ರಂಜಕ, ಗಂಧಕ ಸೇರಿದಂತೆ ಗಿಡಗಳಿಗೆ ಬೇಕಾದ ಎಲ್ಲಾ ಪೋಷಕಾಂಶಗಳು ಮಣ್ಣಿನಲ್ಲಿವೆ. ಆದ್ರೆ ಬೆಳವಣಿಗೆಗೆ ಬೇಕಾದ ಅತಿಮುಖ್ಯವಾದ ಸಾರಜನಕ ಮಣ್ಣಲಿಲ್ಲ, ಪ್ರಕೃತಿಯ ಅದ್ಭುತ ಕಲೆಗಾರಿಕೆ ಎಂಬಂತೆ ಗಾಳಿಯಲ್ಲಿ 78.3% ರಷ್ಟು ಸಾರಜನಕವಿದೆ. ದ್ವಿದಳ ಧಾನ್ಯಗಳ ಬೇರುಗಳ ಗಂಟುಗಳಲ್ಲಿರುವ ರೈಜೋಬಿಯಂ ಬ್ಯಾಕ್ಟೀರಿಯಾಗಳು ವಾತಾವರಣದಿಂದ ಸಾರಜನಕವನ್ನ ಹೀರಿ ಮಣ್ಣಿನಲ್ಲಿ ಸ್ಥಿರೀಕರಿಸುವ ಪುಣ್ಯದ ಕೆಲಸವನ್ನು ಮಾಡುತ್ತವೆ, ಗಿಡಗಳ ಬೆಳವಣಿಗೆ ಟಾನಿಕ್ ಪೂರೈಸುತ್ತವೆ. ಇನ್ನೂ ಮಣ್ಣಿನಲ್ಲಿರುವ ಎರೆಹುಳು ಮತ್ತು ಸೂಕ್ಷ್ಮಾಣು ಜೀವಿಗಳು ಸದಾ ಸಕ್ರಿಯವಾಗಿದ್ದು ರಂಜಕ, ಗಂಧಕ ಸೇರಿದಂತೆ ಎಲ್ಲಾ ಲಘು ಪೋಷಕಾಂಶಗಳನ್ನು ಗಿಡಗಳ ಬಳಕೆಗೆ ಯೋಗ್ಯವಿರುವಂತೆ ಮಣ್ಣನ್ನು ತಿಂದು ಹಿಕ್ಕೆ ಹಾಕುವ ಮೂಲಕ ಪರಿವರ್ತಿಸಿ ಕೊಡುತ್ತವೆ. ಈ ರೀತಿ ಭೂಮಿ ಸ್ವಾವಲಂಬಿ ಮತ್ತು ಶ್ರೀಮಂತೆ. ನಾವು ಆಧುನೀಕರಣದ ಹೆಸರಿನಲ್ಲಿ ಕೃಷಿಯಲ್ಲಿ ರಾಸಾಯನಿಕಗಳ ಹೆಚ್ಚು ಬಳಸುತ್ತಾ ಹೋದಂತೆ ಎರೆಹುಳು ಮತ್ತು ಸೂಕ್ಷ್ಮಾಣು ಜೀವಿಗಳು ಕಣ್ಮರೆಯಾಗಿ ಸ್ವಾವಲಂಬಿಯಾಗಿದ್ದ ಭೂಮಿ ಪರಾವಲಂಬಿ ಆಗುತಿಹಳು, ತನ್ನಲ್ಲಿ ಗಿಡಗಳಿಗೆ ಬೇಕಾದ ಎಲ್ಲಾ ರೀತಿಯ ಪೋಷಕಾಂಶಗಳು ಇದ್ದಾಗ್ಯೂ ಹೊರಗಡೆಯಿಂದ ಕಾಡಿ ಬೇಡುತಿಹಳು. ಉಳುಮೆ ಅಗತ್ಯವಿಲ್ಲದ ಕಾರಣ ಮರ ಕೃಷಿ ಮತ್ತು ತೋಟಗಾರಿಕೆಯಂತೂ ತುಂಬಾ ಸರಳವಾಗಿ, ಸಹಜವಾಗಿ ನೈಸರ್ಗಿಕ ಕೃಷಿಗೆ ಹೊಂದಿಕೊಳ್ಳುವುದು, ಉತ್ತಮ ಪ್ರತಿಫಲ ಕೊಡುವುದು. ನಾವು ಮಾಡಬೇಕಾದ ಮುಖ್ಯ ಕೆಲಸಗಳೆಂದರೆ ಗಿಡಗಳಿಗೆ ಮುಚ್ಚಿಗೆ ಮಾಡುವುದು ಮತ್ತು ಸಾರಜನಕ ಸ್ಥಿರೀಕರಣಕ್ಕೆ ದ್ವಿದಳ ಧಾನ್ಯಗಳ ಬಿತ್ತಿ ಜೊತೆಯಾಗಿಸುವುದು! ತುಂಬಾ ವೇಗವಾಗಿ ಮತ್ತು ಸಮೃದ್ಧವಾಗಿ ಬೆಳೆಯುವ ಅಗಸೆ ಗಿಡಗಳು ಅರಣ್ಯ ಕೃಷಿಯ ತೇಗ, ಶ್ರೀಗಂಧ, ಅಡಿಕೆ, ತೆಂಗು, ರಕ್ತ ಚಂದನ, ಮಹಾಘನಿ ಮೊದಲಾದ ಗಿಡಮರಗಳ ಜೊತೆಗೆ ಸಾರಜನಕ ಸ್ಥಿರೀಕರಣಕ್ಕೆ ಅತ್ಯುತ್ತಮ ಸಂಗಾತಿ ಬೆಳೆ. ಮೊಲ, ಆಡು, ಕುರಿ, ದನಕರುಗಳಿಗೆ ಸಮೃದ್ಧ ಮೇವು ಅಗಸೆ ಸೊಪ್ಪು, ಹೂವು ಮತ್ತು ಕಾಯಿ. ಹಾಗೆ ಬರೀ ಜಾನುವಾರುಗಳಿಗಷ್ಟೇ ಅಲ್ಲ... ಅಗಸೆ ಸೊಪ್ಪು, ಹೂ ಮತ್ತು ಕಾಯಿ ನಮ್ಮ ಆಹಾರ ಪರಂಪರೆಯಲ್ಲಿ ನುಗ್ಗೆ ಅಷ್ಟೇ ಅತ್ಯಂತ ಮಹತ್ವಪೂರ್ಣ ಸ್ಥಾನ ಹೊಂದಿವೆ. ಆ ಮಟ್ಟಕ್ಕೆ ಸ್ವಾದಿಷ್ಟ ಹಾಗೂ ಪೋಷಕಾಂಶಗಳಿಂದ ಸಮೃದ್ಧ ಆಗಿವೆ. ಗಿಡಗಳ ಆಗಾಗ ಕಡಿದು ಕಡಿದು ಬೆಳೆಸುವುದರಿಂದ ಸೊಪ್ಪು ಮಣ್ಣಿಗೆ ಮುಚ್ಚಿಗೆ ಯಾಗುವುದು, ಎರೆಹುಳು ಮತ್ತು ಸೂಕ್ಷ್ಮಾಣು ಜೀವಿಗಳಿಗೆ ಆಶ್ರಯ ಹಾಗೂ ಆಹಾರವಾಗುವುದು. ಒಂದಷ್ಟು ಬುದ್ಧಿವಂತ ರೈತರು, ಅದರಲ್ಲೂ ಮಧ್ಯ ಕರ್ನಾಟಕ ಭಾಗದ ರೈತರು ಅಗಸೆ ಗಿಡಗಳ ಸಾಲಾಗಿ ನೆಟ್ಟು ಬೆಳೆಸಿ ವೀಳ್ಯದೆಲೆ ಬಳ್ಳಿ ಹಬ್ಬಿಸಿ ವರ್ಷ ಪೂರ್ತಿ ಕಾಸು ಎಣಿಸುವರು. ಹೊಸದಾಗಿ ನೆಟ್ಟ ಅಡಿಕೆ ಗಿಡಗಳ ಆರಂಭಿಕ ಆರೈಕೆಗೆ ಪೂರಕ ನೆರಳಿಗಾಗಿ ಬಾಳೆ ಬದಲು ಅಗಸೆ ಸಸಿಗಳ ನೆಡುವರು ತುಂಬಾ ಮಂದಿ. ಇದರಿಂದ ಅಡಿಕೆ ಗಿಡಗಳಿಗೆ ಭಾಗಶಃ ನೆರಳಿನ ಜೊತೆಗೆ ಸಾರಜನಕ ಸಹ ಮಣ್ಣಿನಲ್ಲಿ ಸ್ಥಿರೀಕರಣಗೊಂಡು ಅಡಿಕೆ ಗಿಡಗಳು ಸಹಜವಾಗಿ ಸಮೃದ್ಧವಾಗಿ ಬೆಳೆಯುವವು. ಅಗಸೆ ಮರಗಳು ತಾಯಿ ಬೇರಿನ ಸ್ವಭಾವದಾದ್ದ ಕಾರಣ ಮಣ್ಣಿನಲ್ಲಿ ಸಮೃದ್ಧ ಮಳೆ ನೀರು ಮಣ್ಣಿನೊಡಲಿಗಿಳಿಯುವುದು. ಜೊತೆಗೆ ಮುಚ್ಚಿಗೆಗೆ ಸೊಪ್ಪು, ಜನ-ಜಾನುವಾರಿಗೆ ಸಮೃದ್ಧ ಮೇವು☘️