অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸೇವೆಯಲ್ಲೇ ಸಾರ್ಥಕತೆ

ಸೇವೆಯಲ್ಲೇ ಸಾರ್ಥಕತೆ

ಮನುಷ್ಯ ಆರೋಗ್ಯಕರವಾಗಿ ಬದುಕುವುದಕ್ಕೆ ಮುಖ್ಯವಾಗಿ ಬೇಕಿರುವುದು ಸ್ವಚ್ಛತೆ. ಆದರೆ ಇಂದು ಹಲವರಿಗೆ ಸ್ವಚ್ಛತೆಯ ಅರಿವಿಲ್ಲ. ಇಂದಿಗೂ ಗ್ರಾಮೀಣ ಪ್ರದೇಶದ ಹಲವು ಮನೆಗಳಲ್ಲಿ ಶೌಚಾಲಯ ವ್ಯವಸ್ಥೆ ಸಹ ಇಲ್ಲ. ಭಾರತದ ಅಭಿವೃದ್ಧಿಯ ನಾಗಾಲೋಟಕ್ಕೆ ಬ್ರೇಕ್ ಹಾಕುತ್ತಿರುವ ಸಂಗತಿಗಳಲ್ಲಿ ಸ್ವಚ್ಛತೆಯ ಬಗ್ಗೆ ಅರಿವಿಲ್ಲದ್ದೂ, ಇದೇ ಕಾರಣಕ್ಕಾಗಿ ಹಲವಾರು ರೋಗಗಳನ್ನು ಬರಮಾಡಿಕೊಳ್ಳುತ್ತಿರುವುದೂ ಒಂದು ಕಾರಣ.
ಎಷ್ಟೋ ಹಳ್ಳಿಗಳಲ್ಲಿ ಅನುಕೂಲವಿದ್ದರೂ ಬೇಕೆಂದೇ ಶೌಚಾಲಯಗಳನ್ನು ಕಟ್ಟಿಸದವರನ್ನು ಕಾಣಬಹುದು. ಆರೋಗ್ಯದ ಬಗೆಗಿನ ಇಂಥ ನಿಷ್ಕಾಳಜಿಯಿಂದಾಗಿ ಇಂದು ಹಲವು ಮಾರಣಾಂತಿಕ ಕಾಯಿಲೆಗಳು ನಮ್ಮನ್ನು ಸುತ್ತುತ್ತಿವೆ. ಎಳೆ ವಯಸ್ಸಿನಲ್ಲೇ ಹಲವು ರೋಗಗಳಿಗೆ ತುತ್ತಾಗುವ ಮಕ್ಕಳನ್ನು ಕಂಡರೆ ನೋವಾಗುತ್ತದೆ. ತಂದೆ-ತಾಯಿಗಳು ಮಕ್ಕಳಿಗೆ ಸ್ವಚ್ಛತೆಯ ಪಾಠವನ್ನು ಹೇಳದಿರುವುದೂ ಇದಕ್ಕೆ ಮುಖ್ಯ ಕಾರಣ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಹೀಗಿರುವಾಗ ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ 55 ವರ್ಷದ ಕಲಾವತಿ ದೇವಿ ಎಂಬ ಮಹಿಳೆ ತನ್ನ ಊರಿಗೆ ಶೌಚಾಲಯದ ಅಗತ್ಯವಿರುವುದನ್ನು ಮನಗಂಡಳು. ಸ್ವಾಸ್ಥ್ಯ ಕಾಪಾಡಲು, ನಿರೋಗಿಗಳಾಗಲು ಶೌಚಾಲಯ ಬೇಕೇ ಬೇಕು ಎಂದು ಜನರಲ್ಲಿ ಆರೋಗ್ಯದ ಅರಿವು ಮೂಡಿಸುವುದಕ್ಕಷ್ಟೇ ಅವಳ ಕೆಲಸ ಸೀಮಿತವಾಗದೆ ಶೌಚಾಲಯ ನಿರ್ಮಾಣಕ್ಕೂ ಸ್ವತಃ ಅಡಿಯಿಟ್ಟಳು.
ಸುಮಾರು 700 ಕುಟುಂಬಗಳು ವಾಸಿಸುತ್ತಿದ್ದ ಈ ಪ್ರದೇಶದಲ್ಲಿ ಒಂದೇ  ಒಂದು ಸಾರ್ವಜನಿಕ ಶೌಚಾಲಯವೂ ಇರಲಿಲ್ಲ. ಪ್ರತಿಯೊಬ್ಬರೂ ಮಲವಿಸರ್ಜನೆಗೆ ಬಯಲಿಗೇ ಹೋಗಬೇಕಿತ್ತು. ಮಹಿಳೆಯರಿಗಂತೂ ಇದು ತೀರಾ ಮುಜುಗರದ ವಿಷಯವಾಗಿತ್ತಾದರೂ ಆ ವ್ಯವಸ್ಥೆಗೆ ಬಹುಪಾಲು ಜನರು ಹೊಂದಿಕೊಂಡಿದ್ದರು ಸಹ. ಆದರೆ 14 ವರ್ಷದಲ್ಲೇ ಮದುವೆಯಾಗಿ ಶಾಲೆಯ ಮೆಟ್ಟಿಲನ್ನೂ ತುಳಿಯದ ಕಲಾವತಿಗೆ ಸ್ವಚ್ಛತೆಯ ಅಗತ್ಯವನ್ನು ಆಕೆಯ ಅನುಭವದ ಪಾಠವೇ ಕಲಿಸಿತ್ತು. ಪತಿಯ ಸಹಕಾರವೂ ಸಿಕ್ಕಿದ್ದರಿಂದ ಇಡೀ ಊರಿಗೂ ಸ್ವಚ್ಛತೆಯ ಬಗ್ಗೆ ಪಾಠ ಮಾಡಿ ಶೌಚಾಲಯ ನಿರ್ಮಾಣದಲ್ಲಿ ತೊಡಗಿಕೊಂಡಿರುವುದು ಈಕೆಯ ಹೆಗ್ಗಳಿಕೆ.
ಮುಖ್ಯವಾಗಿ ಕೊಳಗೇರಿಗಳಲ್ಲಿ ತನ್ನ ಸೇವಾ ಕಾರ್ಯ ಆರಂಭಿಸಿದ ಕಲಾವತಿಯವರೊಂದಿಗೆ ಸ್ಥಳೀಯ ಸರ್ಕಾರೇತರ ಸಂಘಗಳೂ ಕೈಜೋಡಿಸಿವೆ. ಮೊಟ್ಟಮೊದಲ ಬಾರಿಗೆ ಹೀಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ಮತ್ತು ಶೌಚಾಲಯ ಕಟ್ಟುವುದಕ್ಕಾಗಿ ಹೊರಟಾಗ ಕಲಾವತಿಯವರನ್ನು ವಿರೋಧಿಸಿದವರೇ ಹೆಚ್ಚು. ಏಕೆಂದರೆ ಬಡತನದ ಸನ್ನಿವೇಶಕ್ಕೆ ಒಗ್ಗಿಹೋಗಿದ್ದ ಅಲ್ಲಿನ ಜನರಿಗೆ ಅದರ ಹೊರತಾದ ಬದುಕನ್ನು ಕಲ್ಪಿಸಿಕೊಳ್ಳುವುದಕ್ಕೂ ಇಷ್ಟವಿರಲಿಲ್ಲ. ಅದನ್ನು ಮೀರಿದ ಬದುಕೊಂದನ್ನು ತಾವು ಪಡೆಯಬಹುದೆಂಬ ನಂಬಿಕೆಯೂ ಇರಲಿಲ್ಲ. ಆದ್ದರಿಂದ ಶೌಚಾಲಯವೊಂದು ಮೂಲಭೂತ ಅಗತ್ಯ ಎಂದು ಅವರಿಗೆಲ್ಲ ಅನ್ನಿಸಲೇ ಇಲ್ಲ. ಆದರೂ ಕಲಾವತಿ ಹಿಂದಡಿಯಿಡಲಿಲ್ಲ.
ನಿಮ್ಮ ಬದುಕು ಇಷ್ಟೇ ಅಲ್ಲ, ನೀವು ಬದಲಾಗಬೇಕು, ನಿಮ್ಮ ಜೀವನ ಶೈಲಿಯ ಗುಣಮಟ್ಟದಲ್ಲಿ ಬದಲಾವಣೆಯಾಗುವ ಅಗತ್ಯವಿದೆ, ಅದನ್ನು ಬದಲಿಸಿಕೊಳ್ಳುವ ಸಾಮರ್ಥ್ಯವೂ ನಿಮ್ಮಲ್ಲಿದೆ. ಆದರೆ ಆ ಸಾಮರ್ಥ್ಯದ ಅರಿವು ನಿಮಗಿಲ್ಲ ಅಷ್ಟೇ ಎಂದು ಅವರೆಲ್ಲರನ್ನೂ ಕಲಾವತಿ ಹುರಿದುಂಬಿಸಿದರು. ಸದ್ಯಕ್ಕೆ ಅಲ್ಲಿನ ಬಹುಪಾಲು ಜನರಿಗೆ ಸ್ವಚ್ಛತೆಯ ಅರಿವು ಮೂಡಿದೆ.
ಈ ಕುರಿತು ಕಲಾವತಿಯವರನ್ನು ಕೇಳಿದರೆ ಹೇಳುವ ಮಾತೊಂದೇ, ನಾನು ಜನರಿಗಾಗಿ ಇದಕ್ಕಿಂತ ಉತ್ತಮ ಕೆಲಸವನ್ನು ಮಾಡುವುದಕ್ಕೆ ಸಾಧ್ಯವೇ ಇಲ್ಲ. ಏಕೆಂದರೆ ಜನರನ್ನು ರೋಗದಿಂದ ದೂರವಾಗುವಂತೆ ಮಾಡುತ್ತಿರುವುದಷ್ಟೇ ಅಲ್ಲ, ಮಹಿಳೆಯರನ್ನು ರಕ್ಷಿಸುವ ಕೆಲಸವೂ ನನ್ನಿಂದ ಸಾಧ್ಯವಾಗುತ್ತಿದೆ ಎಂಬ ಹೆಮ್ಮೆ ನನಗಿದೆ.
ಕಲಾವತಿ ಮೌನವಾಗಿಯೇ ಜನಸೇವೆಯಲ್ಲಿ ತೊಡಗಿರುವವರು. ಅವರು ಭಾರತದ ಸ್ವಚ್ಛತಾ ರಾಯಭಾರಿ ಎಂಬುದರಲ್ಲಿ ಎರಡು ಮಾತಿಲ್ಲ ಎಂಬುದು ಆಕೆಯನ್ನು ಹತ್ತಿರದಿಂದ ಬಲ್ಲ ಆತ್ಮೀಯರ ಮಾತು.
ಶೌಚಾಲಯ ಕಟ್ಟುವುದರ ಜೊತೆಗೇ ಮಹಿಳೆಯರಲ್ಲಿ ಭದ್ರತೆಯ ಬಗ್ಗೆಯೂ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ವಯಸ್ಸು 55 ಆದರೂ ಜೀವನದ ಬಗೆಗಿನ ಉತ್ಸಾಹ ಮಾತ್ರ ಕುಗ್ಗಿಲ್ಲ. ತನ್ನ ನಂತರದ ಪೀಳಿಗೆಯೂ ಸ್ವಾಸ್ಥ್ಯ ಬದುಕನ್ನು ಕಾಣಬೇಕೆಂಬ ಕಾರಣಕ್ಕಾಗಿ ಸ್ವಾರ್ಥ ಮರೆತು ಸಮಾಜಕ್ಕಾಗಿ ದುಡಿಯುತ್ತಿರುವ ಕಲಾವತಿ ಪ್ರತಿಯೊಬ್ಬ ಮಹಿಳೆಯರಿಗೂ ಸ್ಫೂರ್ತಿ.
ಇಂದು ಸ್ವಚ್ಛತೆಯನ್ನು ನೆಲೆಗೊಳಿಸುವುದಕ್ಕಾಗಿ ಸರ್ಕಾರವೂ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಆರೋಗ್ಯವಂತ ಮಾನವ ಸಂಪನ್ಮೂಲವೇ ದೇಶದ ಆರ್ಥಿಕತೆ ಮತ್ತು ಇನ್ನಿತರ ಸರ್ವತೋಮುಖ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂಬುದನ್ನು ಮನಗಂಡ ಸರ್ಕಾರ ಇಂದು ಆರೋಗ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದೆ. ಆದರೆ ಸರ್ಕಾರದ ನಿಯಮಗಳನ್ನು, ಯೋಜನೆಗಳನ್ನು ತಿರಸ್ಕರಿಸುವ ಸಮುದಾಯವೇ ನಮ್ಮಲ್ಲಿ ಹೆಚ್ಚಿದೆ. ಸರ್ಕಾರ ಒಂದು ಉನ್ನತ ಕೆಲಸ ಮಾಡಲು ಹೊರಟಾಗ ಅದನ್ನು ಬೆಂಬಲಿಸುವುದು ಮತ್ತು ಅದಕ್ಕೆ ಸಹಕಾರ ನೀಡುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವೂ ಹೌದು. ಪ್ರತಿಯೊಂದು ಹಳ್ಳಿಯಲ್ಲಿಯೂ ಕಲಾವತಿಯಂಥ ನಿಸ್ವಾರ್ಥ ಮನೋಭಾವದ ವ್ಯಕ್ತಿಗಳು ತಯಾರಾದರೆ ಸರ್ಕಾರದ ಯೋಜನೆಗಳು ಯಶಸ್ವಿಯಾಗಿ, ದೇಶದ ಸಮಸ್ಯೆಗಳೂ ಪರಿಹಾರವಾಗುವುದು ಖಂಡಿತ.
ತಮ್ಮ ತಮ್ಮ ಗ್ರಾಮದ ಅಗತ್ಯಗಳನ್ನು ಅರಿತು ಅದನ್ನು ಗಳಿಸಿಕೊಳ್ಳುವುದಕ್ಕಾಗಿ ಹೋರಾಡುವುದು, ಆಯಾ ಗ್ರಾಮದ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಅದರ ನಿವಾರಣೆಗಾಗಿ ಶ್ರಮಪಡುವುದು ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ಎಲ್ಲವನ್ನೂ ಸರ್ಕಾರವೇ ಮಾಡುವುದಕ್ಕೆ ಸಾಧ್ಯವಿಲ್ಲ. ಅದಕ್ಕೆ ಜನರ ಬೆಂಬಲವೂ ಅಷ್ಟೇ ಪ್ರಮಾಣದಲ್ಲಿ ಅಗತ್ಯ.
ನಮ್ಮೂರನ್ನು ಮಾದರಿ ಗ್ರಾಮವನ್ನಾಗಿ ಮಾಡುವುದಕ್ಕಾಗಿ ನಾವು ಸರ್ಕಾರದ ಸಹಕಾರವನ್ನೇ ಅಪೇಕ್ಷಿಸುತ್ತ ನಿರೀಕ್ಷಿಸುತ್ತ ಕುಳಿತುಕೊಳ್ಳುವ ಅಗತ್ಯವಿಲ್ಲ. ಮಾದರಿ ಗ್ರಾಮದ ಪರಿಕಲ್ಪನೆಯನ್ನು ವಾಸ್ತವಕ್ಕಿಳಿಸಲು ನಾವೇ ಮೊದಲ ಹೆಜ್ಜೆ ಇಡಬೇಕು ಎಂಬ ಮಾತನ್ನು ಕೃತಿಗಿಳಿಸಿದ ಕಲಾವತಿ ಮತ್ತಷ್ಟು ಜನರಿಗೆ ಆದರ್ಶವಾಗಲಿ. ಭಾರತೀಯ ಹಳ್ಳಿಗಳ ಸಮಸ್ಯೆಗಳ ಕುರಿತು ಗಂಭಿರವಾಗಿ ಯೋಚಿಸುವ, ಅವುಗಳ ನಿವಾರಣೆಗೆ ಕಂಕಣಬದ್ಧರಾಗುವ ಮನೋಭಾವ ಎಲ್ಲರಲ್ಲೂ ಮೂಡುವಂತಾಗಲಿ.

ಮೂಲ: ವಿಕ್ರಮ

ಕೊನೆಯ ಮಾರ್ಪಾಟು : 2/15/2020© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate