ಇಂದು ಸಾಮಾನ್ಯವಾಗಿ ಹಲವರಲ್ಲಿ ಹಲವಾರು ರೀತಿಯ ಅಲರ್ಜಿಗಳು ಕಂಡುಬರುತ್ತಿದೆ. ಅದು ಚರ್ಮದ ಅಲರ್ಜಿ ಇರಬಹುದು, ಶೀತ, ನೆಗಡಿ ಆಗುವಂತದ್ದು, ದಮ್ಮು, ಕೆಮ್ಮು, ಅಸ್ತಮ ಬರುವಂತದ್ದು, ಕೆಲವೊಂದು ಬಾರಿ ಆಹಾರದ ಅಲರ್ಜಿ- ಯಾವೊಂದು ಆಹಾರ ಸೇವಿಸಿದರೆ ಮೈ ಮೇಲೆ ಗುಳ್ಳೆ ಆಗುವಂತದ್ದು ಇಂತವುಗಳು ಕಂಡುಬರುತ್ತಿದೆ.
ಹಾಗಾಗಿ ಇದನ್ನು ಕಡಿಮೆಮಾಡಿಕೊಳ್ಳಲು ನಾವು ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅತ್ಯವಶ್ಯಕ.
ನಮ್ಮ ದೇಹವು ಯಾವೊಂದು ಆಹಾರವನ್ನು ಅಥವಾ ವಸ್ತುವನ್ನು ವಿಷವೆಂದು ಭಾವಿಸಿ ಅಲ್ಲದೇ ಪರಕೀಯವೆಂದು ಭಾವಿಸುವುದೋ ಅದಕ್ಕೆ ಕೂಡಲೇ ಪ್ರತಿಕ್ರಿಯಿಸುತ್ತದೆ. ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗದೇ ಇರುವಾಗ ಅದು ಅಲರ್ಜಿಯಾಗಿ ಪರಿಣಮಿಸಬಹುದು.
ಮೊಟ್ಟಮೊದಲಿನದಾಗಿ ಯಾವುದರಿಂದ ಅಲರ್ಜಿ ಉಂಟಾಗುತ್ತದೆ ಎಂಬುದನ್ನು ಕಂಡುಹಿಡಿಯಬೇಕು. ಅದನ್ನು ತ್ಯಜಿಸುವುದು ಉತ್ತಮ. ಆಹಾರದ ಬದಲಾವಣೆ ಅತ್ಯಗತ್ಯ. ಕರಿದ ಆಹಾರ ಬಹಳ ಅಪಾಯ. ಅಂತೆಯೇ ಬಿಸಿ ಮಾಡಿದ ಎಣ್ಣೆಯೂ ಸಹ ಹೆಚ್ಚು ತೊಂದರೆಯನ್ನುಂಟುಮಾಡುತ್ತದೆ. ಸಂಸ್ಕರಿತ ಎಣ್ಣೆಯ ಬಳಕೆ ಕಡಿಮೆ ಮಾಡಬೇಕು. ಬೇಕರಿಯ ಆಹಾರ ಪದಾರ್ಥ ಹಾಗೂ ಸಂಸ್ಕರಣೆಗೊಂಡ ಆಹಾರವನ್ನು ಸೇವಿಸದಿರುವುದು ಒಳಿತು. ಇವೆಲ್ಲವುಗಳು ಅಲರ್ಜಿಯನ್ನು ಉಲ್ಬಣಗೊಳಿಸುವ ಪರಿಣಾಮವನ್ನು ನೀಡುತ್ತದೆ. ಒಮೆಗಾ-6 ಅಂಶವನ್ನು ಹೊಂದಿರುವ ಆಹಾರ ಪದಾರ್ಥವನ್ನು ಕಡಿಮೆಮಾಡಿ ಒಮೆಗಾ-3 ಪೋಷಕಾಂಶ ಹೊಂದಿರುವ ಆಹಾರವನ್ನು ತೆಗೆದುಕೊಳ್ಳಬೇಕು.
ವಿಟಮಿನ್ ‘ಸಿ’ ಜೀವಸತ್ವ ಹೊಂದಿರುವ ಆಹಾರಗಳಾದ ಸೀಬೆಹಣ್ಣು, ನಿಂಬೆಹಣ್ಣು, ಮೂಸಂಬಿ, ಕಿತ್ತಳೆಹಣ್ಣು ಇವುಗಳನ್ನು ಹೆಚ್ಚು ಸೇವಿಸಬೇಕು. ಅದರಲ್ಲೂ ಪೇರಲೆಹಣ್ಣು ಅಲರ್ಜಿಯ ವಿರುದ್ಧ ಹೋರಾಡುವ ವಿಶೇಷ ಸಾಮಥ್ರ್ಯವನ್ನು ಹೊಂದಿದೆ.
ಒಂದು ವಾರ ತಪಸ್ಸಿನಂತೆ ನೈಸರ್ಗಿಕ ಆಹಾರವೊಂದನ್ನೇ (ಹಣ್ಣು, ಹಂಪಲುಗಳು, ನಟ್ಸ್‍ಗಳು, ಹಸಿತರಕಾರಿಗಳು, ಹಸಿರುಸೊಪ್ಪುಗಳು, ಮೊಳಕೆಕಾಳುಗಳು, ಸಲಾಡ್, ಜ್ಯೂಸ್ ಇತ್ಯಾದಿ) ಸೇವಿಸಿ ದೇಹವನ್ನು ನಿಯಂತ್ರಿಸಿಕೊಳ್ಳಬೇಕು. ಅಲರ್ಜಿಯನ್ನು ಕಡಿಮೆ ಮಾಡಲು ಇದು ಸಹಾಯಮಾಡುತ್ತದೆ. ಕಾರ್ಬೋಹೈಡ್ರೇಟ್ ಅಂಶವನ್ನು ಹೊಂದಿರುವ ಆಹಾರ ಪದಾರ್ಥವನ್ನು ಕಡಿಮೆಮಾಡಿದಾಗ ಇದು ಅಲರ್ಜಿಯನ್ನು ನಿಯಂತ್ರಿಸಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.
ಏರೋಬಿಕ್ಸ್ ವ್ಯಾಯಾಮ, ವೇಗ ನಡಿಗೆಯು ಅಲರ್ಜಿಯನ್ನು ಕಡಿಮೆ ಮಾಡಲು ಸಹಕಾರಿ. ಜೊತೆಯಲ್ಲಿ ಪ್ರಕೃತಿ ಚಿಕಿತ್ಸೆಗಳಾದ ಜಲನೇತಿ, ಸೂತ್ರನೇತಿ, ಉಗಿಚಿಕಿತ್ಸೆ, ಹೈಡ್ರೋಥೆರಪಿ, ಬಿಸಿನೀರಿನಲ್ಲಿ ಕಾಲಿಟ್ಟುಕೊಳ್ಳುವುದು ಇವುಗಳು ಪರಿಣಾಮಕಾರಿ. ಶುಂಠಿ ಕಷಾಯ, ತುಳಸಿ ಕಷಾಯ ಒಳ್ಳೆಯದು.
ಈ ಎಲ್ಲ ಉಪಾಯಗಳಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿ ಅಲರ್ಜಿಯೊಂದಿಗೆ ಹೋರಾಡುವ ಸಾಮಥ್ರ್ಯವನ್ನು ವೃದ್ಧಿಸಿಕೊಂಡು ಸ್ವಸ್ಥ ಆರೋಗ್ಯವನ್ನು ಪಡೆಯೋಣ.
ಮೂಲ: ಡಾ|| ವೆಂಕಟ್ರಮಣ ಹೆಗಡೆ
ಕೊನೆಯ ಮಾರ್ಪಾಟು : 2/15/2020