ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಸಾಮಾನ್ಯ ಆರೋಗ್ಯ / ಔಷಧಿರಹಿತ ಚಿಕಿತ್ಸೆ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಔಷಧಿರಹಿತ ಚಿಕಿತ್ಸೆ

ಔಷಧಿರಹಿತ ಪ್ರಕೃತಿ ಚಿಕಿತ್ಸೆ

ಶುದ್ಧವಾದ ಗಾಳಿ, ಬೆಳಕು, ನೀರು ಮತ್ತು ಆಹಾರ ಆರೋಗ್ಯ ರಕ್ಷಣೆಗೆ ಅತ್ಯವಶ್ಯಕ.  ಗಾಳಿಯಲ್ಲಿರುವ ಆಮ್ಲಜನಕ ಪ್ರಾಣಾಧಾರ.  ಶುದ್ಧವಾದ ಗಾಳಿಯ ಅಭಾವವಿದ್ದಲ್ಲಿ ಆರೋಗ್ಯ ಕೆಡುವುದು ಖಂಡಿತ.  ಆದುದರಿಂದ ವಾತಾವರಣ ಕಲುಷಿತವಾಗಿರುವ ಪ್ರದೇಶದಲ್ಲಿ ವಾಸಮಾಡುವುದು ಉಚಿತವಲ್ಲ.

ಸೂರ್ಯರಶ್ಮಿ ದೇಹದ ಬೆಳವಣಿಗೆಗೆ ಅತ್ಯಾವಶ್ಯಕ, ಸದಾಕಾಲ ನೆರಳಿನಲ್ಲೇ ಇರುವವರ ಮುಖ ಬಿಳಚಿಕೊಂಡು ಕಳಾಹೀನವಾಗುವುದು; ಬಿಸಿಲಿಗೆ ಮೈಯೊಡ್ಡಿ ದುಡಿಮೆ ಮಾಡುವ ವ್ಯಕ್ತಿಯ ದೇಹ ಕಾಂತಿಯುತವಾಗಿರುವುದು.  ಸೂರ್ಯರಶ್ಮಿ ನಮ್ಮ ದೇಹಕ್ಕೆ ‘ಡಿ’ ಜೀವಸತ್ವವನ್ನು ಒದಗಿಸುವುದು; ಈ ಜೀವಸತ್ವವು ಎಲುಬುಗಳ ರಚನೆಗೆ ಮತ್ತು ದೇಹ ದಾರ್ಢ್ಯತೆಗೆ ಅತ್ಯವಶ್ಯಕ.  ಆದುದರಿಂದ ಸೂರ್ಯಸ್ನಾನ ಒಂದು ಅಗತ್ಯ ವಿಧಿ ಎಂದು ತಿಳಿಯಬೇಕು.

ನೀರಿಲ್ಲದೆ ಮನುಷ್ಯ ಜೀವಿಸಲಾರ.  ಆರೋಗ್ಯಕರವಾದ ನೀರಿನಲ್ಲಿ ದೇಹದ ಬೆಳವಣಿಗೆಗೆ ಅಗತ್ಯವಾದ ಖನಿಜಗಳು ಇರುವುವು.  ಚಿಲುಮೆ ನೀರು ದೇಹಾರೋಗ್ಯಕ್ಕೆ ಉತ್ತಮ.  ಅನೇಕ ವರ್ಷಗಳಿಂದ ಗುಣವಾಗದ ಜೀರ್ಣಾಂಗ ಸಂಬಂಧ ರೋಗಗಳು ಚಿಲುಮೆಯ ನೀರು ಸೇವಿಸುವುದರಿಂದ ಗುಣವಾಗಿರುವ ನಿದರ್ಶನಗಳು ಎಷ್ಟೋ ಇವೆ.  ಸಮುದ್ರ ಸ್ನಾನದಿಂದ ಚರ್ಮರೋಗಗಳು ನಿವಾರಣೆಯಾಗಿರುವ ನಿದರ್ಶನಗಳುಂಟು; ಸಮುದ್ರದ ನೀರಿನಲ್ಲಿ ಕರಗಿರುವ ಔಷಧೀಯ ಗುಣಗಳುಳ್ಳ ಲವಣಗಳಿಂದ ಈ ಕಾರ್ಯಸಾಧನೆಯಾಗುವುದು.

ಪ್ರಕೃತಿದತ್ತ ಆಹಾರ ಕ್ರಮವರಿತು ಸೇವಿಸುವುದರಿಂದ ರೋಗಗಳು ಸಂಭವಿಸುವ ಸಾಧ್ಯತೆ ಇರುವುದಿಲ್ಲ.  ಪ್ರಕೃತಿ ಸಹಜವಲ್ಲದ ಆಹಾರ ಪದ್ಧತಿ ರೋಗ ರುಜಿನಗಳಿಗೆ ಮೂಲ.  ಬಾಯಿರುಚಿಗಾಗಿ ಅತಿಯಾಗಿ ಆಹಾರ ಸೇವಿಸುವುದು, ಹಳಸಿದ ಆಹಾರ, ಕೊಬ್ಬಿನ ಅಂಶ ಅಧಿಕವಾಗಿರುವ ಆಹಾರ, ಮಸಾಲೆ ಪದಾರ್ಥಗಳು, ಮಾದಕ ಪದಾರ್ಥಗಳನ್ನು ಸೇವಿಸುವುದು ಆರೋಗ್ಯ ಕೆಡಲು ಮುಖ್ಯ ಕಾರಣಗಳು.  ನಾಲಿಗೆಯೊಂದನ್ನು ನಮ್ಮ ವಶದಲ್ಲಿಟ್ಟುಕೊಂಡರೆ ಉಳಿದ ಮನೋ ವಿಕಾರಗಳೆಲ್ಲ ತಾವಾಗಿಯೇ ಮಾಯವಾಗುವುವು.

ನಾವು ಸೇವಿಸುವ ಹಣ್ಣು ತರಕಾರಿಗಳಲ್ಲಿ ದೇಹಪೋಷಣೆಗೆ ಅಗತ್ಯವಾದ ಜೀವಸತ್ವಗಳು, ಕಿಣ್ವಗಳು, ಶರ್ಕರಪಿಷ್ಠಾದಿಗಳು, ಸಸಾರಜನಕ ವಸ್ತುಗಳು ಹೇರಳವಾಗಿರುವ ಕಾರಣ ದೇಹದ ಬೆಳವಣಿಗೆಗೆ ಮತ್ತು ಆರೋಗ್ಯ ರಕ್ಷಣೆಗೆ ಯಾವ ಕೊರತೆಯೂ ಉಂಟಾಗಲಾರದು.

ವ್ಯಕ್ತಿಯ ಮನೋಭಾವ, ಅವನು ಸೇವಿಸುವ ಆಹಾರವನ್ನವಲಂಬಿಸಿರುವುದು, ಪೌಷ್ಠಿಕ ಆಹಾರದ ಕೊರತೆಯುಂಟಾದಾಗ ಕೋಪ, ಜಗಳಗಂಟಿತನ, ಸಹನೆ ಕಾಣಿಸಿಕೊಳ್ಳುವುದು, ಇಂತಹ ಮಾನಸಿಕ ಪರಿಸ್ಥಿತಿ ತಲೆದೋರಿದಾಗ ವ್ಯಕ್ತಿಯಲ್ಲಿ ಬಲಹೀನತೆ, ತಲೆನೋವು, ಬೆನ್ನುನೋವು, ಉದರ ಬಾಧೆ, ನಿದ್ರಾಭಂಗ, ಸದ್ದುಗದ್ದಲವಾದಾಗ ಸಿಡಿಮಿಡಿಗೊಳ್ಳುವುದು ಇತ್ಯಾದಿ ರೋಗಲಕ್ಷಣಗಳು ಕಾಣಿಸಿಕೊಳ್ಳುವುವು.

ದೇಹಾರೋಗ್ಯ ಉತ್ತಮವಾಗಿರಬೇಕಾದರೆ ಮಾನಸಿಕ ಆರೋಗ್ಯ ಉತ್ತಮವಾಗಿರಬೇಕು; ಪ್ರಶಾಂತವಾದ ವಾತಾವರಣದಲ್ಲಿ ಏಕಾಂಗಿಯಾಗಿ ನಡೆದಾಡುವ ಅಭ್ಯಾಸವುಂಟಾದಲ್ಲಿ ಭವ್ಯವಾದ ಹಾಗೂ ಉದಾತ್ತವಾದ ಆಲೋಚನೆಗಳೇ ಮನಸ್ಸಿಗೆ ಬರುವುದರಿಂದ ಮನಸ್ಸು ಆನಂದಮಯವಾಗಿರುವುದು.

 

ಮೂಲ: ವಿಕ್ರಮ

2.89156626506
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top