ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಗರ್ಭಪೂರ್ವ ಆರೈಕೆ

ತಾಯಿಯಾಗುವ ಹಂಬಲ ಪ್ರತಿಯೊಬ್ಬ ಮಹಿಳೆಗೂ ಸಹಜವಾದುದು. ಆರೋಗ್ಯವಂತ ಮಗುವನ್ನು ಹೆತ್ತು ಪಾಲಿಸುವುದು ಎಲ್ಲಾ ದಂಪತಿಗಳ ಬಯಕೆ.

ತಾಯಿಯಾಗುವ ಹಂಬಲ ಪ್ರತಿಯೊಬ್ಬ ಮಹಿಳೆಗೂ ಸಹಜವಾದುದು. ಆರೋಗ್ಯವಂತ ಮಗುವನ್ನು ಹೆತ್ತು ಪಾಲಿಸುವುದು ಎಲ್ಲಾ ದಂಪತಿಗಳ ಬಯಕೆ. ಭಾವೀ ತಂದೆ-ತಾಯಿಯರ ಮಾನಸಿಕ ಹಾಗೂ ದೈಹಿಕ ಆರೋಗ್ಯ, ಹುಟ್ಟುವ ಮಗುವಿನ ಮೇಲೆ ಪ್ರಭಾವ ಬೀರುವುದು ಖಚಿತವಾಗಿದ್ದು, ಈಗ ಗರ್ಭಪೂರ್ವ ಆರೈಕೆಕೂಡ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ.

ಗರ್ಭಪೂರ್ವ ಆರೈಕೆಯ ಉದ್ದೇಶವೇನು

ಭ್ರೂಣ ಹಾಗೂ ನವಜಾತ ಶಿಶುವಿನ ಮೇಲೆ ಪರಿಣಾಮ ಬೀರುವಂತಹ ಭಾವೀ ತಾಯಿ ಹಾಗೂ ತಂದೆಯ ಆರೋಗ್ಯ ಸಂಬಂಧಿ ಚಟುವಟಿಕೆಗಳನ್ನು ಗುಣಾತ್ಮಕವಾಗಿ ರೂಪಿಸಿಕೊಳ್ಳುವುದೇ ಗರ್ಭಪೂರ್ವ ಆರೈಕೆಯ ಮುಖ್ಯ ಧ್ಯೇಯ. ಆರೋಗ್ಯವಂತ ಕುಟುಂಬಕ್ಕಾಗಿ, ಗರ್ಭಧರಿಸುವ ಮುನ್ನವೇ ಸ್ವಲ್ಪ ಯೋಚಿಸುವುದು ಅಗತ್ಯ. ದಂಪತಿಗಳ ದೈಹಿಕ ಹಾಗೂ ಮಾನಸಿಕ ತಯಾರಿ, ಮಹಿಳೆಯ ಆರೋಗ್ಯ ರಕ್ಷಣೆ, ಆಹಾರ ಸೇವನೆ ಮುಂತಾದ ಚಟುವಟಿಕೆಗಳು ಮಗುವಿನ ಸ್ವಾಸ್ಥ್ಯದ ಮೇಲೆ ಪ್ರಭಾವ ಬೀರಬಲ್ಲವು.

ಗರ್ಭಪೂರ್ವ ಆರೈಕೆ ಯಾವಾಗಿನಿಂದ ಪ್ರಾರಂಭವಾಗುತ್ತದೆ

ಗರ್ಭಿಣಿಯಾಗುವ ಬಹಳಷ್ಟು ಮೊದಲೇ ಹದಿಹರೆಯದ ತರುಣಿಯರು ತಮ್ಮ ಆರೋಗ್ಯದ ಬಗ್ಗೆ ಬಹಳಷ್ಟು ಕಾಳಜಿ ವಹಿಸುವುದು ಅಗತ್ಯ. ಇದರಲ್ಲಿ ಮುಖ್ಯವಾದುದು - ಸಂತುಲಿತ ಆಹಾರ ಹಾಗೂ ದೈನಂದಿನ ದೈಹಿಕ ವ್ಯಾಯಾಮಗಳು. ಒಂದು ಕಡೆ ಅಗತ್ಯ ಪೌಷ್ಟಿಕಾಂಶಗಳ ಕೊರತೆಯಾಗದಂತೆ, ಇನ್ನೊಂದೆಡೆ ತೂಕವು ಮಿತಿಮೀರದಂತೆ ಆಹಾರ ಸೇವಿಸಿಕೊಳ್ಳುತ್ತಾ, ಆರೋಗ್ಯವನ್ನು ಜತನದಿಂದ ಕಾಪಾಡಬೇಕು. ತಾನು ಗರ್ಭಿಣಿ ಎಂಬ ಅರಿವಾಗುವ ಮೊದಲೇ ಭ್ರೂಣವು ದುಷ್ಪ$ರಿಣಾಮಗಳಿಗೆ ಒಳಗಾಗುವುದನ್ನು ತಪ್ಪಿಸಲು ಸಾಕಷ್ಟು ಮುಂಚಿತವಾಗಿ ಈ ಎಲ್ಲ ವಿಚಾರಗಳ ಬಗ್ಗೆ ಮಾಹಿತಿ ಪಡೆಯುವುದು ಅಗತ್ಯ. ಗರ್ಭ ಧರಿಸುವ ವಯಸ್ಸಿನ ಎಲ್ಲ ಮಹಿಳೆಯರೂ ಕುಟುಂಬ ನಿಯಂತ್ರಣದ ವಿಧಾನಗಳನ್ನು ಅರಿತುಕೊಳ್ಳುವುದು ಕೂಡ ಅವಶ್ಯಕ.

ವಯಸ್ಸು ಅತಿ ಕಿರಿಯ ವಯಸ್ಸಿನಲ್ಲಿ ಗರ್ಭ ಧರಿಸುವುದರಿಂದ ಮಹಿಳೆಯ ಆರೋಗ್ಯಕ್ಕೆ ಹಾನಿ ಮಾತ್ರವಲ್ಲದೆ, ಪೂರ್ಣಾವಧಿಗೆ ಮೊದಲೇ ಶಿಶುವಿನ ಜನನ, ಕಡಿಮೆ ಹುಟ್ಟು ತೂಕ ಮುಂತಾದ ತೊಂದರೆಗಳ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗೆಯೇ, 35 ವರ್ಷ ಮೀರಿದ ಮಹಿಳೆಯರಲ್ಲಿ ಡೌನ್ಸ್‌ ಸಿಂಡ್ರೋಮ್‌ ಎಂಬ ಬುದ್ಧಿಮಾಂದ್ಯತೆ ಇರುವ ಮಗು ಜನಿಸುವ ಸಾಧ್ಯತೆಗಳು ಜಾಸ್ತಿ ಇರುತ್ತವೆ. ಹೆರಿಗೆಯ ವೇಳೆ ಅಡಚಣೆಗಳಿಂದಾಗಿ ಸಿಸೇರಿಯನ್‌ ಆಪರೇಶನ್‌ ಬೇಕಾಗಿ ಬರುವ ಸಾಧ್ಯತೆ ವಯಸ್ಕ ಮಹಿಳೆಯರಲ್ಲಿ ಹೆಚ್ಚು. ಹಿರಿಯ ಮಹಿಳೆಯರು ಗರ್ಭಿಣಿಯಾಗಬಯಸಿದಲ್ಲಿ, ಡೌನ್ಸ್‌ ಸಿಂಡ್ರೋಮನ್ನು ಗರ್ಭದಲ್ಲೇ ಪತ್ತೆಹಚ್ಚುವ ವಿಧಾನಗಳ ಬಗ್ಗೆ ಅರಿತುಕೊಳ್ಳುವುದು ಉತ್ತಮ.

ಆರೋಗ್ಯ ಪಾಲನೆ ಗರ್ಭಿಣಿಯಾಗುವ ಮಹಿಳೆಯರಲ್ಲಿ ಮಧುಮೇಹ ಹಾಗೂ ರಕ್ತದೊತ್ತಡದಂತಹ ತೊಂದರೆಗಳಿದ್ದಲ್ಲಿ, ಅವು ಶಿಶುವಿನ ಬೆಳವಣಿಗೆಯ ಮೇಲೆ ಬಹಳಷ್ಟು ಪ್ರಭಾವವನ್ನು ಬೀರುತ್ತವೆ. ವೈದ್ಯಕೀಯ ಚಿಕಿತ್ಸೆ ಹಾಗೂ ಸಲಹೆಗಳಿಂದ ಮಗುವಿನ ಬೆಳವಣಿಗೆಯು ಉತ್ತಮವಾಗಿರುವಂತೆ ನೋಡಿಕೊಳ್ಳುವುದು ಸಾಧ್ಯ. ರಕ್ತದೊತ್ತಡ ಹಾಗೂ ಮಧುಮೇಹ (ಡಯಾಬೆಟೆಸ್‌) ಗರ್ಭಿಣಿಯರಲ್ಲಿ ಪ್ರಥಮವಾಗಿ ವ್ಯಕ್ತವಾಗುವುದೂ ಸಾಮಾನ್ಯ. ಗುಳಿಗೆ ಸೇವನೆ ಹಲವಾರು ಮಹಿಳೆಯರು ಅಪಸ್ಮಾರ, ಹೃದಯದ ತೊಂದರೆ, ಕ್ಷಯರೋಗ ಮುಂತಾದ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿರಬಹುದು.

ಈ ಔಷಧಿಗಳಿಂದಾಗಿ, ಮಗುವಿಗೆ ಜನ್ಮದತ್ತ ದೋಷಗಳು, ಕುಂಠಿತ ಬೆಳವಣಿಗೆ, ಬುದ್ಧಿಮಾಂದ್ಯತೆ, ಅಂಗವೈಕಲ್ಯ ಇತ್ಯಾದಿ ಉಂಟಾಗಬಹುದು. ಇದನ್ನು ತಡೆಗಟ್ಟಲು ಮಹಿಳೆಯು ಮಗುವಿನ ಮೇಲೆ ಪ್ರಭಾವ ಬೀರದಂತಹ ಅಥವಾ ಕನಿಷ್ಠ ದುಷ್ಪರಿಣಾಮವಿರುವಂತಹ ಔಷ ಧಿಗಳಿಗೆ, ಗರ್ಭಿಣಿಯಾಗುವ ಮುನ್ನವೇ ಬದಲಾಯಿಸಿಕೊಳ್ಳುವುದು ಸೂಕ್ತ. ಕ್ಯಾನ್ಸರಿಗೆ ಬಳಸುವ ಬಹಳಷ್ಟು ಔಷಧಿಗಳು ಮತ್ತು ವಿಕಿರಣಗಳು ಭ್ರೂಣಕ್ಕೆ ತೀವ್ರವಾದ ಹಾನಿಯನ್ನುಂಟುಮಾಡುವ ಸಾಧ್ಯತೆಗಳಿರುವುದರಿಂದ, ಅಂತಹ ಮಹಿಳೆಯರು ಗರ್ಭ ಧರಿಸುವುದನ್ನು ಮುಂದೂಡುವುದು ಸೂಕ್ತವಾಗಬಹುದು. ಮೊಡವೆಗೆ ಬಳಸುವ ರೆಟಿನೋಯಿಕ್‌ ಆಸಿಡ್‌ ಎಂಬ ಔಷಧಿಯನ್ನು ಗರ್ಭಿಣಿಯಾಗುವ ಕನಿಷ್ಠ ಮೂರು ತಿಂಗಳ ಮೊದಲೇ ನಿಲ್ಲಿಸಬೇಕು.

ಕುಟುಂಬದ ಆರೋಗ್ಯ ಚರಿತ್ರೆ ಪತಿ-ಪತ್ನಿಯರ ಮೂರು ತಲೆಮಾರುಗಳ ಸಂಬಂಧಿಕರ ಆರೋಗ್ಯದ ಬಗ್ಗೆ ಮಾಹಿತಿಯನ್ನು ವೈದ್ಯರಲ್ಲಿ ಮುಂಚಿತವಾಗಿ ಚರ್ಚಿಸುವುದು ಉತ್ತಮ. ಇದರಲ್ಲಿ ಮುಖ್ಯವಾಗಿ, ಆನುವಂಶೀಯ ಕಾಯಿಲೆಗಳಾದ ಥಲಸೀಮಿಯಾ, ಹೆಮೋಫಿಲಿಯಾ, ಬುದ್ಧಿಮಾಂದ್ಯತೆ, ನರ ಹಾಗೂ ಸ್ನಾಯುಗಳ ತೊಂದರೆ, ಅಂಗವಿಕಲತೆ ಮುಂತಾದವುಗಳ ಬಗ್ಗೆ ವಿಶೇಷ ಗಮನ ಹರಿಸಬೇಕು.

ಏಕೆಂದರೆ, ಇವುಗಳಲ್ಲಿ ಕೆಲವು ರೋಗಗಳು ಮಗುವಿನಲ್ಲಿ ವಂಶಪಾರಂಪರ್ಯದಿಂದ ಬರುವ ಸಾಧ್ಯತೆಗಳಿದ್ದು, ಅವುಗಳನ್ನು ತಡೆಗಟ್ಟುವ ಅಥವಾ ಪ್ರಾರಂಭಿಕ ಹಂತದಲ್ಲೇ ಪತ್ತೆಹಚ್ಚುವ ಸೌಲಭ್ಯಗಳಿರುತ್ತವೆ. ಕೆಲವೊಂದು ಬಗೆಯ ಆನುವಂಶಿಕ ಕಾಯಿಲೆಗಳು ರಕ್ತ ಸಂಬಂಧಿಕರು ಮದುವೆಯಾದಲ್ಲಿ ಕಂಡುಬರುವ ಸಾಧ್ಯತೆಗಳು ಹೆಚ್ಚು. ಮಾದಕ ದ್ರವ್ಯ ಸೇವನೆ, ಧೂಮಪಾನ ಎಲ್ಲರಿಗೂ, ಅದರಲ್ಲೂ ಗರ್ಭಿಣಿಯರಿಗೆ ಮಾದಕ ದ್ರವ್ಯ ವಜ್ಯì. ಆಲ್ಕೋಹಾಲ್‌ ಹಾಗೂ ಧೂಮಪಾನಗಳು (ಗಂಡಂದಿರ ಧೂಮಪಾನ ಕೂಡ ಸೇರಿದಂತೆ) ಶಿಶುವಿನ ಮೇಲೆ ಆಘಾತಕಾರಿ ಪರಿಣಾಮಗಳನ್ನು ಬೀರಬಲ್ಲವು. ಇವುಗಳಿಂದ ಭ್ರೂಣದ ಕುಂಠಿತ ಬೆಳವಣಿಗೆ, ವಿಕೃತ ಅಂಗಗಳ ಬೆಳವಣಿಗೆ ಹಾಗೂ ನರವ್ಯೂಹಗಳ ತೊಂದರೆ ಕಾಣಬರಬಹುದು. ಇಂತಹ ಮಕ್ಕಳು ಆಟಪಾಠಗಳಲ್ಲೂ ಹಿಂದುಳಿಯುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ಅಪಾಯಕಾರಿ ಉದ್ಯೋಗಗಳು ಉದ್ಯೋಗದ ಸ್ಥಳದಲ್ಲಿ ಹಾನಿಕಾರಕ ವಸ್ತುಗಳನ್ನು ಉಪಯೋಗಿಸುವುದು ಕೂಡ ಗರ್ಭದ ಮೇಲೆ ಪರಿಣಾಮ ಬೀರಬಲ್ಲದು. ಇವುಗಳಲ್ಲಿ ಸೀಸ, ಬಣ್ಣ, ಕೀಟನಾಶಕಗಳು, ಕೆಲವು ವಿಶಿಷ್ಟ ದ್ರವ್ಯಗಳು... ಮುಂತಾದವು ಒಳಗೊಂಡಿವೆ. ಇಂತಹ ದಂಪತಿಗಳು ಉದ್ಯೋಗ ಬದಲಾವಣೆಯ ಕುರಿತು ಚಿಂತಿಸಬಹುದು. ಆಹಾರ ಮತ್ತು ತೂಕ ಉತ್ತಮ ಗುಣಮಟ್ಟದ ಎಲ್ಲಾ ಪೌಷ್ಟಿಕಾಂಶಗಳನ್ನೊಳಗೊಂಡ ಆಹಾರ ಸೇವಿಸುವುದು ಗರ್ಭಿಣಿ ಹಾಗೂ ತಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕರಿಸುತ್ತದೆ. ಬೊಜ್ಜಿನಿಂದ ಗರ್ಭಿಣಿಯಲ್ಲಿ ಡಯಾಬೆಟೆಸ್‌ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿದ್ದು, ಮಗುವಿನಲ್ಲೂ ಆ ನ್ಯೂನತೆಗಳು ಕಾಡಬಹುದು. ಅಲ್ಲದೆ, ಹೆರಿಗೆಯ ಸಮಯದಲ್ಲಿ ತೊಂದರೆಯಾಗಬಹುದು.

ಆಹಾರದಲ್ಲಿ ಫೋಲೇಟ್‌ ಅಂಶವಿರುವುದು ಅತ್ಯಗತ್ಯ. ಫೋಲೇಟ್‌ಯುಕ್ತ ಹಿಟ್ಟು ಅಥವಾ ಗುಳಿಗೆಗಳ ಸೇವನೆಯಿಂದ, ಮೆದುಳು ಹಾಗೂ ಬೆನ್ನುಹುರಿಯ ನ್ಯೂನತೆಯಂತಹ ಮಾರಕ ಕಾಯಿಲೆಯನ್ನು ಶೇಕಡಾ 75ರಷ್ಟು ಕಡಿಮೆಗೊಳಿಸುವುದು ಸಾಧ್ಯ ಎಂದು ಅಧ್ಯಯನಗಳಿಂದ ಸಾಬೀತಾಗಿದೆ. ತಾನು ಯಾವಾಗ ಗರ್ಭಿಣಿಯಾಗಬಹುದೆಂದು ನಿಖರವಾಗಿ ಹೇಳುವುದು ಕಷ್ಟವಾದ್ದರಿಂದ, ಕುಟುಂಬ ನಿಯಂತ್ರಣ ವಿಧಾನಗಳನ್ನು ಅನುಸರಿಸದ ಎಲ್ಲಾ ವಿವಾಹಿತ ಮಹಿಳೆಯರು ಫೋಲೇಟ್‌ ಮಾತ್ರೆಗಳನ್ನು ತೆಗದುಕೊಳ್ಳಬಹುದು. ಮೆದುಳು ಹಾಗೂ ಬೆನ್ನುಹುರಿಗಳು ಗರ್ಭ ಧರಿಸಿದ ತತ್‌ಕ್ಷಣವೇ ರಚನೆಯಾಗುತ್ತವೆ (ಗರ್ಭದ ಮೊದಲ ತಿಂಗಳಲ್ಲೇ).

ಲಸಿಕೆಗಳು ಬಾಲ್ಯದಲ್ಲೇ ಎಲ್ಲರೂ ಲಸಿಕೆ ಹಾಗೂ ಚುಚ್ಚುಮದ್ದುಗಳನ್ನು ಪಡೆದು, ಸಾಮಾನ್ಯವಾಗಿ ಕಂಡುಬರುವ ಸೋಂಕುಗಳನ್ನು ತಡೆಯುವುದು ಅಗತ್ಯ. ರುಬೆಲ್ಲಾ ಭ್ರೂಣದ ಮೇಲೆ ಮಾರಕ ಪ್ರಭಾವ ಬೀರಿ, ಮಗುವಿನಲ್ಲಿ ಕಣ್ಣು, ಹೃದಯ, ಶ್ರವಣ ದೋಷಗಳನ್ನು ಉಂಟುಮಾಡಬಹುದು. ಅಲ್ಲದೆ ಗರ್ಭಿಣಿಯರಲ್ಲಿ ಹೆಪಾಟೈಟಿಸ್‌ ಹಾಗೂ ದಢಾರ ಬರದಂತೆ ಲಸಿಕೆಯಿಂದ ತಡೆಗಟ್ಟುವುದು ಅವಶ್ಯಕ. ಮಾನಸಿಕ ಆರೋಗ್ಯ ಮೇಲೆ ಹೇಳಿದ ಅಂಶಗಳಲ್ಲದೇ, ದಂಪತಿಗಳ ಮಾನಸಿಕ ತಯಾರಿ ಕೂಡ ಗರ್ಭಿಣಿ, ಬಾಣಂತಿ ಹಾಗೂ ನವಜಾತ ಶಿಶುವಿನ ಆರೈಕೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಕೆಳಗಿನ ಯಾವುದೇ ಪ್ರಶ್ನೆಗೆ ನಿಮ್ಮ ಉತ್ತರ ಹೌದು ಎಂದಾದಲ್ಲಿ, ಗರ್ಭಿಣಿಯಾಗುವ ಮುನ್ನ ನಿಮ್ಮ ವೈದ್ಯರನ್ನು ಭೇಟ ಮಾಡಿ:

  • ನೀವು ಪ್ರತಿನಿತ್ಯವೂ ಯಾವುದಾದರೂ ಮಾತ್ರೆ ಅಥವಾ ಔಷಧಿ ತೆಗೆದುಕೊಳ್ಳುತ್ತೀರಾ?
  • ನೀವು ಮಾದಕ ದ್ರವ್ಯ ಸೇವನೆ ಮಾಡುತ್ತೀರಾ?
  • ನೀವು ಧೂಮಪಾನ ಮಾಡುತ್ತೀರಾ?
  • ನಿಮ್ಮ ತೂಕ ಬಹಳ ಕಡಿಮೆ/ಹೆಚ್ಚು ಇದೆಯೇ?
  • ನಿಮಗೆ ಅಪಸ್ಮಾರ, ಹೃದಯ ತೊಂದರೆ, ಡಯಾಬೆಟೆಸ್‌, ಅಧಿಕ ರಕ್ತದೊತ್ತಡ ಮುಂತಾದ ಕಾಯಿಲೆಗಳು ಇವೆಯೇ?
  • ನಿಮ್ಮ (ಮಹಿಳೆಯ) ವಯಸ್ಸು 35ನ್ನು ಮೀರಿದೆಯೇ?
  • ನಿಮ್ಮ ಉದ್ಯೋಗದ ಸ್ಥಳದಲ್ಲಿ ಯಾವುದೇ ಹಾನಿಕಾರಕ ರಾಸಾಯನಿಕ ಪದಾರ್ಥಗಳ ಉಪಯೋಗ ಮಾಡಲಾಗುತ್ತಿದೆಯೇ?

ಮೂಲ : ಅರೋಗ್ಯ ವಾಣಿ

2.94285714286
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top