অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಶ್ರೀ ಪ್ರಣಬ್ ಮುಖರ್ಜಿ ಅವರು ವಿದಾಯ ಸಂದರ್ಭದಲ್ಲಿ ರಾಷ್ಟ್ರ ವನ್ನು ಉದ್ದೇಶಿಸಿ ಮಾಡಿದ ಭಾಷಣ

ಶ್ರೀ ಪ್ರಣಬ್ ಮುಖರ್ಜಿ ಅವರು ವಿದಾಯ ಸಂದರ್ಭದಲ್ಲಿ ರಾಷ್ಟ್ರ ವನ್ನು ಉದ್ದೇಶಿಸಿ ಮಾಡಿದ ಭಾಷಣ

ಪ್ರಿಯ ನಾಗರಿಕರೆ,

ನಾನು ಪದವಿಯಿಂದ ಮುಕ್ತನಾಗಿ ಕಛೇರಿಯಿಂದ ಹೊರಗಡಿ ಇಡುತ್ತಿರುವ ಮುನ್ನಾ ದಿನದಂದು ದೇಶದ ಜನರು, ನನ್ನ ಆಯ್ಕೆ ಮಾಡಿದ ರಾಜಕೀಯ ಪಕ್ಷಗಳ ನಾಯಕರು ನನ್ನ ಮೇಲೆ ಇಟ್ಟ ವಿಶ್ವಾಸ ಮತ್ತು ನಂಬಿಕೆ ಬಗ್ಗೆ ನನ್ನ ಮನಸ್ಸು ಕೃತಜ್ಞತೆಯಿಂದ ತುಂಬಿ ಬರುತ್ತಿದೆ. ನನಗೆ ತೋರಿದ ಸ್ನೇಹ ಮತ್ತು ಪ್ರೀತಿಯಿಂದಾಗಿ ನಾನು ವಿನೀತನಾಗಿದ್ದೇನೆ. ನಾನು ನೀಡಿದ್ದಕ್ಕಿಂತಲೂ ಇನ್ನೂ ಹೆಚ್ಚೇ ಈ ದೇಶದಿಂದ ನಾನು ಪಡೆದಿದ್ದೇನೆ. ಆದ್ದರಿಂದ ದೇಶದ ಜನತೆಗೆ ನಾನೆಂದೂ ಚಿರಋಣಿಯಾಗಿರುತ್ತೇನೆ.

ರಾಷ್ಟ್ರಪತಿಯಾಗಲಿರುವ ಶ್ರೀ ರಾಮನಾಥ್ ಕೋವಿಂದ್ ಅವರನ್ನು ಅಭಿನಂದಿಸುತ್ತೇನೆ ಮತ್ತು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ಮುಂಬರುವ ದಿನಗಳಲ್ಲಿ ಅವರಿಗೆ ಯಶಸ್ಸು ಮತ್ತು ಸಂತಸ ದೊರೆಯಲಿ ಎಂದು ಹಾರೈಸುತ್ತೇನೆ.

ಪ್ರಿಯ ನಾಗರಿಕರೇ,

ಸಂವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ನಮ್ಮ ಸಂವಿಧಾನ ನಿರ್ಮಾತೃಗಳು ಬಹು ವರ್ಷಗಳಿಂದ ನಮ್ಮನ್ನು ಬಿಗಿ ಹಿಡಿತದಲ್ಲಿ ಬಂಧಿಸಿಟ್ಟಿದ್ದ ಲಿಂಗಭೇದ, ಜಾತಿ, ಮತ ಭೇದಗಳಿಂದ ಮುಕ್ತಗೊಳಿಸಿ ಒಂದು ಸಂಚಲನವನ್ನು ಆರಂಭಿಸಿದರು. ಇದು ಸಾಮಾಜಿಕ ಮತ್ತು ಸಾಂಸ್ಕೃತಿಕ ಮುನ್ನಡೆಗೆ ಪ್ರೇರಣೆಯಾಯಿತಲ್ಲದೆ ಭಾರತೀಯ ಸಮಾಜವನ್ನು ಆಧುನಿಕತೆಗೆ ತೆರೆದುಕೊಳ್ಳುವಂತೆ ಮಾಡಿತು.

ಆಧುನಿಕ ರಾಷ್ಟ್ರವನ್ನು ಕೆಲವು ಅವಶ್ಯಕ ಮೂಲಭೂತ ತತ್ವಗಳೊಂದಿಗೆ ನಿರ್ಮಿಸಲಾಗುತ್ತದೆ. ಅವು ಪ್ರಜಾಪ್ರಭುತ್ವ ಅಥವಾ ಪ್ರತಿ ನಾಗರಿಕನಿಗೂ ಸಮಾನ ಹಕ್ಕು, ಜಾತ್ಯಾತೀತತೆ ಅಥವಾ ಪ್ರತಿಯೊಬ್ಬರ ನಂಬಿಕೆಗೂ ಸಮಾನ ಸ್ವಾತಂತ್ರ್ಯ, ಪ್ರಾದೇಶಿಕ ಮತ್ತು ಆರ್ಥಿಕ ಸಮಾನತೆ. ಅಭಿವೃದ್ಧಿಗೆ ವಾಸ್ತವಿಕ ರೂಪ ನೀಡಲು ದೇಶದ ಕಡುಬಡವನಲ್ಲು ಕೂಡಾ ರಾಷ್ಟ್ರ ನಿರ್ಮಾಣದಲ್ಲಿ ತನ್ನದೂ ಪಾಲಿದೆ ಎಂಬ ಭಾವನೆ ಮೂಡಬೇಕು.

ಪ್ರಿಯ ನಾಗರಿಕರೆ,

5 ವರ್ಷಗಳ ಹಿಂದೆ ನಾನು ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುತ್ತೇನೆ ಕಾಪಾಡುತ್ತೇನೆ ಮತ್ತು ಸಮರ್ಥಿಸಿಕೊಳ್ಳುತ್ತೇನೆ ಎಂದು ಕೇವಲ ಮಾತಿನಲ್ಲಿ ಹೇಳಿರಲಿಲ್ಲ. ಆತ್ಮಸಾಕ್ಷಿಯಾಗಿ ಪ್ರಮಾಣ ಮಾಡಿದ್ದೆ.

ಈ 5 ವರ್ಷಗಳ ಪ್ರತಿದಿನವೂ ನನಗೆ ನನ್ನ ಜವಾಬ್ದಾರಿಗಳ ಅರಿವಿತ್ತು.

ನಾನು ದೇಶದ ಉದ್ದಗಲಕ್ಕೂ ಪ್ರವಾಸ ಮಾಡಿ ಕಲಿತಿದ್ದೇನೆ. ವಿಶ್ವದಾದ್ಯಂತ ಕಾಲೇಜುಗಳು, ವಿಶ್ವವಿದ್ಯಾಲಯಗಳಲ್ಲಿರುವ ಯುವ ಪ್ರತಿಭಾವಂತರ ಜೊತೆ, ವಿಜ್ಞಾನಿಗಳು, ಆವಿಷ್ಕಾರಿಗಳು, ಪಂಡಿತರು, ನ್ಯಾಯ ಶಾಸ್ತ್ರವೇತ್ತರು, ಬರಹಗಾರರು, ಕಲಾವಿದರು ಮತ್ತು ನಾಯಕರೊಂದಿಗಿನ ಸಂವಾದದ ಮೂಲಕ ನಾನು ಕಲಿತಿದ್ದೇನೆ.

ಈ ಸಂವಾದ ನನ್ನನ್ನು ಏಕಾಗ್ರಚಿತ್ತನಾಗಿರುವಂತೆ ಪ್ರೇರಣೆ ನೀಡುತ್ತದೆ.

ನನ್ನ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ನಾನು ಪ್ರಬಲ ಪ್ರಯತ್ನ ಮಾಡಿದ್ದೇನೆ.

ನಾನು ಇದರಲ್ಲಿ ಎಷ್ಟರಮಟ್ಟಿಗೆ ಯಶಸ್ಸು ಕಂಡಿದ್ದೆ ಎಂಬುದನ್ನು ಇತಿಹಾಸದ ಕಠಿಣ ಮಾನದಂಡವೇ ನಿರ್ಧರಿಸಬೇಕು.

ಪ್ರಿಯ ನಾಗರಿಕರೇ,

ಒಬ್ಬ ವ್ಯಕ್ತಿಗೆ ವಯಸ್ಸಾಗುತ್ತಾ ಹೋದಂತೆ ಉಪದೇಶ ನೀಡುವತ್ತ ಒಲವು ಹೆಚ್ಚುತ್ತದೆ. ಆದರೆ ಉಪದೇಶಿಸಲು ನನ್ನ ಬಳಿ ಏನೂ ಇಲ್ಲ. ಕಳೆದ 50 ವರ್ಷಗಳ ನನ್ನ ಸಾರ್ವಜನಿಕ ಜೀವನದಲ್ಲಿ ಭಾರತದ ಸಂವಿಧಾನವೇ ನನಗೆ ಪವಿತ್ರ ಗ್ರಂಥ, ಸಂಸತ್ತೇ ನನ್ನ ದೇವಾಲಯ ಮತ್ತು ಭಾರತೀಯರ ಸೇವೆಯೇ ನನ್ನ ಒಲವಾಗಿತ್ತು.

ಈ ಅವಧಿಯಲ್ಲಿ ನಾನು ಕಂಡುಕೊಂಡ ಕೆಲ ಸತ್ಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ : ಭಾರತದ ಆತ್ಮ ಬಹುತ್ವ ಮತ್ತು ಸಹಿಷ್ಣುತೆಯಲ್ಲಡಗಿದೆ.

ಭಾರತ ಕೇವಲ ಭೌಗೋಳಿಕ ಅಸ್ತಿತ್ವ ಹೊಂದಿಲ್ಲ, ಅದು ಕೆಲವು ಕಲ್ಪನೆಗಳ, ತತ್ವಶಾಸ್ತ್ರ, ಜ್ಞಾನದಾಹಿಗಳ, ಔದ್ಯಮಿಕ ಪ್ರತಿಭಾವಂತರ, ಕರಕುಶಲತೆ, ನಾವೀನ್ಯತೆ ಮತ್ತು ಅನುಭವದ ಇತಿಹಾಸವನ್ನೇ ಹೊಂದಿದೆ. ಶತಮಾನಗಳಿಂದಲೂ ಕ್ರೋಢಿಕರಿಸಿದ ಕಲ್ಪನೆಗಳಿಂದ ನಮ್ಮ ಸಮಾಜ ಪರ ಸಂಬಂಧಗಳು ನಿರ್ಮಾಣಗೊಂಡಿವೆ. ಸಾಂಸ್ಕೃತಿಕ ವಿಭಿನ್ನತೆ, ಬಹುಭಾಷೆ ಮತ್ತು ಅಖಂಡ ನಂಬಿಕೆ ಭಾರತವನ್ನು ವಿಶೇಷವನ್ನಾಗಿಸುತ್ತದೆ. ಸಹಿಷ್ಣುತೆಯಿಂದಲೇ ನಮಗೆ ಶಕ್ತಿ ದೊರೆಯುತ್ತದೆ. ಅದು ಶತಮಾನಗಳಿಂದಲೂ ನಮ್ಮ ಸಾಮೂಹಿಕ ಪ್ರಜ್ಞೆಯ ಭಾಗವಾಗಿದೆ. ಸಾರ್ವಜನಿಕ ವಿಭಿನ್ನತೆಯ ಮತ್ತೊಂದು ಮಗ್ಗುಲಾಗಿದೆ. ನಾವು ವಾದ ಮಾಡಬಹುದು, ಒಪ್ಪಬಹುದು ಇಲ್ಲವೆ ಒಪ್ಪದಿರಬಹುದು ಆದರೆ ನಾವು ವಿವಿಧತೆಯ ಅಭಿಮತದಲ್ಲಿರುವ ಸಾರವನ್ನು ನಿರಾಕರಿಸಲಾಗದು. ಇಲ್ಲವಾದಲ್ಲಿ ನಮ್ಮ ಆಲೋಚನಾಲಹರಿಯ ಮೂಲಭೂತ ಅಂಶವೇ ಮರೀಚಿಕೆಯಾದಂತಾಗುತ್ತದೆ. ಸಹಾನುಭೂತಿ ಮತ್ತು ಹೊಂದಾಣಿಕೆಯ ಸಾಮರ್ಥ್ಯವೇ ನಮ್ಮ ನಾಗರಿಕತೆಯ ನಿಜವಾದ ಅಡಿಪಾಯವಾಗಿದೆ. ಆದರೆ ಪ್ರತಿದಿನ ನಮ್ಮ ಸುತ್ತಲೂ ಹಿಂಸಾಚಾರ ಹೆಚ್ಚುತ್ತಿರುವುದನ್ನು ನಾವು ಕಾಣುತ್ತೇವೆ. ಈ ಹಿಂಸೆಯ ಎದೆಯೊಳಗೆ ಗಾಢಾಂಧಕಾರ, ಭಯ ಮತ್ತು ಅಪನಂಬಿಕೆ ನೆಲೆಸಿವೆ. ಸಾರ್ವಜನಿಕ ವಲಯವನ್ನು ನಾವು ದೈಹಿಕ ಮತ್ತು ಮೌಖಿಕ ಹಿಂಸೆಯಿಂದ ಮುಕ್ತಗೊಳಿಸಬೇಕು. ಅಹಿಂಸಾತ್ಮಕ ಸಮಾಜ ಮಾತ್ರ ಎಲ್ಲ ವರ್ಗದ ಜನರು ಅದರಲ್ಲೂ ಕೆಳವರ್ಗದರು ಮತ್ತು ವಂಚಿತರು ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದನ್ನು ಖಾತರಿಪಡಿಸಬಲ್ಲದು. ಸಹಾನುಭೂತಿಯುಳ್ಳ ಮತ್ತು ಕಾಳಜಿಯುಕ್ತ ಸಮಾಜ ನಿರ್ಮಾಣಕ್ಕೆ ಅಹಿಂಸೆಯ ಪುನರ್ಜನ್ಮದ ಅವಶ್ಯಕತೆಯಿದೆ. ನಮ್ಮ ಅಸ್ತಿತ್ವಕ್ಕಾಗಿ ಪರಿಸರ ಸಂರಕ್ಷಣೆ ಅವಶ್ಯಕವಾಗಿದೆ.

ನಮ್ಮನ್ನು ಪುರಸ್ಕರಿಸುವುದರಲ್ಲಿ ಪ್ರಕೃತಿ ಸಾಕಷ್ಟು ಕರುಣಾಮಯಿಯಾಗಿತ್ತು ಆದರೆ ಅವಶ್ಯಕತೆಯನ್ನು ಮೀರಿ ದುರಾಸೆ ಬೆಳೆದಾಗ ಪ್ರಕೃತಿ ತನ್ನ ಆಕ್ರೋಶವನ್ನು ವ್ಯಕ್ತಪಡಿಸುತ್ತದೆ. ನಾವು ಎಷ್ಟೋ ಬಾರಿ, ದೇಶದ ಒಂದು ಭಾಗದಲ್ಲಿ ಅತೀವವಾದ ಪ್ರವಾಹವಿದ್ದರೆ ಇನ್ನೊಂದೆಡೆ ಬರಗಾಲ ಇರುವುದನ್ನು ನೋಡುತ್ತೇವೆ. ಹವಾಮಾನ ವೈಪರೀತ್ಯ ರೈತಾಪಿ ವರ್ಗವನ್ನು ಬಹಳ ಸಂಕಷ್ಟಕ್ಕೀಡು ಮಾಡಿದೆ. ನಮ್ಮ ಮಣ್ಣಿನ ಫಲವತ್ತತೆ ಮರುಕಳಿಸುವಂತೆ ಮಾಡಲು, ಕುಸಿದ ಜಲಸಂಪನ್ಮೂಲಗಳನ್ನು ಪುನರುಜ್ಜೀವನಗೊಳಿಸಲು ಮತ್ತು ಪರಿಸರದ ಸಮತೋಲನ ಕಾಯ್ದುಕೊಳ್ಳಲು ವಿಜ್ಞಾನಿಗಳು ಮತ್ತು ತಂತ್ರಜ್ಞರು, ಕೋಟ್ಯಾಂತರ ರೈತರು ಮತ್ತು ಕೆಲಸಗಾರರೊಡಗೂಡಿ ಕಾರ್ಯ ನಿರ್ವಹಿಸಬೇಕಾಗಿದೆ. ಎಲ್ಲರನ್ನೊಳಗೊಂಡ ಸಮಾಜ ನಿರ್ಮಾಣ ನಮಗೆ ನಂಬಿಕೆಯ ವಿಷಯವಾಗಬೇಕು.

ನಾನು ರಾಷ್ಟ್ರಪತಿ ಹುದ್ದೆ ಯ ಪ್ರಮಾಣವಚನ ಸ್ವೀಕರಿಸುವಾಗ ವಿದ್ಯೆಯೊಂದೇ ಭಾರತವನ್ನು ಮುಂದಿನ ಸುವರ್ಣಯುಗದತ್ತ ಕೊಂಡೊಯ್ಯಬಲ್ಲ ಮಾರ್ಗ ಎಂದು ಹೇಳಿದ್ದೆ. ವಿದ್ಯಾಭ್ಯಾಸದ ಪರಿವರ್ತನಾ ಶಕ್ತಿಯಿಂದಲೇ ಸಮಾಜದ ಪುನರ್‌ನಿರ್ಮಾಣ ಸಾಧ್ಯ. ಅದಕ್ಕಾಗಿ ನಾವು ನಮ್ಮ ಉನ್ನತ ಶಿಕ್ಷಣವನ್ನು ವಿಶ್ವ ದರ್ಜೆಗೆ ಏರಿಸಬೇಕಾಗಿದೆ. ನಮ್ಮ ಶೈಕ್ಷಣಿಕ ಪದ್ಧತಿಯ ಮೂಲಕ ಅಡೆತಡೆಗಳನ್ನು ಸಾಮಾನ್ಯ ಘಟನೆಯಂತೆ ಸ್ವೀಕರಿಸಬೇಕು ಮತ್ತು ನಮ್ಮ ವಿದ್ಯಾರ್ಥಿಗಳನ್ನು ಅಡೆತಡೆಗಳನ್ನು ಮೆಟ್ಟಿ ಮುಂದೆ ಸಾಗುವಂತೆ ರೂಪಿಸಬೇಕು. ನಮ್ಮ ವಿಶ್ವವಿದ್ಯಾಲಯಗಳನ್ನು ಕಂಠಪಾಠ ಮಾಡುವ ತಾಣಗಳನ್ನಾಗಿಸುವ ಬದಲಾಗಿ ಜಿಜ್ಞಾಸೆಯ ಜನರು ಸೇರುವ ಸಭಾಂಗಣವಾಗಿಸಬೇಕು. ನಮ್ಮ ಉಚ್ಚ ಶಿಕ್ಷಣ ಸಂಸ್ಥೆಗಳಲ್ಲಿ ರಚನಾತ್ಮಕ ಆಲೋಚನೆಗಳ, ನಾವೀನ್ಯತೆಯ ಮನಸ್ಸುಗಳ, ವೈಜ್ಞಾನಿಕ ವಿಚಾರಧಾರೆಗಳನ್ನು ಪ್ರೋತ್ಸಾಹಿಸಬೇಕು. ಇದು ಚರ್ಚೆ, ವಾದ ಮತ್ತು ವಿಶ್ಲೇಷಣೆ ಮೂಲಕ ತರ್ಕಕ್ಕೆ ಎಡೆ ಮಾಡಿಕೊಡುತ್ತದೆ. ಈ ಗುಣಗಳನ್ನು ಬೆಳೆಸಿ ಮನೋ ಸ್ವಾಯತ್ತತೆಯನ್ನು ಪ್ರೋತ್ಸಾಹಿಸಬೇಕು.

ನಮಗೆ ಒಗ್ಗಟ್ಟಿನ ಸಮಾಜದ ನಿರ್ಮಾಣವೆಂಬುದು ನಂಬಿಕೆಯುಳ್ಳ ಲೇಖನದಂತಿರಬೇಕು. ಗಾಂಧೀಜಿ ಭಾರತವನ್ನು ಸಮಾಜದ ಪ್ರತಿಯೊಂದು ವರ್ಗದ ಜನರೂ ಸಮಾನರಾಗಿ ಬಾಳುವ ಮತ್ತು ಸಮಾನ ಅವಕಾಶಗಳನ್ನು ಅನುಭವಿಸುವ ಸಮಗ್ರ ರಾಷ್ಟ್ರವಾಗಿ ಕಂಡಿದ್ದರು. ನಮ್ಮ ಜನರು ಒಗ್ಗಟ್ಟಿನಿಂದ ವಿಶಾಲವಾದ ವಿಚಾರಧಾರೆ ಮತ್ತು ಕ್ರಿಯೆಯೊಂದಿಗೆ ಮುಂದೆ ಸಾಗಬೇಕು ಎಂದು ಅವರು ಬಯಸುತ್ತಿದ್ದರು. ಆರ್ಥಿಕ ಸೇರ್ಪಡೆ, ಸಮಾನತೆಯುಳ್ಳ ಸಮಾಜದ ಪ್ರಮುಖ ಆಧಾರವಾಗಿದೆ. ನಾವು ಕಡುಬಡವನನ್ನೂ ಸಶಕ್ತಗೊಳಿಸಬೇಕು ಮತ್ತು ನಮ್ಮ ನೀತಿ ನಿಯಮಗಳ ಲಾಭ ಸರದಿಯಲ್ಲಿರುವ ಕೊನೇ ವ್ಯಕ್ತಿಗೂ ತಲುಪಲಿ ಎಂಬುದನ್ನು ದೃಢಪಡಿಸಬೇಕು.

ಒಂದು ಆರೋಗ್ಯಪೂರ್ಣ, ನೆಮ್ಮದಿಯ ಸಾರ್ಥಕ ಜೀವನ ಪ್ರತಿ ನಾಗರೀಕನ ಮೂಲಭೂತ ಹಕ್ಕು. ಸಂತೋಷ ಮಾನವ ಜೀವನಕ್ಕೆ ಅತ್ಯಂತ ಪ್ರಮುಖವಾದುದು. ಸಂತೋಷ ಎಂಬುದು ಆರ್ಥಿಕ ಮತ್ತು ಆರ್ಥಿಕವಲ್ಲದ ಮಾನದಂಡಗಳ ಪರಿಣಾಮವಾಗಿದೆ. ನೆಮ್ಮದಿಯ ಗುರಿ, ನಿರಂತರವಾಗಿ ವಿಕಾಸದೆಡೆಗೆ ಸಾಗುತ್ತಿರುವ ಮಾನವ ಅಭಿವೃದ್ಧಿ, ಸಾಮಾಜಿಕ ಸೇರ್ಪಡೆ ಮತ್ತು ಪರಿಸರದ ಸ್ಥಿರತೆಯ ಮಿಶ್ರಣದ ಗುರಿಯೊಂದಿಗೆ ಮೇಳೈಸಿದೆ. ಬಡತನ ನಿರ್ಮೂಲನೆಯಿಂದ ಸಮೃದ್ಧಿಯ ವೇಗ ಹೆಚ್ಚುತ್ತದೆ. ಸುಸ್ಥಿರ ಪರಿಸರ ಭೂಮಿಯ ಸಂಪನ್ಮೂಲಗಳು ನಾಶವಾಗುವುದನ್ನು ತಡೆಯುತ್ತದೆ. ಸಾಮಾಜಿಕ ಸುಸ್ಥಿರತೆಯಿಂದ ಪ್ರಗತಿಯ ಫಲ ಎಲ್ಲರಿಗೂ ಸುಲಭವಾಗಿ ದೊರೆಯುತ್ತದೆ. ಉತ್ತಮ ಆಡಳಿತ, ಪಾರದರ್ಶಕ, ಜವಾಬ್ದಾರಿಯುತ ಮತ್ತು ರಾಜಕೀಯ ಸಂಸ್ಥೆಗಳ ಸಹಭಾಗಿತ್ವದ ಮೂಲಕ ಜನರಿಗೆ ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಅವಕಾಶ ಕಲ್ಪಿಸುತ್ತದೆ.

ನನ್ನ ದೇಶಬಾಂಧವರೆ,

ರಾಷ್ಟ್ರಪತಿ ಭವನದಲ್ಲಿ ನನ್ನ 5 ವರ್ಷಗಳ ಅವಧಿಯಲ್ಲಿ ನಾವು ಒಂದು ಮಾನವೀಯ ಮತ್ತು ನೆಮ್ಮದಿಯ ಟೌನ್‌ಶಿಪ್ ನಿರ್ಮಾಣದ ಪ್ರಯತ್ನ ಮಾಡಿದ್ದೇವೆ. ಸಂತೋಷ ಮತ್ತು ಗೌರವಯುತವಾದ, ಮಂದಹಾಸ ಮತ್ತು ನಗು, ಉತ್ತಮ ಆರೋಗ್ಯ, ಸುರಕ್ಷತೆಯ ಭಾವನೆ ಮತ್ತು ಸಕಾರಾತ್ಮ ಕಾರ್ಯಗಳೊಂದಿಗೆ ಕೂಡಿದಂತಹ ನೆಮ್ಮದಿಯನ್ನು ನಾವು ಕಂಡಿದ್ದೇವೆ. ನಾವು ಯಾವತ್ತೂ ನಗು ನಗುತ್ತ, ಜೀವನದ ಬಗ್ಗೆ ನಗುವ, ಪ್ರಕೃತಿಯೊಂದಿಗೆ ಬೆರೆಯುವ ಮತ್ತು ಸಮುದಾಯಗಳೊಂದಿಗೆ ಬೆರೆಯುವುದನ್ನು ಕಲಿತಿದ್ದೇವೆ. ನಂತರ ನಾವು ನಮ್ಮ ಅನುಭವವನ್ನು ನೆರೆಹೊರೆಯ ಕೆಲ ಗ್ರಾಮಗಳಿಗೂ ಪಸರಿಸಿದೆವು. ನಮ್ಮ ಪಯಣ ಇನ್ನೂ ಸಾಗುತ್ತಲೇ ಇದೆ.

ಪ್ರಿಯ ದೇಶಬಾಂಧವರೆ,

ನಾನು ನಿರ್ಗಮಿಸಲು ಸಿದ್ಧನಾಗುತ್ತಿದ್ದಂತೆ 2012ರ ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ಸಂಜೆ ರಾಷ್ಟ್ರವನ್ನುದ್ದೇಶಿಸಿ ನೀಡಿದ ಪ್ರಥಮ ಭಾಷಣದಲ್ಲಿ ಮಾತನಾಡಿದ್ದನ್ನು ಮತ್ತೊಮ್ಮೆ ಹೇಳಬಯಸುತ್ತೇನೆ. ಈ ಉಚ್ಚ ಪದವಿಯಿಂದ ನನ್ನನ್ನು ಸನ್ಮಾನಿಸಿದ್ದಕ್ಕೆ ದೇಶದ ಸಮಸ್ತ ನಾಗರಿಕರಿಗೆ ಮತ್ತು ಅವರ ಪ್ರತಿನಿಧಿಗಳಿಗೆ ಕೃತಜ್ಞತೆಯನ್ನು ತಿಳಿಸಲು ನನ್ನ ಬಳಿ ಶಬ್ದಗಳೇ ಇಲ್ಲದಂತಾಗಿದೆ. ಆದರೂ ಕೂಡ, ನನಗೆ ತಿಳಿದಂತೆ ಪ್ರಜಾಸತ್ತಾತ್ಮಕತೆಯಲ್ಲಿ ಯಾವುದೇ ಪದವಿಯಲ್ಲಿ ಸರ್ವೋಚ್ಚ ಗೌರವವಿಲ್ಲ ಬದಲಾಗಿ ನಮ್ಮ ಮಾತೃಭೂಮಿ, ಭಾರತದ ನಾಗರಿಕನಾಗುವುದರಲ್ಲಿದೆ. ನಮ್ಮ ತಾಯಿಗೆ ನಾವೆಲ್ಲ ಮಕ್ಕಳಂತೆ. ರಾಷ್ಟ್ರ ನಿರ್ಮಾಣದ ಕೆಲಸದಲ್ಲಿ ನಾವು ಯಾವುದೇ ಪಾತ್ರ ವಹಿಸಿದರೂ ಸಂಪೂರ್ಣ ಪ್ರಾಮಾಣಿಕತೆಯಿಂದ, ಸಮರ್ಪಣಾ ಭಾವದೊಂದಿಗೆ, ನಮ್ಮ ಸಂವಿಧಾನದಲ್ಲಿ ಅಂಕಿತಗೊಳಿಸಿದ ಮೌಲ್ಯಗಳಲ್ಲಿ ದೃಢ ನಿಷ್ಠೆಯಿಟ್ಟು ಅದನ್ನು ನಿಭಾಯಿಸಬೇಕು ಎಂದು ಭಾರತ ಪ್ರತಿಯೊಬ್ಬರಿಂದಲೂ ಅಪೇಕ್ಷಿಸುತ್ತದೆ.

ನಾಳೆ ನಾನು ನಿಮ್ಮೊಂದಿಗೆ ಮಾತನಾಡುವಾಗ ಒಬ್ಬ ರಾಷ್ಟ್ರಪತಿಯಾಗಿ ಅಲ್ಲ, ಆದರೆ ಒಬ್ಬ ನಾಗರಿಕನಂತೆ ನಿಮ್ಮಂತೆಯೇ ಭಾರತದ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿರುವ ಒಬ್ಬ ಯಾತ್ರಿಯಂತೆ ಮಾತನಾಡುತ್ತೇನೆ.

ಧನ್ಯವಾದ ಜೈಹಿಂದ್

ಪಿ ಐ ಬಿ

ಕೊನೆಯ ಮಾರ್ಪಾಟು : 7/25/2017



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate