ಸಮಾಜದಲ್ಲಿ ತಲತಲಾಂತರದಿಂದ ರೂಡಿಯಲ್ಲಿರುವ ಮೂಡನಂಬಿಕೆಗಳಲ್ಲಿ ಹೆಚ್ಚಿನವು ಒಳಗೊಳ್ಳುವುದು ಮಹಿಳೆಯನ್ನು. ಸಂಪ್ರದಾಯ ಮತ್ತು ನಂಬಿಕೆಗಳನ್ನು ಹುಟ್ಟುಹಾಕುವುದು ಪ್ರಮುಖವಾಗಿ ಸಮಾಜದ ಪುರುಷ ಪ್ರದಾನ ಪ್ರವೃತ್ತಿ. ಇದರಿಂದ ಹುಟ್ಟಿದ ಮೂಡನಂಬಿಕೆಗಳಿಗೆ ಮಹಿಳೆಯನ್ನೇ ಮುಖ್ಯವಾದ ಗುರಿಯಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ. ಏಸು ತನ್ನನ್ನು ಏರಿಸಲಿರುವ ಶಿಲುಬೆಯನ್ನು ಗೊಲ್ಗೊಥಾ ಗುಡ್ಡದ ತುದಿಗೆ ತಾನೇ ಹೊತ್ತುಕೊಂಡು ಹೋಗಬೇಕಾಯಿತಂತೆ. ಹಾಗೆಯೇ, ತಾನು ಬಲಿಯಾಗಬೇಕಾದ ಮೂಡನಂಬಿಕೆಗಳನ್ನು ಪೋಷಿಸಿಕೊಂಡು ಹೋಗುವುದೂ ಹೆಣ್ಣಿನ ಕರ್ತವ್ಯವಾಗಿ ಪರಿಗಣಿಸುವುದು ಸಮಾಜದ ವ್ಯವಸ್ತೆಯ ಒಂದು ವಿಪರ್ಯಾಸ. ತಾನು ಬಲಿಪಶುವಾಗಿಸುವ ಮೂಡನಂಬಿಕೆಗಳನ್ನು ನಿರಾಕರಿಸುವ, ಪ್ರತಿಭಟಿಸುವ ಬದಲು ಹೆಣ್ಣೇ ಅವುಗಳನ್ನು ವೈಭವೀಕರಿಸಿ, ಪಾಲಿಸಿಕೊಂಡು ಹೋಗಬೇಕಾದ ಪರಿಸ್ಥಿತಿ ಸಮಾಜದಲ್ಲಿ ಏರ್ಪಟ್ಟಿದೆ. ಅದೂ ಸಾಲದೆ, ಕುಟುಂಬದಲ್ಲಿ ಮಕ್ಕಳಿಗೆ 'ಸಂಸ್ಕೃತಿ', 'ಸತ್ಸಂಪ್ರದಾಯ' ಮುಂತಾದುವನ್ನು ಕಲಿಸಿಕೊಡುವುದು ಮುಖ್ಯವಾಗಿ ತಾಯಿಯ ಜವಾಬ್ದಾರಿಯಾಗಿದೆ ಹೀಗಾಗಿ, ಸಮಾಜದಲ್ಲಿನ ಮೂಡನಂಬಿಕೆಗಳನ್ನು ಗಟ್ಟಿಯಾಗಿ ಪೋಷಿಸಿಕೊಂಡು ಬರುವುದರ ಜೊತೆಯಲ್ಲಿ ಮಹಿಳೆಯು ತನ್ನ ಮುಂದಿನ ಪೀಳಿಗೆಗೂ ಇವುಗಳನ್ನು ಹಂಚಿಕೊಡುತ್ತಾಳೆ. ಇಲ್ಲಿಯೂ ಹೆಚ್ಚು ನಿಷ್ಟೆಯಿಂದ ಪಾಠ ದೊರೆಯುವುದು ಹೆಣ್ಣುಮಕ್ಕಳಿಗೆ ಎಂಬುದನ್ನು ನಾವು ಮರೆಯುವಂತಿಲ್ಲ. ಸಮಾಜದಲ್ಲಿ ಪ್ರಚಲಿತವಿರುವ ಅನೇಕ ಬಗೆಯ ಜೀವವಿರೋದಿ, ಮಾನವವಿರೋಧಿ ಮೂಡನಂಬಿಕೆಗಳ ಬಗ್ಗೆ ಈ ಕೃತಿಯ ಇತರ ಲೇಖನಗಳಲ್ಲಿ ಉಲ್ಲೇಖವಿದೆ.ನಾನು ಮುಖ್ಯವಾಗಿ ಮಹಿಳೆಯರನ್ನೇ ಬಲಿಪಶುವನ್ನಾಗಿಸಿರುವ ಕೆಲವು ವಿಶಿಷ್ಟ ಮೂಡನಂಬಿಕೆಗಳ ವಿಚಾರವನ್ನಷ್ಟೇ ಪ್ರಸ್ತಾಪಿಸುತ್ತೇನೆ..
ಋತುಮತಿಯಾಗುವುದಕ್ಕಿಂತ ಮುಂಚೆಯೇ ಹೆಣ್ಣುಮಕ್ಕಳಿಗೆ ಮದುವೆ ಮಾಡಬೇಕು ಇಲ್ಲವಾದರೆ ಹೆಣ್ಣು ಹೆತ್ತವರು ನರಕಕ್ಕೆ ಹೋಗುತ್ತಾರೆ ಎಂದು ನಂಬಲಾಗುತ್ತದೆ. ಅಂಥ ಪಾಲಕರನ್ನ ಸಮಾಜ ತುಂಬಾ ತುಚ್ಛವಾಗಿ ಕಾಣುತಿತ್ತು. ಯಾವತ್ತಿದ್ದರೂ ಹೆಣ್ಣು ಬೇರೆಯವರ ಮನೆಗೆ ಹೋಗಬೇಕು. ಅವಳಿಗೆ ಹುಟ್ಟಿದ ಮನೆಯಲ್ಲಿ ಸ್ಥಾನವಿಲ್ಲ ಆಸ್ತಿಗೆ ಅವಳು ಬಾಧ್ಯಸ್ತಳಲ್ಲ ಎಂಬ ಅಭಿಪ್ರಾಯದಿಂದಾಗಿ ಹೆಣ್ಣುಮಗುವಿಗೆ ತೊಟ್ಟಿಲಲ್ಲಿಯೇ ಬಾಸಿಂಗ ಕಟ್ಟುವ, ಎಂದರೆ ಮದುವೆ ಮಾಡುವ ಪದ್ದತಿ ಇತ್ತು. ಹೀಗಾಗಿ ಎಷ್ಟೋ ಮಹಿಳೆಯರು ಋತುಮತಿಯಾಗುವ ಮುಂಚೆಯೇ ವಿಧವೆಯಾಗುತ್ತಿದ್ದರು. ಇಲ್ಲವೇ ಮುದುಕ ಗಂಡಂದಿರೊಂದಿಗೆ ಸಂಸಾರ ಹೂಡುತ್ತಿದ್ದರು. ಹೆಣ್ಣು ಕೇವಲ ಪುರುಷನ ಭೋಗದ ವಸ್ತು ಎಂದು ಪರಿಗಣಿಸಿದ್ದರಿಂದ ಯಾವುದೇ ವಿಷಯಕ್ಕೂ ಅವಳ ಅಭಿಪ್ರಾಯ ಕೇಳುವ ಅವರ ಬಗೆಗೆ ಕಾಳಜಿ ವಹಿಸುವ ಪ್ರಮೇಯವೇ ಇರಲಿಲ್ಲ.
ವಿಪರ್ಯಾಸದ ಸಂಗತಿಯೆಂದರೆ ನಮ್ಮನ್ನು ಆಳುತ್ತಿದ್ದ ಪರಕೀಯರಿಗೆ (ಬ್ರಿಟಿಷರಿಗೆ) ಇದು ಅಸಹ್ಯವಾಗಿ ತೋರಿತು. ಅವರು ೧೯೨೯ರಲ್ಲಿಯೇ ಬಾಲ್ಯ ವಿವಾಹವನ್ನು ತಡೆಗಟ್ಟುವ ಕಾನೂನನ್ನು ತಂದರು. ಭಾರತ ಸರಕಾರವು ಈ ಕಾನೂನನ್ನು ೨೦೦೬ ರಲ್ಲಿ ತಿದ್ದುಪಡಿ ಮಾಡಿ ಬಾಲ್ಯ ವಿವಾಹವನ್ನು ನಿಷೇದಿಸಿದೆ.
ಈ ಕಾಯಿದೆ ಅನ್ವಯ ಹುಡುಗನಿಗೆ ೨೧ ವರ್ಷ ವಯಸ್ಸು ಹುಡುಗಿಗೆ ೧೮ ವರ್ಷ ವಯಸ್ಸು ಆಗಿದ್ದಾರೆ ಮಾತ್ರ ಮದುವೆ ಮಾಡಬೇಕು. ಈ ನಿಯಮ ಮೀರಿ ಮದುವೆ ಮಾಡಿದರೆ ಅಪ್ರಾಪ್ತ ವಯಸ್ಸಿನ ಮದುವೆ ಎಂದು ಪರಿಗಣಿಸಿ ಪಾಲಕರಿಗೆ ದಂಡ, ಕಾರಾಗೃಹ ಶಿಕ್ಷೆ ವಿಧಿಸಲಾಗುತ್ತದೆ. ಈ ಕಾನೂನಿನಿಂದಾಗಿ ಮತ್ತು ಆಧುನಿಕ ಶಿಕ್ಷಣ ಸುಧಾರಣಾವಾದಿ ಹೊಸ ಗಾಳಿಯಿಂದಾಗಿ ಬಾಲ್ಯವಿವಾಹಗಳು ಈಗ ಅಷ್ಟಾಗಿ ಜರುಗುತ್ತಿಲ್ಲವಾದರೂ ಅವು ಪೂರ್ತಿ ನಿಂತಿವೆ. ಎಂದು ಹೇಳುವಂತಿಲ್ಲ.
ಒಂದು ವಿಷಾದದ ಸಂಗತಿಯೆಂದರೆ ಇತ್ತೀಚಿನ ದಿನಗಳಲ್ಲಿ ಸಾಮೂಹಿಕ ವಿವಾಹಗಳ ನೆಪದಲ್ಲಿ ಮಠಗಳು, ಸಂಘ ಸಂಸ್ಥೆಗಳು, ಶ್ರೀಮಂತರ ಚಾರಿಟಬಲ್ ಸಂಘಗಳು ತಮ್ಮ ಪತಿಷ್ಟೆಯನ್ನು ಹೆಚ್ಚಿಸಿಕೊಳ್ಳಲೆಂದು ಮತ್ತೆ ಬಾಲ್ಯ ವಿವಾಹಕ್ಕೆ ಪ್ರೋತ್ಸಾಹ ನೀಡುತ್ತಿವೆ. ತಮ್ಮ (ಮೆಹಾರ್ಬಾನಿ) ಔದಾರ್ಯದ ಅಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮದುವೆಗಳನ್ನು ಮಾಡಬೇಕೆಂಬ ಹವ್ಯಾಸಕ್ಕೆ ಬಿದ್ದು ಸುಳ್ಳು ಪ್ರಮಾಣ ಪತ್ರಗಳನ್ನು ಸೃಷ್ಟಿಸಿ ಅಪ್ರಾಪ್ತ ವಯಸ್ಕರ ಮದುವೆಗಳನ್ನು ನೆರವೇರಿಸುತ್ತಿದ್ದರೆ, ಬಡವರ ಬಡತನವನ್ನು ದುರ್ಬಳಕೆ ಮಾಡಿಕೊಳ್ಳುವ ಇಂಥ ಹುಸಿ ಸುಧಾರಣಾ ಕ್ರಮಗಳು ಕೂಡ ಮಹಿಳೆಯರ ಬದುಕನ್ನು ಸರ್ವನಾಶ ಮಾಡುತ್ತವೆ. ಎಂಬುದನ್ನು ಗಮನಿಸಬೇಕು. ಆರ್ಥಿಕವಾಗಿ ಹಿಂದುಳಿದ ಮತ್ತು ಧಾರ್ಮಿಕ ಮಡಿವಂತಿಕೆಯುಳ್ಳ ಸಮುದಾಯಗಳಲ್ಲಿ ಇವತ್ತಿಗೂ ಬಾಲ್ಯವಿವಾಹಗಳು ಎಗ್ಗಿಲ್ಲದೆ ನಡೆಯುತ್ತಿರುವುದನ್ನು ನೋಡಬಹುದು. ಭಾರತದಲ್ಲಿ ಹೆರಿಗೆಯ ಸಂದರ್ಭದಲ್ಲಿ ತಾಯಿ ಇಲ್ಲವೇ ಮಗು ಸಾಯುವುದು ಇಂದಿಗೂ ಸಾಮಾನ್ಯ ಸಂಗತಿಯಾಗಿದೆ.
ಗಂಡ ಸತ್ತರೆ ಹೆಂಡತಿ ಆಗುವಳು ವಿಧವೆ
ಹೆಂಡತಿ ಸತ್ತರೆ ಗಂಡನು ಆಗುವನು ಮದುವೆ
ಎಂಬ ಮಾತು ಭಾರತೀಯ ಮಹಿಳೆಯರ ವೈವಾಹಿಕ ಬದುಕಿನ ದುರಂತವನ್ನು ಎತ್ತಿ ತೋರಿಸುತ್ತದೆ. ಗಂಡ ಸತ್ತ ಮಹಿಳೆಯರನ್ನು ಸಮಾಜದಲ್ಲಿ ಕೀಳಾಗಿ ಕಾಣಲಾಗುತ್ತಿತ್ತು. ಒಂದು ಕಾಲದಲ್ಲಿ ವಿಧವೆಯರ ತಲೆ ಕೂದಲು ಬೋಳಿಸಿ, ಕುಂಕುಮ ತೆಗೆದು, ಬಲೆ ಒಡೆದು ತೀರಾ ವಿಕಾರವಾಗಿ ಮಾಡುತ್ತಿದ್ದರು. ಅವಳ ಉಡುಗೆ, ತೊಡುಗೆ, ನಡವಳಿಕೆ ಮೇಲೆ ಇನ್ನಿಲ್ಲದ ನಿರ್ಬಂದಗಳನ್ನು ಹೇರಿ ತೀರಾ ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದರು. ಇಂದು ವಿಧವೆಯರ ಇರುವಿಕೆಯಲ್ಲಿ ಮೊದಲಿನಷ್ಟು ವಿಕೃತಿ, ಕ್ರೌರ್ಯಗಳಿಲ್ಲವಾದರೂ ಅವರ ಬದುಕಿನಲ್ಲಿ ಸಂಪೂರ್ಣ ಬದಲಾವಣೆ ಬಂದಿಲ್ಲ. ಇಂದಿಗೂ ಆಧುನಿಕ ಎಂದೆನಿಸಿಕೊಂಡು ಮೆರೆಯುವ ಮನೆಗಳಲ್ಲಿಯೂ ಧಾರ್ಮಿಕ, ಸಾಂಪ್ರದಾಯಿಕ ಕಾರ್ಯಚಟುವಟಿಕೆಗಳಲ್ಲಿ ಸ್ವತಃ ವಿಧವೆಯರೇ ದೂರ ಉಳಿಯುತ್ತಾರೆ. ಇಲ್ಲವೇ ಅವರನ್ನು ಸಂಪ್ರದಾಯದ ಹೆಸರಿನಲ್ಲಿ . ದೂರವಿಡಲಾಗುತ್ತದೆ. ಆಕೆ ಈ ಅವಮಾನವನ್ನು ಮೌನವಾಗಿ ಅನುಭವಿಸಬೇಕಾಗುತ್ತದೆ.
ಈ ದೇಶದಲ್ಲಿ ಎಷ್ಟು ಸಂಖ್ಯೆಯಲ್ಲಿ ವಿಧವೆಯರಿದ್ದಾರೆಯೋ ಅಷ್ಟೇ ಭಿನ್ನ ಬಗೆಯ ಗೋಳಿನ ಕಥೆಗಳಿವೆ. ಕಾಶಿ, ಮಥುರಾ, ಬೃಂದಾವನ ಎಲ್ಲ ಬಗೆಯ ಅಕ್ರಮ, ಅನ್ಯಾಯ, ಲೈಂಗಿಕ ಶೋಷಣೆಯ ಕೊಂಪೆಗಳಾಗಿವೆ. ವೈಧವ್ಯ ಎಂಬುದೇ ಸಹಿಸಲಾಗದಷ್ಟು ಹೆಣ್ಣಿನ ಬದುಕಿಗೆ ಬಹುದೊಡ್ಡ ಶಾಪವಾಗಿದೆ. ಸ್ತ್ರೀಯರನ್ನು ಅಪಮಾನಿಸುವ ಇದಕ್ಕಿಂತ ದೊಡ್ಡ ಬೈಗುಳ (ವಿಧವೆ) ಇನ್ನೊಂದು ಇರಲಾರದು.
ನಮ್ಮಲ್ಲಿ ಹೆಂಡತಿ ಸತ್ತ ಪುರುಷ ಸುಲಭವಾಗಿ ಮರುಮದುವೆ ಮಾಡಿಕೊಳ್ಳುತ್ತಾನೆ. ಆದರೆ ವಿಧವೆಯರ ಮರುವಿವಾಹ ಮಾತ್ರ ಶೇ.೧ ಅಥವಾ ೨ ರ ಪ್ರಮಾಣದಲ್ಲಿ ಮಾತ್ರ ಜರುಗುತ್ತಿದೆ.
ಒಂದಾನೊಂದು ಕಾಲದಲ್ಲಿ ಬಹುಪತ್ನಿತ್ವವು ಜೀವನ ವಿಧಾನವೇ ಆಗಿತ್ತು. 'ಆಳುವವನಿಗೆ ಅರವತ್ತು ಮಂದಿ ಹೆಂಡರು. ಎಂಬ ಗಾದೆ ಮಾತು ನಮ್ಮ ಸಾಂಪ್ರದಾಯಿಕ ಸಮಾಜಕ್ಕೆ ಹಿಡಿದ ಕನ್ನಡಿಯಾಗಿತ್ತು. ನಮ್ಮ ಧಾರ್ಮಿಕ ನಾಯಕನಾದ ಶ್ರೀ ಕೃಷ್ಣನಿಗೆ ಹದಿನಾರು ಸಾವಿರ ಹೆಂಡಿರಾದರೆ, ಜೈನರ ಪುಣ್ಯಪುರುಷನಾದ ಭರತಚಕ್ರವರ್ತಿಗೆ ಅರವತ್ತು ಸಾವಿರ ಮಡದಿಯರು. ಚಾರಿತ್ರಿಕ ವ್ಯಕ್ತಿಗಳಾದ ರಾಜ ಮಹಾರಾಜರು, ನವಾಬ್, ಸುಲ್ತಾನ್ರು, ಊರಿನ ಗೌಡ, ಸಾಹುಕಾರ, ಕುಲಕರ್ಣಿ ಎಲ್ಲರಿಗೂ ಹೆಚ್ಚು ಪತ್ನಿಯರು ಇದ್ದಷ್ಟು ಅವರ ಪ್ರತಿಷ್ಟೆಗೊಂಡು ಕೋಡು ಮೂಡುತಿತ್ತು. ಇಂದು ಭಾರತದ ಸಂವಿಧಾನವು ಹಿಂದೂ ವಿವಾಹ ಕಾಯಿದೆ ಅನ್ವಯ ಬಹುಪತ್ನಿತ್ವವನ್ನು ನಿಷೇದಿಸಿದೆ. ಮುಸ್ಲಿಂ ವಿವಾಹ ಕಾಯಿದೆ ಪ್ರಕಾರ ಅವರಿಗೆ ನಾಲ್ಕು ಹೆಂಡಂದಿರನ್ನು ಮದುವೆಯಾಗುವ ಅವಕಾಶವಿದೆ. ಆದರೆ ವಾಸ್ತವ ಸಂಗತಿ ಎಷ್ಟು ಮೋಜಿನಾದಾಗಿದೆಯೆಂದರೆ ಬಹುಪತ್ನಿತ್ವಕ್ಕೆ ಅವಕಾಶವಿರುವ ಮುಸ್ಲಿಂರಲ್ಲಿ ಕಡಿಮೆ ಸಂಖ್ಯೆಯಲ್ಲಿ ಬಹುಪತ್ನಿತ್ವ ಇದ್ದರೆ, ಬಹುಪ್ತ್ನಿತ್ವಕ್ಕೆ ಅವಕಾಶವೇ ಇರದ ಹಿಂದೂ ಪುರುಷರಲ್ಲಿಯೇ ಹೆಚ್ಚ್ಹು ಬಹುಪತ್ನಿತ್ವ ಪ್ರಸಂಗಗಳು ಇವೆ.
'ಕಂದನ ಕೊಡು ಶಿವನೇ ಬಂಧನ ಪಡಲಾರ್
ಮರ್ತ್ಯದಾಗ ಬಂಜೆಂಬ ಶಬುದ ಹೊರಲಾರೆ'
ಬಾಲಕರಿಲ್ಲದ ಬ್ಯಾಲಿಡ್ಯಾತರ ಜನುಮ
ಬಾಡಿಗಿ ಎತ್ತು ದುಡಿದಂತೆ ಬಾಳೆಲೆಯ
ಹಾಸುಂಡು ಬೀಸಿ ಒಗೆದಾಂಗ'
ಶತಶತಮಾನಗಳ ನಡೆಯಲ್ಲಿ ಸ್ತ್ರೀಯರನ್ನು, ಮಕ್ಕಳು ಹೇರುವ ಯಂತ್ರಗಳಾಗಿಯೇ ನಡೆಸಿಕೊಂಡು ಬಂದಿರುವ ಚಿತ್ರಣ ಈ ಎರಡು ಜಾನಪದ ಪದ್ಯಗಳಲ್ಲಿದೆ. ಹೆಣ್ಣೊಬ್ಬಳಿಗೆ ಮದುವೆಯಾದ ವರ್ಷದಲ್ಲೇ ಮಕ್ಕಳಾಗಬೇಕು: ಇಲ್ಲವಾದರೆ ಅವಳಿಗೆ ಬಂಜೆ ಎಂಬ ಪಟ್ಟಕಟ್ಟಿ ಗಂಡನಿಗೆ ಎರಡನೇ ಮದುವೆ ಸಿದ್ದವಾಗುತ್ತದೆ. ಅಥವಾ ಕೇವಲ ಹೆಣ್ಣುಮಕ್ಕಳೇ ಹುಟ್ಟಿದರು ಗಂಡುಮಗುವಿಗಾಗಿ ಇನ್ನೊಂದು ಮದುವೆ ಮಾಡಲಾದ ಅಸಂಖ್ಯಾತ ಉದಾಹರಣೆಗಳು ದೊರೆಯುತ್ತವೆ ಬಂಜೆಯನ್ನು ಈ ಸಮಾಜ ನಡೆಸಿಕೊಂಡ ಕ್ರೂರ ಚಿತ್ರಣ ಅನೇಕ ಜಾನಪದ ಕತೆ, ಕಾವ್ಯ, ಆಚರಣೆಗಳಲ್ಲಿ ತುಂಬಿಕೊಂಡಿದೆ. ಮಕ್ಕಳಾಗದಿರುವುದಕ್ಕೆ ಎಷ್ಟರ ಮಟ್ಟಿಗೆ ಪುರುಷರೇ ಕಾರಣ? ಅದರಲ್ಲೂ ಹೆಣ್ಣು ಗಂಡುಗಳ ಜನನಕ್ಕೆ ಪುರುಷನೇ ಕಾರಣ ಎಂಬ ಅಂಶಗಳು ಈಗ ಸ್ಪಷ್ಟವಾಗಿ ಬೆಳಕಿಗೆ ಬಂದಿವೆ. ವೈಜ್ಞಾನಿಕ ಆವಿಷ್ಕಾರಗಳು ಮಕ್ಕಳಾಗದಿರುವುದಕ್ಕೆ ಪುರುಷ ಅಥವಾ ಮಹಿಳೆಯರಲ್ಲಿ ಯಾರು ಕಾರಣ ಎಂಬುದನ್ನು ನಿಖರವಾಗಿ ತೆರೆದು ತೋರಿಸುತ್ತವೆ. ಕ್ರೋಮೊಜ಼ೋಮೆ ಥಿಯಾರಿಯಂತೂ ಹೆಣ್ಣು ಮಗು ಹುಟ್ಟುವುದರಲ್ಲಿ ಪುರುಷನ ಪಾತ್ರವೇ ಮೂಲ ಎಂಬುದನ್ನು ನಿಚ್ಚಳಗೊಳಿಸಿವೆ. ಹೀಗಿರುವಾಗಲೂ ಮಹಿಳೆಯರ ಬವಣೆ ತಪ್ಪಿದ್ದಲ್ಲ.
ತೀರ ಪ್ರಾಚೀನವಾದ ಅಮಾನವೀಯ ಈ ಪದ್ಧತಿ ಧಾರ್ಮಿಕ ನಂಬಿಕೆಗಳ ಭಾಗವಾಗಿ ಬೆಳೆದುಕೊಂಡು ಬಂದಿದೆ. ನಾಗರೀಕತೆಯ ಶೈಶವಾವಸ್ಥೆಯಲ್ಲಿಯೇ ದೇವರ ಹೆಸರಿನಲ್ಲಿ ಸ್ತ್ರೀಯರನ್ನು ಬಲಿಪಶು ಮಾಡುತ್ತಿದ್ದ ಉದಾಹರಣೆಗಳು ದೊರೆಯುತ್ತವೆ. ರಾಜಪ್ರಭುತ್ವ ಸಂದರ್ಭದಲ್ಲಿ ದೊಡ್ಡ ದೇವಸ್ಥಾನಗಳಲ್ಲಿ ದೇವರ ರಂಗಸೇವೆಗೆಂದು ಅಂದರೆ ದೇವರ ಪೂಜೆಯ ವೇಳೆಗೆ ನಡೆಸುವ ಸಂಗೀತ, ನೃತ್ಯಾಡಿ ಸಾಂಸ್ಕೃತಿಕ ಸೇವೆಗಾಗಿ ಪ್ರಾರಂಬವಾದ ಈ ಪದ್ದತಿಯು ಹಲವಾರು ಕ್ರೂರ ಆಯಾಮಗಳಲ್ಲಿ ಮುಂದುವರೆದುಕೊಂಡು ಬಂದಿದೆ. ಮೊದಮೊದಲು ಈ ಪದ್ದತಿಗೆ ಸಾಮಾಜಿಕ ಮನ್ನಣೆ ಸಾಂಸ್ಕೃತಿಕ ಸ್ಥಾನಮಾನಗಳು ಇದ್ದವು. ಆದರೆ ಪುರೋಹಿತವರ್ಗವು ಪ್ರಭುತ್ವದ ಅಡಿಯಲ್ಲಿಯೇ ದೇವದಾಸಿ ಮಹಿಳೆಯರನ್ನು ತಮ್ಮ ಕಾಮದಾಹಕ್ಕಾಗಿ ದುಡಿಸಿಕೊಂಡಿರುವ ಚರಿತ್ರೆಯು ತುಂಬಾ ದೀರ್ಘವಾಗಿಯೇ ಇದೆ. ಈ ಪದ್ದತಿಯೂ ಕೆಳವರ್ಗ, ಕೆಳಜಾತಿಗಳಲ್ಲಂತೂ ದೇವರ ಹೆಸರಿನಲ್ಲಿ ಮಹಿಳೆಯರನ್ನು ಉಳ್ಳವರು ಅಧಿಕೃತವಾಗಿ ಅನುಭವಿಸುವ ಪರಿಪಾಠವಾಗಿಯೆ ಬೆಳೆದುಬಂದಿದೆ. ಹೆಚ್ಚು ಕಡಿಮೆ ಸ್ತ್ರೀಯರನ್ನು ಅಧಿಕೃತವಾಗಿ ಶೋಷಿಸುವ ಈ ಪದ್ದತಿಯೂ ಹಲವು ಅನಿಷ್ಟಗಳಿಗೂ ದಾರಿ ಮಾಡಿಕೊಟ್ಟಿತ್ತು.
ವಿಶೇಷವಾಗಿ ಕೆಳಜಾತಿ, ಕೆಳವರ್ಗದ ಮಹಿಳೆಯರು ಇದಕ್ಕೆ ಬಲಿಯಾಗುತ್ತಿದ್ದರಷ್ಟೇ ಅಲ್ಲ. ಇವರ ಗರ್ಭದಲ್ಲಿ ಜನಿಸಿದ ಮಕ್ಕಳು ಸಾಮಾಜಿಕ ಮನ್ನಣೆ, ಆರ್ಥಿಕ ಆಶ್ರಯ, ರಕ್ಷಣೆ ಇಲ್ಲದೆ ಅಕ್ಷರಶಃ ಅಕ್ರಮ ಸಂತಾನವೆಂಬ ಪಿಡುಗಿಗೆ ಬಲಿಯಾಗುತ್ತಿದ್ದರು.ಈ ಹಿನ್ನಲೆಯಲ್ಲಿ ಮಹಿಳಾ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು, ಪ್ರಜ್ಞಾವಂತ ನಾಗರೀಕರು ಈ ದೇವದಾಸಿ ಪದ್ಧತಿ ವಿರುದ್ದ ಚಳುವಳಿ ಹೂಡಿದರು. ಈ ಕುರಿತು ಅರಿವಿನ ಆಂದೋಲನ ಮಾಡಿದರು. ತತ್ಪರಿಣಾಮವಾಗಿ ದೇವದಾಸಿ ನಿಷೇದ ಕಾಯ್ದೆ ಜಾರಿಗೆ ಬಂತು. ದೇವರ ಹೆಸರಿನಲ್ಲಿ ಸ್ತ್ರೀಯರನ್ನು ಜೋಗತಿಯಾಗಿ ಬಿಡುವ ಸಂಪ್ರದಾಯ ನಿಲ್ಲಿಸಲು ಸರಕಾರ, ಸಂಘಟನೆಗಳು ಟೊಂಕಕಟ್ಟಿ ನಿಂತವು. ದೇವದಾಸಿ ಮಹಿಳೆಯರಿಗಾಗಿ ಪುನರ್ವಸತಿ ಕಲ್ಪಿಸಲಾಯಿತು.
ಸರಕಾರೀ ಇಲಾಖೆಯಲ್ಲಿ ಈ ಕುರಿತು ಹಲವಾರು ಯೋಜನೆ, ಕಾರ್ಯಕ್ರಮಗಳು ಇವೆ. ಈ ಎಲ್ಲ ಪ್ರಯತ್ನಗಳ ಫಲವಾಗಿ ಈ ಪದ್ಧತಿ ಸಂಪೂರ್ಣ ನಿಲ್ಲಬೇಕಾಗಿತ್ತು. ಆದರೆ ಕದ್ದು ಮುಚ್ಚಿ ಅಥವಾ ಭ್ರಷ್ಟ ಮಾರ್ಗಗಳನ್ನು ಬಳಸಿ ದೇವದಾಸಿ ಪದ್ದತಿಯು ಅಲ್ಲಲ್ಲಿ ಮುಂದುವರೆದುಕೊಂಡು ಬರುತ್ತಿದೆ ಎಂಬುದೇ ದುರಂತದ ಸಂಗತಿಯಾಗಿದೆ. ಜಾಗತಿಕ ಹೊಸ ಆರ್ಥಿಕ ನೀತಿ ಮತ್ತು ಮುಕ್ತ ಮಾರುಕಟ್ಟೆ ವ್ಯವಸ್ಥೆಯಿಂದಾಗಿ ಕೆಳವರ್ಗದ ಕೆಳಜಾತಿಗಳಲ್ಲಿ ಹೆಚ್ಚುತ್ತಿರುವ ಬಡತನ, ಕಳೆದುಹೋಗುತ್ತಿರುವ ಗ್ರಾಮೀಣ ಉದ್ಯೋಗ, ಕೃಷಿ ಬಿಕ್ಕಟ್ಟು ಮುನ್ತಾದವುಗಳಿನ್ದಾಗಿಯು ದೇವದಾಸಿ ಪದ್ಧತಿ ಮತ್ತೆ ಹೊಸರೂಪ ತೊಟ್ಟುಕೊಂಡು ಪ್ರತ್ಯಕ್ಷವಾಗುತ್ತಿದೆ ಎಂಬುದನ್ನು ಗಮನಿಸಬೇಕು. ದೇವರು, ಧರ್ಮಾಚರಣೆಗಳು, ದೇವರ ಭಯದಿಂದಲೂ ಜನರು ಇಂಥ ನಂಬಿಕೆಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಜನರಲ್ಲಿ ವೈಜ್ಞಾನಿಕ, ವೈಚಾರಿಕ ಮನೋಭಾವನೆಗಳು ಮೂಡದ ಹೊರತು ಇಂಥ ನಂಬಿಕೆಗಳನ್ನು ತಲಸ್ಪರ್ಷಿಯಾಗಿ ಹೊಡೆದೋಡಿಸಲು ಸಾಧ್ಯವಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕಿದೆ.
ರಜಸೂತಕ-ಜನನ ಸೂತಕ
ಮಹಿಳೆಯರು ರಜಸ್ವಲೆಯರಾದಾಗ (ಮುಟ್ಟಾದಾಗ) ಅವರನ್ನು ಬೇರೆಯೇ ಕೂರಿಸುವಂತಹ ಆಚರಣೆ ಇನ್ನೂ ಕೆಲ ಜನಾಂಗಗಳಲ್ಲಿ ರೂಡಿಯಲ್ಲಿದೆ. ಮುಟ್ಟಾಗುವುದು ಎಂದರೆ ಪೀಡೆ, ಆಕೆಗೆ ಆ ಸಮಯದಲ್ಲಿ ಪ್ರೇತ ಮೆಟ್ಟಿಕೊಂಡಿರುತ್ತದೆ. ಆಕೆಯನ್ನು ಮನೆಯವರಾರು ಮುಟ್ಟುವಂತಿಲ್ಲ. ಆಕೆ ಸ್ನಾನ ಮಾಡುವಂತಿಲ್ಲ. ಚಿಕ್ಕ ಮಕ್ಕಳನ್ನು ಮುಟ್ಟಬೇಕೆಂದರೂ ಅವನ್ನು ಬೆತ್ತಲೆ ಮಾಡಿ ಮುಟ್ಟಬಹುದು. ಯಾರಾದರೂ ಮುಟ್ಟಿದರೆ ಕೇದಾಗುತ್ತದೆ ಎಂಬ ನಂಬಿಕೆ ಬಲವಾಗಿದೆ. ಗೊಲ್ಲರ ಜನಾಂಗದಲ್ಲಿ ಮುಟ್ಟು ಮತ್ತು ಹೆರಿಗೆಯಾದಾಗ ಮನೆಯಲ್ಲಿರಿಸಿಕೊಳ್ಳದೆ ಊರಿಂದ ಹೊರಗೆ ಹೊಲದಲ್ಲಿ, ಮರದ ಕೆಳಗೆ ಇರಿಸಲಾಗುತ್ತದೆ. ಮುಟ್ಟು ಒಂದು ಸಹಜವಾದ ನೈಸರ್ಗಿಕ ಪ್ರಕ್ರಿಯೆ. ತಾಯ್ತನಕ್ಕೆ ಬೇಕಾಗುವ ಸಿದ್ದತೆಗಳನ್ನು ಮಾಡಿಕೊಂಡ ಗರ್ಭಕೋಶ ಆ ತಿಂಗಳು ಗರ್ಭದಾರಣೆಯಾಗದಿದ್ದಾಗ ಎಲ್ಲವನ್ನು ನಿರ್ದಾಕ್ಷಿಣ್ಯವಾಗಿ ಹೊರಹಾಕುತ್ತದೆ. ಇಂತಹ ಆಚರಣೆ ಬಗ್ಗೆ ಚೆನ್ನಬಸವಣ್ಣನವರು ಹೀಗೆ ನುಡಿಯುತ್ತಾರೆ.
ಗುರುಕಾರುಣ್ಯ ಕಟಾಕ್ಷದಲ್ಲಿ
ಉತ್ಪತ್ಯವಾದ ಅಜಾತಂಗಳಿಗೆ
ಜಾತಿಸೂತಕ ಜನನಸೂತಕ
ಪ್ರೇತಸೂತಕ ರಜಸೂತಕ
ಉಚ್ಚಿಷ್ಟಸೂತಕ ಉಂಟೆಂಬುವಗಳಿಗೆ
ಗುರುವಿಲ್ಲ ಲಿಂಗವಿಲ್ಲ
ಜಂಗಮವಿಲ್ಲ ಪ್ರಸಾದವಿಲ್ಲವಯ್ಯ
ಕೂಡಲ ಚೆನ್ನಸಂಗಮದೇವಾ
ರಜಸೂತಕ ಮಾತ್ರವಲ್ಲದೇ ಜನನಸೂತಕ, ಜಾತಿಸೂತಕ, ಪ್ರೇತಸೂತಕಗಳ ಬಗ್ಗೆಯೂ ವೈಚಾರಿಕತೆಯನ್ನು ಶರಣರು ಮೆರೆದಿದ್ದಾರೆ. ವೈದಿಕ ಧರ್ಮದಲ್ಲಿ ಇಂದಿಗೂ ಪಂಚಸೂತಕಗಳು ಆಚರಣೆಯಲ್ಲಿವೆ. ಈ ಸೂತಕಗಳ ಆಚರಣೆಯ ನೆಪದಲ್ಲಿ ಕೆಳಜಾತಿಯಲ್ಲಿ ಹುಟ್ಟಿದವರ, ದುಃಖಿತ ಸ್ತ್ರೀಯರ ಶೋಷನೆಯಾಗುವುದನ್ನು ಗುರ್ತಿಸಿದ ವಚನಕಾರರೆಲ್ಲರೂ ಈ ಸೂತಕಗಳನ್ನು ನಿರಾಕರಿಸಿದರು.
೧೬ ವರ್ಷದ ಹುಡುಗಿ "ನಂಗೆ ಪರೀಕ್ಷೆ ಇತ್ತು. ಎಸ್. ಎಸ್.ಎಲ್.ಸಿ. ಪ್ರಿಪರೆಟರಿಯಲ್ಲಿ ೮೦% ಬಂದಿತ್ತು. ಮುಖ್ಯ ಪರೀಕ್ಷೆಯ ದಿನ ಮುಟ್ಟಾಗಿದ್ದೆನೆಮ್ಬ ಕಾರಣಕ್ಕೆ ಪರೀಕ್ಷೆಗೆ ಕಳಿಸಲಿಲ್ಲ. ಜಗುಲಿಯಲ್ಲಿಯೇ ಕಾಲ ಕಳೆಯಬೇಕಾಯಿತು.ಮುಟ್ಟಿನಿಂದಾಗಿ ಪರೀಕ್ಷೆ ಕಳೆದುಕೊಳ್ಳುವಂತಾಯಿತು ಈ ವ್ಯವಸ್ಥೆ ಬದಲಾಗಲೇಬೇಕು. ಮರದ ಕೆಳಗೋ ಹೊಲದಲ್ಲಿಯೋ ಪಕ್ಕದ ಮನೆಯವರ ಜಗುಲಿಯ ಮೇಲೋ ಮಲಗಬೇಕು.ಅದಕ್ಕೆ ನಾನು ಹಾಗೆಯೇ ಸ್ನಾನ ಮಾಡಿಕೊಂಡು ಅವರಿಗೆ ತಿಳಿಸದೇ ಇದ್ದು ಬಿಡುತ್ತೇನೆ.! ಎಂದು ದೈರ್ಯವಾಗಿ ಹೇಳಿದಳು.
ಇನ್ನೊಬ್ಬ ಮಧ್ಯವಯಸ್ಸಿನ ಮಹಿಳೆ "ತುಂಬಾ ಚಿಂತಾಜನಕ ಸ್ಥಿತಿ ನಮ್ಮದು ಯಾರೂ ಕೇಳೋದಿಲ್ಲ" ಅಂತ ಆಳುವುದಕ್ಕೆ ಆರಂಭಿಸಿದಳು. ಅಷ್ಟರಲ್ಲಿ ನಾವು ಸಂಭಾಷಣೆ ನಡೆಸುತ್ತಿದ್ದ ಜಾಗದಿಂದ ೧/೨ ಕಿಲೋಮೀಟರು ದೂರದಲ್ಲಿ ಒಬ್ಬ ಮಹಿಳೆ ಹಳೆಯ ಸೀರೆ ಉಟ್ಟು ಕುಳಿತಿದ್ದಳು. ಆಕೆಯನ್ನು 'ಬಾಮ್ಮಾ' ಎಂದು ಕರೆದಾಗ ಬರಲಿಲ್ಲ. ಹತ್ತಿರ ಹೋಗಿ ಕರೆಯಲು ಹೋದರೆ ಓಡಿಹೋದಳು. ಆಕೆ ಮುಟ್ಟಾದ ಹೆಂಗಸು ಆಕೆಯು ಎಲ್ಲೆಗೆ ಹೋದಳೆಂದು ಹಿಂದೆಯೇ ಹೊರಟರೆ ಆಶ್ಚರ್ಯ ಕಾದಿತ್ತು. ನಾಲ್ಕು ಗೋಡೆಯ ಕೋಣೆ, ಒಳಗಡೆ ಶೌಚಾಲಯ ಸೌಲಭ್ಯವಿಲ್ಲ. ಹರಕು ಚಾಪೆ ಹಳೆಯ ಬೆಡ್ ಶೀಟ್ ಇತ್ತು. ಆಕೆ ಅಲ್ಲಿಯೇ ಮೂರು ದಿನ ಕಾಲಕಳೆಯಬೇಕು. ಆ ಕೋಣೆಯ ಹೆಸರು "ಕೃಷ್ಣ ಕುಟೀರ" ಊರ ಹೊರಗೆ ಹೊಲದಲ್ಲಿ ಇಂತಹ ಸೌಲಭ್ಯವನ್ನು ಕಲ್ಪಿಸಿಕೊಡಲಾಗಿರುತ್ತದೆ.
ಗೊಲ್ಲರ ಜನಾಂಗದಲ್ಲಿ ಇಂದಿಗೂ ಋತುಸ್ರಾವದ ಸಂದರ್ಭದಲ್ಲಿ ಮತ್ತು ಹೆರಿಗೆಯ ನಂತರ ಊರಿಂದ ಹೊರಗಡೆ ಹೊಲದಲ್ಲಿ ಇರಿಸುವ ಪದ್ಧತಿ ಇದೆ. ಚಿಕ್ಕ ಗುಡಿಸಲಿನಲ್ಲಿ ಯಾರ ಸಹಾಯವೂ ಇಲ್ಲದೇ ಹೆರಿಗೆಯಾದ ಹೆಣ್ಣುಮಕ್ಕಳು ತನ್ನ ಕೆಲಸವನ್ನು ಮಾಡಿಕೊಂಡು ಮಗುವನ್ನು ನೋಡಿಕೊಳ್ಳುವುದು ಹೇಗೆ ಸಾಧ್ಯ? ಅಂತಹ ಸ್ಥಿತಿಯಲ್ಲಿ ಬಿಸಿಲು, ಮಳೆ, ಚಳಿಯೆನ್ನದೆ ಅಧಿಕ ರಕ್ತಸ್ರಾವವಾಗಿ ತಾಯಿ ಸಾಯಬಹುದು. ಮಗು ಉಸಿರುಕಟ್ಟಿ ಸಾವನಪ್ಪಬಹುದು. ನಾವು ಇಂತಹ ಗೊಲ್ಲರಹಟ್ಟಿ ಕ್ಷೇತ್ರಾದ್ಯಯನ ಮಾಡಿ ಹಿರಿಯರನ್ನು ಸೇರಿಸಿ ಪ್ರಶ್ನಿಸಿದಾಗ ಮಹಿಳೆಯರೆಲ್ಲ ಒಕ್ಕೂರಲಿನಿಂದ 'ಇಂತಹ ಅವೈಜ್ಞಾನಿಕ ಆಚರಣೆಗಳು ತಮಗೆ ಬೇಕಿಲ್ಲ' ಎಂದೇ ಉತ್ತರಿಸಿದರು. ಆದರೆ ಪುರುಷರು ಮಾತ್ರ 'ದೈವಕ್ಕೆ ಕೋಪ ಬರುತ್ತದೆ' ಎಂಬ ನೆಪಹೇಳಿ ' ಆಚರಣೆ' ಯಿಂದ ವಿಮುಕ್ತರಾಗಲು ಒಪ್ಪಲಿಲ್ಲ.
ಮಹಿಳೆಯರು ರಕ್ತಹೀನತೆ, ಅಪೌಷ್ಟಕತೆಗಳಿಂದ ಅನಾರೊಗ್ಯಕ್ಕೀಡಾಗುವುದು ಸಾಮಾನ್ಯ. ಅದರೊಂದಿಗೆ ದೈವದ ಹೆಸರಿನಲ್ಲಿ ಜರುಗುವ 'ಮೌಡ್ಯಚರಣೆಗಳು' ಮಹಿಳೆಯರನ್ನು ಮತ್ತಷ್ಟು ಅನಾರೋಗ್ಯದ ಸ್ಥಿತಿಯೆಡೆಗೆ ಕೊಂಡೊಯ್ಯುತ್ತವೆ.
ಜ್ಯೋತಿಷ್ಯದ ನಂಬಿಕೆಯು ಮಹಿಳೆಯರ ಸರ್ವನಾಶಕ್ಕೆ ಕಾರಣರಾಗುತ್ತದೆ. ವಿವಾಹದ ಸಂದರ್ಭದಲ್ಲಿ ಜ್ಯೋತಿಷಿಗಳನ್ನು ಕೇಳಿ ಜಾತಕ ಹೊಂದಿಸಿಯೇ ಮದುವೆ ಮಾಡುತ್ತಾರೆ. ಜಾತಕ ಅಥವಾ ನಕ್ಷತ್ರ ಸರಿಹೊಂದದಿದ್ದರೆ ಎಷ್ಟು ಉತ್ತಮವಾದ ವರ ಇದ್ದರೂ ಬಿಟ್ಟುಬಿಡುತ್ತಾರೆ. ಜಾತಕ ಸರಿಹೊಂದಿದ್ದರೆ ವರನಿಗೆ ಕೆಲಸವಿಲ್ಲದಿದ್ದರೂ ಮಾಡುವೆ ಮಾಡಿಸುತ್ತಾರೆ. ಜ್ಯೋತಿಷ್ಯಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ.
ಅಪ್ರಾಪ್ತ ವಯಸ್ಸಿನ ಬಾಲಕಿಯೊಡನೆ ಲೈಂಗಿಕ ಸಂಪರ್ಕ ಮಾಡುವುದರಿಂದ ಏಡ್ಸ್ ವಾಸಿಯಾಗುತ್ತದೆನ್ನುವ ಮೂಡನಂಬಿಕೆ ಇದೆ. ಅಲ್ಲದೇ ಚಿಕ್ಕ ಹುಡುಗಿಯರೊಂದಿಗೆ ಲೈಂಗಿಕ ಸಂಪರ್ಕ ನಡೆಸುವುದರಿಂದ ತಮ್ಮ ಲೈಂಗಿಕ ಶಕ್ತಿ ಹೆಚ್ಚುತ್ತದೆನ್ನುವ ನಂಬಿಕೆಯೂ ಇದೆ. ಇದರಿಂದಾಗಿ ೭ ರಿಂದ ೧೦ ವರ್ಷದ ಬಾಲಕಿಯರನ್ನು ಮಾನವ ಕಳ್ಳಸಾಗಣೆಗೆ ಬಳಸುತ್ತಾರೆ. ಅಲ್ಲಿಂದ ಸೀದಾ ವೇಶ್ಯಾವಾಟಿಕೆಗೆ ತಳ್ಳಲ್ಪಡುತ್ತಾರೆ. ಹಾಂಗ್ ಕಾಂಗ್, ಸಿಂಗಪೂರ್, ತೈವಾನ್, ವಿಯೆಟ್ನಾಂ ವ್ಯಾಪಾರಗಳಲ್ಲಿ ಬಾಲಕಿಯ ಕನ್ಯತ್ವವನ್ನು ಕೊಂಡುಕೊಲ್ಲುವುದರಿಂದ ತಮ್ಮ ವ್ಯಾಪಾರ ವೃದ್ದಿಯಾಗುತ್ತದೆಯಲ್ಲದೆ ತಮ್ಮ ಆಯಸ್ಸು, ಲೈಂಗಿಕ ಶಕ್ತಿ ಹೆಚ್ಚುತ್ತದೆಂಬ ಮೂಡನಂಬಿಕೆ ಬಲವಾಗಿದೆ. ಈ ನಂಬಿಕೆಯಿಂದಾಗಿ ಲೈಂಗಿಕ ಸಂಪರ್ಕಕ್ಕಾಗಿ ಚಿಕ್ಕ ಬಾಲಕಿಯರನ್ನು ಬಳಸಿಕೊಳ್ಳುವ ನಂಬಿಕೆಗೆ ಪುಷ್ಟಿ ಸಿಕ್ಕಂತಾಗುತ್ತದೆ. ಜನರು ಏಡ್ಸ್ ಅಮ್ಮನ ದೇವಸ್ಥಾನ ಕಟ್ಟಿದ್ದಾರೆ. ಆಕೆಗೆ ಪೂಜೆ ಸಲ್ಲಿಸಿದರೆ ಏಡ್ಸ್ / ಎಚ್,ಐ,ವಿ, ಹೋಗುತ್ತದೆಂಬ ಮೂಡನಂಬಿಕೆ ಇದೆ. ಚಿಕ್ಕ ಬಾಲಕಿಯೊಡನೆ ಲೈಂಗಿಕ ಸಂಪರ್ಕ ಮಾಡಿದರೆ ಏಡ್ಸ್ / ಎಚ್,ಐ,ವಿ. ವಾಸಿಯಾಗುತ್ತದೆಂಬ ಕಾರಣಕ್ಕೆ ಚಿಕ್ಕ ಹುಡುಗಿಯರನ್ನು ಕಳ್ಳಸಾಗಾಣಿಕೆ ಮೂಲಕ ವಿದೇಶಗಳಿಗೆ ಸಾಗಿಸಿ ಆ ಹುಡುಗಿಯರಿಗೆ ಏಡ್ಸ್ ಸೋಂಕು ಅಂಟಿಸುತ್ತಾರೆ. ಮತ್ತೆ ಅವರು ಭಾರತಕ್ಕೆ ಮರಳುವಾಗ ಅರೆಜೀವವಾಗಿರುತ್ತಾರೆ.
ಸೂರ್ಯ ಮತ್ತು ಚಂದ್ರಗ್ರಹಣಗಳು ಕೇವಲ ನೈಸರ್ಗಿಕ ಘಟನೆಗಳು. ಅವು ಭೂಗ್ರಹದಲ್ಲಿನ ಜೀವಿಗಳ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ಸೂರ್ಯಗ್ರಹಣದ ಸಮಯದಲ್ಲಿ ಮಾತ್ರ ಸೂರ್ಯನನ್ನು ನೇರವಾಗಿ ಬರಿಗಣ್ಣಿನಿಂದ ನೋಡುವುದು ಕಣ್ಣಿಗೆ ಹಾನಿಕರ. ಇದನ್ನು ಬಿಟ್ಟರೆ ಗ್ರಹಣದಲ್ಲಿ ಅಶುಭಾಕಾರಿಯಾದುದು ಯಾವುದೂ ಇಲ್ಲ. ಈ ನಂಬಿಕೆಯಿಂದ ಮಹಿಳೆಯರ ಚಟುವಟಿಕೆಗಳ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆ. ಗರ್ಭಿಣಿ ಹೆಂಗಸು ಗ್ರಹಣದ ಸಮಯದಲ್ಲಿ ಹೊರಗೆ ತಿರುಗಾಡಬಾರದು, ಊಟ ಮಾಡಬಾರದು ಎಂಬ ತಪ್ಪು ತಿಳುವಳಿಕೆ ಇದೆ.
ಹಾಗೆಯೇ ಗರ್ಭಿಣಿಯರು 'ಮೊಟ್ಟೆ' ತಿಂದರೆ ಮುಂದೆ ಹುಟ್ಟುವ ಮಗುವಿಗೆ ತಲೆಯಲ್ಲಿ ಕೂದಲಿರುವುದಿಲ್ಲ ಎಂಬ ತಪ್ಪು ನಂಬಿಕೆ ಕೆಲವರಲ್ಲಿದೆ. ಮೊಟ್ಟೆಯಲ್ಲಿ ಕ್ಯಾಲ್ಷಿಯಂ ಅಧಿಕವಾಗಿರುತ್ತದೆ. ಮೊಟ್ಟೆ ತಿಂದಲ್ಲಿ ಮೂಳೆ, ಚರ್ಮ, ಕೂದಲು ಚೆನ್ನಾಗಿ ಬೆಳೆಯುತ್ತದೆಂಬುದು ಸತ್ಯ. ಬಹುತೇಕ ಕಾಯಿಲೆಗಳಿಗೆ ಈಗ ಸೂಕ್ತವಾದ ಔಷದಿ ಚಿಕಿತ್ಸೆ ಇವೆ. ಆದರೆ ಕುಟುಂಬದಲ್ಲಿ ಪೌಷ್ಟಿಕತೆ, ಆರೋಗ್ಯದ ಪ್ರಶ್ನೆ ಬಂದಾಗ ಮಹಿಳೆಗೆ, ಹೆಣ್ಣುಮಕ್ಕಳಿಗೆ ಕೊಟ್ಟಕೊನೆಯ ಪ್ರಾಶಸ್ಥ್ಯವಿರುತ್ತದೆ.ಇದು ನಮ್ಮ ಸಾಂಪ್ರದಾಯಿಕತೆಯ ಫಲವೇ ಸರಿ.
ನಮ್ಮ ಸಮಾಜದಲ್ಲಿ ದೆವ್ವಗಳು ಹೆಚ್ಚಾಗಿ ಹೆಣ್ಣುಮಕ್ಕಳ ಮೇಲೆಯೇ ಬರುತ್ತವೆ ಎಂಬುದೂ ಸ್ವಾರಸ್ಯಕರವಾದ ಸಂಗತಿ. ಕುಟುಂಬ ಜೀವನದ ಒತ್ತಡವನ್ನು ಸಹಿಸದೇ ಹೆಣ್ಣುಮಕ್ಕಳಲ್ಲಿ ಆತಂಕ, ಖಿನ್ನತೆ, ಹಿಸ್ತೀರಿಯಾದಂತಹ ಮಾನಸಿಕ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಅವುಗಳನ್ನು ಇಂದಿಗೂ ಸರಿಯಾದ ರೀತಿಯಲ್ಲಿ ಪತ್ತೆಮಾಡದೆ ಆಕೆಗೆ ದೆವ್ವ ಬಂದಿದೆ, ದೇವರ ಕಾಟ ಎಂದೆಲ್ಲ ಹೆಸರಿಸಿ ಮಾಟಮಂತ್ರದ ಮೊರೆ ಹೋಗುತ್ತವೆ.
ಅತ್ತೆ, ಸೊಸೆಯ ಜಗಳ, ಗಂಡ ಹೆಂಡತಿಯ ಮುನಿಸು, ವರಗಿತ್ತಿಯರ ಜಗಳ ಮುಂತಾದವುಗಳು ದೆವ್ವ ಮೈಮೇಲೆ ಬರುವುದರ ಮೂಲಕ ಪರ್ಯವಸಾನಗೊಳ್ಳುತ್ತವೆ. ಅವರಿಗೆ ಮನೋವೈಧ್ಯರ ಬಳಿ ಸರಿಯಾದ ಚಿಕಿತ್ಸೆ ಅವಶ್ಯಕ ಇರುತ್ತದೆ. ಹೆರಿಗೆಯ ನಂತರವಂತೂ ಅಪೌಷ್ಟಿಕತೆ, ಮಾನಸಿಕ ಒತ್ತಡ, ನೆಮ್ಮದಿಯ ವಾತಾವರಣವಿಲ್ಲದೆ ಇರುವುದು ಮುಂತಾದ ಕಾರಣಗಳಿಂದ ಹಿಸ್ಟೀರಿಯಾ (ಉನ್ಮಾದ)ಕ್ಕೆ ತುತ್ತಾಗುತ್ತಾರೆ. ಅದನ್ನು ಗುರುತಿಸಿ ಚಿಕಿತ್ಸೆ ಕೊಡಿಸದೇ ಹುಚ್ಚಿಯ ಪಟ್ಟ ಕಟ್ಟಿಬಿಡುವುದು ಸಾಮಾನ್ಯ.
ಕೆಲವು ಧರ್ಮಗಳ ಪ್ರಕಾರ ಸ್ತ್ರೀಯರಿಗೆ ಆತ್ಮವಿಲ್ಲ. ಕೆಲವು ಧರ್ಮಗಳಲ್ಲಿ ಸ್ತ್ರೀಯರಿಗೆ ಮೋಕ್ಷವಿಲ್ಲ. ಬೌದ್ಧ ಧರ್ಮದಲ್ಲಿಯೂ ಮೊದಮೊದಲು ಸ್ತ್ರೀಯರಿಗೆ ಅವಕಾಶವಿರಲಿಲ್ಲ ಬುದ್ಧನ ತಾಯಿ ಮಾಯಾದೇವಿ, ಹೆಂಡತಿ ಯಶೋಧರಾ, ವೇಶ್ಯಾ ಸ್ತ್ರೀ ಆಮ್ರಪಾಲಿ ಮತ್ತು ತಥಾಗತನ ಶಿಷ್ಯ ಆನಂದನ ವಾದ-ವಿವಾದ ಒತ್ತಾಸೆಯಿಂದಾಗಿ ಮಹಿಳೆಯರಿಗೆ ಧೆರಿಯರಾಗುವ (ಬೌದ್ಧ ಸನ್ಯಾಸಿನಿಯರು ) ಅವಕಾಶ ದೊರೆಯಿತು ಎಂಬುದು ತಿಳಿದುಬರುತ್ತದೆ. ಜೈನಧರ್ಮದಲ್ಲಿ ಸ್ತ್ರೀಯರು ಕಂತಿಯರು (ಸನ್ಯಾಸಿಯರು) ಆಗಬಹುದಾದರೂ ಅವರು ಸದರಿ ಜನ್ಮದಲ್ಲಿ ಅಪಾರ ಪುಣ್ಯ ಸಂಪಾದನೆ ಮಾಡಿ ಮುಂದಿನ ಜನ್ಮದಲ್ಲಿ ಪುರುಷರಾಗಿ ಹುಟ್ಟಬೇಕು. ನಂತರವೇ ಅರಿಹಂತ ಪದವಿಗೆ ಏರಲು ಸಮರ್ಥರು. ವೈದಿಕ ಧರ್ಮದಲ್ಲಿಯಂತೂ ಹೆಣ್ಣು ಮಾಯೆ, ಬಹಿಷ್ಟೆ, ಕಂಟಕಿ, ಪಾಪಾತ್ಮ ಎಂದೆಲ್ಲ ಮನುಸ್ಮೃತಿ, ಯಾಜ್ಞವಲ್ಕ ಸ್ಮೃತಿಗಳಲ್ಲಿ ಬರೆಯಲಾಗಿದೆ.
ವೇದಕಾಲದಲ್ಲಿ ಸ್ತ್ರೀಯರಿಗೆ ಧಾರ್ಮಿಕ ಸ್ವಾತಂತ್ರ್ಯವಿತ್ತು. ಸ್ತ್ರೀಯರು ಬ್ರಹ್ಮವಾದಿನಿಯರಾಗಿ ಬ್ರಹ್ಮ ಸಭೆಗಳಲ್ಲಿ ಪುರುಷರ ಸಮಾನವಾಗಿ ವಾದ ಮಾಡಬಲ್ಲವರಾಗಿದ್ದರು ಎಂದು ಹೇಳಿ ಅಪಾಲಾ, ಲೋಪಾಮುದ್ರೆ, ಮೈತ್ರೇಯಿ,ಗಾರ್ಗಿ, ಉಭಯಭಾರತಿ ಇತ್ಯಾದಿ ಬೆರಳಣಿಕೆ ಸ್ತ್ರೀಯರನ್ನು ಉದಾಹರಣೆಯಾಗಿ ನೀಡುತ್ತಾರೆ. ಆದರೆ ಇವರ್ಯಾರು ಸಾಮಾನ್ಯ ಮಹಿಳೆಯರು ಆಗಿರಲಿಲ್ಲ. ಇವರೆಲ್ಲ ಉನ್ನತವರ್ಗದ ಉಚ್ಹ ವರ್ಣದ ಋಷಿ ಪತ್ನಿಯರಾಗಿದ್ದರು ಅಷ್ಟಕ್ಕೂ ಅವರಲ್ಲಿ ಗಾರ್ಗಿ ಮೈತ್ರೆಯರು ತಮಗೇಕೆ ಬ್ರಹ್ಮ ವಿದ್ಯೆ ನೀಡುತ್ತಿಲ್ಲವೆಂದು ಋಷಿ ಪತಿಯೊಂದಿಗೆ ವಾದವೇ ಹೂಡಿದ್ದರು. ವೇದಕಾಲದಲ್ಲಿ ಸಾಮಾನ್ಯ ವರ್ಗ, ವರ್ಣದ ಮಹಿಳೆಯರ ಸ್ಥಿತಿಗತಿ ಏನಾಗಿತ್ತು ಎಂಬುವುದಕ್ಕೆ ಮಾಹಿತಿಗಳು ಇಲ್ಲ.
ಧರ್ಮಗಳಲ್ಲಿ, ಸ್ಮೃತಿಗಳಲ್ಲಿ ನಮ್ಮನ್ನು ಕಟ್ಟಿ ಆಳುತ್ತಿರುವ ನಂಬಿಕೆಗಳು ಎಂಥವು ಎಂಬುದನ್ನು ಗಮನಿಸೋಣ.
ಸ್ತ್ರೀಯರಿಗೆ ಇವತ್ತಿಗೂ ಕೆಲವು ಕಡೆ ಗರ್ಭಗುಡಿಗಳಲ್ಲಿ ಪ್ರವೇಶವಿಲ್ಲ.ದೇವರನ್ನು ಪೂಜಿಸುವ ಹಕ್ಕಿಲ್ಲ.ಅವಳು ಮುಟ್ಟಾಗುವುದರಿಂದ ಮೈಲಿಗೆಯಾಗುತ್ತಾಳೆ ಎಂಬ ನಂಬಿಕೆ ಇದೆ ಆದ್ದರಿಂದ ಧಾರ್ಮಿಕ ಆಚರಣೆಗಳಲ್ಲಿ ಅವಳು ಪಾಲ್ಗೊಳ್ಳುವಂತಿಲ್ಲ. ಹೀಗಿರುವಾಗಲೂ ದೇವರ ಹೆಸರಿನಲ್ಲಿ ಉಪವಾಸ, ವ್ರತ, ನೇಮಗಳನ್ನು ಹೆಚ್ಚಾಗಿ ಆಚರಿಸುವವರು ಮಹಿಳೆಯರೇ ಆಗಿದ್ದಾರೆ. ದೇವರ ಹೆಸರಿನಲ್ಲಿ ಬೆತ್ತಲೆ ಪೂಜೆ,ಬಸವಿ ಬಿಡುವುದು ಮುಂತಾಗಿ ಇಂಥ ಆಚರಣೆಗಳಲ್ಲಿ ಸ್ತ್ರಿಯರೇ ಜಾಸ್ತಿ ತೊಡಗಿರುತ್ತಾರೆ.
ನಮ್ಮ ಧರ್ಮಶಾಸ್ತ್ರಗಳಲ್ಲಿ ಪುರುಷ ಪ್ರಧಾನವಾದ ಆಚರಣೆಗಳು ಹೇರಳವಾಗಿ ಬೆಳೆದುಕೊಂಡು ಬಂದಿವೆ. ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯವಿಲ್ಲ.ದೇವರನ್ನು ಮುಟ್ಟಿ ಪೂಜಿಸುವ ಹಕ್ಕು ಇಲ್ಲ. ವೈದಿಕರಲ್ಲಿ ಸ್ತ್ರೀಯರಿಗೆ ಉಪನಯನ ಸಂಸ್ಕಾರದ ಹಕ್ಕು ಇಲ್ಲ.
'ನಪುತ್ರಸ್ಯ ಗತಿರ್ನಾಸ್ತಿ' - ಅಂದರೆ ಗಂಡು ಸಂತಾನವಾಗದಿರುವವರಿಗೆ ಮೋಕ್ಷವಿಲ್ಲ. ಸತ್ತ ತಂದೆ - ತಾಯಂದಿರಿಗೆ ಮೋಕ್ಷ ದೊರೆಯಬೇಕಾದರೆ ಗಂಡು ಸಂತಾನ ಬೇಕೇಬೇಕು. ಶ್ರಾದ್ಧ ಮಾಡಿ ತರ್ಪಣ ಕೊಡುವ ಅಥವಾ ಚಿತೆಗೆ ಬೆಂಕಿ ಹಚ್ಚುವ ಅಧಿಕಾರ ಹಿರಿಯ ಗಂಡು ಮಗನಿಗೆ ಮಾತ್ರವಿದೆ. ಪುರಾಣಗಳಲ್ಲಿ ಪುತ್ರ ಪ್ರಾಪ್ತಿಗಾಗಿ ಮಾಡುವ ಪೂಜೆ -ಪುನಸ್ಕಾರ,ಯಾಗ-ಯಜ್ಞಗಳ ಪ್ರಸ್ತಾಪವೇ ಇದೆ. ಪುತ್ರಕಾಮೇಷ್ಟಿ ಯಾಗದ ಉದಾಹರಣೆಗಳು ದೊರೆಯುತ್ತವೆಯೇ ಹೊರತು ಪುತ್ರಿ ಪ್ರಾಪ್ತಿಗಾಗಿ ಇಂಥ ಯಾವುದೇ ಆಚರಣೆಗಳಿದ್ದನ್ತೆ ಕಂಡುಬರುವುದಿಲ್ಲ.
ಧರ್ಮಸಂಹಿತೆಗಳಲ್ಲಿ ಸ್ತ್ರೀಯರ ಕರ್ತವ್ಯಗಳನ್ನು ಕುರಿತು ಹೇಳಲಾಗಿದೆ. ಅವರ ಹಕ್ಕನ್ನು ಪ್ರತಿಪಾದಿಸಲಾಗಿಲ್ಲ.ಉದಾ: ಚಾಣಕ್ಯನೀತಿ 'ನಾರಿ ಧಾರಿಣಿಗೆ ಒಡೆಯಳಲ್ಲ. ಅವಳು,ಒಡೆಯನಾದವನು ತನ್ನ ಸಾಮ್ರಾಜ್ಯದ ನಡೆಗೆ ಬಳಸುವ ಊರುಗೋಲು, ಶತ್ರುಸಂಹಾರಕ್ಕೆ ರಾಜನು ಹೆಣ್ಣನ್ನು ಅಸ್ತ್ರದಂತೆ ಬಳಸಬಹುದು. ಬೊಕ್ಕಸ ಬರಿದಾದಾಗ ತನ್ನ ನಾಡಿನಲ್ಲಿ ಚೆಲುವಾದ ಹೆಣ್ಣುಗಳನ್ನು ವೇಶ್ಯಾವಾಟಿಕೆಗೆ ಇಳಿಸಿ ಕರಧನ ಸಂಗ್ರಹಿಸಬಹುದು' ಎಂದು ಹೇಳುತ್ತದೆ.
'ಕವಿತೆ, ವನಿತೆ, ಲತೆ ಇವು ಆಸರೆ ಇಲ್ಲದೆ ಸೋಭಿಸಲಾರವು'; 'ಹಲಗೆ, ದನ, ಸ್ತ್ರೀಯರು ಬಡಿಸಿಕೊಳ್ಳಲು ಮಾತ್ರ ಯೋಗ್ಯವಾದವು'; 'ನಾರಿ ನರಕಕ್ಕೆ ದಾರಿ, ಹೆಣ್ಣು ನಡೆದಾಡುವ ಸ್ಮಶಾನ' ಇಂಥ ಅಸಂಖ್ಯ ಉವಾಚಗಳು ನಮಗೆ ಪ್ರಾಚೀನ ಸಾಹಿತ್ಯದಲ್ಲಿ ದೊರೆಯುತ್ತವೆ.ಇಂಥ ನಂಬಿಕೆಗಳ ಕಾರಣವಾಗಿ ಸಾಮಾಜಿಕವಾಗಿಯೂ ಹೆಣ್ಣು ತುಚ್ಛಿಕರಿಸಲ್ಪಟ್ಟಳು. ಹೀಗಾಗಿ 'ನಗುವ ಹೆಂಗಸನ್ನು ನಂಬಬಾರದು, ಅಳುವ ಗಂಡಸನ್ನು ನಂಬಬಾರದು', 'ಹೆಣ್ಣು ಉಂಡಿದ್ದೆಲ್ಲ ಮಣ್ಣು, ಗಂಡು ಉಂಡಿದ್ದೆಲ್ಲ ಹೊನ್ನು', 'ಮಳೆ ಬಂದರೆ ಕೇಡಲ್ಲ, ಹೆಂಗಸು ತಿರುಗಿ ಕೆಟ್ಟಳು'; 'ಹೆಣ್ಣುಮಕ್ಕಳ ಕೈಯಲ್ಲಿ ಮನೆಯ ಕಾರುಬಾರ ಕೊಡಬಾರದಂತೆ'; 'ಹೆಣ್ಣು ಹುಟ್ಟಿದರೆ ಹುಣ್ಣು ಹುಟ್ಟಿದಂತೆ'.
ಬೈಗುಳ ಪದಗಳನ್ನೊಮ್ಮೆ ಕೆದಕಿ ನೋಡಿದರೆ ಅಚ್ಚರಿಯಾಗುತ್ತದೆ. ಏಕೆಂದರೆ ಹೆಚ್ಹು ಕಡಿಮೆ ಎಲ್ಲ ಬೈಗುಳ ಪದಗಳು ಹೆಣ್ಣಿನ ಅಂಗಾಂಗಗಳು, ಅವುಗಳ ಶುದ್ದತೆ, ಪಾತಿವ್ರತ್ಯ, ಮುತ್ತೈದೆತನ ಕುರಿತಾಗಿಯೇ ಇವೆ.
ಪಟ್ಟಿ ಮಾಡಲು ಸಾಧ್ಯವಿಲ್ಲದಷ್ಟು ಇಂಥ ಜಾಣ್ನುಡಿ, ನಾಣ್ಣುಡಿಗಳು ಎಲ್ಲ ಪ್ರದೇಶಗಳಲ್ಲಿ ಎಲ್ಲ ಭಾಷೆ, ಜನಾಂಗಗಳಲ್ಲಿ ಆಯಾ ಸಂಸ್ಕೃತಿಗೆ ಹೊಂದಿಕೊಂಡಂತೆ ಬೆಳೆದುಕೊಂಡು ಬಂದಿವೆ. ಇವೆಲ್ಲ ಸ್ತ್ರೀಯರನ್ನು ಅಮ್ಮನವೀಯ ನೆಲೆಯಲ್ಲಿ ಕ್ರೂರವಾಗಿ ಚಿತ್ರಿಸಲಾಗಿದೆ. ಇಂಥ ನಂಬಿಕೆಗಳಿಗೆ ಯಾವುದೇ ವೈಜ್ಞಾನಿಕ, ವೈಚಾರಿಕ, ತಾತ್ವಿಕ ತಳಹದಿ ಇಲ್ಲ.
ಮಕ್ಕಳಾಗದಿದ್ದಾಗ ಅಶ್ವಥ ಗಿಡ ಸುತ್ತುವುದು, ಕೊಂದ ಹಾಯುವುದು, ಮಾಂತ್ರಿಕರ ಬಳಿಗೆ ಹೋಗಿ ಅವರು ಕೊಡಮಾಡುವ ತರಹೇವಾರಿ ಹಿಂಸೆಗಳನ್ನು ಅನುಭವಿಸುವುದು ಹೀಗೆ ಲೆಕ್ಕವಿಲ್ಲದಷ್ಟು ಮೌಡ್ಯಗಳ ಕೋಪದಲ್ಲಿ ಮಹಿಳೆಯರು ಮುಳುಗಿಹೋಗಿದ್ದಾರೆ. ಅದರಂತೆ ದೆವ್ವ ಭೂತ, ದೇವರು ಬರುವುದು, ಬಾನಾಮತಿ, ಮಾಟ ಮಂತ್ರದಂಥ ನಂಬಿಕೆಗಳು ಕೂಡಾ ಸ್ತ್ರೀಯರ ಸುತ್ತಲೇ ಹೆಚ್ಚು ಆಕ್ರಮಿಸಿಕೊಂಡಿರುತ್ತವೆ. ಇಂಥ ನಂಬಿಕೆಗಳನ್ನು ಅವಳ ಮೇಲೆ ಒತ್ತಾಯದಿಂದ ಹೊರಿಸಲಾಗಿರುತ್ತದೆ ಅಥವಾ ಅವಳ ಬಾಳಿನ ದಾರುಣತೆಯೇ ಅವಳನ್ನು ಈ ತೆರನ ನಂಬಿಕೆಗಳತ್ತ ವಾಲುವಂತೆ ಮಾಡಿರುತ್ತದೆ.ಸ್ತ್ರೀಯರ ಆರೋಗ್ಯ ಮತ್ತು ಪರಿಸ್ಥಿತಿ ಕುರಿತು ಸಮಾಜ ಕಾಳಜಿ ಮತ್ತು ಸಕಾಲಿಕ ಎಚ್ಚರಿಕೆ ವಹಿಸುವುದಿಲ್ಲ. ಆದ್ದರಿಂದ ಅವರು ತಮ್ಮ ಅಸಂಖ್ಯಾತ ರೋಗರುಜಿನಗಳಿಗೆ ಮಂತ್ರ, ತಾಯಿತ, ಬಾಬಾಗಳ ಕಡೆ ಹೋಗುತ್ತಾರೆ. ಸಮಸ್ಯೆಗಳಿಂದ ಹೊರಬರುವ ಸಾಧ್ಯತೆ ಇಲ್ಲದಿರುವಾಗ ವ್ರತ, ನೇಮ, ಉಪವಾಸಗಳತ್ತ ಆಕರ್ಷಿತರಾಗುತ್ತಾರೆ. ಹೇಳಿಕೊಳ್ಳಲಾಗದ ಒತ್ತಡ ದೌರ್ಜನ್ಯಗಳಿಗೆ ಬಲಿಯಾದಾಗ ಮನೋರೋಗ, ಮಾನಸಿಕ ಅಸ್ವಸ್ಥತೆಗೆ ಬಲಿಯಾಗುತ್ತಾರೆ. ಮಹಿಳೆಯರನ್ನು ನಡೆಸಿಕೊಳ್ಳುವ ರೀತಿಯಲ್ಲಿ ಬದಲಾವಣೆ ತರಲು ಸಾಧ್ಯವಾಗುವುದಾದರೆ ಅರ್ಧದಷ್ಟು ಕಂದಾಚಾರಗಳಿಂದ ಸ್ತ್ರೀಯರನ್ನು ರಕ್ಷಿಸಬಹುದು. ಒಟ್ಟಾರೆ ನಮ್ಮ ಪರಂಪರಾಗತ ನಂಬಿಕೆಗಳಲ್ಲಿ ಸ್ತ್ರೀ ವಿರೋಧಿ ದೃಷ್ಟಿ-ಧೋರಣೆಗಳು ಓತಪ್ರೋತವಾಗಿ ತುಂಬಿಕೊಂಡಿವೆ. ಈ ನಂಬಿಕೆಗಳ ಮೂಲೋತ್ಪಾಟನೆಗಾಗಿ ನಾವು ನಮ್ಮ ಸಾಮಾಜಿಕ ಸಂರಚನೆಗಳಲ್ಲಿ ಮೂಲಭೂತ ಬದಲಾವಣೆ ತರಬೇಕಾಗಿದೆ. ಅಂದರೆ ಸ್ತ್ರೀಯರನ್ನು ನೋಡುವ ಪಾರಂಪರಿಕ ದೃಷ್ಟಿಕೋನ ಬದಲಾಗಬೇಕಾಗಿದೆ.
ಕೊನೆಯ ಮಾರ್ಪಾಟು : 2/15/2020
ಗಭ೯ಧರಿಸಿದ ಮಹಿಳೆಯ ಆರೋಗ್ಯಕ್ಕೆ ಮತ್ತು ಭ್ರೂಣಕ್ಕೆ ಕೆಲವು ...
ಪ್ರಸವಾನಂತರದ ಖಿನ್ನತೆ ಎಂದರೆ ಹೆರಿಗೆಯಾದ ಕೆಲವು ವಾರಗಳ ನಂ...
ಗರ್ಭಿಣಿಯಲ್ಲಿ ಸೋಂಕುರೋಗಗಳು ಹರಡುವ ಬಗೆ,ಮಗುವಿಗಿರುವ ಅಪಾಯ...
ಆಮ್ನಿಯಾಟಿಕ್ ದ್ರವವು ಮಗುವಿನ ಬೆಳವಣಿಗೆ ಮತ್ತು ಅಭಿವೃದ್...