2015-16ನೇ ಸಾಲಿನಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಸರಳವಾಗಿ ಮಾದುವೆ ಮಾಡಿಕೊಳ್ಳುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ದಂಪತಿಗಳ ಸರಳ ವಿವಾಹ ಯೋಜನೆಯಡಿ ಒಂದು ಬಾರಿಗೆ ರೂ. 50,000/- ಆರ್ಥಿಕ ನೆರವನ್ನು ನೀಡಲು ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಸರ್ಕಾರದ ಮಂಜುರಾತಿ ನೀಡಿದೆ. ಅರ್ಜಿದಾರ ದಂಪತಿಗಳು ಕರ್ನಾಟಕ ರಾಜ್ಯಕ್ಕೆ ಸೇರಿದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು. ಸಾಮೂಹಿಕ ವಿವಾಹದಲ್ಲಿ ಕನಿಷ್ಠ 10 ಜೋಡಿಗಳು ಭಾಗವಹಿಸಿರತಕ್ಕದ್ದು. ಈ ಸೌಲಭ್ಯ ಪಡೆಯುವ ವಧುವಿನ ಕನಿಷ್ಠ 18 ವರ್ಷದಿಂದ ಗರಿಷ್ಟ 42 ವರ್ಷಗಳು, ವರನಿಗೆ ಕನಿಷ್ಠ 21 ವರ್ಷದಿಂದ ಗರಿಷ್ಟ 45 ವರ್ಷ ವಯಸ್ಸು ಆಗಿರತಕ್ಕದ್ದು. ಈ ಯೋಜನೆಯಡಿ ಧನ ಸಹಾಯ ಪಡೆಯಲು ವಧು ಮತ್ತು ವರನ ಒಟ್ಟಾರೆ ವಾರ್ಷಿಕ ಆದಾಯವು ರೂ. 2.00 ಲಕ್ಷಗಳನ್ನು ಮೀರತಕ್ಕದ್ದಲ್ಲ. ಈ ಸೌಲಭ್ಯವನ್ನು ಜೀವನದಲ್ಲಿ ಒಮ್ಮೆ ಮಾತ್ರ ಪಡೆಯಬಹುದಾಗಿದೆ. ಜಿಲ್ಲಾ ನೋಂದಣಿ ಕಛೇರಿಯಲ್ಲಿ ಸಾಮೂಹಿಕ ವಿವಾಹಗಳ ಆಯೋಜಕರೆಂದು ನೋಂದಣಿಯಾಗಿರುವ ಖಾಸಗಿ ಟ್ರಸ್ಟ್ ಗಳು, ಸಂಘಗಳು, ಸೊಸೈಟಿಗಳು ಮತ್ತು ಖಾಸಗಿ ವ್ಯಕ್ತಿಗಳು ನಡೆಸುವ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ವಿವಾಹವಾದಲ್ಲಿ ಮಾತ್ರ ಅರ್ಜಿ ಸಲ್ಲಿಸತಕ್ಕದ್ದು. ಸದರಿ ಸಂಸ್ಥೆಗಳು ಆಯೋಜಿಸಿರುವ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ವಿವಾಹವಾಗಿರುವ ಬಗ್ಗೆ ಪ್ರಮಾಣ ಪತ್ರ ಸಲ್ಲಿಸತಕ್ಕದ್ದು. ಪ್ರೋತ್ಸಾಹ ಧನ ಪಡೆಯಲು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸರಳ ವಿವಾಹವಾದ ೩ ತಿಂಗಳೊಳಗಾಗಿ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳ ಕಛೇರಿಗೆ ಜಂಟಿಯಾಗಿ ನಿಗದಿತ ನಮೂನೆಯಲ್ಲಿ ಮತ್ತು ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು. ವಧು-ವರನು ವಿವಾಹವಾದ ಬಳಿಕ ವಾಸ್ತವ್ಯವಿರುವ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸತಕ್ಕದ್ದು. ಸಾಮೂಹಿಕ ವಿವಾಹ ಕಾರ್ಯಕ್ರಮದ ಫೋಟೋ ಹಾಗೂ ವಧು-ವರನ ಜಂಟಿ ಭಾವಚಿತ್ರಗಳನ್ನು (ಸ್ಥಿರ ಚಿತ್ರಗಳನ್ನು) ಆಯೋಜಕರಿಂದ ಪಡೆದು ಅರ್ಜಿಯೊಂದಿಗೆ ಲಗತ್ತಿಸುವುದು. ಅರ್ಜಿಗಳನ್ನು ಪರಿಶೀಲಿಸುತ್ತಿರುವ/ಪರಿಶೀಲಿಸಿದ ಅಧಿಕಾರಿಗಳ/ಪ್ರಾಧಿಕಾರಿಗಳ ಮೇಲೆ ಯಾವುದೇ ರೀತಿಯ ಒತ್ತಡವನ್ನು ತಂದಲ್ಲಿ ಅರ್ಜಿಗಳನ್ನು ಯಾವುದೇ ಕಾರಣ ನೀಡದೆ ತಿರಸ್ಕರಿಸಲಾಗುವುದು. ಅಂತರ ಜಾತಿ ವಿವಾಹಗಳು ಇದ್ದಲ್ಲಿ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಸ್ಪೃಶ್ಯತಾ ನಿವಾರಣಾ ಕಾರ್ಯಕ್ರಮದಡಿ ಅಂತರ್ ಜಾತಿ ಪ್ರೋತ್ಸಹಧನಕ್ಕೋಸ್ಕರ ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಅಂತರ್ ಜಾತಿ ವಿವಾಹ ಪ್ರೋತ್ಸಾಹಧನ ಯೋಜನೆಯಲ್ಲಿ ಅರ್ಜಿ ಸಲ್ಲಿಸಬಹುದು. ಮಂಜೂರಾದ ಪ್ರೋತ್ಸಾಹಧನದ ಹಣವನ್ನು ವಧು ಹಾಗೂ ವರನಿಗೆ ಜಂಟಿಯಾಗಿ ಮಂಜೂರು ಮಾಡಲಾಗುವುದು ಹಾಗೂ ಮಂಜೂರಾದ ಮೊತ್ತವನ್ನು ವದ್ಗು ಮತ್ತು ವರನ ಹೆಸರಿನಲ್ಲಿರುವ ಜಂಟಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಇಂತಹ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಯಾವುದೇ ತರಹದ ಬಾಲ್ಯ ವಿವಾಹ ಅಥವಾ ಅಪ್ರಾಪ್ತ ವಯಸ್ಸಿನ ವಿವಾಹಗಳು ಜರುಗದಿರುವಂತೆ ಖಾತ್ರಿಪಡಿಸಿಕೊಳ್ಳುವ ಹಾಗೂ ಶಿಶು ಅಭಿವರ್ಧಿ ಯೋಜನಾಧಿಕಾರಿ (CDPO) ರವರನ್ನು ಈ ಪ್ರಕ್ರಿಯೆಯ ಭಾಗವನ್ನಾಗಿಸತಕ್ಕದ್ದು. ವಿಧಾನಸಭಾ ಕ್ಷೇತ್ರವಾರು ನಿಗಧಿಪಡಿಸುವ ಭೌತಿಕ ಗುರಿಗೆ ಅನುಗುಣವಾಗಿ ಆರ್ಥಿಕ ನೆರವನ್ನು ಮಂಜೂರು ಮಾಡಲಾಗುವುದು. ಮೂಲ : ಸಮಾಜ ಕಲ್ಯಾಣ ಇಲಾಖೆ,ಮಂಗಳೂರು