ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಸಾಮಾನ್ಯ ಆರೋಗ್ಯ / ನಾಯಿ ಕಡಿತ – ತಿಳಿದಿರಬೇಕಾದ ಸಂಗತಿಗಳು
ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ನಾಯಿ ಕಡಿತ – ತಿಳಿದಿರಬೇಕಾದ ಸಂಗತಿಗಳು

ನಾಯಿ ಕಡಿತ – ತಿಳಿದಿರಬೇಕಾದ ಸಂಗತಿಗಳು

ನಾಯಿಕಡಿತವನ್ನು ತಪ್ಪಿಸುವುದು
ನಾಯಿಗಳ ಬಗ್ಗೆ ವಿಶೇಷ ಪ್ರೀತಿ ಮತ್ತು ಕುತೂಹಲ ಹೊಂದಿರುವ ಮಕ್ಕಳಿಗೆ ಈ ಬಗ್ಗೆ ಅರಿವು ಮೂಡಿಸುವುದು ಬಹಳ ಮುಖ್ಯ.

 1. ಅಪರಿಚಿತ ನಾಯಿಯನ್ನು ಸಮೀಪಿಸುವುದಾಗಲೀ, ಅದನ್ನು ಮುಟ್ಟುವುದಾಗಲೀ ಅಥವಾ ಆಹಾರ ನೀಡಲು ಪ್ರತ್ನಿಸುವುದಾಗಲೀ ಮಾಡಬಾರದು. (ಅಗತ್ಯವಿದ್ದರೆ ಅದರ ಮಾಲೀಕರ ಸಮಕ್ಷಮದಲ್ಲಿ ಅವರ ಮಾರ್ಗದರ್ಶನದಲ್ಲಿ ಮುಂದುವರೆಯಬಹುದು)
 2. ಪರಿಚಿತ ನಾಯಿಯೇ ಆಗಲಿ, ಅದನ್ನು ರೇಗಿಸಿಯಾಗಲೀ ಅಥವಾ ಕೀಟಲೆ ಮಾಡಿಯಾಗಲೀ ಕಚ್ಚಲು ಪ್ರೇರೇಪಿಸಬಾರದು.
 3. ಮಲಗಿ ನಿದ್ರಿಸುತ್ತಿರುವ/ಆಹಾರ ಸೇವಿಸುತ್ತಿರುವ/ಮರಿಗಳೊಂದಿಗೆ ಇರುವ/ಪರಸ್ಪರ ಕಚ್ಚಾಡುತ್ತಿರುವ ನಾಯಿಗಳಿಂದ ದೂರವಿರಬೇಕು.
 4. ದಾರಿಯಲ್ಲಿ ಎದುರಾಗುವ ಅಥವಾ ಹಾದಿಬದಿಯಲ್ಲಿದ್ದು ನಮ್ಮ ಕಡೆ ಬೊಗಳುತ್ತಿರುವ ನಾಯಿಯಿಂದ ಸಾಕಷ್ಟು ಅಂತರ ಕಾಯ್ದುಕೊಂಡು ಅದನ್ನು ಹೆಚ್ಚಾಗಿ ಗಮನಿಸದವರಂತೆ ನಿಧಾನವಾಗಿ ಹಾದುಹೋಗಬೇಕು.
  1. ನೆನಪಿಡಿ:
  • ನಮ್ಮ ಕಡೆ ತೀಕ್ಷ್ಣವಾಗಿ ನೋಡುತ್ತಿರುವ ಅಥವಾ ಬೊಗಳುತ್ತಿರುವ ನಾಯಿಯನ್ನು ಕಣ್ಣಲ್ಲಿ ಕಣ್ಣಿಟ್ಟು ನೇರವಾಗಿ ನೋಡಬಾರದು.
  • ಓಡಲಾರಂಭಿಸುವ/ಓಡುತ್ತಿರುವ ಅಥವಾ ವೇಗವಾಗಿ ವಾಹನದಲ್ಲಿ ಚಲಿಸುತ್ತಿರುವ ವ್ಯಕ್ತಿಗಳನ್ನು ಅಟ್ಟಿಸಿಕೊಂಡು ಹೋಗುವುದು ಬಹುತೇಕ ನಾಯಿಗಳ ಗುಣ.
  • ನಾಯಿ ನಮ್ಮ ಕಡೆ ಗಮನವಿರಿಸಿ ಬೊಗಳಲಾರಂಭಿಸಿದಾಗ, ಕೂಡಲೇ ತಿರುಗಿ ಅದಕ್ಕೆ ಬೆನ್ನು ತೋರಿಸಿ ವೇಗವಾಗಿ ದೂರ ಹೋಗಲು ಪ್ರಯತ್ನಿಸುವ ಬದಲು, ಅದರ ಕಡೆ ಹೆಚ್ಚು ಗಮನ ಕೊಡದವರಂತೆ ನಟಿಸುತ್ತಾ, ಕೆಲವು ಕ್ಷಣಗಳು ದೃಢವಾಗಿ ಇರುವಲ್ಲೇ ನಿಂತಿದ್ದು, ನಂತರ ಪೂರ್ತಿ ಹಿಂದಕ್ಕೆ ತಿರುಗುವ ಬದಲು, ಪಕ್ಕಕ್ಕೆ ಮಾತ್ರ ತಿರುಗಿ ನಿಧಾನವಾಗಿ ದೂರ ಸರಿಯಬೇಕು.
  1. ನಾಯಿ ನಮ್ಮ ಮೇಲೆ ಆಕ್ರಮಣ ನಡೆಸುವ ಸೂಚನೆ ಕಂಡಾಗ, ಅವಕಾಶವಿದ್ದರೆ ನಮ್ಮ ಮತ್ತು ಅದರ ನಡುವೆ ಮರವಾಗಲೀ, ಕಲ್ಲು ಬೆಂಚಾಗಲೀ, ವಿದ್ಯುತ್ ಕಂಬವಾಗಲೀ ಇತ್ಯಾದಿ ಯಾವುದಾದರೊಂದು ಇರುವಂತೆ ನೋಡಿಕೊಳ್ಳಲು ಪ್ರಯತ್ನಿಸಬೇಕು.
  2. ಅದು ಹತ್ತಿರ ಬರುವ ಸೂಚನೆ ಕಂಡಾಗ ನೆಲಕ್ಕೆ ಬಾಗಿ ಕಲ್ಲು ಎತ್ತಿಕೊಂಡು ಅದರ ಕಡೆಗೆ ಎಸೆಯಬಹುದು ಅಥವಾ ಆ ರೀತಿ ನಟಿಸಬಹುದು. ಹಾಗೂ ಕೈಯಲ್ಲಿರುವ ಯಾವುದದರೂ ವಸ್ತುವಿನಿಂದ ಹೊಡೆಯುವಂತೆ ತೋರಿಸಬಹುದು.
  3. ಕಚ್ಚಲು ಹತ್ತಿರ ಬಂದೇಬಿಟ್ಟಿತು ಎಂದಾದಾಗ ನಮ್ಮ ಮತ್ತು ಅದರ ನಡುವೆ ಪುಸ್ತಕವನ್ನಾಗಲೀ, ವ್ಯಾನಿಟಿ ಬ್ಯಾಗನ್ನಾಗಲೀ, ಕೈಚೀಲವನ್ನಾಗಲೀ, ಕೊಡೆಯನ್ನಾಗಲೀ ಇತ್ಯಾದಿ ನಮ್ಮ ಬಳಿ ಇರುವ ಯಾವುದಾದರೂ ಒಂದು ವಸ್ತುವನ್ನು ಅಡ್ಡವಾಗಿ ಒಡ್ಡಿ ಆ ವಸ್ತುವನ್ನು ಕಚ್ಚುವಂತೆ ಮಾಡಲು ಪ್ರಯತ್ನಿಸಬೇಕು.
  4. ನೆನಪಿಡಿ: 'ಬೊಗಳುವ ನಾಯಿ ಕಚ್ಚುವುದಿಲ್ಲ' ಎಂಬ ಗಾದೆಯೂ ಸುಳ್ಳಾಗುವ ಸಾಧ್ಯತೆ ಇದೆ.
  5. ಅಕಸ್ಮಾತ್ ನಾಯಿ/ನಾಯಿಗಳು ಆಕ್ರಮಣ ಮಾಡಿದಾಗ ಕಡಿತ ಅನಿವಾರ್ಯವೆಂದಾದರೆ, ದೇಹವನ್ನು ಚಂಡಿನಂತೆ ಮಾಡಿಕೊಂಡು ಮುಖ, ತಲೆ, ಕಿವಿ ಮತ್ತು ಕುತ್ತಿಗೆಗಳನ್ನು ಕೈಕಾಲುಗಳ ನಡುವೆ ಹುದುಗಿಸಿಕೊಂಡು ಕನಿಷ್ಠ ಆ ಭಾಗಗಳನ್ನು ಕಡಿತದಿಂದ ರಕ್ಷಿಸಿಕೊಳ್ಳಬೇಕು.
   • ಏಕೆಂದರೆ ನಾಯಿ ಕಚ್ಚಿದ ಭಾಗವು ಮೆದುಳಿನಿಂದ ಇರುವ ದೂರ, ರೋಗ ಎಷ್ಟು ದಿನಗಳಲ್ಲಿ ಕಾಣಿಸಿಕೊಳ್ಳಬಹುದು ಎಂಬುದನ್ನು ನಿರ್ಧರಿಸುತ್ತದೆ. ಕಡಿತಕ್ಕೊಳಗಾದ ಭಾಗ ಮೆದುಳಿಗೆ ಹತ್ತಿರವಿದ್ದಷ್ಟೂ ರೋಗ ಬೇಗ ಕಾಣಿಸಿಕೊಳ್ಳುತ್ತದೆ, ದೂರವಿದ್ದಷ್ಟೂ ಅದು ನಿಧಾನವಾಗುತ್ತದೆ, ನಿಧಾನವಾದಷ್ಟೂ ತೆಗೆದುಕೊಳ್ಳುವ ಲಸಿಕೆ ರಕ್ಷಣೆ ನೀಡಲು ಸಮಯ ದೊರಕುತ್ತದೆ.
  6. ಎಲ್ಲ ಸಾಕು ನಾಯಿಗಳಿಗೆ ನಿಯಮಿತವಾಗಿ ವರ್ಷಕ್ಕೊಮ್ಮೆ ರೇಬಿಸ್ ರೋಗ ನಿರೋಧಕ ಲಸಿಕೆ ತಪ್ಪದೇ ಹಾಕಿಸಬೇಕು.


  ನಾಯಿ ಕಚ್ಚಿದಾಗ ಕೂಡಲೇ ಅನುಸರಿಸಬೇಕಾದ ಕ್ರಮಗಳು ಮತ್ತು ಪ್ರಥಮ ಚಿಕಿತ್ಸೆ
  ಮೊಟ್ಟಮೊದಲನೆಯದಾಗಿ ನೆನಪಿಡಬೇಕಾದ ವಿಷಯವೆಂದರೆ, ಮಕ್ಕಳು ನಾಯಿಯಿಂದ ಕಚ್ಚಿಸಿಕೊಂಡಾಗ ದೊಡ್ಡವರಿಗೆ ತಿಳಿಸಿದರೆ 'ನಾಯಿಯ ತಂಟೆಗೇಕೆ ಹೋಗಿದ್ದೆ?' ಎಂದು ಶಿಕ್ಷಿಸಬಹುದೆಂಬ ಭಯದಿಂದ ಅದನ್ನು ಹೇಳದೇ ಇರುವ ಸಾದ್ಯತೆ ಇರುತ್ತದೆ ಎಂಬುದು. ಯಾವುದೇ ಕಾರಣಕ್ಕೂ ನಾಯಿ ಕಡಿತವನ್ನು ಮುಚ್ಚಿಡುವುದಾಗಲೀ, ನಿರ್ಲಕ್ಷಿಸುವುದಾಗಲೀ ಮಾಡಬಾರದೆಂಬ ಮಾಹಿತಿ ಎಲ್ಲರಿಗೂ, ಅದರಲ್ಲೂ ಮುಖ್ಯವಾಗಿ ಮಕ್ಕಳಿಗೆ ತಿಳಿದಿರುವುದು ತುಂಬಾ ಅಗತ್ಯ.

  ಗಮನಿಸಿ: ಹುಚ್ಚುನಾಯಿಯ ಜೊಲ್ಲಿನಲ್ಲಿರಬಹುದಾದ ರೇಬಿಸ್ ವೈರಸ್ ಗಳು ದೇಹದ ಒಳಹೋಗಿ ನರವ್ಯೂಹ ಸೇರಿದ ನಂತರ ಎಷ್ಟು ಬಲಿಷ್ಠವೋ, ಹೊರಗೆ ಅಥವಾ ನರವ್ಯೂಹ ಸೇರುವ ವೊದಲು ಅಷ್ಟೇ ಶಕ್ತಿಹೀನ. ಆಗ ಅವುಗಳನ್ನು ನಾಶಪಡಿಸುವುದು ಸುಲಭ. ಆದ್ದರಿಂದ ನಾಯಿ ಕಡಿತದ ಕೂಡಲೇ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಕಾರ್ಯೋನ್ಮುಖರಾಗಬೇಕು.

  1. ಕಚ್ಚಿದ ಗಾಯವನ್ನು ಯಾವುದೇ ಸೋಪು ಮತ್ತು ಯಥೇಚ್ಛ ನೀರು ಬಳಸಿ ಕನಿಷ್ಠ ಹತ್ತು ಸಲ ಒತ್ತಡದೊಂದಿಗೆ ತಿಕ್ಕಿ ತಿಕ್ಕಿ ತೊಳೆಯಬೇಕು. ನಲ್ಲಿಯಿಂದ ರಭಸವಾಗಿ ಬೀಳುತ್ತಿರುವ ನೀರಾದರೆ ಒಳ್ಳೆಯದು. ಅದು ಲಭ್ಯವಿಲ್ಲದಿದ್ದರೆ ನೀರನ್ನು ಎತ್ತರದಿಂದ ಹಾಕುತ್ತಾ ತೊಳೆಯಬಹುದು. ಸೋಪು ಯಾವುದಾದರೂ ಆಗಬಹುದು. ಸಿಕ್ಕಿದರೆ ಡಿಟರ್ಜೆಂಟ್ ಕೇಕ್ (ಬಟ್ಟೆ ಸೋಪು) ಅಥವಾ ಕಾರ್ಬಾಲಿಕ್ ಸೋಪು (ಲೈಫ್ ಬಾಯ್ ಇತ್ಯಾದಿ) ಇನ್ನೂ ಉತ್ತಮ.
   • ಹೀಗೆ ತೊಳೆಯುವುದರಿಂದ ಗಾಯ ದೊಡ್ಡದಾಗಬಹುದು ಅಥವಾ ರಕ್ತಸ್ರಾವ ಹೆಚ್ಚಾಗಬಹುದು ಎಂದು ಚಿಂತಿಸುವ ಅಗತ್ಯವಿಲ್ಲ. ವೈದ್ಯರು ನಂತರ ಅವುಗಳನ್ನು ಸುಲಭವಾಗಿ ಗುಣಪಡಿಸಬಲ್ಲರು.
  2. ಹೀಗೆ ತೊಳೆದಾದ ಮೇಲೆ ಲಭ್ಯವಿದ್ದರೆ ಡೆಟಾಲ್, ಸಾವಲಾನ್, ಟಿಂಚರ್ ಅಯೋಡಿನ್ ಇತ್ಯಾದಿ ಯಾವುದಾದರೂ ನಂಜುನಿರೋಧಕ ದ್ರಾವಣ ಲೇಪಿಸಬಹುದು.
  3. ಗಾಯ ದೊಡ್ಡದಾಗಿದ್ದರೆ ಅಥವಾ ರಕ್ತಸ್ರಾವ ಹೆಚ್ಚಾಗಿದ್ದರೆ ಬ್ಯಾಂಡೇಜ್ ಬಟ್ಟೆ ಅಥವಾ ಶುದ್ಧ ಬಟ್ಟೆಯ ಪಟ್ಟಿಯನ್ನು ಸ್ವಲ್ಪ ಒತ್ತಡದೊಂದಿಗೆ ಕಟ್ಟಬಹುದು.
  4. ನಂತರ ಸಾಧ್ಯವಾದಷ್ಟೂ ಬೇಗ ವೈದ್ಯರನ್ನು ಸಂಪರ್ಕಿಸಬೇಕು.
   (ಸಾಮಾನ್ಯವಾಗಿ ನಾಯಿಕಡಿತದ ಗಾಯಗಳಿಗೆ ಹೊಲಿಗೆ ಹಾಕುವುದಿಲ್ಲ. ಕಾರಣ, ಅಲ್ಲಿ ರೇಬಿಸ್ ವೈರಸ್ ಗಳಿದ್ದರೆ ಸೂಜಿಯೊಂದಿಗೆ ಅವು ಇನ್ನೂ ಆಳಕ್ಕೆ ಹೋಗುವ ಸಾಧ್ಯತೆಯಿದೆ)
  5. ಕಚ್ಚಿದ ನಾಯಿಯ ಬಗ್ಗೆ ಸೂಕ್ತ ಮಾಹಿತಿ ಪಡೆದು ವೈದ್ಯರು, ಗಾಯವನ್ನೂ ಪರಿಶೀಲಿಸಿ ರೇಬಿಸ್ ಲಸಿಕೆ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ.
   • ನಿಯಮಿತವಾಗಿ ರೇಬಿಸ್ ಲಸಿಕೆ ನೀಡಲ್ಪಟ್ಟಿರುವ ಸಾಕುನಾಯಿಯಾಗಿದ್ದರೆ, ಅಪಾಯದ ಸಾಧ್ಯತೆ ತುಂಬಾ ಕಡಿಮೆ. ಸಾಮಾನ್ಯವಾಗಿ ಕಚ್ಚಿದ ನಾಯಿಯನ್ನು ಹತ್ತು ದಿನಗಳು ಗಮನಿಸಲು ವೈದ್ಯರು ತಿಳಿಸುತ್ತಾರೆ. ಆ ಹತ್ತು ದಿನಗಳು ನಾಯಿ ಆರೋಗ್ಯವಾಗಿದ್ದರೆ ಅದು ರೇಬಿಸ್ ಪೀಡಿತವಲ್ಲವೆಂದು ನಿರ್ಧರಿಸಬಹುದು. ಒಂದು ವೇಳೆ ಕಚ್ಚಿದ ನಾಯಿ ಗಮನಿಸಲು ಸಿಕ್ಕುವುದಿಲ್ಲವಾದರೆ, ಲಸಿಕೆ ಪಡೆಯುವುದು ಕ್ಷೇಮ.
   • ರೇಬಿಸ್ ರೋಗದಿಂದ ನರಳುತ್ತಿರುವ ನಾಯಿ ಸಾಮಾನ್ಯಕ್ಕಿಂತ ತುಂಬಾ ಹೆಚ್ಚಿನ ಚಟುವಟಿಕೆ ತೋರಿಸುತ್ತಾ, ಬಾಯಿಯಿಂದ ದಾರದಂತೆ ಸೋರುತ್ತಿರುವ ಜೊಲ್ಲಿನೊಂದಿಗೆ ಭಯಂಕರವಾಗಿ ಕಾಣುವುದರ ಜೊತೆಗೆ, ಸಿಟ್ಟಿನಿಂದ ಕಂಡ ಕಂಡ ಸಜೀವ-ನಿರ್ಜೀವ ವಸ್ತುಗಳನ್ನು ಕಚ್ಚುತ್ತಾ ಒಂದೇ ಸಮನೆ ಗುರಿಯಿಲ್ಲದೇ ಓಡುತ್ತಾ ಸಾಗುತ್ತಿರಬಹುದು ಅಥವಾ ಮಂಕಾಗಿ ಜೊಲ್ಲು ಸೋರಿಸುತ್ತಾ ಮೂಲೆಯಲ್ಲಿ ಕುಳಿತಿರಬಹುದು, ಪಾರ್ಶ್ವವಾಯು ಪೀಡಿತವಾಗಿರಬಹುದು. ಆದರೆ ಈ ಲಕ್ಷಣಗಳು ಇಲ್ಲದ ನಾಯಿ ರೇಬಿಸ್ ನಿಂದ ಮುಕ್ತ ಎಂದು ಪೂರ್ಣವಾಗಿ ನಂಬುವಂತಿಲ್ಲ. ಏಕೆಂದರೆ ರೇಬಿಸ್ ರೋಗವೇ ಅಂಥಾದ್ದು. ಎಷ್ಟೋ ಸಲ ಪ್ರಾಣಿಗಳಲ್ಲಿ ಅದರ ಲಕ್ಷಣಗಳು ನಮ್ಮನ್ನು ದಾರಿ ತಪ್ಪಿಸಬಲ್ಲವು.
  6. ಲಸಿಕೆ ಪ್ರಾರಂಭಿಸಿದರೆ ನಿಯಮಿತವಾಗಿ ವೈದ್ಯರು ತಿಳಿಸುವ ದಿನಾಂಕಗಳಂದು ತಪ್ಪದೇ ಲಸಿಕೆ ಹಾಕಿಸಿಕೊಂಡು ಅದರ ಸರಣಿಯನ್ನು ಪೂರೈಸಬೇಕು.
  7. ಬಟ್ಟೆಗಳ ಮೇಲೆ ನಾಯಿ ಕಡಿತ ಉಂಟಾಗಿದ್ದರೂ ಅಥವಾ ಕಚ್ಚಿದ ಸ್ಥಳದಲ್ಲಿ ಗಾಯ ಕಾಣಿಸದೇ ಬರೀ ಹಲ್ಲುಗಳು ನೆಟ್ಟಂತೆ ಕಾಣುತ್ತಿದ್ದರೂ ಅಲಕ್ಷ್ಯ ಮಾಡದೇ ಕ್ರಮ ವಹಿಸಬೇಕು.
  8. ನಾಯಿಗಳಿಂದ ನೆಕ್ಕಿಸಿಕೊಳ್ಳುವುದೂ ಕೂಡ ಅಪಾಯಕಾರಿಯಾಗಬಲ್ಲದು. ಏಕೆಂದರೆ ನೆಕ್ಕಿದ ಸ್ಥಳದಲ್ಲಿ ಬರಿಯ ಕಣ್ಣಿಗೆ ಕಾಣದ, ನಮ್ಮ ಅರಿವಿಗೇ ಬಾರದಂತೆ ಉಂಟಾಗಿರುವ ಸೂಕ್ಷ್ಮ ಗಾಯಗಳಿರುವ ಸಾಧ್ಯತೆಯಿದ್ದು, ಅವುಗಳ ಮೂಲಕ ವೈರಸ್ ಗಳು ದೇಹವನ್ನು ಪ್ರವೇಶಿಸುವ ಸಾಧ್ಯತೆಯಿರುತ್ತದೆ.

  ಮೂಲ : ಕಹಳೆ

  2.95
  ಸ್ಟಾರ್‌ಗಳನ್ನು ಜಾರಿಸಿ ನಂತರ ಕ್ಲಿಕ್‌ ಮಾಡಿ
  ಗೀತ Sep 09, 2018 06:54 PM

  ಹುಚ್ಚುನಾಯಿ ಕಡಿತಕ್ಕೆ ಚುಚ್ಚುಮದ್ದು ಕಂಡುಹಿಡಿದವರು ಯಾರು?

  ಟಿಪ್ಪಣಿ ಸೇರಿಸು

  (ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

  Enter the word
  ನೇವಿಗೇಶನ್‌
  Back to top