ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಸಾಮಾನ್ಯ ಆರೋಗ್ಯ / ರೋಗಗಳ ಗೂಡಾಗುತ್ತಿದೆ ಯುವಶಕ್ತಿ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ರೋಗಗಳ ಗೂಡಾಗುತ್ತಿದೆ ಯುವಶಕ್ತಿ

20 ವರ್ಷಕ್ಕೇ ಮಧುಮೇಹ, ಬೊಜ್ಜು, ಬಿಪಿ; ಆರೋಗ್ಯದ ಬಗ್ಗೆ ಕಾಳಜಿಯಿಲ್ಲ

ದೇಶದ ಜೀವಾಳ ಎಂದೇ ಪರಿಗಣಿಸಲ್ಪಡುವ ಯುಶಕ್ತಿ ರೋಗಗಳ ಗೂಡಾಗುತ್ತಿದೆ. ಸಾಮಾನ್ಯವಾಗಿ 40 ವರ್ಷದ ನಂತರ ಕಾಣಿಸಿಕೊಳ್ಳುತ್ತಿದ್ದ ಸಮಸ್ಯೆಗಳೆಲ್ಲ ಇಂದು 20 ವರ್ಷದ ಯುವಕರಲ್ಲೇ ಕಾಣಿಸಿಕೊಳ್ಳುತ್ತಿವೆ. ಮಧುಮೇಹ, ಬೊಜ್ಜು, ರಕ್ತದೊತ್ತಡ, ಮಾನಸಿಕ ಒತ್ತಡ ಮತ್ತಿತರ ಹಲವಾರು ಸಮಸ್ಯೆಗಳಿಂದ ದೇಶದ ಯುವಶಕ್ತಿ ನರಳುತ್ತಿದೆ. ಯುವಶಕ್ತಿಯಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಕಡಿಮೆಯಾಗುತ್ತಿದೆ.

ಅಂದಹಾಗೆ ಇಂದು (ಆಗಸ್ಟ್ 12) ಅಂತಾರಾಷ್ಟ್ರೀಯ ಯುವ ದಿನ. ಭಾರತದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜನವರಿ 12ರಂದು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತಿದೆ. ವಿಶ್ವಸಂಸ್ಥೆ ಮಾನ್ಯ ಮಾಡಿರುವಂಥ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುವದಿನವೆಂದು ಪರಿಗಣಿತವಾಗಿರುವುದು ಆಗಸ್ಟ್ 12. ಇಂತಹ ಸಮಯದಲ್ಲಿ ಯುವಶಕ್ತಿ ಹಾದಿ ತಪ್ಪುತ್ತಿರುವುದರ ಬಗ್ಗೆ ಯೋಚಿಸಲೇಬೇಕಾದ ಅನಿವಾರ್ಯತೆಯಿದೆ.

ಈ ಹಿಂದಿನ ದಿನಗಳಲ್ಲಿ ದೇಶದಲ್ಲಿ ಬೊಜ್ಜಿನ ಪ್ರಮಾಣ ಶೇ.2ರಷ್ಟಾಗಿತ್ತು. ಆದರೆ ಈಗ ಇದು ಶೇ.20-25ಕ್ಕೆ ಏರಿಕೆಯಾಗಿದೆ. ಭಾರತದ ಶೇ..25ರಷ್ಟು ಯುವಕರು ಇಂದು ಬೊಜ್ಜಿನ ಸಮಸ್ಯೆಗೆ ಒಳಗಾಗಿದ್ದಾರೆ. ಅದರಲ್ಲೂ ನಗರ ಪ್ರದೇಶಗಳಲ್ಲಿನ ಯುವಕರಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಪ್ರಾಯವಾಗುತ್ತಾ ಹೋದಂತೆ ಇಂಥ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ಈಗ ಹೇಳುವಂತಿಲ್ಲ. ಯಾಕೆಂದರೆ 15ರಿಂದ 25 ವರ್ಷದೊಳಗಿನ ಯುವಕರು ಕೂಡಾ ಇಂದು ಬೊಜ್ಜಿನ ಸಮಸ್ಯೆಗೆ ಒಳಗಾಗಿದ್ದಾರೆ. 120 ಕೋಟಿ ಭಾರತೀಯರ ಪೈಕಿ ಏನಿಲ್ಲವೆಂದರೂ 25 ಕೋಟಿ ಜನ ಬೊಜ್ಜಿನಿಂದ ಬಳಲುತ್ತಿದ್ದಾರೆ. ಅಮೆರಿಕದಂಥ ದೇಶಗಳಲ್ಲಿ ಪ್ರತಿ ಮೂರು ವ್ಯಕ್ತಿಗಳಲ್ಲಿ ಒಬ್ಬರಿಗೆ ಬೊಜ್ಜಿನ ಸಮಸ್ಯೆ ಇದೆ. ಭಾರತದಲ್ಲಿ ಕೂಡಾ ಈ ಪ್ರಮಾಣದಲ್ಲಿ ಬೊಜ್ಜಿನ ಸಮಸ್ಯೆ ಏರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಜೊತೆಗೆ ಮಧುಮೇಹದಂತ ರೋಗಗಳಿಗೆ ಹರೆಯದ ಯುವಕರು ಕೂಡಾ ತುತ್ತಾಗುತ್ತಿರುವುದು ದೇಶವನ್ನು ಮಧುಮೇಹದ ರಾಜಧಾನಿಯನ್ನಾಗಿಸುತ್ತಿದೆ ಎನ್ನುತ್ತಾರೆ ಬೆಂಗಳೂರಿನ ವಿಕ್ರಂ ಆಸ್ಪತ್ರೆಯ ಲ್ಯಾಪರೋಸ್ಕೋಪಿಕ್ ಮತ್ತು ಬೇರಿಯಾಟ್ರಿಕ್ ತಜ್ಞ ಡಾ. ಎಂ. ರಮೇಶ್ ಹೇಳಿದ್ದಾರೆ.

ಬೊಜ್ಜನ್ನು ಕಡಿಮೆ ಮಾಡುವಂಥ ಬೇರಿಯಾಟ್ರಿಕ್ ಚಿಕಿತ್ಸೆಯನ್ನು ಭಾರತದಲ್ಲಿ ಮೊದಲು ಆರಂಭಿಸಿದವರು ಡಾ.ರಮೇಶ್. ಪಾಶ್ಚಾತ್ಯ ಸಂಸ್ಕೃತಿಯನ್ನು ನಮ್ಮ ದೇಶದ ಯುವಕರು ಹೆಚ್ಚು ಹೆಚ್ಚು ಇಷ್ಟಪಡುತ್ತಿರುವುದೇ ಈ ಸಮಸ್ಯೆಗಳಿಗೆಲ್ಲ ಕಾರಣ. ಮುಖ್ಯವಾಗಿ ಐಟಿ, ಬಿಟಿ, ಕಾಲ್ ಸೆಂಟರ್ ಕೆಲಸಗಳು ಯುವಕರಲ್ಲಿ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತವೆ. ಜೊತೆಗೆ ಅಪವೇಳೆಯಲ್ಲಿನ ಕೆಲಸ ಮತ್ತು ಅಪವೇಳೆಯಲ್ಲಿ ಆಹಾರ ಸೇವಿಸುವುದರಿಂದಾಗಿ ಬೊಜ್ಜು, ಮಧುಮೇಹ ಮೊದಲಾದ ಸಮಸ್ಯೆಗಳು ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತಿವೆ. ವ್ಯಾಯಾಮ ಮಾಡುವುದಕ್ಕೂ ಇವರು ತಮ್ಮ ಸಮಯವನ್ನು ವಿನಿಯೋಗಿಸುವುದಿಲ್ಲ. ತಿನ್ನುವ ಆಹಾರ ಕೂಡಾ ಅಧಿಕ ಪ್ರಮಾಣದ್ದ ಕ್ಯಾಲೊರಿ ಹೊಂದಿದ್ದಾಗಿರುತ್ತದೆ. ಈ ಫಾಸ್ಟ್ ಫುಡ್, ಜಂಕ್ ಫುಡ್ ಮೊದಲಾದವುಗಳ ವಿರುದ್ಧ ಅಮೆರಿಕದ ವೈದ್ಯರು ಈಗ ಆಂದೋಲನ ಶುರು ಮಾಡಿದ್ದಾರೆ. ಯುವಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಯುತ್ತಿದೆ.

ಈ ರೋಗಗಳೆಲ್ಲ ಹೆಚ್ಚಾಗಿ ಆನುವಂಶಿಕವಾಗಿ ಕಾಣಿಸಿಕೊಳ್ಳುತ್ತವೆ. ಇದರ ಜೊತೆಗೆ ಆಹಾರ ಪದ್ಧತಿ ಮತ್ತು ಜೀವನ ಶೈಲಿ ಕೂಡಾ ಇಂಥ ರೋಗವನ್ನು ಹೆಚ್ಚು ಮಾಡುತ್ತಿದೆ. ಈ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸಲೇಬೇಕಾದ ಅಗತ್ಯವಿದೆ. ಅದಕ್ಕಿಂತಲೂ ಹೆಚ್ಚಾಗಿ ಪೋಷಕರಲ್ಲಿ ಜಾಗೃತಿ ಮೂಡಿಸಬೇಕು. ತಮ್ಮ ಮಕ್ಕಳಿಗೆ ಯಾವ ರೀತಿಯ ಆಹಾರ ಕೊಟ್ಟರೆ ಅವರು ಬೊಜ್ಜು, ಮಧುಮೇಹ, ರಕ್ತದೊತ್ತಡ ಮೊದಲಾದ ರೋಗಗಳಿಗೆ ತುತ್ತಾಗುವುದನ್ನು ತಪ್ಪಿಸಬೇಕು ಎಂಬುದರ ಅರಿವು ಮೂಡಿಸಬೇಕು. ಜೊತೆಗೆ `ಘನತೆ'ಯ ಹೆಸರಿನಲ್ಲಿ ತಂಪು ಪಾನೀಯ, ಫಾಸ್ಟ್ ಫುಡ್, ಜಂಕ್ ಫುಡ್ ಮೊದಲಾದವುಗಳನ್ನು ಕೊಟ್ಟರೆ ಎಂತಹ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದನ್ನು ತಿಳಿ ಹೇಳಬೇಕು. ಈ ಎಲ್ಲ ಸಮಸ್ಯೆಗಳು ಸಂತಾನಹೀನತೆಗೆ ಕಾರಣವಾಗಬಹುದು. ಕಿಡ್ನಿಯ ಮೇಲೆ ಸಮಸ್ಯೆ ಉಂಟುಮಾಡುತ್ತದೆ. ಬೊಜ್ಜಿನ ಸಮಸ್ಯೆ ಹೆಚ್ಚಾಗಿ ಹೆಣ್ಣು ಮಕ್ಕಳನ್ನೇ ಕಾಡುತ್ತದೆ. ಬೊಜ್ಜು ಇರುವಂಥ ಹೆಣ್ಣು ಮಕ್ಕಳಿಗೆ ಪದೇ ಪದೇ ಮೂತ್ರ ಸೋರಿಕೆಯಾಗುವ ಸಮಸ್ಯೆಯೂ ಇರುತ್ತದೆ. ಮುಟ್ಟಿನಲ್ಲಿ ವ್ಯತ್ಯಾಸವಾಗುತ್ತದೆ ಮತ್ತು ಮುಟ್ಟು ನಿಂತು ಹೋಗುವ ಸಾಧ್ಯತೆಯೂ ಇದೆ. ಇನ್ನು ಈ ಸಮಸ್ಯೆ ನಗರ ಪ್ರದೇಶಗಳಲ್ಲಿ ಹೆಚ್ಚಾಗಿದೆ. ಗ್ರಾಮೀಣ ಭಾಗದ ಯುವಕರಿಗೆ ಸ್ವಲ್ಪವಾದರೂ ವ್ಯಾಯಾಮ ಇರುವುದರಿಂದ ಮತ್ತು ಅವರ ಜೀವನ ಶೈಲಿ ಆರೋಗ್ಯಕರವಾಗಿರುವುದರಿಂದ ಅವರಿಗೆ ಹೆಚ್ಚಿನ ಸಮಸ್ಯೆ ಇಲ್ಲ ಎನ್ನುತ್ತಾರೆ ರಮೇಶ್.

ಬೇರಿಯಾಟ್ರಿಕ್ ಸರ್ಜರಿ ಮೂಲಕ ಜಠರವನ್ನು ಸ್ವಲ್ಪ ಕಿರಿದಾಗಿಸಲಾಗುತ್ತದೆ. ಮತ್ತು ಆಹಾರವನ್ನು ಸ್ವೀಕರಿಸುವಂಥ ಭಾಗಗಳಲ್ಲಿ, ಅಂದರೆ ಕರುಳು ಮೊದಲಾದವುಗಳಲ್ಲಿ ಬೈಪಾಸ್ ಮಾಡಲಾಗುತ್ತದೆ. ಇದರಿಂದಾಗಿ ಆಹಾರ ದೇಹ ಸೇರುವ ಪ್ರಮಾಣ ಕಡಿಮೆಯಾಗುತ್ತದೆ. ಈ ಮೂಲಕ ಬೊಜ್ಜಿನ ಸಮಸ್ಯೆಯನ್ನು ತಡೆಗಟ್ಟಬಹುದು. ಇದರ ಜೊತೆಗೆ ಇತರ ಹಲವು ರೋಗಗಳೂ ಸಹ ಕಡಿಮೆಯಾಗುತ್ತವೆ. ಕೆಲಸದ ಸ್ಥಳಗಳಲ್ಲಿಯೂ ಆರೋಗ್ಯದ ಬಗ್ಗೆ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿಗಳನ್ನು ಕೊಡುವಂಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲೇಬೇಕು. ಇಲ್ಲದೇ ಹೋದರೆ ರೋಗಗಳ ಗೂಡಾಗುವ ಯುವಶಕ್ತಿಯ ಪ್ರಮಾಣ ಇನ್ನಷ್ಟು ಹೆಚ್ಚಾಗುವಂಥ ಅಪಾಯವಿದೆ.

ಮೂಲ : ವಿಜ್ಞಾನ ಗಂಗೆ

2.92929292929
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top