অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಆಹಾರದ ವ್ಯಸನದಿಂದ ಮುಕ್ತಿ ಹೇಗೆ

 

ಆಹಾರ ಪದಾರ್ಥಗಳ ವ್ಯಸನ

ಸಾಧಾರಣವಾಗಿ ಹೆಚ್ಚಿನವರು ಸಂಸ್ಕರಿತ ಆಹಾರ ಪದಾರ್ಥಗಳ ವ್ಯಸನ ಅಥವಾ ಜಂಕಫುಡ್ ವ್ಯಸನ ಎಂಬ ಪದಗಳನ್ನು ಕೇಳಿರುತ್ತೀರಿ. ನಾವೀಗ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಸೇವಿಸುವ ಪದಾರ್ಥಗಳಲ್ಲಿ ಹೆಚ್ಚಿನಂಶವು ವ್ಯಸನವಾಗಿ ಮಾರ್ಪಟ್ಟು ಇಡೀ ಆಹಾರ ವ್ಯಸನವೇ ಆಗಿ ಹೋಗಿದೆ.

ಹಿರಿಯರು, ಮಧ್ಯವಯಸ್ಕರು, ಮಕ್ಕಳು ಎಂಬಿತ್ಯಾದಿಯಾಗಿ ಬೇಧಭಾವವಿಲ್ಲದೆ ನಾವು ನೋಡುವ ಎಲ್ಲರೂ ಆಹಾರದ ವ್ಯಸನಿಗಳೇ ಆಗಿದ್ದಾರೆ. ಯಾವುದೇ ಒಂದು ಪದಾರ್ಥಕ್ಕೆ ಅದು ವ್ಯಸನವನ್ನುಂಟು ಮಾಡುತ್ತದೆ ಎಂದು ಯಾವಾಗ ಹೇಳುತ್ತೇವೆಂದರೆ ಆ ಪದಾರ್ಥದಿಂದ ದೂರವಿರಲು ನಮ್ಮಿಂದ ಸಾಧ್ಯವಾಗದೇ ಇದ್ದಾಗ ಅಥವಾ ನಿಂತಲ್ಲಿ, ಕೂತಲ್ಲಿ, ಹೋದಲ್ಲಿ, ಬಂದಲ್ಲಿ ಆ ವಸ್ತುವಿನ ಚಿಂತೆ ಹತ್ತಿ ಅದೇ ಬೇಕೆಂದು ಅನಿಸಿದಾಗ.

ಈಗಿನ ಆಹಾರವೇ ವ್ಯಸನಯುಕ್ತ ಆಹಾರವಾಗಿ ಪರಿವರ್ತನೆಗೊಂಡಿದೆ. ಅತಿಯಾದ ಉಪ್ಪು, ಸಕ್ಕರೆ, ಮೈದಾ, ಮಾಂಸಾಹಾರ, ಮಸಾಲೆ ಪದಾರ್ಥ, ಎಣ್ಣೆ (ಕೊಬ್ಬು) ಇತ್ಯಾದಿಗಳ ಬಳಕೆಯಿಂದಾಗಿ ಎಣ್ಣೆ + ಮಸಾಲೆ ಪದಾರ್ಥ + ಉಪ್ಪು ಅಥವಾ ಎಣ್ಣೆ +ಮೈದಾ+ಸಕ್ಕರೆ ಅಥವಾ ಎಣ್ಣೆ + ಕಡಲೇ ಹಿಟ್ಟು + ಸಕ್ಕರೆ ಇವುಗಳನ್ನು ಬಳಸದೇ ಶೇಕಡಾ 99 ಪ್ರತಿಶತ ಇತ್ತೀಚಿನ ಯಾವುದೇ ಪದಾರ್ಥಗಳು ತಯಾರಾಗುವುದಿಲ್ಲ. ಇಂತಹ ಆಹಾರಗಳನ್ನು ಸೇವಿಸುವುದರಿಂದ ವ್ಯಕ್ತಿಯು ಒಬ್ಬ ವ್ಯಸನಿಯಾಗಿ ಬದಲಾಗುತ್ತಾನೆ. ಸೇವಿಸಿದಷ್ಟೂ ಮತ್ತು ಹೆಚ್ಚು ಸೇವಿಸಬೇಕು ಎನ್ನುವ ಚಪಲಚಿತ್ತತೆ ಮನೆ ಮಾಡುತ್ತದೆ.

ಹೊಗೆಸೊಪ್ಪು, ಬೀಡಿ, ಸಿಗರೇಟು, ಸಾರಾಯಿ, ಕಾಫಿ ಇತ್ಯಾದಿಗಳ ಅತಿಯಾದ ಅನಿಯಮಿತ ಬಳಕೆಯು ಒಬ್ಬ ಮನುಷ್ಯನನ್ನು ತನ್ನ ನಶೆಗೆ ಎಳೆದುಕೊಳ್ಳುತ್ತದೆ. ಆ ವ್ಯಕ್ತಿಗೆ ಬೇರೆ ಯಾವುದೇ ವಸ್ತುವಿನ ಅಥವಾ ವಿಷಯದ ಬಗ್ಗೆ ಅಗತ್ಯತೆ ತೋರಿಬರದೇ ಇಂತಹ ವ್ಯಸನಕಾರೀ ವಸ್ತುಗಳ ನಶೆಯಲ್ಲಿಯೇ ಮುಳುಗಿರಲು ಸದಾ ಬಯಸುತ್ತಾನೆ. ಏಕೆಂದರೆ ಒಮ್ಮೆ ಈ ನಶೆ ಅಥವಾ ವ್ಯಸನದಿಂದ ಹೊರಬರುವ ಪ್ರಯತ್ನವನ್ನು ಮಾಡಿದನೆಂದರೆ ಶರೀರದಲ್ಲಿ ಸಂಕಟವಾಗಿ ತಲೆನೋವು ಬಂದು, ತಲೆ ತಿರುಗಿ, ವಾಂತಿಯಾಗಿ ಆಯಾಸವಾಗಲು ಪ್ರಾರಂಭವಾಗುತ್ತದೆ. ಇವುಗಳಿಗೆ ಹೆದರಿ ಆತ ಪುನಃ ಪುನಃ ವ್ಯಸನಕಾರೀ ಪದಾರ್ಥಗಳನ್ನು ಸೇವಿಸುತ್ತಾನೆ.

ಅಂದರೆ ನಮ್ಮ ಶರೀರಕ್ಕೆ ನಾವು ವ್ಯಸನಯುಕ್ತ ಪದಾರ್ಥಗಳನ್ನು ಹಲವಾರು ಬಾರಿ ಕೊಟ್ಟು ನಂತರ ಒಮ್ಮೆಲ್ಲೇ ಅವುಗಳನ್ನು ಶರೀರಕ್ಕೆ ಪೂರೈಸದೇ ನಿಲ್ಲಿಸಿದಾಗ ಶರೀರವು ಇಷ್ಟು ದಿನ ನಾವು ಸೇವಿಸಿದ ವಿಷಕಾರಿ ವಸ್ತುಗಳಿಂದ ಉಂಟಾದ ಹಾನಿಯನ್ನು ಸರಿಪಡಿಸಲು ಪ್ರಾರಂಭಿಸುತ್ತದೆ ಹಾಗೂ ಜೀವಕೋಶಗಳಿಂದ ಈ ವಿಷಯುಕ್ತ ವಸ್ತುಗಳನ್ನು ಹೊರಹಾಕಲು ಪ್ರಾರಂಭಿಸುತ್ತದೆ. ಇದನ್ನೇ ನಾವು ವಿಥ್‍ಡ್ರಾವಲ್ ಸಿಂಪ್ಟಮ್ ಎಂದು ಕರೆಯುತ್ತೇವೆ.

‘ಅಯ್ಯೋ ನನಗೆ ಕಾಫಿ ಕುಡಿಯದಿದ್ದರೆ ತಲೆನೋವು ಶುರುವಾಗುತ್ತದೆ ಎಂದು ಹಲವರು ಹೇಳುವುದನ್ನು ನೀವು ಕೇಳಿರಬಹುದು. ಹಾಗಾಗಿ ಈ ತಲೆನೋವು ಅಥವಾ ಸುಸ್ತು, ವಾಂತಿ, ಸಂಕಟ ಇತ್ಯಾದಿಗಳಿಂದ ಬಚಾವಾಗಿ ಸರಿಯಾಗಿರಬೇಕು ಎಂದು ಬಯಸಿ ಒಂದಷ್ಟು ಹೆಚ್ಚಿಗೆ ಕಾಫಿಯನ್ನು ಅಥವಾ ಹೆಚ್ಚಿನ ಆಹಾರವನ್ನೇ ಸೇವಿಸುತ್ತೀರಿ. ಇದರಿಂದಾಗಿ ನಿಮಗೆ ಹಿತಕರ ಭಾವನೆ ಉಂಟಾಗುತ್ತದೆ. ಇದಕ್ಕೆ ಕಾರಣವೆಂದರೆ ಆಹಾರವನ್ನು ಜೀರ್ಣಮಾಡುವಂತಹ ಸಮಯದಲ್ಲಿ ಶರೀರವು ತನ್ನಲ್ಲಿರುವ ವಿಷವಸ್ತುಗಳನ್ನು ಹೊರಹಾಕುವುದನ್ನು ಹಾಗೂ ಹಾನಿಗೊಳಾದ ಜೀವಕೋಶಗಳನ್ನು ಸರಿಮಾಡುವ ಕಾರ್ಯಗಳನ್ನು ನಿಲ್ಲಿಸುತ್ತದೆ. ಇಂತಹ ಸಂದರ್ಭದಲ್ಲಿ ವಿಥಡ್ರಾವಲ್ ಸಿಂಪ್ಟಮ್ಸ್ ಇಲ್ಲದೇ ಇರುವುದರಿಂದಾಗಿ ತಾತ್ಕಾಲಿಕವಾಗಿ ದೇಹಕ್ಕೆ ಹಿತವೆನಿಸುವುದರಲ್ಲಿ ಆಶ್ಚರ್ಯವಿಲ್ಲ.!!

ಇದರಂತೆಯೇ ಸಾಮಾನ್ಯವಾಗಿ ಎಲ್ಲರೂ ನಿಜವಾದ ಹಸಿವೆಯನ್ನು ಗುರುತಿಸುವ ಹಾಗೂ ಆಗ ಮಾತ್ರ ಆಹಾರ ಸೇವಿಸುವ ಕ್ಷಮತೆಯನ್ನು ಕಳೆದುಕೊಂಡು ಕೃತ್ರಿಮ ಹಸಿವಿನ ದಾಸರಾಗಿದ್ದಾರೆ. ಇದಕ್ಕೆ ಕಾರಣ ಅತಿ ಹೆಚ್ಚು ಬಳಸುವ ಅಧಿಕ ಶಕ್ತಿಕೊಡುವ ಪದಾರ್ಥಗಳಾದ ಎಣ್ಣೆ, ಕೊಬ್ಬು, ಸಕ್ಕರೆ, ಮಾಂಸಾಹಾರ, ಸಂಸ್ಕರಿಸಿದ ಆಹಾರಗಳು, ಪೇಯಗಳು, ಸಾಫ್ಟಡ್ರಿಂಕ್ಸ್ ಇತ್ಯಾದಿ.

ಆಹಾರ ಪದಾರ್ಥಗಳ ಅನಿಯಮಿತ ಸೇವನೆ

ಇಂತಹ ಆಹಾರ ಪದಾರ್ಥಗಳ ಅನಿಯಮಿತ ಸೇವನೆಯಿಂದಾಗಿ ಕೃತ್ರಿಮ ಹಸಿವೆಯೇ ಹೆಚ್ಚಿ, ಒಮ್ಮೆ ನಾವು ಆಹಾರ ಸೇವಿಸಿದ ಮೇಲೆ ಅದು ಜೀರ್ಣವಾಗುವ ಹೊತ್ತಿಗೆ, ನಮ್ಮ ಜೀರ್ಣಾಂಗವ್ಯೂಹ ಖಾಲಿ ಇರುವಾಗ ಪುನಃ ಹಸಿವೆಯಾಗಲು ಪ್ರಾರಂಭವಾಗುತ್ತದೆ. ಆಗ ಅಕಸ್ಮಾತ ನಾವು ಅಗತ್ಯ ಆಹಾರ (ಅಧಿಕ ಶಕ್ತಿಯುತ ಆಹಾರ) ಪೂರೈಕೆ ಮಾಡದೇ ಹೋದಲ್ಲಿ ಅದು ನಮ್ಮ ಶರೀರದಲ್ಲಿ ಅಹಿತಕರ ಭಾವನೆಯನ್ನುಂಟು ಮಾಡುತ್ತದೆ. ಆದ್ದರಿಂದ ಇಂತಹ ಅಹಿತಕರ ಭಾವನೆಗಳಿಗೆ ಹೆದರಿ ಹೆಚ್ಚು ಶಕ್ತಿಯುತ ಆಹಾರ ವಸ್ತುವನ್ನು (ಚಿಪ್ಸ್, ಬಜ್ಜಿ, ಬೋಂಡ, ಚಾಕೋಲೇಟ್, ಹಲವು ವಿಧದ ಪೇಯಗಳು, ಬರ್ಗರ್, ಸಮೋಸ ಇತ್ಯಾದಿ) ಸೇವಿಸುತ್ತೇವೆ.

ಬರೀ ಸಿಗರೇಟು, ಬೀಡಿ, ಸಾರಾಯಿ, ಕ್ಯಾಫಿನೇಟೆಡ್ ಡ್ರಿಂಕ್ಸ್ ಅಷ್ಟೇ ಅಲ್ಲದೇ ನಾವು ಸೇವಿಸುವ ವಿಷಯುಕ್ತ ಆಹಾರ ಪದಾರ್ಥಗಳಿಂದಾಗಿಯೂ ಸಹ ಇಂತಹ ಅಹಿತಕರ ಸಂವೇದನೆಗಳುಂಟಾಗುತ್ತವೆ. ನೈಸರ್ಗಿಕ ಉತ್ತಮ ಆಹಾರ ಸೇವನೆಯನ್ನು ರೂಢಿಸಿಕೊಂಡ ಮೇಲೆಯೂ ಸಹ ಸ್ವಲ್ಪ ದಿನಗಳವರೆಗೆ (ಮೊದಲೇ ಆಗಿರುವ ಹಾನಿಯಿಂದ ಶರೀರ ಹೊರಬರುವವರೆಗೆ) ಸಹ ಇಂತಹ ಸಂವೇದನೆಗಳು ಬರಬಹುದು. ಕೆಲವರಲ್ಲಿ ಹೊಟ್ಟೆಯುಬ್ಬರ ವಾಂತಿಬಂದಂತಾಗುವುದು, ತಲೆನೋವು, ಸಣ್ಣಜ್ವರ, ಇತ್ಯಾದಿಗಳು ಕಾಣಿಸಿಕೊಳ್ಳುವ ಸಂಭವಗಳಿವೆ. ಏಕೆಂದರೆ ಒಮ್ಮೆ ಸತ್ವಯುತ ಆಹಾರ ಪದಾರ್ಥಗಳನ್ನು ಸೇವಿಸಲು ಪ್ರಾರಂಭಿಸಿದರೂ ಸಹ ಈ ಮುಂಚೆ ಸೇವಿಸಿದ ವಿಷಯುಕ್ತ ಆಹಾರ ಪದಾರ್ಥಗಳಿಂದುಂಟಾದ ಹಾನಿಯನ್ನು ಸರಿಪಡಿಸಿಕೊಳ್ಳಲು ಶರೀರ ಪ್ರಯತ್ನಿಸುತ್ತಿರುತ್ತದೆ. ಹಾಗಾಗಿ ಉತ್ತಮ ಆಹಾರವನ್ನೇ ಸೇವಿಸುತ್ತಿದ್ದರೂ ಸ್ವಲ್ಪ ದಿನಗಳ ಮಟ್ಟಿಗೆ ಇಂತಹ ಅಹಿತಕರ ಸಂವೇದನೆಗಳು ಸರ್ವೇಸಾಮಾನ್ಯ ಹಾಗೂ ಇವುಗಳ ಪುನಃ ನಿಮ್ಮನ್ನು ವಿಷಕಾರಿ ಆಹಾರ ಪದಾರ್ಥಗಳ ಸೇವನೆಗೆ ಪ್ರೇರೇಪಿಸುತ್ತವೆ. ಆದರೆ ಕೆಲವು ದಿನಗಳೊಳಗೆ ಈ ಸಂವೇದನೆಗಳೆಲ್ಲಾ ಅಳಿಸಿ ಹೋಗಿ ನಿಜವಾದ ಹಸಿವು ಉಂಟಾಗಲು ಪ್ರಾರಂಭಿಸುತ್ತದೆ. ಹಾಗಾಗಿ ಈ ಅಹಿತಕರ ಘಟನೆಗಳಿಗೆ ಹೆದರಬೇಕಾಗಿಲ್ಲ ಹಾಗೂ ಸತ್ವಯುತ ಆಹಾರದ ಬಳಕೆಯನ್ನು ನಿಲ್ಲಿಸಬೇಕಾಗಿಲ್ಲ..!!

“ನಾನು ಬಹಳಷ್ಟು ಆಹಾರ ಪದ್ಧತಿಗಳನ್ನು ಅಳವಡಿಸಿಕೊಂಡು ನೋಡಿದೆ. ಆದರೆ ಯಾವುದರಿಂದಲೂ ಪ್ರಯೋಜನವಾಗಲಿಲ್ಲ” ಎಂದು ಬಹಳಷ್ಟು ಜನರು ಹೇಳುತ್ತಾರೆ. ಅದರಲ್ಲಿಯೂ ತೂಕ ಕಳೆದುಕೊಳ್ಳುವವರಿಗಂತೂ ಇದು ಕಬ್ಬಿಣದ ಕಡಲೆಯಂತೆಯೇ ಸರಿ...!! ತರಹೇವಾರಿ ವಿಧಾನಗಳನ್ನು ಬಳಸಿ ಯಾವುದರಿಂದಲೂ ಸರಿಕಾಣದೇ ಮೊದಲಿಗಿಂತಾ ಹೆಚ್ಚು ಹಾನಿಯನ್ನು ಶರೀರಕ್ಕೆ ಉಂಟು ಮಾಡುವುದಕ್ಕಿಂತಲೂ ನಿಜವಾಗಿ ಮಾಡಬೇಕಾಗಿರುವುದು ಏನೆಂದರೆ ನೀವು ಸೇವಿಸುವ ಎಲ್ಲಾ ಆಹಾರ ಪದಾರ್ಥಗಳೂ ಸತ್ವಯುತವಾಗಿದೆಯೇ ಹಾಗೂ ಕಡಿಮೆ ಕ್ಯಾಲೋರಿಯುತವಾಗಿದೆಯೇ ಎಂದು ಎಚ್ಚರಿಕೆ ವಹಿಸುವುದು. ಇದರಿಂದಾಗಿ ಆರೋಗ್ಯಪೂರ್ಣವಾದ ಆಹಾರಾಭ್ಯಾಸವೂ ಹಾಗೂ ನಿಜವಾದ ಹಸಿವೆಯನ್ನು ಗುರುತಿಸುವ ಕ್ಷಮತೆಯೂ ರೂಢಿಯಾಗುತ್ತದೆ ಹಾಗೂ ಹಸಿವೆಯಾಗದಿದ್ದರೂ ನಾಲಿಗೆ ಚಪಲಕ್ಕಾಗಿ ಕೃತ್ರಿಮ ಆಹಾರ ಸೇವಿಸುವುದನ್ನು ತಪ್ಪಿಸುತ್ತದೆ. ಸತ್ವಪೂರ್ಣ ಆಹಾರಭ್ಯಾಸವು ಶರೀರದಲ್ಲಿ ಸೇರಿಕೊಂಡ ವಿಷವಸ್ತುಗಳನ್ನು ಹೊರಹಾಕಿ ಅದರಿಂದುಂಟಾದ ಹಾನಿಯನ್ನು ಸರಿಪಡಿಸುತ್ತದೆ. ಜೊತೆ ಜೊತೆಗೆ ನಿಜವಾದ ಹಸಿವನ್ನೂ ಗುರುತಿಸಲು ಪ್ರಾರಂಭಿಸಿದರೆ ಆರೋಗ್ಯಪೂರ್ಣ ಸತ್ವಪೂರ್ಣ ಆಹಾರವನ್ನೇ ಇಷ್ಟಪಡಲು ಪ್ರಾರಂಭಿಸುತ್ತೀರಿ ಹಾಗೂ ಇದರಿಂದಾಗಿ ಶರೀರಕ್ಕೆ ಉತ್ತಮ ಆರೋಗ್ಯ ‘ಬೋನಸ್’ ನಂತೆ ದೊರೆಯುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ...!!

ಆರೋಗ್ಯಕ್ಕೆ ಒಳಿತಲ್ಲದೆ ಆಹಾರ ಪದಾರ್ಥ

ಅತಿಯಾದ ಆಹಾರ ಸೇವನೆ, ಶರೀರದಲ್ಲಿ ತೂಕವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಇತರೇ ದೀರ್ಘಕಾಲೀನ ವ್ಯಾಧಿಗಳೆಲ್ಲವೂ ಜೊತೆಗೂಡುತ್ತಾ ಹೋಗುತ್ತವೆ. ಅದರಲ್ಲಿಯೂ ಕೊಬ್ಬುಯುಕ್ತ ಸಂಸ್ಕರಿತ ಆಹಾರ ಸೇವನೆಯು ಕ್ಯಾನ್ಸರನಂತಹ ಭೀಕರ ಖಾಯಿಲೆಗಳನ್ನು ತಂದೊಡ್ಡುತ್ತದೆ.

ಕಲಬೆರಕೆ ಆಹಾರವನ್ನು ಸೇವಿಸುವುದರಿಂದಾಗಿ ಇವುಗಳು ಕೆಲವು ಹಾನಿಕಾರಕ ವಿಷವಸ್ತುಗಳನ್ನು ದೇಹಕ್ಕೆ ಬಿಡುಗಡೆಗೊಳಿಸಬಹುದು. ಆದರೆ ನಾವು ಸೇವಿಸುವ ಅಧಿಕ ಶಕ್ತಿಯುತ ಆಹಾರ ಪದಾರ್ಥಗಳು ನಮ್ಮ ಶರೀರದಲ್ಲಿ ಫ್ರೀರ್ಯಾಡಿಕಲ್ಸ್ ನಂತಹ ವಿಷವಸ್ತುಗಳಾಗಿ ಪರಿವರ್ತನೆಗೊಳ್ಳುತ್ತವೆ ಹಾಗೂ ನೂರಕ್ಕೂ ಹೆಚ್ಚು ರಾಸಾಯನಿಕಗಳನ್ನು ಬಿಡುಗಡೆಗೊಳಿಸುತ್ತವೆ. ಇವುಗಳು ನಮ್ಮ ಶರೀರದಲ್ಲಿರುವ ವಂಶವಾಹೀ ವಾಹಕಗಳನ್ನು (ಆಓಂ) ಹಾನಿಗೊಳಿಸುತ್ತವೆ. ಇದರಿಂದಾಗಿ ಜನಿಸುವಾಗಲೇ ಹಲವು ಮಕ್ಕಳು ವಿಚಿತ್ರ ಖಾಯಿಲೆಗಳನ್ನೊಳಗೊಂಡಿರುತ್ತವೆ ಹಾಗೂ ಕ್ಯಾನ್ಸರ್, ಮಧುಮೇಹ, ಹೃದಯ ದೌರ್ಬಲ್ಯದಂತಹ ಭೀಕರ ರೋಗಗಳಿಗೂ ಅಣಿಮಾಡಿಕೊಂಡಿರುತ್ತವೆ. ಶರೀರದಲ್ಲಿ ಅತಿಯಾಗಿ ಹಾಗೂ ಅನಗತ್ಯವಾಗಿ ಶೇಖರಣೆಗೊಂಡ ಕೊಬ್ಬಿನ ಕಣಗಳು ಹಾಗೂ ಜೀವಕೋಶಗಳು ನಮ್ಮಲ್ಲಿ ಅತಿಹೆಚ್ಚಿನ ಹಾನಿಯನ್ನುಂಟು ಮಾಡುತ್ತವೆ.

ಹೆಚ್ಚು ಕ್ಯಾಲೋರಿಯನ್ನು ಸೇವಿಸುವುದರಿಂದ ಅದು ಕೊಬ್ಬಾಗಿ ಶೇಖರಗೊಳ್ಳುತ್ತದೆ ಮತ್ತು ಇದು ಶರೀರದಲ್ಲಿ ಇನ್‍ಫ್ಲಾಮೇಟರಿ ಸೈಟೋಕೈನ್ಸ್‍ಗಳಾದ ಇಂಟರಲ್ಯೂಕಿನ್ಸ್, ಟ್ಯೂಮರ್ ನೆಕ್ರೋಸಿಗ್ ಫ್ಯಾಕ್ಟರ್ಸ್ ಇತ್ಯಾದಿಗಳನ್ನು ಉತ್ಪತ್ತಿ ಮಾಡುತ್ತದೆ ಹಾಗೂ ಇವುಗಳು ಜೀವಕೋಶದ ಭಿತ್ತಿಯಲ್ಲಿರುವ ಇನ್ಸುಲಿನ ರಿಸೆಪ್ಟಾರ್ಸ್ ಗಳನ್ನು ಹಾಳುಮಾಡುವುದರಿಂದ ಶರೀರದಲ್ಲಿ ಇನ್ಸುಲಿನ ನಿರೋಧಕತೆಯು ಉತ್ಪತ್ತಿಯಾಗಿ 2 ನೇ ಪ್ರಕಾರದ ಮಧುಮೇಹವನ್ನುಂಟು ಮಾಡುತ್ತದೆ ಹಾಗೂ ಫ್ಯಾಟಿಲಿವರ್, ಟ್ರೈಗ್ಲಿಸರೈಡ್‍ಗಳ ಹೆಚ್ಚಾಗುವಿಕೆ ಇತ್ಯಾದಿಗಳಿಗೂ ಕಾರಣವಾಗುತ್ತದೆ.

ಉಪ್ಪನ್ನು ಹೆಚ್ಚು ಬಳಸುವುದರಿಂದಾಗಿ ನಮ್ಮಲ್ಲಿ ಅಧಿಕ ರಕ್ತದೊತ್ತಡ, ಕ್ಲಾಟ್ಸ್, ಹೃದಯಸ್ಥಂಬನ, ಹೊಟ್ಟೆಯ ಕ್ಯಾನ್ಸರ್ ಇತ್ಯಾದಿಗಳು ಉದ್ಭವಗೊಳ್ಳುತ್ತವೆ. ಒಂದು ವೇಳೆ ಈಗ ನಿಮ್ಮಲ್ಲಿ ಲೋ ಬಿಪಿ ಅಥವಾ ಕಡಿಮೆ ರಕ್ತದೊತ್ತಡವಿದ್ದರೂ ಅತಿಯಾದ ಉಪ್ಪು ಹಾಗೂ ಉಪ್ಪಿನಂಶಯುಕ್ತ ಆಹಾರ ಪದಾರ್ಥಗಳ ಸೇವನೆಯಿಂದಾಗಿ ಮುಂದೊಂದು ದಿನ ಅಧಿಕ ರಕ್ತದೊತ್ತಡ ಉಂಟಾಗುವ ಸಂಭವ ಹೆಚ್ಚು ಹಾಗೂ ಒಮ್ಮೆ ಅಧಿಕ ರಕ್ತದೊತ್ತಡವೆಂಬ ಕಾಯಿಲೆಗೆ ಗುರಿಯಾದರೆ ಬರೀ ಉಪ್ಪನ್ನು ಕಡಿಮೆ ಮಾಡುವುದರಿಂದ ಇದು ಕಡಿಮೆಗೊಳ್ಳುವುದಿಲ್ಲ. ಇದರ ನಿಯಂತ್ರಣಕ್ಕಾಗಿ ಔಷಧಿಗಳ ಮೊರೆಹೋಗಬೇಕಾದ ಪರಿಸ್ಥಿತಿಯು ಎದುರಾಗುತ್ತದೆ.

ಉಪ್ಪಿನ ಅಧಿಕ ಉಪಯೋಗದಿಂದ ಕಾಲಾನಂತರದಲ್ಲಿ ರಕ್ತದೊತ್ತಡವು ಹೆಚ್ಚಾಗಿ ಇದು ರಕ್ತನಾಳಗಳ ಕ್ಷಮತೆಯನ್ನು ಕುಂದಿಸುವುದರಿಂದ ಮೆದುಳಿನಲ್ಲಿ ರಕ್ತನಾಳಗಳು ಒಡೆದು ಹೋಗುತ್ತವೆ. ಇದಕ್ಕೆ ಹೆಮೋರೇಜಿಕ್‍ಸ್ಟ್ರೋಕ್ ಎಂದು ಕರೆಯಲಾಗುತ್ತದೆ. ಇದರಿಂದಾಗಿ ಮೆದುಳಿನ ಜೀವಕೋಶಗಳಿಗೆ ಹಾನಿಯುಂಟಾಗುತ್ತದೆ ಹಾಗೂ ಆ ಭಾಗವನ್ನವಲಂಬಿಸಿದ ಶರೀರದ ಇತರ ಭಾಗಗಳು ತಮ್ಮ ಕೆಲಸವನ್ನು ಸ್ಥಗಿತಗೊಳಿಸುತ್ತವೆ.

ಉಪ್ಪಿನ ಅಧಿಕ ಸೇವನೆಯು ನಮ್ಮ ಶರೀರದಲ್ಲಿನ ಕ್ಯಾಲ್ಸಿಯಂ ಹಾಗೂ ಇತರೇ ಲವಣಗಳನ್ನು ಮೂತ್ರದ ಮೂಲಕ ಶರೀರದಿಂದ ಹೊರಹಾಕುವುದರಿಂದ ಮೂಳೆಗಳು ಬಲ ಕಳೆದುಕೊಂಡು ಮೆದುಮೂಳೆರೋಗ ಅಥವಾ ಆಸ್ಟಿಯೋಪೋರೋಸಿಸ್ ಉಂಟಾಗುತ್ತದೆ.

‘ಉಪ್ಪಿಗಿಂತ ರುಚಿ ಬೇರೆಯಿಲ್ಲ’ ಎಂಬ ಮಾತನ್ನು ಕೇಳಿರಬಹುದು ಆದರೂ, ಅತಿಯಾದ ಉಪ್ಪಿನ ಸೇವನೆಯನ್ನು ನಿಲ್ಲಿಸುವುದರಿಂದ ಆಹಾರದಲ್ಲಿರುವ ರುಚಿಗಳ ಬಗ್ಗೆ ಅಥವಾ ಉಪ್ಪಿಲ್ಲದೆಯೂ ಆಹಾರ ರುಚಿಕರವಾಗಿರುತ್ತದೆ ಎಂಬುದು ನಿಮ್ಮ ಅರಿವಿಗೆ ಬರುತ್ತದೆ ಹಾಗೂ ಇದು ಹಲವು ವಿಧಾನಗಳಲ್ಲಿ ನಿಮ್ಮ ಶರೀರವನ್ನು ಆರೋಗ್ಯಪೂರ್ಣಗೊಳಿಸುತ್ತದೆ.

ಒಂದೇ ಸಲ ಇಂತಹ ಎಲ್ಲ ಆಹಾರಗಳನ್ನೂ ಬಿಟ್ಟು ಬಿಡುತ್ತೇನೆ ಎಂಬ ದೊಡ್ಡ ನಿರ್ಧಾರಕ್ಕಿಂತ ಸ್ವಲ್ಪ ಸ್ವಲ್ಪವಾಗಿ ಇಂತಹ ಚಟಗಳಿಂದ ಹೊರಬರುವುದು ಒಳ್ಳೆಯದು. ಏಕೆಂದರೆ ಎಷ್ಟೇ ದೃಢ ಸಂಕಲ್ಪ ಮಾಡಿದರೂ ಅದನ್ನು ಮೀರಿ ನಿಲ್ಲುವ ಚಪಲಚಿತ್ತತೆ ಎಲ್ಲರಲ್ಲೂ ಇರುತ್ತದೆ ಹಾಗೂ ಒಮ್ಮೆಲೇ ಇಂತಹ ಪದಾರ್ಥಗಳಿಂದ ದೂರವಿರುವುದರಿಂದ ಇವು ಕೊಡುವ ವಿಥ್‍ಡ್ರಾವಲ್ ಎಫೆಕ್ಟನಿಂದ ಉಂಟಾಗುವ ತಳಮಳವನ್ನು ಸಹಿಸುವ ಕ್ಷಮತೆಯೂ ಇಲ್ಲದಾಗಿ ಪುನಃ ಇಂತಹ ಪದಾರ್ಥಗಳನ್ನೋ ಅಥವಾ ಕ್ಯಾಲೋರಿಯುಕ್ತ ಹೆಚ್ಚು ಆಹಾರವನ್ನೋ ಸೇವಿಸುವ ಸಂಭವವೇ ಅಧಿಕವಾಗಿರುತ್ತದೆ.

ನಮ್ಮ ಆರೋಗ್ಯಕ್ಕೆ ಒಳಿತಲ್ಲದೆ ಇಂತಹ ಆಹಾರ ಪದಾರ್ಥಗಳನ್ನು ತ್ಯಜಿಸುವಾಗ ತಲೆನೋವು, ಸುಸ್ತು, ಮೈ ತುರಿಕೆ, ಇತ್ಯಾದಿಗಳು ಸಾಮಾನ್ಯವಾಗಿ ಕಂಡುಬಂದರೂ ಇವುಗಳು ಬಹಳ ಬೇಗ ಗುಣಹೊಂದಿ ನಿಮ್ಮ ಶರೀರಕ್ಕುಂಟಾದ ಹಾನಿಯಿಂದ ದೇಹವು ರಕ್ಷಿಸಲ್ಪಡುತ್ತದೆ. ಹಸಿರು ಸೊಪ್ಪು, ತರಕಾರಿ, ಹಣ್ಣುಗಳು, ಬೀಜಕಾಳುಗಳನ್ನು ಸೇವಿಸುವುದರಿಂದ ಇವುಗಳು ದೇಹಕ್ಕೆ ಬೇಕಾದ ಎಲ್ಲ ಪೋಷಕಾಂಶಗಳನ್ನು ಒದಗಿಸುತ್ತವೆ ಹಾಗೂ ಶರೀರದಲ್ಲಿ ಶೇಖರಣೆಗೊಂಡ ಕಶ್ಮಲಗಳನ್ನು ಹೊರದೊಡುತ್ತವೆ. ಇದರಿಂದ ರೋಗಗಳೂ ತಡೆಯಲ್ಪಟ್ಟು, ದೀರ್ಘಾಯಸ್ಸನ್ನು ಹೊಂದಲು ಇದೊಂದು ಪ್ರಭಾವಶಾಲಿ ವಿಧಾನವಾಗಿ ಪರಿಣಮಿಸುತ್ತದೆ.

ಮೂಲ: ಡಾ|| ವೆಂಕಟ್ರಮಣ ಹೆಗಡೆ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate