ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಸಾಮಾನ್ಯ ಆರೋಗ್ಯ / ಅಜೀರ್ಣ ನಿವಾರಣೆಗೆ ಪ್ರಕೃತಿಯ ದಾರಿ
ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಅಜೀರ್ಣ ನಿವಾರಣೆಗೆ ಪ್ರಕೃತಿಯ ದಾರಿ

ಅಜೀರ್ಣ ನಿವಾರಣೆಗೆ ಪ್ರಕೃತಿಯ ದಾರಿ

 

ಅಜೀರ್ಣ ಸಾಮಾನ್ಯವಾಗಿ ಎಲ್ಲರಲ್ಲಿಯೂ ಕಂಡು ಬರುವ ತೊಂದರೆಯಾಗಿದೆ. ಎಲ್ಲರನ್ನೂ ಒಂದಲ್ಲ ಒಂದು ದಿನ ಈ ತೊಂದರೆ  ಕಾಡಿಸಿಯೇ ಕಾಡಿಸಿರುತ್ತದೆ. ಪ್ರಾರಂಭದಲ್ಲಿ ಇದು ಅತ್ಯಂತ ಸರಳವಾಗಿ ಕಾಣಿಸಿದರೂ, ಸತತ ಕಾಡುವ ಅಜೀರ್ಣ, ಹೊಟ್ಟಯುಬ್ಬರ, ಹೈಪರ್ ಎಸಿಡಿಟಿ, ಮಲಬದ್ಧತೆ, ಗ್ಯಾಸ್ ಟ್ರಬಲ್ ಮುಂತಾದ ತೊಂದರೆಗಳಿಗೆ ನಾಂದಿಯಾಗಬಹುದು. ಈ ಸರಳ ತೊಂದರೆಗೆ ಸುಲಭವಾದ ಪ್ರಕೃತಿದತ್ತ ಪರಿಹಾರಗಳನ್ನು ಪಾಲಿಸುವುದನ್ನು ಬಿಟ್ಟು ಅಡ್ಡ ಪರಿಣಾಮಗಳ ಪಟ್ಟಿಯನ್ನೇ ಹೊತ್ತಿರುವ ಮಾತ್ರೆಗಳ ಮೊರೆ ಹೋಗುವುದು ಸರಿಯೇ?

ಇಲ್ಲಿವೆ ಅಂಥ ಕೆಲವು ಪರಿಹಾರಗಳು

ಪ್ರತಿನಿತ್ಯ ಒಂದು ಅಥವಾ ಎರಡು ಬಾರಿ ಖಾಲಿ ಹೊಟ್ಟ್ಟೆಯಲ್ಲಿ ತಂಪು ಪಟ್ಟಿಯನ್ನು 20 ನಿಮಿಷಗಳಕಾಲ ಹಾಕಿಕೊಳ್ಳಬೇಕು. (ತಣ್ಣಿರಿನಲ್ಲಿ ನೆನೆಸಿದ ಬಟ್ಟೆಯನ್ನು ಎರಡು ಮೂರು ಸುತ್ತ ಹೊಟ್ಟ್ಟೆಗೆ ಕಟ್ಟಿ ಹೊರಗಿನಿಂದ  ಒಣ ಉಲ್ಲನ್ ಬಟ್ಟೆಯನ್ನು ಸುತ್ತಬೇಕು.)

ಆಯಸ್ಕಾಂತದ ಮೇಲೆ ಗಾಜಿನ ಬಾಟ್ಲಿಯಲ್ಲಿ ನೀರನ್ನು ಇಟ್ಟು ಉತ್ತರ ಹಾಗೂ ದಕ್ಷಿಣ  ಧ್ರ್ರುವಗಳಲ್ಲಿ ಬೇರೆ ಬೇರೆಯಾಗಿ ಛಾರ್ಜ  ಆದ ನೀರನ್ನು ಸಮ ಪ್ರಮಾಣದಲ್ಲಿ ಸೇರಿಸಿ ಪ್ರತಿನಿತ್ಯ ಮೂರು ಬಾರಿ ಒಂದೊಂದು ಗ್ಲಾಸ್‍ನಂತೆ ಸೇವಿಸಬೇಕು. (ಪ್ರಕೃತಿ ಚಿಕಿತ್ಸಕರ ಸಲಹೆ ಪಡೆದು ಈ ಚಿಕಿತ್ಸೆ ತೆಗೆದುಕೊಳ್ಳುವುದು ಉತ್ತಮ)

ಮುಂಜಾನೆ ಎದ್ದ ಕೂಡಲೇ ಮೂರರಿಂದ ನಾಲ್ಕು ಲೋಟ ಶುದ್ಧವಾದ ನೀರನ್ನು ಸೇವಿಸುವುದರಿಂದ ಅಜೀರ್ಣ ನಿವಾರಣೆಯಾಗುತ್ತದೆ.

ವಾರದಲ್ಲಿ ಒಂದು ಬಾರಿ ಮುಂಜಾನೆ 8-10 ಲೋಟ ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಹಾಕಿ ಗಟಗಟನೆ ಕುಡಿದು ಬೆರಳನ್ನು ಗಂಟಲಿಗೆ ಹಾಕಿ ಸಪ್ರಯತ್ಮದಿಂದ ವಾಂತಿ ಮಾಡಬೇಕು. ಇದರಿಂದ ಶೇಖರಣೆಗೊಂಡ ಹೆಚ್ಚಿನ ಆಮ್ಲ ಹೊರ ಹೋಗಿ ಜೀರ್ಣಕೋಶದ ಆರೋಗ್ಯ ವರ್ಧಿಸುತ್ತದೆ. ಇದನ್ನು ಯೋಗಶಾಸ್ತ್ರದಲ್ಲಿ ವಮನ ಧೌತಿ ಎನ್ನುತ್ತಾರೆ. ಏರು ರಕ್ತದೊತ್ತಡ ಇರುವವರು ಉಪ್ಪನ್ನು ಹಾಕದೇ ನೀರನ್ನು ಉಪಯೋಗಿಸಬೇಕು. ಮೊದಲಬಾರಿ ಅಭ್ಯಾಸ ಮಾಡುವಾಗ ಪ್ರಕೃತಿ ಚಿಕಿತ್ಸಾ ವೈದ್ಯರ ಮಾರ್ಗದರ್ಶನದಲ್ಲಿ ಮಾಡುವದು ಒಳಿತು.

ದಿನದಲ್ಲಿ ಮೂರು ಬಾರಿ ಮಾತ್ರ ಆಹಾರ ಸೇವಿಸುವ ಅಭ್ಯಾಸವನ್ನು ಇಟ್ಟುಕೊಳ್ಳಬೇಕು. ಹೆಚ್ಚು ಬಾರಿ  ಹೆಚ್ಚೆಚ್ಚು ತಿಂದಷ್ಟು ಅಜೀರ್ಣ ಹೆಚ್ಚುತ್ತಾ ಹೋಗುತ್ತದೆ.

ವಾರದಲ್ಲಿ ಒಂದು ದಿನ ಕೇವಲ ಹಣ್ಣುಗಳು ಮತ್ತು ಹಣ್ಣಿನ ರಸವನ್ನು ಮಾತ್ರ ಸೇವಿಸಬೇಕು. ಆಹಾರದಲ್ಲಿ ಕರಿದ ತಿಂಡಿಗಳು ಮತ್ತು ಬೇಕರಿ ತಿನಿಸುಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಆಹಾರ ಸೇವಿಸುವಾಗ ಹೊಟ್ಟೆಯ ಅರ್ಧಭಾಗವನ್ನು ಘನ ಆಹಾರದಿಂದ, ಕಾಲುಭಾಗವನ್ನು ದ್ರವ ಆಹಾರದಿಂದ ತುಂಬಿಸಿ ಇನ್ನುಳಿದ ಕಾಲು ಭಾಗವನ್ನು ಖಾಲಿ ಬಿಡಬೇಕು.

ಊಟದ ಮಧ್ಯೆ ನೀರನ್ನು ಕುಡಿಯಬಾರದು. ಒಂದು ಲೋಟ ಮಜ್ಜಿಗೆ ತೆಗೆದುಕೊಳ್ಳಬಹುದು. ಊಟಕ್ಕೆ ಅರ್ಧಗಂಟೆ ಮೊದಲು ಹಾಗೂ ಒಂದು ಗಂಟೆಯ ನಂತರ ನೀರನ್ನು ಯಥೇಚ್ಛವಾಗಿ  ಕುಡಿಯಬಹುದು. ಸೇವಿಸಿದ ಆಹಾರ ಪೂರ್ತಿಯಾಗಿ ಜೀರ್ಣವಾಗಲು ದೈಹಿಕ ಶ್ರಮ ಅತ್ಯಗತ್ಯ. ಪ್ರತಿದಿನ ಕನಿಷ್ಠ ಒಂದು ಗಂಟೆಯ ಯೋಗಾಭ್ಯಾಸ ರೂಢಿಸಿಕೊಳ್ಳಿ.

ಆಹಾರೌಷಧಿಗಳು

 • ಪುದಿನಾ ಸೊಪ್ಪಿನಲ್ಲಿ ಚಹಾ ತಯಾರಿಸಿ ಸೇವಿಸಿದರೆ ಜೀರ್ಣಶಕ್ತಿ ಹೆಚ್ಚುತ್ತದೆ.
 • ಊಟದ ನಂತರ ಏಲಕ್ಕಿ ಕಾಳುಗಳನ್ನಾಗಲಿ ಇಲ್ಲವೇ ಓಮಕಾಳುಗಳನ್ನಾಗಲೀ  ಸೇವಿಸುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ.
 • ಅಜೀರ್ಣದ  ತೊಂದರೆಯಿಂದ ಬಳಲುತ್ತಿರುವವರು ನೆಲ್ಲಿಕಾಯಿ ರಸಕ್ಕೆ ಬೆಲ್ಲ ಬೆರೆಸಿ ಕುಡಿಯುವುದರಿಂದ ಸಮಸ್ಯೆ ಪರಿಹಾರವಾಗುತ್ತದೆ.
 • ದ್ರಾಕ್ಷಿ, ಸೇಬು, ಕಿತ್ತಳೆ, ಮಾಗಿದ ಬಾಳೆಹಣ್ಣು ಸೇವಿಸುವುದರಿಂದ ಜೀರ್ಣಶಕ್ತಿ ವೃದ್ಧಿಸುತ್ತದೆ.
 • ಪ್ರತಿದಿನ ಮುಂಜಾನೆ ಒಂದು ಲೋಟ ತಣ್ಣಿರಿಗೆ ಒಂದು ಚಮಚ ಜೇನು ಬೆರೆಸಿ ಸೇವಿಸುತ್ತ ಬಂದರೆ ಜೀರ್ಣಶಕ್ತಿ ವೃದ್ಧಿಸುತ್ತದೆ.
 • ಮೂಲಂಗಿಯನ್ನು ಚೆನ್ನಾಗಿ ತೊಳೆದು, ತುರಿದು ಅದಕ್ಕೆ ಮೊಸರು ಬೆರೆಸಿ ಸೇವಿಸುವುದರಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ.
 • ಹಸಿ ಸೌತೆಕಾಯಿಯನ್ನು ಸಣ್ಣಗೆ ಕತ್ತರಿಸಿ ಕೋಸಂಬರಿಯ ಹಾಗೆ ಮಾಡಿ ಅದಕ್ಕೆ ಕಾಳು ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು ಹಾಕಿ ಇಂಗನ್ನು ನೀರಿನಲ್ಲಿ ನೆನೆಸಿ ಒಂದೆರಡು ಹನಿ ಬೆರೆಸಿ ಸೇವಿಸಿದರೆ ಜೀರ್ಣಶಕ್ತಿ ವರ್ಧಿಸುವುದು.
 • ಪ್ರತಿನಿತ್ಯ ಒಂದು ಹಿಡಿ ತುಳಸಿ ಎಲೆ ರಸವನ್ನು ಸೇವಿಸಿದರೆ ಒಳ್ಳೆಯದು.
 • 1 ಚಮಚ ಕೊತ್ತಂಬರಿ ಬೀಜ, ಸ್ವಲ್ಪ ಶುಂಠಿಯನ್ನು ನೀರಿನಲ್ಲಿ ಕುದಿಸಿ, ಜೇನುತುಪ್ಪ ಬೆರೆಸಿ ಸೇವಿಸಿದರೆ ಅಜೀರ್ಣದಿಂದ ಉಂಟಾದ ಹೊಟ್ಟೆನೋವು ಪರಿಹಾರವಾಗುತ್ತದೆ.
 • ಮೆಂತ್ಯವನ್ನು ತುಪ್ಪದಲ್ಲಿ ಹುರಿದು ಅದಕ್ಕೆ ಉಪ್ಪು ಬೆರೆಸಿ ಕುಟ್ಟಿ ಪುಡಿಮಾಡಿ ಊಟದಲ್ಲಿ ಅನ್ನಕ್ಕೆ ಈ ಪುಡಿ ಸೇರಿಸಿ ಸೇವಿಸುವುದರಿಂದ ಅಜೀರ್ಣ ನಿವಾರಣೆಯಾಗುತ್ತದೆ.

ಮೂಲ: ಡಾ|| ವೆಂಕಟ್ರಮಣ ಹೆಗಡೆ

2.83870967742
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top