অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕಿರಿಕಿರಿಯ ಆ ದಿನಗಳು

ಕಿರಿಕಿರಿಯ ಆ ದಿನಗಳು

ಅದೇನೋ ಗೊತ್ತಿಲ್ಲ, ಇದ್ದಕ್ಕಿದ್ದಂತೆ ಕೋಪ ಆರಂಭವಾಗುತ್ತದೆ. ಎದುರು ಬಂದು ನಿಲ್ಲುವವರನ್ನೊಮ್ಮೆ ಹೊಡೆದು ಬಿಡೋಣ ಎಂಬಷ್ಟು ಕೋಪ! ಯಾಕೋ ಸಮಾಧಾನವೇ ಇಲ್ಲ. ಎಲ್ಲ ಕೆಲಸದ ಮೇಲೂ ನಿರಾಸಕ್ತಿ. ಕಾಡುವ ಒಂಟಿತನ, ಯಾರದ್ದಾದರೂ ಮಡಿಲಲ್ಲಿ ತಲೆಯಿಟ್ಟು ಮಲಗುವ ಉತ್ಕಟ ಬಯಕೆ… ನಿಜ, ಅದೊಂಥರಾ ಕಿರಿಕಿರಿಯ ಕಾಲ. ಮಹಿಳೆಯರು ತಿಂಗಳಿಗೊಮ್ಮೆ ಅನುಭವಿಸಲೇಬೇಕಾದ ಆ ಮೂರರಿಂದ ಐದು ದಿನಗಳು ಒಂದರ್ಥದಲ್ಲಿ ಅವರ ಪಾಲಿಗೆ ಅಗ್ನಿಪರೀಕ್ಷೆ. ಋತುಮತಿಯಾಗುವುದು ತಾಯ್ತನದ ಅರ್ಹತೆ ಪಡೆದಂತೆ. ಆದರೆ ಆ ದಿನಗಳಲ್ಲಿ ಮಹಿಳೆಯರು ಅನುಭವಿಸುವ ಮಾನಸಿಕ ಯಾತನೆ ಮಾತ್ರ ವರ್ಣಿಸಲಸಾಧ್ಯವಾದುದು.

  • ಎಲ್ಲ ಮಹಿಳೆಯರಿಗೂ ಈ ಸಮಸ್ಯೆ ಕಾಡುತ್ತದೆ ಎಂದೇನಿಲ್ಲ. ಆದರೆ ಹೆಚ್ಚಿನ ಮಹಿಳೆಯರು ಅತಿಯಾದ ಖಿನ್ನತೆಯಿಂದ ಬಳಲುತ್ತಾರೆ. ಋತುಸ್ರಾವದ ಸಮಯದಲ್ಲಿ ದೇಹದಲ್ಲಿ ಹಾರ್ಮೋನುಗಳು ವ್ಯತ್ಯಯವಾಗುವುದರಿಂದ ಈ ಸಮಸ್ಯೆಯಾಗುತ್ತದೆ ಎಂಬುದು ವೈದ್ಯಕೀಯವಾಗಿಯೂ ಸಾಬೀತಾಗಿದೆ. ಆದರೆ ಮೂರ್ನಾಲ್ಕು ದಿನಗಳ ಈ ಖಿನ್ನತೆ ಕೆಲವೊಮ್ಮೆ ಮಹಿಳೆಯ ಬದುಕಿನ ಮೇಲೆಯೇ ಪರಿಣಾಮ ಬೀರಬಹುದು. ಹಲವರು ಈ ಸಮಯದಲ್ಲಿ ಸಹಜವಾಗಿರಲು ಆಪ್ತಸಲಹೆಯ ಮೊರೆ ಹೋದವರೂ ಇದ್ದಾರೆ. ಎಷ್ಟೇ ಸಿಟ್ಟಿರಲಿ, ಕಿರಿಕಿರಿಯಾಗಲೀ ತಾಳ್ಮೆಯಿಂದ ಇರುವುದನ್ನು ರೂಢಿಸಿಕೊಳ್ಳುವುದು ಈ ಸಂದರ್ಭದಲ್ಲಿ ಬಹಳ ಮುಖ್ಯ. ಆದ್ದರಿಂದ ಆ ದಿನಗಳಲ್ಲಿ ಹೀಗಿರಲು ಪ್ರಯತ್ನಿಸಿ… ಪ್ರತಿಯೊಬ್ಬ ಮಹಿಳೆಯೂ ಅನುಭವಿಸಲೇಬೇಕಾದ ಸಮಸ್ಯೆಯಿದು. ಎಂಬುದು ಅರಿವಿರಲಿ.
  • ಪ್ರಕೃತಿ ನಿಯಮವಿದು. ಇದನ್ನು ನಿರ್ಲಕ್ಷ್ಯಿಸುವುದು ಸಾಧ್ಯವಿಲ್ಲ ಎಂಬುದು ತಿಳಿದಿರಲಿ.
  • ಈ ಸಮಯದಲ್ಲಿ ಒಂಟಿತನ ಕಾಡಬಹುದು. ನಿಮ್ಮ ಆತ್ಮೀಯರೊಂದಿಗೆ ಕೆಲಕಾಲ ಆಪ್ತವಾಗಿ ಮಾತನಾಡಿ.
  • ತೀರಾ ಕೆಲಸವನ್ನು ಹಚ್ಚಿಕೊಳ್ಳಬೇಡಿ. ನಿಮಗೆ ಮೊದಲೇ ದಿನಾಂಕ ಗೊತ್ತಿರುವುದರಿಂದ ಮೊದಲೇ ಆದಷ್ಟು ಕೆಲಸ ಮುಗಿಸಿಕೊಂಡು ನಿರಾಳವಾಗಿದ್ದುಬಿಡಿ.
  • ಕೋಪ ಹೆಚ್ಚುತ್ತಿದ್ದರೆ ಉತ್ತಮ ಸಂಗೀತವನ್ನೋ, ಅಥವಾ ನೀವು ಇಷ್ಟಪಡುವ ಪುಸ್ತಕವನ್ನೋ, ಟಿವಿಯಲ್ಲಿ ಬರುವ ಒಳ್ಳೆಯ ಕಾರ್ಯಕ್ರಮವನ್ನೋ ವೀಕ್ಷಿಸಿ.
  • ನಿಮ್ಮ ಮನಸ್ಸು ಆದಷ್ಟು ಒತ್ತಡದಿಂದ ಮುಕ್ತವಾಗಿರುವಂತೆ ನೋಡಿಕೊಳ್ಳಿ.
  • ಈ ಸಮಯದಲ್ಲಿ ಹೊಟ್ಟೆ ನೋವು, ಬೆನ್ನು ನೋವು ಸಾಮಾನ್ಯ. ಆದಷ್ಟು ವಿಶ್ರಾಂತಿ ತೆಗೆದುಕೊಳ್ಳಿ.
  • ಹೊಟ್ಟೆ ನೋವು ಸಹಿಸಲಾಗದೆ ಮಾತ್ರೆಗಳನ್ನು ಪದೇ ಪದೇ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಪ್ರತಿದಿನ ಸರಿಯಾದ ಸಮಯಕ್ಕೆ ಊಟ- ನಿದ್ದೆ ಮಾಡುವುದು, ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವು ದರಿಂದ ಈ ಸಮಯದಲ್ಲಿ ಹೆಚ್ಚು ದಣಿವಾಗಲಾರದು.
  • ಈ ಸಮಯದಲ್ಲಿ ಅಳಬೇಕು ಅನ್ನಿಸುವುದು, ಒಂಟಿ ಅನ್ನಿಸುವುದು ಎಲ್ಲ ಸಾಮಾನ್ಯ. ಆದರೆ ಇದೇ ಪದೇ ಪದೇ ಅನ್ನಿಸಿದರೆ ಆಪ್ತಸಲಹೆ ಅಗತ್ಯ.
  • ಆದಷ್ಟು ಕೋಪ ನಿಯಂತ್ರಿಸಲು ಪ್ರಯತ್ನಿಸಿ. ಇಲ್ಲಾ, ವೌನವಾಗಿದ್ದು ಬಿಡಿ.
  • ಆ ಸಮಯದಲ್ಲಿ ಆದಷ್ಟು ಧನಾತ್ಮಕವಾಗಿಯೇ ಚಿಂತಿಸಿ. ನಿಮಗೆ ಇಷ್ಟವಾದ ಕೆಲಸ ಮಾಡುತ್ತಿರಿ.
  • ಇವೆಲ್ಲ ಪ್ರಕೃತಿ ನಿಯಮ. ಸಹನೆಯೊಂದೇ ಇದಕ್ಕೆ ಪರಿಹಾರ ಎಂಬುದು ಅರಿವಿರಲಿ.
- ಶಶಿರಾಗ

ಮೂಲ: ವಿಕ್ರಮ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate