ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಸಾಮಾನ್ಯ ಆರೋಗ್ಯ / ಸುರಕ್ಷಿತ ಗರ್ಭಪಾತ ಹೇಗೆ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಸುರಕ್ಷಿತ ಗರ್ಭಪಾತ ಹೇಗೆ

ಸುರಕ್ಷಿತ ಗರ್ಭಪಾತ ಹೇಗೆ

ಆಗ ತಾನೆ ಮುಂಜಾವಿನ ಸುಂದರ ಸ್ವಪ್ನವನ್ನು ಆನಂದಿಸುತ್ತಾ ಮಲಗಿದ್ದ ನನಗೆ ಆತ್ಮೀಯ ಗೆಳತಿ ಸ್ಮಿತಾಳ ಮೊಬೈಲ್‌ ಸಂದೇಶವು ತಲೆ ಮೇಲೆ ಕೈಯಿಟ್ಟು ಕೂರುವಂತೆ ಮಾಡಿತು. ಅವಳು ವೈದ್ಯಕೀಯ ಪದವಿ ಮುಗಿಸಿ, ಮದುವೆಯಾದವಳು ಗಂಡನ ಮನೆ ಸೇರಿ ಅದಾಗಲೇ ಒಂದು ವರ್ಷ ಕಳೆದಿತ್ತು. ಇನ್ನೆಂಟು ತಿಂಗಳಲ್ಲಿ ಸ್ನಾತಕೋತ್ತರ ಪದವಿಗಾಗಿ ಸಾಮಾನ್ಯ ಪರೀಕ್ಷೆ ಬೇರೆಯಲಿದ್ದ ಅವಳಿಗೆ ತಾನು ಗರ್ಭವತಿ ಎಂದು ತಿಳಿದು ಆಘಾತವಾಗಿತ್ತು.

ತಾನು ಸರ್ಜನ್‌ ಆಗುವ ಕನಸು ನನಸಾಗುವ ದಿನ ಬರುತ್ತಿದೆ ಎಂಬ ಸಂತಸದಲ್ಲಿದ್ದವಳಿಗೆ ಏಕಾಏಕಿ ಮಗುವಿನ ಲಾಲನೆ–ಪಾಲನೆಯ ಜವಾಬ್ದಾರಿ ಹೊರಬೇಕಾದ ತಾನು ಅದ್ಹೇಗೆ ಪರೀಕ್ಷೆಗಾಗಿ ಅಭ್ಯಾಸ ಮಾಡಬಲ್ಲೆ ಎಂಬ ಪ್ರಶ್ನೆ ಕಾಡತೊಡಗಿತ್ತು. ಸ್ವತಃ ವೈದ್ಯೆಯಾದ ಆಕೆ ತನ್ನ ಪರಿಚಯದ ತಜ್ಞ ವೈದ್ಯೆಯ ಸಲಹೆಯಂತೆ ಮಾತ್ರೆಗಳನ್ನು ಸೇವಿಸಿ ಗರ್ಭಪಾತ ಮಾಡಿಸಿಕೊಂಡೇ ಬಿಟ್ಟಳು. ಅದೃಷ್ಟವಶಾತ್‌ ತಾನೇ ವೈದ್ಯೆಯಾಗಿದ್ದರಿಂದ ಯಾವುದೇ ಸಮಸ್ಯೆ ಇಲ್ಲದೆ ಸುಗಮವಾಗಿ ಗುಣಮುಖಳಾದಳು.

ಇನ್ನೊಂದು ದಿನ ಆಸ್ಪತ್ರೆಯಲ್ಲಿನ ರಾತ್ರಿ ಪಾಳೆಯಲ್ಲಿ ಕೆಲಸ ಮಾಡುತ್ತಿದ್ದ ನನಗೆ 60ರ ವಯಸ್ಸಿನ ಹೆಂಗಸೊಬ್ಬಳು ಎದುರಾದಳು. ‘ಮೇಡಂ, ನನ್ನ ಮಗಳು ಎರಡೂವರೆ ತಿಂಗಳ ಗರ್ಭಿಣಿ, ಅದೇನೊ ಔಷಧಿ ಸೇವಿಸಿ ಗರ್ಭಪಾತ ಮಾಡಿಕೊಂಡಿದ್ದಾಳೆ. ಆದರೆ ನಿನ್ನೆಯಿಂದ ವಿಪರೀತ ಜ್ವರ, ನಿಶ್ಶಕ್ತಿ, ಆಕೆಯನ್ನು ಕಾಡ್ತಾ ಇದೆ. ದಯವಿಟ್ಟು ಬಂದು ನೋಡಿ’ ಎಂದು ಗೋಗೆರೆದಳು. ಆಕೆಯ ಮನೆಗೆ ಹೋಗಿ ನೋಡಿದಾಗ ಅವಳು ಚಿಂತಾಜನಕ ಸ್ಥಿತಿಯಲ್ಲಿದ್ದುದು ತಿಳಿದುಬಂತು.

ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ರಕ್ತದ ಪರೀಕ್ಷೆಗಳನ್ನೆಲ್ಲ ಮಾಡಿಸಿದೆ. ಆಕೆಯ ದೇಹದಲ್ಲಿ ನಂಜಾಗಿದ್ದುದು ತಿಳಿದು ಬಂತು. ತಕ್ಷಣ ಸೂಕ್ತ ಔಷಧಗಳನ್ನು ಕೊಡಲಾರಂಭಿಸಿದೆ. ಮೂರು ದಿನಗಳಿಂದಾದ ರಕ್ತಸ್ರಾವದಿಂದಾಗಿ ಬಳಲಿ ಬೆಂಡಾದ ಆಕೆಯ ಮೈಯಲ್ಲಿ ರಕ್ತವೇ ಇಲ್ಲದಾಗಿತ್ತು. ತಕ್ಷಣ ಅವಳ ರಕ್ತದ ಗುಂಪಿನ ವಿವರಗಳನ್ನು ಪಡೆದು ಅವಳಿಗೆ ಕೊಡುವ ವ್ಯವಸ್ಥೆಯೂ ಆಯಿತು.

ಅಪೂರ್ಣ ಗರ್ಭಪಾತದಿಂದ ಸೋಂಕು ತಗುಲಿ ಆಕೆ ಸಾವಿನ ದವಡೆಯಲ್ಲಿ ಸಿಲುಕಿದ್ದಳು. 24 ಗಂಟೆಗಳ ಚಿಕಿತ್ಸೆಯ ನಂತರವೂ ಆಕೆಯಲ್ಲಿ ಯಾವ ಚೇತರಿಕೆಯೂ ಕಂಡುಬರಲಿಲ್ಲ. ತಕ್ಷಣ ಸ್ಕ್ಯಾನಿಂಗ್‌ ಮಾಡಿದಾಗ, ಆಕೆಯ ಮಗು ಗರ್ಭಕೋಶದಲ್ಲಿ ಬೆಳೆಯದೇ ಫೆಲೋಪಿಯನ್‌ ಟ್ಯೂಬಿನಲ್ಲಿ ಬೆಳೆದಿತ್ತು. ಇದನ್ನರಿಯದೇ ಆಕೆಗೆ ಗರ್ಭಪಾತವಾಗಲು ಮಾತ್ರೆಗಳನ್ನು ನೀಡಲಾಗಿತ್ತು. ಆ ಕ್ಷಣ ಆಕೆಗೆ ಸ್ತ್ರೀರೋಗ ತಜ್ಞರ ತಂಡವೊಂದು ಶಸ್ತ್ರಚಿಕಿತ್ಸೆ ಮಾಡಿ ಅಂಡಾಶಯದ ನಾಳದಲ್ಲಿ ಬೆಳೆದಿದ್ದ ಭೂಣವನ್ನು ಹೊರ ತೆಗೆಯಲಾಯಿತು. ಇದಾದ ಮೂರು ದಿನಗಳಲ್ಲಿ ಆಕೆ ಚೇತರಿಸಿಕೊಂಡು ಆಸ್ಪತ್ರೆಯಿಂದ ನಿರಾಳವಾಗಿ ಮನೆಗೆ ನಡೆದಿದ್ದಳು.

ಇದು ಕೇವಲ ನನ್ನ ಗೆಳತಿ ಅಥವಾ ಇನ್ನಾವುದೇ ಒಬ್ಬ ಹೆಣ್ಣಿನ ಸಮಸ್ಯೆಯಲ್ಲ. ಪ್ರತಿಯೊಬ್ಬ ಹೆಣ್ಣೂ ಒಂದಲ್ಲ ಒಂದು ಕಾಲಘಟ್ಟದಲ್ಲಿ ಅನುಭವಿಸುವ ಚಿತ್ರಹಿಂಸೆ, ಹತಾಶೆ, ತನಗಾಗುವ ಸಂಕಷ್ಟಗಳನ್ನು ತೆರೆದಿಡಲು ಸದಾ ಹಿಂಜರಿಯುವ ಸಾಮಾನ್ಯ ಮಹಿಳೆಯು ಇಂತಹ ಹತ್ತು–ಹಲವಾರು ಅಡೆತಡೆಗಳನ್ನು ಎದುರಿಸುತ್ತಲೇ ಬದುಕು ಸಾಗಿಸಬೇಕಾದದ್ದು ವಿಷಾದನೀಯ.

ಇವು ಗರ್ಭಪಾತದ ಎರಡು ವಿಭಿನ್ನ ಮುಖಗಳು. ಒಂದು, ಯಾವುದೇ ತೊಂದರೆ ಇಲ್ಲದೆ ತನ್ನ ಗುರುತು ಮೂಡದಂತೆ ಹೆಣ್ಣಿನ ದೇಹದಿಂದ ಗರ್ಭ ಹೊರಹೋಗುವುದು; ಅಪೂರ್ಣ ಗರ್ಭಪಾತದಿಂದಾಗಿ ಸೋಂಕು, ಅತಿರಕ್ತಸ್ರಾವ, ರಕ್ತಹೀನತೆ, ಮಾನಸಿಕ ಒತ್ತಡ/ಹಿಂಸೆ, ಬಂಜೆತನ ಅನುಭವಿಸಬೇಕಾಗಿರುವುದು ಇನ್ನೊಂದು ವಿಧ. ಇಲ್ಲಿ ಸೋಂಕು ಅಥವಾ ಅತಿಯಾದ ರಕ್ತಸ್ರಾವಗಳ ಮುಂದುವರಿದ ಭಾಗವಾಗಿ ಸಾವು ಕೂಡ ಸಂಭವಿಸಬಹುದಾಗಿದೆ.

ಹೀಗೆ ಅನಿರೀಕ್ಷಿತ ಗರ್ಭಧಾರಣೆಯಾದಾಗಲೆಲ್ಲ ವರ್ಷಕ್ಕೊಂದರಂತೆ 6–7 ಗರ್ಭಪಾತ ಮಾಡಿಸಿಕೊಂಡ ಎಷ್ಟೋ ಉದಾಹರಣೆಗಳು ನಮ್ಮ ಮುಂದಿವೆ. ಗರ್ಭಪಾತವನ್ನು ತಜ್ಞ ವ್ಯದ್ಯರ ಸಲಹೆ– ಉಸ್ತುವಾರಿಯಲ್ಲಿ ಮಾಡಬೇಕೇ ಹೊರತು ಔಷಧಿ ಅಂಗಡಿಯವರು ಕೊಟ್ಟ ಮಾತ್ರೆ ಸೇವಿಸಿ ಕೈತೊಳೆದುಕೊಳ್ಳುವ ದುಸ್ಸಾಹಸಕ್ಕೆ ಎಂದೂ ಮುಂದಾಗಬಾರದು. ‘ಹೆಣ್ಣು’ ಮಗುವನ್ನು ತಯಾರಿಸುವ ಯಂತ್ರವಲ್ಲ. ಆಕೆ ಪ್ರಕೃತಿ ನಿರ್ಮಿತ, ಸೂಕ್ಷ್ಮವಾದ ಸುಂದರ ಭಾವಜೀವಿ. ಗಂಡು ಆಕೆಯ ಭಾವನೆಗಳನ್ನು ಗೌರವಿಸುವುದರೊಂದಿಗೆ ಸಂಕಷ್ಟಗಳನ್ನು ಅರಿತು ಕಾಳಜಿ ವಹಿಸಬೇಕು.

ಹೆಣ್ಣು ಅನಾರೋಗ್ಯದಿಂದ ಬಳಲುತ್ತಿದ್ದರೆ ಆಸ್ಪತ್ರೆ ಮೆಟ್ಟಿಲೇರಲು ಒಂದೋ ಆಕೆ ಪ್ರಜ್ಞೆ ತಪ್ಪುವಂತಾಗಬೇಕು. ಇಲ್ಲ ಮನೆ ಕೆಲಸ ನಿಭಾಯಿಸದಂತಾಗಿ ಹಾಸಿಗೆ ಹಿಡಿಯಬೇಕು. ಅಲ್ಲಿಯವರೆಗೂ ಆಕೆಯ ಜವಾಬ್ದಾರಿ ಹೊತ್ತ ಗಂಡು ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ಯು ವುದಿಲ್ಲ. ಅದೇ ಗಂಡಿನ ಕಾಲಿಗೆ ಚೂರು ಕಲ್ಲು ತಾಗಿ ಹನಿ ರಕ್ತ ಒಸರಿದರೆ ಸಾಕು ವೈದ್ಯರ ಮೊರೆ ಹೋಗುತ್ತಾನೆ.

ಏಕೆ ಈ ತಾರತಮ್ಯ?
ಹೆಣ್ಣಿಗೆ ಆಗುವ ಇಂತಹ ತೊಂದರೆಗಳನ್ನು ಕಡಿಮೆ ಖರ್ಚಿನಲ್ಲಿ ಕೆಲಸ ಮುಗಿಸುವ ಹುನ್ನಾರದಲ್ಲಿ ಮನೆಯವರು ನಕಲಿ ವೈದ್ಯರ ಮೊರೆ ಹೋಗುವುದೇ ಹೆಚ್ಚು. ಅಂದರೆ ಹೆಜ್ಜೆ ಹೆಜ್ಜೆಗೂ ಹೆಣ್ಣಿನ ಬಗೆಗೆ ಅಸಡ್ಡೆ ತೋರುವ ಇಂತಹ ಗಂಡಿನಿಂದ ಹೆಣ್ಣು ದೂರವಾದಾಗ ಮಾತ್ರ ಆ ಗಂಡಿಗೆ ಹೆಣ್ಣಿನ ಮೌಲ್ಯದ ಮನವರಿಕೆಯಾಗುವುದು.

ಮುಖ್ಯವಾಗಿ ಸಂಗಾತಿಯನ್ನು ಯಾರೂ ಹೀಗೆ ನಡೆಸಿಕೊಳ್ಳದೆ, ಸೂಕ್ತ ಚಿಕಿತ್ಸೆ ಕೊಡಿಸಿ ಆಕೆ ಆರೋಗ್ಯವಂತಳಾಗಿ ಸಂತೋಷದಿಂದ ಬಾಳಲು ಅವಕಾಶ ಮಾಡಿಕೊಡಿ.

ವೈದ್ಯರ ಲೋಕ ಎಷ್ಟೇ ಮುಂದುವರಿದಿದ್ದರೂ ಪ್ರಾಥಮಿಕ ಚಿಕಿತ್ಸೆಯ ಸೌಲಭ್ಯವೂ ಸಿಗದೆ ಕೊನೆಯಿಸಿರೆಳೆಯುತ್ತಿರುವ ಎಷ್ಟೋ ಹೆಂಗಳೆಯರು ನಮ್ಮ ಸುತ್ತಲಿದ್ದಾರೆ. ಎಚ್‌1ಎನ್‌1 ನಿಂದ ಒಂದು ಸಾವಾದರೆ ಸುದ್ದಿವಾಹಿನಿಗಳು ಇಡೀ ದಿನ ಅದದೇ ವಿಷಯದ ಸುತ್ತ ಗಿರಕಿ ಹೊಡೆದು, ಅದನ್ನು ದೊಡ್ಡ ಸುದ್ದಿಯನ್ನಾಗಿ ಮಾಡುತ್ತವೆ. ಆದರೆ ದಿನಕ್ಕೆ ನೂರಾರು ಹೆಣ್ಣುಮಕ್ಕಳು ಕುಟುಂಬದ ಅಲಕ್ಷ್ಯದಿಂದಲೋ, ಅರಿವಿನ ಕೊರತೆಯಿಂದಲೋ, ಚಿಕಿತ್ಸಾ ವಂಚಿತರಾಗಿ ಸಾವನ್ನಪ್ಪುತ್ತಿರುವುದು ಬೆಳಕಿಗೇ ಬರುತ್ತಿಲ್ಲ. ಇದರ ಬಗ್ಗೆ ಹೆಣ್ಣು ಸ್ವತಃ ಧ್ವನಿಯೆತ್ತಿ ಹೋರಾಡುವವರೆಗೆ ಆಕೆಯ ಮೂಕರೋದನಕ್ಕೆ ಕೊನೆ ಇರುವುದಿಲ್ಲ.

ಮುನ್ನೆಚ್ಚರಿಕೆ ಕ್ರಮಗಳು

* ಗರ್ಭಧಾರಣೆಗೆ ಮೊದಲೇ ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ವಹಿಸಬೇಕು.
* ಗರ್ಭಧಾರಣೆಯು ಪೂರ್ವನಿಯೋಜಿತವಾಗಿರಬೇಕು.
* ಗರ್ಭಧಾರಣೆಗೆ ಮುಂಚೆ ಒಂದು ತಿಂಗಳು ಪೋಲಿಕ್‌ ಆ್ಯಸಿಡ್‌ ಮಾತ್ರೆಗಳನ್ನು ಸೇವಿಸಬೇಕು.
* ರುಬೆಲ್ಲಾ ಹಾಗೂ ಹೆಪಟೈಟಿಸ್‌ ಚುಚ್ಚುಮದ್ದು ತೆಗೆದುಕೊಳ್ಳಬೇಕು.
* ಮದ್ಯ ಸೇವನೆ, ಧೂಮಪಾನ, ಮಾದಕ ದ್ರವ್ಯಗಳನ್ನೆಲ್ಲ ತ್ಯಜಿಸಬೇಕು.
* ಸಂಬಂಧಿಕರಲ್ಲಿ ಮದುವೆಯಾಗುವುದನ್ನು ನಿಲ್ಲಿಸಬೇಕು.
* ತಜ್ಞ ವೈದ್ಯರ ಸಲಹೆ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು.

ಮೂಲ :ಪ್ರಜಾವಾಣಿ

2.83333333333
Mia khalifa Jan 27, 2018 11:25 AM

ಮುಟ್ಟು ಬೇಗನೆ ಆಗಬೇಕು ಒಂದು ತಿಂಗಳು ಕೂಡಿದರು ಆಗಲಿಲ್ಲ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top