অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮೋಲಾರ್‌ ಗರ್ಭಧಾರಣೆ

ಮೋಲಾರ್‌ ಗರ್ಭಧಾರಣೆ ಎಂದರೇನು?

ಮೋಲಾರ್‌ ಗರ್ಭಧಾರಣೆಯೆ ಮಹಿಳೆಯರಲ್ಲಿ ವಿರಳವಾದ ಸಮಸ್ಯೆ . ಗರ್ಭ ಫಲಿತಗೊಳ್ಳುವ  ಸಮಯದಲ್ಲಿ ಏನಾದರೂ ದೋಷವಾದಾಗ ಈ ಸಮಸ್ಯೆ ತಲೆದೋರುತ್ತದೆ. ಮಾಸವನ್ನು ಸೃಜಿಸುವ ಜೀವಕೋಶಗಳ ಅಸಹಜ ಬೆಳವಣಿಗೆಯಿಂದ ಈ ಸಮಸ್ಯೆ ಉಂಟಾಗುತ್ತದೆ. ಮೋಲಾರ್‌ ಗರ್ಭವನ್ನು ಕೆಲಬಾರಿ ಹೈಡಾಟಿಡಿ ಫಾರ್ಮ್‌ ಎನ್ನುವರು. ಈ ಬೆಳವಣಿಗೆಯನ್ನು ಗೆಸ್ಟೇಶನಲ್‌ ಟ್ರೊಫೊಬ್ಲಾಸ್ಟಿಕ್‌ ಟ್ಯೂಮರ್ಸ್‌  ಎಂದೂ ಕರೆಯುತ್ತಾರೆ. ಅವು ಕ್ಯಾನ್ಸರ್‌ಕಾರಿಯಲ್ಲ. ಅವು ಅಂಡಾಶಯದಿಂದ ಹೊರೆಗೆ ಹರಡುವ ಸಾಧ್ಯತೆಯಿದ್ದರೂ ಅವುಗಳನ್ನು ಗುಣ ಪಡಿಸಬಹುದು. ಸಾಮಾನ್ಯ ಗರ್ಭಧಾರಣೆಯಲ್ಲಿ ಫಲಿತವಾದ ಅಂಡಾಣುವಿನಲ್ಲಿ ತಾಯಿಯಿಂದ ೨೩ ಕ್ರೊಮೊಸೋಮ್‌ (ವರ್ಣತಂತು)ಗಳು ಮತ್ತು ತಂದೆಯಿಂದ ೨೩ ಕ್ರೊಮೋಸೋಮ್‌ಗಳು ಇರುತ್ತವೆ. ತಂದೆಯ ವರ್ಣತಂತುಗಳು ದ್ವಿಗುಣಗೊಳ್ಳುತ್ತವೆ. ಆದರೆ ತಾಯಿಯ ವರ್ಣತಂತುಗಳು ಇರುವುದೇ ಇಲ್ಲ. ಈ ಪ್ರಕರಣದಲ್ಲಿ ಭ್ರೂಣವಾಗಲೀ, ಅಮ್ನಿಯೋಟಿಕ್‌ ಕಿರು ಚೀಲವಾಗಲೀ, ಮಾಸವಾಗಲೀ ಇರುವುದಿಲ್ಲ. ಬದಲಾಗಿ, ಪ್ಲಾಸೆಂಟಾವು ದ್ರಾಕ್ಷಿಯಂತೆ ಕಾಣುವ ಸಿಸ್ಟ್ ಗಳು ಉಂಟಾಗುತ್ತವೆ. ಈ ಸಿಸ್ಟ್ ಗಳನ್ನು  ಅಲ್ಟ್ರಾ ಸೌಂಡ್‌ ಸ್ಕ್ಯಾನ್‌ನಲ್ಲಿ ಕಾಣಬಹುದು.ಬಹತೇಕ ಅರೆ ಮೋಲಾರ್‌ ಗರ್ಭದಲ್ಲಿ ಫಲಿತವಾದ ಅಂಡಾಣುವು ತಾಯಿಯ ವರ್ಣತಂತುಗಳನ್ನು ಪಡೆದಿರುತ್ತದೆ. ಆದರೆ ತಂದೆಯಿಂದ ಎರಡು ಪಟ್ಟು ವರ್ಣತಂತುಗಳನ್ನು  ಪಡೆದಿರುತ್ತದೆ. ಅಂದರೆ ಸಾಮಾನ್ಯವಾಗಿ ಇರುವ ೪೬ ವರ್ಣತಂತುಗಳ ಬದಲಾಗಿ ೬೯ ವರ್ಣತಂತುಗಳಿರುತ್ತವೆ. (ಇದು ವೀರ್ಯಾಣುವು ಎರಡು ವರ್ಣತಂತುಗಳು ದ್ವಿಪ್ರತಿಯಾದಾಗ, ಅಥವಾ ಎರಡು ವೀರ್ಯಾಣೂಗಳು ಒಂದೇ ಅಂಡಾಣುವನ್ನು ಫಲಿತಗೊಳಿಸಿದಾಗ) ಈ ಸಂದರ್ಭದಲ್ಲಿ ಮಾಸದ ಕೆಲ ಅಂಗಾಂಶಗಳು ಗೊಂಚಲಿನಂತಿರುವ ಮಾಂಸದ ಮುದ್ದೆಯಲ್ಲಿ ಕಾಣುವವು. ಭ್ರೂಣವು ಬೆಳವಣಿಗೆ ಆರಂಭಿಸಬಹುದು, ಭ್ರೂಣವು ಇರಬಹುದು, ಅಥವಾ ಭ್ರೂಣದ ಅಂಗಾಂಶಗಳು ಅಥವಾ ಅಮ್ನಿಯೊಟಿಕ್‌ ಚೀಲ ಇರಬಹುದು. ಭ್ರೂಣವು ಇದ್ದಾಗ್ಯೂ, ಇದು ಅಸಹಜ ವರ್ಣತಂತುಗಳಿಂದಾಗಿ, ಅದು ಉಳಿಯುವ ಸಾಧ್ಯತೆಯಿಲ್ಲ ಹಾಗೆಯೇ ಪೂರ್ಣ ಪ್ರಮಾಣದ ಮಗುವಾಗಿ ಬೆಳೆಯುವ ಸಾಧ್ಯತೆಯಿಲ್ಲ.ಈ ರೀತಿಯಾಗಿ ಗರ್ಭ ಹೋಗುವುದು ಗಾಬರಿ ಹುಟ್ಟಿಸುವ ಮತ್ತು ಆತಂಕದ ವಿಚಾರ. ಸೂಕ್ತ ಚಿಕಿತ್ಸೆ ಮತ್ತು ಎಚ್ಚರಿಕೆ ವಹಿಸಿದರೆ ದೂರಗಾಮಿ ದೈಹಿಕ ಪರಿಣಾಮ ಬೀರುವುದಿಲ್ಲ.

ಮೋಲಾರ್‌ ಗರ್ಭಧಾರಣೆಗಳು ಎಷ್ಟು ಸಾಮಾನ್ಯ?

ಪಾಶ್ಚಿಮಾತ್ಯ ದೇಶಗಳಲ್ಲಿ ಪ್ರತಿ ೧೦೦೦ ಗರ್ಭಿಣಿಯರಲ್ಲಿ ಒಬ್ಬರಿಗೆ ಮೋಲಾರ್‌ ಗರ್ಭಧಾರಣೆ ಕಂಡುಬರುತ್ತದೆ. ಏಷ್ಯಾದ ಮಹಿಳೆಯರಲ್ಲಿ ಮೋಲಾರ್‌ ಬಸಿರು ಇನ್ನೂ ಹೆಚ್ಚು. ಈವರೆಗೂ ಅದಕ್ಕೆ ಕಾರಣ ಪತ್ತೆಯಾಗಿಲ್ಲ. ರಕ್ತದ ಗುಂಪು ಬಿ. ಇರುವ ಮಹಿಳೆಯರಲ್ಲಿ ಮೋಲಾರ್‌ ಬಸಿರು ಹೆಚ್ಚಿರುತ್ತದೆ. ಅದರಲ್ಲೂ ಭಾರತೀಯ ಮತ್ತು ಪಾಕಿಸ್ತಾನಿ ಮಹಿಳೆಯರಲ್ಲಿ ಎರಡನೇ ಬಾರಿಯೂ ಮೋಲಾರ್‌ ಬಸಿರು ಆಗುವ ಅವಕಾಶವಿದೆ.

ನನಗೆ ಮೋಲಾರ್‌ ಬಸಿರು ಇದೆ ಎಂಬುದು ತಿಳಿಯುವುದು ಹೇಗೆ?

ಮೊದಮೊದಲು ಇದು ಸಾಧಾರಣ ಬಸಿರಿನ ಚಿಹ್ನೆಯನ್ನೇ ಹೊಂದಿರುವುದು. ಬರಬರುತ್ತಾ ಗರ್ಭಿಣಿಯರಲ್ಲಿ ರಕ್ತಸ್ರಾವ ಶುರುವಾಗುವುದು. (ಸಾಧಾರಣವಾಗಿ ಗರ್ಭಿಣಿಯರಲ್ಲಿ ರಕ್ತಸ್ರಾವ ಅಂತಹ ಗಂಭೀರ ಸಮಸ್ಯೆಯಲ್ಲ. ಅದು ವಿರಳವಾಗಿ ಮೋಲಾರ್‌ ಬಸಿರಿನ ಚಿಹ್ನೆಯಾಗಿರಬಹುದು. ಆದರೆ ಯಾವುದಕ್ಕೂ ವೈದ್ಯರನ್ನು ಸಂಪರ್ಕಿಸುವುದು ಮೇಲು.) ರಕ್ತಸ್ರಾವವು ಕಡುಕೆಂಪು ಅಥವಾ ದಟ್ಟ ಕಂದುಬಣ್ಣದ್ದಾಗಿರಬಹುದು, ಸತತವಾಗಿರಬಹುದು ಇಲ್ಲವೇ ಬಿಟ್ಟು ಬಿಟ್ಟು ಆಗುತ್ತಿರಬಹುದು. ಬೇಗ ಎಂದರೆ ಆರನೇ ವಾರದಲ್ಲಿಯೂ ತಡವಾಗಿ ಎಂದರೆ ಹದಿನಾರನೇ ವಾರದಲ್ಲಿಯೂ ಆಗಬಹುದು. ನಿಮಗೆ ತೀವ್ರವಾದ ವಾಂತಿ ಮತ್ತು ತಲೆ ಸುತ್ತು ಇರಬಹುದು ಇಲ್ಲವೇ ಹೊಟ್ಟೆ ಉಬ್ಬಬಹುದು (ಗರ್ಭಾಶಯವು ಸಾಮಾನ್ಯಕ್ಕಿಂತ ಬೇಗನೆ ಉಬ್ಬಬಹುದು) ಸಾಮಾನ್ಯ ಗರ್ಭಿಣಿಗಿಂತ ಹ್ಯೂ ಮನ್‌ ಕ್ರಾನಿಕ್‌ ಗೊನೊಡೊ ಟ್ರೋಫಿನ್‌ ಹಾರ್ಮೋನ್‌ಗಳು (ಎಚ್‌ಸಿಜಿ )ಹೆಚ್ಚಿನ ಮಟ್ಟದಲ್ಲಿ ಇರಬಹುದು. ಪೂರ್ಣ ಮೋಲಾರ್‌ ಗರ್ಭವು ಅಲ್ಟ್ರಾಸೌಂಡ್‌ ಸ್ಕಾನ್‌ನಲ್ಲಿ ಗೋಚರವಾಗುವುದು. ಮತ್ತು ರಕ್ತ ಪರೀಕ್ಷೆಯಲ್ಲಿ ಎಚ್‌ಸಿಜಿ ಮಟ್ಟವನ್ನು ಅಳೆದು ಅದನ್ನು ಖಚಿತ ಪಡಿಸಬಹುದು. ಆದರೆ ಕೆಲವು ಸಾರಿ ಅರೆ ಮೋಲಾರ್‌ ಗರ್ಭವನ್ನು ಪತ್ತೆ ಹಚ್ಚುವುದು ಕಷ್ಟ ಗರ್ಭಪಾತವಾದಾಗ ಅನುಮಾನ ಬಂದರೆ ವೈದ್ಯರು ಅಂಗಾಂಶಗಳನ್ನು ಪರೀಕ್ಷಿಸಿ ಅರೆಮೋಲಾರ್‌ ಗರ್ಭಧಾರಣೆಯನ್ನು ಖಚಿತ ಪಡಿಸಬಹುದು. ಈ ಅಂಗಾಂಶವನ್ನು ಯಾವುದೇ ಸ್ಥಳೀಯ ಆಸ್ಪತ್ರೆಗೆ ನೀಡಿದರೆ ಅವರು ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಕಳಿಸಲು ಸಾಧ್ಯ.

ಮೋಲಾರ್‌ ಗರ್ಭಕ್ಕೆ ಚಿಕಿತ್ಸೆ ಏನು?

ಮೋಲಾರ್‌ ಬಸಿರು ಎಂದು ಪತ್ತೆ ಹಚ್ಚಿದಾಗ ಒಂದು ಚಿಕ್ಕ ಶಸ್ತ್ರ ಚಿಕಿತ್ಸೆಯಾದ  ಡಿ ಅಂಡ್‌ ಸಿ ಯಿಂದ ಅಸಹಜ ಅಂಗಾಂಶಗಳನ್ನು ತೆಗೆದು ಹಾಕಬಹುದು. ಇಲ್ಲವೇ ಔಷಧಿಯನ್ನು ನೀಡಿ ಶಸ್ತ್ರಚಿಕಿತ್ಸೆಯಿಲ್ಲದೇ ಅಂಗಾಂಶವನ್ನು ಹೊರಗೆ ಹಾಕಬಹುದು. ಇದನ್ನು ಔಷಧೀಯ ನಿರ್ವಹಣೆ ಎನ್ನುವರು. ವಿರಳ ಪ್ರಕರಣಗಳಲ್ಲಿ ಇದನ್ನು ಪೂರ್ತಿಯಾಗಿ ನಿವಾರಿಸಲು ಎರಡನೇ ಡಿ ಅಂಡ್‌ ಸಿ ಮಾಡಬೇಕಾಗಬಹುದು.ವೈದ್ಯರು ಅನುಪಾಲನಾ ಪರೀಕ್ಷೆ ಮಾಡಲು ರಕ್ತ ಮತ್ತು ಮೂತ್ರದ ಮಾದರಿ ಪಡೆದು ಎಚ್‌ಸಿಜಿ ಮಟ್ಟವನ್ನು ಗಮನಿಸುವರು. ದೇಹದಲ್ಲಿ ಯಾವುದೇ ವ್ಯಾಧಿ ಇಲ್ಲದೇ ಇದ್ದರೆ ಎಚ್‌ಸಿಜಿ ಮಟ್ಟವು ಶೂನ್ಯವಾಗಿರುತ್ತದೆ.

ದೂರಗಾಮಿ ಪರಿಣಾಮಗಳು

ಮೋಲಾರ್‌ ಬಸಿರನ್ನು ಪತ್ತೆಹಚ್ಚಿದ ಮೇಲೆ ಮುಂದೆ ಆರುತಿಂಗಳ ಕಾಲ ಸಂದರ್ಭಾನುಸಾರ ಮೇಲುಸ್ತುವಾರಿ ಮಾಡಬೇಕು. ಏಕೆಂದರೆ ಅತ್ಯಲ್ಪ ಪ್ರಮಾಣದ ಮೋಲಾರ್‌ ಗರ್ಭವು ಉಳಿದಿದ್ದರೂ ಅದು ಅತಿಶೀಘ್ರದಲ್ಲಿ ಹರಡುತ್ತದೆ ಮತ್ತು ಬೆಳೆಯುತ್ತದೆ. ಇದು ಚಿಕಿತ್ಸೆಯಾದ ಹಲವು ತಿಂಗಳ ನಂತರವೂ ಮತ್ತೆ ಬರಬಹುದು ಆಗ ಎಚ್‌ಸಿಜಿ ಮಟ್ಟವು ಏರುವುದು. ಇಲ್ಲವಾದರೆ ಮಟ್ಟವು ಹೆಚ್ಚಿನ ಮಟ್ಟದಲ್ಲಿಯೇ ಸ್ಥಿರವಾಗಿರುವುದು. ಇದು ಮೋಲಾರ್‌ ಗರ್ಭದ ಸಂಕೇತವಾಗಿದೆ.ಆಕ್ರಮಣಕಾರಿ ಮೋಲ್‌  ಒಂದು ಡಿ ಅಂಡ್‌ ಸಿ ಶಸ್ತ್ರ ಚಿಕಿತ್ಸೆಯ ನಂತರವೂ ಬೆಳೆಯಬಹುದು. ಈ ಆಕ್ರಮಣಕಾರಿ ಮೋಲಾರ್‌ ಗರ್ಭವೆಂದರೆ ಮೋಲಾರ್‌ ಅಂಗಾಂಶವು ಗರ್ಭಾಶಯದ ಸ್ನಾಯುಗಳ ಪದರದ ಮೇಲೆ ಬೆಳೆದಿರುವುದು. ಶಸ್ತ್ರ ಕ್ರಿಯೆಯ ನಂತರವೂ ಕ್ರಮರಹಿತ ಮತ್ತು ಸತತ ರಕ್ತಸ್ರಾವ ಆಕ್ರಮಣಕಾರಿ ಮೋಲ್‌ನ ಲಕ್ಷಣ. ಆಕ್ರಮಣಕಾರಿ ಮೋಲ್‌ಗಳು ಸಮಸ್ಯೆಗಳನ್ನು ಉಂಟುಮಾಡಬಹುದು. ಗರ್ಭಾಶಯದ ಮೇಲ್ಮೈಯ ಮೇಲೆ ಬೆಲೆಯ ತೊಡಗಿದಾಗ ಅದು ಅಲ್ಲಿಂದ ಶ್ವಾಸಕೋಶ, ಪಿತ್ತಕೋಶ ಮತ್ತು ಮೆದುಳು ಸೇರಿದಂತೆ ಇನ್ನೂ ಅನೇಕ ಅಂಗಗಳಿಗೆ ಹರಡಬಹುದು.ಆಕ್ರಮಣಕಾರಿ ಮೋಲಾರ್‌ ಗರ್ಭವು ಅರೆ ಮೋಲಾರ್‌ ಗರ್ಭದ ನಂತರ ಸಂಭವಿಸಬಹುದು. ಆದರೆ ಅದು ಪೂರ್ಣ ಮೋಲಾರ್‌ ಗರ್ಭದ ನಂತರ ಬರುವ ಸಾಧ್ಯತೆ ಹೆಚ್ಚು. ಯಾವಾಗಲಾದರೂ ಒಮ್ಮೆ ಅಂಗಾಂಶಗಳನ್ನು ತೆಗೆದು ಹಾಕಿದರೂ ಕೂಡ ಅಸಹಜ ಜೀವಕೋಶಗಳು ಒಳಗೇ ಉಳಿದು ಕೊಳ್ಳಬಹುದು. ಇದು ಪೂರ್ಣ ಮೋಲಾರ್‌ ಇರುವ ಮಹಿಳೆಯರಲ್ಲಿ ಶೇ. ೧೫ ಕಡಿಮೆ ಮತ್ತು ಅರೆ ಮೋಲಾರ್‌ ಗರ್ಭವತಿಯರಲ್ಲಿ ೧% ವರೆಗೂ ಬರಬಹುದು. ಈ ವ್ಯಾಧಿಯು ಇರುವುದು ಖಚಿತವಾದರೆ, ಗರ್ಭಾಶಯಕ್ಕೆ ಮಾತ್ರ ಸೀಮಿತವಾಗಿದ್ದರೆ ಔಷಧಿ ಉಪಯೋಗಿಸಿ ಚಿಕಿತ್ಸೆ ಮಾಡಬಹುದು.  ಚಿಕಿತ್ಸೆಯನ್ನು ಎಚ್‌ಸಿಜಿ ಮಟ್ಟವು ಸಾಮಾನ್ಯಕ್ಕೆ ಬರುವವರೆಗೂ ಮುಂದುವರಿಸಬೇಕು. ಸೂಕ್ತವಾದ ಸಕಾಲದಲ್ಲಿ ನೀಡಿದ ಚಿಕಿತ್ಸೆಯಿಂದ ಗರ್ಭಾಶಯದ ಹೊರಗೆ ಹರಡದೇ ಇದ್ದ ರೋಗವನ್ನು ಪ್ರತಿಶತ ನೂರರಷ್ಟು ಗುಣಪಡಿಸಬಹುದು. ಕೆಲ ವಿರಳ ಸಂದರ್ಭದಲ್ಲಿ ಗರ್ಭಾಶಯದಿಂದ ಹೊರಗೆ ಹರಡಿದ್ದರೂ ಗುಣವಾಗಬಹುದು. ಆದರೆ ಗುಣವಾದ ನಂತರವೂ ಎಚ್‌ಸಿಜಿ ಮಟ್ಟವನ್ನು ಜೀವನವಿಡೀ ಆಗಾಗ ಪರಿಶೀಲಿಸುತ್ತಿರಲೇ ಬೇಕು. ಬಹಳ ಕಡಿಮೆ ಸಂಖ್ಯೆಯಲ್ಲಿ ಪೂರ್ಣ ಮೋಲಾರ್‌ ಗರ್ಭವು ಎಂಬ ವಿರಳವಾದ ಕ್ಯಾನ್ಸರಿಗೆ ಕಾರಣವಾಗಬಹುದು. ಆಗ ಮಾಸವು ಅಸಹಜ ಬೆಳವಣಿಗೆಯಾಗುತ್ತದೆ. ಈ ಸ್ಥಿತಿಯು ೩೦ ಸಾವಿರ ಗರ್ಭಿಣಿಯರಲ್ಲಿ ಒಬ್ಬರಿಗೆ ಮಾತ್ರ ಆಗಬಹುದು. ಆದರೆ ಇದನ್ನು ಖಂಡಿತವಾಗಿಯೂ ಗುಣಪಡಿಸಬಹುದು. ಈ ಸ್ಥಿತಿಯು ಮೋಲಾರ್‌ ಗರ್ಭ ಅಥವಾ ಸಾಮಾನ್ಯ ಗರ್ಭ ಅಥವಾ ಗರ್ಭಪಾತವಾದಾಗಲೂ ಬರಬಹುದು.

ಮತ್ತೆ ಯಾವಾಗ ಗರ್ಭಧರಿಸಬಹುದು?

ಕಿಮೊಥೆರಪಿ ಯಾಗದಿದ್ದರೆ ಎಚ್‌ಸಿಜಿ ಮಟ್ಟ ಸೊನ್ನೆಯಾಗುವವರೆ ಆರು ತಿಂಗಳವರೆಗೆ ಗರ್ಭಧರಿಸಬಾರದು.ಕಿಮೋಥೆರಪಿಗೆ ಒಳಗಾಗಿದ್ದರೆ ಹನ್ನೆಡರು ತಿಂಗಳವರೆಗೆ ಗರ್ಭಧರಿಸಬಾರದು. ಎಚ್‌ಸಿಜಿ ಮಟ್ಟವು ಮರಳಿ ಏರಕೆಯಾದರೆ ಆಗ ವೈದ್ಯರು ಅಸಹಜ ಅಂಗಾಂಶವು ಮತ್ತೆ ಬೆಳೆಯುತ್ತಿದೆಯೇ ಎಂಬುದನ್ನು ಹೇಳಲಾಗುವುದಿಲ್ಲ. ಇನ್ನೊಂದು ಬಾರಿ ಮೋಲಾರ್‌ ಗರ್ಭಧರಿಸುವ ಸಾಧ್ಯತೆಯು ಒಂದರಿಂದ ೨ % ಇದೆ. ಮೊದಲ ತ್ರೈಮಾಸಿಕದಲ್ಲೆ ಅಲ್ಟ್ರಾಸೌಂಡ್‌ ಸ್ಕಾನಿಂಗ್‌ ಮಾಡಿಸಿದರೆ ಸಮಸ್ಯೆಯ ಸುಳಿವು ಸಿಕ್ಕುವುದು. ಒಂದು ಒಳ್ಳೆಯ ಸುದ್ದಿಯೆಂದರೆ ಬಹುತೇಕ ಮೋಲಾರ್‌ ಗರ್ಭಗಳಲ್ಲಿ ಅದು  ಆಮೇಲೆ ಸಾಮಾನ್ಯ ಗರ್ಭಧಾರಣೆಯಾದರೆ ಬರುವುದಿಲ್ಲ, ಕಿಮೋಥೆರಪಿಯಾಗಿದ್ದಾಗ್ಯೂ ಯಾವುದೇ ಅಡ್ಡ ಪರಿಣಾಮಗಳಾಗದು. ಅವಧಿ ಪೂರ್ಣ ಹೆರಿಗೆ ನೋವು, ಮೃತ ಶಿಶುವಿನ ಜನನ, ಜನನ ದೋಷ ಮತ್ತು ಇತರೆ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ.

ಆಪ್ತಸಲಹೆ

ಮೋಲಾರ್‌ ಗರ್ಭವು ಮಹಿಳೆಗೆ ಆತಂಕ ಮತ್ತು ಭಯವನ್ನು ಮೂಡಿಸುವುದು ಅವಳಿಗೆ ಗರ್ಭಪಾತವಾಗಿ ಮಗುವನ್ನು ಕಳೆದುಕೊಂಡಾಗಿನ ಅನುಭವವೇ ಆಗುವುದು. ಆದರೆ ಈ ವಿಶೇಷ ಸಂದರ್ಭದಲ್ಲಿ ಬಹಳ ಜನರಿಗೆ ತಮ್ಮ ಪರಿಸ್ಥಿತಿಯ ಕಲ್ಪನೆ ಇರುವುದಿಲ್ಲ. ತಮ್ಮ ಆರೋಗ್ಯದ ಬಗೆಗಿನ ಕಾಳಜಿಯೂ ಕಡಿಮೆ ಮುಂದೆ ಆರು ತಿಂಗಳು ಆರೈಕೆ ಮತ್ತು ಅನುಪಾಲನೆ ಮಾಡಿಕೊಂಡರೆ ನಂತರ ಮಾತ್ರ ಗರ್ಭಧಾರಣೆಯ ಅವಕಾಶವಿದೆ ಎಂಬುದು ಆತಂಕವನ್ನು ಮೂಡಿಸುತ್ತದೆ. ಅಲ್ಲದೆ ಅಸಹಜ ಅಂಗಾಂಶವು ಪುನಃ ಬೆಳೆಯಬಹುದೆಂಬ ಭಯವೂ ಕಾಡುತ್ತದೆ. ಈ ವ್ಯಾಧಿಯು ಬೇಗ ಗುಣವಾಗದೇ ಇದ್ದರೆ ಕಿಮೋಥೆರಪಿ ಚಿಕಿತ್ಸೆ ಬೇಕಾಗುತ್ತದೆ. ಅದು ಬಹು ತ್ರಾಸದಾಯಕ ಅಲ್ಲದೆ ಮುಂದಿನ ಬಸಿರನ್ನೂ ಕೂಡ ಹೆಚ್ಚುಕಾಲ ಮುಂದೂಡಬೇಕಾಗುತ್ತದೆ. ಇದರಿಂದ ಎಲ್ಲವನ್ನೂ ಕಳೆದುಕೊಂಡ ಅನುಭವವಾಗಬಹುದು. ಪತಿಯೂ ದುಃಖಿಯಾಗಬಹುದು. ಅಸಹಾಯಕತೆ ಮನೆಮಾಡಬಹುದು. ತನ್ನ ಭಾವನೆಗಳನ್ನು ವ್ಯಕ್ತ ಪಡಿಸಲು ಅವಕಾಶ ಸಿಗದಿರಬಹುದು. ಹೆಂಡತಿಗೆ ಹೇಗೆ ಬೆಂಬಲ ನೀಡಬಹುದು ಎಂಬುದು ಅವನಿಗೆ ತಿಳಿಯದೇ ಇರಬಹುದು. ಗಂಡ ಹೆಂಡಿರು ಈ ಸಮಯದಲ್ಲಿ ಪರಸ್ಪರ ಸಂವಾದದಲ್ಲಿ ಹೆಚ್ಚಾಗಿ ತೊಡಗಬೇಕು. ತಮ್ಮ ಭಾವನೆಗಳನ್ನು ಹಂಚಿಕೊಳ್ಳಬೇಕು. ಯಾರೊಬ್ಬರಿಗೂ ಅದನ್ನು ಭರಿಸಲಾಗದೇ ಇದ್ದರೆ ವೈದ್ಯರು ಕುಟುಂಬ ಸದಸ್ಯರು ಗೆಳೆಯರು ಇಲ್ಲವೇ ಆಪ್ತ ಸಲಹೆಗಾರರ ಜತೆ ಮಾತನಾಡಬೇಕು.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 2/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate