ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಹಸ್ತಲಾಘವ

ಹಸ್ತಲಾಘವ ಧೂಮಪಾನದಷ್ಟೇ ಅಪಾಯಕಾರಿ!

ಯಾರಾದರೂ ಪರಿಚಯಸ್ಥರು ಸಿಕ್ಕೊಡನೆ ಹಸ್ತಲಾಘವ ಮಾಡುವ ಪಾಶ್ಚಿಮಾತ್ಯ ಸಂಸ್ಕೃತಿ ಇದೀಗ ವಿಶ್ವದ ಎಲ್ಲೆಡೆಯೂ ವ್ಯಾಪಿಸಿದೆ. ಯಾರಾದರೂ ಕಂಡೊಡನೆ ಎರಡೂ ಕೈಸೇರಿಸಿ ನಮಸ್ಕರಿಸುವ ಭಾರತೀಯ ಸಂಸ್ಕೃತಿಯನ್ನು ತೀರಾ ಅನಾಗರಿಕ ಶೈಲಿ ಎಂಬಂತೆ ಕಾಣಲಾಗುತ್ತಿದೆ. ಆದರೆ ಅಪರಿಚಿತರ ಸ್ಪರ್ಶದಿಂದ ದೂರವಿರುವ ಮತ್ತು ಎಷ್ಟೇ ಆತ್ಮೀಯರೊಂದಿಗೇ ಆದರೂ ಅಂತರವನ್ನು ಕಾಯ್ದುಕೊಂಡೇ ಗೌರವ ನೀಡುವ ಭಾರತೀಯ ಸಂಸ್ಕೃತಿಯ ಹಿಂದೆ ಆರೋಗ್ಯದ ಕಾಳಜಿಯೂ ಇತ್ತು ಎಂಬುದು ಹಲವರಿಗೆ ತಿಳಿದಿರಲಿಕ್ಕಿಲ್ಲ. ಸೋಂಕು ರೋಗಗಳಿಂದ ಪಾರಾಗುವುದಕ್ಕೂ ಇದು ಸಹಕಾರಿಯಾಗಿತ್ತು. ಆದರೆ ಕ್ರಮೇಣ ಪಾಶ್ಚಾತ್ಯ ಸಂಸ್ಕೃತಿಯನ್ನೇ ಅಪ್ಪಿಕೊಂಡ ನಾವು ಹಸ್ತಲಾಘವವನ್ನೂ ನಾಗರಿಕತೆಯ ಗುರುತು ಎಂಬಂತೆ ಕಂಡೆವು. ಆದರೆ ಇತ್ತೀಚಿನ ಸಂಶೋಧನೆಯೊಂದು ಹಸ್ತಲಾಘವದ ದುಷ್ಪರಿಣಾಮವನ್ನು ಬಯಲು ಮಾಡಿದ ಮೇಲೆ ನಾವು ನಮ್ಮ ಸಂಸ್ಕೃತಿಯೇ ಶ್ರೇಷ್ಠ ಎಂಬ ನಿರ್ಧಾರಕ್ಕೆ ಬಂದರೆ ಅಚ್ಚರಿಯೇನಿಲ್ಲ.

ಆ ಸಂಶೋಧನೆಯ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಮಾಡುವ ಧೂಮಪಾನದಷ್ಟೇ ಅಪಾಯಕಾರಿ ಈ ಹಸ್ತಲಾಘವ! ಅಂದರೆ ಸಾರ್ವಜನಿಕ ಸ್ಥಳಗಳಲ್ಲಿ ಯಾರೋ ಧೂಮಪಾನ ಮಾಡುತ್ತಿದ್ದರೆ ಅಕ್ಕಪಕ್ಕದವರು ಹೇಗೆ ನಿಷ್ಕಾರಣವಾಗಿ ರೋಗಕ್ಕೆ ತುತ್ತಾಗುತ್ತಾರೆಯೋ ಹಾಗೆಯೇ ಸೋಂಕು ರೋಗವುಳ್ಳ ಒಬ್ಬ ವ್ಯಕ್ತಿ ಮತ್ತೊಬ್ಬನಿಗೆ ಹಸ್ತಲಾಘವ ಮಾಡುವುದರಿಂದ ಆ ವ್ಯಕ್ತಿಯೂ ಸೋಂಕು ರೋಗಕ್ಕೆ ತುತ್ತಾಗಬೇಕಾಗುತ್ತದೆ. ಅದರಲ್ಲೂ ಆಸ್ಪತ್ರೆಗಳಲ್ಲಿ ವೈದ್ಯರಿಗೆ ಹಸ್ತಲಾಘವ ಮಾಡುವುದರಿಂದ ಅಪಾಯಕಾರಿ ಸಮಸ್ಯೆಗಳನ್ನು ಬರಮಾಡಿಕೊಳ್ಳುವ ಅಪಾಯವಿದೆ ಎಂದು ಸಂಶೋಧನೆ ಹೇಳಿದೆ.

ಆಸ್ಪತ್ರೆಗಳಲ್ಲಿ ಆಗಷ್ಟೇ ಆಪರೇಶನ್ ಥಿಯೇಟರ್‌ನಿಂದ ಹೊರಬಂದ ವೈದ್ಯರಾಗಲೀ, ನರ್ಸ್ ಅಥವಾ ಇನ್ಯಾರೇ ಆಗಲಿ ಅವರಿಗೆ ಹಸ್ತಲಾಘವ ಮಾಡುವುದರಿಂದ ಅಪಾಯವೇ ಹೆಚ್ಚು. ಸೋಂಕು ರೋಗಗಳನ್ನು ಉಂಟುಮಾಡುವ ಪ್ರಭಾವಶಾಲಿ ಮಾಧ್ಯಮಗಳಲ್ಲಿ ಇಂಥ ಹಸ್ತಲಾಘವ ಸಹ ಒಂದು ಎಂದಿದೆ ಈ ಸಂಶೋಧನೆ. ಈಗಾಗಲೇ ಕೆಲವು ಆಸ್ಪತ್ರೆಗಳಲ್ಲಿ ಹಸ್ತಲಾಘವವನ್ನು ನಿಷೇಧಿಸುವ ಚಿಂತನೆ ನಡೆದಿದೆ. ಸೋಂಕು ರೋಗ ನಿಯಂತ್ರಣದ ಉಪಾಯಗಳಲ್ಲಿ ಹಸ್ತಲಾಘವ ನಿಷೇಧವೂ ಸೇರಿಕೊಂಡಿದೆ ಎಂದರೆ ಅಚ್ಚರಿಯಾಗಬಹುದು.

ಇಬ್ಬರ ನಡುವಲ್ಲಿ ಎಷ್ಟೇ ಆತ್ಮೀಯತೆ ಇದ್ದರೂ ಹಸ್ತಲಾಘವವನ್ನು ಆತ್ಮೀಯತೆಯ ಅಭಿವ್ಯಕ್ತಿಗಾಗಲೀ, ಗೌರವದ ಕುರುಹಾಗಿ ಆಗಲೀ ಬಳಸದಿರುವುದೇ ಒಳ್ಳೆಯದು ಎಂಬುದು ತಜ್ಞರ ಅಭಿಪ್ರಾಯವಾಗಿದೆ. ದೂರದಲ್ಲೇ ನಿಂತು ನಮಸ್ಕರಿಸುವ ಭಾರತೀಯ ಶೈಲಿಗೆ ಈ ಸಂಶೋಧನೆಯಿಂದ ಪುಷ್ಟಿ ಸಿಕ್ಕಂತಾಗಿದೆ. ಭಾರತೀಯ ಸಂಸ್ಕೃತಿಯ ಎಲ್ಲ ಆಚರಣೆಗಳಿಗೂ ಒಂದಲ್ಲ ಒಂದು ವೈಜ್ಞಾನಿಕ ತಳಹದಿ ಇದೆ ಎಂಬುದು ಈ ಮೂಲಕ ದೃಢವಾಗಿದೆ.

ಮೂಲ: ವಿಕ್ರಮ

2.95698924731
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
ಸಂಬಂಧಿಸಿದ ವಿಷಯಗಳು
ಹೆಚ್ಚಿನವು ...
Back to top