অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

15 ಅಂಶಗಳ ಸೂತ್ರ

15 ಅಂಶಗಳ ಸೂತ್ರ

-ಗ್ರಾಮೀಣರ ಜೀವನ ಮಟ್ಟ ಸುಧಾರಣೆಗೆ ಸಮಗ್ರ ಯೋಜನೆ-

ಬೆಂಗಳೂರು: ಗ್ರಾಮೀಣರ ವಿಕಾಸಕ್ಕಾಗಿ ರಾಜ್ಯ ಸರಕಾರ 15 ಅಂಶಗಳ ಕಾರ್ಯಕ್ರಮ ಜಾರಿಗೆ ಸುತ್ತೋಲೆ ಹೊರಡಿಸಿದೆ.

ಮೂಲಸೌಕರ್ಯಗಳಿಲ್ಲ ಎಂದು ಗ್ರಾಮೀಣ ಜನರು ನಗರದ ಕಡೆ ವಲಸೆ ಹೊರಟಿರುವುದನ್ನು ತಡೆಯುವುದು ಇದರ ಮುಖ್ಯ ಉದ್ದೇಶ. ಸ್ವಯಂ ಉದ್ಯೋಗ ಅವಕಾಶಗಳ ಸೃಷ್ಟಿ ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿಗೂ ಹೆಚ್ಚಿನ ಒತ್ತು ನೀಡಲು ಗಮನ ಕೇಂದ್ರೀಕರಿಸಲಾಗಿದೆ. ಇದರ ಮೂಲಕ ಜೀವನ ಮಟ್ಟ ಸುಧಾರಿಸುವ ಆಶಯ ಇಟ್ಟುಕೊಳ್ಳಲಾಗಿದೆ. ಈ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಎಲ್ಲ ಪಂಚಾಯಿತಿಗಳಿಗೂ ಸುತ್ತೋಲೆ ರವಾನಿಸಿದ್ದು, ಕ್ರಿಯಾ ಯೋಜನೆ ರೂಪಿಸಿಕೊಂಡು ಕಾರ್ಯಕ್ರಮ ಅನುಷ್ಠಾನಗೊಳಿಸುವಂತೆ ಸೂಚಿಸಲಾಗಿದೆ.

ಕೌಶಲ್ಯ ತರಬೇತಿ

ಗ್ರಾಮೀಣ ಯುವಜನರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರೂ ಪೂರ್ಣ ಪ್ರಮಾಣದಲ್ಲಿ ಉದ್ಯೋಗಿಗಳಾಗಿರುವುದಿಲ್ಲ. ಕೆಲ ಉಪ ಕಸುಬುಗಳನ್ನು ಹೊರತುಪಡಿಸಿ ಹೆಚ್ಚಿನ ಕೌಶಲ್ಯ ಪಡೆಯಲು ಹಾಗೂ ಉದ್ಯೋಗ ಅವಕಾಶಗಳು ಕಡಿಮೆ ಇರುತ್ತವೆ. ಯುವಜನರಿಗೆ ಕೌಶಲ್ಯ ತರಬೇತಿ ನೀಡಲು ನಿರ್ಧರಿಸಲಾಗಿದೆ. ಕಾರ್ಮಿಕ ಇಲಾಖೆಯ ಸಂಜೀವಿನಿ, ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ಸೇರಿದಂತೆ ನಾನಾ ಅಭಿವೃದ್ಧಿ ನಿಗಮಗಳಲ್ಲಿ ಸಿಗವ ಅವಕಾಶಗಳನ್ನು ಬಳಸಿಕೊಂಡು ನಿರುದ್ಯೋಗಿ ಯುವಜನರಿಗೆ ಕೌಶಲ್ಯ ತರಬೇತಿ ಕಾರ್ಯಕ್ರಮ ಆಯೋಜಿಸುವಂತೆ ಪಂಚಾಯಿತಿಗಳಿಗೆ ಆದೇಶಿಸಲಾಗಿದೆ. ಸ್ವಯಂ ಉದ್ಯೋಗವಕಾಶ ಕೈಗೊಳ್ಳಲು ರಾಜೀವ್ ಚೈತನ್ಯ ಯೋಜನೆಯಡಿ ಲಭ್ಯ ಇರುವ ಅನುದಾನವನ್ನು ವಿನಿಯೋಗಿಸಿಕೊಳ್ಳುವಂತೆ ಸೂಚಿಸಲಾಗಿದೆ.

ರುದ್ರಭೂಮಿ

ನಗರ ಪ್ರದೇಶದಲ್ಲಿ ಇರುವ ಸಮಸ್ಯೆಯಂತೆಯೇ ಬಹುತೇಕ ಹಳ್ಳಿಗಳಲ್ಲಿಯೂ ರುದ್ರಭೂಮಿಗಳಿಲ್ಲ. ಭೂದಾತರು ತಮ್ಮ ಹೊಲ-ಗದ್ದೆಗಳಲ್ಲಿ ಶವ ಸಂಸ್ಕಾರ ಮಾಡಿಕೊಳ್ಳುತ್ತಾರೆ. ಆದರೆ ಭೂರಹಿತ ಶವ ಸಂಸ್ಕಾರ ಮಾಡಲು ಪರಾಡುವ ಇಲ್ಲವೇ ಸರಕಾರಿ ಭೂಮಿ ಹುಡುಕಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಇದನ್ನು ಮನಗಂಡು ಗ್ರಾಮಕ್ಕೊಂದು ರುದ್ರಭೂಮಿ ನಿರ್ಮಾಣ ಮಾಡುವುದು. ಇದು ಸಾಧ್ಯವಾಗದಿದ್ದರೆ ಕನಿಷ್ಠ ಗ್ರಾಮ ಪಂಚಾಯಿತಿಗೊಂದು ರುದ್ರಭೂಮಿ ಗುರುತಿಸುವಂತೆ ಸೂಚನೆ ನೀಡಲಾಗಿದೆ. ಗ್ರಾಮದಿಂದ ಹೊರಭಾಗದಲ್ಲಿ ರುದ್ರಭೂಮಿ ನಿರ್ಮಾಣ ಮಾಡುವಂತೆ ತಿಳಿಸಲಾಗಿದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅನುದಾನ ಬಳಸಿಕೊಳ್ಳಲು ಸೂಚಿಸಲಾಗಿದೆ.

ನಾಗರಿಕ ಸೇವಾ ಕೇಂದ್ರ

ಗ್ರಾಮೀಣ ಜನರು ಸರಕಾರದ ನಾನಾ ಇಲಾಖೆಗಳಿಂದ ದಾಖಲೆ ಪಡೆಯಲು ಹೋಬಳಿ ಮಟ್ಟದ ನಾಡಕಚೇರಿ ಇಲ್ಲವೇ ತಾಲೂಕು ಕಚೇರಿಗೆ ಅಲೆಯಬೇಕು. ಇದನ್ನು ತಪ್ಪಿಸಲು ಇ-ಆಡಳಿತ ಇಲಾಖೆ ಸಹಯೋಗದಲ್ಲಿ ಪ್ರತಿ ಗ್ರಾಮ ಪಂಚಾಯಿತಿ ಹಂತದಲ್ಲಿ ನಾಗರಿಕ ಸೇವಾ ಕೇಂದ್ರಗಳನ್ನು ಸ್ಥಾಪಿಸುವಂತೆ ತಿಳಿಸಲಾಗಿದೆ. ಇದರಿಂದ ಜನರಿಗೆ ಗ್ರಾಮ ಮಟ್ಟದಲ್ಲೇ ಎಲ್ಲ ಇಲಾಖೆಗಳ ದಾಖಲೆ, ಯೋಜನೆಗಳ ವಿವರ ಹಾಗೂ ಸವಲತ್ತುಗಳನ್ನು ಪಡೆಯಲು ಅನುಕೂಲ ಆಗಲಿದೆ. ತಾಲೂಕು ಮಟ್ಟದಲ್ಲಿ ಇಂತಹ ಸೇವಾ ಕೇಂದ್ರಗಳು ಇದ್ದರೂ ಅಲ್ಲಿ ಸಾಲಗಟ್ಟಿ ನಿಲ್ಲಬೇಕು ಹಾಗೂ ಸರ್ವರ್ ಸಮಸ್ಯೆಯಿಂದ ವಾರಗಟ್ಟಲೆಯಾದರೂ ಸೇವೆಗಳು ದೊರೆಯದೆ ಪರದಾಡಬೇಕಾಗಿದೆ. ಗ್ರಾಮಮಟ್ಟದಲ್ಲಿ ಆರಂಭಿಸುವ ಸೇವಾ ಕೇಂದ್ರಗಳಲ್ಲಿ ಇಂತಹ ಸಮಸ್ಯೆ ಉಲ್ಬಣಿಸದಂತೆ ಪಂಚಾಯಿತಿಗಳು ಕ್ರಮ ತೆಗೆದುಕೊಳ್ಳಬೇಕಿದೆ.

ನಮ್ಮ ಹಳ್ಳಿ-ನಮ್ಮ ನೀರು

ಕೃಷಿ ಪಂಪ್‌ಸೆಟ್‌ಗಳ ಅತಿಯಾದ ಬಳಕೆಯಿಂದ ಅಂತರ್ಜಲ ಮಟ್ಟ ಕುಸಿದಿದೆ. ಸಾವಿರ ಅಡಿ ಕೊರೆಸಿದರೂ ಕೊಳವೆಬಾವಿಯಲ್ಲಿ ನೀರು ಸಿಗುತ್ತಿಲ್ಲ. ಈ ಕಾರಣಕ್ಕೆ ಅಂತರ್ಜಲ ಮರುಪೂರಣಕ್ಕಾಗಿ ಮಳೆ ನೀರು ಇಂಗಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಲು 'ನಮ್ಮ ಹಳ್ಳಿ-ನಮ್ಮ ನೀರು' ಪರಿಕಲ್ಪನೆಯ ಕಾರ್ಯಕ್ರಮ ರೂಪಿಸಲಾಗಿದೆ. ಕೆರೆ, ಕುಂಟೆ, ಕಲ್ಯಾಣಿಗಳು, ತೊರೆಗಳು, ತೆರೆದ ಬಾವಿಗಳು ಹಾಗೂ ಕೊಳವೆಬಾವಿಗಳಿಗೆ ಮಳೆ ನೀರು ಹರಿಸಿ ಇಂಗಿಸುವ ಕಾಯಕದಲ್ಲಿ ಜನರು ತೊಡಗಿಸಿಕೊಳ್ಳುವಂತೆ ಮಾಡುವಂತೆ ಸೂಚಿಸಲಾಗಿದೆ. ಜನರ ಸಹಭಾಗಿತ್ವದಲ್ಲಿ ಜಲಾನಯನ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಸೇವೆಯನ್ನು ಪಡೆದುಕೊಂಡು ನರೇಗಾ ಯೋಜನೆ ಇಲ್ಲವೇ ಗ್ರಾಮೀಣ ನೀರು ಸರಬರಾಜು ಯೋಜನೆ ಅನುದಾನ ಬಳಕೆ ಮಾಡಿಕೊಳ್ಳುವಂತೆ ತಿಳಿಸಲಾಗಿದೆ. ನಮ್ಮೂರ ಕೆರೆ-ಯೋಜನೆಯಡಿ ಹೊಸ ಕರೆಗಳ ನಿರ್ಮಾಣ ಹಾಗೂ ಕೆರೆಗಳ ಹೂಳೆತ್ತಿ ಪುನರುಜ್ಜೀವನಗೊಳಿಸಲು ಸೂಚನೆ ನೀಡಲಾಗಿದೆ.

ಸಾರ್ವಜನಿಕ ಗ್ರಂಥಾಲಯ

ಗ್ರಾಮೀಣರಲ್ಲಿ ಓದುವ ಹವ್ಯಾಸ ಬೆಳೆಸಲು ಸಮಾಜದ ವಿದ್ಯಮಾನಗಳನ್ನು ತಿಳಿಯಲು ಪ್ರತಿ ಗ್ರಾಮಕ್ಕೊಂದು ಸಾರ್ವಜನಿಕ ಗ್ರಂಥಾಲಯ ನಿರ್ಮಿಸುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ. 13ನೇ ಹಣಕಾಸು ಯೋಜನೆ ಇಲ್ಲವೇ ಸುವರ್ಣ ಗ್ರಾಮೋದಯ ಯೋಜನೆ ಇಲ್ಲವೇ ಮೂಲಭೂತ ಸೌಕರ್ಯದಡಿ ಲಭ್ಯ ಇರುವ ಅನುದಾನ ಬಳಕೆ ಮಾಡಿಕೊಂಡು ಗ್ರಂಥಾಲಯ ಕಟ್ಟಡ ನಿರ್ಮಾಣ ಮಾಡುವಂತೆಯು ಸೂಚಿಸಲಾಗಿದೆ.

ಮನೆಗೊಂದು ಶೌಚಾಲಯ

ನೈರ್ಮಲ್ಯ ಸಮಸ್ಯೆ ನಿವಾರಿಸಿ ಗ್ರಾಮೀಣ ಜನರ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿ ಮನೆಯಲ್ಲಿಯೂ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಜಾಗೃತಿ ಮೂಡಿಸುತ್ತಿದ್ದರೂ ಪೂರ್ಣ ಗುರಿ ಸಾಧಿಸಲು ಆಗಿಲ್ಲ. ಕಡ್ಡಾಯವಾಗಿ ಶೌಚಾಲಯ ನಿರ್ಮಾಣ ಮಾಡಿಕೊಳ್ಳುವಂತೆ ಪ್ರತಿ ಕುಟುಂಬದ ಮನವೊಲಿಸಲು ಗ್ರಾಮ ಪಂಚಾಯಿತಿಗಳಿಗೆ ಹೊಣೆಗಾರಿಕೆ ನೀಡಲಾಗಿದೆ. ನರೇಗಾ ಯೋಜನೆಯಡಿಯು ಅನುದಾನ ಬಳಕೆಗೆ ಅವಕಾಶ ಮಾಡಿಕೊಡಲಾಗಿದೆ.

ಆಟದ ಮೈದಾನ

ಮಕ್ಕಳು ಮತ್ತು ಯುವಜನರ ಭೌತಿಕ ವಿಕಾಸಕ್ಕೆ ಆಟದ ಮೈದಾನಗಳು ಬಹಳ ಅಗತ್ಯ. ಆದರೆ ಗ್ರಾಮಗಳಲ್ಲಿ ಆಟದ ಮೈದಾನವೇ ಇಲ್ಲದಿರುವುದನ್ನು ಮನಗಂಡು ಪ್ರತಿ ಹಳ್ಳಿಗೊಂದು ಆಟದ ಮೈದಾನ ನಿರ್ಮಾಣ ಮಾಡಬೇಕು. ನರೇಗಾ ಇಲ್ಲವೇ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಒಸಗಿಸುವ ಅನುದಾನ ಬಳಕೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

ಕುರಿ-ದನದ ದೊಡ್ಡಿ

ಕುರಿ ಮತ್ತು ಜಾನುವಾರುಗಳ ಸಾಕಣೆ ಗ್ರಾಮೀಣ ಜನರ ಪರ್ಯಾಯ ಉದ್ಯೋಗವಾಗಿದೆ. ಜಾನುವಾರುಗಳಿಗೆ ಸೂಕ್ತ ಆಶ್ರಮ ಸಮಸ್ಯೆ ಇರುವುದರಿಂದ ನರೇಗಾ ಯೋಜನೆಯಡಿ ಕುರಿ ಮತ್ತು ದನದ ದೊಡ್ಡಿಗಳನ್ನು ನಿರ್ಮಾಣ ಮಾಡಬೇಕು. ಮೊದಲು ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಆದ್ಯತೆ. ನಂತರ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಅವಕಾಶ ನೀಡುವಂತೆ ತಿಳಿಸಲಾಗಿದೆ.

* 27,397 ಗ್ರಾಮಗಳು

* 59532 ಜನವಸತಿ ಪ್ರದೇಶಗಳು

15 ಕಾರ್ಯಕ್ರಮಗಳೇನು?

* ಗ್ರಾಮಕ್ಕೊಂದು ಆಟದ ಮೈದಾನ

* ರುದ್ರಭೂಮಿ ನಿರ್ಮಾಣ

* ಕುರಿ-ದನದ ದೊಡ್ಡಿ

* ಧಾನ್ಯಗಳ ಒಕ್ಕಲು ಕಣ

* ಬಯಲು ರಂಗಮಂದಿರ

* ಪಂಚಾಯಿತಿ ಮಟ್ಟದಲ್ಲಿ ನಾಗರಿಕ ಸೇವಾ ಕೇಂದ್ರ

* ಯುವಜನರಿಗೆ ಕೌಶಲ್ಯ ತರಬೇತಿ

* ನಮ್ಮ ಹಳ್ಳಿ-ನಮ್ಮ ನೀರು

* ಸ್ವಯಂ ಉದ್ಯೋಗ ಅವಕಾಶ

* ಸಾರ್ವಜನಿಕ ಗ್ರಂಥಾಲಯ

* ನಮ್ಮ ಹೊಲ-ನಮ್ಮ ದಾರಿ

* ನಮ್ಮೂರ ಕೆರೆ

* ಗ್ರಾಮ ರಸ್ತೆಗಳ ನಿರ್ಮಾಣ

* ಶುದ್ಧ ಕುಡಿವ ನೀರು ಒದಗಿಸುವುದು

* ಮನೆಗೊಂದು ಶೌಚಾಲಯ

ಮೂಲ : ವಿಜಯ ಕರ್ನಾಟಕ

ಕೊನೆಯ ಮಾರ್ಪಾಟು : 6/2/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate