অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಐವಿಎಫ್‌ ವೈಫಲ್ಯ

ಐವಿಎಫ್‌ ವೈಫಲ್ಯ

ಬಂಜೆತನಕ್ಕೆ ಪರಿಹಾರವೆಂಬಂತೆ ಐವಿಎಫ್‌ ಚಮತ್ಕಾರಿ ಚಿಕಿತ್ಸೆಯಾಗಿದೆ. ಆದರೆ ಐವಿಎಫ್‌ನ ವೈಫಲ್ಯಕ್ಕೆ ಕಾರಣಗಳನ್ನು ವಿಶ್ಲೇಷಿಸುತ್ತಿರುವಾಗ ಮುಖ್ಯವಾದ ಇನ್ನೊಂದು ಅಂಶವನ್ನು ಮರೆಯುವಂತಿಲ್ಲ. ಅದು ವೀರ್ಯಾಣು ಹಾಗೂ ವೀರ್ಯಾಣುವಿನ ಡಿಎನ್‌ಎ.

ಇದೂ ಸಹ ಗರ್ಭಕಟ್ಟುವಲ್ಲಿ, ಗರ್ಭದ ಕಸಿ ಮಾಡುವಲ್ಲಿ, ಭ್ರೂಣ ಬೆಳೆಯುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಗರ್ಭಕೋಶಕ್ಕಿಂತಲೂ ಹೆಚ್ಚಾಗಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಐವಿಎಫ್‌ ವೈಫಲ್ಯಗಳಲ್ಲಿ ಅತಿ ಸಾಮಾನ್ಯವಾಗಿರುವ ಸಮಸ್ಯೆಯೆಂದರೆ ವೀರ್ಯಾಣುವಿನ ಗುಣಮಟ್ಟ ಹಾಗೂ ವೀರ್ಯಾಣುವಿನ ಡಿಎನ್‌ಎ. ಅಶಕ್ತ ಭ್ರೂಣದಿಂದಾಗಿ ಬಸಿರು ಕಟ್ಟುವುದು ಕಷ್ಟಕರವಾಗುತ್ತದೆ.

ಐವಿಎಫ್‌ ಮೂಲಕ ಗರ್ಭಧಾರಣೆ ಯಾದವರಲ್ಲಿ ಶೇ 25ರಷ್ಟು ಮಾತ್ರ ಭ್ರೂಣಗಳು ಗರ್ಭಕೋಶದಲ್ಲಿ ಬೆಳೆದು, ಮಗುವಾಗಿ ಹುಟ್ಟುತ್ತವೆ. ಸರಾಸರಿ ಆಧಾರದ ಮೇಲೆ ಹೇಳುವಾಗ ಈ ಯಶಸ್ಸು ಮುಖ್ಯವಾಗಿ ಮಹಿಳೆಯರ ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ. 35ನೇ ವಯಸ್ಸಿನ ಒಳಗೆ ಶೇ 45ರಷ್ಟು ಗರ್ಭಕಸಿ ಆಗಿರುತ್ತವೆ. ಶೇ 15ರಷ್ಟು 40–42ನೇ ವಯಸ್ಸಿನಲ್ಲಿ ಆಗಿರುತ್ತವೆ. ಒಂದು ವೇಳೆ ಭ್ರೂಣದ ಗುಣಮಟ್ಟವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದರೆ ಐವಿಎಫ್‌ ಚಿಕಿತ್ಸೆಯ ಯಶಸ್ಸಿನ ಸಾಧ್ಯತೆಗಳು ಹೆಚ್ಚಾಗುತ್ತವೆ.

ಈ ಐದು ಕಾರಣಗಳಿಂದ ಐವಿಎಫ್‌ ವಿಫಲವಾಗಬಹುದು. ಆದರೆ ಮೊದಲ ಯತ್ನದ ವೈಫಲ್ಯದಿಂದಾಗಿ ಮರು ಯತ್ನ ಮಾಡುವುದನ್ನು ಬಿಡಬೇಡಿ. ಆದರೆ ನಿಮ್ಮ ವೈದ್ಯರು, ನರ್ಸಿಂಗ್ ಹೋಮ್‌, ಚಿಕಿತ್ಸೆಯ ಬಗೆ ಮುಂತಾದವುಗಳೆಲ್ಲವನ್ನೂ ಮರು ಮೌಲ್ಯಮಾಪನ ಮಾಡುವ ಸಮಯವಿದು.

ಜೊತೆಜೊತೆಗೆ ನಿಮ್ಮ ವೈದ್ಯರೊಂದಿಗೆ ಐವಿಎಫ್‌ ವೈಫಲ್ಯಕ್ಕೆ ಕಾರಣಗಳನ್ನು ಸಮಾಲೋಚಿಸುವ ಸಮಯವೂ ಇದು. ಯಾವ ಕಾರಣಗಳಿಂದಾಗಿ ವಿಫಲವಾಯಿತು ಎನ್ನುವುದನ್ನು ಅರಿಯುವಲ್ಲಿ ಪ್ರಯತ್ನಿಸಿದರೆ ಮುಂದಿನ ಯತ್ನಗಳಲ್ಲಿ ಯಶಸ್ಸನ್ನು ಸಾಧಿಸಬಹುದು. ಒಂದು ವೇಳೆ ನಿಮ್ಮಿಂದ ಅಥವಾ ನಿಮ್ಮ ಸಂಗಾತಿಯಿಂದ ಆತಂಕಕ್ಕೆ ಒಳಗಾಗಿ ಇನ್ನಾವುದೇ ಕಾರಣಗಳಿಂದ ವಿಫಲವಾಗಿದ್ದರೆ ಅದನ್ನು ಪುನರ್‌ ವಿಮರ್ಶಿಸಿ ಕೊಳ್ಳಬಹುದು. ಮುಂದಿನ ಯತ್ನದಲ್ಲಿ ಇವು ಪಾಠಗಳಾಗಿ ಪರಿಣಮಿಸುತ್ತವೆ. ಪ್ರಯತ್ನಗಳನ್ನು ಕೈಬಿಡಬಾರದು. ಒಂದು ಭ್ರೂಣವು ಗರ್ಭದಲ್ಲಿ ಅಂಟಿಕೊಳ್ಳದೇ ಇರಲು ಕಾರಣಗಳೇನು? ಗರ್ಭಗೋಡೆಯಿಂದ ಕಳಚಿಕೊಳ್ಳುವುದೇಕೆ?

ಆನುವಂಶಿಕ ಹಾಗೂ ಕ್ರೊಮೊಸೊಮ್‌ ಕಾರಣದಿಂದಾಗಿ ಗರ್ಭಕಸಿಕಟ್ಟುವುದು ಕಷ್ಟಕರವಾಗುತ್ತದೆ. ಮಹಿಳೆಯರ ವಯಸ್ಸು ಹೆಚ್ಚಾದಂತೆ ಕ್ರೊಮೊಸೊಮ್‌ಗಳು ಅಸಹಜ ತೆಯ ಸಾಧ್ಯತೆ ಅಂಡಾಣುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. 30ರ ನಂತರ ಮಹಿಳೆಯ ಅಂಡಾಣುವಿನಲ್ಲಿ ಕ್ರೊಮೊಸೊಮ್‌ ಗಳಲ್ಲಿಯ ಅಸಹಜತೆಗಳು ಹೆಚ್ಚಾಗುತ್ತ ಹೋಗುತ್ತವೆ ಎಂದು ಅಧ್ಯಯನಗಳು ತಿಳಿಸಿವೆ.

ಮಧ್ಯವಯಸ್ಸಿಗೆ ತಲುಪುತ್ತಿದ್ದಂತೆ, ನಲ್ವತ್ತರ ಅಂಚಿನಲ್ಲಿ ಈ ಅಸಹಜತೆಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ. ಶೇ 75ರಷ್ಟು ಭ್ರೂಣಗಳು ಇಂಥ ಅಸಹಜತೆಯಿಂದ ಕೂಡಿರುತ್ತವೆ. ಅಂಡಾಣುವಿನ ನ್ಯುಕ್ಲಿಯಸ್‌ಗಳು ಅಶಕ್ತವಾಗತೊಡಗುತ್ತವೆ. ಅಂಡಾಶಯದಿಂದ ಅಂಡಾಣುಗಳು ಸಾಲುಗಟ್ಟಿ ನಿಲ್ಲುವುದು, ಅಂಡಾಣುವು ಫಲಿತದ ಸಮಯದಲ್ಲಿ ಬಿಡುಗಡೆ ಯಾಗುವಂತೆ ನೋಡಿಕೊಳ್ಳುವುದು. ಋತುಚಕ್ರದ ಸಮಯದಲ್ಲಿ ಬಲು ವಯಸ್ಸಾದ ಅಂಡಾಣು ಬಿಡುಗಡೆಯಾದರೆ ಅಲ್ಲಿ ವರ್ಣತಂತುಗಳ ಜೋಡಿ ಸಮರ್ಪಕವಾಗಿರುವುದಿಲ್ಲ.

ಇಂಥ ‘ದೋಷಗಳು’ ವಯಸ್ಸಾದ ಅಂಡಾಣುವಿನಲ್ಲಿ ಕಂಡು ಬರುತ್ತದೆ. 23 ಜೋಡಿಗಳ ವರ್ಣತಂತುವಿನಲ್ಲಿ ಹೆಚ್ಚು ಕಡಿಮೆಯಾದರೆ ಅದು ದೋಷಪೂರಿತ ಅಂಡಾಣು ವಾಗಿರುತ್ತದೆ. ವರ್ಣತಂತುವಿನ ಜೋಡಿ ಪೂರ್ಣವಾಗದಿದ್ದಲ್ಲಿ ಆ ಅಂಡಾಣುವು ಫಲಿತಗೊಂಡರೂ ಭ್ರೂಣ ಆರೋಗ್ಯವಂತವಾಗಿರುವುದಿಲ್ಲ.

ಸಾಮಾನ್ಯವಾಗಿ ಶೇ 30ರಿಂದ 40ರಷ್ಟು ವೀರ್ಯಾಣುವಿನಲ್ಲಿ ವರ್ಣತಂತುವಿನ ಜೋಡಿ ಅಸರ್ಮಪಕವಾಗಿರುತ್ತವೆ. ಮಹಿಳೆಯ ವಯಸ್ಸಿಗೆ ಅನುಗುಣವಾಗಿ ಶೇ 20 ರಿಂದ 90ರವರೆಗೆ ಅಂಡಾಣುವಿನ ವರ್ಣತಂತುಗಳು ಪೂರ್ಣ ಗೊಂಡಿರುವುದಿಲ್ಲವೆಂದು ಅಧ್ಯಯನಗಳು ತೋರಿಸಿವೆ.

ಐವಿಎಫ್‌ನ ವೈಫಲ್ಯಗಳನ್ನು ತಡೆಯಲು ಅತ್ಯಾಧುನಿಕ ತಂತ್ರಜ್ಞಾನ ಪಿಜಿಎಸ್‌ (ಪ್ರಿಇಂಪ್ಲಾಂಟೇಶನ್‌ ಜೆನೆಟಿಕ್‌್ ಸ್ಕ್ರೀನಿಂಗ್‌) ಎಂಬುದು ಬಂದಿದೆ. ಇದರಿಂದ ಗರ್ಭಕಟ್ಟುವ ಸಾಧ್ಯತೆಗಳು ಶೇ 70ರಿಂದ 80ರಷ್ಟು ಹೆಚ್ಚಾಗಿರುತ್ತವೆ. ಸಾಂಪ್ರದಾಯಿಕ ಐವಿಎಫ್‌ ಅಥವಾ ಐಸಿಎಸ್‌ಐಗಳಲ್ಲಿ ಶೇ 30–35ರಷ್ಟು ಯಶಸ್ವಿಯಾದರೆ ಈ ಟೆಸ್ಟ್‌ ಮೂಲಕ ಯಶಸ್ಸಿನ ಸಾಧ್ಯತೆಗಳನ್ನು ಹೆಚ್ಚಿಸಬಹುದು.

ಮೂಲ :ಪ್ರಜಾವಾಣಿ

ಕೊನೆಯ ಮಾರ್ಪಾಟು : 6/1/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate