ಈಚೆಗೆ ಆತಿಶ್ ತಾಸಿರ್ ಎಂಬ ಚಿಂತಕ ಬರೆದ ಲೇಖನವನ್ನು ಆಕಸ್ಮಿಕವಾಗಿ ಓದಿದೆ. ಅದರಲ್ಲಿ ಇಂಗ್ಲಿಷ್ ಭಾಷೆ ಹೇಗೆ ಭಾರತೀಯ ಭಾಷೆಗಳಲ್ಲಿರುವ ಸಾಹಿತ್ಯವನ್ನು ನಾಶಮಾಡುತ್ತಿದೆ ಎಂಬ ಬಗ್ಗೆ ಸ್ವಾರಸ್ಯಕರ ಚರ್ಚೆ ಇದೆ. ಭಾಷೆ ಸೃಷ್ಟಿಸುವ ವರ್ಗಭೇದವು ವರ್ಣಭೇದಕ್ಕಿಂತ ಕಡಿಮೆಯಾದುದಲ್ಲ ಎನ್ನುವ ತಾಸಿರ್, ‘ಭಾರತದಲ್ಲಿ ಅಸಲಿಗೆ ಇಂಗ್ಲಿಷ್ ಬರೀ ಭಾಷೆಯಲ್ಲ, ಅದೊಂದು ವರ್ಗ’ ಎನ್ನುತ್ತಾರೆ. ಬಹುಭಾಷಿಕ ದೇಶವಾದ ಭಾರತಕ್ಕೆ ಎಲ್ಲರನ್ನೂ ಬೆಸೆಯುವ ಒಂದು ಸಾಮಾನ್ಯ ಸಂವಹನದ ಭಾಷೆ ಅಗತ್ಯವಿದೆ ನಿಜ. ಆದರೆ ಈ ಕೆಲಸವನ್ನು ಭಾರತದ ಯಾವುದೇ ಜನಭಾಷೆಯ ಬದಲು ಇಂಗ್ಲಿಷ್ ವಹಿಸಿಕೊಂಡಿದ್ದರಿಂದ, ವಸಾಹತುಶಾಹಿ ಗುಲಾಮಗಿರಿ ಮುಂದುವರೆಯಿತು. ಮಾತ್ರವಲ್ಲ, ಅದು ಹುಟ್ಟಿಸಿರುವ ಜೀತಮನೋಭಾವ ವಸಾಹತುಶಾಹಿ ಆಳ್ವಿಕೆಯ ಕಾಲದಲ್ಲಿ ಮಾಡಿದ್ದಕ್ಕಿಂತ ಹೆಚ್ಚಿನ ಹಾನಿಯನ್ನು ಮಾಡುತ್ತಿದೆ ಎನ್ನುತ್ತಾರೆ.
ತಮ್ಮ ಚಿಂತನೆ ಬೆಳೆಸಲು ತಾಸಿರ್, ಬನಾರಸ್ ವಿಶ್ವವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳ ಜತೆ ಮಾಡಿದ ಚರ್ಚೆ ಬಳಸಿಕೊಳ್ಳುತ್ತಾರೆ. ಅವರಲ್ಲೊಬ್ಬ ಬ್ಯಾಸ್ಕೆಟ್‌ಬಾಲ್ ಆಟಗಾರ. ಆಂಗ್ಲಮಾಧ್ಯಮದಲ್ಲಿ ಬಿ.ಎ. ಓದುತ್ತಿರುವ ಅವನಿಗೆ ಇಂಗ್ಲಿಷಿನಲ್ಲಿ ಒಂದು ಸ್ವತಂತ್ರ ವಾಕ್ಯವನ್ನೂ ರಚಿಸುವ ಕಸುವಿಲ್ಲ. ತಾನು ಕಲಿಯುತ್ತಿರುವ ವಿಷಯಗಳು ಅರ್ಥವಾದಂತೆ ನಟಿಸುತ್ತಿದ್ದೇನೆಂದೂ ವಾಸ್ತವದಲ್ಲಿ ಅವು ತನಗೆ ಜೀರ್ಣವಾಗಿಲ್ಲವೆಂದೂ ಆತ ಖಾಸಗಿಯಾಗಿ ಒಪ್ಪಿಕೊಳ್ಳುತ್ತಾನೆ. ಎರಡನೇ ವಿದ್ಯಾರ್ಥಿ, ಸಂಸ್ಕೃತ ಭಾಷೆಯ ಪ್ರಾಚೀನ ವ್ಯಾಕರಣದಲ್ಲಿ ನಿಜವಾಗಿಯೂ ವಿದ್ವತ್ತಿದ್ದವನು. ಅದನ್ನು ಹಿಂದಿಯಲ್ಲಿ ಚೆನ್ನಾಗಿ ವ್ಯಕ್ತಮಾಡಬಲ್ಲವನು. ಆದರೆ ಇಂಗ್ಲಿಷಿಲ್ಲದ ಕಾರಣದಿಂದ ಅವನಲ್ಲಿ ಒಂದು ಬಗೆಯ ಅಧೀರತೆಯಿದೆ. ಇಂತಹವರು ಎರಡನೇ ದರ್ಜೆಯ ಕೆಲಸಗಳಲ್ಲಿ ತಮ್ಮ ಜೀವನ ಮುಗಿಸಬಹುದು ಎಂದು ತಾಸಿರ್ ವಿಷಾದಿಸುತ್ತಾರೆ.
ತಾಸಿರ್ ಪ್ರಕಾರ, ಇಂಗ್ಲಿಷ್ ಸಾಹಿತ್ಯ ಲೋಕದಲ್ಲಿ ಭಾರತದಿಂದ ಬಂದ ಅನೇಕ ಲೇಖಕರಿದ್ದಾರೆ. ಇವರೆಲ್ಲ ಭಾರತದಿಂದ ಪಶ್ಚಿಮಕ್ಕೆ ಹೋದವರಲ್ಲ. ಪಶ್ಚಿಮದ ಪ್ರಕಟಣೆ ಮತ್ತು ಪ್ರಶಸ್ತಿ ಲಾಬಿಗಳ ಕಾರಣದಿಂದ ಭಾರತದ ಸಮಾಜಕ್ಕೆ ಪ್ರವೇಶ ಪಡೆದವರು. ತಾಸಿರ್, ಪಶ್ಚಿಮದ ಸಂಸ್ಕೃತಿಯನ್ನು ಕುರುಡಾಗಿ ಅನುಕರಿಸುತ್ತ ಸ್ವಂತ ಸಂಸ್ಕೃತಿಯ ಬಗ್ಗೆ ಕೀಳರಿಮೆ ಅನುಭವಿಸುತ್ತಿದ್ದ 19ನೇ ಶತಮಾನದ ರಷ್ಯಾದ ನಿದರ್ಶನ ಕೊಡುವರು. ಅವರ ಪ್ರಕಾರ, ಭಾರತದಲ್ಲಿ ರಷ್ಯಾಕ್ಕಿಂತ ಭಯಂಕರ ಸನ್ನಿವೇಶ ನಿರ್ಮಾಣವಾಗಲಿದೆ.
ಮಧ್ಯಮವರ್ಗದ ತಂದೆತಾಯಿಗಳು ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸುತ್ತಿರುವ ಈ ಕಾಲದಲ್ಲಿ, ಬಹುಭಾಷಿಕ ಅಭಿವ್ಯಕ್ತಿ ಸಾಮರ್ಥ್ಯಗಳು ಮಕ್ಕಳಿಂದ ಮರೆಯಾಗಿ ಇಂಗ್ಲಿಷೊಂದೇ ಉಳಿದುಕೊಳ್ಳುತ್ತಿದೆ. ಯಾವ ದೇಶದ ಜನರೂ ವಿದೇಶಿ ಭಾಷೆಯಲ್ಲಿ ಶಕ್ತವಾದುದನ್ನು ಬರೆಯಲಾರರು. ಭಾರತದಲ್ಲಿ ಭಾಷೆಯ ಕಾರಣದಿಂದ ವರ್ಗ ಮತ್ತು ಅಧಿಕಾರಗಳ ಆಳವಾದ ಕಂದರ ನಿರ್ಮಾಣಕ್ಕೆ ಕಾರಣವಾಗಿದೆ. ಭಾರತದಲ್ಲಿ ಸರ್ಕಾರಗಳನ್ನು ಬದಲಿಸುವುದು ಸುಲಭ. ಆದರೆ ಯಾವುದೇ ಸರ್ಕಾರ ಬಂದರೂ ಅಲುಗದಂತೆ ಬೇರೂರಿರುವ ಭಾಷಿಕ ಗುಲಾಮಗಿರಿಯನ್ನು ಬದಲಿಸುವುದು ಕಷ್ಟ. ಭಾರತದಲ್ಲಿ ವಸಾಹತುಶಾಹಿ ಶಿಕ್ಷಣ ಮಾದರಿಯನ್ನು ಒಡೆಯದೆ, ಅಧಿಕಾರ ಮತ್ತು ಭಾಷೆಯ ನಡುವಣ ಸಂಬಂಧವನ್ನು ಪುನರ್‌ರೂಪಿಸಲು ಸಾಧ್ಯವೇ ಇಲ್ಲ ಎಂದು ತಾಸಿರ್ ಹೇಳುತ್ತಾರೆ.
ಈ ಚರ್ಚೆಯ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವ ಮತ್ತು ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಯುವ ಎರಡು ಮಸೂದೆಗಳನ್ನು ಶಾಸನಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆದಿರುವುದರ ಕುರಿತು ಚರ್ಚಿಸಬಹುದು. ಈ ವಿದ್ಯಮಾನವು ತಾಯ್ನುಡಿಗಳ ಸಹಜಹಕ್ಕು ಗೇಲಿಗೆ ಒಳಗಾಗುತ್ತಿದ್ದ ಸನ್ನಿವೇಶದಲ್ಲಿ ಭರವಸೆ ಚಿಗುರಿಸಿರುವ ಸಂಗತಿಯಾಗಿದೆ. ಕಳೆದ ಕೆಲವು ವರ್ಷಗಳಿಂದ ಮಕ್ಕಳ ಅಥವಾ ಅವರ ತಂದೆತಾಯಿಗಳ ಹಕ್ಕಿನ ಪರಿಭಾಷೆಯಲ್ಲಿ ನ್ಯಾಯಾಲಯಗಳು ಇಂಗ್ಲಿಷಿನ ಪರವಾದ ತೀರ್ಪು ಕೊಡುತ್ತ, ಶಿಕ್ಷಣದ ಹೆಸರಲ್ಲಿ ವ್ಯಾಪಾರ ಮಾಡುತ್ತಿರುವ ಸಂಸ್ಥೆಗಳು ಅದರ ಫಾಯದೆಯನ್ನು ಪಡೆಯುತ್ತ, ಕಲಿಕೆಯ ಮಾಧ್ಯಮವಾಗಿ ತಾಯ್ನುಡಿಯಲ್ಲಿ ಕಲಿಯುವ ಸಂಗತಿಯನ್ನು ಆತಂಕದಲ್ಲಿಟ್ಟಿದ್ದವು. ಪರದೇಶದ ನುಡಿಯ ಸಂಗವಿಲ್ಲದೆ ತನ್ನ ಬದುಕೇ ಸಾಧ್ಯವಿಲ್ಲ ಎಂಬ ದಾರುಣ ಅವಸ್ಥೆಯನ್ನು ಮುಟ್ಟಿರುವ ನತದೃಷ್ಟ ಸಮಾಜಗಳಲ್ಲಿ ನಮ್ಮದೂ ಒಂದು. ಈ ಹಿನ್ನೆಲೆಯಲ್ಲಿ ಸರ್ಕಾರದ ಈ ಉಪಕ್ರಮವು ಭಾರತದ ತಾಯ್ನುಡಿಗಳ ಇಲ್ಲವೇ ಪ್ರಾದೇಶಿಕ ನುಡಿಗಳ ಹಕ್ಕನ್ನು ಪಡೆದುಕೊಳ್ಳುವ ದಿಸೆಯಲ್ಲಿ ತಡವಾಗಿಯಾದರೂ ಇಟ್ಟಿರುವ ಸರಿಯಾದ ಹೆಜ್ಜೆಯಾಗಿದೆ.
ಒಂದು ನಾಡಿನ ತಮ್ಮ ತಾಯ್ನುಡಿ ಇಲ್ಲವೇ ಪರಿಸರದ ನುಡಿಗಳ ಮೂಲಕ ಶಿಕ್ಷಣ ಪಡೆಯುವ ಪ್ರಶ್ನೆಯು ಶಿಕ್ಷಣದಲ್ಲಿ ಭಾಷೆಯಾಗಿ ಕಲಿಯುವ ಇಲ್ಲವೇ ಮಾಧ್ಯಮವಾಗಿ ಅಳವಡಿಸುವ ಉಪಕ್ರಮಕ್ಕೆ ಸೀಮಿತಗೊಳ್ಳುವುದಿಲ್ಲ. ಒಂದು ನಾಡು ತನ್ನದೇ ಆದ ಆರ್ಥಿಕತೆ ಮತ್ತು ರಾಜಕೀಯ ಸ್ವಾಯತ್ತತೆ ರೂಪಿಸಿಕೊಳ್ಳುವ ಸಂಗತಿಗೂ ವಿಸ್ತರಣೆಯಾಗಿದೆ. ತಿರುಳಿನಲ್ಲಿ ಇದು ಪ್ರಜಾಪ್ರಭುತ್ವವನ್ನು ಅದರ ಕನಿಷ್ಠ ಸ್ತರದಲ್ಲಿಯಾದರೂ ನಿಜಗೊಳಿಸಿಕೊಳ್ಳುವ ಸಂಗತಿಯೂ ಆಗಿದೆ. ಕಳೆದೆರಡು ದಶಕಗಳಿಂದ, ಮಾರುಕಟ್ಟೆಯ ಪರವಾದ ಶಕ್ತಿಗಳು ತಮಗೆ ಬೇಕಾದ ಶಿಕ್ಷಣನೀತಿಯನ್ನು ಹಾಗೆಯೇ ಆರ್ಥಿಕ ರಾಜಕೀಯ ವ್ಯವಸ್ಥೆಯನ್ನು ರೂಪಿಸಲು ಯತ್ನಿಸುತ್ತ ಬಂದಿವೆ; ತಮ್ಮ ಹಿತಾಸಕ್ತಿಯನ್ನು ದೇಶದ ಎಲ್ಲ ವರ್ಗಗಳ ನೀತಿಯೆಂಬಂತೆ ಮಂಡಿಸುತ್ತ ಜನರ ಒಪ್ಪಿಗೆಯನ್ನು ಸಹ ಉತ್ಪಾದಿಸುತ್ತಿವೆ. ಈ ಹುನ್ನಾರಕ್ಕೆ ಪೂರಕವಾಗಿಯೇ ಪ್ರಭುತ್ವಗಳು ತಮ್ಮ ನಡೆಯನ್ನು ತೋರುತ್ತ ಬಂದಿದ್ದವು. ಬಹುಶಃ ಅಸ್ತಿತ್ವವೇ ನಾಶವಾಗುವ ಅತಿಗೆ ಹೋದಾಗಲೇ ಉಳಿಸಿಕೊಳ್ಳುವ ಎಚ್ಚರ ಹುಟ್ಟುತ್ತದೆಯೊ ಏನೊ? ಈಗ ಅವಕ್ಕೆ ತುಸು ವಿವೇಕ ಬಂದಂತಿದೆ. ಇದಕ್ಕೆ ಜನಭಾಷೆಗಳ ಪರವಾಗಿ ದೇಶದಾದ್ಯಂತ ಹುಟ್ಟಿಕೊಳ್ಳುತ್ತಿರುವ ಎಚ್ಚರವೂ ಶಿಕ್ಷಣ ತಜ್ಞರ ಒತ್ತಾಸೆಯೂ ಕಾರಣವಾಗಿದೆ. ಲೇಖಕ ದೇವನೂರ ಮಹಾದೇವ ಮುಂತಾದವರು ಮಾತೃಭಾಷೆಗಳ ಹಕ್ಕನ್ನು ಕುರಿತು ಶ್ರವಣಬೆಳಗೊಳದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಳ್ಳುವ ವಿಷಯದಲ್ಲಿ ತೋರಿದ ನಿಷ್ಠುರ ನಿರಾಕರಣೆಯು ಈ ಒತ್ತಾಸೆಯನ್ನು ಆಂದೋಲನವಾಗಿ ರೂಪಿಸಲು ಮುನ್ನುಡಿ ಬರೆದಿದೆ. ಈ ದಿಸೆಯಲ್ಲಿ ಇದೇ 4 ಮತ್ತು 5ರಂದು ಧಾರವಾಡದಲ್ಲಿ, ದೇಶದಲ್ಲಿತಾಯ್ನುಡಿಗಳ ಹಕ್ಕಿನ ಪರವಾದ ಚಿಂತನೆ ಮತ್ತು ಹೋರಾಟವನ್ನು ಮಾಡುತ್ತ ಬಂದಿರುವ ಭಾರತದ ಪ್ರಮುಖ ಚಿಂತಕರು ಮತ್ತು ಚಳವಳಿಗಾರರು ಕಲೆಯುತ್ತಿದ್ದಾರೆ. ಇವರು ಮಾಡಲಿರುವ ಚಿಂತನೆ ಕರ್ನಾಟಕದಲ್ಲಿ ತಾಯ್ನುಡಿಗಳ ಪರವಾದ ಜನಾಂದೋಲನವನ್ನು ರೂಪಿಸಲಿ, ಈ ಆಂದೋಲನವು ದೇಶದ ತುಂಬ ಹಬ್ಬಿಕೊಂಡು, ತಾಯ್ನುಡಿಗಳ ಪರವಾಗಿ ಸಂವಿಧಾನಕ್ಕೆ ತಕ್ಕನಾದ ತಿದ್ದುಪಡಿ ಮಾಡುವ ತಾರ್ಕಿಕ ಕೊನೆ ಮುಟ್ಟಲಿ ಎಂದು ಆಸೆಪಡಬಹುದು.
ಕೊನೆಯ ಮಾರ್ಪಾಟು : 6/20/2020