অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಪೆರಿಯೋಡಾಂಟಲ್‌ ಆರೋಗ್ಯ

ಪೆರಿಯೋಡಾಂಟಲ್‌ ಆರೋಗ್ಯ

ಮಹಿಳೆಯರ ಬಗೆಗಿನ ಅನೇಕ ಪ್ರಕಟನೆಗಳು ಆಕೆಯ ಸೌಂದರ್ಯಕ್ಕೆ ಹಾಗೂ ಆಕೆಯ ಸುಂದರ ಭಾವನೆಗಳಿಗೆ ಹೆಚ್ಚು ಮಹತ್ವ ಕೊಡುತ್ತಿವೆ. ಹಾಗಾಗಿ, ಮಹಿಳೆಯು ತನ್ನ ತಾರುಣ್ಯದ ಆದಿಯಿಂದಲೇ ಈ ಗುಣಗಳನ್ನು ಬೆಳೆಸಿಕೊಳ್ಳಲು ಬಯಸುತ್ತಾಳೆ. ಇದಕ್ಕೆ ಮುಖ್ಯ ಸಾಕ್ಷಿಯೇ ಇತರರು ಅವಳ ಮುಖದಲ್ಲಿ ಕಾಣುವ ನಗು. ಈ ನಗುವನ್ನು ಶಾಶ್ವತವಾಗಿ ಕಾಪಾಡಿ ಕೊಳ್ಳಲು, ಮಹಿಳೆಯು ಜೀವನ ಪರ್ಯಂತ ತನ್ನ ಬಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾದುದು ಬಹಳ ಅಗತ್ಯ. ಯಾಕೆಂದರೆ, ಆಕೆಯ ದೇಹದಲ್ಲಾಗುವ ಹಾರ್ಮೋನಿನ ವ್ಯತ್ಯಾಸಗಳು ಆಕೆಯ ವಸಡಿನ ಅಂಗಾಂಶಗಳೂ ಸೇರಿದಂತೆ ದೇಹದ ಅನೇಕ ಭಾಗಗಳ ಮೇಲೆ ಪರಿಣಾಮ ಬೀರುತ್ತವೆ.

ಪರಿದಂತಶಾಸ್ತ್ರ ಅಥವಾ ಪೆರಿಯೋಡಾಂಟಾಲಜಿಯ ಒಂದು ಅಧ್ಯಯನ ವರದಿಯ ಪ್ರಕಾರ, 30 ರಿಂದ 54ರ ನಡುವಿನ ವಯೋಮಾನದೊಳಗಿನ 23% ನಷ್ಟು ಮಹಿಳೆಯರಿಗೆ ಪರಿದಂತದ ಅಂದರೆ ಹಲ್ಲಿನ ಸುತ್ತಲಿನ ಅಂಗಾಂಶಗಳ ಉರಿಯೂತದ ಸಮಸ್ಯೆಯಿದೆ. ಆರಂಭದಲ್ಲಿ ಹಲ್ಲಿನ ಸುತ್ತಲಿನ ಅಂಗಾಂಶಗಳಲ್ಲಿ ಉರಿಯೂತದ ರೂಪದಲ್ಲಿ ಕಾಣಿಸಿಕೊಂಡು, ಆ ಮೇಲೆ ಹಲ್ಲಿನ ಮೂಳೆಗೂ ಹರಡುವ ಇದು, ಒಂದು ರೀತಿಯ ಸೋಂಕು ಕಾಯಿಲೆಯಾಗಿದೆ. ಈ ಕಾಯಿಲೆಯಲ್ಲಿ ಹಲ್ಲು ಕ್ರಮೇಣ ದುರ್ಬಲವಾಗಿ, ಹಲ್ಲನ್ನು ಕೀಳುವ ಮಟ್ಟಕ್ಕೆ ತಲುಪುತ್ತದೆ. ಪೆರಿಯೋಡಾಂಟೈಟಿಸ್‌ ಅಥವಾ ಪರಿದಂತದ ಉರಿಯೂತ ಎಂಬುದು ಒಂದು ರೀತಿಯ ಮೌನ ಕಾಯಿಲೆಯಾಗಿದೆ.

ಇದು ಮುಂದುವರಿದ ಹಂತವನ್ನು ತಲುಪುವ ವರೆಗೂ ಮಹಿಳೆಗೆ ಈ ಕಾಯಿಲೆ ತನಗೆ ಇದೆ ಎಂಬ ಅರಿವೇ ಆಗುವುದಿಲ್ಲ. ಆದರೆ, ನೀವು ನಿಮ್ಮ ಜೀವನದ ಎಲ್ಲ ಹಂತಗಳಲ್ಲೂ ಬಾಯಿಯ ಆರೋಗ್ಯದ ಬಗ್ಗೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳುವ ಮೂಲಕ ಈ ಕಾಯಿಲೆಯಿಂದ ಸುರಕ್ಷಿತವಾಗಿರಬಹುದು ಎಂಬುದು ನೆಮ್ಮದಿಯ ವಿಚಾರ. ದಂತತಜ್ಞರಿಂದ ನಿಯಮಿತವಾಗಿ ಹಲ್ಲುಗಳನ್ನು ಸ್ವತ್ಛಗೊಳಿಸಿಕೊಳ್ಳುತ್ತಿ ರುವುದು, ಪರಿದಂತ ತಜ್ಞರಿಂದ ಹಲ್ಲುಗಳಿಗೆ ಸೂಕ್ತ ಆರೈಕೆ ಪಡೆಯುವುದು ಹಾಗೂ ತಾವೇ ಸ್ವತಃ ಪ್ರತಿದಿನ ಹಲ್ಲುಗಳ ಸ್ವತ್ಛತೆಯ ಬಗೆಗೆ ನಿಗಾ ವಹಿಸುವ ಮೂಲಕ ಹಲ್ಲುಗಳನ್ನು ಜೀವನದುದ್ದಕ್ಕೂ ಆರೋಗ್ಯಕರವಾಗಿ ಇರಿಸಬಹುದು. ಪ್ರೌಢಾವಸ್ಥೆ ಪ್ರೌಢಾವಸ್ಥೆ ಎಂಬುದು ವ್ಯಕ್ತಿಯ ಲೈಂಗಿಕ ವಿಕಸನದ ಆರಂಭಿಕ ಹಂತ.

ಈ ಹಂತದಲ್ಲಿ ವ್ಯಕ್ತಿಯ ಪ್ರಜನನ ವ್ಯವಸ್ಥೆಯ ಅಂಗಾಂಶಗಳಲ್ಲಿ ಬದಲಾವಣೆಗಳಾಗುತ್ತವೆ. ಸ್ಟೀರಾಯ್ಡ ಹಾರ್ಮೋನಿನ ಮಟ್ಟದಲ್ಲಿ ಏರಿಕೆಯಾಗುತ್ತದೆ; ಆ ಮೂಲಕ ವಸಡುಗಳಿಗೆ ಪರಿಚಲನೆಯಾಗುವ ರಕ್ತದ ಪ್ರಮಾಣವೂ ಹೆಚ್ಚಾಗುತ್ತದೆ. ಈ ವ್ಯತ್ಯಾಸಗಳಿಂದಾಗಿ ವಸಡಿನ ಸಂವೇದನಾಶೀಲತೆಯೂ ಸಹ ಹೆಚ್ಚುತ್ತದೆ. ಹಾಗಾಗಿ, ಕೊಳೆ ಹಾಗೂ ಆಹಾರದ ತುಣುಕುಗಳಿಂದಾಗುವ ಕಿರಿಕಿರಿಯೂ ಹೆಚ್ಚುತ್ತದೆ; ಒಸಡು ಕೆಂಪಗಾಗಿ ಊದಿಕೊಳ್ಳುತ್ತದೆ. ಆದರೆ ತಾರುಣ್ಯಾವಸ್ಥೆಯ ಹಂತವು ಮುಂದುವರಿದ ಹಾಗೆಲ್ಲಾ, ಈ ಲಕ್ಷಣಗಳು ಕಡಿಮೆಯಾಗುತ್ತವೆ. ವಸಡಿನ ಉರಿಯೂತ ಹಾಗೂ ಹಿಗ್ಗುವಿಕೆಯ ಸಮಸ್ಯೆಯು ಮಹಿಳೆ ಹಾಗೂ ಪುರುಷ ಇಬ್ಬರಲ್ಲೂ ಸಮಾನವಾಗಿ ಕಾಣಿಸಿಕೊಳ್ಳುತ್ತದೆಯಾದರೂ, ಈ ಸಮಸ್ಯೆ ಮಹಿಳೆಯರಲ್ಲಿ ಬಹಳ ಬೇಗನೆ ಆರಂಭವಾಗುತ್ತದೆ. ಪ್ರಾಜೆಸ್ಟರಾನ್‌ ಹಾಗೂ ಈಸ್ಟ್ರೋಜನ್‌ ಮಟ್ಟದಲ್ಲಿಯ ವ್ಯತ್ಯಾಸ ಹಾಗೂ ವಸಡಿನ ಉರಿಯೂತಗಳು ತಾತ್ಕಾಲಿಕವಾಗಿದ್ದು, ಪ್ರೌಢಾವಸ್ಥೆಯ ಹಂತವು ಮುಂದುವರಿದಂತೆಲ್ಲಾ ಈ ಸಮಸ್ಯೆಗಳು ಸಹಜ ಹಂತಕ್ಕೆ ಬರುತ್ತವೆ. ವಸಡುಗಳು ಆರೋಗ್ಯವಾಗಿದ್ದು, ಒಟ್ಟಾರೆಯಾಗಿ ಉತ್ತಮ ಆರೋಗ್ಯವನ್ನು ಹೊಂದಿರುವ ಮಹಿಳೆಯರಲ್ಲಿ,

ಪ್ರೌಢಾವಸ್ಥೆ ಅಥವಾ ಮಾಸಿಕಸ್ರಾವದ ಅವಧಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪರಿದಂತದ ವ್ಯತ್ಯಾಸಗಳು ಕಾಣಿಸಿಕೊಳ್ಳಲಾರವು. ಆದರೆ, ಆರಂಭದಿಂದಲೇ ಹಲ್ಲುಗಳಲ್ಲಿ ಕೊಳೆ ಕಟ್ಟಿಕೊಂಡು, ವಸಡಿನ ಉರಿಯೂತದ ಸಮಸ್ಯೆ ಇದ್ದರೆ, ಅಂತಹವರಿಗೆ ಪ್ರೌಢಾವಸ್ಥೆ ಅಥವಾ ಮಾಸಿಕಸ್ರಾವದ ಹಂತದಲ್ಲಿ ಒಸಡಿನ ಉರಿಯೂತದ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆಗಳು ಬಹಳ ಹೆಚ್ಚು. ಹಾಗಾಗಿ, ರೋಗ ಲಕ್ಷಣಗಳು ಕಂಡು ಬಂದಾಗ, ಅವನ್ನು ಅಲಕ್ಷ್ಯ ಮಾಡದೆ, ಸ್ವತಃ ಮನೆಯಲ್ಲಿಯೇ ಹಲ್ಲುಗಳ ಸ್ವತ್ಛತೆಯ ಬಗ್ಗೆ ಶೀಘ್ರ ಉಪಾಯಗಳನ್ನು ಕೈಗೊಳ್ಳುವ ಮೂಲಕ, ಅಂದರೆ ಬ್ರಷಿಂಗ್‌, ಫ್ಲಾಸಿಂಗ್‌ ಮಾಡಿಕೊಳ್ಳುವ, ನಿಯಮಿತವಾಗಿ ದಂತವೈದ್ಯರನ್ನು ಭೇಟಿಯಾಗುವ ಮೂಲಕ ಸಮಸ್ಯೆಯ ವಿರುದ್ಧ ಸುರಕ್ಷಿತವಾಗಿರಬಹುದು.

ಕೆಲವು ಸಂದರ್ಭಗಳಲ್ಲಿ ದಂತವೈದ್ಯರು ತೊಂದರೆಯು ಹೆಚ್ಚುವುದನ್ನು, ಅಂದರೆ ಹಲ್ಲಿನ ಸಮಸ್ಯೆಯು ಅಂಗಾಂಶಗಳಿಗೆ ಹಾಗೂ ಹಲ್ಲಿನ ಸುತ್ತಲಿನ ಮೂಳೆಗಳಿಗೆ ಹರಡುವುದನ್ನು ತಡೆಯಲು ಪೆರಿಯೋಡಾಂಟಲ್‌ ಅಥವಾ ಪರಿದಂತ ಚಿಕಿತ್ಸೆಯನ್ನು ಪಡೆಯುವಂತೆ ಸೂಚಿಸಬಹುದು. ಮಾಸಿಕ ಸ್ರಾವ ಮಾಸಿಕ ಸ್ರಾವದಿಂದಾಗಿ ವಸಡುಗಳ ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ. ಆದರೆ ಈ ಸಂದರ್ಭದಲ್ಲಿ ಸಣ್ಣ ಪ್ರಮಾಣದಲ್ಲಿ ವಸಡುಗಳಲ್ಲಿ ಬ್ಯಾಕ್ಟೀರಿಯಾ ಸೋಂಕು ಕಾಣಿಸಿಕೊಳ್ಳುವುದಿದೆ. ಇದರಿಂದ ಹೆಚ್ಚು ತೊಂದರೆಯಾಗದಿದ್ದರೆ, ಇದನ್ನು ಕಡೆಗಣಿಸಬಹುದು. ಮಹಿಳೆಯ ದೇಹದಲ್ಲಿ ಪ್ರತೀ ತಿಂಗಳೂ ಈಸ್ಟ್ರೋಜನ್‌, ಟೆಸ್ಟಾಸ್ಟಿರಾನ್‌ ಹಾಗೂ ಪ್ರಾಜೆಸ್ಟರಾನ್‌ ಹಾರ್ಮೋನುಗಳು ಮಟ್ಟದಲ್ಲಿ ವ್ಯತ್ಯಾಸಗೊಳ್ಳುತ್ತಿರುತ್ತವೆ.

ಆದರೆ, ಈ ವ್ಯತ್ಯಾಸವು ಮಹಿಳೆಯರ ವಸಡು ಹಾಗೂ ಬಾಯಿಯ ಮೇಲೆ ಗಮನಾರ್ಹ ಪರಿಣಾಮವನ್ನು ಉಂಟು ಮಾಡದು. ಆದರೆ ಕೆಲವರಲ್ಲಿ, ಈ ಸಂದರ್ಭದಲ್ಲಿ ಮಾಸಿಕ ಸ್ರಾವದ ವಸಡಿನ ಉರಿಯೂತ ಕಂಡುಬರಬಹುದು. ಈ ಸ್ಥಿತಿಯಲ್ಲಿ ಆಕೆಯ ವಸಡು, ಬಾಯಿಯ ಅಂಗಾಂಶಗಳು ಕೆಂಪಗಾಗಿ, ಊದಿಕೊಂಡು ರಕ್ತಸ್ರಾವವಾಗಬಹುದು, ವಸಡು ಬಾತುಕೊಳ್ಳಬಹುದು ಮಾತ್ರವಲ್ಲ ಕೆನ್ನೆಯ ಒಳಭಾಗದಲ್ಲಿ ಹುಣ್ಣುಗಳು ಕಂಡುಬರಬಹುದು. ಕೆಲವರಲ್ಲಿ ಅಂಡ ಬಿಡುಗಡೆಯಾಗುವ ಸಂದರ್ಭದಲ್ಲಿಯೂ ವಸಡಿನ ಉರಿಯೂತ ಕಾಣಿಸಿಕೊಳ್ಳುವುದಿದೆ. ಈಗಾಗಲೇ ಈ ಸಮಸ್ಯೆ ಇದ್ದರೆ, ಈ ಸಂದರ್ಭದಲ್ಲಿ ತೊಂದರೆಯು ಹೆಚ್ಚಾಗಬಹುದು; ಇಲ್ಲದಿದ್ದರೆ ಕ್ರಮೇಣ ಕಡಿಮೆಯಾಗುವ ಸಾಧ್ಯತೆ ಇದೆ. ಮಾಸಿಕ ಸ್ರಾವದ ವಸಡಿನ ಉರಿಯೂತವು ಸಾಮಾನ್ಯವಾಗಿ ಮಹಿಳೆಯ ಋತುಸ್ರಾವವು ಆರಂಭವಾಗುವುದಕ್ಕೆ ಮೊದಲು ಕಾಣಿಸಿಕೊಂಡು, ಋತುಸ್ರಾವವು ಆರಂಭವಾದ ಅನಂತರ ಮರೆಯಾಗುತ್ತದೆ.

ಅಂದರೆ ಹಾರ್ಮೋನಿನ ಪ್ರಮಾಣ ಕಡಿಮೆಯಾದಂತೆ, ಸಮಸ್ಯೆಯೂ ಕಡಿಮೆಯಾಗುತ್ತದೆ. ಪ್ರಾಜೆಸ್ಟೆರಾನ್‌ ರಕ್ತಕಣಗಳನ್ನು ತೆಳುಗೊಳಿಸುವ ಕಾರಣದಿಂದಾಗಿ, ವಸಡಿನ ಬಂಧಕ ಪ್ರೊಟೀನ್‌ ಆಗಿರುವ ಕೊಲಾಜನ್‌ನ ಪುನರ್‌ನಿರ್ಮಾಣಕ್ಕೆ ತಡೆಯಾಗಿ ಉರಿಯೂತ ಉಂಟಾಗುತ್ತದೆ. ಮಾಸಿಕ ಸ್ರಾವಕ್ಕೆ ಮೊದಲು ಆಗುವ ಹಾರ್ಮೋನ್‌ ವ್ಯತ್ಯಾಸಗಳಿಂದಾಗಿ ಬಾಯಿಯಲ್ಲಿ ಲಾಲಾರಸದ ಪ್ರೋಟೀನ್‌ ಅಂಶವು ಹೆಚ್ಚಾಗಿ, ಉಸಿರಾಟದ ದುರ್ಗಂಧವು ಈ ಸಂದರ್ಭದಲ್ಲಿ ಹೆಚ್ಚುತ್ತದೆ. ಚೆನ್ನಾಗಿ ಬ್ರಷ್‌ ಮಾಡಿ, ಫ್ಲಾಸಿಂಗ್‌ ಮಾಡಿ, ನಾಲಗೆಯನ್ನು ಸ್ವತ್ಛಗೊಳಿಸಿ, ಊಟದ ಅನಂತರ ಹಾಗೂ ಐದು ಗಂಟೆಗಳಿಗೊಮ್ಮೆ ಆಲ್ಕೋಹಾಲ್‌ ರಹಿತವಾದ ಬಾಯಿ ಮಾರ್ಜಕದಿಂದ ಬಾಯಿಯನ್ನು ಮುಕ್ಕಳಿಸಿ ಶುಚಿಗೊಳಿಸಿಕೊಳ್ಳುವುದರ ಮೂಲಕ ಬಾಯಿಯ ವಾಸನೆಯ ಸಮಸ್ಯೆಯನ್ನು ನಿಭಾಯಿಸಬಹುದು. ಗರ್ಭಧಾರಣೆ ಒಂಬತ್ತು ತಿಂಗಳುಗಳ ಕಾಲದ ಗರ್ಭಧಾರಣಾ ಅವಧಿಯಲ್ಲಿ ಪ್ಲಾಸ್ಮಾ ಹಾರ್ಮೋನಿನ ಮಟ್ಟದಲ್ಲಾಗುವ ಏರಿಕೆಯು ವಸಡಿನ ಉರಿಯೂತದ ಮೂಲ ಕಾರಣ. ಮಾತ್ರವಲ್ಲ, ವಿವಿಧ ರೀತಿಯ ಲೈಂಗಿಕ ಹಾರ್ಮೋನುಗಳ ಕಾರಣದಿಂದಲೂ ಬಾಯಿಯಲ್ಲಿ ಅಸಹಜತೆಗಳು ಕಾಣಿಸಿಕೊಳ್ಳುತ್ತವೆ.

ಈ ಹಾರ್ಮೋನುಗಳ ಹೆಚ್ಚುವರಿ ಉತ್ಪಾದನೆಯಿಂದಾಗಿ, ವಸಡಿನ ಉರಿಯೂತವು ತೀವ್ರವಾಗುತ್ತದೆ. ಗರ್ಭಧಾರಣೆಯ ಕಾರಣದಿಂದಲೆ ವಸಡಿನ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ ಎಂದು ಹೇಳುವಂತಿಲ್ಲ. ಆದರೆ, ಈ ಹಂತದಲ್ಲಿ ಕಾಣಿಸಿಕೊಳ್ಳುವ ವಸಡಿನ ಉರಿಯೂತದಲ್ಲಿ, ಬ್ಯಾಕ್ಟೀರಿಯಾ ಕೊಳೆಗಳು ಹೆಚ್ಚಾಗಿರುವುದು ಕಂಡುಬರುತ್ತದೆ. ಗರ್ಭಧಾರಣಾ ಹಂತದಲ್ಲಿ ಕಂಡುಬರುವ ಒಸಡಿನ ಉರಿಯೂತದಲ್ಲಿ, ವಸಡಿನ ಅಂಗಾಂಶಗಳಲ್ಲಿ ಊತ, ರಕ್ತಸ್ರಾವ, ಕೆಂಪಗಾಗಿರುವುದು ಅಥವಾ ಮುಟ್ಟಿದಾಗ ನೋವಾಗುವುದು...ಇತ್ಯಾದಿ ಲಕ್ಷಣಗಳಿರುತ್ತವೆ. ಬ್ಯಾಕ್ಟೀರಿಯಾಗಳು ಇಲ್ಲದೇ ಹೋದರೆ, ಈ ಹಂತದಲ್ಲಿ, ವಸಡಿನಲ್ಲಿ ಉರಿಯೂತ ಆಗದು. ಗರ್ಭಧಾರಣೆಯ ಎರಡು ಹಾಗೂ ಮೂರನೆಯ ತಿಂಗಳಲ್ಲಿ ಕಂಡುಬರುವ ಈ ರೀತಿಯ ಉರಿಯೂತವು, ಎಂಟನೆಯ ತಿಂಗಳಲ್ಲಿ ತೀವ್ರವಾಗಿ, ಒಂಬತ್ತನೆಯ ತಿಂಗಳಲ್ಲಿ ಹಾರ್ಮೋನ್‌ ಮಟ್ಟವು ಇಳಿದಾಗ ಕಡಿಮೆಯಾಗುತ್ತದೆ. ಹೆರಿಗೆಯ ಅನಂತರದ ಒಂದು ವರ್ಷದೊಳಗೆ , ವಸಡಿನ ಅಂಗಾಂಶಗಳು ಮತ್ತೆ ತಮ್ಮ ಮೊದಲಿನ ಸ್ಥಿತಿಗೆ ಮರಳುತ್ತವೆ. ಗರ್ಭಧಾರಣಾ ಹಂತದಲ್ಲಿ ಕೆಲವು ಮಹಿಳೆಯರ ವಸಡಿನ ಅಂಗಾಂಶಗಳು ನೋವಿರದ ಹೆಚ್ಚುವರಿ ಗಡ್ಡೆಗಳ ರೂಪದಲ್ಲಿ ಬೆಳೆಯುತ್ತವೆ. ಆ ಭಾಗವು ಕೆಂಬಣ್ಣದಿಂದ ನೇರಳೆ ಕೆಂಪು ಅಥವಾ ನೀಲಿ ಬಣ್ಣಕ್ಕೆ ತಿರುಗಬಹುದು, ಇವುಗಳನ್ನು ಕೆಲವು ಸಲ ಗರ್ಭಧಾರಣಾ ಸಮಯದ ಗಡ್ಡೆಗಳು ಎಂದು ಕರೆಯುತ್ತಾರೆ.

ಈ ರೀತಿಯ ಗಡ್ಡೆಗಳು ಹೆರಿಗೆಯ ಅನಂತರವೂ ಮತ್ತೆ ಮತ್ತೆ ಕಾಣಿಸಿಕೊಂಡರೆ, ಪರಿದಂತತಜ್ಞರ ಮೂಲಕ ಅವನ್ನು ತೆಗೆದು ಹಾಕಬೇಕಾಗುತ್ತದೆ. ಹೆಚ್ಚುತ್ತಿರುವ ಅಕಾಲಿಕ ಹೆರಿಗೆ ಹಾಗೂ ಕಡಿಮೆ ತೂಕವಿರುವ ಮಗುವಿನ ಹೆರಿಗೆಯ ಪ್ರಕರಣಗಳಿಗೆ ಅನೇಕ ಅಂಶಗಳು ಕಾರಣಗಳಾಗಿವೆ. ಇದಕ್ಕೆ ಅಪಾಯ ಪೂರಕ ಅಂಶಗಳಲ್ಲಿ ಜನಸಂಖ್ಯೆಯ ಹೆಚ್ಚಳ ಹಾಗೂ ದೇಶದ ಔದ್ಯೋಗೀಕರಣ ಸೇರಿದಂತೆ ವಿವಿಧ ಅಂಶಗಳು ಸೇರಿವೆ. ಇವುಗಳಲ್ಲಿ ಗುರುತಿಸಬಹುದಾದಂತಹ ಅಂಶಗಳು ಎಂದರೆ, ಕಡಿಮೆ ಅಥವಾ ಹೆಚ್ಚು ವಯಸ್ಸಿನಲ್ಲಿ ಗರ್ಭಧಾರಣೆ, ಜನಾಂಗೀಯ ಗುಣಧರ್ಮಗಳು, ಸಾಮಾಜಿಕ ಹಾಗೂ ಆರ್ಥಿಕ ಮಟ್ಟದ ಕುಸಿತ, ಪ್ರಸವ ಪೂರ್ವ ಆರೈಕೆಯ ಕೊರತೆ, ಮಾದಕವಸ್ತುಗಳು, ಮದ್ಯಪಾನ ಅಥವಾ ತಂಬಾಕು ಸೇವನೆ, ಅಧಿಕ ರಕ್ತದೊತ್ತಡ, ಪ್ರಜನನಾಂಗ ವ್ಯವಸ್ಥೆಯ ಸೋಂಕು, ಡಯಾಬಿಟಿಸ್‌ ಮೆಲ್ಲಿಟಸ್‌ (ಮಧುಮೇಹ), ಅವಳಿ ಗರ್ಭಧಾರಣೆ, ನೈಸರ್ಗಿಕ, ಆನುವಂಶಿಕ, ಪ್ರಸವದ, ಗರ್ಭಿಣಿಯ ಹಾಗೂ ಭ್ರೂಣದ ಅಂಶಗಳು, ಸೋಂಕು ಹಾಗೂ ವಿಷಕಾರಿ ಅಂಶಗಳಿಗೆ ಒಡ್ಡಿಕೊಳ್ಳುವುದು... ಇತ್ಯಾದಿ. ಪೆರಿಯೋಡಾಂಟಲ್‌ ಸೋಂಕನ್ನೂ ಸೇರಿಸಿ, ಯಾವುದೇ ರೀತಿಯ ಸೋಂಕೂ ಸಹ ಬೆಳೆಯುತ್ತಿರುವ ಭ್ರೂಣಕ್ಕೆ ಮಾರಕವಾಗಬಹುದು. ಪೆರಿಯೋಡಾಂಟಲ್‌ ಕಾಯಿಲೆ ಅಥವಾ ಪರಿದಂತ ಕಾಯಿಲೆ ಇರುವ ಇರುವ ತಾಯಂದಿರಿಗೆ ಅಕಾಲಿಕ ಹೆರಿಗೆ ಯಾಗುವ ಅಥವಾ ತೂಕ ಕಡಿಮೆ ಇರುವ ಮಗು ಹುಟ್ಟುವ ಸಾಧ್ಯತೆಗಳು ಏಳುಪಟ್ಟು ಹೆಚ್ಚು.

ಹಾಗಿದ್ದರೂ, ಗರ್ಭಿಣಿ ಮಹಿಳೆಯು ನಿಯಮಿತವಾಗಿ ದಂತ ತಜ್ಞರನ್ನು ಭೇಟಿಯಾಗುವುದು ಹಾಗೂ ಮನೆಯಲ್ಲೆ ಪ್ರತಿದಿನ ಬಾಯಿಯ ಆರೋಗ್ಯದ ಬಗ್ಗೆ ನಿಗಾ ವಹಿಸುವುದು ಅವರ ಪ್ರಸವ ಪೂರ್ವ ಆರೈಕೆಯ ಒಂದು ಮುಖ್ಯ ಭಾಗವಾಗಬೇಕು. ಪರಿದಂತ ಚಿಕಿತ್ಸೆಯನ್ನು ಪಡೆದುಕೊಳ್ಳಲು, ಗರ್ಭಧಾರಣೆಯ ಎರಡನೆಯ ತ್ರೆ„ಮಾಸಿಕ ಅವಧಿಯು ಬಹಳ ಉತ್ತಮ ಅವಧಿಯಾಗಿದೆ. ಬಾಯಿಯಲ್ಲಿ ಉರಿಯೂತಕ್ಕೆ ಕಾರಣವಾಗಿರುವ ಸೂûಾ¾ಣುಜೀವಿಗಳ ಬೆಳವಣಿಗೆಯನ್ನು ತಡೆಯುವುದು ಈ ಅವಧಿಯಲ್ಲಿನ ಚಿಕಿತ್ಸೆಯ ಪ್ರಮುಖ ಉದ್ದೇಶ. ಆ ಮೂಲಕ ಗರ್ಭಧಾರಣಾ ಅವಧಿಯಲ್ಲಿ, ವಸಡಿನ ಉರಿಯೂತ ದಿಂದ ಆಗುವ ವ್ಯತಿರಿಕ್ತ ಪರಿಣಾಮ ಗಳನ್ನು ಕಡಿಮೆ ಮಾಡಿಕೊಳ್ಳಬಹುದು.

ಸ್ತನ ಪಾನ ಇತ್ತೀಚೆಗಿನ ಅಧ್ಯಯನ ವರದಿಗಳ ಪ್ರಕಾರ, ಕ್ಯಾಲ್ಸಿಯಂ ಕೊರತೆಯು ಎಲ್ಲ ವರ್ಗದ ಜನರಲ್ಲೂ ಪೆರಿಯೋ ಡಾಂಟಲ್‌ ಅಂಗಾಂಶಗಳ ತೀವ್ರ ಉರಿಯೂತಕ್ಕೆ ಕಾರಣವಾಗಿದೆ. ಕ್ಯಾಲ್ಸಿಯಂ ಕೊರತೆಯಿಂದಾಗಿ ಹಲ್ಲುಗಳ ಸುತ್ತಲಿನ ಅಂಗಾಂಶಕ್ಕೆ ಹಾಗೂ ಹಲ್ಲುಗಳನ್ನು ಹಿಡಿದಿಟ್ಟು ಕೊಳ್ಳುವ ಹಲ್ಲುಗಳ ಆಸುಪಾಸಿನ ಮೂಳೆಗಳಿಗೆ ಹಾನಿಯಾಗುತ್ತದೆ. ಹಾಲೂಡಿಸುವ ತಾಯಂದಿರಲ್ಲಿ ಈ ರೀತಿಯ ಹಾನಿಯ ತೀವ್ರತೆ ಇನ್ನೂ ಹೆಚ್ಚು ಕಂಡು ಬರುತ್ತದೆ. ಇನ್ನೊಂದು ಸಂಶೋಧನೆಯು ಹಾಲೂಡಿಸುವ ಮಹಿಳೆಯ ಆಹಾರದಲ್ಲಿ ಅಧಿಕ ಪ್ರಮಾಣದಲ್ಲಿ ಕ್ಯಾಲ್ಸಿಯಂ ಅಗತ್ಯವಿದೆ ಎಂಬ ಅಂಶವನ್ನು ಸೂಚಿಸುತ್ತದೆ. ಸ್ತನ ಪಾನವು ಆಕೆಯ ಮಗುವಿನ ಬೆಳವಣಿಗೆಗೆ ಬಹಳ ಅಗತ್ಯವಾಗಿರುವಂತೆಯೇ, ತಾಯಿಗೂ ಸಹಾ ಕ್ಯಾಲ್ಸಿಯಂ ಬಹಳ ಅಗತ್ಯ. ಇಲ್ಲದೇ ಹೋದರೆ, ಆಕೆಯ ಬಾಯಿಯ ಮೂಳೆಗೆ ಹಾನಿಯಾಗಿ, ಪೆರಿಯೋಡಾಂಟಲ್‌ ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ತಾನು ಗರ್ಭವತಿ ಎಂದು ಗೊತ್ತಾದ ಕೂಡಲೇ ಮಹಿಳೆಯು ಪೆರಿಯೋಡಾಂಟಲ್‌ ಪರೀಕ್ಷೆಯನ್ನು ಮಾಡಿಸಿಕೊಂಡು, ಗರ್ಭಧಾರಣಾ ಅವಧಿಯಲ್ಲಿ ಮಾತ್ರವಲ್ಲದೆ ಹೆರಿಗೆಯ ಬಳಿಕವೂ ಮೂರು ತಿಂಗಳ ಕಾಲ ಹಲ್ಲಿನ ಸುತ್ತಲಿನ ಪೆರಿಯೋಡಾಂಟಲ್‌ ಅಂಗಾಂಶಗಳನ್ನು ಸ್ವತ್ಛಗೊಳಿಸಿಕೊಂಡರೆ, ಮುಂದಕ್ಕೆ ಸುರಕ್ಷಿತವಾಗಿರಬಹುದು. ಬಾಯಿಯ ಮೂಲಕ ಸೇವಿಸುವ ಗರ್ಭನಿರೋಧಕಗಳು ಬಾಯಿಯ ಮೂಲಕ ಸೇವಿಸುವ ಗರ್ಭನಿರೋಧಕಗಳಿಂದಲೂ ಸಹ ಗರ್ಭಧಾರಣೆಯ ಸಂದರ್ಭದ ಪರಿಣಾಮಗಳೇ ಕಂಡು ಬರುತ್ತವೆ. ಅಂದರೆ, ಸಾಮಾನ್ಯವಾಗಿ ವಸಡಿನ ಅಂಗಾಂಶಗಳಲ್ಲಿ ಗರ್ಭಧಾರಣೆಯ ಸಂದರ್ಭದಲ್ಲಿ ಆಗುವ ಬದಲಾವಣೆಗಳೇ ಕಂಡುಬರುತ್ತವೆ. ಮಹಿಳೆಯ ಗರ್ಭಧಾರಣೆಯ ಆರಂಭಿಕ ಹಂತದಲ್ಲಿ ವಸಡಿನಲ್ಲಿ ಕಾಣಿಸಿಕೊಳ್ಳುವ ಅದೇ ವ್ಯತ್ಯಾಸಗಳು, ಬಾಯಿಯ ಮೂಲಕ ಗರ್ಭ ನಿರೋಧಕವನ್ನು ಸೇವಿಸುವ ಮಹಿಳೆ ಯಲ್ಲೂ ಕಂಡು ಬರುತ್ತದೆ.ಗರ್ಭ ನಿರೋಧಕವು ಸಿಂಥೆಟಿಕ್‌ ಹಾರ್ಮೋನ್‌ ಆಗಿರುವ ಕಾರಣದಿಂದ, ಇದರ ಸೇವನೆಯಿಂದ ವಸಡು ಊದಿಕೊಳ್ಳು ವುದು, ಮುಟ್ಟಿದರೆ ನೋವಾಗುವುದು, ರಕ್ತಸ್ರಾವವಾಗುವುದು... ಇತ್ಯಾದಿ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಯಾವುದೇ ರೀತಿಯ ಆರೋಗ್ಯ ಸಂಬಂಧಿ ಅಥವಾ ದಂತ ಸಂಬಂಧಿ ಚಿಕಿತ್ಸೆಗಳನ್ನು ಪಡೆಯುವ ಮೊದಲು, ಗರ್ಭ ನಿರೋಧಕಗಳೂ ಸೇರಿದಂತೆ, ತಾವು ಈಗಾಗಲೇ ಪಡೆಯುತ್ತಿರುವ ಎಲ್ಲಿ ಚಿಕಿತ್ಸೆಗಳ ಬಗ್ಗೆ ಮಾಹಿತಿಯನ್ನು ನಿಮ್ಮ ವೈದ್ಯರಿಗೆ ತಿಳಿಸುವುದು ಅತ್ಯಗತ್ಯ.

ಇದರಿಂದ, ಮಧ್ಯದಲ್ಲಿ ಆಗಬಹುದಾದ ತೊಂದರೆಗಳನ್ನು ತಪ್ಪಿಸಿಕೊಳ್ಳಬಹುದು. ಅಂದರೆ, ಹಲ್ಲುಗಳ ಚಿಕಿತ್ಸೆಯ ಸಂದರ್ಭದಲ್ಲಿ ನೀಡುವ ರೋಗ ನಿರೋಧಕಗಳಿಂದ, ಗರ್ಭ ನಿರೋಧಕದ ಪ್ರಭಾವವು ಕಡಿಮೆಯಾಗುವ ಸಾಧ್ಯತೆ... ಇತ್ಯಾದಿ. ಮಾತ್ರವಲ್ಲದೆ, ದೀರ್ಘ‌ಕಾಲ ಗರ್ಭನಿರೋಧಕವನ್ನು ಸೇವಿಸುವುದರಿಂದ, ಈಗಾಗಲೇ ಇರುವ ವಸಡಿನ ತೊಂದರೆ ತೀವ್ರವಾಗುವ ಸಾಧ್ಯತೆ ಇದೆ. ಅಲ್ಲದೆ, ಗರ್ಭನಿರೋಧಕದ ಸೇವನೆಯನ್ನು ನಿಲ್ಲಿಸುವುದರಿಂದ ವಸಡಿನ ಸಮಸ್ಯೆ ಸರಿಹೋಗುವ ಸಾಧ್ಯತೆಯೂ ಇದೆ. ಋತುಬಂಧ ಋತುಬಂಧವಾದ ಮಹಿಳೆಯರು ಅಥವಾ ಋತುಬಂಧ ಪೂರ್ವ ಸ್ಥಿತಿಯಲ್ಲಿರುವವರು ಅಥವಾ ಸಂಪೂರ್ಣ ಹಿಸ್ಟೆರೆಕ್ಟಮಿ (ಗರ್ಭಕೋಶವನ್ನು ಕತ್ತರಿಸಿ ತೆಗೆದುಹಾಕುವ) ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡವರಲ್ಲಿ, ಈ ವರೆಗೆ ಆವರ್ತ ರೂಪದಲ್ಲಿದ್ದ ಈಸ್ಟ್ರೋಜನ್‌ ಎಂಬ ಹಾರ್ಮೋನಿನ ಪರಿಚಲನಾ ಪ್ರಕ್ರಿಯೆಯ ವ್ಯತ್ಯಾಸಗಳು ಸಂಪೂರ್ಣವಾಗಿ ನಿಂತುಹೋಗುತ್ತದೆ.

ಈ ಕಾರಣದಿಂದಾಗಿ, ಅವರ ಬಾಯಿಯಲ್ಲಿ ಕೆಲವು ರೀತಿಯ ಬದಲಾವಣೆಗಳಾಗುತ್ತವೆ. ಬಾಯಿ ಒಣಗುವುದು, ನೋವು ಹಾಗೂ ವಸಡಿನ ಅಂಗಾಂಶಗಳಲ್ಲಿ ಉರಿಯುವಂತೆ ಆಗುವುದು, ರುಚಿಯಲ್ಲಿ -ವಿಶೇಷವಾಗಿ ಉಪ್ಪು, ಖಾರ ಹಾಗೂ ಹುಳಿ ರುಚಿಯನ್ನು ಗ್ರಹಿಸುವಲ್ಲಿ ವ್ಯತ್ಯಾಸವಾಗುವುದು... ಇತ್ಯಾದಿ ಕಿರಿಕಿರಿಗಳನ್ನು ಇಂತಹ ಮಹಿಳೆಯರು ಅನುಭವಿಸುತ್ತಾರೆ. ಇಷ್ಟು ಮಾತ್ರವಲ್ಲದೆ, ವಸಡಿನ ಉರಿಯೂತವೂ ಸಹ ಸ್ವಲ್ಪ ಪ್ರಮಾಣದಲ್ಲಿ ಋತುಬಂಧವಾದ ಮಹಿಳೆಯರನ್ನು ತೊಂದರೆಗೀಡು ಮಾಡುತ್ತದೆ. ಅಂದರೆ, ವಸಡು ಒಣಗುತ್ತದೆ, ಆಗಾಗ ವಸಡಿನಲ್ಲಿ ಸ್ರಾವವಾಗುತ್ತದೆ. ವಸಡಿನ ಬಣ್ಣವು ಅಸಹಜವಾಗಿ ಬಣ್ಣಗುಂದಿದಂತೆ ಇದ್ದು ಕೆಲವು ಸಲ ಗಾಢವಾದ ಕೆಂಪು ಬಣ್ಣವನ್ನು ಹೊಂದಿರುತ್ತದೆ. ಕೆಲವು ಮಹಿಳೆಯರಿಗೆ ಈಸ್ಟ್ರೋಜನ್‌ ಪೂರಣಗಳನ್ನು ತೆಗೆದುಕೊಳ್ಳುವ ಮೂಲಕ ಈ ಸಮಸ್ಯೆ ಪರಿಹಾರವಾಗಬಹುದು. ಋತುಬಂಧದ ಅನಂತರ ಆಗುವ ಈಸ್ಟ್ರೋಜನ್‌ ಕೊರತೆಯಿಂದಾಗಿ, ಮೂಳೆಯ ಗಾತ್ರವು ಕುಗ್ಗುತ್ತದೆ. ಇದರಿಂದ ಮೂಳೆಗೆ ಹಾನಿಯಾಗುತ್ತದೆ. ಮೂಳೆ ಹಾನಿ ಎಂಬುದು ಮೂಳೆ ಸವೆತ (ಆಸ್ಟಿಯೊಪೊರೊಸಿಸ್‌) ಅಥವಾ ಪೆರಿಯೋಡಾಂಟಲ್‌ (ಪರಿದಂತಕಾಯಿಲೆಯ) ರೂಪದಲ್ಲಿ ಇರಬಹುದು. ಹಲ್ಲುಗಳ ಆಸುಪಾಸಿನ (ಆಲ್ವೆಯೋಲಾರ್‌) ಮೂಳೆ, ಅಂದರೆ ಹಲ್ಲನ್ನು ಅದರ ಸ್ವಸ್ಥಾನದಲ್ಲಿ ಭದ್ರವಾಗಿ ಹಿಡಿದು ಇರಿಸಿಕೊಳ್ಳುವ ಮೂಳೆ. ಋತುಬಂಧವಾದ ಮಹಿಳೆಯರಲ್ಲಿ ಈ ಮೂಳೆಗೆ ಹಾನಿಯಾಗುವುದರಿಂದ, ಹಲ್ಲು ಕಿತ್ತುಹೋಗುವ ಸಾಧ್ಯತೆ ಹೆಚ್ಚು. ಇವೆರಡಕ್ಕೂ ಸಂಬಂಧ ಇದೆಯೇ ಎಂಬ ಬಗ್ಗೆ ಇನ್ನೂ ಸಂಶೋಧನೆಗಳು ನಡೆಯುತ್ತಿವೆ. ಹಾರ್ಮೋನ್‌ ಪೂರಣ ಚಿಕಿತ್ಸೆಯನ್ನು (ಊಖಖೀ) ಪಡೆದು ಕೊಂಡು, ಋತುಬಂಧವಾದ ಮಹಿಳೆ ಯರು, ಆಸ್ಟಿಯೊಪೊರೊಸಿಸ್‌ ಅಥವಾ ಮೂಳೆಸವೆತಕ್ಕೆ ಸುರಕ್ಷೆಯನ್ನು ಪಡೆದಂತೆ, ಈ ಚಿಕಿತ್ಸೆಯು ಅವರ ಹಲ್ಲು ಹಾಗೂ ದೇಹದ ಇತರ ಅಂಗಗಳಿಗೂ ಸಹಾಯಕವಾದ ಅಂಶವು ಬೆಳಕಿಗೆ ಬಂದಿದೆ. ಋತುಬಂಧವಾದ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಈ ಎಲ್ಲ ತೊಂದರೆ ಗಳು ಹಾರ್ಮೋನಿನ ಪ್ರಮಾಣದಲ್ಲಿ ವ್ಯತ್ಯಾಸಗಳಿಂದಾಗಿ ಆಗುವ ಕಾರಣ, ಪೆರಿಯೋಡಾಂಟಲ್‌ ಕಾಯಿಲೆಯು ಇವರಲ್ಲಿ ಇನ್ನೂ ಉಲ್ಬಣಗೊಳ್ಳುತ್ತದೆ.

ಮನೆಯಲ್ಲಿ ಹಾಗೂ ವೈದ್ಯರ ಮೂಲಕ ಬಾಯಿ ಹಾಗೂ ಹಲ್ಲುಗಳ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳುವ ಮೂಲಕ ಈ ಕಾಯಿಲೆಯ ಲಕ್ಷಣಗಳನ್ನು ನಿವಾರಿಸಿಕೊಳ್ಳಬಹುದು. ಬಾಯಿ ಒಣಗುವ ತೊಂದರೆಯಿಂದ ತಪ್ಪಿಸಿಕೊಳ್ಳಲು, ಲಾಲಾರಸ ಪೂರಣ ಚಿಕಿತ್ಸೆಯು ಪರಿಣಾಮಕಾರಿಯಾಗಿದೆ. *ವರ್ಷಕ್ಕೆ ಕನಿಷ್ಠ ಎರಡು ಸಲವಾದರೂ ದಂತವೈದ್ಯರಿಂದ ಹಲ್ಲುಗಳನ್ನು ಸ್ವತ್ಛಗೊಳಿಸಿಕೊಳ್ಳಿ.

 • ನಿಮ್ಮ ವಸಡುಗಳ ಅಂಗಾಂಶಗಳಲ್ಲಿ ತೊಂದರೆ ಇದೆ ಎಂದು ನಿಮಗೆ ಹಾಗೂ ನಿಮ್ಮ ದಂತವೈದ್ಯರಿಗೆ ಅನ್ನಿಸಿದರೆ, ನಿಮ್ಮ ಹತ್ತಿರದ ಪೆರಿಯೋಡಾಂಟಿಸ್ಟ್‌ ಅಥವಾ ಪರದಂತತಜ್ಞರನ್ನು ಭೇಟಿಯಾಗಿರಿ. ವಸಡಿನ ಅಂಗಾಂಶಗಳ ಕೆಲವು ರೀತಿಯ ಸಮಸ್ಯೆಗಳು ಈ ರೀತಿಯಾಗಿರಬಹುದು:
 • ಬ್ರಷ್‌ ಮಾಡುವಾಗ ವಸಡಿನಲ್ಲಿ ರಕ್ತ ಸ್ರಾವವಾಗುವುದು.
 • ಕೆಂಪಗಾಗಿ ಊದಿಕೊಳ್ಳುವುದು ಅಥವಾ ಮುಟ್ಟಿದರೆ ನೋವಾಗುವುದು.
 • ವಸಡುಗಳು ಹಲ್ಲುಗಳಿಂದ ಹೊರಗೆ ಚಾಚುವುದು.
 • ಬಾಯಿಯಲ್ಲಿ ನಿರಂತರ ದುರ್ಗಂಧ.
 • ಹಲ್ಲು ಹಾಗೂ ವಸಡುಗಳ ನಡುವೆ ಕೀವು ತುಂಬಿಕೊಳ್ಳುವುದು.
 • ಹಲ್ಲುಗಳು ಅಲುಗಾಡುವುದು ಅಥವಾ ಕಳಚಿಕೊಳ್ಳುವುದು.
 • ಆಹಾರವನ್ನು ಕಚ್ಚುವಾಗ, ಹಲ್ಲುಗಳ ಹೊಂದಾಣಿಕೆಯಲ್ಲಿ ವ್ಯತ್ಯಾಸವಾಗುವುದು.
 • ದಂತ ಕಟ್ಟುಗಳ ಹೊಂದಾಣಿಕೆ ಯಲ್ಲಿ ವ್ಯತ್ಯಾಸವಾಗುವುದು.
 • ನೀವು ತೆಗೆದುಕೊಳ್ಳುತ್ತಿರುವ ಇತರ ಔಷಧಿಗಳ ಮಾಹಿತಿ ಹಾಗೂ ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಆಗಿರುವ ಬದಲಾವಣೆಗಳನ್ನು ಕುರಿತಾದ ಮಾಹಿತಿಗಳನ್ನು ನಿಮ್ಮ ದಂತವೈದ್ಯರಿಗೆ ಒದಗಿಸಿ.
 • ನಿತ್ಯವೂ ಹಲ್ಲುಗಳನ್ನು ಸರಿಯಾದ ಕ್ರಮದಲ್ಲಿ ಬ್ರಷ್‌ ಮಾಡಿ, ಫ್ಲಾಸ್‌ ಮಾಡಿ. ದಂತವೈದ್ಯರ ಸಲಹೆಯಂತೆ ಹಲ್ಲುಗಳನ್ನು ಶುಚಿಗೊಳಿಸುವ ಕ್ರಮದಲ್ಲಿ ಸುಧಾರಣೆ ಮಾಡಿಕೊಳ್ಳಿರಿ.

ಮೂಲ : ಅರೋಗ್ಯ ವಾಣಿ© 2006–2019 C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate