অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಆರೋಗ್ಯವೇ ಭಾಗ್ಯ

ಆರೋಗ್ಯವೇ ಭಾಗ್ಯ

‘Be careful, your body is ‘the living temple of God’’ ಎಂಬ ಪ್ರೊಫೆಸರ್ ಹಕ್ಸಲೆ, ಪಾಶ್ಚಾತ್ಯ ಪಂಡಿತರ ಮಾತು ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ಸೂಕ್ಷ್ಮವಾಗಿ ದರ್ಶಿಸುತ್ತದೆ.

ಆಧ್ಯಾತ್ಮಿಕ ಮೂಲದ ನೆಲೆಗಟ್ಟಿನ ಮೇಲೆ ಭದ್ರವಾದ ಜೀವನಸಂಗತಿಗಳನ್ನು  ಆಚರಿಸುತ್ತಿರುವ ಭಾರತೀಯರು ನಾವು. ಸಂಸ್ಕ್ರತಿ, ಸಂಪ್ರದಾಯಗಳೆಂಬ ಬೇರಿನ ಆಧಾರದಿಂದ ಆಚರಣೆಯೆಂಬ ಸಸಿ ಬೆಳೆದು ಅದು ಆರೋಗ್ಯವೆಂಬ ಫಲವನ್ನು ನೀಡುವ ಸಾಮಥ್ರ್ಯ ಹೊಂದಿದೆ ಎಂದರೆ ಅತಿಶಯೋಕ್ತಿಯಾಗದು. ಪೂರ್ವಿಕರ ಕಾಲದಿಂದಲೂ ಸಹ ಸರಿಯಾದ ಭಾರತೀಯ ಆಚರಣೆಗಳು ವೈಜ್ಞಾನಿಕವಾಗಿ ಉಪಯುಕ್ತವೇ ಆಗಿದೆ ಎಂಬುದನ್ನು ಇಂದಿನ ವಿಜ್ಞಾನಿಗಳೂ ಸಹ ಒಪ್ಪಲೇಬೇಕು. ಪ್ರತಿಯೊಂದು ನಂಬಿಕೆಯ ಹಿಂದೆಯೂ ಸಹ ಆರೋಗ್ಯವನ್ನು ವರ್ಧಿಸುವ ತಂತ್ರಗಾರಿಕೆಯು ಇತ್ತೆಂಬುದು ಅಧ್ಯಯನದಿಂದ ತಿಳಿದುಬರುತ್ತದೆ.

ಅನಾದಿ ಕಾಲದಿಂದಲೂ ಪ್ರಚಲಿತವಿರುವ ಆಯುರ್ವೇದ  ಪದ್ಧತಿಯು ಮಾತ್ರವಲ್ಲದೇ, ಚರಕ, ಸುಶ್ರುತ, ವಾಗ್ಭಟ ಮುಂತಾದ ತಜ್ಞ ವೈದ್ಯರು ಶಸ್ತ್ರ ಚಿಕಿತ್ಸೆಯಿಂದ ಹಿಡಿದು ಪ್ರಕೃತಿಯ ಸರ್ವ ಆರೋಗ್ಯ ಪೂರಕ ವಿಷಯಗಳ ಬಗೆಗೆ ಜ್ಞಾನವನ್ನು ಹೊಂದಿದ್ದರೆಂಬುದು ವಿಶ್ವ ಮಾನ್ಯ.

ಈಗಿನ ಯಾವುದೇ ವೈದ್ಯಕೀಯ ಪದ್ಧತಿಯೂ ಸಹ ಇದರಿಂದ ಹೊರತಾಗಿಲ್ಲ ಎಂಬುದು ಚರಕ ಸಂಹಿತೆ, ಸುಶ್ರುತ ಸಂಹಿತೆ, ಅಷ್ಟಾಂಗ ಹೃದಯ ಮುಂತಾದ ಮಹಾಗ್ರಂಥಗಳಿಂದ ತಿಳಿದು ಬರುತ್ತದೆ. ಈ ಎಲ್ಲದರ ಹಿಂದಿನ ವೈಜ್ಞಾನಿಕ ಮನೋಭಾವವು ಆರೋಗ್ಯವರ್ಧನೆಗೆ ಸಹಾಯಕಾರಿಯಾಗಿದೆ.

ಇದನ್ನು ಅರಿತ ಮಾನವನು ಇಂದಿನ ಕಾಲದಲ್ಲಿ ತಾನೇನೋ ಹೊಸತನ್ನು ಕಂಡುಹಿಡಿದಿದ್ದೇನೆಂಬ ಭ್ರಮೆಯಲ್ಲಿ ತೇಲಾಡುತ್ತಿರುವುದು ಮೂರ್ಖತನದ ಪರಮಾವಧಿ. ಆದರೆ ಅದನ್ನು ಪುನಃ ಆಚರಣೆಗೆ ತರುವ ಅರಿವನ್ನು ಮೂಡಿಸುವ ವಿಜ್ಞಾನದ ಕಾರ್ಯ ನಿಜಕ್ಕೂ ಶ್ಲಾಘನೀಯ. ಸಂಶೋಧನೆಗಳು, ಶೋಧನೆಗಳು, ಆವಿಷ್ಕಾರಗಳು ದೃಷ್ಟಾಂತದ ಮೂಲಕ ಸತ್ಯತೆಯನ್ನು ಸಾಕ್ಷೀಕರಿಸಲು ಸಹಾಯಮಾಡುತ್ತಿದೆ.

ಉದಾಹರಣೆಗೆ 2016 ರ ವೈದ್ಯಕೀಯ ನೋಬಲ್ ಪಾರಿತೋಷಕವು ಉಪವಾಸದ ಮಹತ್ವ, ಉಪವಾಸದಿಂದ ಜೀವಕೋಶದಲ್ಲಾಗುವ ‘ಆಟೋಫೇಜಿ’ ಎಂಬ ಸ್ವಶುದ್ಧೀಕರಣ ಕ್ರಿಯೆಯ ಮರ್ಮವನ್ನು ಕಂಡುಹಿಡಿದ ಜಪಾನ್ ವಿಜ್ಞಾನಿಗೆ ಲಭಿಸಿದೆ.

ಭಾರತೀಯ ಋಷಿಮುನಿಗಳು ಅನಾದಿಕಾಲದಿಂದಲೂ ಮಿತಆಹಾರ ಹಾಗೂ ಉಪವಾಸದ ಪ್ರಾಮುಖ್ಯತೆಯನ್ನು ಸಾರಿದ್ದಾರೆ. ಇದು ಇಂದು ವೈಜ್ಞಾನಿಕವಾಗಿಯೂ ಸಾಬೀತಾಗಿರುವುದು ನಮ್ಮ ಮಿತ, ವ್ಯವಸ್ಥಿತ ಆಹಾರ ಪದ್ಧತಿಯನ್ನು ಸೂಚಿಸುತ್ತದೆ.

ಹಾಗಾಗಿ ಸತ್ಯದ ಅರಿವಿನಿಂದಾಗಿ ಉತ್ತಮ ಆಚರಣೆಗಳೊಂದಿಗೆ ಮೂಢ ನಂಬಿಕೆಗಳಿಂದ ವಿಮುಕ್ತರಾಗಿ ಸ್ವಸ್ಥ ಹಾಗೂ ಶುದ್ಧ ಆರೋಗ್ಯದ ಪ್ರಾಮುಖ್ಯತೆಯನ್ನು ಅರಿತು ಬಾಳಬೇಕು. ಮೇಲಿನ ವಾಕ್ಯದಂತೆ ನಮ್ಮ ಜೀವನ ಸಾಫಲ್ಯತೆಯನ್ನು ಪಡೆಯಲು ದೇಹದ ಮೂಲಕ ಸಾಧನೆಯಾಗಬೇಕು. ಅದಕ್ಕೆ ಆರೋಗ್ಯ ಅನಿವಾರ್ಯ. ಆರೋಗ್ಯವೆನ್ನುವ ಭಾಗ್ಯವಿದ್ದಾಗ ಮಾತ್ರ ನಾವು ಭೂಮಿಯಲ್ಲಿ ಯಾಕಾಗಿ ಜನ್ಮ ತಳೆದಿದ್ದೇವೆಯೋ ಅದು ನೆರವೇರಲು ಸಾಧ್ಯ. ಹಾಗಾಗಿ ‘ಆರೋಗ್ಯವೇ ಭಾಗ್ಯ’ ಎಂದರಿತು ಆರೋಗ್ಯ ವರ್ಧನೆಗೆ ಇಂದಿನಿಂದಲೇ ಕಾರ್ಯಪ್ರವೃತ್ತರಾಗೋಣ.

ಮೂಲ: ಡಾ|| ವೆಂಕಟ್ರಮಣ ಹೆಗಡೆ

ಕೊನೆಯ ಮಾರ್ಪಾಟು : 2/17/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate