ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಪರಿಣಾಮಕಾರಿ ಯಶೋಗಾಥೆಗಳು / ಸ್ವಪ್ರೇರಣೆಯಿಂದ ‘ಮಳೆ ನೀರು ಅಭಿಯಾನ’
ಹಂಚಿಕೊಳ್ಳಿ

ಸ್ವಪ್ರೇರಣೆಯಿಂದ ‘ಮಳೆ ನೀರು ಅಭಿಯಾನ’

‘ಮಳೆ ನೀರು ಸಂಗ್ರಹ ವಿಧಾನ’ ದಲ್ಲಿ ಯಶಸ್ಸು ಕಂಡವರು

ಹದಿನಾಲ್ಕು ವರ್ಷಗಳ ಹಿಂದಿನ ಮಾತು. ಆಗ  ಚಿತ್ರದುರ್ಗ ನಗರದಲ್ಲಿ ಕುಡಿಯುವ ನೀರಿಗೆ ಹಾಹಾ­ಕಾರ. ಲಭ್ಯವಿದ್ದ ಕೊಳವೆಬಾವಿ ನೀರಿನಲ್ಲಿ ಮಿತಿ ಮೀರಿದ ಫ್ಲೋರೈಡ್ ಅಂಶ. ಬಿಂದಿಗೆ ಸಿಹಿ ನೀರಿಗೂ ಎರಡು–-ಮೂರು ಕಿ.ಮೀ. ಅಲೆದಾಡ­ಬೇಕಾದ ಸ್ಥಿತಿ. ಇಲ್ಲದಿದ್ದರೆ ಕೇಳಿದಷ್ಟು  ಹಣ ಕೊಟ್ಟು ಟ್ಯಾಂಕರ್ ನೀರು ಖರೀದಿಸುವ ಅನಿವಾರ್ಯ.

ನಗರದ ಸುಲೋಚನಾ ಬಸವರಾಜು ಅವರನ್ನೂ ನೀರಿನ ಸಮಸ್ಯೆ ಬಾಧಿಸಿತ್ತು. ಸಮಸ್ಯೆ ­ನಿವಾ­ರಣೆಗೆ ಪರಿಹಾರ ತಿಳಿಯಲಿಲ್ಲ. ಆದರೆ ಮಾಧ್ಯಮ­ಗಳಲ್ಲಿ ಬಿತ್ತರವಾಗುತ್ತಿದ್ದ ‘ಮಳೆ ನೀರು ಸಂಗ್ರಹ ವಿಧಾನ’ ಅವರ ನೆರವಿಗೆ ಬಂತು. ಚಾವಣಿ ಮೇಲೆ ಸುರಿಯುವ ಮಳೆ ನೀರನ್ನು ತಮ್ಮದೇ ವಿಧಾನ­ದಲ್ಲಿ ಸಂಗ್ರಹಿಸಿಟ್ಟುಕೊ­ಳ್ಳಲು ಆರಂಭಿಸಿ­ದರು.  ಆದರೆ ಆ ನೀರು ಹೆಚ್ಚು ಕಾಲ ಉಳಿಯು­ತ್ತಿ­ರ­ಲಿಲ್ಲ. ಅಂತಿಮವಾಗಿ ಜಲತಜ್ಞ ಎನ್. ದೇವ­ರಾಜ ರೆಡ್ಡಿ ನೆರವಿನೊಂದಿಗೆ ವೈಜ್ಞಾನಿಕವಾಗಿ ಮಳೆ ನೀರು ಸಂಗ್ರಹ ವಿಧಾನ ಅಳವಡಿಸಿಕೊಂಡರು.

ಮನೆಯ ಪಡಸಾಲೆಯ ಕೆಳಗೆ 52 ಸಾವಿರ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಟ್ಯಾಂಕ್ ನಿರ್ಮಿಸಿದರು. ಆ ವರ್ಷ ಭರ್ಜರಿ ಮಳೆ. ಟ್ಯಾಂಕ್ ಭರ್ತಿ­ಯಾಯಿತು. ಅದರಿಂದಲೇ ವರ್ಷದ ಮುಕ್ಕಾಲು­ಪಾಲು ಜೀವನ ಸಾಗಿತು. ಮೊದಲ ವರ್ಷದ ಯಶಸ್ಸು, ಮಿನರಲ್ ವಾಟರ್‌ನಂತಿದ್ದ ಮಳೆ ನೀರಿನ ಗುಣಮಟ್ಟಕ್ಕೆ ಮನಸೋತ ಸುಲೋಚನಾ ದಂಪತಿ, ಅಕ್ಕಪಕ್ಕದ ಮನೆಗಳ ಚಾವಣಿ ನೀರನ್ನೂ ಬಳಸಲು ಆರಂಭಿಸಿದರು. ಈಗ ತಮ್ಮ ಮನೆಯ ಅಕ್ಕಪಕ್ಕದ ಮೂರು ಮನೆಗಳ ಚಾವಣಿ ಮೇಲೆ ಸುರಿಯುವ ಮಳೆ ನೀರನ್ನೂ ಸಂಗ್ರಹಿ­ಸುತ್ತಿದ್ದಾರೆ. ಆಗಿನಿಂದ ಅವರ ಮನೆಯ ‘ರೇನ್ ಟ್ಯಾಂಕ್’ ಬರಿದಾಗಲೇ ಇಲ್ಲ!

ಚಿತ್ರದುರ್ಗ ನಗರದಲ್ಲಿ  ಮಳೆ ನೀರು ಸಂಗ್ರಹದ ಇಂಥ ನೂರಾರು ಯಶೋಗಾಥೆಗಳು ತೆರೆದು­ಕೊಳ್ಳು­­ತ್ತವೆ. ಪ್ರತಿ ಯಶೋಗಾಥೆಯ ಹಿಂದೆಯೂ ನೀರಿನ ಸಮಸ್ಯೆಯ ವ್ಯಥೆ ಇರುತ್ತದೆ.

ದೇವರಾಜ ರೆಡ್ಡಿ ಪ್ರಕಾರ, ‘2000 ಇಸವಿ­ಯಿಂದ ಈಚೆಗೆ ಚಿತ್ರದುರ್ಗ ನಗರದಲ್ಲಿ 1200ಕ್ಕೂ ಹೆಚ್ಚು ಮನೆ, ಶಾಲಾ ಕಾಲೇಜು, ಮಠ, ಮಂದಿರ, ಸರ್ಕಾರಿ ಕಚೇರಿ, ಆಸ್ಪತ್ರೆಗಳಿಗೆ ಮಳೆ ನೀರು ಸಂಗ್ರಹ ವಿಧಾನ ಅಳವಡಿಸಲಾಗಿದೆ. 500ಕ್ಕೂ ಹೆಚ್ಚು ಕಟ್ಟಡಗಳಲ್ಲಿ ಇವತ್ತಿಗೂ ಮಳೆ ನೀರು ಬಳಕೆ ಆಗುತ್ತಿದೆ. ಉಳಿದ ಕಡೆ ಮಳೆ ನೀರನ್ನು ಕೊಳವೆ­ಬಾವಿಗೆ ಇಂಗಿಸುವ ಪ್ರಯತ್ನ ಮುಂದು­ವರಿದಿದೆ. ಶಾಂತಿಸಾಗರದ ನೀರು ನಗರಕ್ಕೆ ಪೂರೈಕೆ­ಯಾದ ಮೇಲೆ ಹೊಸ ಪ್ರಯತ್ನಗಳು ಕಡಿಮೆ­ಯಾಗಿವೆ’ ಎಂದು ರೆಡ್ಡಿ ಹೇಳುತ್ತಾರೆ.

ಈ ಅಭಿಯಾನ, ಸರ್ಕಾರದ ಕಾನೂನು ಕಟ್ಟಾಜ್ಞೆ­ಗಳಿಂದ ನಡೆದಿಲ್ಲ. ತಾವು ಅನುಭವಿಸಿದ ನೀರಿನ ಬವಣೆ, ಶುದ್ಧವಲ್ಲದ ನೀರಿನಿಂದ ಎದು­ರಿಸಿದ ರೋಗ-ರುಜಿನಗಳು ಇಲ್ಲಿನ ಜನರನ್ನು ಮಳೆ ನೀರು ಬಳಕೆಗೆ ಪ್ರೇರೇಪಿಸಿವೆ. ಇಂಥ ಯಶೋ­ಗಾಥೆ­ಗಳನ್ನು ಗುರುತಿಸಿ ಜನರಿಗೆ ತಲುಪಿಸಿರುವ ಸ್ಥಳೀಯ ಆಕಾಶವಾಣಿಯಂತಹ ಮಾಧ್ಯಮಗಳ ಕೆಲಸವೂ ಅಭಿಯಾನದಲ್ಲಿ ಸೇರಿದೆ.

ಮಾತಿನಿಂದ ಕೃತಿಗೆ!: ಹದಿಮೂರು ವರ್ಷಗಳ ಹಿಂದೆ ಚಿತ್ರದುರ್ಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದಾಗ ಜಿಲ್ಲಾ ಆಡಳಿತವು ‘ಜಲ ಜಾಗೃತಿ’ ಕುರಿತು ಅಭಿಯಾನಗಳನ್ನು ಆಯೋ­ಜಿಸಿತ್ತು.  ಒಣಭಾಷಣಗಳಿಂದ  ಪ್ರಯೋಜನ­ವಾ­ಗದು ಎಂದು ಭಾವಿಸಿ ಅಂದಿನ ಜಿಲ್ಲಾಧಿಕಾರಿ ಸೀತಾರಾಂ ಅವರು,  ‘ಮಾತನಾಡುವುದಕ್ಕಿಂತ ಮಾಡಿ ತೋರಿಸುವುದು ಲೇಸು’ ಎಂಬಂತೆ  ತಾವು ವಾಸ­ವಿದ್ದ ಸರ್ಕಾರಿ ಬಂಗಲೆಗೆ ಮಳೆ ನೀರು ಸಂಗ್ರಹ ವಿಧಾನ ಅಳವಡಿಸಿದರು. ಜಿಲ್ಲಾಧಿಕಾರಿ ಅವರ ಈ ಪ್ರಯತ್ನ ಯಶಸ್ವಿಯಾಯಿತು.

ನಂತರ ಜಿಲ್ಲಾಧಿಕಾರಿಯಾಗಿ ಬಂದ ಎಸ್.ಎ.ಸಾದಿಕ್  ಇನ್ನೂ ಒಂದು ಹೆಜ್ಜೆ ಮುಂದಿಟ್ಟು, ಇಡೀ ಜಿಲ್ಲಾ ಆಡಳಿತ ಕಚೇರಿಗೆ ಮಳೆ ನೀರು ಸಂಗ್ರಹ ವಿಧಾನ ಅಳ­ವಡಿಸಿ­ದರು. ಅದಕ್ಕೆ ‘ಜಲ ಸಂಜೀವಿನಿ’ ಎಂದು ಹೆಸರಿ­ಟ್ಟರು. ಜಿಲ್ಲಾ ಆಡ­ಳಿತ ಕಚೇರಿ­ಯೊಂದಕ್ಕೆ  ಮಳೆ ನೀರು ಸಂಗ್ರಹ ವಿಧಾನ ಅಳವಡಿಸಿದ್ದು ರಾಜ್ಯ­ದಲ್ಲಿ ಇದೇ ಮೊದಲು. ‘ಬೆಂಗಳೂರು ಮಹಾನಗರ ಪಾಲಿಕೆ ನಗರ­­­­­­ದಲ್ಲಿ ಮಳೆ ನೀರು ಸಂಗ್ರಹವನ್ನು ಕಡ್ಡಾಯ­ಗೊಳಿ­­­­ಸಲು ಇದು ಪ್ರೇರಣೆಯಾ­ಯಿತು’ ಎನ್ನುತ್ತಾರೆ ದೇವರಾಜ ರೆಡ್ಡಿ.

ದುರ್ಗದ ಜಿಲ್ಲಾಧಿಕಾರಿ ಕಚೇರಿ ಮೇಲೆ ಸುರಿಯುವ ಮಳೆ ನೀರು, ಏಳು ಲಕ್ಷ ಲೀಟರ್‌ ಸಾಮರ್ಥ್ಯದ ಸಂಪ್ ಟ್ಯಾಂಕ್‌ನಲ್ಲಿ ಸಂಗ್ರಹ­ವಾಗುತ್ತದೆ.  ಕಚೇರಿ ಅಂಗಳದ ಕೊಳವೆ­ಬಾವಿಗೆ ಜಲ ಮರುಪೂರಣ ವ್ಯವಸ್ಥೆ ಮಾಡಿಸ­ಲಾಗಿದೆ. ಜಿಲ್ಲಾ ಆಡಳಿತ ಕಚೇರಿಯಲ್ಲಿ ಬಹುತೇಕ ಕೆಲಸ­ಗಳಿಗೆ ಮಳೆ ನೀರನ್ನೇ ಬಳಸಲಾಗುತ್ತಿದೆ.  ಜಿಲ್ಲಾ ಆಡಳಿತದ ಈ ಪ್ರಯತ್ನ, ನಗರದ ಎಲ್ಲ ಸರ್ಕಾರಿ ಕಚೇರಿಗಳಿಗೂ ಮಳೆ ನೀರು ಸಂಗ್ರಹ ವಿಧಾನ ಅಳ­ವಡಿ­ಸಲು ಉತ್ತೇ­ಜಕ­ವಾಯಿತು. ಹಲವು ಖಾಸಗಿ ಕಟ್ಟಡ­ಗಳಿಗೂ ಮಳೆ ನೀರು ಸಂಗ್ರಹ ವಿಧಾನ ಅಳವಡಿಸಲು ಪ್ರೇರಣೆಯಾಯಿತು.

ಮಠ- ಮಾನ್ಯಗಳ ಪ್ರಚಾರ: ಚಿತ್ರದುರ್ಗದ ರಾಘವೇಂದ್ರ ಮಠದಲ್ಲಿ ಪ್ರತಿ ವರ್ಷ ರಾಯರ ಆರಾ­ಧನೆ ವೇಳೆ ನೀರು ಪೂರೈಸಲು  ಹರಸಾಹಸ­ಪಡ­ಬೇಕಾಗಿತ್ತು.  ಒಂದು ಹಂತದಲ್ಲಿ ಹಿರಿಯ ಸ್ವಾಮೀಜಿ, ದುರ್ಗದಲ್ಲಿ ನೀರಿನ ಸಮಸ್ಯೆ ನಿವಾರಣೆ ಆಗು­ವವರೆಗೂ ಮಠಕ್ಕೆ ಬರುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ಹೋಗಿತ್ತು.  ಆಗ ದೇವರಾಜ ರೆಡ್ಡಿ, ಭಕ್ತರೊಬ್ಬರ ಮನವೊಲಿಸಿ, ಮಠದ ನೀರಿನ ಸಂಕಷ್ಟ ನಿವಾರಣೆಗೆ ನೆರವಾದರು. ತಾವೇ ಮುಂದೆ ನಿಂತು,  ಮಠದ ಬಾವಿಗೆ ಮಳೆ ನೀರು ಸಂಗ್ರಹ­ವಾಗು­­­ವಂತೆ ವ್ಯವಸ್ಥೆ ಮಾಡಿದರು. ಆ ವರ್ಷದ ಅಲ್ಪ­ಮಳೆಗೆ ಬಾವಿಯೂ ತುಂಬಿತು, ಬಾವಿ­ಯೊಳ­ಗಿದ್ದ ಕೊಳವೆಬಾವಿಯೂ ಪುನರು­ಜ್ಜೀವನ ಪಡೆಯಿತು.

ಮರು ವರ್ಷ ಮಠಕ್ಕೆ ಬಂದ ಮಂತ್ರಾಲಯ ಯತಿಗಳು ಅಲ್ಲಿ ಸಂಗ್ರಹವಾಗಿದ್ದ ಮಳೆ ನೀರಿನ್ನೇ ಸ್ನಾನಕ್ಕೆ ಬಳಸಿದರು, ಮಳೆ ನೀರನ್ನೇ ತೀರ್ಥವಾಗಿ ವಿತರಿಸಿ­ದರು. ಅದಕ್ಕೆ ‘ಗಂಗಾ ಯೋಜನೆ’ ಎಂದು ಹೆಸರಿ­ಟ್ಟರು. ಈ ಪ್ರಯತ್ನ ಮಠದ ಭಕ್ತರಿಗೂ ತಮ್ಮ ಮನೆಗಳಲ್ಲಿ ಮಳೆ ನೀರು ಸಂಗ್ರಹ ವಿಧಾನ ಅಳ­ವಡಿಕೆಗೆ ಪ್ರೇರಣೆಯಾಯಿತು ಎನ್ನುತ್ತಾರೆ ಮಠದ ವ್ಯವಸ್ಥಾಪಕ ಫಣಿರಾಜ್.

ಇಂಥದೇ ಬವಣೆ ನಿವಾರಣೆಗೆ ನಗರದ ಮೆದೇಹಳ್ಳಿಯ ರಾಮತೀರ್ಥ ಆಶ್ರಮದಲ್ಲೂ ಮಳೆ ನೀರು ಸಂಗ್ರಹ ವಿಧಾನ ಅಳವಡಿಸಲಾಗಿದೆ. ಇಲ್ಲಿ ಪ್ರತಿ ಹುಣ್ಣಿಮೆಯಲ್ಲಿ 500 ರಿಂದ 600 ಮಂದಿ ಇವತ್ತಿಗೂ ಮಳೆ ನೀರು ಕುಡಿಯುತ್ತಿದ್ದಾರೆ, ಬಳಸು­ತ್ತಿದ್ದಾರೆ. ರಾಯರ ಮಠ ಮತ್ತು ರಾಮ­ತೀರ್ಥ ಆಶ್ರ­ಮ­ದಲ್ಲಾಗಿರುವ ಈ ಪ್ರಯತ್ನ ಸುತ್ತಲಿನ ಅಂತ­ರ್ಜಲ ಹೆಚ್ಚಳಕ್ಕೂ ಕಾರಣವಾಗಿದೆ ಎಂದು ನೆರೆಹೊರೆಯವರು ಹೇಳುತ್ತಾರೆ.

ಹಳ್ಳಿಗಳಿಗೆ ವಿಸ್ತರಣೆ: ನಗರದಲ್ಲಿನ ಮಳೆ ನೀರು ಸಂಗ್ರಹದ ಯಶೋಗಾಥೆಗಳು ಹಂತ ಹಂತವಾಗಿ ಹಳ್ಳಿಗಳಿಗೂ ತಲುಪಿದವು. ರೈತರು ಜಮೀನಿನಲ್ಲಿ ಬರಿ­ದಾದ ಕೊಳವೆಬಾವಿಗಳಿಗೆ ಜಲಮರು­ಪೂರ­ಣಕ್ಕೆ ಮುಂದಾ­ದರು. ಆದರೆ ಅನೇಕರಿಗೆ ಹಣ­ಕಾಸಿನ ಸಮಸ್ಯೆ ಎದುರಾಯಿತು. ಇದನ್ನು ಅರಿತ ಗ್ರಾಮೀಣ ಬ್ಯಾಂಕ್ ಈ ವಿಧಾನ ಅಳವಡಿಸಿ­ಕೊಳ್ಳು­ವವ­ರಿಗೆ ಸಾಲ ನೀಡಲು ಮುಂದಾಯಿತು. ಈ ಪ್ರಯತ್ನ ಯಶಸ್ವಿ­ಯಾಗಿ ಜಿಲ್ಲೆಯಲ್ಲಿ 2000ಕ್ಕೂ ಹೆಚ್ಚು ಮಂದಿಗೆ ಬ್ಯಾಂಕ್ ಸಾಲ ವಿತರಿಸಿದೆ. ಜನರ ಆಸ­ಕ್ತಿಯ ಫಲವಾಗಿ ಆಗಿರುವ ಇಂತಹ ಪ್ರಯತ್ನಗಳು  ಇತರರಿಗೆ ಮಾದರಿಯಾಗಿವೆ.

ಮೂಲ : ಪ್ರಜಾವಾಣಿ

Back to top