ಪ್ರತಿ ಮಹಿಳೆಯೂ ಹುಟ್ಟುವಾಗಲೇ ಒಂದಷ್ಟು ಅಂಡಾಣುಗಳನ್ನು ಹೊತ್ತು ಹುಟ್ಟಿರುತ್ತಾಳೆ. ವಯಸ್ಸು ಏರುತ್ತಿದ್ದಂತೆ ಗುಣಮಟ್ಟದಲ್ಲಿ ಇಳಿಕೆ ಕಂಡು ಬರುವುದು ಸಹಜವಾಗಿದೆ. ನಿಮ್ಮ ವಯಸ್ಸು ಸಣ್ಣದಾಗಿದ್ದಷ್ಟೂ ಉತ್ತಮ ಗುಣಮಟ್ಟದ ಅಂಡಾಣು ದೊರೆಯುತ್ತದೆ. ಐವಿಎಫ್ ಯಶಸ್ಸು ಸಾಧ್ಯವಾಗಿರುತ್ತದೆ. 36 ವರ್ಷದ ಮಹಿಳೆಯಲ್ಲಿ ಶೇ 32ರಷ್ಟು ಸಫಲವಾದರೆ 40ರ ಮಹಿಳೆಯಲ್ಲಿ ಕೇವಲ ಶೇ 16ರಷ್ಟು ಯಶಸ್ಸು ಕಂಡು ಬರುತ್ತದೆ. ಆದರೆ ಎಲ್ಲ ಐವಿಎಫ್ ಪ್ರಯತ್ನಗಳ ಬಗ್ಗೆಯೂ ಹೀಗೆ ಸರಳವಾಗಿ ಹೇಳಲಾಗದು. ಆದರೆ ವಯಸ್ಸು ಮಹತ್ವದ ಪಾತ್ರವಹಿಸುತ್ತದೆ ಎನ್ನುವುದಂತೂ ನಿಜ.
ಭ್ರೂಣದ ಗುಣಮಟ್ಟ
ಕೆಲವೊಮ್ಮೆ ಭ್ರೂಣದ ಗುಣಮಟ್ಟದಿಂದಾಗಿಯೂ ಐವಿಎಫ್ ವೈಫಲ್ಯ ಕಾಣಬಹುದು. ಕೆಲವೊಂದು ಭ್ರೂಣಗಳ ಡಿಎನ್‌ಎ ಅಥವಾ ಕ್ರೊಮೋಸೊಮ್‌ಗಳಿಂದಲೇ ಅವು ನಿಶ್ಯಕ್ತ ವಾಗಿರುತ್ತವೆ. ಗರ್ಭಗೋಡೆಗೆ ಅಂಟಿಕೊಳ್ಳುವಷ್ಟು ಸಶಕ್ತವಾಗಿರುವುದಿಲ್ಲ. ಇನ್ನು ಕೆಲವು ಭ್ರೂಣಗಳಲ್ಲಿ ಜೀವಿತಕ್ಕೆ ಅಗತ್ಯವಿರುವಷ್ಟು ಜೀವಕೋಶಗಳಿರುವುದಿಲ್ಲ. ಇದರಿಂದಲೂ ಅವು ಫಲಿತಗೊಳ್ಳುವುದಿಲ್ಲ. ಭ್ರೂಣದ ಗುಣಮಟ್ಟ ನಿಯಂತ್ರಿಸುವ ಕೆಲವು ಅಂಶಗಳಿವೆ. ಅದರಿಂದಲೂ ಐವಿಎಫ್ ವೈಫಲ್ಯಕ್ಕೆ ಕಾರಣವಾಗಿರುತ್ತವೆ.
ಅಂಡಾಶಯದ ಪ್ರತಿಕ್ರಿಯೆ
ಕೆಲವೊಮ್ಮೆ ಅಂಡಾಶಯವೂ ಐವಿಎಫ್ ಚಿಕತ್ಸೆಗೆ ಸೂಕ್ತವಾಗಿ ಸ್ಪಂದಿಸುವುದಿಲ್ಲ. ಮಹಿಳೆಯ ಅಂಡಾಶಯವು ಚಿಕಿತ್ಸೆಗೆ ತಕ್ಕಂತೆ ಅಂಡಾಣುಗಳನ್ನು ಉತ್ಪಾದಿಸುವುದಿಲ್ಲ.
ಈಗಾಗಲೇ ನಿಮ್ಮಲ್ಲಿ ಅಂಡಾಣುಗಳ ಸಂಖ್ಯೆ ಕಡಿಮೆಯಾಗಿದ್ದಲ್ಲಿ, ಅಥವಾ ನಿಮ್ಮ ವಯಸ್ಸು 35ರ ಅಂಚಿನಲ್ಲಿದ್ದರೆ, 37 ದಾಟಿದ್ದಲ್ಲಿ, ಎಫ್‌ಎಸ್‌ಎಚ್ ಪ್ರಮಾಣವನ್ನೂ ಮೀರಿದ್ದಲ್ಲಿ ಐವಿಎಫ್ ಚಿಕಿತ್ಸೆಗೆ ತೊಂದರೆಯಾಗುವ ಎಲ್ಲ ಸಾಧ್ಯತೆಗಳೂ ಇರುತ್ತವೆ. ನಿಮ್ಮ ದೇಹ ಐವಿಎಫ್ ಚಿಕಿತ್ಸೆಗೆ ಸ್ಪಂದಿಸುವ ಗುಣವನ್ನು ಕಳೆದುಕೊಂಡಿರುತ್ತದೆ, ಅಥವಾ ಕಡಿಮೆಯಾಗಿರುತ್ತದೆ ಎನ್ನಬಹುದು. ಇದನ್ನೇ ಸರಳವಾಗಿ ಹೇಳಬೇಕೆಂದರೆ ನಿಮ್ಮ ದೇಹವು ಐವಿಎಫ್ ಚಿಕಿತ್ಸೆಗೆ ಸ್ಪಂದಿಸಿ ಹೆಚ್ಚು ಅಂಡಾಣುಗಳನ್ನು ಉತ್ಪಾದಿಸಿದಲ್ಲಿ ಐವಿಎಫ್ ಯಶಸ್ವಿಯಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಒಂದು ವೇಳೆ ಹೆಚ್ಚು ಅಂಡಾಣುಗಳನ್ನು ಉತ್ಪಾದಿಸದಿದ್ದಲ್ಲಿ ವೈಫಲ್ಯದ ಸಾಧ್ಯತೆಗಳೂ ಹೆಚ್ಚಾಗಿರುತ್ತವೆ.
ಭ್ರೂಣ ಕಸಿಯ ಸಮಸ್ಯೆಗಳು
ಹೆಚ್ಚಾಗಿ ಫಲಿತ ಭ್ರೂಣವನ್ನು ಗರ್ಭದೊಳಗೆ ಸ್ಥಾಪಿಸುವುದು ಅಥವಾ ಗರ್ಭಕೋಶದ ಗೋಡೆಗೆ ಅಂಟಿಸುವುದರ ಮೇಲೆಯೇ ಐವಿಎಫ್‌ನ ಸಾಫಲ್ಯ ಅವಲಂಬಿಸಿರುತ್ತದೆ.
ಭ್ರೂಣವನ್ನು ಗರ್ಭದೊಳಗೆ ಪ್ರತಿಷ್ಠಾಪಿಸಿದ ನಂತರ ಬಸಿರು ಫಲಿತಗೊಳ್ಳದಿದ್ದರೆ ಅದಕ್ಕೆ ಭ್ರೂಣ ಗರ್ಭಕೋಶದಲ್ಲಿ ಬೆಳೆಯದಿರುವುದೇ ಕಾರಣವಾಗಿರುತ್ತದೆ. ಯಾರದ್ದೂ ದೋಷವಿರದಿದ್ದರೂ, ಯಾವುದೇ ತಪ್ಪುಗಳಿರದಿದ್ದರೂ ಹೀಗೆ ಆಗುವ ಸಾಧ್ಯತೆಗಳಿರುತ್ತವೆ. ಒಂದು ವೇಳೆ ಗರ್ಭಕೋಶದಲ್ಲಿ ಪೊಲಿಪ್ಸ್ ಇದ್ದರೆ, ಅಂಡಾಶಯದ ಮೇಲೆ ಗಂಟುಗಳಿದ್ದರೆ, ಗರ್ಭಕೋಶದಲ್ಲಿ ಭ್ರೂಣ ಅಂಟಿಕೊಳ್ಳುವುದು ಕಷ್ಟವಾಗುತ್ತದೆ. ಐವಿಎಫ್‌ಗೆ ಸಂಬಂಧಿಸಿದ ಕೆಲವು ಅಧ್ಯಯನಗಳ ಪ್ರಕಾರ ಭ್ರೂಣದ ಆನುವಂಶಿಕ ಅಸಹಜತೆಗಳೂ ಭ್ರೂಣವು ಅಂಟಿಕೊಳ್ಳದಂತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಐವಿಎಫ್‌ನ ಶೇ 50ರಷ್ಟು ಪ್ರಕರಣಗಳಲ್ಲಿ ವೈಫಲ್ಯಕ್ಕೆ ಈ ಕ್ರೊಮೊಸೊಮ್‌ಗಳಲ್ಲಿಯ ಅಸಹಜತೆಯೇ ಕಾರಣವಾಗಿರುತ್ತದೆ ಎನ್ನುವುದು ಗಮನಾರ್ಹ.
ಈ ಇಡೀ ಪ್ರಕ್ರಿಯೆಯನ್ನು ಸಮೀಕರಣದಿಂದ ಸರಳವಾಗಿ ಅರಿಯಬಹುದು.
ಭ್ರೂಣದ ಗುಣಮಟ್ಟ + ಗರ್ಭಕೋಶದ ಮಾರ್ಗದ ಗ್ರಹಿಕೆ = ಭ್ರೂಣ ಕಸಿಕಟ್ಟುವ ಸಾಧ್ಯತೆ ಅಥವಾ ಬಸಿರು.
ವೀರ್ಯಾಣು ಗುಣಮಟ್ಟ ಹಾಗೂ ಡಿಎನ್‌ಎ
ವೀರ್ಯಾಣುವಿನ ಡಿಎನ್‌ಎ ಚದುರಿವಿಕೆ ಹೆಚ್ಚಿದಂತೆ ಅಥವಾ ಅದು ತುಂಡುಗೊಂಡಂತೆ ಐವಿಎಫ್ ವೈಫಲ್ಯದ ಸಾಧ್ಯತೆಗಳೂ ಹೆಚ್ಚುತ್ತ ಹೋಗುತ್ತವೆ. ಡಿಎನ್‌ಎ ತುಂಡರಿಸುವುದಕ್ಕೆ ಹಲವಾರು ಕಾರಣಗಳಿವೆ. ಕೆಲವನ್ನು ಹೇಳುವುದಾದರೆ
*ಫಲವಂತಿಕೆಯ ಕೊರತೆ ಇರುವುದು
*ಭ್ರೂಣದ ಆರೋಗ್ಯದ ಗುಣಮಟ್ಟ
*ಫಲವಂತಿಕೆಯ ದರದಲ್ಲಿ ಇಳಿಕೆ
*ಗರ್ಭಪಾತದ ಸಾಧ್ಯತೆಗಳಲ್ಲಿ ಹೆಚ್ಚಳ
ಹಾಗಾದರೆ ಒಂದು ಭ್ರೂಣದ ಗುಣಮಟ್ಟ ಕಳಪೆಯಾಗಲು ಕಾರಣಗಳೇನು? ನಮಗೆಲ್ಲರಿಗೂ ತಿಳಿದಿರುವ ವಿಷಯವೆಂದರೆ ಒಂದು ಭ್ರೂಣವು ಗರ್ಭಕೋಶದೊಳಗೆ ಫಲಿತವಾಗುವ ಮುನ್ನವೇ ಐದು ದಿನಗಳೊಳಗೆ ಸಾವನ್ನಪ್ಪುತ್ತದೆ. ಕೆಲವೊಮ್ಮೆ ಐದು ದಿನಗಳ ನಂತರವೂ ಭ್ರೂಣ ಫಲಿತಗೊಳ್ಳದೇ ಇರಬಹುದು. ಹಾಗಾಗಿ ಕೆಲವೊಮ್ಮೆ ಮೇಲ್ನೋಟಕ್ಕೆ ಎಲ್ಲವೂ ಚೆನ್ನಾಗಿದೆ ಎಂದೆನಿಸುವ ಭ್ರೂಣವನ್ನು ಗರ್ಭಕೋಶದಲ್ಲಿ ಸ್ಥಾಪಿಸಲು ಆಯ್ಕೆ ಮಾಡಲಾಗುತ್ತದೆ. ಆದರೆ ಗರ್ಭಕೋಶದಲ್ಲಿ ಆ ಭ್ರೂಣದ ಜೀವಿತಾವಧಿ ಮುಗಿದು ಹೋಗಿರುತ್ತದೆ. ಇವು ಐವಿಎಫ್ ವೈಫಲ್ಯಕ್ಕೆ ಮುಖ್ಯ ಕಾರಣಗಳಾಗಿರುತ್ತವೆ.
ಮೂಲ :ಪ್ರಜಾವಾಣಿ
ಕೊನೆಯ ಮಾರ್ಪಾಟು : 4/29/2020