অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಆಹಾರ ಶೈಲಿ

ಗರ್ಭಿಣಿಯರೇ ಎಚ್ಚರ: ದಿನನಿತ್ಯ ಆಹಾರ ಶೈಲಿಯ ಬಗ್ಗೆ ಎಚ್ಚರವಿರಲಿ!

ಗರ್ಭವತಿಯಾಗುವುದು ಪ್ರತಿಯೊಬ್ಬ ಹೆಣ್ಣಿನ ಒಂದು ಸುಂದರ ಕನಸು. ಹತ್ತು ಹಲವು ಹರಕೆ ಹೊತ್ತು ವೈದ್ಯರ ಸಲಹೆಗಳನ್ನು ಪಾಲಿಸಿ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡ ಬಳಿಕ ಹಾಗು ನಿಮ್ಮ ಗರ್ಭದಲ್ಲಿ ಬೆಳೆಯುವ ಪುಟ್ಟ ಕಂದಮ್ಮನ ಕನಸನ್ನು ನನಸಾಗಿಸಿದ ಬಳಿಕ ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳದೇ ಇದ್ದರೆ ಅನಾಹುತವಾಗಬಹುದು. ನಿಮ್ಮ ಕಂದ ನಿಮ್ಮ ಗರ್ಭದೊಳಗೆ ಬೆಚ್ಚಗೆ ಒಂಭತ್ತು ತಿಂಗಳು ಬೆಳೆದು, ಆರೋಗ್ಯಕರ, ಪರಿಪೂರ್ಣ ಶಿಶುವಾಗಿ ಜನ್ಮತಳೆಯಲು ನೀವು ಕೆಲವೊಂದು ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾಗಿ ಬರಬಹುದು.

ಕೆಲವು ಆಹಾರಗಳಂತೂ ಗರ್ಭದ ಶಿಶುವಿಗೆ ಅತ್ಯಂತ ಮಾರಕವಾಗಿದೆ. ಉದಾಹರಣೆಗೆ ನಿಮ್ಮ ಧೂಮಪಾನದ ಅಭ್ಯಾಸ. ಇದರಿಂದ ನಿಮ್ಮ ರಕ್ತದೊಡನೆ ಮಿಳಿತವಾದ ನಿಕೋಟಿನ್ ನಿಮ್ಮ ಮಗುವೂ ಹಂಚಿಕೊಳ್ಳಬೇಕಾಗುತ್ತದೆ. ಇದು ನಿಮಗೆ ಸಹ್ಯವಲ್ಲ ಅಲ್ಲವೇ? ಇಂತಹ ಖಡಾಖಂಡಿತವಾಗಿ ಬೇಡ ಎಂದು ನೀವು ಹೇಳಲೇಬೇಕಾದ ಏಳು ಆಹಾರಗಳನ್ನು ಇಲ್ಲಿ ವಿವರಿಸಲಾಗಿದೆ.

ಕೆಫೀನ್

ಕಾಫಿಯಲ್ಲಿ ಕೆಫೀನ್ ಇದ್ದರೆ ಟೀ ಯಲ್ಲಿ ಏನಿದೆ? ಟಿಫೀನ್! ಇದು ಒಂದು ಜೋಕು. ನಿಮಗೆ ಟಿಫೀನ್ ಸಾಕು, ಕೆಫೀನ್ ಮಾತ್ರ ಬೇಡವೇ ಬೇಡ. ಅದರಲ್ಲೂ ಪ್ರಥಮ ಮೂರು ತಿಂಗಳ ಅವಧಿಯಲ್ಲಿ ಕೆಫೀನ್ ಇರುವ ಆಹಾರವಿರಲಿ, ಇರಬಹುದೆಂಬ ಸಂಶಯವಿರುವ ಆಹಾರಗಳಿಂದಲೂ ದೂರವಿರಬೇಕು. ಏಕೆಂದರೆ ಕೆಫೀನ್ ಸೇವನೆಯಿಂದ ಗರ್ಭಾಪಾತವಾಗುವ ಸಂಭವ ಸಾವಿರ ಪಟ್ಟು ಹೆಚ್ಚುತ್ತದೆ. ಕಾಫಿ, ಸೋಡ, ಕೋಲಾ, ಎನರ್ಜಿ ಡ್ರಿಂಕ್, ಬುರುಗು ಬರುವ ಯಾವುದೇ ಲಘು ಪಾನೀಯ, ಚಾಕಲೇಟು, ಕೆಫೀನ್ ಇರುವ ಮಾತ್ರೆಗಳು, ಚಾಕಲೇಟು, ಚಾಕಲೇಟು ಇರುವ ಐಸ್ ಕ್ರೀಂ ಅಥವಾ ಸಿಹಿತಿನಿಸುಗಳು, ತೂಕ ಕಡಿಮೆ ಮಾಡುವ ಮಾತ್ರೆಗಳು, ನೋವು ನಿವಾರಕ ಮಾತ್ರೆಗಳು, ಬಾಯಿ ದುರ್ವಾಸನೆ ಹೋಗಲಾಡಿಸುವ ಸ್ಪ್ರೇ, ಓಟ್ಸ್ ಮೊದಲಾದವುಗಳಿಂದ ದೂರವಿರುವುದು ಮೇಲು.

ಹಸಿ ಮಾಂಸ

ಮೊಟ್ಟೆ ಮತ್ತು ಮೀನು: ಕೆಲವರಿಗೆ ಮೊಟ್ಟೆಯನ್ನು ಹಾಗೇ ಸೇವಿಸುವ ಅಭ್ಯಾಸವಿರುತ್ತದೆ. ಮೀನು, ಮಾಂಸಗಳನ್ನೂ ಪೂರ್ಣವಾಗಿ ಬೇಯಿಸದೇ ಅಥವಾ ಹುರಿಯದೇ ತಿನ್ನಬಯಸುವವರೂ ಇದ್ದಾರೆ. ಆದರೆ ಈ ಅಭ್ಯಾಸಗಳು ನಿಮ್ಮ ಕಂದನಿಗೆ ಸುತಾರಾಂ ಒಳ್ಳೆಯದಲ್ಲ. ಈ ಆಹಾರಗಳಿಂದ ಗರ್ಭಿಣಿಯ ದೇಹದೊಳಗೆ ಸೋಂಕು ಸುಲಭವಾಗಿ ಉಂಟಾಗುತ್ತದೆ. ಹಸಿಮೊಟ್ಟೆಯ ಮೂಲಕ ಕೆಲವು ಪರಾವಲಂಬಿ ಕ್ರಿಮಿಗಳು ಹೊಟ್ಟೆ ಸೇರಿದರೆ ದೇಹ ಕಂದನ ಆರೈಕೆ ಕೈಬಿಟ್ಟು ಈ ಪರಾವಲಂಬಿಗಳ ವಿರುದ್ದ ಹೋರಾಡಬೇಕಾಗುತ್ತದೆ, ಅತ್ತ ಕಂದನಿಗೆ ಸೂಕ್ತ ಆರೈಕೆ ಸಿಗದೇ ಸೊರಗುತ್ತದೆ.

ಪ್ಯಾಶ್ಚರೀಕರಿಸದ ಹಾಲು, ಬೆಣ್ಣೆ

ಗರ್ಭಿಣಿಯಾದ ಬಳಿಕ ದೇಹ ಹಲವು ಬದಲಾವಣೆಗೆ ಒಳಪಡುತ್ತದೆ. ಬರುವ ಕಂದನಿಗಾಗಿ ಹತ್ತು ಹಲವು ತಯಾರಿಗಳು ಭರದಲ್ಲಿ ನಡೆಯುತ್ತವೆ. ಈ ಭರದಲ್ಲಿ ದೇಹದ ರೋಗ ನಿರೋಧಕ ಶಕ್ತಿಯ ಗಮನ ಕೊಂಚ ಅತ್ತ ಹರಿಯುವುದರಿಂದ ಕೆಲವು ಅನಾರೋಗ್ಯಗಳು ಸುಲಭವಾಗಿ ಬಾಧಿಸುತ್ತವೆ. ಉದಾಹರಣೆಗೆ ಲಿಸ್ಟೀರಿಯೋಸಿಸ್ (listeriosis) ಎಂಬ ನರಸಂಬಂಧಿ ರೋಗ ಆಹಾರದ ಮೂಲಕ ಹೊಟ್ಟೆ ಸೇರುವ ಬ್ಯಾಕ್ಟೀರಿಯಾಗಳಿಂದ ಬರುವಂತಹದ್ದಾಗಿದ್ದು ಗರ್ಭಿಣಿಯರಿಗೆ ಸೋಂಕು ತಗಲುವ ಸಾಧ್ಯತೆ ಸಾಮಾನ್ಯಕ್ಕಿಂತ ಇಪ್ಪತ್ತು ಪಟ್ಟು ಹೆಚ್ಚುತ್ತದೆ. ಹಾಗಾಗಿ ಈ ಬ್ಯಾಕ್ಟೀರಿಯಾಗಳು ಸಾಮಾನ್ಯವಾಗಿರುವ ಹಸಿ ಹಾಲು, ಚೀಸ್, ಬೆಣ್ಣೆ ಮೊದಲಾದವುಗಳ ಮೂಲಕ ಹೊಟ್ಟೆ ಸೇರದಂತೆ ಎಚ್ಚರಿಕೆ ವಹಿಸುವುದು ಅಗತ್ಯ.

ರಸ್ತೆಬದಿಯ ಆಹಾರ

ಹಾದಿಬದಿಯಲ್ಲಿ ಸಿಗುವ ಆಹಾರ ಎಷ್ಟೇ ಆಕರ್ಷಕ ಮತ್ತು ರುಚಿಯಾಗಿದ್ದರೂ ಗರ್ಭಿಣಿಯರು ಇದನ್ನು ಬೇಡ ಎಂದು ಹೇಳುವುದು ಒಳಿತು. ಏಕೆಂದರೆ ಈ ಆಹಾರ ತಯಾರಿಸಲು ಬಳಸಲಾಗಿರುವ ನೀರು, ಎಣ್ಣೆ, ಸ್ವಚ್ಛತೆಗೆ ಕೊಟ್ಟಿರುವ ಪ್ರಾಮುಖ್ಯತೆ, ಗಾಳಿಯಲ್ಲಿ ತೇಲಿ ಬಂದಿರುವ ಬ್ಯಾಕ್ಟೀರಿಯಾ, ಹೂವಿನ ಪರಾಗ, ಧೂಳು, ಆ ಅಂಗಡಿಗೆ ಬಂದವರು ತಮ್ಮೊಂದಿಗೆ ತಂದಿರಬಹುದಾದ ಸಾಂಕ್ರಾಮಿಕ ಕ್ರಿಮಿಗಳು, ಸೋಮಾರಿತನದಿಂದ ನಿನ್ನೆಯ ಪಾತ್ರೆಗಳನ್ನು ಸರಿಯಾಗಿ ತೊಳೆಯದೇ ಉಳಿದಿದ್ದ ಆಹಾರ ಕೊಳೆತು ಅದೇ ಪಾತ್ರೆಯನ್ನು ಮರುದಿನ ಆಹಾರ ತಯಾರಿಸಲು ಉಪಯೋಗಿಸಿರುವುದು, ಇಂತಹ ಹಲವಾರು ಸಾಧ್ಯತೆಗಳು ಆ ಆಹಾರದ ಬಗ್ಗೆ ಅನುಮಾನ ಹುಟ್ಟಿಸುತ್ತವೆ. ಬೇರೆ ಸಮಯದಲ್ಲಿ ಈ ಅನುಮಾನ ತಿಂದು ಪರಿಹಾರ ಮಾಡಿಕೊಳ್ಳುವಾ ಎಂಬ ದಾರ್ಷ್ಟ್ಯತೆ ಗರ್ಭಿಣಿಯರಿಗೆ ಬೇಡ. ನಯವಾಗಿ ಬೇಡ ಎಂಬ ಒಂದೇ ಮಾತಿನಿಂದ ತಿರಸ್ಕರಿಸಿ. ನಿಮ್ಮ ಮನೆಯ ಊಟ ನಿಮ್ಮ ಕಂದನಿಗೆ ಪರಮಾನ್ನವಾಗಿದೆ. ಒಂದು ವೇಳೆ ಈ ಆಹಾರ ತಿಂದು ಆರೋಗ್ಯ ಕೆಟ್ಟರೆ ಅನಿವಾರ್ಯವಾಗಿ ವೈದ್ಯರು ಔಷಧಿ ನೀಡಬೇಕಾಗುತ್ತದೆ, ಹಾಗೂ ಈ ಔಷಧಿಗಳೂ ನಿಮ್ಮ ಕಂದನಿಗೆ ಮಾರಕವಾಗಬಹುದು.

ಆಲ್ಕೋಹಾಲ್

ಆಲ್ಕೋಹಾಲ್ ಸೇವನೆ ಯಾವತ್ತಿದ್ದರೂ ದೇಹಕ್ಕೆ ಮಾರಕವಾಗಿದೆ. ಗರ್ಭಿಣಿಯಾಗಿದ್ದ ಕಾಲದಲ್ಲಂತೂ ಮದ್ಯಪಾನ ಅತಿ ಅಪಾಯಕಾರ. ಒಂದು ವೇಳೆ ನೀವು ಮದ್ಯಪಾನದ ವ್ಯಸನಿಯಾಗಿದ್ದು ಮದ್ಯ ಬಿಡಲು ಸಾಧ್ಯವೇ ಇಲ್ಲ ಎಂಬ ಸ್ಥಿತಿಯಲ್ಲಿದ್ದರೆ ಮಾತ್ರ ವೈದ್ಯರ ಸಲಹೆ ಮೇರೆಗೆ ಅತ್ಯಂತ ಸೌಮ್ಯವಾದ ಮತ್ತು ಅತ್ಯಂತ ಕನಿಷ್ಟ ಪ್ರಮಾಣದಲ್ಲಿ ಸೇವಿಸಿ. ಒಂದು ವೇಳೆ ಈ ಮಿತಿ ಮೀರಿದರೆ ನಿಮ್ಮ ಕಂದನ ಮೆದುಳಿನ ಬೆಳವಣಿಗೆಯಲ್ಲಿ ಮತ್ತು ಶರೀರ ತಕ್ಕಪ್ರಮಾಣದಲ್ಲಿ ಬೆಳವಣಿಗೆಯಾಗಲು ಅಡ್ಡಿಯಾಗುತ್ತದೆ. ಪರಿಣಾಮವಾಗಿ ವಿಕೃತ ಮತ್ತು ಬುದ್ದಿಮಾಂದ್ಯ ಮಕ್ಕಳು ಜನಿಸುವ ಸಾಧ್ಯತೆ ಅತೀವವಾಗಿ ಹೆಚ್ಚುತ್ತದೆ. ನಿಮಗಿದು ಬೇಕಾಗಿಲ್ಲ ಅಲ್ಲವೇ? ಮದ್ಯಪಾನಕ್ಕೆ ಬೇಡ ಎಂದು ಖಡಾಖಂಡಿತವಾಗಿ ಹೇಳಲು ಕಲಿಯಿರಿ.

ಸಿಗರೇಟುಗಳು

ಸಿಗರೇಟು ಸೇದುವವರು ತಮ್ಮೊಂದಿಗೆ ತಮ್ಮ ಸುತ್ತಮುತ್ತಲ ಜನರ ಆರೋಗ್ಯವನ್ನೂ ಹಾಳುಮಾಡುತ್ತಾರೆ. ಬರೆಯ ಗಾಳಿಯಲ್ಲಿ ತೇಲಿ ಬರುವ ಹೊಗೆಯೇ ಇಷ್ಟು ಭಯಂಕರವಾಗಿರಬೇಕಾದರೆ, ಅದರಲ್ಲೂ ವಯಸ್ಕರ ಆರೋಗ್ಯವನ್ನೇ ಹಾಳುಮಾಡುವಷ್ಟು ಪ್ರಬಲವಾಗಿರಬೇಕಾದರೆ ನಿಮ್ಮ ಶ್ವಾಸಕೋಶಗಳ ಮೂಲಕ ನಿಮ್ಮ ರಕ್ತ ಸೇರಿ ಆ ರಕ್ತವನ್ನೇ ನೇರವಾಗಿ ಹಂಚಿಕೊಳ್ಳುತ್ತಿರುವ ನಿಮ್ಮ ಎಳೆಯ ಕಂದನ ಸ್ಥಿತಿ ಏನಾಗಬಹುದು ಎಂದು ಕೊಂಚ ಯೋಚಿಸಿ. ನಿಮ್ಮ ಕಂದನ ರಕ್ತದಲ್ಲಿ ನಿಕೋಟಿನ್, ಕಾರ್ಬನ್ ಮೋನಾಕ್ಸೈಡ್ (ಇದರ ನೇರ ಸೇವನೆಯಿಂದ ಸಾವು ನಿಶ್ಚಿತ) ಮತ್ತು ಟಾರು ಬೆರೆತಾಗ ಅದರ ಆರೋಗ್ಯ ಮತ್ತು ಬೆಳವಣಿಗೆ ಹೇಗಾಗಬೇಕು ಮತ್ತು ಪರಿಣಾಮ ಏನಾಗಬಹುದು ಗೊತ್ತೇ? ನಿಕೋಟಿನ್ ಮತ್ತು ಕಾರ್ಬನ್ ಮಾನಾಕ್ಸೈಡ್ ರಕ್ತದಲ್ಲಿರುವ ಆಮ್ಲಜನಕವನ್ನು ತಾವೇ ಬಳಸಿಕೊಂಡುಬಿಡುತ್ತವೆ. ಕಂದನ ಆರೋಗ್ಯಕ್ಕೆ ಅಗತ್ಯವಿರುವಷ್ಟು ಆಮ್ಲಜನಕ ದೊರಕುವುದೇ ಇಲ್ಲ. ನನಗೆ ಅನ್ಯಾಯವಾಗುತ್ತಿದೆ ಎಂದು ಅದಕ್ಕೆ ಹೇಳಲೂ ಸಾಧ್ಯವಿಲ್ಲ. ಈ ಕೊರತೆಗಳ ನಡುವೆ ಹುಟ್ಟಿದ ಮಗು ಸೀಳುತುಟಿ ಹೊಂದಿರುವ, ಅತಿ ಕಡಿಮೆ ತೂಕ ಹೊಂದಿರುವ ಮತ್ತು ಹಲವು ಕೊರತೆಗಳೊಂದಿಗೆ ಹುಟ್ಟುವ ಸಾಧ್ಯತೆಗಳು ಹೆಚ್ಚುತ್ತದೆ. ಇದು ನಿಮಗೆ ಬೇಡ ಅಲ್ಲವೇ, ಹಾಗಾದರೆ ಸಿಗರೇಟಿಗೆ ಖಂಡಿತವಾಗಿ ಬೇಡ ಎಂದುಬಿಡಿ.

ಗ್ರೀನ್ ಟೀ (ಹಸಿರು ಟೀ)

ಎಲ್ಲೆಡೆ ಹಸಿರು ಟೀ ಆರೋಗ್ಯಕ್ಕೆ ಒಳ್ಳೆಯದು ಎಂದು ಟಾಂಟಾಂ ಆಗುತ್ತಿರುವಾಗ ಇದು ಮಾರಕ ಎಂದು ಹೇಳುತ್ತಿರುವುದು ಕೊಂಚ ಅಚ್ಚರಿ ತರಿಸುತ್ತಿದೆ ಅಲ್ಲವೇ? ಆದರೆ ಇದು ನಿಜ. ಏಕೆಂದರೆ ಹಸಿರು ಚಹಾ ಏಕಾಗಿ ಆರೋಗ್ಯಕ್ಕೆ ಒಳ್ಳೆಯದು ಎಂದು ಪ್ರಚಾರ ಪಡೆಯುತ್ತಿದೆಯೋ ಅದೇ ಗರ್ಭಿಣಿಯರಿಗೆ ಮಾರಕವಾಗಿದೆ. ಹಸಿರು ಟೀ ಸೇವನೆಯಿಂದ ನಿಮ್ಮ ಜೀವರಾಸಾಯನಿಕ ಕ್ರಿಯೆಯನ್ನು ಹೆಚ್ಚಿಸುವುದರಿಂದ ಹೆಚ್ಚು ಶಕ್ತಿ ಮತ್ತು ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಲಭಿಸುವ ಪೋಷಕಾಂಶಗಳು ಉಳಿದ ಚಟುವಟಿಕೆಗಳನ್ನು ಚುರುಕುಗೊಳಿಸುತ್ತವೆ. ಆದರೆ ನಿಮ್ಮ ಕಂದನ ಬೆಳವಣಿಗೆ ಒಂದು ಖಚಿತವಾದ ವೇಳಾಪಟ್ಟಿಗೆ ಒಳಪಟ್ಟಿದೆ. ಈ ವೇಳಾಪಟ್ಟಿಯನ್ನು ಗಮನಿಸಿ ವೈದ್ಯರು ನಿಮ್ಮ ಕಂದನ ಆಗಮನದ ದಿನಾಂಕವನ್ನೂ ಹೆಚ್ಚೂ ಕಡಿಮೆ ಕರಾರುವಾಕ್ಕಾಗಿ ಹೇಳುತ್ತಾರೆ. ಹಸಿರು ಟೀ ಸೇವನೆಯಿಂದ ಈ ಬೆಳವಣಿಗೆಯ ಕ್ರಮದಲ್ಲಿ ಏರುಪೇರಾಗಿ ಕಂದನ ಆರೋಗ್ಯಕ್ಕೆ ಮಾರಕವಾಗುತ್ತದೆ. ಹಾಗಾಗಿ ಗರ್ಭಿಣಿಯಾಗಿದ್ದಾಗ ಗ್ರೀನ್ ಟೀ ಗೆ ಕೆಂಪು ದೀಪ ತೋರಿಸಿ.

ಮೂಲ : ಬೋಲ್ಡ್ ಸ್ಕೈ

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate