆ ಚಿಕಿತ್ಸೆಗಳು

  • ಸಾಮಾನ್ಯವಾಗಿ ಬಾಲ್ಯದ ಖನ್ನತೆಯ ಚಿಕಿತ್ಸೆಯು, ಅರಿವಿನ ಮತ್ತು ವರ್ತನೆಯ ಥೆರಪಿಗಳನ್ನು ಒಳಗೊಂಡಿರುತ್ತದೆ.
  • ನ್ನತೆಗೆ ಒಳಪಟ್ಟಿರುವ ಮಕ್ಕಳ ಚಿಕಿತ್ಸೆಯು ಸಾಮಾನ್ಯವಾಗಿ, ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಕೌಶಲ ಮತ್ತು ಪರಿಸ್ಥಿತಿಗೆ ಹೊಂದಿಕೊಳ್ಳುವ ಕೌಶಲಗಳ ತರಬೇತಿಯನ್ನು  ನೀಡುವುದನ್ನು ಒಳಗೊಂಡಿದೆ.
  • ಚಿಕಿತ್ಸೆಯು ಮಗುವಿನಲ್ಲಿ  ಅವನ/ಅವಳ  ದೈಹಿಕ ಚಟುವಟಿಕೆಗಳ ಮಟ್ಟಗಳನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ  ಮತ್ತು ಮಗುವು ಹಿತಾನುಭವ ಹೊಂದುವಲ್ಲಿ ಸಹಾಯ ಮಾಡುತ್ತದೆ.
  • ಮಗುವಿನ ಮನಸ್ಸಿನಲ್ಲಿ ಸವಾಲಿನ  ಯೋಚನೆಗಳಿಗೆ  ಬದಲಾಗಿ ಹೆಚ್ಚು ಹೆಚ್ಚು ಬದಲಾವಣೆಯ ಯೋಚನೆಗಳನ್ನು, ತುಂಬುವುದು (ಉದಾ: ತಮ್ಮ ಬಗ್ಗೆ ಹೊಂದಿರುವ ನಕಾರಾತ್ಮಕ ಭಾವನೆಗಳಿಗೆ ಬದಲಾಗಿ, ಹೆಚ್ಚು ಹೆಚ್ಚು ಸಕಾರಾತ್ಮಕ ಭಾವನೆಗಳನ್ನು ತುಂಬುವುದು).
  • ಖನ್ನತಗೆ ಒಳಗಾದ ಮಕ್ಕಳಿಗೆ ತಮ್ಮ ಸಮಾನ ವಯಸ್ಕರೊಡನೆ ಉತ್ತಮ ಸಂಬಂಧ ಇಲ್ಲದಿರುವ ಕಾರಣದಿಂದ, ಅವರಿಗೆ ಸಾಮಾಜಿಕ ಕೌಶಲಗಳು  ಮತ್ತು ವಾಸ್ತವ ಸ್ಥಿತಿಯ ಅರಿವಿನ ತರಬೇತಿಯಿಂದ ಅನುಕೂಲವಾಗಬಹುದು.
  • ಖನ್ನತೆಗೆ ಒಳಗಾಗಿರುವ ಮಕ್ಕಳ ವಿಷಯದಲ್ಲಿ ಮೊದಲ ಹಂತದಲ್ಲೇ ಹಸ್ತಕ್ಷೇಪ ಮಾಡುವುದು ಅತೀ ಮುಖ್ಯವಾಗುತ್ತದೆ. ಯಾಕೆಂದರೆ, ಖನ್ನತೆಗೆ ಮೊದಲ ಹಂತದಲ್ಲೇ ಚಿಕಿತ್ಸೆ ನೀಡದೇ ಹೋದರೆ, ಮುಂದೆ ಅದು ಗಂಭೀರವಾದ ತೊಂದರೆಗಳಿಗೆ ಕಾರಣವಾಗಬಹುದು.(ಉದಾ:ಮಾದಕ ವಸ್ತುಗಳ ವ್ಯಸನ, ಆಹಾರ ಸೇವನೆಯಲ್ಲಿ ತೊಂದರೆಗಳು, ಶಾಲೆಯನ್ನು ಬಿಡುವುದು ಮತ್ತು ಆತ್ಮಹತ್ಯೆ... ಇತ್ಯಾದಿ).
  • ಇಷ್ಟೆಲ್ಲಾ  ತರಬೇತಿಯ ಅನಂತರವೂ, ಮಗುವಿಗೆ ಹೆಚ್ಚುವರಿ ಹಸ್ತಕ್ಷೇಪದ ಅಗತ್ಯಬಿದ್ದರೆ, ಮಗುವಿನ ಹೆತ್ತವರು  ಮಕ್ಕಳ ತಜ್ಞರು ಅಥವಾ ಮಕ್ಕಳ ಮಾನಸಿಕ ತಜ್ಞರ ಬಳಿ ಚರ್ಚೆ ಮಾಡಿ, ಔಷಧಿ ಚಿಕಿತ್ಸೆಯನ್ನು ಆಯ್ಕೆ ಮಾಡಿಕೊಳ್ಳಬಹುದು.
  • ಒಂದು ವೇಳೆ ಮಗುವು ಆತ್ಮಹತ್ಯಾಕಾರಕ ಯೋಚನೆಗಳನ್ನು  ಹೊಂದಿದ್ದರೆ, ಮಗುವಿನ  ಸುರಕ್ಷತೆಯ ದೃಷ್ಟಿಯಿಂದ ತೀವ್ರ ಶುಶ್ರೂಷೆಯ ಅಗತ್ಯವಿದೆ.

ಮಗುವನ್ನು ಖನ್ನತೆಯಿಂದ ಹೊರತರು ವುದು ಅಷ್ಟು ಸುಲಭದ ಕೆಲಸವಲ್ಲ. ನಿಮ್ಮ ಮಗುವಿನೊಂದಿಗೆ  ಗುಣಾತ್ಮಕವಾದ ಸಂಬಂಧ ವನ್ನು ಪಾಲಿಸಕೊಂಡು ಬರುವುದು ಈ ನಿಟ್ಟಿನಲ್ಲಿ ಅತೀ ಮುಖ್ಯವಾಗುತ್ತದೆ ಮತ್ತು ಇದು ನಿಮ್ಮ ಮಗು ಬೇಗ ಗುಣ ಹೊಂದುವುದರಲ್ಲಿ ಮುಖ್ಯಪಾತ್ರವನ್ನು ವಹಿಸುತ್ತದೆ. ಹೆತ್ತವರ ವೇದನೆಯು  ಮಗುವಿನ ವೇದನೆಗೆ ಕಾರಣ ವಾಗುವುದರಿಂದ, ಪರಿಣತರ ಬಳಿ ನಿಮಗೂ ಸಹಾಯವನ್ನು ಯಾಚಿಸಿಕೊಳ್ಳಿ, ಯಾವ ರೀತಿಯಲ್ಲಿ ವೇದನೆಯನ್ನು ಕಡಿಮೆ ಮಾಡಿ ಕೊಳ್ಳಬಹುದು ಎಂಬುದರ ಬಗ್ಗೆ ಚರ್ಚೆ ಮಾಡಿ. ಖನ್ನತೆಗೆ ಒಳಗಾಗಿರುವ ಮಕ್ಕಳು ಆತ್ಮಹತ್ಯೆ  ಮಾಡಿಕೊಳ್ಳುವ ಅಪಾಯವು ಹೆಚ್ಚಾಗಿರುತ್ತದೆ ಎಂಬುದನ್ನು  ಮನಸ್ಸಿನಲ್ಲಿ ಇಟ್ಟು ಕೊಳ್ಳಬೇಕು. ನಿಮ್ಮ ಮಗು ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂಬ ಭಯ ನಿಮಗಿದ್ದರೆ, ಕೂಡಲೇ ತಜ್ಞರ ಸಲಹೆ ಪಡೆಯುವುದು ಅತಿ ಮುಖ್ಯವಾಗುತ್ತದೆ.

ಈ ಲೇಖನದಲ್ಲಿರುವ ವಿಚಾರಗಳ ·ಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಡಾ| ಪಿ.ಎಸ್‌.ವಿ.ಎನ್‌. ಶರ್ಮಾ ಮುಖ್ಯಸ್ಥರು, ಮನೋರೋಗ ಚಿಕಿತ್ಸಾ  ವಿಭಾಗ, ಕೆ.ಎಂ.ಸಿ., ಮಣಿಪಾಲ

ಮೂಲ :ಅರೋಗ್ಯ ವಾಣಿ

ಬಾಲ್ಯದಲ್ಲಿರುವ ಕೆಲವು ಸಾಮಾನ್ಯ ತೊಂದರೆಗಳು

ಡಾ! ಲತಾ ಕೆ. ಎಸ್‌. ಅಸೋಸಿಯೇಟ್‌ ಪ್ರೊಫೆಸರ್‌, ಮನೋರೋಗ ಚಿಕಿತ್ಸಾ ವಿಭಾಗ, ಕೆ.ಎಂ.ಸಿ ಆಸ್ಪತ್ರೆ, ಮಣಿಪಾಲ.

  • ಹಾಸಿಗೆಯಲ್ಲಿ ಮೂತ್ರ ವಿಸರ್ಜಿಸುವುದು  (ಎನ್ಯೂರೆಸಿಸ್‌)
  • ಹೆಚ್ಚಿನ ಮಕ್ಕಳಲ್ಲಿ ನಾಲ್ಕನೇ ವಯಸ್ಸಿಗೆ ಮಲ ಮತ್ತು ಮೂತ್ರ ವಿಸರ್ಜನೆ ನಿಯಂತ್ರಣಕ್ಕೆ ಒಳಗಾಗುತ್ತಾರೆ. 
    ಹೆಚ್ಚಿನ ಮಕ್ಕಳು 3ನೆಯ ವಯಸ್ಸಿಗೆ ಹಾಸುಗೆ ಒದ್ದೆ ಮಾಡುವುದನ್ನು ಬಿಟ್ಟು  ಬಿಡಬಹುದು. ಮಕ್ಕಳು ನಾಲ್ಕನೆಯ ವಯಸ್ಸಿನ ನಂತರವೂ ಹಾಸಿಗೆ ಒದ್ದೆ ಮಾಡಿಕೊಳ್ಳುವ ಅಭ್ಯಾಸವನ್ನು ಮುಂದುವರಿ ಸಿದರೆ, ಆಗ ಹೆತ್ತವರು ಕಳವಳಗೊಳ್ಳುತ್ತಾರೆ.  ಈ ತೊಂದರೆಗೆ ಎನ್ಯೂರೆಸಿಸ್‌ ಅಥವಾ ಅನೈಚ್ಛಿಕ ಮೂತ್ರ ವಿಸರ್ಜನೆ ಎನ್ನುತ್ತಾರೆ.
    ಎನ್ಯೂರೆಸಿಸ್‌ ಎಂಬುದು ಒಂದು ಕಾಯಿಲೆಯಲ್ಲ. ಆದರೆ, ಒಂದು ಸಮಾನ್ಯ ವಾದ ತೊಂದರೆ. ಮಗುವಿಗೆ ಆರೋಗ್ಯ ಸರಿ ಇಲ್ಲದೇ ಇರುವ ಸಮಯದಲ್ಲಿ, ಮಗುವು ಹಾಸಿಗೆ ಒದ್ದೆ ಮಾಡಿಕೊಳ್ಳಬಹುದು.
    ಮಗುವು ಹಾಸಿಗೆ ಒದ್ದೆ ಮಾಡಿಕೊಳ್ಳುವುದರ ಬಗ್ಗೆ ಹೆತ್ತವರು ತಿಳಿದುಕೊಳ್ಳಬೇಕಾದ ಕೆಲವೊಂದು ಸಂಗತಿಗಳೆಂದರೆ:
  • ಸರಿ ಸುಮಾರು 15% ಮಕ್ಕಳು ಮೂರು ವರ್ಷ ಪ್ರಾಯದ ಅನಂತರವೂ ಹಾಸಿಗೆಯನ್ನು ಒದ್ದೆ ಮಾಡಿಕೊಳ್ಳುವ ಅಭ್ಯಾಸವನ್ನು ಹೊಂದಿರುತ್ತಾರೆ.
  • ಹೆಣ್ಣು  ಮಕ್ಕಳಿಗಿಂತ ಹೆಚ್ಚಾಗಿ, ಗಂಡು ಮಕ್ಕಳು ಹಾಸಿಗೆ ಒದ್ದೆ ಮಾಡುವ ಅಭ್ಯಾಸವನ್ನು ಹೊಂದಿರುತ್ತಾರೆ.
  • ಹಾಸಿಗೆ ಒದ್ದೆ ಮಾಡಿಕೊಳ್ಳುವ ಅಭ್ಯಾಸವು ವಂಶಪಾರಂಪರ್ಯವಾಗಿ ಬರಬಹುದು.
  • ಹಾಸಿಗೆ ಒದ್ದೆ ಮಾಡಿಕೊಳ್ಳುವ ಅಭ್ಯಾಸವು ಸಾಮಾನ್ಯವಾಗಿ, ಪ್ರಾಯಕ್ಕೆ ಬಂದ ಅನಂತರ ತನ್ನಷ್ಟಕ್ಕೆ ತಾನೇ ನಿಲ್ಲುತ್ತದೆ.
  • ಹಾಸಿಗೆ ಒದ್ದೆ ಮಾಡಿಕೊಳ್ಳುವವರಲ್ಲಿ ಹೆಚ್ಚಿನವರಿಗೆ ಭಾವನಾತ್ಮಕ ತೊಂದರೆಗಳು ಇರುವುದಿಲ್ಲ.
  • 3ಅಥವಾ 4 ವರ್ಷದ ಅನಂತರವೂ ಸತತ ವಾಗಿ ಹಾಸಿಗೆ ಒದ್ದೆ ಮಾಡಿಕೊಳ್ಳುವ ಅಭ್ಯಾಸ ವಿದ್ದರೆ, ಅದು ಕೆಲವೊಮ್ಮೆ ಕಿಡ್ನಿ ಅಥವಾ ಮೂತ್ರ ಕೋಶದ ತೊಂದರೆಗಳ ಕಾರಣದಿಂದಾಗಿರ ಬಹುದು. ಕೆಲವೊಮ್ಮೆ ಈ ತೊಂದರೆಯು ನಿದ್ರಾ ತೊಂದರೆಯಿಂದಿರಬಹುದು. ಹೆಚ್ಚಿನ ಸಂದರ್ಭಗಳಲ್ಲಿ  ಮಕ್ಕಳ ಮೂತ್ರಕೋಶದ ನಿಯಂತ್ರಣ ಶಕ್ತಿಯು  ಸಾಮಾನ್ಯಕ್ಕಿಂತ ಕಡಿಮೆಯಾಗಿರುವುದರಿಂದ ಈ ತೊಂದರೆಯು ಕಂಡು ಬರುತ್ತದೆ. ಮಗುವಿನ ಚಿಂತೆ ಅಥವಾ ಭಾವನೆಗಳ  ಫಲಿತಾಂಶವಾಗಿ ಕೂಡ ಹಾಸಿಗೆ ಒದ್ದೆ ಮಾಡುವ ತೊಂದರೆಗೆ ಕಾರಣವಾಗಬಹುದು ಇದಕ್ಕೆ ಚಿಕಿತ್ಸೆ ಅಗತ್ಯ.
  • ಹಾಸಿಗೆ ಒದ್ದೆ ಮಾಡಲು ವಿವಿಧ ರೀತಿಯ ಭಾವನಾತ್ಮಕ ಕಾರಣಗಳಿರಬಹುದು. ಉದಾಹರಣೆಗೆ: ತುಂಬಾ ತಿಂಗಳುಗಳ ಅನಂತರ ಅಥವಾ ತುಂಬಾ ವರ್ಷಗಳ ನಂತರ ಮಗು ಹಾಸಿಗೆ ಒದ್ದೆ ಮಾಡಲು ಪ್ರಾರಂಭಿಸಿದರೆ, ಆಗ ಮಗುವು ಹೊಸ ಹೆದರಿಕೆ ಅಥವಾ ಅಸುರಕ್ಷತೆ ಗಳಿಂದ ಬಳಲುತ್ತಿರಬಹುದು. ಈ ಕೆಳಗಿನ ಕೆಲ ವೊಂದು ಕಾರಣಗಳು ಮಗು ಅಸುರಕ್ಷತೆ ಯಿಂದ ಬಳಲಲು ಕಾರಣವಾಗಬಹುದು:
    ಹೊಸ ಮನೆಗೆ ವಾಸ್ತವ್ಯವನ್ನು ಬದಲಾಯಿಸುವುದರಿಂದ.
  • ಹೆತ್ತವರ ವಿಚ್ಛೇದನ.
  • ಕುಟುಂಬ ಸದಸ್ಯರನ್ನು ಅಥವಾ ಪ್ರೀತಿಪಾತ್ರರನ್ನು ಕಳೆದುಕೊಳ್ಳುವುದು.
  • ಮನೆಗೆ ನವಜಾತ ಶಿಶು ಅಥವಾ ಹೊಸ ಮಗುವಿನ ಆಗಮನ.
  • ಮಗು ಆರಂಭದಲ್ಲಿ  ಶೌಚಾಲಯ ತರಬೇತಿಯ ವೇಳೆ  ಹೆಚ್ಚು  ಮಾನಸಿಕ ಒತ್ತಡ ಅನುಭವಿಸಿದ್ದರೆ, ತುಂಬಾ ಸಮಯದ ಅನಂತರ ಅದು ಹಾಸಿಗೆ ಒದ್ದೆ ಮಾಡುವ ತೊಂದರೆಗೆ ಕಾರಣವಾಗಬಹುದು.
  • ಮಕ್ಕಳು ಅಪರೂಪಕ್ಕೊಮ್ಮೆ ಉದ್ದೇಶ ಪೂರ್ವಕವಾಗಿ ಹಾಸಿಗೆ ಒದ್ದೆ  ಮಾಡುತ್ತಾರೆ ಮತ್ತು ಆ ವಿಷಯಕ್ಕೆ ಮುಜುಗರ ಪಟ್ಟುಕೊಳ್ಳುತ್ತಾರೆ ಎಂಬುದನ್ನು ಹೆತ್ತವರು ನೆನಪಿನಲ್ಲಿ ಇಟ್ಟುಕೊಳ್ಳ ಬೇಕು. ಮಕ್ಕಳಿಗೆ ಮುಜುಗರ ಅಥವಾ ಹಠ ಮಾರಿತನ ಉಂಟಾಗದಂತೆ ಮಾಡಲು "ಚಿಂತೆ ಬೇಡ, ಹಾಸುಗೆ ಒದ್ದೆಮಾಡುವುದು ನಿಧಾನಕ್ಕೆ ನಿಯಂತ್ರಣಕ್ಕೆ ಬರುತ್ತೆ' ಎಂದು ಹೇಳಿ ಮಕ್ಕಳಲ್ಲಿ ಆತ್ಮವಿತ್ವಾಸ ತುಂಬಬೇಕು.ಮಕ್ಕಳು ಹಾಸಿಗೆ ಒದ್ದೆ ಮಾಡದಂತೆ ಮಾಡಲು ಹೆತ್ತವರು ಈ ರೀತಿಯಲ್ಲಿ 
    ಸಹಾಯ ಮಾಡಬಹುದು:-*ಮಕ್ಕಳು ಹಾಸಿಗೆಗೆ ಹೋಗುವ ಮೊದಲು  ದ್ರವಾಹಾರವನ್ನು ಕಡಿಮೆ ನೀಡುವುದು.
  • ಮಕ್ಕಳು ಹಾಸಿಗೆಗೆ ಹೋಗುವ ಮೊದಲು ಶೌಚಾಲಯಕ್ಕೆ ಕಡ್ಡಾಯವಾಗಿ ಹೋಗುವಂತೆ ಪ್ರಚೋದಿಸುವುದು.
  • ಮಕ್ಕಳು ಹಾಸಿಗೆ ಒದ್ದೆ ಮಾಡದೇ ಇರುವ ದಿನ, ಬೆಳಗ್ಗೆ ಎದ್ದ ಕೂಡಲೇ ಮಗುವನ್ನು ಹೊಗಳುವುದು.
  • ಹಾಸಿಗೆ ಒದ್ದೆ ಮಾಡಿದ ಕಾರಣಕ್ಕಾಗಿ ಮಕ್ಕಳಿಗೆ ಶಿಕ್ಷೆ ಕೊಡದಿರುವುದು.
  • ಮಧ್ಯರಾತ್ರಿಯಲ್ಲಿ ಮಕ್ಕಳನ್ನು ಎಬ್ಬಿಸಿ ಮೂತ್ರ ಮಾಡಿಸುವುದು.
  • ಚಿಕಿತ್ಸೆಗಳುಮಕ್ಕಳು ಹಾಸಿಗೆ ಒದ್ದೆ ಮಾಡಿಕೊಳ್ಳುವ ತೊಂದರೆಗೆ ಚಿಕಿತ್ಸೆಯು ವರ್ತನಾ ನಿಯಂತ್ರಣ ಪರಿಕರಗಳನ್ನು  (ಪ್ಯಾಡ್‌/ಬಝರ್‌) ಮತ್ತು/ಅಥವಾ ಔಷಧಿಗಳನ್ನು  ಒಳಗೊಂಡಿರುತ್ತದೆ. ಉದಾಹರಣೆಗೆ, ಮೂತ್ರ ಬಾರದ ಹಾಗೆ ಹಾರ್ಮೋನುಗಳನ್ನು ಮೂಗಿನ ಮೂಲಕ ಸಿಂಪಡಿಸುವುದು ಮತ್ತು ಇಮಿಪ್ರಮೈನ್‌ ಎಂಬ ಖನ್ನತೆ ನಿವಾರಕ ಔಷಧಿಯನ್ನು ನೀಡುವುದು. ಕೆಲವೊಂದು ವಿರಳ ಸಂದರ್ಭಗಳಲ್ಲಿ ಹಾಸಿಗೆಯಲ್ಲಿ ಮೂತ್ರ ವಿಸರ್ಜಿಸುವ ಅಭ್ಯಾಸವನ್ನು ಹೆತ್ತವರಿಂದ, ವೈದ್ಯರಿಂದ ಅಥವಾ ಮಕ್ಕಳ ತಜ್ಞರಿಂದ ಪರಿಹರಿಸಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಮಕ್ಕಳು ತಮ್ಮ ಭಾವನಾತ್ಮಕವಾದ ತೊಂದರೆಗಳ ಕಾರಣ ದಿಂದಾಗಿ ಅನುಭವಿಸುತ್ತಿರುವ ಸತತವಾದ ಕಿರಿಕಿರಿಯನ್ನು  ಅಥವಾ ನಿರಂತರ ಬೇಸರ ಅಥವಾ ಆಹಾರ ನಿದ್ರಾ ಅಭ್ಯಾಸಗಳ‌ಲ್ಲಿ  ಬದಲಾವಣೆಯ ಮೂಲಕ ವ್ಯಕ್ತಪಡಿಸಬಹುದು. ಈ ಸಂದರ್ಭದಲ್ಲಿ, ಹೆತ್ತವರು ಮಗು ಮತ್ತು ಹದಿಹರೆಯದವರ ಮನಃಶಾಸ್ತ್ರಜ್ಞರನ್ನು ಕಂಡು  ಮಾತನಾಡುವುದರಿಂದ, ಅವರು ಮಗುವಿನ ದೈಹಿಕ ಮತ್ತು ಭಾವನಾತ್ಮಕ ತೊಂದರೆಗಳನ್ನು ಮಾಪನ ಮಾಡುವ ಮೂಲಕ, ಹಾಸಿಗೆಯಲ್ಲಿ ಮೂತ್ರ ವಿಸರ್ಜಿಸುವ ತೊಂದರೆಗೆ ಕಾರಣ ಹುಡುಕಬಹುದು ಮತ್ತು  ಮಗು ಮತ್ತು  ಹೆತ್ತವರು ಈ ತೊಂದರೆಯಿಂದ ವಿಮುಕ್ತಿಗೊಳ್ಳುವಂತೆ ಮಾಡಲು ಸಹಾಯ ಮಾಡಬಹುದು.
    ಮಲ ವಿಸರ್ಜನೆಯಲ್ಲಿ  ತೊಂದರೆ (ಎಸ್ಕೋಪ್ರಸಿಸ್‌)ಮಲ ವಿಸರ್ಜನೆಯನ್ನು ತಡೆದು ಕೊಳ್ಳುವುದರಿಂದ, ಮಗುವಿಗೆ ಮಲ ವಿಸರ್ಜನೆಯಲ್ಲಿ ತೊಂದರೆಗಳು ಕಾಣಿಸಿ ಕೊಳ್ಳಬಹುದು. ಇದು ಮಗು, ಹೆತ್ತ ವರು, ಶಿಕ್ಷಕರು ಮತ್ತು ಮಗುವಿನ ಜೀವನದಲ್ಲಿ ಮುಖ್ಯ ಪಾತ್ರ ವಹಿಸುವ ಎಲ್ಲರಲ್ಲೂ  ಕೂಡ ಕೋಪ ಮತ್ತು ನಿರಾಸೆಗಳಿಗೆ ಕಾರಣವಾಗಬಹುದು.  ಇದರೊಂದಿಗೆ ಮಗುವಿನ ಸಾಮಾಜಿಕ ಜೀವನ ಕೂಡ ಸಮಸ್ಯೆಗಳಿಗೀಡಾಗ ಬಹುದು. ಹೇಗೆಂದರೆ, ಮಗು ಈ ತೊಂದರೆಯಿಂದಾಗಿ ತನ್ನ ಗೆಳೆಯರ ಬಳಗದಲ್ಲಿ ತಮಾಷೆಗೆ ಒಳಗಾಗಬಹುದು ಅಥವಾ ಹಿರಿಯರಿಂದ ದೂರವಾಗ ಬಹುದು. ಈ ಪರಿಸ್ಥಿತಿಯು ಮಗುವಿಗೆ ತನ್ನ ಬಗ್ಗೆಯೇ ಅತೀ ಕೆಟ್ಟ ಅಭಿಪ್ರಾಯ ಬರಲು ಕಾರಣವಾಗಬಹುದು.
    ಮಲ ವಿಸರ್ಜನೆಯ ತೊಂದರೆಗೆ ಇರುವ ಕೆಲವೊಂದು ಕಾರಣಗಳು:*ಶೌಚಾಲಯದ ತರಬೇತಿಯ ವೇಳೆ ಮಗುವಿಗೆ ಕೆಲವೊಂದು ರೀತಿಯ ತೊಂದರೆಗಳು.
  • ದೈಹಿಕ  ಅಸಾಮರ್ಥ್ಯ, ಇದರಿಂದ ಮಗುವಿಗೆ ತನ್ನನ್ನು ಶುಚಿಯಾಗಿರಿಸಿ ಕೊಳ್ಳಲು ತೊಂದರೆಯಾಗಬಹುದು.
  • ತುಂಬಾ ಸಮಯದಿಂದ ಇರುವ ಮಲಬದ್ಧತೆ ಅಥವಾ ಇನ್ನಿತರ ರೋಗಸ್ಥಿತಿಗಳು.
  • ಕುಟುಂಬದ ಅಥವಾ ಭಾವನಾತ್ಮಕ ತೊಂದರೆಗಳು.
  • ದೈಹಿಕ ಅನಾರೋಗ್ಯ ಅಥವಾ ಅಸಾಮರ್ಥ್ಯದಿಂದ ಆಗಿರದ ಮಲ ವಿಸರ್ಜನೆಯನ್ನು ಎನ್ಕೋಪ್ರಸಿಸ್‌ ಎಂದು ಕರೆಯುತ್ತಾರೆ. ಎನ್ಕೋಪ್ರಸಿಸ್‌ ತೊಂದರೆ ಇರುವ ಮಕ್ಕಳಲ್ಲಿ ಏಕಾಗ್ರತೆಯ ಕೊರತೆ, ನಿರಾಶೆಯನ್ನು ತಡೆದುಕೊಳ್ಳುವ ಶಕ್ತಿ ಕಡಿಮೆಯಾಗುವುದು, ಮಿತಿ ಮೀರಿದ ಚಟುವಟಿಕೆಗಳು ಮತ್ತು ಕಡಿಮೆ ಸಹಕಾರ ಮುಂತಾದ  ತೊಂದರೆಗಳು ಕೂಡ ಕಾಣ ಸಿಗುತ್ತವೆ. ಎನ್ಕೋಪ್ರಸಿಸ್‌ ತೊಂದರೆಯು ಮಗುವಿನ ಜೀವನದಲ್ಲಿ ಒತ್ತಡಗಳಿಂದ ಶುರುವಾಗುತ್ತದೆ. ಅದಕ್ಕೆ ಕಾರಣಗಳೆಂದರೆ, ಸ್ವಂತ ತಮ್ಮ/ತಂಗಿ ಹುಟ್ಟುವುದು, ಹೆತ್ತವರ ಬೇರ್ಪಡುವಿಕೆ ಅಥವಾ ವಿಚ್ಛೇದನ, ಕುಟುಂಬದಲ್ಲಿ ತೊಂದರೆ ಅಥವಾ ವಾಸ್ತವ್ಯವನ್ನು ಹೊಸ ಮನೆಗೆ ಅಥವಾ ಅಧ್ಯಯನವನ್ನು ಹೊಸ ಶಾಲೆಗೆ ಬದಲಾಯಿಸುವುದು. ಎನ್ಕೋಪ್ರಸಿಸ್‌ ತೊಂದರೆಯು ಹೆಣ್ಣು  ಮಕ್ಕಳಿಗಿಂತ ಗಂಡು ಮಕ್ಕಳಲ್ಲಿ ಸಾಮಾನ್ಯವಾಗಿರುತ್ತದೆ.
    ಹೆಚ್ಚಿನ ಮಕ್ಕಳಲ್ಲಿ ಮಲ ವಿಸರ್ಜ ನೆಯ ತೊಂದರೆಯು ದೈಹಿಕ ತೊಂದರೆ ಯಿಂದ ಆಗಿಲ್ಲವಾದರೂ ಕೂಡ, ಕುಟುಂಬ ವೈದ್ಯರು ಅಥವಾ ಮಕ್ಕಳ ತಜ್ಞರು ಮಕ್ಕ ಳನ್ನು ಸಂಪೂರ್ಣವಾಗಿ ಪರೀಕ್ಷೆ ಮಾಡು ವುದು ಅತೀ ಮುಖ್ಯವಾಗಿರುತ್ತದೆ. ಯಾವುದೇ ದೈಹಿಕ ತೊಂದರೆ ಗಮನಕ್ಕೆ ಬಾರದೇ ಇದ್ದರೂ, ತೊಂದರೆಯು ಸತತ ವಾಗಿ ಮುಂದುವರಿದರೆ, ಆಗ ಮಕ್ಕಳು ಮತ್ತು ಹದಿ ಹರೆಯದವರ ಮನಃಶಾಸ್ತ್ರ ಜ್ಞರ  ಮಾಪನವು ಈ ಹಂತದಲ್ಲಿ ಅತೀ ಮುಖ್ಯವಾಗಿರುತ್ತದೆ. ಮನಃಶಾಸ್ತ್ರ ಜ್ಞರು ದೈಹಿಕ ಮಾಪನವನ್ನು ಮಾಡಿ, ನಂತರ ಯಾವುದಾದರೂ ಭಾವನಾತ್ಮಕ ತೊಂದರೆಯು ಎನ್ಕೋಪ್ರಸಿಸ್‌ಗೆ ಕಾರಣ ವಾಗಿರಬಹುದೇ ಎಂಬುದನ್ನು ನಿರ್ಧರಿಸುತ್ತಾರೆ.
    ಚಿಕಿತ್ಸೆಗಳುಎನ್ಕೋಪ್ರಸಿಸ್‌ ತೊಂದರೆಗೆ ಮನಃಶಾಸ್ತ್ರೀಯ, ಶೈಕ್ಷಣಿಕ, ವರ್ತನಾ ವಿಧಾನಗಳ ಮೂಲಕ ಚಿಕಿತ್ಸೆ ನೀಡಬಹುದು. ಎನ್ಕೋಪ್ರಸಿಸ್‌ ತೊಂದರೆ ಇರುವ ಕೆಲವು ಮಕ್ಕಳಿಗೆ ಸಹಾಯ ಮಾಡಬಹುದು. ಆದರೆ ಚಿಕಿತ್ಸೆಯ ಪ್ರಗತಿ ನಿಧಾನವಾಗಿ ರುವುದರಿಂದ, ಚಿಕಿತ್ಸೆಯನ್ನು ದೀರ್ಘ‌ಕಾಲ ಮುಂದುವರಿಸುವ ಅಗತ್ಯವಿದೆ. ಮಲವಿಸರ್ಜನೆಯ ತೊಂದರೆಗೆ ಮೊದಲ ಹಂತದಲ್ಲೇ ಚಿಕಿತ್ಸೆ ನೀಡುವುದರಿಂದ, ಮಗುವಿನ ಸಾಮಾಜಿಕ ಮತ್ತು ಭಾವನಾ ತ್ಮಕ ವೇದನೆಗಳನ್ನು ಮತ್ತು ಮಗು ಮತ್ತು ಕುಟುಂಬ ಸದಸ್ಯರ ನೋವನ್ನು ಸ್ವಲ್ಪ  ಮಟ್ಟಿಗೆ  ಕಡಿಮೆ ಮಾಡಬಹುದು ಅಥವಾ ತಡೆಯಬಹುದು.
    ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಡಾ! ಪಿ.ಎಸ್‌.ವಿ.ಎನ್‌. ಶರ್ಮಾ, ಪ್ರೊಫೆಸರ್‌ ಮತ್ತು  ಮುಖ್ಯಸ್ಥರು, ಮನೋರೋಗ ಚಿಕಿತ್ಸಾ  ವಿಭಾಗ, ಕೆ.ಎಂ.ಸಿ., ಮಣಿಪಾಲ.

ಮೂಲ : ಅರೋಗ್ಯ ವಾಣಿ

ಮಕ್ಕಳ ಬಾಯಿಯ ಆರೋಗ್ಯ ರಕ್ಷಣೆ

ಡಾ| ಮಹಾಲಿಂಗ ಭಟ್‌, ಪ್ರೊಫೆಸರ್‌ ಮತ್ತು ಮುಖ್ಯಸ್ಥರು, ಪೆರಿಯೊಡಾಂಟಿಕ್ಸ್‌ ವಿಭಾಗ, ಮಣಿಪಾಲ ದಂತ ವೈದ್ಯಕೀಯ ವಿದ್ಯಾಲಯ

ಪೆರಿಯೋಡಾಂಟಲ್‌ ಕಾಯಿಲೆ ಎಂಬುದು ಕೇವಲ ಹಿರಿಯರನ್ನು ಕಾಡುವ ಕಾಯಿಲೆ ಎಂಬುದು ಕೆಲವರ ಅನಿಸಿಕೆಯಾಗಿದೆ. ಆದರೆ, ಸಾಮಾನ್ಯವಾಗಿ, ಎಲ್ಲ ಮಕ್ಕಳು ಹಾಗೂ ಹದಿಹರೆಯದವರನ್ನೂ ಒಸಡಿನ ಉರಿಯೂತ ಅಂದರೆ ಪೆರಿಯೋಡಾಂಟಲ್‌ ಕಾಯಿಲೆಯ ಮೊದಲ ಹಂತವು ಬಾ—ಸುತ್ತದೆ ಎಂದು ಅಧ್ಯಯನಗಳು ಹೇಳುತ್ತಿವೆ. ಹಿರಿಯರಿಗೆ ಹೋಲಿಸಿದರೆ, ಮಕ್ಕಳಲ್ಲಿ ಪೆರಿಯೋಡಾಂಟಲ್‌ ಕಾಯಿಲೆಯು ತೀರಾ ಮುಂದುವರಿಯುವುದು ಬಹಳ ಅಪರೂಪ, ಆದರೆ ಇಲ್ಲವೇ ಇಲ್ಲ ಎಂದೇನೂ ಇಲ್ಲ.

ಮಕ್ಕಳ ಪೆರಿಯೋಡಾಂಟಲ್‌ ಕಾಯಿಲೆ ವಿಧಗಳು

ದೀರ್ಘ‌ಕಾಲಿಕ ಒಸಡಿನ ಉರಿಯೂತವು ಮಕ್ಕಳಲ್ಲಿ ಬಹಳ ಸಾಮಾನ್ಯವಾಗಿ ಕಂಡುಬರುವ ಕಾಯಿಲೆಯಾಗಿದೆ. ಇದರಲ್ಲಿ ಒಸಡಿನ ಅಂಗಾಂಶಗಳು ಬಾತುಕೊಂಡು, ಕೆಂಪಗಾಗಿ, ಸುಲಭವಾಗಿ ರಕ್ತಸ್ರಾವವಾಗುತ್ತದೆ. ನಿಯಮಿತ ಕ್ರಮದಲ್ಲಿ ಬ್ರಶಿಂಗ್‌, ಫ್ಲಾಸಿಂಗ್‌ ಮಾಡಿಸಿಕೊಂಡು, ದಂತವೈದ್ಯರಿಂದ ಆರೈಕೆ ಮಾಡಿಸಿಕೊಳ್ಳುವ ಮೂಲಕ ಒಸಡಿನ ಉರಿಯೂತವನ್ನು ತಡೆಯಲು ಹಾಗೂ ಅದಕ್ಕೆ ಚಿಕಿತ್ಸೆ ನೀಡಲು ಸಾಧ್ಯವಿದೆ. ಒಂದು ವೇಳೆ ಚಿಕಿತ್ಸೆ ನೀಡದೆ ಹಾಗೆಯೇ ಬಿಟ್ಟರೆ, ಇದು ತೀವ್ರ ಸ್ವರೂಪದ ಪೆರಿಯೋಡಾಂಟಲ್‌ ಕಾಯಿಲೆಯಾಗಿ ಬೆಳೆಯಬಹುದು.

ಇತರ ಎಲ್ಲ ರೀತಿಯಲ್ಲೂ ಆರೋಗ್ಯವಂತ ರಾಗಿರುವ ಯುವಜನರನ್ನು ಕೂಡ ತೀಕ್ಷ್ಣ ಪೆರಿಯೋಡಾಂಟಲ್‌ ಕಾಯಿಲೆಯು ಬಾ—ಸಬಹುದು. ಹದಿಹರೆಯದವರನ್ನು ಹಾಗೂ ಕೌಮಾರ್ಯದ ಆಸುಪಾಸಿನವರನ್ನು ಈ ವಿಧದ ಪೆರಿಯೋಡಾಂಟಲ್‌ ಕಾಯಿಲೆಯು ಬಾ—ಸಿ, ಅವರ ಹಾಲುಹಲ್ಲು ಹಾಗೂ ಬಾಚಿಹಲ್ಲುಗಳಿಗೆ ಹಾನಿ ಉಂಟುಮಾಡುತ್ತದೆ. ಮಾತ್ರವಲ್ಲ, ಹಲ್ಲಿನ ಬುಡದ ಮೂಳೆಯೂ ಸಹ ಹಾನಿಗೊಂಡು, ಹಲ್ಲಿನ ಬುಡದಲ್ಲಿ ಸಣ್ಣ ಪ್ರಮಾಣದ ಕೊಳೆ ಸಂಗ್ರಹವಾಗುತ್ತದೆ.

ಒಸಡಿನ ಉರಿಯೂತ ಹಾಗೂ ಬಾಯಿಯ ಎಲ್ಲÉ ಹಲ್ಲುಗಳಲ್ಲಿ ದಟ್ಟವಾಗಿ ಕೊಳೆ ಕಟ್ಟಿಕೊಳ್ಳು ವುದರಿಂದಾಗಿ, ಸಾಮಾನ್ಯ ರೂಪದ ತೀಕ್ಷ್ಣ ಪೆರಿಯೋಡಾಂಟಲ್‌ ಕಾಯಿಲೆಯು ಉಂಟಾ ಗುತ್ತದೆ. ಸಾಮಾನ್ಯವಾಗಿ  ಬಾಯಿಯಲ್ಲಿ ಎಲ್ಲೆಡೆ ಕಂಡುಬರುವ ಈ ವಿಧದ ಕಾಯಿಲೆಯು, ಹದಿಹರೆಯದವರನ್ನು ಹೆಚ್ಚು ಬಾ—ಸುತ್ತದೆ. ಕ್ರಮೇಣ ಇದು, ಇಡಿಯ ಹಲ್ಲನ್ನು ಆವರಿಸಿ, ಹಲ್ಲು ಕಿತ್ತುಬರಲು ಕಾರಣವಾಗುತ್ತದೆ.

ದೈಹಿಕ ಕಾಯಿಲೆಯೊಂದಿಗೆ ಬೆಸೆದುಕೊಂಡ ಪೆರಿಯೋಡಾಂಟಲ್‌ ಕಾಯಿಲೆಯು ಮಕ್ಕಳಲ್ಲಿ ಹಾಗೂ ಹಿರಿಯರಲ್ಲಿ ಕಂಡುಬರುತ್ತದೆ. ಮಕ್ಕಳಲ್ಲಿ ಪೆರಿಯೋಡಾಂಟಲ್‌ ಕಾಯಿಲೆಯು ಕಾಣಿಸಿಕೊಳ್ಳುವ ಸಾಧ್ಯತೆಗೆ ಬಹಳ ಹೆಚ್ಚು ಪೂರಕವಾಗಿರುವ ಅಂಶಗಳು ಅಂದರೆ,

  • ಟೈಪ್‌ 1 ಡಯಾಬೆಟೆಸ್‌.
  • ಡೌನ್ಸ್‌ ಸಿಂಡ್ರೋಮ್‌.

ಪೆರಿಯೋಡಾಂಟಲ್‌ ಕಾಯಿಲೆಯ ಲಕ್ಷಣಗಳು

ನಿಮ್ಮ ಮಕ್ಕಳಲ್ಲಿರಬಹುದಾದ ಪೆರಿಯೋಡಾಂಟಲ್‌ ಕಾಯಿಲೆಯ ಮುನ್ಸೂಚನೆಯ 4  ಲಕ್ಷಣಗಳು ಹೀಗಿವೆ.

ರಕ್ತಸ್ರಾವ: 
ಹಲ್ಲುಜ್ಜುವಾಗ, ಫ್ಲಾಸ್‌ ಮಾಡುವಾಗ ಹಾಗೂ ಇತರ ಸಂದರ್ಭಗಳಲ್ಲಿ ಒಸಡಿನಿಂದ ರಕ್ತಸ್ರಾವವಾಗುವುದು.
ಊತ
ಒಸಡುಗಳು ಊದಿಕೊಂಡು ದಟ್ಟ ಕೆಂಪಗಾಗುವುದು.
ಒಸಡುಗಳು ಹಿಂದಕ್ಕೆ ಸರಿಯುವುದು
ಒಸಡುಗಳು ಹಲ್ಲಿನ ಬುಡದಿಂದ ಹಿಂದಕ್ಕೆ ಅಥವಾ ಕೆಳಕ್ಕೆ ಜಾರಿಕೊಂಡು, ಕೆಲವು ಸಲ ಹಲ್ಲಿನ ಬೇರು ಸಹ ಹೊರಕ್ಕೆ ಚಾಚಿಕೊಳ್ಳುತ್ತದೆ.
ಬಾಯಿಯ ದುರ್ಗಂಧ
ಬ್ರಷಿಂಗ್‌ ಹಾಗೂ ಫ್ಲಾಸಿಂಗ್‌ ಮಾಡಿದ ನಂತರವೂ ಬಾಯಿಯಿಂದ ನಿರಂತರ ದುರ್ಗಂಧ ಹೊರಡುತ್ತಿರುತ್ತದೆ.
ಪೆರಿಯೋಡಾಂಟಲ್‌ ಕಾಯಿಲೆ ಹಾಗೂ ಕೌಟುಂಬಿಕ ಹಿನ್ನೆಲೆ
ಈ ಕಾಯಿಲೆಯು ಹೆತ್ತವರಿಂದ ಮಕ್ಕಳಿಗೆ ಹಾಗೂ ಪರಸ್ಪರ ದಂಪತಿಗಳ ನಡುವೆ ಹರಡುವ ಸಾಧ್ಯತೆ ಇದೆ. ಪೆರಿಯೋಡಾಂಟಲ್‌ ಕಾಯಿಲೆಯನ್ನು ಹರಡುವ ಬ್ಯಾಕ್ಟೀರಿಯಾವು ವ್ಯಕ್ತಿಯಿಂದ ವ್ಯಕ್ತಿಗೆ ಲಾಲಾರಸದ ಮೂಲಕ ಹರಡುತ್ತದೆ ಎಂಬುದು ಸಂಶೋಧಕರ ಅಭಿಪ್ರಾಯ. ಅಂದರೆ, ಪೆರಿಯೋಡಾಂಟಲ್‌ ಕಾಯಿಲೆ ಇರುವ ಒಂದು ಕುಟುಂಬದಲ್ಲಿ ಪರಸ್ಪರರ ಜೊಲ್ಲಿನ ಸಂಪರ್ಕದಿಂದಾಗಿ, ಕುಟುಂಬದ ಸದಸ್ಯರಿಗೆ ಅದು ಹರಡುವ ಅಪಾಯವಿದೆ.

ಪೆರಿಯೋಡಾಂಟಲ್‌ ಕಾಯಿಲೆಯು ತೀವ್ರಗೊಳ್ಳುವಲ್ಲಿ ಆನುವಂಶಿಕತೆಯೂ ಸಹ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ಕಾಯಿಲೆಯಿಂದ ತೀವ್ರ ರೂಪದಲ್ಲಿ ಬಳಲುತ್ತಿರುವವರಲ್ಲಿ, ಸುಮಾರು 30%ದಷ್ಟು ಜನರಲ್ಲಿ ವಂಶಪಾರಂಪರ್ಯದ ಹಿನ್ನೆಲೆ ಇರುವುದಾಗಿ ಸಂಶೋಧನೆಗಳು ಹೇಳುತ್ತವೆ. ಹಾಗಾಗಿ, ಕುಟುಂಬದ ಒಬ್ಬ ಸದಸ್ಯರಿಗೆ ಪೆರಿಯೋಡಾಂಟಲ್‌ ಕಾಯಿಲೆ ಇದ್ದಲ್ಲಿ, ಇತರರೂ ಸಹ ಈ ಕಾಯಿಲೆಯ ಬಗ್ಗೆ ಬೇಗನೆ ದಂತತಜ್ಞರಲ್ಲಿ ತಪಾಸಣೆ ಮಾಡಿಸಿಕೊಂಡರೆ ಉತ್ತಮ.

ತಾರುಣ್ಯ ಹಾಗೂ ಬಾಯಿಯ ಆರೈಕೆ


ಬಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸದೇ ಇರುವ  ತರುಣರಲ್ಲಿ ಪೆರಿಯೋಡಾಂಟಲ್‌ ಕಾಯಿಲೆಯು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಬಾಲ್ಯದಿಂದ ತಾರುಣ್ಯದವರೆಗೆ ಬಾಯಿಯ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳುವ ಮಕ್ಕಳು, ಆ ಮೇಲೆಯೂ ಸಹ ಬ್ರಷಿಂಗ್‌ ಹಾಗೂ ಫ್ಲಾಸಿಂಗ್‌ನ್ನು ಉತ್ತಮ ರೀತಿಯಲ್ಲಿ ಮುಂದುವರಿಸಿಕೊಂಡು, ಬಾಯಿಯ ಆರೋಗ್ಯದ ಬಗ್ಗೆ ಕಾಳಜಿ ಉಳ್ಳವರಾಗಿರುತ್ತಾರೆ.

ಪ್ರೌಢ ವಯಸ್ಸಿನಲ್ಲಾಗುವ ಹಾರ್ಮೋನು ವ್ಯತ್ಯಾಸಗಳು ಹದಿಹರೆಯದವರಲ್ಲಿ ಪೆರಿಯೋಡಾಂಟಲ್‌ ಕಾಯಿಲೆ ಉಂಟಾಗುವ ಅಪಾಯವನ್ನು ತರಬಲ್ಲದು. ಈ ಹಂತದಲ್ಲಿ ಲೈಂಗಿಕ ಹಾರ್ಮೋನುಗಳಾದ ಪ್ರಾಜೆಸ್ಟರಾನ್‌ ಹಾಗೂ ಈಸ್ಟ್ರೋಜನ್‌ಗಳು ಗಮನಾರ್ಹವಾಗಿ ಹೆಚ್ಚಳವಾಗಿ, ಒಸಡಿಗೆ ಹರಿಯುವ ರಕ್ತದ ಪ್ರಮಾಣವೂ ಸಹ ಹೆಚ್ಚುತ್ತದೆ. ಇದರಿಂದಾಗಿ ಒಸಡಿನ ಸಂವೇದನೆಯು ಹೆಚ್ಚಾಗಿ, ಆಹಾರದ ಕಣ, ಕೊಳೆ ಇತ್ಯಾದಿ ಅತಿ ಸೂಕ್ಷ್ಮವಾದ ಕಿರಿಕಿರಿಗೂ ಸಹ ಒಸಡು ಕೆರಳುತ್ತದೆ. ಮಾತ್ರವಲ್ಲ; ಊದಿಕೊಂಡು, ಕೆಂಪಗಾಗುತ್ತದೆ.

ಹದಿಹರೆಯ ಮುಂದುವರಿದ ಹಾಗೆ, ಕಿರಿಕಿರಿಯ ಕಾರಣದಿಂದಾಗಿ ಉಂಟಾದ ಒಸಡಿನ ಊತ ಕಡಿಮೆಯಾಗುತ್ತದೆ. ಹಾಗಿದ್ದರೂ, ಹದಿಹರೆಯದ ಅವ—ಯಲ್ಲಿ ಬ್ರಷಿಂಗ್‌, ಫ್ಲಾಸಿಂಗ್‌ ಇತ್ಯಾದಿಗಳ ಮೂಲಕ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಆವಶ್ಯಕ. ಈ ಅವ—ಯಲ್ಲಿ ದಂತತಜ್ಞರ ಸಲಹೆಯನ್ನು ಪಡೆದು, ಹಲ್ಲಿನ ಸುತ್ತಲಿನ ಅಂಗಾಂಶಗಳು ಹಾಗೂ ಮೂಳೆಗಳನ್ನು ಸುರಕ್ಷಿತಗೊಳಿಸುವ ಪೆರಿಯೋಡಾಂಟಲ್‌ ಚಿಕಿತ್ಸೆಯನ್ನೂ ಸಹ ಪಡೆದುಕೊಳ್ಳಬಹುದು.

ಪೋಷಕರಿಗೆ ಸಲಹೆಗಳು



ಪೆರಿಯೋಡಾಂಟಲ್‌ ಚಿಕಿತ್ಸೆಯು ಯಶಸ್ವಿಯಾಗಲು, ಕಾಯಿಲೆಯನ್ನು ಆರಂಭದಲ್ಲೇ ಪತ್ತೆ ಮಾಡುವುದು ಬಹಳ ಆವಶ್ಯಕ. ಹಾಗಾಗಿ, ಮಕ್ಕಳು ತಮ್ಮ ಮಾಮೂಲಿ ದಂತ ಪರೀಕ್ಷೆಯ ಕ್ರಮ ದಂತೆಯೇ ಪೆರಿಯೋಡಾಂಟಲ್‌ ಪರೀಕ್ಷೆ ಯನ್ನೂ ಸಹ ಮಾಡಿಸಿಕೊಂಡರೆ ಒಳ್ಳೆಯದು. ನಿಮ್ಮ ಮಗುವಿನ ಪೆರಿಯೋಡಾಂಟಲ್‌ ಕಾಯಿಲೆಯು ಬಹಳ ಮುಂದುವರಿದ ಹಂತದಲ್ಲಿದ್ದರೆ, ಅದೊಂದು ದೈಹಿಕ ಕಾಯಿಲೆಯೂ ಆಗಿರಬಹುದು. ಒಂದು ವೇಳೆ ಪೆರಿಯೋಡಾಂಟಲ್‌ ಕಾಯಿಲೆಯು ತೀವ್ರ ರೂಪದಲ್ಲಿದ್ದು, ಅದು ಚಿಕಿತ್ಸೆಗೆ ಬಗ್ಗದಿದ್ದರೆ, ಆಗ ಮಗುವಿನ ಇತರ ದೈಹಿಕ ಪರೀಕ್ಷೆಗಳನ್ನೂ ಸಹ ಮಾಡಿಸಬೇಕಾಗಬಹುದು.ಬಾಯಿಯ ಆರೋಗ್ಯಕ್ಕಾಗಿ ಬಳಸಲಾಗುವ ಕೆಲವು ಔಷಧಿ—ಗಳು ಬಾಯಿಯನ್ನು ಒಣದಾಗಿಸುವ ಸಾಧ್ಯತೆಯೂ ಇದೆ. ಹಾಗಾಗಿ, ನಿಮ್ಮ ಕುಟುಂಬದ ಸದಸ್ಯರು ತೆಗೆದುಕೊಳ್ಳುತ್ತಿರುವ ಔಷಧಿ—ಗಳ ಬಗ್ಗೆ ನಿಮ್ಮ ದಂತ ತಜ್ಞರಲ್ಲಿ ಕೇಳಿ ತಿಳಿಯಿರಿ. ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಹಲ್ಲು ಕಡಿಯುವ ಅಭ್ಯಾಸ ಇದೆಯೇ ಎಂದು ಗಮನಿಸಿ. ಯಾಕೆಂದರೆ, ಹಲ್ಲು ಕಡಿಯುವ ಅಭ್ಯಾಸದಿಂದ ಪೆರಿಯೋಡಾಂಟಲ್‌ ಹೆಚ್ಚಾಗುತ್ತದೆ. ಮಾತ್ರವಲ್ಲ, ಹಲ್ಲು ಸವೆಯುವ, ಹಲ್ಲಿನ ಚಕ್ಕೆ ಹೋಗುವ ಅಪಾಯವೂ ಇದೆ. ರಾತ್ರಿಯಲ್ಲಿ ಧರಿಸುವಂತಹ, ದಂತ ಕಡಿತವನ್ನು ತಡೆಯುವ ಸಾಧನಗಳ ಮೂಲಕ ವೈದ್ಯರು ಹಲ್ಲು ಕಡಿತದ ತೊಂದರೆಯನ್ನು ನಿವಾರಿಸಬಲ್ಲರು.

ನಿಮ್ಮ ಮಗುವಿನಲ್ಲಿ ಬಾಯಿಯ ಆರೋಗ್ಯ ಅಭ್ಯಾಸವನ್ನು ಉತ್ತಮ ರೀತಿಯಲ್ಲಿ ಬೆಳೆಸುವ ಮೂಲಕ ಪೆರಿಯೋಡಾಂಟಲ್‌ ಕಾಯಿಲೆಯನ್ನು ಗಮನಾರ್ಹವಾಗಿ ತಡೆಗಟ್ಟಬಹುದು. ನಿಮ್ಮ ಮಗುವಿನ ಬಾಯಿಯ ಆರೋಗ್ಯವನ್ನು ಬೆಳೆಸಲು ಕೆಲವು ಸಲಹೆಗಳು ಈ ರೀತಿಯಾಗಿವೆ.

  • ಬಾಯಿಯ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳುವ ಅಭ್ಯಾಸವನ್ನು ಆರಂಭದಿಂದಲೇ ಬೆಳೆಸಿ. ಮಗುವಿಗೆ 12ತಿಂಗಳು ತುಂಬಿದಾಗ ಅವನಿಗೆ/ಅವಳಿಗೆ ಟೂತ್‌ಪೇಸ್ಟನ್ನು ಉಪಯೋಗಿಸಿ ಹಲ್ಲನ್ನು ಬ್ರಷ್‌ ಮಾಡಿಸಿ. ಮಗುವು ಪೇಸ್ಟನ್ನು ನುಂಗುವುದನ್ನು ತಡೆಯಲು, ಆ ಪ್ರಾಯಕ್ಕೆ ಅನುಗುಣವಾದ ಬ್ರಷ್‌ನ್ನೇ ಬಳಸಿ ಹಾಗೂ  ಮಗುವಿನ ಹಲ್ಲುಗಳ ನಡುವಿನ ತೆರವು ಮುಚ್ಚಿದ ನಂತರ ಫ್ಲಾಸಿಂಗ್‌ ಮಾಡಲು ಆರಂಭಿಸಿ.
  • ನೀವು ಉತ್ತಮ ಅಭ್ಯಾಸವನ್ನು ರೂಢಿಸಿಕೊಂಡು, ನಿಮ್ಮ ಬಾಯಿಯ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳುವ ಮೂಲಕ ನಿಮ್ಮ ಮಗುವಿಗೆ ಒಳ್ಳೆಯ ಮಾದರಿ ಎನಿಸಬಹುದು.
  • ಬಾಯಿಯ ಆರೋಗ್ಯ ತಪಾಸಣೆ, ಸ್ವತ್ಛತೆ ಹಾಗೂ ಪೆರಿಯೋಡಾಂಟಲ್‌ ತಪಾಸಣೆಗಾಗಿ ದಂತವೈದ್ಯರನ್ನು ನಿಯಮಿತವಾಗಿ ಭೇಟಿಯಾಗುವ ಅಭ್ಯಾಸವನ್ನು ರೂಢಿಸಿಕೊಳ್ಳಿ.
  • ನಿಮ್ಮ ಮಗುವಿನ ಬಾಯಿಯಲ್ಲಿ ಒಸಡಿನ ರಕ್ತಸ್ರಾವ, ಬಾತುಕೊಂಡು ಕೆಂಪಗಾಗಿರುವುದು, ಹಲ್ಲಿನ ಬೇರು ಹೊರಚಾಚಿರುವುದು, ಬಾಯಿಯ ದುರ್ಗಂಧ... ಇತ್ಯಾದಿ ಪೆರಿಯೋಡಾಂಟಲ್‌ ಕಾಯಿಲೆಯ ಲಕ್ಷಣಗಳಿವೆಯೇ ಎಂದು ಆಗಾಗ ಪರೀಕ್ಷಿಸಿ.
  • ಪ್ರಸ್ತುತ ನಿಮ್ಮ ಮಗುವಿನ ಬಾಯಿಯ ಆರೋಗ್ಯದ ಅಭ್ಯಾಸಗಳು ಅಷ್ಟೊಂದು ಉತ್ತಮವಾಗಿಲ್ಲದಿದ್ದರೆ, ಆ ಅಭ್ಯಾಸವನ್ನು ಈಗಲೇ ಬದಲಾಯಿಸಲು ಪ್ರಯತ್ನಿಸಿ. ಮಗುವು ಬೆಳೆದ ನಂತರ ಪ್ರಯತ್ನಿಸುವುದಕ್ಕಿಂತಲೂ, ಅಭ್ಯಾಸವನ್ನು ಈಗಲೇ ಬದಲಾಯಿಸುವುದು ಸುಲಭ.

ಮೂಲ : ಅರೋಗ್ಯ ವಾಣಿ

ಮಕ್ಕಳಲ್ಲಿ ಹೆಚ್ಚಾಗುತ್ತಿದೆ ಬಾಲನೆರೆ ಸಮಸ್ಯೆ

ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಬಿಳಿ ಕೂದಲು ಕಾಣುವುದು ಸಾಮಾನ್ಯ. ಶಾಲೆಗೆ ಹೋಗುವ ಎಷ್ಟೋ ಮಕ್ಕಳು ಮನೆಗೆ ಬಂದು ತಮ್ಮ ತಲೆ ತೋರಿಸಿ ಅಮ್ಮಾ ಅಮ್ಮಾ ನನ್ನನ್ನು ಎಲ್ಲಾ ಅಜ್ಜಿ ಅಜ್ಜಿ ಅಂತ ಕರೆಯುತ್ತಾರೆ ಅಂತ ಹೇಳಿ ಅಳುವುದನ್ನು ನೀವೂ ನೋಡಿರಬಹುದು. ಇದನ್ನೇ ಬಾಲನೆರೆ ಅಂತ ಕರೆಯುತ್ತಾರೆ. ಮುಂಚೆ ಎಲ್ಲಾ 50-60 ವಯಸ್ಸಿನ ಆಸುಪಾಸಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಬಿಳಿಕೂದಲು ಇತ್ತೀಚೆಗೆ 15 ವಯಸ್ಸಿನವರಲ್ಲಿ ಅಧಿಕವಾಗುತ್ತಿದೆ. ಹೇರ್‍ಲೈನ್ ಇಂಟರ್‍ನ್ಯಾಷನಲ್ ರಿಸರ್ಚ್ ಮತ್ತು ಟ್ರೀಟ್‍ಮೆಂಟ್ ಸಂಸ್ಥೆಯ ಸಂಶೋಧನೆ ಪ್ರಕಾರ 15 ರಿಂದ 25 ವರ್ಷದೊಳಗಿನ ಶೇ. 99 ಮಂದಿ ಬಾಲನೆರೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೇರ್‍ಲೈನ್ ಸಂಸ್ಥೆಯು 8 ತಿಂಗಳ ಕಾಲ 2000 ವ್ಯಕ್ತಿಗಳ ಮೇಲೆ ಸಂಶೋಧನೆ ನಡೆಸಿತ್ತು.

ಸಂಶೋಧನೆ ಬಗ್ಗೆ ಮಾಹಿತಿ ನೀಡಿದ ಹೇರ್‍ಲೈನ್ ಇಂಟರ್‍ನ್ಯಾಷನಲ್‍ನಲ್ಲಿ ಡೆರ್ಮಟೊಲಾಜಿಸ್ಟ್ ಡಾ. ಸ್ವಾಗತ ಚಕ್ರವರ್ತಿ, “ಇತ್ತೀಚಿನ ದಿನಗಳಲ್ಲಿ ಹೈಸ್ಕೂಲ್, ಕಾಲೇಜ್ ವಿದ್ಯಾರ್ಥಿಗಳು ಬಿಳಿಕೂದಲಿನ ಸಮಸ್ಯೆಗೆ ಬಲಿಯಾಗುತ್ತಿದ್ದಾರೆ. ನಮ್ಮ ಕ್ಲಿನಿಕ್‍ಗೆ ಅನೇಕರು ತಮ್ಮ ಮಕ್ಕಳನ್ನು ಕರೆದುಕೊಂಡು ಈ ಸಮಸ್ಯೆಗೆ ಚಿಕಿತ್ಸೆ ಕೊಡಿ ಎಂದು ಬರುತ್ತಾರೆ. ಇದರಿಂದ ನಾವು ಈ ಬಗ್ಗೆ ಸಂಶೋಧನೆ ನಡೆಸುವ ಯೋಜನೆ ಹಾಕಿದೆವು. ಅದರ ಪ್ರಕಾರ ಇತ್ತೀಚಿನ ಮಕ್ಕಳು ಮತ್ತು ಯುವಕರು ಹೆಚ್ಚಾಗಿ ಜಂಕ್‍ಫುಡ್ ಬಳಸುತ್ತಾರೆ. ಜೊತೆಗೆ ಒತ್ತಡದ ಜೀವನ ನಡೆಸುತ್ತಾರೆ. ಇದೆಲ್ಲದರಿಂದ ಅವರು ಬಿಳಿಕೂದಲಿನ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ತಿಳಿದುಬಂತು” ಎಂದರು.

ಅಧ್ಯಯನದ ವೇಳೆ ಗಮನಿಸಿದ ಪ್ರಮುಖ ಅಂಶಗಳು

  • 2000 ಜನರಲ್ಲಿ ಶೇ. 34 ರಷ್ಟು ಮಹಿಳೆಯರು, ಶೇ. 66 ರಷ್ಟು ಪುರುಷರು.
  • 15 ರಿಂದ 25 ವರ್ಷದೊಳಗಿನ ಶೇ. 99 ಮಂದಿಯ ತಲೆಕೂದಲು ಬಿಳಿಯ ಬಣ್ಣಕ್ಕೆ ತಿರುಗಿತ್ತು. ಈ ಪೈಕಿ 10 ಮಂದಿ 15 ವರ್ಷದೊಳಗಿನವರು, ಇಬ್ಬರು 7 ವರ್ಷ ಮತ್ತು ಒಬ್ಬರು 9 ವರ್ಷದವರು.

ಬಾಲನೆರೆಗೆ ಏನು ಕಾರಣ?
ಚಿಕ್ಕ ವಯಸ್ಸಿನಲ್ಲಿ ಬಿಳಿ ಕೂದಲಿನ ಸಮಸ್ಯೆ ಬರಲು ಅನೇಕ ಕಾರಣಗಳಿವೆ. ದೇಹದಲ್ಲಿ ವಿಟಮಿನ್ ಕೊರತೆ, ಕಬ್ಬಿಣದ ಅಂಶದ ಕೊರತೆ, ಕ್ಯಾಲ್ಸಿಯಂ ಕೊರತೆ ಹೀಗೆ ಅನೇಕ ಕಾರಣಗಳಿಂದ ಬಾಲನೆರೆ ಕಾಣಿಸಿಕೊಳ್ಳುತ್ತದೆ ಎನ್ನುವುದು ವೈದ್ಯರ ಅಭಿಪ್ರಾಯ. ಇದೆಲ್ಲದರ ಜೊತೆಗೆ ಸಂಶೋಧನೆಯಲ್ಲಿ ಭಾಗಿಯಾದ ಬಹುತೇಕ ಎಲ್ಲಾ ರೋಗಿಗಳ ಜೀವನಶೈಲಿ ಒತ್ತಡದಿಂದ ಕೂಡಿದ್ದಾಗಿತ್ತು. ತಡರಾತ್ರಿಯಲ್ಲಿ ಕೆಲಸ ಮಾಡುವುದು, ಜಂಕ್‍ಫುಡ್‍ಗಳ ಸೇವನೆ, ಧೂಮಪಾನ ಮತ್ತು ಮದ್ಯಪಾನ ಮುಂತಾದವುಗಳಿಂದ ಇವರು ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲ ಸಮಸ್ಯೆ ಎದುರಿಸುತ್ತಿದ್ದರು.

ಇನ್ನು ಅನೇಕ ಮಹಿಳೆಯರಲ್ಲಿ ಬಿಳಿ ಕೂದಲಿನ ಜೊತೆಗೆ ಅತಿಯಾಗಿ ಕೂದಲು ಕವಲೊಡೆಯುವ ಸಮಸ್ಯೆ ಕೂಡಾ ಕಾಣಿಸಿಕೊಂಡಿತ್ತು.
ಜಂಕ್‍ಫುಡ್ ಆರೋಗ್ಯಕ್ಕೆ ಹಾಳು ಎನ್ನುವುದು ಎಲ್ಲರಿಗೂ ಗೊತ್ತು. ಆದರೂ ಅದರ ರುಚಿಯಿಂದಾಗಿ ಜೊತೆಗೆ ಕೈಗೆ ಸುಲಭದಲ್ಲಿ ಸಿಗುವುದರಿಂದ ಇದನ್ನು ಬಹುತೇಕರು ಬಳಸುತ್ತಾರೆ. ಹೆತ್ತವರು ತಮ್ಮ ಮಕ್ಕಳನ್ನು ಈ ಜಂಕ್‍ಫುಡ್‍ನಿಂದ ದೂರವಿಟ್ಟು ಆರೋಗ್ಯಕರ ಆಹಾರವನ್ನು ಸೇವಿಸುವಂತೆ ಮಾಡಿದರೆ ಬಾಲನೆರೆಯಂತ ಸಮಸ್ಯೆಯಿಂದ ಮಕ್ಕಳನ್ನು ದೂರವಿಡಬಹುದು.

ಮೂಲ : ಸುದಿನ

ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ದೊಡ್ಡ ಸಮಸ್ಯೆಯೇ

ವಿನಯ್ ಒಂಬತ್ತು ವರ್ಷದ ಬಾಲಕ. ಮೂರನೆ ತರಗತಿಯಲ್ಲಿ ಓದುತ್ತಿರುವ ಅವನೂ ಈಗಲೂ ಸಾಮಾನ್ಯವಾಗಿ ದಿನಾ ರಾತ್ರಿ ಹಾಸಿಗೆಯಲ್ಲಿ ಮೂತ್ರ ಮಾಡುತ್ತಿದ್ದ. ಮಕ್ಕಳ ತಜ್ಞರು ಕೊಟ್ಟ ಯಾವುದೇ ಔಷಧಿ ಅಥವಾ ಸಲಹೆಗಳು ಕೆಲಸಮಾಡಿರಲಿಲ್ಲ. ಯಾವುದೇ ದೈಹಿಕ ತೊಂದರೆಗಳಿಲ್ಲ, ಹಾಗಾಗಿ ಆಪ್ತಸಲಹೆಯ ಮೂಲಕ ಅವನ ಸಮಸ್ಯೆಯ ಪರಿಹಾರಕ್ಕೆ ಪ್ರಯತ್ನಿಸಿ, ಎಂದು ವೈದ್ಯರು ಹೇಳಿದ್ದರು. ಅದರಂತೆ ಪೋಷಕರ ನಮ್ಮ ಸಹಾಯ ಕೋರಿದ್ದರು.

ಮಕ್ಕಳಿಗೆ ಆಪ್ತಸಲಹೆ ನೀಡುವ ವಿಷಯದಲ್ಲಿರುವ ದೊಡ್ಡ ತೊಂದರೆ ಎಂದರೆ ಮಕ್ಕಳನ್ನು ನಾವು ನೇರವಾಗಿ ಪ್ರಶ್ನಿಸಿ, ಅವರಿಗೆ ಒಪ್ಪುವ ಸಲಹೆಗಳನ್ನು ನೀಡಲು ಸಾಧ್ಯವಿಲ್ಲ. ಏಕೆಂದರೆ ಹೆಚ್ಚಿನ ಸಂದರ್ಭಗಳಲ್ಲಿ ಮಕ್ಕಳು ಅಪರಿಚಿತರೊಡನೆ ಮುಕ್ತವಾಗಿ ಮಾತನಾಡಲು ಹಿಂಜರಿಯುತ್ತಾರೆ ಮತ್ತು ಅವರಿಗೆ ತಮ್ಮ ಮನಸ್ಸಿನಲ್ಲಿರುವುದನ್ನೆಲ್ಲಾ ಭಾಷೆಯ ಮೂಲಕ ವ್ಯಕ್ತಮಾಡುವುದು ಸಾಧ್ಯವಾಗಲಾರದು. ಹಾಗಾಗಿ ನಿಧಾನವಾಗಿ ಮಕ್ಕಳ ಜೊತೆ ಸ್ನೇಹವನ್ನು ಬೆಳೆಸಿಕೊಳ್ಳುತ್ತಾ ಅವರಲ್ಲಿ ಬದಲಾವಣೆಗೆ ಪ್ರಯತ್ನಿಸಬೇಕಾಗುತ್ತದೆ. ಜೊತೆಗೆ ಪೋಷಕರಿಗೆ ಮಕ್ಕಳ ಜೊತೆ ವರ್ತಿಸಬೇಕಾದ ರೀತಿಯ ಬಗೆಗೆ ತರಬೇತಿ ನೀಡಬೇಕಾಗುತ್ತದೆ. ಹಾಗಾಗಿ ಹೆಚ್ಚಿನ ಸಂದರ್ಭಗಳಲ್ಲಿ ಇದು ಪೋಷಕರಿಗೇ ಆಪ್ತಸಲಹೆಯಾಗಿರುತ್ತದೆ.

ಯಾವಾಗ ಇದು ಸಮಸ್ಯೆ?
ಮಕ್ಕಳಿಗೆ ಸುಮಾರು ಒಂದು ವರ್ಷವಾದಾಗಿನಿಂದ ಅಮ್ಮಂದಿರು ಶೌಚ ತರಬೇತಿಯನ್ನು ನೀಡಲು ಪ್ರಾರಂಭಿಸಬೇಕು. ಸುಮಾರು ಎರಡು ವರ್ಷದಿಂದ ಮೂರು ವರ್ಷದ ಒಳಗೆ ಮಕ್ಕಳು ಹಗಲು ಹೊತ್ತಿನಲ್ಲಿ ತಮಗೆ ಮಲಮೂತ್ರಗಳ ಒತ್ತಡವುಂಟಾದಾಗ ಇತರರಿಗೆ ಹೇಳುಲು ಸಮರ್ಥರಾಗುತ್ತಾರೆ. ಮೂರು ವರ್ಷದ ನಂತರವೂ ರಾತ್ರಿ ಹೊತ್ತಿನಲ್ಲಿ ಹಾಸಿಗೆಯಲ್ಲೇ ಮೂತ್ರ ವಿಸರ್ಜನೆ ಮಾಡಿಕೊಳ್ಳುವುದನ್ನು ಮುಂದುವರೆಸಬಹುದು. ಇದಕ್ಕಾಗಿ ಪೋಷಕರು ಆತಂಕ ಪಡಬೇಕಿಲ್ಲ. ಆದರೆ ಇದೇ ಪ್ರವೃತ್ತಿ ಐದು ವರ್ಷಗಳ ನಂತರವೂ ಮುಂದುವರೆದರೆ ಮಕ್ಕಳಿಗೆ ಇದರಿಂದ ಹೊರಬರಲು ಸಹಾಯ ಬೇಕಾಗುತ್ತದೆ.

ಎಲ್ಲಿದೆ ಇದರ ಮೂಲ?
ಕೆಲವು ದೈಹಿಕ ನ್ಯೂನತೆಗಳಿಂದ ಮಕ್ಕಳಿಗೆ ಈ ಸಮಸ್ಯೆ ಉಂಟಾಗಬಹುದು. ಮೂತ್ರ ಮಾಡುವ ಅಂಗಾಗಗಳಲ್ಲಿ ಇರಬಹುದಾದ ತೊಂದರೆಗಳು, ಮೂತ್ರನಾಳಗಳ ಸೋಂಕು, ಕೆಲವು ನರದೋಷಗಳು ಮತ್ತಿತರ ಕಾರಣಗಳಿಂದ ಮಕ್ಕಳಿಗೆ ಮೂತ್ರ ವಿಸರ್ಜನೆಯ ಮೇಲೆ ಹಿಡಿತ ಸಾಧಿಸಲು ಕಷ್ಟವಾಗಬಹುದು.

ದೈಹಿಕವಾಗಿ ಯಾವುದೇ ತೊಂದರೆ ಇಲ್ಲವೆಂದಾದರೆ ಇದರ ಮೂಲ ಮನಸ್ಸಿನಲ್ಲೆಲ್ಲೋ ಇರುತ್ತದೆ ಎಂದು ತಿಳಿಯಬೇಕು. ಇಷ್ಟು ಚಿಕ್ಕ ಮಕ್ಕಳಿಗೆ ಅದೆಂತಹ ಮಾನಸಿಕ ಸಮಸ್ಯೆ ಎಂದು ಮೂಗು ಮುರಿಯಬೇಡಿ. ವಾಸ್ತವವಾಗಿ ಮಕ್ಕಳಿಗೆ ಬರುವ ಮಾನಸಿಕ ಸಮಸ್ಯೆಗಳೆಲ್ಲಾ ಪೋಷಕರ ಬಳುವಳಿ. ಇವುಗಳು ಈ ಕೆಳಗಿನಂತೆ ಇರಬಹುದು;

  • ಮಕ್ಕಳಿಗೆ ಸೌಹಾರ್ದಯುತ ಕೌಟುಂಬಿಕ ವಾತಾವರಣ ದೊರಕದಿದ್ದಾಗ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಉದಾಹರಣೆಗೆ ಪೋಷಕರ ಕಲಹ, ವಿಚ್ಛೇದನ, ಕುಡಿತ ಮುಂತಾದ ದುಶ್ಚಟಗಳು, ಪೋಷಕರಿಂದ ದೂರವಿರುವ ಮಕ್ಕಳು, ಪೋಷಕರ ಸಾವು ಮುಂತಾದವು.
  • ಪೋಷಕರಿಂದ ಸೂಕ್ತವಾದ ಶೌಚ ತರಬೇತಿ ದೊರೆಯದಿರುವುದು.
  • ಶಾಲೆಯಲ್ಲಿ ಅಥವಾ ಸ್ನೇಹಿತರೊಡನೆ ಬೆರೆಯುವಾಗ ಮಗುವಿಗೆ ಉಂಟಾಗಬಹುದಾದ ಒತ್ತಡಗಳು.
  • ಮಕ್ಕಳ ಮನಸ್ಸಿನಲ್ಲಿ ಮೂಡಿರಬಹುದಾದ ಆತಂಕ, ಭಯ, ಹಿಂಜರಿತ, ಆತ್ಮವಿಶ್ವಾಸದ ಕೊರತೆ ಮುಂತಾದವು.

ಎಲ್ಲಿಂದ ಚಿಕಿತ್ಸೆಯನ್ನು ಆರಂಭಿಸಬೇಕು?

  • ಚಿಕಿತ್ಸೆಯ ಮೊದಲ ಹಂತವಾಗಿ ಮಕ್ಕಳ ತಜ್ಞರಲ್ಲಿ ಹೋಗಿ ಮಗು ಸಂಪೂರ್ಣ ದೈಹಿಕವಾಗಿ ಆರೋಗ್ಯವಾಗಿ ಇದೆಯೆಂದು ಖಚಿತಪಡಿಸಕೊಳ್ಳಬೇಕು.
  • ದೈಹಿಕ ತೊಂದರೆಗಳಿಲ್ಲವೆಂದು ಖಾತ್ರಿಯಾದಮೇಲೆ ಮನೆಯಲ್ಲಿಯೇ ಕೆಲವು ಸರಳ ನಿಯಮಗಳನ್ನು ಪಾಲಿಸಬಹುದು.
  • ರಾತ್ರಿ ಮಲಗುವುದಕ್ಕೆ ಎರಡು ಗಂಟೆಗೆ ಮೊದಲು ಮಾತ್ರ ನೀರು ಕುಡಿಯಲು ಹೇಳಬೇಕು.
  • ಮಲಗುವಾಗ ಮೂತ್ರವಿಸರ್ಜನೆ ಮಾಡುವ ಅಭ್ಯಾಸ ಮಾಡಿಸಬೇಕು.
  • ರಾತ್ರಿ ಒಮ್ಮೆ ಮಗುವನ್ನು ಎಬ್ಬಿಸಿ ಮೂತ್ರವಿಸರ್ಜನೆ ಮಾಡುವ ಅಭ್ಯಾಸಮಾಡಿಸಬಹುದು.
  • ಈ ಸರಳ ನಿಯಮಗಳು ಪ್ರಯೋಜನಕ್ಕೆ ಬರದಿದ್ದರೆ ತಜ್ಞರಿಂದ ಆಪ್ತಸಲಹೆ ಬೇಕಾಗುತ್ತದೆ. ಹಾಗೆ ಆಪ್ತಸಲಹೆಗೆ ಬರುವ ಮುನ್ನ ಪೋಷಕರು ಕೆಲವು ಎಚ್ಚರಿಕೆಗಳನ್ನು ವಹಿಸಬೇಕು.
  • ಹಾಸಿಗೆಯಲ್ಲಿ ಮೂತ್ರವಿಸರ್ಜನೆ ಮಾಡಿರುವುದಕ್ಕಾಗಿ ಮಗುವನ್ನು ಬೈಯುವುದು, ಹೊಡೆಯುವುದು ಅಥವಾ ಭಯಹುಟ್ಟಿಸುವುದು ಮುಂತಾದವುಗಳನ್ನು ಮಾಡಬಾರದು. ಇದರಿಂದ ಮಗುವಿನ ಆತಂಕ ಮತ್ತು ಅದರ ಮೇಲಿನ ಒತ್ತಡ ಜಾಸ್ತಿಯಾಗಿ ಈ ಅಭ್ಯಾಸದಿಂದ ಹೊರಬರಲು ಹೆಚ್ಚಿನ ಸಮಯ ಬೇಕಾಗಬಹುದು.
  • ಮಗುವಿನ ಅಭ್ಯಾಸವನ್ನು ಎಲ್ಲರೆದುರು ಹೇಳಿ ಅದಕ್ಕೆ ಅವಮಾನ ಮಾಡುವುದರ ಮೂಲಕ ಮಗುವಿನ ಆತ್ಮಗೌರಕ್ಕೆ ಧಕ್ಕೆ ತರಬಾರದು.
  • ಮಗು ಯಾವುದೋ ದೊಡ್ಡ ಕಾಯಲೆಯಿಂದ ನರಳುತ್ತಿದೆ ಎನ್ನವು ಭಾವನೆ ಹುಟ್ಟಿಸಬಾರದು. ಈ ತೊಂದರೆಯಲ್ಲಿ ಮಗುವಿನದು ಏನೂ ತಪ್ಪಿಲ್ಲ, ಅದರ ಸಹಾಯಕ್ಕೆ ನಾವಿದ್ದೇವೆ ಎನ್ನವು ಭರವಸೆಮೂಡಿಸಬೇಕು.

ಹಾಸಿಗೆಯಲ್ಲಿ ಮೂತ್ರ ಮಾಡುವುದು ಹೊರನೋಟಕ್ಕೆ ಭಾರೀ ಸಮಸ್ಯೆಯಾಗಿ ಕಾಣದಿರಬಹುದು. ಆದರೆ ಇದಕ್ಕಾಗಿ ಮಗುವಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆಯದಿದ್ದಲ್ಲಿ ಮಗುವಿನ ಆತ್ಮವಿಶ್ವಾಸ ಮತ್ತು ಆತ್ಮಗೌರವಕ್ಕೆ ಪೆಟ್ಟುಬೀಳಬಹುದು. ಮಗು ಹಾಸ್ಟೆಲ್‍ಗಳಿಗೆ ಹೋಗಿರಲು ಅಥವಾ ಸ್ನೇಹಿತರೊಡನೆ ಮುಕ್ತವಾಗಿ ಬೆರೆಯಲು ಹಿಂಜರಿಯಬಹುದು. ಇದರಿಂದ ಮಗುವಿನ ಒಟ್ಟಾರೆ ವ್ಯಕ್ತಿತ್ವ ವಿಕಸನ ಸಮರ್ಪಕವಾಗಿರುವುದಿಲ್ಲ.

ಮೂಲ : ಕರುನಾಡು.

ಮಗು ಬೆರಳು ಕಚ್ಚುತ್ತಿದೆಯೇ

ಸಾಮಾನ್ಯವಾಗಿ ಮಕ್ಕಳು ಬೆರಳು ಚೀಪುವುದು ಅಥವಾ ಉಗುರನ್ನು ಕಚ್ಚುವುದನ್ನು ಮಾಡುತ್ತಾರೆ. ಆರೋಗ್ಯಕರ ಮನೋದೈಹಿಕ ಬೆಳವಣಿಗೆ ಇರುವ ಮಕ್ಕಳಲ್ಲಿ ಬೆಳೆಯುತ್ತಾ ಬಂದಂತೆ ಇದು ತಾನಾಗಿ ನಿಲ್ಲುತ್ತದೆ. ನಾಲ್ಕೈದು ವರ್ಷಗಳ ನಂತರವೂ ಇದು ಮುಂದುವರೆದರೆ ಪೋಷಕರು ಇದರ ಕಡೆ ಗಮನ ಹರಿಸುವ ಅಗತ್ಯವಿರುತ್ತದೆ.

ಸುಮಾರಾಗಿ ಎಲ್ಲಾ ತಂದೆತಾಯಿಗಳೂ ಎರಡು ವರ್ಷದ ನಂತರದಿಂದಲೇ ಬೆರಳು ಚೀಪುವ ಅಭ್ಯಾಸವನ್ನು ಬಿಡಿಸಲು ಯತ್ನಿಸುತ್ತಾರೆ. ಇದನ್ನು ಮಾಡುವ ಅಗತ್ಯವಿದ್ದರೂ ಅವರು ಅನುಸರಿಸುವ ತಂತ್ರಗಳು ಮಾತ್ರ ಸೂಕ್ತವಾಗಿರುವುದಿಲ್ಲ. ಹೆಚ್ಚಿನ ಪೋಷಕರು ಇದೊಂದು ಅವಮಾನಕರ ಅಭ್ಯಾಸ, ಹಾಗಾಗಿ ಸಾರ್ವಜನಿಕವಾಗಿ ಮಕ್ಕಳು ಬೆರಳನ್ನು ಚೀಪುವುದು ತಮ್ಮ ಘನತೆಗೆ ಕುಂದು-ಎಂದುಕೊಳ್ಳುತ್ತಾರೆ. ಆದ್ದರಿಂದ ಬಲವಂತವಾಗಿ ಈ ಅಭ್ಯಾಸವನ್ನು ಬಿಡಿಸಲು ಯತ್ನಿಸುತ್ತಾರೆ. ದೆವ್ವ ಭೂತಗಳ ಭಯ ಹುಟ್ಟುಸುವುದು, ಜನರೆಲ್ಲಾ ನಗುತ್ತಾರೆ ಎಂದು ಹಂಗಿಸುವುದು ಮುಂತಾದ ಅಡ್ಡ ದಾರಿಗಳನ್ನು ಅನುಸರಿಸುತ್ತಾರೆ. ಇದರಿಂದ ಉಪಯೋಗವಾಗದಿದ್ದರೆ ಕೈಮೇಲೆ ಹೊಡೆಯುವುದು ಮುಂತಾದ ದೈಹಿಕ ಶಿಕ್ಷೆಯನ್ನೂ ನೀಡುತ್ತಾರೆ. ಮಕ್ಕಳ ಕೈ ಅಥವಾ ಬೆರಳುಗಳ ಮೇಲೆ ಬಿಸಿ ಮುಟ್ಟಿಸುವ ಕ್ರೂರ ತಂದೆತಾಯಿಗಳೂ ಇದ್ದಾರೆ. ಹೀಗೆ ಭಯ ಹುಟ್ಟಿಸಿ ಬೆರಳು ಚೀಪುವ ಅಭ್ಯಾಸವನ್ನು ನಿಲ್ಲಿಸಿದರೂ, ಇದರಿಂದ ಮಕ್ಕಳ ಮನಸ್ಸಿನ ಮೇಲೆ ಇತರ ದುಷ್ಪರಿಣಾಮಗಳಾಗುತ್ತವೆ ಎನ್ನುವುದನ್ನು ಮರೆಯಬಾರದು.

ಏನಿದರ ಹಿನ್ನೆಲೆ?

ಮೊದಲು ಈ ಅಭ್ಯಾಸದ ಹಿನ್ನೆಲೆಯನ್ನು ಸ್ವಲ್ಪ ನೋಡೋಣ. ಗರ್ಭದಿಂದ ಹೊರಬಂದ ನಂತರ ಮಗು ಸುತ್ತಲಿನ ಹೊರ ಜಗತ್ತಿಗೆ ಹೊಂದಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಗರ್ಭಾಶಯದ ಸುರಕ್ಷಿತ ಕೋಣೆಯಿಂದ ಹೊರಬಂದ ಮಗುವಿಗೆ ಸುತ್ತಲಿನ ಪ್ರಪಂಚ ಅಭದ್ರತೆಯ ಭಾವನೆಯನ್ನು ಕೊಡುತ್ತಿರುತ್ತದೆ. ತಾಯಿಯ ಅಪ್ಪುಗೆ ಮತ್ತು ಸ್ತನಪಾನ ಅದಕ್ಕೆ ಭದ್ರತೆಯನ್ನು ನೀಡುವ ಕ್ಷಣಗಳು. ಇಂತಹ ಭದ್ರತೆಯ ಭಾವವನ್ನು ಮಗು ಬೆರಳನ್ನು ಚೀಪುವುದರಲ್ಲಿಯೂ ಕಂಡುಕೊಂಡಿರುತ್ತದೆ. ಹೊರ ಜಗತ್ತಿಗೆ ಹೊಂದಿಕೊಳ್ಳುತ್ತಾ ಬಂದಂತೆ ಈ ಅಭ್ಯಾಸ ಸಹಜವಾಗಿ ಕಡಿಮೆಯಾಗುತ್ತಾ ಬರುತ್ತದೆ. ಆದರೂ ಕೆಲವೊಮ್ಮೆ ಮಗು ಅಭ್ಯಾಸ ಬಲದಿಂದ ಬೆರಳು ಚೀಪುವುದನ್ನು ಮುಂದುವರೆಸಿಯೇ ಇರುತ್ತದೆ.

ಯಾವಾಗ ಇದು ಸಮಸ್ಯೆ?

ಪೋಷಕರು ಗಮನಿಸಬೇಕಾದ ಅಂಶವೆಂದರೆ ಮಗು ಒಂದೇ ಇದ್ದಾಗ, ಅದಕ್ಕೆ ಬೇಸರವಾದಾಗ ಅಥವಾ ಸಕ್ರಿಯವಾಗಿ ಏನನ್ನೂ ಮಾಡದೆ ಇರುವಾಗ ಬೆರಳನ್ನು ಚೀಪುತ್ತದೆ. ಆಟವಾಡುವಾಗ ಅಥವಾ ಸಂತೋಷದಿಂದಿರುವಾಗ ಇದರ ಅಗತ್ಯವಿರುವುದಿಲ್ಲ. ಇದರ ಅರ್ಥವೇನೆಂದರೆ, ನಾಲ್ಕೈದು ವರ್ಷದ ಮಗುವಿಗೆ ಈ ಅಭ್ಯಾಸವಿದ್ದರೆ ಅದು ಬೆರಳು ಚೀಪುವ ಸಂದರ್ಭದಲ್ಲಿ ಮಾನಸಿಕವಾಗಿ ಖುಷಿಯಾಗಿರುವುದಿಲ್ಲ. ಯಾವುದೋ ಮುಜುಗರ ಅಥವಾ ಬೇಸರವನ್ನು ಅನುಭವಿಸುತ್ತಿರುತ್ತದೆ. ಅಷ್ಟು ಸಣ್ಣ ಮಗುವಿಗೆ ಅದೆಂತಹ ಬೇಸರ ಎಂದು ಮೂಗುಮುರಿಯಬೇಡಿ. ಭಾವನೆಗಳನ್ನು ಅನುಭವಿಸುವ ಮೆದುಳಿನ ಭಾಗವಾದ ಅಮಿಗ್ಡಾಲ ಹುಟ್ಟುವಾಗಲೇ ಸಂಪೂರ್ಣ ಬೆಳವಣಿಗೆಯಾಗಿರುತ್ತದೆ. ಆದರೆ ಮಗುವಿಗೆ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಶಬ್ಧಗಳ ಕೊರತೆ ಇರುವುದರಿಂದ ಅದನ್ನು ದೇಹಭಾಷೆಯಲ್ಲಿ ತೋರಿಸುತ್ತದೆ. ಇದನ್ನು ತಿಳಿಯದೆ ಬರಿ ಶಿಕ್ಷೆ, ಬುದ್ಧಿವಾದಗಳಿಂದ ಬದಲಾವಣೆ ಸಾಧ್ಯವಿಲ್ಲ.

ಎಲ್ಲಿದೆ ಪರಿಹಾರ?

  • ತಕ್ಷಣದಿಂದ ಎಲ್ಲಾ ರೀತಿಯ ಶಿಕ್ಷೆಯನ್ನು ನಿಲ್ಲಿಸಬೇಕು. ಇದೊಂದು ದೊಡ್ಡ ಅವಮಾನಕರ ಅಭ್ಯಾಸ ಎನ್ನುವ ಭಾವನೆಯನ್ನು ಮಗುವಿನಲ್ಲಿ ಉಂಟಾಗುವಂತೆ ವರ್ತಿಸಬಾರದು. ಎಲ್ಲರೆದುರು ಮಗುವನ್ನು ಬೈಯುವುದಾಗಲೀ ಅವಮಾನ ಮಾಡುವುದಾಗಲೀ ಸಂಪೂರ್ಣ ನಿಷಿದ್ಧ.
  • ಆರೋಗ್ಯದ ದೃಷ್ಟಿಯಿಂದ ಈ ಅಭ್ಯಾಸ ಒಳ್ಳೆಯದಲ್ಲ ಎಂದು ಪದೇಪದೇ ಮನವರಿಕೆ ಮಾಡಿಕೊಡಬೇಕು.
  • ಮಗು ಬೆರಳು ಚೀಪುತ್ತಿದ್ದರೆ ಅದರ ಗಮನವನ್ನು ಬೇರೆ ಕಡೆ ತಿರುಗಿಸಿ, ಅಂದರೆ ಮಗುವಿಗೆ ಹೆಚ್ಚು ಖುಷಿ ಕೊಡುವ ಅಂಶಗಳ ಬಗೆಗೆ ಗಮನ ಸೆಳೆಯಲು ಯತ್ನಿಸಿದರೆ ಇಂತಹ ಅಭ್ಯಾಸ ಕಡಿಮೆಯಾಗುತ್ತದೆ. ಕೈಬೆರಳುಗಳನ್ನು ಬೇರೆ ಸಂತೋಷಕೊಡುವ ಕ್ರಿಯೆಗಳಲ್ಲಿ ತೊಡಗಿಸಿದಾಗ (ಉದಾ; ಚಂಡಿನ ಆಟ, ಚಪ್ಪಾಳೆ, ನೃತ್ಯ, ಮುಂತಾದವು) ಮಗುವಿಗೆ ಅದನ್ನು ಬಾಯಿಗೆ ಹಾಕುವ ಸಾಧ್ಯತೆ ಇರುವುದಿಲ್ಲ. ಟೀವಿ ನೋಡುವ ಸಮಯವನ್ನು ನಿಯಂತ್ರಿಸದಿದ್ದರೆ ಬೆರಳು ಚೀಪುವ ಅಭ್ಯಾಸ ಮುಂದುವರೆಯುವ ಸಾಧ್ಯತೆಗಳು ಹೆಚ್ಚು.
  • ಮಗು ಯಾವ ಸಂದರ್ಭಗಳಲ್ಲಿ ಈ ಅಭ್ಯಾಸವನ್ನು ಹೆಚ್ಚಾಗಿ ಮಾಡುತ್ತಿದೆ ಎಂದು ಗಮನಿಸುತ್ತಿರಬೇಕು. ಅಂತಹ ಪರಿಸ್ಥಿತಿಗಳಲ್ಲಿ ಮಗುವಿನ ಮನಸ್ಸಿನಲ್ಲಿರಬಹುದಾದ ಬೇಸರ ಆತಂಕಗಳನ್ನು ಅರ್ಥಮಾಡಿಕೊಂಡು ಅದರ ನಿವಾರಣೆಗೆ ಯತ್ನಿಸಬೇಕು.
  • ಪೋಷಕರಿಗೆ ಅಗತ್ಯವಿರುವುದು ಸಹನೆ ಮತ್ತು ಸೂಕ್ಷ್ಮತೆ. ಆದ್ದರಿಂದ ಒರಟಾಗಿ ವರ್ತಿಸಿ ಮುಗ್ಧ ಮಗುವಿನಲ್ಲಿ ಅನಗತ್ಯ ಭಯವನ್ನು ಬಿತ್ತಬಾರದು.

ಐದಾರು ವರ್ಷಗಳ ನಂತರವೂ ಇಂತಹ ಅಭ್ಯಾಸ ಮುಂದುವರೆದರೆ ತಜ್ಞರಿಂದ ಆಪ್ತಸಲಹೆ ಪಡೆಯಬಹುದು.

ಮೂಲ : ಕರುನಾಡು.

ಮಕ್ಕಳ ನೆನಪಿನ ಶಕ್ತಿ ಹೆಚ್ಚಿಸುವ ಆಹಾರಗಳು

ಶಾಲೆಯಲ್ಲಿ ಏನು ಓದಿದ್ರೂ ನೆನಪಿನಲ್ಲಿ ಉಳಿಯಲ್ಲ. ಟ್ಯೂಷನ್ ಕ್ಲಾಸಿಗೆ ಕಳಿಸಿದ್ರೂ ಅಷ್ಟೇ.. ಮನೆಗೆ ಬಂದಾಗ ಕಲಿತದ್ದನ್ನು ಎಲ್ಲ ಮರೆತು ಬಿಡ್ತಾರೆ ಎಂದು ದೂರು ಹೇಳುವ ಹೆತ್ತವರನ್ನು ನಾವು ನೋಡಿರುತ್ತೇವೆ. ಮಕ್ಕಳು ಕಲಿತದ್ದು ನೆನಪಿನಲ್ಲಿ ಉಳಿಯುವಂತೆ ಮಾಡಲು ಸಾಕಷ್ಟು ಕಸರತ್ತುಗಳನ್ನೂ ಅವರು ಮಾಡಿರುತ್ತಾರೆ. ಒಳ್ಳೆಯ ಶಾಲೆಗೆ ಕಳುಹಿಸುವುದು, ನಿಪುಣ ಅಧ್ಯಾಪಕರಿಂದ ಟ್ಯೂಷನ್ ಕೊಡಿಸುವುದರಿಂದ ಮಕ್ಕಳ ನೆನಪಿನ ಶಕ್ತಿ ಹೆಚ್ಚಾಗುತ್ತದೆ ಎಂಬ ಧೋರಣೆ ಹಲವರಲ್ಲಿದೆ. ಆದರೆ ಮಕ್ಕಳ ನೆನಪಿನ ಶಕ್ತಿ ಉತ್ತೇಜಿಸುವಲ್ಲಿ ಆಹಾರಗಳೂ ಪ್ರಧಾನ ಪಾತ್ರವಹಿಸುತ್ತವೆ. ಮಕ್ಕಳ ನೆನಪಿನ ಶಕ್ತಿ ಉತ್ತೇಜಿಸಲು ಪೋಷಕಾಂಶಯುಕ್ತ ಆಹಾರಗಳನ್ನು ನೀಡುವ ಜತೆಗೆ ಕಲಿಕೆಯ ರೀತಿ, ಕಲಿಸುವ ವಾತಾವರಣವೂ ಉತ್ತಮವಾಗಿರಬೇಕು.

ಮಕ್ಕಳ ನೆನಪಿನ ಶಕ್ತಿ ಉತ್ತೇಜಿಸುವ ಆಹಾರಗಳು ಇಂತಿವೆ

ಬೆಳಗ್ಗೆ ಫಲಾಹಾರವಾಗಿ ನೇಂದ್ರ ಬಾಳೆಹಣ್ಣು ತಿನ್ನಲು ಕೊಡಿ
ತೌಡು ಇರುವ ಧಾನ್ಯಗಳು, ಗೋಧಿಯಿಂದ ಮಾಡಿದ ಉಪಾಹಾರಗಳು, ಬ್ರೌನ್ ಬ್ರೆಡ್, ಕಾರ್ನ್‌ಫ್ಲೇಕ್ಸ್ ಮೊದಲಾದವುಗಳನ್ನು ಬೆಳಗ್ಗಿನ ಉಪಾಹಾರ (ಬ್ರೇಕ್ ಫಾಸ್ಟ್)ವಾಗಿ ನೀಡಿ
ಬೆಳಗ್ಗಿನ ಆಹಾರದೊಂದಿಗೆ ಸ್ವಲ್ಪ ಬಾದಾಮಿ, ಗೋಡಂಬಿ, ನೆಲಕಡಲೆ ಧಾನ್ಯಗಳನ್ನು ಮೊದಲಾದವುಗಳನ್ನು ನೀಡಬಹುದು
ಒಮೇಗಾ ತ್ರೀ ಫ್ಯಾಟಿ ಆ್ಯಸಿಡ್ ಇರುವ ಬೂತಾಯಿ, ಬಂಗುಡೆ ಮೀನುಗಳು, ಸೋಯಾಬೀನ್ ನೆನಪಿನ ಶಕ್ತಿ ವರ್ಧಿಸಲು ಸಹಾಯ ಮಾಡುತ್ತವೆ. ಮಧ್ಯಾಹ್ನದ ಊಟಕ್ಕೆ ಇವುಗಳನ್ನು ಸೇವಿಸಲು ನೀಡಿ.
ಟೊಮ್ಯಾಟೋ, ಗಿಣ್ಣು (ಚೀಸ್), ಆಲಿವ್ ಆಯಿಲ್, ಹಸಿರೆಲೆಗಳನ್ನು ಸೇರಿಸಿ ಸಲಾಡ್ ಮಾಡಿಕೊಡಿ
ವಿಟಾಮಿನ್ ಸಿ ಇರುವ ಪೇರಳೆ ಹಣ್ಣು, ನೆಲ್ಲಿಕಾಯಿ, ಮೂಸಂಬಿ, ಕಿತ್ತಳೆ ಮೊದಲಾದವುಗಳನ್ನು ತಿನ್ನುವುದು ಅಥವಾ ಜ್ಯೂಸ್ ಮಾಡಿ ಕುಡಿದರೆ ಒಳ್ಳೆಯದು
ಅನೇಕ ಪೋಷಕಾಂಶಗಳಿರುವ ಮೊಟ್ಟೆ (ಪ್ರೋಟೀನ್, ಜಿಂಕ್, ವಿಟಾಮಿನ್ ಎ,ಡಿ,ಇ, ಬಿ12 ) ಸೇವಿಸುವುದು ಆರೋಗ್ಯಕ್ಕೂ, ನೆನಪಿನ ಶಕ್ತಿಗೂ ಉತ್ತಮ.

ಆಹಾರದಲ್ಲಿ  ಹಸಿರೆಲೆ ತರಕಾರಿಗಳು, ಧಾನ್ಯಗಳು ಯಥೇಚ್ಛವಾಗಿರಲಿ
ಶುದ್ಧ ನೀರಿನ ಸೇವನೆಯಿಂದ ದೇಹ ಲವಲವಿಕೆಯಲ್ಲಿರುತ್ತದೆ. ಮಕ್ಕಳಿಗೆ ಹೆಚ್ಚು ನೀರು ಕುಡಿಯುವಂತೆ ಹೇಳಿ.

ಮೂಲ : ಕನ್ನಡಿಗ ವರ್ಲ್ಡ್

ಮಕ್ಕಳು ಚಟುವಟಿಕೆಯುಳ್ಳವರಾಗುವುದು ಹೇಗೆ?

ಪುಟ್ಟ ಮಕ್ಕಳ ಪ್ರತಿಯೊಂದು ಹೆಜ್ಜೆಯೂ ಚೆಂದವೇ. ಅದರಲ್ಲೂ ತುಂಟ ಮಕ್ಕಳು ಮತ್ತಷ್ಟು ಇಷ್ಟವಾಗುತ್ತಾರೆ. ಒಂದುಕ್ಷಣವೂ ಕೂರದೆ ಚಟುವಟಿಕೆಯಿಂದ ಓಡಾಡುವ ಮಕ್ಕಳನ್ನು ನೋಡಿದರೆ ಮುದ್ದಿಸಬೇಕು ಎನ್ನಿಸದಿರದು. ಆದರೆ ಕೆಲವು ಮಕ್ಕಳು ಹೆಚ್ಚು ಚಟುವಟಿಕೆಯಿಲ್ಲದೆ ಕೂರುವುದನ್ನು ಕಂಡರೆ ಯಾಕೆ ಇವರು ಎಲ್ಲ ಮಕ್ಕಳಂತಿಲ್ಲ ಎನ್ನಿಸಬಹುದು. ಇನ್ನೂ ಕೆಲವರು ಸದಾ ಅಳು ಮುಂಜಿಯಾಗಿರುವುದನ್ನು ಕಂಡರೆ ಕಿರಿಕಿರಿ ಅನ್ನಿಸಬಹುದು. ಮಕ್ಕಳ ಈ ಎಲ್ಲ ವರ್ತನೆಗಳಿಗೆ ಅವರ ಸುತ್ತಲಿನ ಪರಿಸರದ ಪ್ರಭಾವವೇ ಕಾರಣ ಎನ್ನುತ್ತವೆ ಸಂಶೋಧನೆಗಳು.

ನವಜಾತ ಶಿಶುವಿಗೆ ಪ್ರತಿಯೊಂದೂ ಹೊಸತೇ. ತನ್ನ ಸುತ್ತಲಿನ ವಾತಾವರಣದಲ್ಲಿ ನಡೆಯುವ ಪ್ರತಿಯೊಂದನ್ನೂ ಅದು ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ. ತನ್ನ ಸುತ್ತಲಿನ ಜನರ ವರ್ತನೆಗಳು ಹೇಗಿರುತ್ತವೆಯೋ ಹಾಗೆಯೇ ಅದೂ ವರ್ತಿಸಲು ತೊಡಗುತ್ತದೆ. ಆ ಮಗುವಿನ ಬಳಿ ಹೆಚ್ಚು ಹೆಚ್ಚು ಮಾತನಾಡಿದರೆ ಅದೂ ಮೆದುಳಿಗೆ ಹೆಚ್ಚು ಕೆಲಸ ಕೊಡಲು ಶುರುಮಾಡುತ್ತದೆ. ಸದಾ ಮಗುವನ್ನು ಒಬ್ಬರಲ್ಲ ಒಬ್ಬರು ಮಾತನಾಡಿಸುತ್ತಲೇ ಇರುವುದು, ಅರ್ಥವಾಗುತ್ತದೋ ಬಿಡುತ್ತದೋ ಅದಕ್ಕೆ ಕತೆ ಹೇಳುವುದು… ಇವನ್ನೆಲ್ಲ ಮಾಡುತ್ತಿದ್ದರೆ ಅದು ಬೇಗನೇ ಭಾಷೆಯನ್ನು ಕಲಿಯುತ್ತದೆ. ಮಕ್ಕಳು ಹೆಚ್ಚು ಕ್ರಿಯಾಶೀಲರಾಗುವುದಕ್ಕೆ ಇದು ಸಹಾಯಕವಾಗುತ್ತದೆ.

ಆದ್ದರಿಂದಲೇ ಚಿಕ್ಕ ಮಕ್ಕಳಿರುವ ಮನೆಗಳಲ್ಲಿ ಹಿರಿಯರು ತಮ್ಮ ವರ್ತನೆಯ ಬಗ್ಗೆ ನಿಗಾ ವಹಿಸಬೇಕೆಂದು ಎಲ್ಲ ಶಿಶುತಜ್ಞರೂ ಅಭಿಪ್ರಾಯ ಪಡುತ್ತಾರೆ. ತಂದೆ ಸಿಗರೇಟ್‌ ಸೇದುವುದನ್ನು ನೋಡಿದ ಪುಟ್ಟ ಮಗ ಸಿಗರೇಟಿನ ಚೂರನ್ನು ಬಾಯಲ್ಲಿಟ್ಟುಕೊಂಡು ಪ್ರಯೋಗಿಸಲು ಆರಂಭಿಸುತ್ತಾನೆ! ಮಗು ಮಾನಸಿಕವಾಗಿ ಆರೋಗ್ಯವಂತವಾಗಬೇಕಾದರೆ ಮನೆ ಜನರ ವರ್ತನೆ ಮಹತ್ವದ ಪಾತ್ರ ವಹಿಸುತ್ತದೆ. ಮನೆಜನರು ಸದಾ ಚಟುವಟಿಕೆಯಿಂದ, ಕ್ರಿಯಾಶೀಲರಾಗಿದ್ದರೆ ಮಗುವೂ ಹಾಗೆಯೇ ಆಗುತ್ತದೆ. ಅದರ ಆಹಾರ ಕ್ರಮಗಳು, ದಿನಚರಿ, ಬದುಕಿನ ಶೈಲಿ, ವೈಚಾರಿಕತೆ ಎಲ್ಲದರ ಮೇಲೂ ಸುತ್ತಮುತ್ತಲಿನ ಪರಿಸರ ಪ್ರಮುಖ ಪಾತ್ರವಹಿಸುತ್ತದೆ.

ಶಿಶುವಿನ ಎದುರು ಜೋರಾಗಿ ಮಾತನಾಡುತ್ತಿದ್ದರೆ ಮಗು ಬೇಗನೇ ಭಾಷೆಯನ್ನು ಕಲಿಯುತ್ತದೆಯಂತೆ. ಅದರ ವೈಚಾರಿಕತೆಯಲ್ಲೂ ಬಹುಬೇಗನೇ ಪ್ರಬುದ್ಧತೆ ಮೊಳೆಯುತ್ತದೆಯಂತೆ. ಆದ್ದರಿಂದ ಪುಟ್ಟ ಮಗುವನ್ನು ಅದರ ಪಾಡಿಗೆ ಬಿಟ್ಟು ಬಿಡದೆ ಸದಾ ಅದರೊಂದಿಗೆ ಒಬ್ಬರಲ್ಲಾ ಒಬ್ಬರು ಒಡನಾಡುತ್ತಿದ್ದರೆ ಅದು ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಂತವಾಗುತ್ತದೆ.

ಮೂಲ: ವಿಕ್ರಮ

ಮಕ್ಕಳ ಊಟದ್ದೇ ಚಿಂತೆಯೇ?

ನನ್ನ ಮಗ ಸರಿಯಾಗಿ ಊಟ ಮಾಡುವುದಿಲ್ಲ, ನನ್ನ ಮಗಳಿಗೆ ಆಟವೊಂದಿದ್ದರೆ ಹೊಟ್ಟೆಯ ನೆನಪೇ ಇರುವುದಿಲ್ಲ ಎಂದೆಲ್ಲ ತಂದೆ-ತಾಯಿಗಳು ಪುಟ್ಟ ಮಕ್ಕಳನ್ನು ದೂರುವುದನ್ನು ಕಂಡಿದ್ದೇವೆ. ಪುಟ್ಟ ಮಕ್ಕಳು ಸರಿಯಾಗಿ ತಿನ್ನಬೇಕೆಂದು ಅವರಿಗೆ ಹಸಿವಾಗುವುದಕ್ಕೆ ಏನೇನೋ ಔಷಧಗಳನ್ನು ತಂದು ನೀಡುವವರಿದ್ದಾರೆ. ಅಲ್ಲದೆ ಅವರ ತೂಕ ಹೆಚ್ಚಬೇಕೆಂದು ಯಾವ್ಯಾವುದೋ ದುಬಾರಿ ಆಹಾರ ಪದಾರ್ಥಗಳನ್ನೆಲ್ಲ ತಂದು ಒತ್ತಾಯದಿಂದಲೇ ತಿನ್ನಿಸುವುದನ್ನು ಕಾಣುತ್ತೇವೆ. ಆದರೆ ಮಕ್ಕಳು ಊಟ ಮಾಡುವುದಿಲ್ಲ ಎಂದು ತಂದೆ-ತಾಯಿಗಳು ತೀರಾ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎನ್ನುತ್ತದೆ ಇತ್ತೀಚಿನ ಸಂಶೋಧನೆ.
ಮಕ್ಕಳಿಗೆ ತಮಗೆ ಎಷ್ಟು ಆಹಾರದ ಅಗತ್ಯವಿದೆ ಎಂಬುದು ತಿಳಿದಿರುತ್ತದೆ ಯಂತೆ. ಆದ್ದರಿಂದ ಮಕ್ಕಳಿಗೆ ಒತ್ತಾಯ ಮಾಡಿ ತಿನ್ನಿಸುವ ಅಗತ್ಯವಿಲ್ಲ. ತನ್ನ ದೇಹಕ್ಕೆ ಎಷ್ಟು ಆಹಾರ ಅಗತ್ಯವಿದೆ, ಎಷ್ಟು ಆಹಾರ ತಿಂದರೆ ತನಗೆ ಹೊಟ್ಟೆ ತುಂಬುತ್ತದೆ ಎಂಬುದನ್ನು ದೊಡ್ಡವರಿಗಿಂತ ಚೆನ್ನಾಗಿಯೇ ಮಕ್ಕಳು ಗ್ರಹಿಸಬಲ್ಲರಂತೆ. ಕೆಲವರಿಗೆ ಮಕ್ಕಳು ಚೆನ್ನಾಗಿ ಕಾಣಬೇಕೆಂಬ ಆಸೆ. ಅದಕ್ಕೆಂದೇ ಇಂದು ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ತರಹೇವಾರಿ ತಿನಿಸುಗಳನ್ನು ನೀಡುವುದನ್ನು ನೋಡಿದ್ದೇವೆ. ಅದರಲ್ಲೂ ಮಕ್ಕಳ ಎತ್ತರ ಹೆಚ್ಚಿಸುತ್ತದೆ, ತೂಕ ಹೆಚ್ಚಿಸುತ್ತದೆ ಎಂಬ ಹಲವಾರು ಜಾಹೀರಾತುಗಳನ್ನು ನೋಡಿ ಮಕ್ಕಳಿಗೆ ಇಷ್ಟವಿಲ್ಲದಿದ್ದರೂ ಏನೇನನ್ನೋ ತಿನ್ನಿಸುವುದನ್ನು ನೋಡುತ್ತೇವೆ. ಆದರೆ ಈ ಎಲ್ಲವುಗಳಲ್ಲಿ ನಿಜಕ್ಕೂ ಪೋಷಕಾಂಶಗಳಿರುತ್ತವೆಯೇ?
ಹೀಗೆ ಮಕ್ಕಳ ತೂಕ ಹೆಚ್ಚಬೇಕೆಂದು ನೀಡುವ ಆಹಾರಗಳಿಂದ ಬೊಜ್ಜಿನ ಸಮಸ್ಯೆ ಆರಂಭವಾಗಬಹುದು. ಅದು ಮುಂದೆ ಮಕ್ಕಳ ಭವಿಷ್ಯಕ್ಕೂ ಸಮಸ್ಯೆಯನ್ನುಂಟುಮಾಡಬಹುದು.
ಮಕ್ಕಳು ಬೇಕರಿ ತಿನಿಸುಗಳನ್ನೋ, ಕರಿದ ತಿನಿಸುಗಳನ್ನೋ ತಿನ್ನಬೇಕೆಂದು ಆಸೆ ಪಟ್ಟರೆ ಹೆಚ್ಚು ಹೆಚ್ಚು ಕೊಡುವುದಕ್ಕೆ ಹೋಗಬೇಡಿ. ಅವಕ್ಕೆ ಪೌಷ್ಟಿಕಾಂಶಯುಕ್ತ, ಉತ್ತಮ ಆಹಾರಗಳನ್ನೇ ನೀಡಿ. ಮಕ್ಕಳ ನಾಲಿಗೆಗೆ ಬೇಕರಿ ತಿನಿಸುಗಳ ರುಚಿ ಹತ್ತಿದರೆ ಮನೆ ತಿನಿಸುಗಳ ಬಗ್ಗೆ ಅವಕ್ಕೆ ತಾತ್ಸಾರ ಹುಟ್ಟುತ್ತದೆ. ಬೇಕರಿ ತಿನಿಸುಗಳಿಂದಾಗಿ ಮಕ್ಕಳ ಆರೋಗ್ಯ ಹದಗೆಡುತ್ತದೆ. ಮಕ್ಕಳಿಗೆ ಊಟ ಮಾಡಿಸುವಾಗ ಅವರ ಗಮನವನ್ನು ಊಟದ ತಟ್ಟೆಗೆ ಬದಲಾಗಿ ಬೇರೆಡೆ ಹರಿಯಿಸುವಂತೆ ಮಾತನಾಡುತ್ತಿರಿ. ಆಗ ಮಕ್ಕಳು ಹೆಚ್ಚು ಊಟಮಾಡುತ್ತಾರೆ. 

ಇಷ್ಟು ಊಟ ಮಾಡಲೇಬೇಕು ಎಂದೆಲ್ಲ ಅವರ ಮೇಲೆ ಒತ್ತಡ ಹೇರಲು ಹೋಗಬೇಡಿ. ಮಕ್ಕಳು ಸ್ವೇಚ್ಛೆಯಿಂದ ತಮಗೆ ಇಷ್ಟ ಬಂದಷ್ಟು ಊಟ ಮಾಡಲಿ. ಅವರ ಗಮನವನ್ನು ಬೇರೆಡೆಗೆ ಸೆಳೆದು, ಕತೆ ಹೇಳುತ್ತ ಊಟಮಾಡಿಸಿ. ತಾನು ಊಟ ಮಾಡುತ್ತಿದ್ದೇನೆಂಬುದೇ ಮರೆತು ಅವರು ನಿಮ್ಮ ಮಾತಿನಲ್ಲಿ ತನ್ಮಯರಾಗಿ ಅರಿವಿಲ್ಲದೆ ಊಟಮಾಡುತ್ತಾರೆ. 
ತಮ್ಮ ಅಗತ್ಯಕ್ಕೆ ಬೇಕಷ್ಟು ತಿನ್ನುವಷ್ಟು ಬುದ್ಧಿವಂತಿಕೆ ಮಕ್ಕಳಿಗಿರುವುದರಿಂದ ವೃಥಾ ಅವರ ಮೇಲೆ ಒತ್ತಡ ಹೇರುವುದು ತರವಲ್ಲ ಎನ್ನುತ್ತಾರೆ ಮಕ್ಕಳ ತಜ್ಞರು.

ಮೂಲ: ವಿಕ್ರಮ

ಭೂಮಿಯ ಮೇಲೆ ತಾಪಮಾನ ದಿನೇ ದಿನೇ ಹೆಚ್ಚುತ್ತಲೇ ಇರುವುದರಿಂದ ಬಿಸಿಲಿಂದ ಪಾರಾಗುವುದು ಹೇಗೆ ಎಂಬುದೇ ಬಹುತೇಕ ಎಲ್ಲರ ಸಮಸ್ಯೆಯಾಗಿದೆ. ಫ್ಯಾನ್, ಎಸಿ ಯಾವುದೂ ಸೆಖೆಯ ಧಗೆಯನ್ನು ತಣಿಸುವುದಕ್ಕೆ ಸಫಲವಾಗದೆ ಎಲ್ಲಾದರೂ ತಣ್ಣೀರ ಕೊಳದಲ್ಲಿ ಮುಳುಗೇಳೋಣ ಎಂಬಷ್ಟರ ಮಟ್ಟಿಗೆ ಬೇಸಿಗೆ ಧಗಧಗಿಸುತ್ತಿದೆ. ಚರ್ಮದ ಆರೋಗ್ಯ ಒಂದೆಡೆಯಾದರೆ ಸಂಪೂರ್ಣ ದೇಹದ ಆರೋಗ್ಯವೂ ಹದಗೆಡಬಹುದಾದ ಸಾಧ್ಯತೆ ಈ ಸಮಯದಲ್ಲಿ ಹೆಚ್ಚು. ದೊಡ್ಡವರಾದರೆ ಹೇಗೋ ಸಹಿಸಿಕೊಳ್ಳಬಹುದು. ಆದರೆ ಮಕ್ಕಳನ್ನು ಸೆಖೆಯಿಂದ ಪಾರುಮಾಡುವುದು ಹೇಗೆ? ಬೇಸಿಗೆಯಲ್ಲಿ ದೇಹಾರೋಗ್ಯ ಸ್ವಸ್ಥವಾಗಿರುವಂತೆ ಎಚ್ಚರಿಕೆ ವಹಿಸಲು ಅವರಲ್ಲಿ ಜಾಗೃತಿ ಮೂಡಿಸುವುದು ಹೇಗೆ? ನಮ್ಮ ಮಕ್ಕಳ ನಿಗಾ ನಾವೇ ಮಾಡಬೇಕು, ಅದಿಲ್ಲವೆಂದರೆ ಅವರ ನಿಗಾ ಅವರೇ ನೋಡಿಕೊಳ್ಳುವಂತೆ ಅವರಿಗೆ ಅಭ್ಯಾಸ ಮಾಡಿಸಬೇಕು.

  • ನಿಮ್ಮ ಮಕ್ಕಳು ಎಲ್ಲಿಯೇ ಹೊರಡಲಿ. ಅವರ ಕೈಯಲ್ಲಿ ಶುದ್ಧ ನೀರಿನ ಬಾಟಲಿಯನ್ನು ಕೊಡುವುದಕ್ಕೆ ಮರೆಯಬೇಡಿ. ಏಕೆಂದರೆ ದಾಹವಾದಾಗ ಮಕ್ಕಳು ಯಾವ ನೀರನ್ನು ಬೇಕಿದ್ದರೂ ಸೇವಿಸಿಬಿಡಬಹುದು. ಇದರಿಂದಾಗಿ ಅವರ ಆರೋಗ್ಯ ಹದಗೆಡುವ ಸಂದರ್ಭ ಜಾಸ್ತಿ.
  • ಬಾಯಾರಿಕೆಯಾಗಿದೆಯೆಂದು ಪೆಪ್ಸಿ, ಕೋಲಾ ಇತ್ಯಾದಿ ತಂಪು ಪಾನಿಯಗಳನ್ನು ಸೇವಿಸು ವುದನ್ನು ಬಿಟ್ಟು, ಹಣ್ಣಿನ ರಸ, ಲಿಂಬು ಶರಬತ್ತು ಸೇವಿಸುವುದಕ್ಕೆ ಹೇಳಿ.
  • ಅವರು ತೊಡುವ ಬಟ್ಟೆ ಆದಷ್ಟು ತೆಳು ಬಣ್ಣದ್ದಾಗಿರಲಿ. ಗಾಢ ಬಣ್ಣದ ಬಟ್ಟೆಗಳು ಬಿಸಿಲನ್ನು ಹೀರಿಕೊಂಡು ಶಾಖವನ್ನು ಬಿಡುಗಡೆ ಮಾಡುವುದರಿಂದ ಅಂಥ ಬಟ್ಟೆಗಳು ಮತ್ತಷ್ಟು ಧಗೆಯನ್ನು ಹೆಚ್ಚಿಸುತ್ತವೆ.
  • ಮಧ್ಯಾಹ್ನದ ಉರಿಬಿಸಿಲಿನಲ್ಲಿ ಆಡುವುದಕ್ಕೆ ಕಳಿಸಬೇಡಿ. ಇದು ಮಕ್ಕಳ ಮೃದು ಚರ್ಮವನ್ನು ಸುಡಲೂಬಹುದು.
  • ಯಾವುದೇ ಕಾರಣಕ್ಕೂ ಜಂಕ್‌ಫುಡ್‌ಗಳನ್ನು ಕೊಡಲೇ ಬೇಡಿ. ರಸ್ತೆ ಬದಿಯ ತಿನಿಸುಗಳು, ಹೊಟೇಲ್ ತಿಂಡಿಗಳನ್ನು ಆದಷ್ಟು ಕಡಿಮೆ ಮಾಡಿ. ಮನೆಯಲ್ಲಿ ತಯಾರಿಸಿದ ಆರೋಗ್ಯಕರ ತಿನುಸುಗಳನ್ನು ಮಾತ್ರ ಕೊಡಿ.
  • ಬೇಸಿಗೆಯ ಸಮಯದಲ್ಲಿ ಮಕ್ಕಳಿಗೆ ಊಟ ಸೇರುವುದಿಲ್ಲ. ಆದ್ದರಿಂದ ದ್ರವರೂಪದ ಆಹಾರವನ್ನಾದರೂ ಅವರು ಸೇವಿಸುತ್ತಿರುವಂತೆ ನೋಡಿಕೊಳ್ಳಿ. ಹೆಚ್ಚು ಹೆಚ್ಚು ನೀರನ್ನು ಸೇವಿಸುವುದಕ್ಕೆ ಅಭ್ಯಾಸ ಮಾಡಿಸಿ.
  • ಮಜ್ಜಿಗೆಯ ಸೇವನೆ ಬಹಳ ಒಳ್ಳೆಯದು. ಅಲ್ಲದೆ, ದಿನವೂ ಮಕ್ಕಳ ತಲೆಗೆ ಎಣ್ಣೆಯನ್ನು ಹಚ್ಚುತ್ತಿರಿ. ಇದು ದೇಹದ ಉಷ್ಣತೆಯನ್ನು ಸಮಸ್ಥಿತಿಯಲ್ಲಿಡಲು ಸಹಕಾರಿಯಾಗುತ್ತದೆ.
  • ಒಂದೆರಡು ದಿನ ಇಂಥ ಉತ್ತಮ ಅಭ್ಯಾಸಗಳನ್ನು ಕಲಿಸಿದರೆ, ಮೂರನೇ ದಿನದಿಂದ ಇವನ್ನೆಲ್ಲ ಅವರೇ ಪಾಲಿಸಲು ಶುರುಮಾಡುತ್ತಾರೆ. ಅವರ ಆರೋಗ್ಯವನ್ನು ಅವರೇ ಕಾಪಾಡಿಕೊಳ್ಳುವಂಥ ಮನಸ್ಥಿತಿಯನ್ನು ಬೆಳೆಸುವುದು ಪಾಲಕರ ಕರ್ತವ್ಯವೂ ಹೌದು.

- ಶಶಿ

ಮೂಲ: ವಿಕ್ರಮ

ನೆನಪಿನ ಶಕ್ತಿ ಹೆಚ್ಚಿಸುವ ಆಹಾರ

ಶಾಲೆಯಲ್ಲಿ ಏನು ಓದಿದ್ರೂ ನೆನಪಿನಲ್ಲಿ ಉಳಿಯಲ್ಲ. ಟ್ಯೂಷನ್ ಕ್ಲಾಸಿಗೆ ಕಳಿಸಿದ್ರೂ ಅಷ್ಟೇ.. ಮನೆಗೆ ಬಂದಾಗ ಕಲಿತದ್ದನ್ನು ಎಲ್ಲ ಮರೆತು ಬಿಡ್ತಾರೆ ಎಂದು ದೂರು ಹೇಳುವ ಹೆತ್ತವರನ್ನು ನಾವು ನೋಡಿರುತ್ತೇವೆ. ಮಕ್ಕಳು ಕಲಿತದ್ದು ನೆನಪಿನಲ್ಲಿ ಉಳಿಯುವಂತೆ ಮಾಡಲು ಸಾಕಷ್ಟು ಕಸರತ್ತುಗಳನ್ನೂ ಅವರು ಮಾಡಿರುತ್ತಾರೆ. ಒಳ್ಳೆಯ ಶಾಲೆಗೆ ಕಳುಹಿಸುವುದು, ನಿಪುಣ ಅಧ್ಯಾಪಕರಿಂದ ಟ್ಯೂಷನ್ ಕೊಡಿಸುವುದರಿಂದ ಮಕ್ಕಳ ನೆನಪಿನ ಶಕ್ತಿ ಹೆಚ್ಚಾಗುತ್ತದೆ ಎಂಬ ಧೋರಣೆ ಹಲವರಲ್ಲಿದೆ. ಆದರೆ ಮಕ್ಕಳ ನೆನಪಿನ ಶಕ್ತಿ ಉತ್ತೇಜಿಸುವಲ್ಲಿ ಆಹಾರಗಳೂ ಪ್ರಧಾನ ಪಾತ್ರವಹಿಸುತ್ತವೆ. ಮಕ್ಕಳ ನೆನಪಿನ ಶಕ್ತಿ ಉತ್ತೇಜಿಸಲು ಪೋಷಕಾಂಶಯುಕ್ತ ಆಹಾರಗಳನ್ನು ನೀಡುವ ಜತೆಗೆ ಕಲಿಕೆಯ ರೀತಿ, ಕಲಿಸುವ ವಾತಾವರಣವೂ ಉತ್ತಮವಾಗಿರಬೇಕು.

ಮಕ್ಕಳ ನೆನಪಿನ ಶಕ್ತಿ ಉತ್ತೇಜಿಸುವ ಆಹಾರಗಳು ಇಂತಿವೆ

  • ಬೆಳಗ್ಗೆ ಫಲಾಹಾರವಾಗಿ ನೇಂದ್ರ ಬಾಳೆಹಣ್ಣು ತಿನ್ನಲು ಕೊಡಿ
  • ತೌಡು ಇರುವ ಧಾನ್ಯಗಳು, ಗೋಧಿಯಿಂದ ಮಾಡಿದ ಉಪಾಹಾರಗಳು, ಬ್ರೌನ್ ಬ್ರೆಡ್, ಕಾರ್ನ್‌ಫ್ಲೇಕ್ಸ್ ಮೊದಲಾದವುಗಳನ್ನು ಬೆಳಗ್ಗಿನ ಉಪಾಹಾರ (ಬ್ರೇಕ್ ಫಾಸ್ಟ್)ವಾಗಿ ನೀಡಿ
  • ಬೆಳಗ್ಗಿನ ಆಹಾರದೊಂದಿಗೆ ಸ್ವಲ್ಪ ಬಾದಾಮಿ, ಗೋಡಂಬಿ, ನೆಲಕಡಲೆ ಧಾನ್ಯಗಳನ್ನು ಮೊದಲಾದವುಗಳನ್ನು ನೀಡಬಹುದು
  • ಒಮೇಗಾ ತ್ರೀ ಫ್ಯಾಟಿ ಆ್ಯಸಿಡ್ ಇರುವ ಬೂತಾಯಿ, ಬಂಗುಡೆ ಮೀನುಗಳು, ಸೋಯಾಬೀನ್ ನೆನಪಿನ ಶಕ್ತಿ ವರ್ಧಿಸಲು ಸಹಾಯ ಮಾಡುತ್ತವೆ. ಮಧ್ಯಾಹ್ನದ ಊಟಕ್ಕೆ ಇವುಗಳನ್ನು ಸೇವಿಸಲು ನೀಡಿ
  • ಟೊಮ್ಯಾಟೋ, ಗಿಣ್ಣು (ಚೀಸ್), ಆಲಿವ್ ಆಯಿಲ್, ಹಸಿರೆಲೆಗಳನ್ನು ಸೇರಿಸಿ ಸಲಾಡ್ ಮಾಡಿಕೊಡಿ
  • · ವಿಟಾಮಿನ್ ಸಿ ಇರುವ ಪೇರಳೆ ಹಣ್ಣು, ನೆಲ್ಲಿಕಾಯಿ, ಮೂಸಂಬಿ, ಕಿತ್ತಳೆ ಮೊದಲಾದವುಗಳನ್ನು ತಿನ್ನುವುದು ಅಥವಾ ಜ್ಯೂಸ್ ಮಾಡಿ ಕುಡಿದರೆ ಒಳ್ಳೆಯದು
  • ಅನೇಕ ಪೋಷಕಾಂಶಗಳಿರುವ ಮೊಟ್ಟೆ (ಪ್ರೋಟೀನ್, ಜಿಂಕ್, ವಿಟಾಮಿನ್ ಎ,ಡಿ,ಇ, ಬಿ12 ) ಸೇವಿಸುವುದು ಆರೋಗ್ಯಕ್ಕೂ, ನೆನಪಿನ ಶಕ್ತಿಗೂ ಉತ್ತಮ
  • ಆಹಾರದಲ್ಲಿ ಹಸಿರೆಲೆ ತರಕಾರಿಗಳು, ಧಾನ್ಯಗಳು ಯಥೇಚ್ಛವಾಗಿರಲಿ
  • ಶುದ್ಧ ನೀರಿನ ಸೇವನೆಯಿಂದ ದೇಹ ಲವಲವಿಕೆಯಲ್ಲಿರುತ್ತದೆ. ಮಕ್ಕಳಿಗೆ ಹೆಚ್ಚು ನೀರು ಕುಡಿಯುವಂತೆ ಹೇಳಿ

ಮೂಲ: ರಶ್ಮಿ  ಕಾಸರಗೋಡು

ಮೊಗ್ಗಿನೆದೆಯ ಮುಚ್ಚಲು

ಓಯ್‌, ಮುಖ ಇರೋದು ಭಜದ ಮೇಲೆ. ಕೆಳಗಲ್ಲ ಎಂದುಬಿಡಬೇಕು ಎನಿಸಿದ್ದಿದೆ. ಹಾಗೂ ಹೀಗೂ ಮಾಡಿ ಒಮ್ಮೆ ಅತ್ತ ಕಣ್ಣು ಹಾಯಿಸಿಯೇ ಬಿಡುತ್ತಾರೆ ಜನ. ನಮ್ಮರಿವಿಗೆ ಬರದಂತೆ ಇಲ್ಲವೇ ನೇರವಾಗೇ ನೋಡುವ ದಾರ್ಷ್ಟ್ಯ ತೋರುತ್ತಾರೆ. ಇದನ್ನೆಲ್ಲ ನಮ್ಮ ಮಗಳು ಹೇಗೆ ನಿಭಾಯಿಸುವಳೊ ಎಂಬ ಆತಂಕ ಬೆಳೆದ ಮಗಳ ತಾಯಿಯದು.

ಹನ್ನೊಂದು ವರ್ಷದ ಹುಡುಗಿ ಓಣಿಯ ಅಕ್ಕಪಕ್ಕದ  ಹುಡುಗಿಯರೊಡನೆ ಮುಟ್ಟಾಟ ಆಡುತ್ತ ಇದ್ದ ದೃಶ್ಯ ನೋಡುವವರಿಗೆ ಬಾಲ್ಯ ನೆನಪಿಸುವಂತಿತ್ತು. ಅವರಮ್ಮ ಒತ್ತಾಯಪೂರ್ವಕವಾಗಿ ಹಾಕಿ ಕಳಿಸಿದ ಪಾರದರ್ಶಕ ದುಪಟ್ಟಾ ತುಂಡು ಆಡುವಾಗ ಎಲ್ಲೋ ಹಾರಾಡುತ್ತಿತ್ತು. ಕಡೆಗೆ ಕಿರಿಕಿರಿ ಎನಿಸಿದಂತೆ ಓರಗೆಯವರು ಹಾಕಿಲ್ಲ ತಾನೊಬ್ಬಳೇ ಗುಂಪಿನಲ್ಲಿ ಬೇರೆ ಎನಿಸತೊಡಗಿತೊ ಅವಳು ಅದನ್ನು ಕೆಲವೇ ನಿಮಿಷಗಳಲ್ಲಿ ಅವರಮ್ಮನ ಕೈಗೇ ರವಾನಿಸಿಬಂದಳು. ‘ನೋಡಿ,ಇವಳಿಗೆ ಅರ್ಥವೇ ಆಗುವುದಿಲ್ಲ. ಪಾಪ ಚಿಕ್ಕವಳು, ಆದರೇನು ಸ್ವಲ್ಪ ನಮ್ಮ ಮನೆತನದ ಇತರ ಹೆಣ್ಮಕ್ಕಳಂತೆ ಇವಳು ದಪ್ಪ ಆಗಿದ್ದಾಳೆ. ಹೇಗೆ ಹೇಳಿ ಒಪ್ಪಿಸಬೇಕೊ’ ಎಂದು ಪೇಚಾಡಿದರು.

ಮಕ್ಕಳ ವಯಸ್ಸಲ್ಲ ಮುಖ್ಯ, ಅವರ ಬೆಳವಣಿಗೆ. ಅವರ ವಯಸ್ಸಿನ ಇತರರಿಗಿಂತ ಕೆಲವು ಮಕ್ಕಳು ಆರೋಗ್ಯಕರವಾಗಿ ತುಸು ಮೈದುಂಬಿಕೊಂಡು ಬೆಳೆಯುತ್ತಾರೆ. ಇನ್ನೂ ನಾಲ್ಕನೇ ಕ್ಲಾಸು ಎಂದು ಅಲಕ್ಷಿಸುವಂತಿಲ್ಲ. ತಾಯಿಯಾದವಳಿಗೆ ಹೊರ ಜಗತ್ತಿನಲ್ಲಿ ಅವಳ ಅಸ್ತಿತ್ವ ಸೂಕ್ತವಾಗಿ ನೆಲೆಗೊಳ್ಳುವುದೇ ಉದ್ದೇಶ. ಅದಕ್ಕಾಗಿ ಆಕೆ ಮಗಳ ನೆರವಿಗೆ ಇದ್ದೇ ಇರುತ್ತಾಳೆ. ಕೆಲವನ್ನು ನೇರವಾಗಿ ಕೆಲವನ್ನು ಪರೋಕ್ಷವಾಗಿ ಅವಳ ಗಮನಕ್ಕೆ ತಂದು ಅವಳಲ್ಲಿ ಸರಿ, ತಪ್ಪುಗಳ ವಿವೇಚನೆ ಮೂಡಿಸಲು ಸದಾ ಹೆಣಗುತ್ತಾಳೆ.

ಎಳೆಯ ಮನ ಮಗುವಿನದು. ಅವಮಾನವೂ ಎನಿಸಕೂಡದು, ಇದೇನಪ್ಪಾ  ನನಗೇ ಹೀಗಾಯಿತೆ ಎಂಬ ಚಿಂತೆಯೂ ಕಾಡಬಾರದು, ನಾಚಿಕೆಯೂ ಅವಳ ವ್ಯಕ್ತಿತ್ವಕ್ಕೆ ಸೊಬಗು ನೀಡುವಂತಿರಬೇಕೆ ಹೊರತು ಅದು ಅವಳಲ್ಲಿ ಕೀಳರಿಮೆ ಮೂಡಿಸಿ ತಲೆತಗ್ಗಿಸಿ ನಡೆಯುವಂತೆ ಮಾಡಬಾರದು. ಎದೆಯುಬ್ಬಿಸಿ ನಡೆದರೂ ಸರಿ, ‘ಎದೆ ಸೆಟೆಸಿ ಹೇಗೆ ನಡೆಯುತ್ತೆ ನೋಡು’ ಎಂಬ ಅವಳ ಬಗೆಗಿನ ಕುಹಕದ ಮಾತು ತಾಯಿಯ ಕಿವಿ ತಾಕಬಾರದು, ಬದಲಾಗುವ ದೇಹದ ರೂಪದತ್ತಲೇ ಪದೇ ಪದೇ ಲಕ್ಷ್ಯ ಹೋಗುತ್ತ ಕುಗ್ಗಿದ ದೇಹಭಂಗಿ, ಎಲ್ಲಿ ಬದಲಾದ ರೂಪವನ್ನು ಜನ ನೋಡುವರೊ ಅದರಲ್ಲೂ ಅಮ್ಮ ಹೇಳುವ ಹಾಗೆ ಗಂಡಸರು ನೋಡುವರೊ ಎಂದೇ ಯೋಚಿಸುತ್ತ ಹಿಡಿಯಾದ ಅನುಭವಕ್ಕೆ ಒಳಗಾಗಬಾರದು ಮಗಳು. ನೇರ ಭುಜದ ಹೆಮ್ಮೆಯ ಆತ್ಮವಿಶ್ವಾಸದ ನಡಿಗೆ ಅವಳದಾಗಿರಬೇಕು... ಜೀವನದುದ್ದಕ್ಕೂ. ಇದೇ ಎಲ್ಲ ತಾಯಂದಿರ ಆಶಯ.

ಮೊದಲಿನಂತೆ ಆಡುವುದು ಬೇಡ, ಸ್ವಲ್ಪ ಮೈಮೇಲೆ ಗಮನ ಇರಲಿ ಅಂತೆಲ್ಲ ಹೇಳೋದು ಗೊಣಗಾಟ ಎನಿಸುವ ಮೊದಲು ಅವಳನ್ನು ಬೆಳೆಯಲು ಬಿಡಿ, ನೈಸರ್ಗಿಕವಾಗಿ. ಸಹಜವಾದ ಬದಲಾವಣೆಗಳಿಗೆ ಸಹಜವಾಗೇ ಸ್ಪಂದಿಸಿ, ಅವಳೂ ದೇಹದ ಬದಲಾವಣೆಗೆ ತಕ್ಕಂತೆ ಸೂಕ್ತವಾಗಿ ಬದಲಾಗಲು ಅವಕಾಶ ಇರಲಿ. ಆಟೋಟಕ್ಕೆ ಕಡಿವಾಣ ಬೇಕಿಲ್ಲ.

ಹಿಂಜರಿಕೆ ಮನೆಮಾಡೀತು. ಬಿಡುಬೀಸಾಗಿ ಮೊದಲಿನ ಎಲ್ಲ ಆಟಗಳನ್ನೂ ಆಡುತ್ತಲೇ... ಇನ್ನೂ ಹೇಳಬೇಕೆಂದರೆ ಜಿಗಿಯುತ್ತ ಬೆಳೆಯಲಿ ಬಿಡಿ.  ಆಟ, ಓಟ, ಜಿಗಿದಾಟ ಯಾವುದೂ ನಿಲ್ಲಬೇಕಿಲ್ಲ, ಆದರೆ ದೇಹಾಕಾರಕ್ಕೆ ಹೊಂದುವಂತೆ ಸೂಕ್ತ ಒಳ ಉಡುಪು ಧರಿಸಿ ಹೆಮ್ಮೆಯಿಂದ ನಡೆದಾಡಲಿ. ಹಾಕಿಕೊಳ್ಳಲು ನಾಚಿಕೆ ಪಡಬೇಕಿಲ್ಲ, ಕಿರಿಕಿರಿ ಆಗುತ್ತದೆಯೆ? ಆದರೂ ರೂಢಿ ಮಾಡಿಕೋ ಎಂಬ ಮೂಲಪಾಠ ತಿಳಿ ಹೇಳಿ.

ಮಕ್ಕಳ ತಜ್ಞೆ ಡಾ. ಪ್ರೀತಿ ತೊರ್ಕೆ, ‘ದೇಹದಲ್ಲಿ ಬದಲಾವಣೆಯ ಆರಂಭಿಕ ದಿನಗಳಲ್ಲಿ ಬ್ರಾ ಧರಿಸುವ ಅಗತ್ಯವೇ ಬೀಳುವುದಿಲ್ಲ ಟಿಶರ್ಟ್‌ಗಳಲ್ಲಿ ಬದಲಾವಣೆಯ ಆರಂಭ ಗೋಚರಿಸಬಹುದು. ಸುಮಾರು ಹತ್ತನೇ ವಯಸ್ಸಿನಿಂದ ಸ್ಲಿಪ್‌ ಹಾಕಬಹುದು. ಇನ್ನೂ ಬೆಳವಣಿಗೆಯ ಹಂತದಲ್ಲಿ ಏರಿಯೋಲ ಸುತ್ತ ಕೊಬ್ಬು ಸಂಗ್ರಹವಾಗುತ್ತ ಹೋದಂತೆ ಸ್ಲಿಪ್‌ನ ಕೊರಳಿನಿಂದ ಎಂಟ್ಹತ್ತು ಇಂಚು ಕೆಳಗೆ ಹೆಚ್ಚಿನ ಮರೆ ಅಗತ್ಯ ಎನಿಸುತ್ತದೆ. ಆಗ ಪಕ್ಕೆಲುಬುಗಳವರೆಗೂ ಇರುವ ಸ್ಪೋರ್ಟ್ಸ್ ಬ್ರಾ ಬಳಸಬಹುದು. ಆಟಕ್ಕೂ ಅಡ್ಡಿಯಾಗುವುದಿಲ್ಲ’ ಎನ್ನುತ್ತಾರೆ ಅವರು.

ಈಗ ಸ್ಲಿಪ್‌ಗೆ ಅಂಟಿಕೊಂಡೇ ಇನ್ನೊಂದು ಪದರದ ಅಂಥದೇ ಬಟ್ಟೆ ಎದೆಯ ಭಾಗಕ್ಕೆ ರಕ್ಷಣೆ ಕೊಡಲೆಂದು ಇರುತ್ತದೆ. ಕೆಲವು ಸ್ಲಿಪ್‌ಗಳ ಕೊರಳಗುಂಟ ಎದೆಯ ಮೇಲ್ಭಾಗಕ್ಕೆ ಸಡಿಲವಾದ ಎಲಾಸ್ಟಿಕ್‌ ಕೂಡ ಇರುತ್ತದೆ. ಹುಡುಗಿಯರು ಮುಂದೆ ಬಾಗಿದರೂ ಡ್ರೆಸ್‌ನೊಳಗಿನಿಂದ ಏನೂ ಕಾಣಿಸದು. ಎಲಾಸ್ಟಿಕ್‌ ಎದೆಗಂಟಿಕೊಂಡಿರುತ್ತದೆ. ಸ್ಲಿಪ್‌ನ ಹಾಗೇ ಇರುವ, ಆದರೆ ಎದೆಯ ಭಾಗ ಮಾತ್ರ ಮುಚ್ಚುವಂತಿರುವ ಕಡಿಮೆ ಉದ್ದದ ಸ್ಲಿಪ್‌ಗಳು ಲಭ್ಯ. ಇವುಗಳ ಕೆಳ ಅಂಚಿನುದ್ದಕ್ಕೂ ಹೌದೋ ಅಲ್ಲವೊ ಎನ್ನುವಷ್ಟು ನವಿರಾಗಿ ಬಳಸುವಂಥ ಎಲಾಸ್ಟಿಕ್‌ ಇರುತ್ತದೆ. ಆದರೆ ಹುಡುಗಿ ಬೆಳೆದಂತೆಲ್ಲ ಬರೀ ದೇಹರೂಪ ಮರೆಮಾಡುವ ಇಂತಹ ಒಳ ಉಡುಪು ಸಾಕಾಗುವುದಿಲ್ಲ. ಸ್ಪೋರ್ಟ್ಸ್ ಬ್ರಾ ಹಾಕಿದರೂ ದೇಹದ ಆಕಾರದತ್ತ ಗಮನ ಹೋಗಬಹುದು. ಆದರೂ ಅಲ್ಲಿಯವರೆಗೂ ಬಿಗಿಯಾದ ಒಳ ಉಡುಪು ಬೇಡವೇ ಬೇಡ. ಪೂರ್ಣಪ್ರಮಾಣದ ಬೆಳವಣಿಗೆಗೂ ಅಡ್ಡಿ, ಸರಾಗ ಉಸಿರಾಟಕ್ಕೂ ಅಡ್ಡಿ.  ಆದರೆ ಸಂಕೋಚವಾಗದೆ ಇರಲೆಂದು ಟ್ರೇನರ್‌ ಬ್ರಾ ಹಾಕಿಸಬಹುದು. ಒಂದು ನಿರ್ದಿಷ್ಟ ವಯಸ್ಸಿಗೆ ದೇಹದ ಬೆಳವಣಿಗೆ ನಿಲ್ಲುತ್ತದೆ. ಆಗ ಸೂಕ್ತ ಅಳತೆಯ ಬ್ರಾ ಧರಿಸಲು ಆರಂಭಿಸಬಹುದು.

ಚಿನ್ನು ಆರೋಗ್ಯಕ್ಕೆ ಹೊನ್ನು

ಆಯುರ್ವೇದ ಎಂದರೆ ಬರೀಯ ಗಿಡಮೂಲಿಕೆಗಳು ಎಂಬ ಕಲ್ಪನೆ ಇತ್ತು. ಅತಿಯಾದ ಪ್ರಮಾಣದಲ್ಲಿ ಔಷಧಿ ಸೇವನೆ, ಕಹಿಯಾದ ಅದರ ರುಚಿ, ದೀರ್ಘ ಕಾಲೀನ ಹಾಗೂ ತೀವ್ರವಾದ ರೋಗಗಳ ಮೇಲೆ ಅದರ ನಿದಾನ ಗತಿಯ ಪರಿಣಾಮ ಆಯುರ್ವೇದ ದೊಡ್ಡ ಸವಾಲುಗಳಾಗಿದ್ದವು. ಆಗ ನಮ್ಮ ಆಚಾರ್ಯರು ಕಂಡುಕೊಂಡ ಉತ್ತರ ರಸೌಷಧಿ(ಲೋಹಾದಿ ಧಾತು). ಅದರಲ್ಲಿ ಮುಖ್ಯವಾದ, ಬಹುಗುಣವುಳ್ಳ, ನಿರ್ವಿಷವಾದ ಧಾತುವೇ ಚಿನ್ನ(ಸುವರ್ಣ).

ಚಿನ್ನವನ್ನು ಅತಿ ಸುಲಭದಲ್ಲಿ ಶುದ್ಧೀಕರಿಸಬಹುದು. ಇದನ್ನು ಯಾವುದೇ ಗಿಡಮೂಲಿಕೆಯ ಔಷಧಿಯೊಂದಿಗೆ ನಿಯಮಿತವಾದ ಪ್ರಮಾಣದಲ್ಲಿ ಬೆರೆಸಿದರೆ ಅದರ ಗುಣ ವರ್ಧಿಸುತ್ತದೆ ಕಾಯಿಲೆಯ ಮೇಲೆ ಶೀಘ್ರ ಪರಿಣಾಮ ಬೀರುತ್ತದೆ.

ಇದು ವಿಷಹರವಾಗಿದ್ದು ನಮ್ಮ ದೇಹದಲ್ಲಿರುವ ಎಲ್ಲಾ ದೋಷವನ್ನು ಶಮನಗೊಳಿಸುತ್ತದೆ. ಹೃದಯದ ಹಾಗೂ ಕಣ್ಣಿನ ತೊಂದರೆಗಳಿಗೆ ಉತ್ತಮ, ಆಯುಷ್ಯವನ್ನು ವೃದ್ಧಿಸುತ್ತದೆ, ದೇಹಕ್ಕೆ ಪುಷ್ಟಿ ನೀಡುತ್ತದೆ. ಬುದ್ಧಿಶಕ್ತಿ ಮತ್ತು ನೆನಪಿನ ಶಕ್ತಿಯನ ಹೆಚ್ಚಿಸುತ್ತದೆ, ಅಸ್ಪಷ್ಟ ಮಾತನ್ನು ಸರಿಪಡಿಸುತ್ತದೆ. ಪ್ರಾಚೀನ ಭಾರತದ ಮಕ್ಕಳ ತಜ್ಞ ಕಾಶ್ಯಪಾಚಾರ್ಯರು ೧೬ ಸಂಸ್ಕಾರಗಳಾದ ಅನ್ನ ಪ್ರಾಶನ, ವಿದ್ಯಾಭ್ಯಾಸ ಮುಂತಾದವುಗಳೊಂದಿಗೆ ಸ್ವರ್ಣಪ್ರಾಶನ ಸಂಸ್ಕಾರವನ್ನು ಸೇರಿಸಿದರು.

ಸ್ವರ್ಣಪ್ರಾಶನ ಎಂದರೇನು ?

ಹಿಂದಿನ ಕಾಲದಲ್ಲಿ, ಮಕ್ಕಳಿಗೆ ಗಿಡಮೂಲಿಕೆಗಳನ್ನು ತೇಯ್ದು ಹಾಕುತ್ತಿದ್ದರು. ಇದನ್ನು ಸುತ್ತುಕಾರ ಎನ್ನುತ್ತಾರೆ. ಅದರೊಂದಿಗೆ ಹಳೆಯ ಚಿನ್ನವನ್ನು ಹಾಕುತ್ತಿದ್ದರು, ಇದು ಕೂಡ ಒಂದು ವಿಧವಾದ ಸ್ವರ್ಣ ಪ್ರಾಶನ. ಆದರೆ ಆ ಚಿನ್ನವು ಶುದ್ಧವಾಗಿಲ್ಲ. ಅದರಿಂದ ಮಗುವಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಂಭವವಿತ್ತು. ಆದ್ದರಿಂದ ಶೋಧಿಸಿದ ಚಿನ್ನದ ತಂತಿಯನ್ನು ಬಜೆಯ ಬೇರಿನ ನಡುವಿಟ್ಟು ತೇಯ್ದು ಕೊಡಬಹುದು. ಇದನ್ನು ವಚಾಸ್ವರ್ಣವೆಂದು ಕರೆಯುತ್ತಾರೆ.

ಸುವರ್ಣ ಬಿಂದು ಪ್ರಾಶನ ಇನ್ನೊಂದು ವಿಧ. ಇದು ಗಿಡಮೂಲಿಕೆಗಳಿಂದ ಮಾಡಿರುವ ತುಪ್ಪ ಹಾಗೂ ಜೇನುತುಪ್ಪವನ್ನು ಸಮಪ್ರಮಾಣದಲ್ಲಿ ಬೆರೆಸಿ ಅದಕ್ಕೆ ಬಜೆ, ಜೇಷ್ಟಮಧು, ಬ್ರಾಹ್ಮೀ, ನೆಲ್ಲೀಕಾಯಿ, ಅಳಲೇಕಾಯಿ, ತಾರೇ ಕಾಯಿ, ಚಿತ್ರಕ, ಶತಪುಷ್ಪ, ಶತಾವರಿ ಮುಂತಾದ ೯ ಗಿಡಮೂಲಿಕೆಗಳನ್ನು ಸೇರಿಸಿ ಅದರೊಂದಿಗೆ ಶುದ್ಧ ಸ್ವರ್ಣ ಭಸ್ಮವನ್ನು ಸೇರಿಸಿ ಮಾಡುವಂತಹ ಒಂದು ಮಿಶ್ರಣ.

ಸ್ವರ್ಣಪ್ರಾಶನವನ್ನು ಹೇಗೆ, ಯಾವಾಗ ಹಾಕಿಸಬೇಕು: ವಚಾಸ್ವರ್ಣವಾದರೆ ಮಗು ಹುಟ್ಟಿದಾಗಿನಿಂದ ೫ ವರ್ಷದವರೆಗೆ ಪ್ರತೀ ಮಂಗಳವಾರ, ಶುಕ್ರವಾರ ಬೇರೆ ಗಿಡಮೂಲಿಕೆಗಳೊಂದಿಗೆ ತೇಯ್ದು ಹಾಕಬೇಕು.

ಸ್ವರ್ಣ ಬಿಂದು ಪ್ರಾಶನವಾದರೆ ಹುಟ್ಟಿದಾಗಿನಿಂದ ೧೬ ವರ್ಷದ ಒಳಗೆ ಕನಿಷ್ಠ ಒಂದು ತಿಂಗಳು ಸತತವಾಗಿ ಹಾಕಿಸಬೇಕು. ಸತತ ೬ ತಿಂಗಳು ಹಾಕಿಸಿದರೆ ಹೆಚ್ಚು ಪರಿಣಾಮಕಾರಿ. ಇದನ್ನು ಪ್ರತಿದಿನ ಬೆಳಿಗ್ಗೆ ಖಾಲೀ ಹೊಟ್ಟೆಯಲ್ಲೇ ಹಾಕಬೇಕು.

ಸ್ವರ್ಣ ಪ್ರಾಶನದ ಉಪಯೋಗಗಳು: ಪಚನಶಕ್ತಿ ಹೆಚ್ಚಿಸಿ, ಸರಿಯಾದ ಆಹಾರ ಕೊಟ್ಟಲ್ಲಿ ಪೌಷ್ಟಿಕಾಂಶದ ಕೊರತೆ ನೀಗಿಸುತ್ತದೆ. ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ,  ಪದೇ ಪದೇ ಜ್ವರ, ಶೀತ, ಕೆಮ್ಮು, ಹೊಟ್ಟೆನೋವು ಇತ್ಯಾದಿ ಸಮಸ್ಯೆಗಳು ಬಾರದಂತೆ ತಡೆಗಟ್ಟುತ್ತದೆ ಹಾಗೂ ಮಾನಸಿಕ ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯ ನೀಡುತ್ತದೆ.

ತಪ್ಪು ತಿಳಿವಳಿಕೆ ಹಾಗೂ ಪರಿಣಾಮ

ಸ್ವರ್ಣ ಪ್ರಾಶನವನ್ನು ಪ್ರತಿ ತಿಂಗಳ ಪುಷ್ಯ ನಕ್ಷತ್ರ ದಿನದಂದು ಹಾಕಿಸುತ್ತಾರೆ ಆದರೆ ಇದು ಸರಿಯಾದ ಹಾಗೂ ಪರಿಣಾಮಕಾರಿ ಯೋಜನೆಯಲ್ಲ. ಸ್ವರ್ಣ ಪ್ರಾಶನವನ್ನು ದಿನ ಪುಷ್ಯಾ ನಕ್ಷತ್ರದಂದು ಶುರುಮಾಡಿ ಸತತವಾಗಿ ಕನಿಷ್ಠ ಒಂದು ತಿಂಗಳಾದರೂ ಹಾಕಿಸಬೇಕು. ಇದುವರೆಗೆ ಮಾಡಿರುವ ಸಂಶೋಧನೆಯಲ್ಲಿ ಇದರಿಂದ ಯಾವುದೇ ತರಹದ ದುಷ್ಪರಿಣಾಮಗಳಿಲ್ಲವೆಂದು ಕಂಡುಬಂದಿದೆ.

ಆದ್ದರಿಂದ ನಿರ್ಭಯರಾಗಿ ನಿಮ್ಮ ಮಗುವಿನ ಉತ್ತಮ ಮಾನಸಿಕ, ದೈಹಿಕ ಆರೋಗ್ಯ, ಮತ್ತು ಬೆಳವಣಿಗೆಗಾಗಿ ಹತ್ತಿರದ ಆಯುರ್ವೇದ ವೈದ್ಯರನ್ನು ನಿತ್ಯ ಸ್ವರ್ಣ ಪ್ರಾಶನಕ್ಕಾಗಿ ಸಂಪರ್ಕಿಸಿ.

ಮೂಲ :ಡಾ. ಪಲ್ಲವಿ ಕೆ.ಎಸ್, ಪ್ರಜಾವಾಣಿ

ಮೃದುಬಟ್ಟೆ

ಬೇಸಿಗೆ ಎಂದರೆ ಬಿಸಿಲಷ್ಟೇ ಅಲ್ಲ. ಶಾಲೆಗೆ ಸುದೀರ್ಘ ರಜೆಯ ಕಾಲವೂ ಹೌದು. ಹಾಗಾಗಿ ಮಕ್ಕಳಿಗೆ ಆ ದಪ್ಪನೆ ಬಟ್ಟೆಯ ಯೂನಿಫಾರ್ಮ್‌ನಿಂದ ಬಿಡುಗಡೆ. ಮನೆಯಲ್ಲಿರುವಾಗಲಾಗಲೀ, ಹೊರ ಹೋಗುವುದಾಗಲೀ ಚಿಕ್ಕದಾಗಿ ಬಿಡುತ್ತವೆ ಎಂದು ಪದರ ಪದರವಾಗಿ ಹೊಲಿದ ವಿನ್ಯಾಸದ ಭರ್ಜರಿ ಡ್ರೆಸ್‌ ಹಾಕುವುದು ಸರಿಯಲ್ಲ. ಹಗುರವಾದ ಹತ್ತಿಯ ಬಟ್ಟೆಯ ಡ್ರೆಸ್‌ ಆದರೆ ಆರಾಮ. ಪುಟ್ಟಕಂದಮ್ಮಗಳಿಗಂತೂ ಬೇಸಿಗೆಗೆ ಬಟ್ಟೆ ಹಾಕದಿದ್ದರೂ ಆದೀತು. ಹಳೆಯ ಕಾಟನ್‌ನ ಬಟ್ಟೆಯನ್ನು ಸಡಿಲವಾಗಿ ಸುತ್ತಿ ಮಲಗಿಸಿದರೆ ಸರಿ.

ಸಡಿಲ ತೆಳುವಾದ ಕಾಟನ್‌ನ ಜಬಲಾ ಅತ್ಯುತ್ತಮ ಆಯ್ಕೆ. ತೆಳುವಾದ ಹೊಸೈರಿ ಮೆಟೀರಿಯಲ್‌ನ ಅಂಗಿಗಳೂ ಆದೀತು. ಆದರೆ ಮಕ್ಕಳಿಗೆ ಮುಂದೆ ಬಟನ್‌ ಇರುವ ಡ್ರೆಸ್‌ ಸೂಕ್ತ. ಉಡುಪು ಬಿಗಿಯಾಗಿರಕೂಡದು.  ಬಿಗಿ ಬಟ್ಟೆಯಾದರೆ ರಕ್ತ ಪರಿಚಲನೆ ಸರಾಗವಾಗಿ ಆಗದು. ಸಡಿಲವೇ ಇರಲಿ. ಮೆತ್ತನೆ ಮಲ್‌ ಕಾಟನ್, ಈಜಿಪ್ಷಿಯನ್‌ ಕಾಟನ್‌ನ ಬಟ್ಟೆ ಹೆಚ್ಚು ಸೂಕ್ತ.  ಉಲನ್‌ನ ಹೊದಿಕೆ, ಫ್ಲೀಶ್‌ಮಕ್ಕಳು ಬೆಚ್ಚಗೆ ಇದ್ದರೆ ಒಳ್ಳೆಯದು ಎಂದು ಹಿರಿಯರು ಹೇಳುತ್ತಾರೇನೋ ಸರಿ,  ಆದರೂ ನವಜಾತ ಶಿಶುಗಳಿಗೂ ಸೆಕೆಯಾಗುತ್ತದೆ.

ಕಿರಿಕಿರಿ ಮಾಡುತ್ತವೆ. ಎಳೆಯ ತ್ವಚೆ ಮೇಲೆ ಬೊಬ್ಬೆಗಳೇಳಬಹುದು. ವರ್ಷದೊಳಗಿನ ಮಕ್ಕಳಾದರೂ ದೇಹದ ಉಷ್ಣಾಂಶ, ವಾತಾವರಣದ ಉಷ್ಣಾಂಶ ಹೆಚ್ಚಿ ಜ್ವರ, ಮೀಸಲ್ಸ್‌ (ಗೊಬ್ಬರ, ಅಥವಾ ಅಮ್ಮ) ಕಾಣಿಸಿಕೊಳ್ಳುವ ಅಪಾಯ ಇಲ್ಲದೇ ಇಲ್ಲ. ಕೃತಕ ಬಟ್ಟೆಯಂತೂ ಬೇಡವೇ ಬೇಡ. ಇದರಿಂದ ಬೆವರು, ಸೆಕೆ ಸೇರಿ ತ್ವಚೆಯ ಅಲರ್ಜಿ, ತುರಿಕೆ, ಮೈಮೇಲೆ ಗಂಧೆಗಳೇಳುವ ಸಾಧ್ಯತೆ ಇಲ್ಲದೇ ಇಲ್ಲ.

ಶಾಲೆಗೆ ಹೋಗುವ ವಯಸ್ಸೇನೂ ಅಲ್ಲ, ಆದರೂ ತುಸುವೇ ದೊಡ್ಡ ಮಕ್ಕಳಿದ್ದರೆ ಬೇಸಿಗೆ ಎಂದು ತುಂಬ ಚಿಕ್ಕ ಸ್ಕರ್ಟ್‌, ಶಾರ್ಟ್ಸ್‌ ಮತ್ತು ಸ್ಲೀವ್‌ಲೆಸ್‌ ಅಥವಾ ಸಣ್ಣ ತೋಳಿನ ಡ್ರೆಸ್ಸನ್ನೇ ಯಾವಾಗಲೂ ಹಾಕಬೇಕಾಗಿಲ್ಲ. ಮನೆಯಲ್ಲಿದ್ದಾಗ, ಮನೆ ಹತ್ತಿರವೇ ಆಡಿಕೊಂಡಿರುವ ಸಮಯದಲ್ಲಿ ಇವು ಪರವಾಗಿಲ್ಲ. ಆದರೆ ಸೂರ್ಯನ ಬಿಸಿಲಿಗೆ ಆ ಎಳೆ ತ್ವಚೆ ನಲುಗುತ್ತದೆ; ಬಿಸಿಲಿಗೆ ಬಣ್ಣ ಕಂದುತ್ತದೆ. ಹಾಗಾಗಿ ಸಡಿಲವಾದ ತುಂಬು ತೋಳಿನ ಡ್ರೆಸ್‌ ಹೆಚ್ಚು ಸೂಕ್ತ. ನೇರ ಬಿಸಿಲಿನ ಕಿರಣಗಳಿಂದ ರಕ್ಷಣೆ ದೊರೆಯುತ್ತದೆ. ಮುಖದ ಮೇಲೂ ಬಿಸಿಲು ಬಿದ್ದು ಹಾನಿಯಾಗದಂತೆ ಕಣ್ಣುಗಳಿಗೂ ರಕ್ಷಣೆ ಇರುವಂತೆ ಕ್ಯಾಪ್, ಹ್ಯಾಟ್ ಹಾಕಬಹುದು.

ಪ್ರಯಾಣ ಸಂದರ್ಭದಲ್ಲಿ, ಕೂಡ ಇಂಥದೇ ಬಿಳಿಯ ಬಣ್ಣದ ಡ್ರೆಸ್ ಹಾಕಿದರೆ ಸರಿ. ಪ್ರವಾಸ ಸಪ್ಪೆ ಎನಿಸಬಹುದು ಎಂದರೆ ತಿಳಿ ಬಣ್ಣಗಳ, ಹೂವಿನ ವಿನ್ಯಾಸದ ಉಡುಪುಗಳನ್ನು ಹಾಕಬಹುದು. ತಿಳಿ ಬಣ್ಣದ ಬಟ್ಟೆಗಳು ಪ್ರಖರ ಬಿಸಿಲಿನಲ್ಲೂ ಕಣ್ಣಿಗೆ ಆರಾಮ ಎನಿಸುತ್ತವೆ. ಸೂರ್ಯನ ಕಿರಣಗಳನ್ನು ಪ್ರತಿಫಲಿಸಿ ಬಿಸಿಯ ಅನುಭವ ದೇಹಕ್ಕೆ ಅಷ್ಟಾಗಿ ಆಗಗೊಡದೇ ರಕ್ಷಿಸುತ್ತವೆ. ಅದರಲ್ಲೂ ಹತ್ತಿಯ ಬಟ್ಟೆಯೇ ಆದರೆ ಸೆಕೆ ಆಗುವುದಿಲ್ಲ, ಅವುಗಳ ರಂಧ್ರಗಳಿರುವ ಗುಣ ಗಾಳಿಯಾಡುವಂತೆ ಮಾಡುತ್ತದೆ. ಬೆವರನ್ನು ಹೀರಿಕೊಂಡು ಆರಾಮ ಒದಗಿಸುತ್ತದೆ.

ಅಪ್ಪಟ ಹತ್ತಿಯ ಬಟ್ಟೆಯದೇ ಉಡುಪುಗಳಲ್ಲೂ ಬೇಕಾದಷ್ಟು ವೈವಿಧ್ಯಗಳು ಸಿಗುತ್ತವೆ. ಹುಡುಗರಿಗೂ ಸ್ಲೀವ್‌ಲೆಸ್‌್‌ ಟಿಶರ್ಟ್, ಬಣ್ಣ ಬಣ್ಣದ ಕಾರ್ಟೂನ್‌ ಕ್ಯಾರೆಕ್ಟರ್‌ನ ಚಿತ್ರಗಳಿರುವ ಬನಿಯನ್‌ಗಳೂ ಆಕರ್ಷಕವಾಗಿ ಲಭ್ಯ ಇವೆ. ಜಿಗಿದಾಡುವ, ಒಂದು ಕಡೆ ನಿಂತಲ್ಲಿ ನಿಲ್ಲದ ತುಂಟ ಮಕ್ಕಳಿಗೆ   ಬರ್ಮುಡಾ, ಹಾಫ್‌ ಪ್ಯಾಂಟ್‌ ಥ್ರೀ ಫೋರ್ತ್‌ ಪ್ಯಾಂಟ್‌ಗಳ ಮೇಲೆ ಇಂಥ ಟಿಶರ್ಟ್‌ ಅಥವಾ ಬನಿಯನ್‌ ಹಾಕಿಬಿಟ್ಟರೆ ಆಯಿತು. ಆದರೆ ಜೀನ್ಸ್‌ ಅಥವಾ ದಪ್ಪನೆ ಕಾಟನ್‌ನ ಪ್ಯಾಂಟ್‌ ಬೇಡ. ಅಗಲ ಬಾಟ್‌ಮ್‌ನ ಕಾಟನ್‌ ಪ್ಯಾಂಟ್‌ ಆದರೆ ಸರಿ. ಟರ್ಟಲ್‌ ನೆಕ್‌, ಪೋಲೊ ನೆಕ್‌ನ ಅಂಗಿ,  ಸಿಂಥೆಟಿಕ್‌ ಟೈಟ್ಸ್ ಯಾಕೆ ಬೇಕು?

ಒಟ್ಟಿನಲ್ಲಿ ಟೆರಿಕಾಟ್, ಪಾಲಿಯೆಸ್ಟರ್, ಟೆರಿವೂಲ್‌ ಮಿಶ್ರಿತ ಸಿಂಥೆಟಿಕ್‌ ಬಟ್ಟೆ ಇದ್ದರೆ ಕಟ್ಟಿ ಮೇಲಿಟ್ಟುಬಿಡಿ ಬೇಸಿಗೆ ಮುಗಿಯುವವರೆಗೆ. ಕಾಟನ್‌ನಲ್ಲೂ ಮಿಕ್ಸ್‌ಡ್‌ ಕಾಟನ್‌ನ ವ್ಯತ್ಯಾಸ ತಿಳಿಯಲು ಉಡುಪಿನ ಒಂದೇ ಪದರವನ್ನು ತೋರು ಬೆರಳು ಮತ್ತು ಹೆಬ್ಬೆರಳ ನಡುವೆ ಹಿಡಿದು ವೃತ್ತಾಕಾರವಾಗಿ ಬೆರಳು ಸವರಿ ನೋಡಬಹುದು. ಅಪ್ಪಟ ಹತ್ತಿಯ  ಅನುಭವವೇ ಬೇರೆ. ಮಿಕ್ಸ್‌ಡ್‌ ಆಗಿದ್ದರೆ ತುಸು ಉರುಟಾಗಿರುತ್ತದೆ. ಸಿಂಥೆಟಿಕ್ ಆಗಿದ್ದರೆ ಸರಾಗವಾಗಿ ಬೆರಳು ಜಾರಿಕೊಂಡಂತೆ ಎನಿಸುತ್ತದೆ.

ಮದುವೆಯಂಥ ದೊಡ್ಡ ಸಮಾರಂಭಗಳಿಗಾದರೂ ಸರಿಯೇ ರೇಷ್ಮೆ ಬೇಡವೇ ಬೇಡ. ಇದು ಮಕ್ಕಳನ್ನು ಮತ್ತಷ್ಟು ಬೆಚ್ಚಗೆ ಇಡುತ್ತದೆ. ಕಾಟನ್ ಬಟ್ಟೆಯ ಮೇಲೇ ಚಿನ್ನದ ಬಣ್ಣದ ಲೇಪವಿರುವ, ಬ್ಲಾಕ್‌ ಪ್ರಿಂಟ್‌ನ ಇಲ್ಲವೆ ಕಸೂತಿ ವಿನ್ಯಾಸ ಮಾಡಿದ ಡ್ರೆಸ್‌ಗಳನ್ನು ಹಾಕಬಹುದು. ಇವೂ ಕಡಿಮೆ ಕಿಮ್ಮತ್ತಿನವೇನೂ ಇಲ್ಲ. ಘನತೆಯೇನೂ ಕಡಿಮೆಯಾಗುವುದಿಲ್ಲ. ನೋಡಲು ಗ್ರ್ಯಾಂಡ್‌ ಆಗಿ ಕಂಡರೂ ಮಕ್ಕಳಿಗೆ ಕಿರಿಕಿರಿ ಆಗುವುದಿಲ್ಲ. ಜತೆಗಿದ್ದ ದೊಡ್ಡವರಿಗೂ.

ಮೂಲ :ನಿಷ್ಕಾ ,  ಪ್ರಜಾವಾಣಿ

ಕಂದನ ಕಣ್ಣು

ಸೂರ್ಯನ ಬೆಳಕಿನಲ್ಲಿ ನೇರಳಾತೀತ (ಅಲ್ಟ್ರಾವೈಲಟ್) ಎ ಮತ್ತು ಬಿ ಎಂಬ ಅಪಾಯಕಾರಿ ಕಿರಣಗಳಿರುತ್ತವೆ. ಸೂರ್ಯನ ಬೆಳಕಿನಲ್ಲಿನ ಅಪಾಯಕಾರಿ ಕಿರಣಗಳನ್ನು ಸೋಸಿ ಭೂಮಿಗೆ ರವಾನಿಸುವ ಈ–ಜೋನ್ ಪದರು ಪರಿಸರ ಮಾಲಿನ್ಯದಿಂದಾಗಿ ಈಗ ಹಾಳಾಗುತ್ತಿದೆ. ಹೀಗಾಗಿ ಸೂರ್ಯಕಿರಣದ ನೇರ ಸಂಪರ್ಕ ಹೆಚ್ಚು. ಇವುಗಳಿಗೆ ಯಾವ ರಕ್ಷಣಾತ್ಮಕ ತಡೆಗಳಿಲ್ಲದಿದ್ದರೆ ಈ ಕಿರಣಗಳು ನೇರವಾಗಿ ಎಳೆ ಮಕ್ಕಳ ಕಣ್ಣು ಪ್ರವೇಶಿಸಿ ಕಣ್ಣಿನೊಳಗಿನ ಮಸೂರ (ಲೆನ್ಸ್) ಮತ್ತು ಅಕ್ಷಿಪಟಲಕ್ಕೆ (ರೆಟಿನಾ) ಹಾನಿ ಮಾಡುತ್ತವೆ. ಇದರಿಂದ ಕಣ್ಣು ಪೊರೆ (ಕ್ಯಾಟರಾಕ್ಟ್) ಮತ್ತು ದೃಷ್ಟಿ ದೋಷ ಸಾಧ್ಯ.

  • ಸೂರ್ಯನ ಝಳದಿಂದ ಕಣ್ಣಿನ ಕನೀನಿಕೆಗೆ ಗಾಯವಾಗುವ (ಕಾರ್ನಿಯಲ್ ಸನ್ ಬರ್ನ್) ಅಪಾಯವಿದೆ.
  • ತಾಪಮಾನ ಏರಿದಾಗ ಪರಿಸರದಲ್ಲಿ ರೋಗಾಣುಗಳ ಸಂಖ್ಯೆಯೂ ಹೆಚ್ಚುತ್ತದೆ.  ಒಣಗಿದ ಎಲೆ, ಹೂ ಮತ್ತು ದೂಳು ಅಧಿಕ. ಇವುಗಳಿಂದಾಗಿ  ಕಣ್ಣಿನಲ್ಲಿ ತುರಿಕೆ, ಉರಿ, ಕಣ್ಣು ಕೆಂಪಗಾಗುವುದು ಸಾಮಾನ್ಯ.
  • ಕಣ್ಣಿನ ಸೋಂಕು: ಕಣ್ಣು ಮತ್ತು ರೆಪ್ಪೆ ಊದಿಕೊಂಡು, ಕಣ್ಣಿನಿಂದ ಸತತ ನೀರು,    ಮುಳ್ಳಿನಿಂದ ಚುಚ್ಚಿದಂತಾಗಬಹುದು.
  • ಅತೀ ಬಿಸಿಲಿನಿಂದಾಗಿ ಸಹಜವಾದ ಕಣ್ಣೀರು ಬೇಗ ಆವಿಯಾಗುವುದರಿಂದ ತೇವಾಂಶ ಕಡಿಮೆಯಾಗಿ ಕಣ್ಣಿನ ಹೊರಭಾಗ ಶುಷ್ಕಗೊಳ್ಳುತ್ತದೆ.
  • ಅತೀ ಬೆವರಿನ ಮೂಲಕ ದೇಹದ ನೀರು ಮತ್ತು ಲವಣಾಂಶಗಳು ಹೆಚ್ಚು ಹರಿದುಹೋಗುತ್ತವೆ. ಇವುಗಳ ಕೊರತೆಯಿಂದಾಗಿಯೂ ದೃಷ್ಟಿದೋಷ ಉಂಟಾಗಬಹುದು.

ಬೇಸಿಗೆಯಲ್ಲಿ ಮಕ್ಕಳ ಪರೀಕ್ಷೆಗಳು ಸಾಮಾನ್ಯ. ಈ ಸಮಯದಲ್ಲಿ ಹೆಚ್ಚು ಹೊತ್ತಿನ ಓದು, ಬರಹದಿಂದ ಕಣ್ಣಿಗೆ ಬಳಲಿಕೆಯಾಗಿ ತಲೆನೋವು, ವಾಂತಿ ಆಗಬಹುದು.

ರಕ್ಷಣೆ ಹೇಗೆ ?

  • ದೇವರ ಶ್ರೇಷ್ಠ ಕಾಣಿಕೆ, ಕಣ್ಣು. ಇದರ ರಕ್ಷಣೆ  ಅತಿ ಮುಖ್ಯ. ಕಣ್ಣಿನ ತೊಂದರೆ ಇರುವ ಮಗುವಿನ ಕೈವಸ್ತ್ರ, ಟವೆಲ್, ಪ್ರತ್ಯೇಕವಾಗಿರಲಿ. ಕೈ ಕುಲುಕುವುದು, ಮುದ್ದು ಕೊಡುವುದು ಬೇಡ
  • ಕಣ್ಣಿನ ಯಾವುದೇ ತೊಂದರೆಗೆ ತಜ್ಞರನ್ನು ಸಂಪರ್ಕಿಸಿರಿ. ವೈದ್ಯರ ಸಲಹೆ ಇಲ್ಲದೆ ಯಾವುದೇ ಔಷಧಿ ಕಣ್ಣಿಗೆ ಹಾಕಬೇಡಿ. ಸ್ವಚಿಕಿತ್ಸೆ ಅಪಾಯಕಾರಿ.
  • ಮಕ್ಕಳು ತಂಪು ಕನ್ನಡಕ ಬಳಸಲಿ: ಇದರಿಂದ ಸೂರ್ಯಕಿರಣ, ದೂಳು, ರೋಗಾಣುಗಳಿಂದ ರಕ್ಷಣೆ ಇದೆ. ಈಗ 6 ತಿಂಗಳ ಮಗುವಿಗೂ ಇಂಥ ಕನ್ನಡಕ ಲಭ್ಯ. ಎಳೆ ಮಗು ಕನ್ನಡಕ ಹಾಕಿಕೊಳ್ಳಲು ನಿರಾಕರಿಸಿದರೆ ಸೂರ್ಯಕಿರಣದಿಂದ ರಕ್ಷಿಸಲು ಹ್ಯಾಟ್ ಅಥವಾ ವಿಸರ್ ಕೊಡಿ. ಪಾಲಕರು ಸಹ ಕನ್ನಡಕ ಬಳಸಲಿ. ಮಗು ಇದನ್ನು ಅನುಸರಿಸಿ ಕನ್ನಡಕ ಇಚ್ಛಿಸಬಹುದು.
  • ದುಂಡಾಕಾರದ ಹ್ಯಾಟ್ ಹಾಕಿಕೊಳ್ಳಿ, ಇದು ಮುಖ ಮತ್ತು ಕುತ್ತಿಗೆಯ ತ್ವಚೆಯನ್ನು ರಕ್ಷಿಸುತ್ತದೆ.
  • ಬೆಳಿಗ್ಗೆ 11  ರಿಂದ ಮದ್ಯಾಹ್ನ 3 ಗಂಟೆಯವರೆಗೆ ಎಳೆ ಮಗು ಸಾಧ್ಯವಾದಷ್ಟು ನೆರಳಿನಲ್ಲಿಯೇ ಇರುವಂತೆ ನೋಡಿಕೊಳ್ಳಿ.
  • ಸೂರ್ಯ ಕಿರಣದಲ್ಲಿನ ನೇರಳಾತೀತ ಕಿರಣಗಳ ಪ್ರಮಾಣ ಅಳೆಯಲು ಈಗ ಸನ್ ಬ್ರೇಸ್ ಲೆಟ್ ಲಭ್ಯವಿದ್ದು, ಅಪಾಯಮಟ್ಟ ತಲುಪಿದಾಗ ರಕ್ಷಣಾ ಕ್ರಮಗಳನ್ನು ಮರೆಯದಿರಿ.

ಮಕ್ಕಳ ತಂಪು ಕನ್ನಡಕ ಖರೀದಿ ಮುಂಚೆ:

  • ಶೇಕಡಾ 99ರಿಂದ 100ರಷ್ಟು ನೇರಳಾತೀತ ಕಿರಣಗಳನ್ನು ಕಣ್ಣಿನೊಳಗೆ ಪ್ರವೇಶ ತಡೆಯುವ ಮತ್ತು 00 ನ್ಯಾನೋಮೀಟರ್(ಎನ್.ಎಮ್) ಪ್ರಮಾಣದ ಸೂರ್ಯಕಿರಣಗಳಿಂದ ರಕ್ಷಿಸುವಂತಿರಬೇಕು. ಇವುಗಳನ್ನು ಸೂಚಿಸುವ ಗುಣಮಟ್ಟದ ವಿವರ ಇರುವ ಮತ್ತು ಗುರುತು ಪಟ್ಟಿ ಪರೀಕ್ಷಿಸಿ, ಖಚಿತಪಡಿಸಿಕೊಳ್ಳಿ.
  • ಕನ್ನಡಕದ ಕನ್ನಡಿ ಪಾಲಿಕಾರ್ಬೋನೇಟ್‌ನಿಂದ ತಯಾರಿಸಿರಬೇಕು. ಕನ್ನಡಕದ ಕೈಗಳಿಗೆ ತಿರುಗಣಿ(ಹಿಂಬ್) ಬೇಡ. ಇದರ ಬದಲಾಗಿ ಕನ್ನಡಕ ಮಗುವಿನ ತಲೆಗೆ ಗಟ್ಟಿಯಾಗಿ ಆಧಾರವಾಗಿರಲು ವೆಲ್‌ಕ್ರೋ ಪಟ್ಟಿ ಉತ್ತಮ.
  • ಕನ್ನಡಕದ ಬಣ್ಣದ ಬಗ್ಗೆ ಗಮನಿಸಿ. ಏಕೆಂದರೆ ಬಣ್ಣ ಕೇವಲ ಸೂರ್ಯಕಿರಣದ ತೀಕ್ಷ್ಣ ಬೆಳಕನ್ನು ಕಡಿಮೆ ಮಾಡುತ್ತವೆ. ಅತೀ ತಿಳಿ ಬಣ್ಣ ತೀಕ್ಷ್ಣತೆಯನ್ನು ಕಡಿಮೆ ಮಾಡುವುದಿಲ್ಲ. ಹಾಗೆಯೇ ದಟ್ಟ ಬಣ್ಣದಿಂದ ಹೆಚ್ಚು ಪ್ರಮಾಣದಲ್ಲಿ ಸೂರ್ಯಕಿರಣ ಕಣ್ಣೊಳಗೆ ಪ್ರವೇಶಿಸುವ ಅಪಾಯವಿದೆ. ಆದ್ದರಿಂದ ಸಾಧಾರಣ ಬಣ್ಣದ ಹಾಗೂ ಸೋಲಾರೈಸ್ಡ್‌ ಕನ್ನಡಕ ಉತ್ತಮ.
  • ಕಳಪೆ ಮಟ್ಟದ ಅಥವಾ ಆಟದ ಕನ್ನಡಕ ಮಗುವಿಗೆ ಬೇಡ. ಇಂಥವುಗಳಿಂದ  ಅಪಾಯವೇ ಹೆಚ್ಚು.
  • ಉತ್ತಮ ಗುಣಮಟ್ಟದ ಮಕ್ಕಳ ಕನ್ನಡಕಗಳು ಎಲ್ಲ ಕನ್ನಡಕಗಳ ಅಂಗಡಿಯಲ್ಲಿಯೂ ಲಭ್ಯ ಇರುತ್ತದೆ. ಪರೀಕ್ಷಿಸಿ ಕೊಳ್ಳುವುದು ಒಳಿತು.

ಮೂಲ : ಡಾ.ಎಂ.ಡಿ.ಸೂರ್ಯಕಾಂತ ಪ್ರಜಾವಾಣಿ

ಪದ ಉಚ್ಛಾರ

ಮಗುವಿನ ಪದ ಉಚ್ಛಾರವನ್ನು ಉತ್ತಮಗೊಳಿಸಲು ಸಲಹೆಗಳು
ನಿಮ್ಮ ಮಗು ಶಾಲೆಗೆ ಹೋಗತೊಡಗಿದ ಬಳಿಕ ಪ್ರಥಮ ದಿನಗಳಲ್ಲಿ ಅಕ್ಷರಗಳನ್ನು ನಂತರದ ದಿನಗಳಲ್ಲಿ ಪದಗಳನ್ನೂ ಕಲಿಯಲು ತೊಡಗುತ್ತದೆ. ದಿನಕಳೆದಂತೆ ಹೆಚ್ಚು ಹೆಚ್ಚು ಪದಗಳನ್ನು ಕಲಿಯಬೇಕಾಗಿ ಬಂದು ಪ್ರತಿ ಪದದ ಅಕ್ಷರಗಳನ್ನು ಸರಿಯಾಗಿ ಸಂಯೋಜಿಸಲು ಕೊಂಚ ಹಿಂದೇಟು ಹಾಕಬಹುದು. ಈಗ ಮಗುವಿನ ಶಿಕ್ಷಕರು ಹಾಗೂ ಪಾಲಕರು ಪದ ಉಚ್ಛಾರವನ್ನು (spelling) ಉತ್ತಮಗೊಳಿಸಲು ಕೆಲವು ವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಏಕೆಂದರೆ ಇಂಗ್ಲಿಷಿನ ಎಲ್ಲಾ ಪದಗಳು ನೋಡಲು ಒಂದೇ ವಿಧವಾದ ಅಕ್ಷರಗಳ ಸಂಯೋಜನೆ ಹೊಂದಿದ್ದರೂ ಉಚ್ಛಾರಣೆಯಲ್ಲಿ ವ್ಯತ್ಯಾಸವಿರುತ್ತದೆ. ಉದಾಹರಣೆಗೆ rough ಅನ್ನು ರಫ್ ಎಂದೂ plough ಅನ್ನು ಪ್ಲವ್ ಎಂದೂ ಉಚ್ಛರಿಸಲಾಗುತ್ತದೆ. ಹಾಗಾಗಿ ಮಗುವಿಗೆ ಪ್ರತಿ ಪದವನ್ನೂ ಅದರ ಅರ್ಥ ಅಥವಾ ತಾತ್ಪರ್ಯದೊಂದಿಗೆ ತಿಳಿಸಿಕೊಡುವುದು ಅಗತ್ಯವಾಗಿದೆ. ಬಳಿಕ ಈ ಪದಗಳನ್ನು ಬಳಸಿ ವಾಕ್ಯಗಳನ್ನು ರಚಿಸುವಲ್ಲಿ ಕ್ರಿಯಾತ್ಮಕತೆಯನ್ನು ಮೂಡಿಸುವ ಮೂಲಕ ಕಲಿಕೆಯನ್ನು ಒಂದು ಆಟದಂತೆ ಭಾಸವಾಗುವಂತೆ ಮಾಡುವುದು ಒಂದು ಕಲೆ.

ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಈ ವಿಧಾನಗಳನ್ನು ತಿಳಿಸಿಕೊಡುತ್ತಾರಾದರೂ ಮನೆಯಲ್ಲಿ ಪಾಲಕರು ಕೂಡಾ ಈ ಕಲಿಕೆಯಲ್ಲಿ ಭಾಗಿಯಾಗುವ ಮೂಲಕ ಮಗು ಪದಗಳನ್ನು ಶೀಘ್ರವಾಗಿ ಕಲಿಯುತ್ತದೆ. ಅಲ್ಲದೇ ಮಗು ಯಾವ ಅಕ್ಷರ ಅಥವಾ ಪದವನ್ನು ಕಲಿಯುವಲ್ಲಿ ಕಷ್ಟಪಡುತ್ತಿದೆ ಎಂಬುದನ್ನು ಸಮಯದ ಆಭಾವದಿಂದ ಶಿಕ್ಷಕರು ಗಮನಿಸದಿದ್ದನ್ನು ನೀವು ಗಮನಿಸಿ ಆ ವಿಷಯದಲ್ಲಿ ಹೆಚ್ಚಿನ ಅಸ್ಥೆ ವಹಿಸಬಹುದು. ನಿಮ್ಮ ಮಗುವಿಗೆ ಪಾಠ ಹೇಳಿಕೊಡುವಾಗ ಕೆಲವು ಸಂಗತಿಗಳನ್ನು ನೆನಪಿಡಬೇಕಾಗುತ್ತದೆ. ಇಂಗ್ಲಿಷ್ ಪದಗಳಲ್ಲಿ ಕೆಲವು ಅಕ್ಷರಗಳು ಸ್ಪಷ್ಟ ಉಚ್ಛಾರ ಹೊಂದಿರುವುದು (phonogram) ಹಾಗೂ ಕೆಲವು ಮೌನವಾಗಿರುವುದು (silent), ಉಚ್ಛಾರ ನಿಯಮಗಳು ಹಾಗೂ ಅಕ್ಷರಗಳನ್ನು ಜೋಡಿಸುವಾಗ ಪಾಲಿಸಬೇಕಾದ ತರ್ಕ ಮೊದಲಾದವುಗಳನ್ನು ಉದಾಹರಣೆಗಳೊಂದಿಗೆ ಕಲಿಸಬೇಕು. ಉದಾಹರಣೆಗೆ boy ಪದದಲ್ಲಿ oy ಎಂಬುವುದು ಒಯ್ ಎಂಬ ಸ್ಪಷ್ಟ ಉಚ್ಛಾರವನ್ನು ನೀಡುವುದರಿಂದ ಅದು phonogram ಆಗಿದೆ. ಅಂತೆಯೇ know ಪದದಲ್ಲಿ k ಅಕ್ಷರವನ್ನು ಉಚ್ಛರಿಸದ ಕಾರಣ ಅದು ಮೌನವಾಗಿದೆ(silent). ಆದರೆ ಈ ವಿಷಯಗಳನ್ನು ಮಕ್ಕಳ ಎಳೆಯ ಮನದಲ್ಲಿ ಸ್ಪಷ್ಟವಾಗಿ ಮೂಡಿಸುವುದು ಅಷ್ಟು ಸುಲಭವಲ್ಲ. ಅದಕ್ಕಾಗಿ ಕೆಲವು ಚಟುವಟಿಕೆಗಳನ್ನು ಆಟದ ರೂಪದಲ್ಲಿ ಪ್ರಸ್ತುತಪಡಿಸಿದರೆ ಮಕ್ಕಳು ಅದನ್ನು ಇಷ್ಟಪಡುವುದಷ್ಟೇ ಅಲ್ಲ, ಬೇಗನೇ ಹೊಸ ಹೊಸ ವಿಷಯಗಳನ್ನು ಕಲಿಯಲು ಉತ್ಸುಕರೂ ಆಗುತ್ತಾರೆ. ಅತ್ಯುತ್ತಮವೆಂದು ಕೆಲವು ಚಟುವಟಿಕೆಗಳನ್ನು ಇಲ್ಲಿ ವಿವರಿಸಲಾಗಿದೆ. ನಿಮ್ಮ ಮಗು ಯಾವ ಚಟುವಟಿಕೆಯನ್ನು ಹೆಚ್ಚು ಇಷ್ಟ ಪಡುತ್ತದೆಯೋ ಅದನ್ನು ಹೆಚ್ಚು ಆಚರಿಸುವ ಮೂಲಕ ಅವರ ಕಲಿಕೆಯನ್ನು ಸುಲಭವಾಗಿಸಬಹುದು.
ನೋಡಿ ಕಲಿ ಕೆಲವು ಪದಗಳನ್ನು ಪೋಸ್ಟ್ ಕಾರ್ಡ್ ಗಾತ್ರದ ಕೆಲವು ದಪ್ಪ ಕಾಗದಗಳ ಮೇಲೆ ಬರೆದು ಮಗುಚಿಡಿ. ಈಗ ಮಗು ತನಗಿಷ್ಟವಾದ ಯಾವುದೇ ಒಂದು ಕಾರ್ಡನ್ನು ನೋಡಿ ಪುನಃ ಮಗುಚಿಡಲಿ ಹಾಗೂ ಅದೇ ಪದವನ್ನು ತನ್ನ ನೆನಪಿನಿಂದ ಬರೆಯಲಿ. ಎಷ್ಟು ಕಾರ್ಡುಗಳನ್ನು ಸರಿಯಾಗಿ ಬರೆಯುತ್ತದೆ ಎಂದು ಗಮನಿಸಿ. ಇದರಿಂದ ಮಗುವಿನ ಸ್ಮರಣಶಕ್ತಿ ಹೆಚ್ಚುವುದಷ್ಟೇ ಅಲ್ಲ, ತನ್ನ ಶ್ರಮದ ಬಗ್ಗೆ ಅಭಿಮಾನವನ್ನೂ ಪಡೆಯುತ್ತದೆ. ಕಣ್ಣಾಮುಚ್ಚಾಲೆ ಆಡಿ ಮೇಲಿನ ಚಟುವಟಿಕೆಯಲ್ಲಿ ಉಪಯೋಗಿಸಿದ ಕಾರ್ಡುಗಳನ್ನೇ ಇಲ್ಲಿಯೂ ಉಪಯೋಗಿಸಬಹುದು. ಈ ಕಾರ್ಡುಗಳನ್ನು ಕೋಣೆಯಲ್ಲಿ ಅಲ್ಲಲ್ಲಿ, ಮಗು ಸುಲಭವಾಗಿ ಹುಡುಕಲು ಸಾಧ್ಯವಾಗುವಂತೆ ಅಡಗಿಸಿಡಿ. ಬಳಿಕ ಈ ಕಾರ್ಡುಗಳು ಎಲ್ಲೆಲ್ಲಿವೆ ಎಂದು ಮಗು ಹುಡುಕಲು ಕೆಲವು ಸುಳಿವುಗಳನ್ನು ನೀಡಿ. ಎಲ್ಲಾ ಕಾರ್ಡುಗಳನ್ನು ಹುಡುಕಿಯಾದ ಬಳಿಕ ಆ ಕಾರ್ಡುಗಳಲ್ಲಿನ ಪದಗಳನ್ನು ಉಚ್ಛರಿಸಿ ಅವುಗಳನ್ನು ಬರೆಯಲು ತಿಳಿಸಿ. ಈ ಚಟುವಟಿಕೆಯಲ್ಲಿ ಒಬ್ಬರಿಗಿಂತ ಹೆಚ್ಚು ಮಕ್ಕಳಿದ್ದರೆ ಇನ್ನೂ ಚೆನ್ನ. ಮಕ್ಕಳು ಅಡಗಿಸಿಟ್ಟ ಕಾರ್ಡುಗಳನ್ನು ಹುಡುಕಿ ತೆಗೆಯುವ ಆಟದ ಮೂಲಕ ಪದಉಚ್ಛಾರವನ್ನು ಚೆನ್ನಾಗಿ ಕಲಿಯುತ್ತಾರೆ. ಗಡಿಯಾರದೊಂದಿಗೆ ಸ್ಪರ್ಧಿಸಿ ಸಾಧಾರಣವಾಗಿ ಮಕ್ಕಳು ಸ್ಪರ್ಧೆಯನ್ನು ಇಷ್ಟಪಡುತ್ತಾರೆ. ತುತ್ತು ಉಣ್ಣಿಸುವಾಗ ಇನ್ನೂ ಹಾಲುಹಲ್ಲು ಮೂಡದ ಮಗುವಿಗೂ ತಾಯಿ 'ಬೇಗ ತಿನ್ನಬೇಕು, ಮೊದಲು ಬರಬೇಕು' ಎಂದು ಪುಸಲಾಯಿಸುವುದನ್ನು ಕಾಣಬಹುದು. ಮೊದಲು ಬರಬೇಕಾದರೆ ಈ ತುತ್ತು ತಿನ್ನಬೇಕು ಎಂದು ಆ ಮಗುವಿನ ಮನದಲ್ಲಿ ಮೂಡಿ ತುತ್ತು ಹೊಟ್ಟೆ ಸೇರುತ್ತದೆ. ಈ ಆಟದಲ್ಲಿಯೂ ಮಕ್ಕಳ ಸುಪ್ತಮನದಲ್ಲಿ ಅಡಗಿರುವ ಈ ಸ್ಪರ್ಧೆಯನ್ನು ಹೊರತರುವುದಾಗಿದೆ. ನಿಮ್ಮ ಮಗುವನ್ನು ಎದುರಿಗೆ ಕೂರಿಸಿ ಒಂದು ಗಡಿಯಾರವನ್ನು ಇಬ್ಬರೂ ಕಾಣುವಂತೆ ಎದುರಿಗಿಡಿ. ಈಗ ಒಂದೊಂದಾಗಿ ಪದಗಳನ್ನು ಹೇಳುತ್ತಾ ಹೋಗಿ. ಹತ್ತು ಪದಗಳು ಮುಗಿಯುವಾಗ ಎಷ್ಟು ಸಮಯ ಹಿಡಿಯಿತು ಎಂದು ಆ ಕಾಗದದ ಮೇಲೆ ಬರೆಯಿರಿ.

ಮೂಲ : ಬೋಲ್ಡ್ ಸ್ಕೈ

ತೇಗು

ಚಿಕ್ಕ ಮಗುವಿಗೆ ತೇಗು ಬರುವ ವ್ಯಾಯಾಮ ಅವಶ್ಯಕ
ನಿಮ್ಮದು ಚೊಚ್ಚಲ ಹೆರಿಗೆಯಾಗಿದ್ದರೆ ಮಗುವಿನ ಬಗ್ಗೆ ಸಾಕಷ್ಟು ವಿಷಯಗಳು ಗೊತ್ತಿರುವುದಿಲ್ಲ. ಹೇಗೆ ಮಲಗಿಸಬೇಕು? ಹೇಗೆ ಎತ್ತಿಕೊಳ್ಳಬೇಕು? ಮಗುವಿಗೆ ಎಷ್ಟು ಬಾರಿ ಹಾಲು ಕೊಡಬೇಕು? ಈ ಎಲ್ಲಾ ವಿಷಯಗಳು ಗೊತ್ತಿರುವುದಿಲ್ಲ. ಮಗು ಅಳುತ್ತಿದ್ದರೆ ಮಗು ಹೊಟ್ಟೆ ನೋವಿನಿಂದ ಅಳುತ್ತಿದೆಯೇ? ಅಥವಾ ತಲೆನೋವಿನಿಂದ ಅಳುತ್ತಿದೆಯೇ? ಎಂದು ತಿಳಿಯದೆ ಕಂಗಾಲಾಗಿ ಬಿಡುತ್ತಾರೆ.

ಮಗುವಿಗೆ ಹಾಲು ಕುಡಿಸಿದ ತಕ್ಷಣ ಎತ್ತಿ ಆಟ ಆಡಿಸಿದರೆ ವಾಂತಿ ಮಾಡುತ್ತದೆ. ಆದ್ದರಿಂದ ಹಾಲು ಕೊಟ್ಟ ನಂತರ ಮಗುವನ್ನು ನಿಮ್ಮ ಬೆನ್ನಿಗೆ ಹಾಕಿ ಬೆನ್ನು ನೀವಬೇಕು. ಅಲ್ಲದೆ ಮಗುವಿಗೆ ತೇಗು ಬಂದರೆ ಒಳ್ಳೆಯದು. ಏಕೆಂದರೆ ಮಗು ಹಾಲು ಕುಡಿಯುವಾಗ ಗಾಳಿಯೂ ಹೊಟ್ಟೆಗೆ ಹೋಗಿರುತ್ತದೆ. ತೇಗು ಬಂದರೆ ಅಧಿಕ ಗ್ಯಾಸ್ ಹೊರಬರಲು ಸಹಾಯ ಮಾಡುತ್ತದೆ. ಮಗು ತೇಗಿದರೆ ನಂತರ ಸುಖವಾಗಿ ನಿದ್ದೆ ಮಾಡುತ್ತದೆ. ಮಗುವಿಗೆ 8-10 ತಿಂಗಳಾದ ಹೊಟ್ಟೆಯಲ್ಲಿ ಗ್ಯಾಸ್ ತುಂಬುವ ಸಮಸ್ಯೆ ಅಷ್ಟೇನು ಇರುವುದಿಲ್ಲ. ಏಕೆಂದರೆ ಆ ಸಮಯದಲ್ಲಿ ಮಗು ಸರಿಯಾಗಿ ಹಾಲು ಕುಡಿಯುವುದನ್ನು ಕಲಿತಿರುತ್ತದೆ, ಆಗ ಗಾಳಿ ಹೊಟ್ಟೆ ಸೇರುವುದು ಕಮ್ಮಿಯಾಗುತ್ತದೆ. ಮಗುವಿಗೆ ತೇಗು ಬರಲು ಏನು ಮಾಡಬೇಕು? ಮಗುವನ್ನು ತೋಳಿಗೆ ಹಾಕಿ ಮೆಲ್ಲಗೆ ಅದರ ಬೆನ್ನು ನೀವಿ. ಇಲ್ಲದಿದ್ದರೆ ಮಗುವನ್ನು ಕಮುಚಿ ನಿಮ್ಮ ತೊಡೆಯಲ್ಲಿ ಮಲಗಿಸಿ. ಈ ರೀತಿ ಮಾಡಿದರೆ ಮಗುವಿಗೆ ತೇಗು ಬರುತ್ತದೆ. ಇದರಿಂದ ಹೊಟ್ಟೆಯಲ್ಲಿರುವ ಗ್ಯಾಸ್ ಹೊರ ಬರುವುದು.

ಮೂಲ : ಬೋಲ್ಡ್ ಸ್ಕೈ

ಮಕ್ಕಳ ಅತಿಸಾರದ ನಿವಾರಣೆಗೆ 7 ಸರಳ ಮನೆ ಮದ್ದುಗಳು

ನಿಮ್ಮ ಮಗು ಆಗಾಗ್ಗೆ ಅತಿಸಾರಕ್ಕೆ ತುತ್ತಾಗುತ್ತಿದೆಯೇ? ಅದು ನಿಜಕ್ಕೂ ಮಕ್ಕಳಿಗೆ ತುಂಬಾ ಕಷ್ಟದ ಪರಿಸ್ಥಿತಿ. ಪಾಲಕರೂ ಕೂಡ ಪದೇಪದೇ ಉಂಟಾಗುವ ಅತಿಸಾರದಿಂದ ರೋಸಿ ಹೋಗಿರುತ್ತಾರೆ. ಇದನ್ನು ಪರಿಹರಿಸಲು ಮನೆಮದ್ದು ಏನಾದರೂ ಇದೆಯೇ ಎಂದು ಆಲೋಚಿಸುತ್ತಿರುತ್ತಾರೆ. ಅಂತವರಿಗಾಗಿಯೇ ಈ ಲೇಖನ. ಅತಿಸಾರದಿಂದ ನಿಮ್ಮ ಮಗುವನ್ನು ಮುಕ್ತಿಗೊಳಿಸುವಂತಹ, ಆಶ್ಚರ್ಯಕರ ರೀತಿಯಲ್ಲಿ ಪರಿಹಾರ ನೀಡುವಂತಹ ಏಳು ಸರಳ ಮನೆಮದ್ದುಗಳನ್ನು ಕೆಳಗೆ ನೀಡಲಾಗಿದೆ. ತಿಳಿದಿಕೊಳ್ಳಿ, ಅನುಸರಿಸಿ ಹಾಗು ನಿಮ್ಮ ಮಗುವನ್ನು ಅತಿಸಾರದ ಹಿಡಿತದಿಂದ ಮುಕ್ತಗೊಳಿಸಿ.

ಮೆಂತ್ಯೆ

ಮೆಂತ್ಯೆ,ಅತಿಸಾರಕ್ಕೆ ಅತ್ಯುತ್ತಮ ಮನೆಮದ್ದುಗಳಲೊಂದು. ಇದರಲ್ಲಿ ಸಮೃದ್ಧವಾಗಿರುವ ಲೋಳೆ ಅಂಶ ಅತಿಸಾರದಿಂದ ಬಳಲುತ್ತಿರುವ ಮಗುವಿಗೆ ನೈಸರ್ಗಿಕ ಚಿಕಿತ್ಸೆ ನೀಡುತ್ತದೆ. ಮೆಂತ್ಯೆ ಬೇಧಿಯನ್ನು ಗಟ್ಟಿಯಾಗಿಸುವ ಮೂಲಕ ತೆಳುವಾದ ಮಲದಿಂದ ಉಂಟಾಗುವ ಕಿರಿಕಿರಿಯನ್ನು ನಿವಾರಿಸಲು ಸಹಕಾರಿಯಾಗಿದೆ. ಉತ್ತಮ ಫಲಿತಾಂಶಕ್ಕಾಗಿ, ಒಂದು ಕಪ್ ಮೊಸರಿಗೆ ಒಂದು ಟೀ ಚಮಚ ಮೆಂತ್ಯೆಯನ್ನು ಸೇರಿಸಿ, ದಿನದಲ್ಲಿ ಎರಡು ಬಾರಿಯಂತೆ ಮೂರು ದಿನ ತಿನಿಸಬೇಕು.

ಶುಂಠಿ

ಶುಂಠಿ ಜೀರ್ಣಕ್ರಿಯೆಗೆ ಮತ್ತು ಜೀರ್ಣಾಂಗಗಳ ಆರೋಗ್ಯ ಪಾಲನೆಗೆ ತುಂಬಾ ಒಳ್ಳೆಯದು. ಇದು ಅತಿಸಾರದ ಚಿಕಿತ್ಸೆಗೆ ಆರೋಗ್ಯಕರ ಮತ್ತು ಪರಿಣಾಮಕಾರಿ ಆಯ್ಕೆಯಾಗಿದೆ. ಆದರೆ, ರಕ್ತದೊತ್ತಡದಿಂದ ನರಳುವ ಜನರು ಶುಂಠಿ ಚಿಕಿತ್ಸೆಯನ್ನು ಪಡೆಯಬಾರದು. ಶಿಶುಗಳಿಗೆ ತಮ್ಮದೇ ಆದ ಪ್ರತ್ಯೇಕ ಹಾಸಿಗೆ ಏಕೆ ಅತ್ಯವಶ್ಯಕ?

ಸೇಬು ಹಣ್ಣಿನ ಸೈಡರ್ ವಿನೇಗರ್

ಸೇಬು ಹಣ್ಣಿನ ಸೈಡರ್ ವಿನೇಗರ್ ನಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಪ್ರಯೋಜನಗಳನ್ನು ಹೊಂದಿದೆ. ಇದು ಅನೇಕ ಆಂಟಿ ಬ್ಯಾಕ್ಟೀರಿಯ ಗುಣಗಳನ್ನು ಹೊಂದಿದ್ದು ಅವು ಅತಿಸಾರಕ್ಕೆ ಕಾರಣವಾದ ಬ್ಯಾಕ್ಟೀರಿಯಾಗಳೊಂದಿಗೆ ಹೋರಾಡಲು ಸಹಕಾರಿಯಾಗಿವೆ. ಸೇಬು ಹಣ್ಣಿನ ಸೈಡರ್ ವಿನೇಗರ್ ಪೆಕ್ಟಿನ್ ಎಂಬ ರಾಸಾಯನಿಕವನ್ನು ಹೊಂದಿರುತ್ತದೆ. ಈ ರಾಸಾಯನಿಕವು ರಕ್ಷಣಾತ್ಮಕ ಕವಚವಾಗಿ ವರ್ತಿಸಿ ಕರುಳಿನ ಸೆಳೆತವನ್ನು ನಿವಾರಿಸುವಲ್ಲಿ ಫಲಕಾರಿಯಾಗಿದೆ .

ಬಾಳೆಹಣ್ಣು

ಬಾಳೆಹಣ್ಣುಗಳು ನೀರಿನಂಶದ ಮಲವನ್ನು ಗಟ್ಟಿಯಾಗಿಸಲು ಸಹಾಯಕವಾಗಿವೆ. ಬಾಳೆಹಣ್ಣಿನಲ್ಲಿ ಸಹ ಸೇಬು ಹಣ್ಣಿನ ಸೈಡರ್ ವಿನೇಗರ್‍‌ನಂತೆ, ಪೆಕ್ಟಿನ್ ಅಂಶವಿದೆ. ಪೆಕ್ಟಿನ್ ರಕ್ಷಣಾತ್ಮಕ ಪದರದಂತೆ ವರ್ತಿಸಿ ಕರುಳಿನ ಸೆಳೆತವನ್ನು ನಿವಾರಿಸುತ್ತದೆ. ಇದರಿಂದಾಗಿ ದ್ರವ ರೂಪದ ಮಲದ ಸಾಂದ್ರತೆ ಕಡಿಮೆಯಾಗುತ್ತದೆ. ಅತಿಯಾದ ದ್ರವವನ್ನು ಕರುಳು ಹೀರಿಕೊಳ್ಳುತ್ತದೆ. ಬಾಳೆಹಣ್ಣುಗಳಲ್ಲಿ ಸಮೃದ್ಧವಾಗಿರುವ ಪೊಟ್ಯಾಸಿಯಮ್, ಎಲೆಕ್ಟ್ರೋಲೈಟ್ಸ್‌ಗಳಿಗೆ ಪರ್ಯಾಯವಾಗಿ ಕಾರ್ಯಮಾಡುತ್ತದೆ.

ಮೊಸರು

ಮೊಸರಿನಲ್ಲಿ ಲಿವ್-ಕಲ್ಚರ್ಸ್ ಎಂಬ ಕರುಳು ಸ್ನೇಹಿ ಬ್ಯಾಕ್ಟೀರಿಯಾಗಳಿರುತ್ತವೆ . ಈ ರೀತಿಯ ಬ್ಯಾಕ್ಟೀರಿಯಾ ಕರುಳಿನ ಮೇಲೆ ರಕ್ಷಣಾತ್ಮಕ ಪದರು ಒದಗಿಸುತ್ತದೆ ಮತ್ತು ಅದು ಉತ್ಪಾದಿಸುವ ಲ್ಯಾಕ್ಟಿಕ್ ಆಮ್ಲವು ಬ್ಯಾಕ್ಟೀರಿಯಾಗಳಿಂದ ಉಂಟಾಗುವ ವಿಷವನ್ನು ತೊಡೆದುಹಾಕಲು ಸಹಕಾರಿಯಾಗಿದೆ.

ಬಿಳಿ ಅನ್ನ

ಪಿಷ್ಟವು ಅತಿಸಾರಕ್ಕೆ ಇರುವ ಅತ್ಯುತ್ತಮ ಪರಿಹಾರಗಳಲ್ಲಿ ಒಂದಾಗಿದೆ. ಆಲೂಗಡ್ಡೆಯನ್ನು ಹೊರತು ಪಡಿಸಿದರೆ ಅಕ್ಕಿಯಲ್ಲಿ ಅತಿ ಹೆಚ್ಚಿನ ಅಂಶದಲ್ಲಿ ಪಿಷ್ಟ ಇದೆ. ಅಲ್ಲದೆ ಬಿಳಿ ಅಕ್ಕಿ ಜೀರ್ಣಿಸಿಕೊಳ್ಳಲು ಸುಲಭ. ಆದರೆ ಅತಿಸಾರದಿಂದ ಬಳಲುತ್ತಿರುವವರು ಮಸಾಲೆ ಅನ್ನವನ್ನು ಸೇವಿಸದಿರುವುದು ಒಳ್ಳೆಯದು. ಬಿಳಿ ಅಕ್ಕಿ ಸಾಮಾನ್ಯವಾಗಿ ಅತಿಸಾರವನ್ನು ಶಮನಗೊಳಿಸಲು ಸಹಕಾರಿಯಾಗಿದೆ. ಅನ್ನ ಸೇವಿಸಲು ಮೊದಲು ಕಡಿಮೆ ಪ್ರಮಾಣದಲ್ಲಿ ಆರಂಭಗೊಳಿಸಿ ಕ್ರಮೇಣ ಪ್ರಮಾಣವನ್ನು ಹೆಚ್ಚಿಸಿರಿ. ಮಗುವಿನ ಬೇಧಿ ಹೋಗಲಾಡಿಸಲು ಮನೆ ಮದ್ದು.

ಆಲೂಗಡ್ಡೆ

ಪಿಷ್ಟಯುಕ್ತ ಆಹಾರಗಳು ಅತಿಸಾರಕ್ಕೆ ಉತ್ತಮ ಚಿಕಿತ್ಸೆಯಾಗಿವೆ. ಪಿಷ್ಟ ಎಂದೊಡನೆ ತಟ್ಟನೆ ನನಪಿಗೆ ಬರುವುದು ಆಲೂಗೆಡ್ಡೆ. ಆಲೂಗಡ್ಡೆಯಲ್ಲಿ ಅತಿಹೆಚ್ಚು ಪಿಷ್ಟ ಇರುವುದರಿಂದ ,ಇದು ಅತಿಸಾರದ ಅತ್ಯುತ್ತಮ ಪರಿಹಾರಗಳಲ್ಲಿ ಒಂದು. ಸರಳವಾಗಿ ಬೇಯಿಸಿದ ಆಲೂಗಡ್ಡೆಯು ಹೊಟ್ಟೆಗೂ ಹಿತಕರ, ತಿನ್ನಲೂ ರುಚಿ. ನೆನಪಿಡುವ ಮುಖ್ಯ ವಿಷಯವೆಂದರೆ ಫ್ರೆಂಚ್ ಫ್ರೈಸ್ ಅಥವಾ ಮಸಾಲೆ ಭರಿತ ಆಲೂಗಡ್ಡೆ ಖಾದ್ಯಗಳು ನಿಮ್ಮ ಅತಿಸಾರವನ್ನು ಇಮ್ಮಡಿಗೊಳಿಸುತ್ತವೆ. ಅತಿಸಾರದ ನಿವಾರಣೆಗೆ ಪಿಷ್ಟಯುಕ್ತ ಆಹಾರದ ಅಗತ್ಯವಿದೆ. ಆದರೆ ತೈಲ ಅಥವಾ ಮಸಾಲೆಗಳು ಇಲ್ಲದೆ, ಕೇವಲ "ಪಿಷ್ಟ" ಪದಾರ್ಥಗಳ ಸೇವನೆ ಅಗತ್ಯ. ಉಳಿದಂತೆ ತೆಂಗಿನ ನೀರು, ಅಕ್ಕಿ ಗಂಜಿ ಮತ್ತು ಹಣ್ಣು ಅಥವಾ ತರಕಾರಿಗಳ ರಸ ಹಾಗೂ ಕಾಯಿಸಿ ಆರಿಸಿದ ನೀರಿಗೆ ಸ್ವಲ್ಪ ಉಪ್ಪು ಮತ್ತು ಸಕ್ಕರೆಯನ್ನು ಬೆರೆಸಿ ಆಗಾಗ ಕುಡಿಯುತ್ತಿರಬೇಕು . ಅಧಿಕ ಪಿಷ್ಟವಿರುವ ಯಾವುದೇ ದ್ರವವಾದರೂ ಅತಿಸಾರವನ್ನು ನಿಯಂತ್ರಿಸಬಲ್ಲವು.

ಮೂಲ : ಬೋಲ್ಡ್ ಸ್ಕೈ

ಕ್ಲಬ್ ಫೂಟ್

‘ಕ್ಲಬ್‌ಫೂಟ್’ ಸಾವಿರಕ್ಕೊಂದು ಮಕ್ಕಳಲ್ಲಿ ಕಾಣಿಸುವ ಮೂಳೆಯ ವ್ಯಾಧಿ. ಮಗುವಿನ ಹುಟ್ಟಿನಿಂದಲೇ ಎರಡೂ ಪಾದಗಳು ’ಒಳಮುಖ’ವಾಗಿ ತಿರುಚಿಕೊಂಡಿರುತ್ತವೆ. ಈ ವ್ಯಾಧಿಯಿಂದ ನರಳುವ ಮಗು ನಮ್ಮ ನಿಮ್ಮೆಲ್ಲರಂತೆ ಪಾದವನ್ನು ಮುಮ್ಮುಖವಾಗಿ ಇರಿಸುವುದಿಲ್ಲ. ಈ ಮಗುವಿನ ಪಾದಗಳು ಸದಾ ಒಳಮುಖಿ ಆಗಿರುತ್ತವೆ. ಕಾರಣ ಈ ಮಗು ಸದಾ ಪಾದಗಳ ಖಿನ್ನತೆಯನ್ನು ಎದುರಿಸುತ್ತಲೇ ಇರುತ್ತದೆ. ಸಭೆ, ಸಮಾರಂಭ, ಪ್ರಯಾಣ,ನಡಿಗೆ, ಓಟ ಸೇರಿ ಎಲ್ಲಾ ಸಂದರ್ಭಗಳಲ್ಲೂ ಕೂಡ ತನ್ನ ಗಮನವನ್ನುಸಾಮಾನ್ಯ ಪಾದಗಳ ಮೇಲೆ ಕೇಂದ್ರೀಕರಿಸುತ್ತಲೇ ಇರುತ್ತದೆ.

‘ನಾನು ಒಮ್ಮೆ ರಸ್ತೆಯಲ್ಲಿ ಹೋಗುತ್ತಿದ್ದಾಗ ಎರಡು ಪಾದಗಳನ್ನು ಒಳಕ್ಕೇ ಎಳೆದುಕೊಂಡು ಸಾಮಾನ್ಯ ವೇಗದಲ್ಲಿ ಓಡುತ್ತಿದ್ದ ಮಗುವನ್ನು ನೋಡಿ ಬೆರಗಾದೆ. ಈ ಮಗುವಿನ ಪಾದಗಳು ಹೀಗೇಕೆ? ಎಂಬ ಪ್ರಶ್ನೆಯಲ್ಲೇ ದಿನಗಳನ್ನು ಕಳೆದೆ. ನನ್ನ ಕಣ್ಣ ಎದುರಲ್ಲೇ ಅದೇ ರೀತಿಯ ಮಗು ಬಂದು ನಿಂತಾಗ ಆಶ್ಚರ್ಯಪಟ್ಟೆ. ಅನೇಕ

ದಿನಗಳಿಂದ ಕಾಡುತ್ತಿದ್ದ ನನ್ನ ಮನಸ್ಸಿಗೆ ಉತ್ತರ ಹುಡುಕವ ಕಾಲ ಕೂಡಿ ಬಂದಿತ್ತು. ಕೂಡಲೇ ಗೆಳೆಯ ವೈದ್ಯ ಡಾ. ಶಶಿಧರರೆಡ್ಡಿಯನ್ನು ಸಂಪರ್ಕಿಸಿ ಮಗುವಿನ ಚಿಕಿತ್ಸೆಗೆ ಕೋರಿದೆ’ ಎನ್ನುತ್ತಾರೆ ಗಣಿ ಉದ್ಯಮಿ ದಿನೇಶ್ ಕುಮಾರ್ ಸಿಂಘಿ.

ಡಾ. ಶಶಿಧರರೆಡ್ಡಿ ಅವರು ಮಾತನಾಡಿ ‘ಬಳ್ಳಾರಿ ಜಿಲ್ಲೆ ಸೇರಿ ಬಹುತೇಕ ಕಡೆಗಳಲ್ಲಿ ಕಾಣಸಿಗುವ ‘ಕ್ಲಬ್‌ಫೂಟ್’ ವ್ಯಾಧಿಗೆ ಶಸ್ತ್ರ ಚಿಕಿತ್ಸೆ ದುಬಾರಿ ವೆಚ್ಚದ್ದು. ದಿನೇಶ್ ಅವರು ನನ್ನನ್ನು ಸಂಪರ್ಕಿಸಿದಾಗ ವ್ಯಾಧಿಯ ಮಾಹಿತಿ ನೀಡಿದೆ. ಅವರು ಕೂಡಲೇ ಈ ವ್ಯಾಧಿಯಿಂದ ನರಳುವ ಎಲ್ಲಾ ಮಕ್ಕಳಿಗೂ ಶಸ್ರ್ತ ಚಿಕಿತ್ಸೆ ನೀಡಿಸುವ ಯೋಜನೆಯನ್ನೇ ಪ್ರಾರಂಭಿಸಿ ಸಮಾಜಸೇವೆಗೆ ಮುಂದಾದರು’ ಎನ್ನುತ್ತಾರೆ.

ದಿನೇಶ್ ಅವರ ಪತ್ನಿ ಶ್ರೀಮತಿ ಸ್ನೇಹಲತ ಸಿಂಘಿ ಮಾತನಾಡಿ, ಪತಿಯ ಅಭಿಲಾಷೆಗೆ ಪೂರಕವಾಗಿ ಮಗ ಅನುರಾಗ್‌ನ ಹುಟ್ಟು ಹಬ್ಬದಂದೇ ಆತನ ಹೆಸರಿನಲ್ಲೇ ಫೌಂಡೇಶನ್ ಪ್ರಾರಂಭಿಸಿ, ಅಂದಿನಿಂದಲೇ ಶಸ್ತ್ರ ಚಿಕಿತ್ಸೆ ಪ್ರಾರಂಭಿಸಿದ್ದೇವೆ. ಆಡಿ ನಲಿದಾಡಬೇಕಾದ ಮಕ್ಕಳಲ್ಲಿ ನಗು ಕಾಣಲಿಕ್ಕಾಗಿ ಈ ಯೋಜನೆ ಅಡಿ ರಾಜ್ಯ ಅಥವಾ ಹೊರ ರಾಜ್ಯಗಳ ಮಕ್ಕಳಿಗೂ ಚಿಕಿತ್ಸೆ ನೀಡಲಾಗುತ್ತದೆ’ ಎನ್ನುತ್ತಾರೆ.

ಈ ಯೋಜನೆಗೆ ಸ್ಪೂರ್ತಿ ನೀಡಿ ಪ್ರಥಮ ಫಲಾನುಭವಿ ಆಗಿರುವ ಹೊಸಪೇಟೆ ತಾಲೂಕಿನ ಬೈಲುವದ್ದಿಗೇರಿಯ ಮಗು ನಾಗರಾಜನ ತಂದೆ ರವಿಚಂದ್ರ, ನನ್ನ ಮಗನಿಗೆ ಆಪರೇಶನ್ ಮಾಡಿಸ್ಲಿಕ್ಕೆ ಸಹಾಯ ಮಾಡ್ರಿ ಅಂತಾ ಅನೇಕ್ರನ್ನ ಕೇಳಿದ್ದೆ. ದಿನೇಶ್ ಅವರು ನನ್ನ ಮಗನ್ನ ನೋಡಿ ಕೂಡಲೇ ಸಹಾಯ ಮಾಡ್ಲಿಕ್ಕೆ ಒಪ್ಪಿದ್ರು. ಡಾ. ಶಶಿಧರ್ ಅವರೂ ಕೂಡ ಹೆಲ್ಪ್ ಮಾಡಿದ್ರು. ನನ್ನ ಮಗನಿಂದಲೇ ಒಂದು ಯೋಜನೆ ಪ್ರಾರಂಭ ಆಗಿದ್ದು ಸಾರ್ಥಕತೆ ಆಗಿದೆ’ ಎಂದು ಹರ್ಷ ವ್ಯಕ್ತಪಡಿಸುತ್ತಾರೆ.

‘ಕ್ಲಬ್‌ಫೂಟ್’ ಚಿಕಿತ್ಸೆ ಪಡೆಯಲು ಆಸಕ್ತ ಪೋಷಕರು, ಮಗುವನ್ನು ಮೊದಲು ಡಾ. ಶಶಿಧರರೆಡ್ಡಿ ಅಥವಾ ಡಾ. ಸುಂದರೇಶ್, ಸಂಜೀವಿನಿ ಆಸ್ಪತ್ರೆ, ಕಪ್ಪಗಲ್ಲು ರಸೆ, ವೈ. ನಾಗೇಶಶಾಸ್ತ್ರಿಗಳ ನಗರ, ಎಸ್.ಜಿ. ಕಾಲೇಜು ಮುಂಭಾಗ,ಬಳ್ಳಾರಿ,

ಮೂಲ : ಬೋಲ್ಡ್ ಸ್ಕೈ

ಬೊಜ್ಜು

ಪುಟ್ಟ ಮಕ್ಕಳಂದ್ರೆ ಎಲ್ಲರಿಗೂ ಇಷ್ಟ. ಅವರ ತೊದಲು ಮಾತು, ಹಾಲ್ಗಲ್ಲದ ನಗು, ಹುಸಿ ಹಠ, ಅಂಬೆಗಾಲಿಡುವ ಪರಿಎಲ್ಲವೂ ಚೆಂದವೇ. ಅದರಲ್ಲೂ ಗುಂಡಗೆ,ಮುದ್ದು ಮುದ್ದಾಗಿರುವ ಮಕ್ಕಳನ್ನು ನೋಡಿದೊಡನೆ ಒಮ್ಮೆ ಕೆನ್ನೆ ಗಿಲ್ಲಬೇಕೆನ್ನಿಸದಿರದು. ಆದರೆ ಇತ್ತೀಚಿನ ವರದಿಯೊಂದು ಆಘಾತಕಾರಿ ಸತ್ಯವೊಂದನ್ನು ಹೊರಗೆಡವಿದೆ.ಅದೇನೆಂದರೆ ಮಕ್ಕಳು ಅಗತ್ಯಕ್ಕಿಂತ ಹೆಚ್ಚು ತೂಕವಿದ್ದರೆ ಅದು ಮಗುವಿನ ಆರೋಗ್ಯಕ್ಕೆ ಅಪಾಯ ತಂದೊಡ್ಡಬಹುದಾದ ಸಂಗತಿ ಎಂಬುದು ಈ ವರದಿ.ಮಕ್ಕಳು ಹೆಚ್ಚು ತೂಕ ಹೊಂದಿದ್ದರೆ ನೋಡುವುದಕ್ಕೇನೋ ಚೆಂದ. ಆದರೆ ಕೆಲವೊಮ್ಮೆ ಅದು ಬೊಜ್ಜೂ ಆಗಿರಬಹುದು. ಪುಟ್ಟ ವಯಸ್ಸಿನಲ್ಲೇ ಬೊಜ್ಜು ಶುರುವಾದರೆ ಮಗುವಿನ ಬೆಳವಣಿಗೆಗೆ ಅದು ಮಾರಕವಾಗುತ್ತದೆ. ಅಷ್ಟೇ ಅಲ್ಲದೆ ಚಿಕ್ಕ ವಯಸ್ಸಿನಲ್ಲೇ ಹಲವಾರು ರೋಗಗಳಿಗೆ ಅದು ತುತ್ತಾಗಬಹುದು ಎನ್ನುತ್ತಾರೆ ತಜ್ಞ ವೈದ್ಯರು.

ಪುಟ್ಟ ಮಕ್ಕಳಿಗೆ ಆಟವೊಂದಿದ್ದರೆ ಏನೂ ಬೇಡ. ಊಟ, ನಿದ್ದೆ ಎಲ್ಲವನ್ನೂ ಬಿಟ್ಟು ಆಟವಾಡುವುದಕ್ಕೆ ಮೊದಲುಮಾಡುತ್ತಾರೆ. ಆದರೆ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದೆ, ಬೇಗ ನಿದ್ದೆಯನ್ನೂ ಮಾಡದಿದ್ದರೆ ಮಕ್ಕಳಿಗೆ ಬೊಜ್ಜಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆಯಂತೆ. ಅವರನ್ನು ರಮಿಸಿ, ಮುದ್ದಿಸಿ ಅವರಿಗೆ ಊಟ ಮಾಡಿಸಬೇಕಾದ್ದು ಪಾಲಕರ ಕರ್ತವ್ಯ. ಮಗು ಬೇಡವೆಂದು ಹಠಮಾಡಿದ ಮಾತ್ರಕ್ಕೆ ಬಿಟ್ಟುಬಿಡುವುದು ತರವಲ್ಲ. ಬಗೆ ಬಗೆಯ ಕತೆ ಹೇಳಿ, ಅದಕ್ಕೆ ಊಟ ಮಾಡಿಸಬೇಕು. ಸರಿಯಾಗಿ ಊಟ ಮಾಡಿದರೆ ನಿದ್ದೆಯೂ ಸರಿಯಾಗಿ ಬರುತ್ತದೆ. ಸಮಯಕ್ಕೆ ಸರಿಯಾಗಿ ಊಟ, ನಿದ್ದೆ ಮಗುವಿನ ಆರೋಗ್ಯವನ್ನು ಎಂದಿಗೂ ಸುಸ್ಥಿತಿಯಲ್ಲಿಡುತ್ತದೆ.

ಅಲ್ಲದೆ ಮಕ್ಕಳು ಹಠ ಮಾಡುತ್ತಾರೆಂದು ಅವರಿಗೆ ಚಾಕೋಲೇಟ್, ಬೇಕರಿ ತಿನಿಸುಗಳನ್ನು ನೀಡುವುದು ಖಂಡಿತ ಒಳ್ಳೆಯದಲ್ಲ. ಯಾವುದನ್ನು ತಿನ್ನಬೇಕು,ಯಾವುದು ಆರೋಗ್ಯಕ್ಕೆ ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದು ಮಕ್ಕಳಿಗೆ ತಿಳಿಯುವುದಿಲ್ಲ. ಅವರ ದೇಹಕ್ಕೆ ಹೊಂದುವಂಥ, ಶರೀರದ ಸ್ವಾಸ್ಥ್ಯವನ್ನು ಕಾಯ್ದುಕೊಳ್ಳುವಂಥ ಆರೋಗ್ಯವನ್ನು ಪಾಲಕರೇ ನಿರ್ಧರಿಸಬೇಕು. ಅವನ್ನೇ ನೀಡಬೇಕು. ಇತ್ತೀಚೆಗೆ ಮಕ್ಕಳಿಗಾಗಿಯೇ ಹಲವು ರೀತಿಯ ಖಾದ್ಯಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆಯಾದರೂ ಅವು ಲಾಭವನ್ನು ನಿರೀಕ್ಷಿಸುವ ಸರಕುಗಳಾದ್ದರಿಂದ ಮತ್ತು ಅವೂ ಮಕ್ಕಳಲ್ಲಿ ಬೊಜ್ಜು ಹೆಚ್ಚಿಸುತ್ತವೆ ಎಂಬುದು ಸಾಬೀತಾಗಿರುವುದರಿಂದ ಅವುಗಳ ಬಗ್ಗೆ ಕೊಂಚ ಎಚ್ಚರಿಕೆ ಅಗತ್ಯ. ಆಡಿ ನಲಿಯಬೇಕಾದ ಮಕ್ಕಳು ತಮ್ಮ ದೇಹವೇ ತಮಗೆ ಭಾರವಾದಂತೆ ಚಟುವಟಿಕೆಯಿಲ್ಲದೆ ಕುಳಿತರೆ ಅದಕ್ಕೆ ಪಾಲಕರೇ ಹೊಣೆಯಾಗುತ್ತಾರೆ. ಆದ್ದರಿಂದ ನಿಮ್ಮ ಮಕ್ಕಳ ಆಹಾರ ಹೇಗಿರಬೇಕೆಂಬುದನ್ನು ನೀವೇ ನಿರ್ಧರಿಸಿ.

ಮೂಲ: ವಿಕ್ರಮ

ಆರೋಗ್ಯಕ್ಕೆ ಮನೆ ಮದ್ದು

  • ಶಿಶುವಿಗೆ ತಪ್ಪದೆ ತಾಯಿಯ ಎದೆಹಾಲು ಕುಡಿಸಬೇಕು.
  • ಮಕ್ಕಳಿಗೆ ದೇಶಿ ಆಕಳ ಹಾಲನ್ನೇ ಕುಡಿಸಬೇಕು.
  • ತಪ್ಪದೇ ತಲೆಗೆ ಸ್ನಾನ ಮಾಡಿಸಬೇಕು, ಎಣ್ಣೆ ಮಾಲಿಷ ಮಾಡಬೇಕು. ಶಿಶುವಿಗೆ ಮಾಲಿಷ ಮಾಡಲು ಬದಾಮಿ ಎಣ್ಣೆ ಉಪಯೋಗಿಸಬೇಕು. ಸಾಬೂನಿಗೆ ಬದಲಾಗಿ ಹೆಸರು ಹಿಟ್ಟಿನಲ್ಲಿ ಹಾಲು ಹಾಕಿ ಕಲೆಸಿ, ಲೇಪಿಸಿ, ಸ್ನಾನ ಮಾಡಬೇಕು. ಇದರಿಂದ ಬಹುತೇಕ ಕಾಯಿಲೆಗಳಿಂದ ಮಗುವನ್ನು ರಕ್ಷಿಸಬಹುದು.
  • ಚಾಕಲೇಟ್, ಬಿಸ್ಕಿಟ್,ಬ್ರೆಡ್, ಐಸ್‌ಕ್ರೀಮ್, ತಂಪುಪಾನೀಯ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಅದರ ಬದಲಾಗಿ ಆರೋಗ್ಯದಿಂದಿರಲು ಖರ್ಜೂರ, ದ್ರಾಕ್ಷಿ, ಗೋಡಂಬಿ, ಬಾದಾಮಿ, ಕಲ್ಲು ಸಕ್ಕರೆ, ಒಣ ಹಣ್ಣುಗಳು, ಪಿಸ್ತಾ, ಹೆಸರು ಉಂಡೆ, ಎಳ್ಳು ಉಂಡೆ, ಕರದಂಟು, ಕುಂದಾ, ಪೇಡಾ, ಪುಟಾಣಿ, ಬೆಲ್ಲ, ಕಬ್ಬಿನ ಹಾಲು, ಹಣ್ಣಿನ ರಸ, ಎಳನೀರು, ಕಷಾಯ ಹಾಗೂ ಮನೆಯಲ್ಲಿ ತಯಾರಿಸಿದ ಪದಾರ್ಥಗಳ ರೂಢಿಯನ್ನು ಮಕ್ಕಳಿಗೆ ಮಾಡಿದರೆ ತುಂಬಾ ರೋಗಗಳಿಂದ ಮುಕ್ತ ಮಾಡಬಹುದು.
  • ಮಕ್ಕಳಿಗೆ ಶುದ್ಧ ಹತ್ತಿ ಬಟ್ಟೆ ಹಾಕಬೇಕು.
  • ತುಂಬಾ ಬಿಸಿ ನೀರು ಸ್ನಾನ ಮಾಡಿಸಬಾರದು. 7. ಪ್ರತಿನಿತ್ಯ ಕಬ್ಬು ತಿನ್ನಿಸಿದರೆ ಹಲ್ಲು ಹಾಗೂ ಹೊಟ್ಟೆಯ ತೊಂದರೆ ಇರುವುದಿಲ್ಲ.
  • ಬೆಳಿಗ್ಗೆ ಮಲಮೂತ್ರ ವಿಸರ್ಜನೆ ಮೊದಲು ಏನು ಆಹಾರವಾಗಲಿ, ಚಹಾ ಕಾಫಿಯಾಗಲಿ ಕೊಡಬಾರದು
  • ಮಕ್ಕಳಿಗೆ ಜ್ವರಬಾಧೆ ಬರದಂತೆ ತಡೆಯಲು ಆಗಾಗ ಅಥವಾ ದಿನಾಲು 1 ಸಾರಿ ತುಳಸಿ ಕಷಾಯಕೊಡಬೇಕು.
  • ರಾತ್ರಿ ಊಟದ ನಂತರ 1/2 ಲೋಟ ಬಿಸಿ ನೀರು, 1 ಚಿಟಕಿ ಇಂಗು, ಸ್ವಲ್ಪ ಉಪ್ಪು , 1 ಚಿಟಕಿ ಅಜವಾಣ ಚೂರ್ಣ ಹಾಕಿ ವಾರಕ್ಕೆ 2 ಸಾರಿ ಕುಡಿಸಬೇಕು.
  • ಮಕ್ಕಳ ನೆನಪಿನ ಶಕ್ತಿ ಅಭಿವೃದ್ಧಿಗೆ, ಲೋಟ ಹಾಲು, 1 ಚಮಚ ಜೇನು ಹಾಕಿ ಕುಡಿಸಬೇಕು, ದೂರದರ್ಶನ ತುಂಬಾ ಹಿತಮಿತವಿರಬೇಕು.
  • ಮಕ್ಕಳು ಶಕ್ತಿವಂತರಾಗಲು 1 ಲೋಟ ಹಾಲು + 2 ಬದಾಮಿ ಬೀಜ + 1 ಚಮಚ ಕಲ್ಲುಸಕ್ಕರೆ ಹಾಕಿ ಸೇವಿಸಲು ಕೊಡಬೇಕು.

ಮೂಲ: ವಿಕ್ರಮ

ಪುರುಷನಾಗುವಾಗ

ಹುಡುಗ ದೊಡ್ಡನಾಗುವುದು ಯಾವಾಗ?

ಕಿಶೋರಾವಸ್ಥೆಯಿಂದ ಹದಿವಯಸ್ಸಿಗೆ ಕಾಲಿಡುವಾಗ ಮಕ್ಕಳಲ್ಲಿ ಪ್ರೌಢಾವಸ್ಥೆಯ ಎಲ್ಲ ಲಕ್ಷಣಗಳೂ ಕಾಣಿಸಿಕೊಂಡಾಗ ಅವರು ದೊಡ್ಡವರಾದಂತೆ ಎಂದು ಎಣಿಸಬಹುದು. ಕೆಲವು ಮಕ್ಕಳಲ್ಲಿ 11ರ ಅಂಚಿಗೇ ಇಂಥ ಬದಲಾವಣೆಗಳು ಕಾಣಬಹುದು. ಇನ್ನೂ ಕೆಲವು ಮಕ್ಕಳಲ್ಲಿ ತಡವಾಗಿ ಕಾಣಿಸಿಕೊಳ್ಳಬಹುದು. ಈ ವಯಸ್ಸು ಪ್ರತಿ ಮಕ್ಕಳಲ್ಲಿಯೂ ಭಿನ್ನವಾಗಿರುತ್ತದೆ ಎನ್ನುವುದು ಗಮನಾರ್ಹ.  ಅದು ಸಹಜವೂ ಹೌದು.

ಹುಡುಗ ದೊಡ್ಡನಾಗುವುದು ಯಾವಾಗ?ಕಿಶೋರಾವಸ್ಥೆಯಿಂದ ಹದಿವಯಸ್ಸಿಗೆ ಕಾಲಿಡುವಾಗ ಮಕ್ಕಳಲ್ಲಿ ಪ್ರೌಢಾವಸ್ಥೆಯ ಎಲ್ಲ ಲಕ್ಷಣಗಳೂ ಕಾಣಿಸಿಕೊಂಡಾಗ ಅವರು ದೊಡ್ಡವರಾದಂತೆ ಎಂದು ಎಣಿಸಬಹುದು. ಕೆಲವು ಮಕ್ಕಳಲ್ಲಿ 11ರ ಅಂಚಿಗೇ ಇಂಥ ಬದಲಾವಣೆಗಳು ಕಾಣಬಹುದು. ಇನ್ನೂ ಕೆಲವು ಮಕ್ಕಳಲ್ಲಿ ತಡವಾಗಿ ಕಾಣಿಸಿಕೊಳ್ಳಬಹುದು. ಈ ವಯಸ್ಸು ಪ್ರತಿ ಮಕ್ಕಳಲ್ಲಿಯೂ ಭಿನ್ನವಾಗಿರುತ್ತದೆ ಎನ್ನುವುದು ಗಮನಾರ್ಹ.  ಅದು ಸಹಜವೂ ಹೌದು.

ಜನನಾಂಗದ ಸರಾಸರಿ ಗಾತ್ರವೇನಿರಬಹುದು?

ಪ್ರತಿಯೊಬ್ಬನ ಎತ್ತರ, ಅಗಲ ಹಾಗೂ ತೂಕದಂತೆ ಜನನಾಂಗದ ಗಾತ್ರವೂ ವಿಭಿನ್ನವಾಗಿರುತ್ತದೆ. ಆದರೂ ಹಲವರಿಗೆ ಈ ಬಗ್ಗೆ ಸಂಶಯ ಕಾಡುತ್ತಲೇ ಇರುತ್ತದೆ. ಸಾಮಾನ್ಯವಾಗಿ   9ಸೆಂ.ಮೀ. ನಷ್ಟಿರುತ್ತದೆ. ಉದ್ರೇಕವಿಲ್ಲದ ಸ್ಥಿತಿಯಲ್ಲಿ. ಇದಕ್ಕಿಂತ ಹೆಚ್ಚು ಅಥವಾ ಕಡಿಮೆಯೂ ಇರಬಹುದು. ಕೆಲವು ಸನ್ನಿವೇಶಗಳಲ್ಲಿ ಶಿಶ್ನವು ತನ್ನ ಸಾಮಾನ್ಯ ಸ್ಥಿತಿಗಿಂತಲೂ ಹೆಚ್ಚಾಗಿ ಕುಗ್ಗಿರಬಹುದು. ಈಜಿದಾಗ ಅಥವಾ ಅತೀವ ಚಳಿಯಿದ್ದಾಗ ಈ ಕುಗ್ಗುವಿಕೆ ಕಂಡು ಬರುತ್ತದೆ. ಆದರೆ ಉದ್ರೇಕಗೊಂಡಾಗ ಸಾಮಾನ್ಯವಾಗಿ ಎಲ್ಲರ ಶಿಶ್ನದ ಅಳತೆ 11–15 ಸೆಂ.ಮೀಟರ್‌ನಷ್ಟಿಷರುತ್ತದೆ. ನಿಮ್ಮ ಜನನೇಂದ್ರಿಯದ ಉದ್ದವನ್ನು ಯಾವುದೇ ಚಿಕಿತ್ಸೆಯಿಂದಲೂ ಹೆಚ್ಚಿಸಲಾಗದು. ಆದರೆ ಕೆಲವು ಪ್ರಕರಣಗಳಲ್ಲಿ ಶಿಶ್ನದ ಉದ್ದವನ್ನು ಉತ್ತಮಗೊಳಿಸಬಹುದು.

ಸುನ್ನತಿ ಎಂದರೇನು?
ಶಿಶ್ನದ ಮುಂದೊಗಲನ್ನು ತೆಗೆಯುವುದಕ್ಕೆ ಸುನ್ನತಿ ಎನ್ನುತ್ತಾರೆ. ಸಾಮಾನ್ಯವಾಗಿ ಜೆವಿಶ್‌ ಅಥವಾ ಮುಸ್ಲಿಂ ಸಂಸ್ಕೃತಿಯಲ್ಲಿ ಇದಕ್ಕೆ ಧಾರ್ಮಿಕ ಆಚರಣೆಯ ಮಹತ್ವ ನೀಡಲಾಗಿದೆ. ಆದರೆ ಶಿಶ್ನದ ಮುಂದೊಗಲು ಅಡಚಣೆಯಾಗುವುಂತಿದ್ದರೆ ಎಲ್ಲರೂ ಸಣ್ಣದೊಂದು ಶಸ್ತ್ರಚಿಕಿತ್ಸೆಗೆ ಒಳಗಾಗಿ ಇದನ್ನು ತೆಗೆಸಿಕೊಳ್ಳಬಹುದಾಗಿದೆ. ಸುನ್ನತಿಯ ನಂತರ ಲೈಂಗಿಕ ಜೀವನಕ್ಕೆ ಅಥವಾ ಲೈಂಗಿಕ ಸಾಮರ್ಥ್ಯಕ್ಕೆ ಯಾವುದೇ ಅಡೆತಡೆ ಉಂಟಾಗದು.

ಮಹಿಳೆಯರ ಸುನ್ನತಿ: ಕೆಲವು ದೇಶಗಳಲ್ಲಿ ಲೈಂಗಿಕವಾಗಿ ಅನಾಕರ್ಷಣೆ ಉಂಟಾಗಲಿ ಎಂಬ ಕಾರಣದಿಂದಾಗಿ ಸುನ್ನತಿ ಮಾಡಲಾಗುತ್ತದೆ. ಹೆಣ್ಣುಮಗಳ ಯೋನಿಯ ಚಂದ್ರನಾಡಿಯ ಕೆಲಭಾಗವನ್ನು ಕತ್ತರಿಸಲಾಗುತ್ತದೆ. ಈ ಅಭ್ಯಾಸ ಭಾರತದಲ್ಲಿಲ್ಲ. ಇದು ಕಾನೂನು ಬಾಹಿರವೂ ಹೌದು.

ಶಿಶ್ನದ ಮೇಲೆ ಕಲೆಗಳು ಕಂಡು ಬಂದಿದ್ದು, ತುರಿಕೆಯಾಗುತ್ತಿದ್ದರೆ..?
ಒಂದು ವೇಳೆ ಇತ್ತೀಚೆಗೆ ಕಾಂಡೋಮ್‌ ಇಲ್ಲದೆ ಅಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಲ್ಲಿ ಬಹುಶಃ ಲೈಂಗಿಕ ಸೋಂಕಿಗೆ ಒಳಗಾಗಿದ್ದೀರಿ ಎಂದರ್ಥ. ಕೂಡಲೇ ವೈದ್ಯರನ್ನು ಕಾಣುವುದು ಒಳಿತು. ಆದರೆ ಹುಡುಗರಲ್ಲಿ ಶಿಶ್ನದ ಮೇಲೆ ಇಂಥ ಗುರುತುಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಅದಕ್ಕೆ ಚಿಂತಿಸಬೇಕಾಗಿಲ್ಲ. ತುರಿಕೆಯುಂಟಾಗುತ್ತಿದ್ದಲ್ಲಿ, ಅದರಿಂದ ತೊಂದರೆ ಇದ್ದಲ್ಲಿ ಕೂಡಲೇ ವೈದ್ಯರನ್ನು ಕಾಣುವುದು ಒಳಿತು.  ಅಲರ್ಜಿಯಿಂದಲೂ ಇಂಥ ತೊಂದರೆ ಕಾಣಿಸಿಕೊಳ್ಳುತ್ತದೆ.

ಕೆಲವೊಮ್ಮೆ ಮೀನಿನಂಥ ವಾಸನೆ ಹಾಗೂ ಬಿಳಿಯ ಕಲೆ ಕಂಡು ಬಂದರೆ?
ಇದು ಸಹಜವಾಗಿಯೇ ಆಗಾಗ ಕಾಣಿಸಿ ಕೊಳ್ಳುವಂಥ ಸಮಸ್ಯೆಯಾಗಿದೆ. ಹೀಗಾಗದಂತೆ ತಡೆಯ ಬೇಕಾದರೆ   ಶಿಶ್ನದ  ನೈರ್ಮಲ್ಯ ಕಾಪಾಡಿಕೊಳ್ಳುವುದು ಅತ್ಯವಶ್ಯ. ಹಾಗಾಗಿ ಮುಂದೊಗಲನ್ನು ಹಿಂದಕ್ಕೆ ಸರಿಸಿ, ಸ್ನಾನ ಮಾಡುವಾಗ ಶವರ್‌ ಸಂದರ್ಭದಲ್ಲಿ ಸ್ವಚ್ಛಗೊಳಿಸಿ. ಕೇವಲ ನೀರಿನಿಂದಲೂ ಸ್ವಚ್ಛಗೊಳಿಸಬಹುದು. ಇಲ್ಲವೇ ಸೌಮ್ಯವಾದ ಸೋಪು ಹಾಗೂ ನೀರು ಬಳಸಿ ಸ್ವಚ್ಛ ಮಾಡಿಕೊಳ್ಳಬಹುದು. ಒಂದು ವೇಳೆ ನಿಯಮಿತವಾಗಿ ಸ್ವಚ್ಛಗೊಳಿಸುತ್ತಿದ್ದಾಗಲೂ ಈ ಕಲೆ ಹೋಗದಿದ್ದಲ್ಲಿ, ವಾಸನೆ ಬರುತ್ತಲೇ ಇದ್ದಲ್ಲಿ, ಅಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಂಡಿದ್ದರೆ ಲೈಂಗಿಕ ಸೋಂಕಿಗೆ ಒಳಗಾಗಿದ್ದೀರಿ ಎಂದರ್ಥ. ಕೂಡಲೇ ವೈದ್ಯರನ್ನು ಭೇಟಿ ಮಾಡುವುದು ಒಳಿತು.

ವೀರ್ಯಾಣು ಎಂದರೇನು?
ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದಾಗ ವೀರ್ಯ ದೊಂದಿಗೆ ಹೊರ ಬರುವ ಜೀವ ವೀರ್ಯಾಣುವಾಗಿದೆ. ಇವು ವೃಷಣಗಳಲ್ಲಿ ಉತ್ಪಾದನೆಯಾಗುತ್ತವೆ.

ಒಮ್ಮೆ ಸ್ಖಲಿಸಿದರೆ ಸುಮಾರು ಒಂದು ಕೋಟಿಯಷ್ಟು ವೀರ್ಯಾಣುಗಳು ವೀರ್ಯದೊಂದಿಗೆ ಬಿಡುಗಡೆಯಾಗುತ್ತವೆ. ಆದರೆ ಮಹಿಳೆ ಗರ್ಭಿಣಿಯಾಗಲು ಕೇವಲ ಒಂದೇ ಒಂದು ವೀರ್ಯಾಣು ಸಾಕು. ಹಾಗಾಗಿ ಬಸಿರು ಬೇಡವಾದಲ್ಲಿ ಸಂತಾನ ನಿರೋಧಕಗಳನ್ನು ಬಳಸುವುದು ಒಳಿತು. ಅಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಬದಲು ಕಾಂಡೋಮ್‌ ಬಳಸುವುದು ಒಳಿತು. ಇಲ್ಲದಿದ್ದರೆ ಬೇಡದ ಗರ್ಭಧಾರಣೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಲ್ಲದೇ ಲೈಂಗಿಕ ಸೋಂಕು ರೋಗಗಳಿಗೂ ತುತ್ತಾಗುವ ಸಂಭವನೀಯತೆಗಳು ಹೆಚ್ಚಾಗಿರುತ್ತವೆ.

ಮಾಹಿತಿಗೆ: 1800 208 4444

ಮೂಲ :ಪ್ರಜಾವಾಣಿ

ಕಿಶೋರಾವಸ್ಥೆಯಿಂದ ಹದಿವಯಸ್ಸಿಗೆ ಕಾಲಿಡುವಾಗ ಮಕ್ಕಳಲ್ಲಿ ಪ್ರೌಢಾವಸ್ಥೆಯ ಎಲ್ಲ ಲಕ್ಷಣಗಳೂ ಕಾಣಿಸಿಕೊಂಡಾಗ ಅವರು ದೊಡ್ಡವರಾದಂತೆ ಎಂದು ಎಣಿಸಬಹುದು. ಕೆಲವು ಮಕ್ಕಳಲ್ಲಿ 11ರ ಅಂಚಿಗೇ ಇಂಥ ಬದಲಾವಣೆಗಳು ಕಾಣಬಹುದು. ಇನ್ನೂ ಕೆಲವು ಮಕ್ಕಳಲ್ಲಿ ತಡವಾಗಿ ಕಾಣಿಸಿಕೊಳ್ಳಬಹುದು. ಈ ವಯಸ್ಸು ಪ್ರತಿ ಮಕ್ಕಳಲ್ಲಿಯೂ ಭಿನ್ನವಾಗಿರುತ್ತದೆ ಎನ್ನುವುದು ಗಮನಾರ್ಹ.  ಅದು ಸಹಜವೂ ಹೌದು.ಕಿಶೋರಾವಸ್ಥೆಯಿಂದ ಹದಿವಯಸ್ಸಿಗೆ ಕಾಲಿಡುವಾಗ ಮಕ್ಕಳಲ್ಲಿ ಪ್ರೌಢಾವಸ್ಥೆಯ ಎಲ್ಲ ಲಕ್ಷಣಗಳೂ ಕಾಣಿಸಿಕೊಂಡಾಗ ಅವರು ದೊಡ್ಡವರಾದಂತೆ ಎಂದು ಎಣಿಸಬಹುದು. ಕೆಲವು ಮಕ್ಕಳಲ್ಲಿ 11ರ ಅಂಚಿಗೇ ಇಂಥ ಬದಲಾವಣೆಗಳು ಕಾಣಬಹುದು. ಇನ್ನೂ ಕೆಲವು ಮಕ್ಕಳಲ್ಲಿ ತಡವಾಗಿ ಕಾಣಿಸಿಕೊಳ್ಳಬಹುದು. ಈ ವಯಸ್ಸು ಪ್ರತಿ ಮಕ್ಕಳಲ್ಲಿಯೂ ಭಿನ್ನವಾಗಿರುತ್ತದೆ ಎನ್ನುವುದು.

ಗಮನಾರ್ಹ.  ಅದು ಸಹಜವೂ ಹೌದು.

ಕೊನೆಯ ಮಾರ್ಪಾಟು : 3/5/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate