ಗಗನಮುಖಿ ಬೆಲೆ ಮತ್ತು ಬೇಡಿಕೆ ಕಾರಣ ಹಲವು ದಿನಗಳಿಂದ ತೆಂಗು ಮತ್ತು ಅಡಿಕೆಗೆ ರಾಜಮರ್ಯಾದೆ. ಈ ಬಾರಿ ಹೊಸದಾಗಿ ವಿಸ್ತರಣೆಗೊಳ್ಳುತ್ತಿರುವ ತೋಟಗಳಲ್ಲೂ ತೆಂಗು-ಅಡಿಕೆಯದ್ದೇ ಮೇಲುಗೈ. ಒಂದಷ್ಟು ಮಂದಿ ಅಡಿಕೆ ತೋಟಗಳ ಹಿಂದೆ ಬಿದ್ದರೆ, ಇನ್ನೊಂದಿಷ್ಟು ಮಂದಿ ತೆಂಗಿನ ತೋಟ ಕಟ್ಟುತಿಹರು. ಕೆಲವೊಂದಿಷ್ಟು ಮಂದಿ ತೆಂಗೂ ಇರಲಿ, ಅಡಿಕೆಯೂ ಬರಲಿ ಎಂದು ಎರಡರ ಬೆನ್ನತ್ತಿಹರು. ನಮ್ಮ ರೈತರ ದೃಷ್ಟಿಯಲ್ಲಿ ತೆಂಗು ಕಲ್ಪವೃಕ್ಷವಾದರೆ, ಅಡಿಕೆ ಲಕ್ಷ್ಮೀ ಎಂದೇ ಜನಜನಿತ. ಸೂಕ್ತ ಮಣ್ಣು, ಅವಶ್ಯಕ ಮಳೆ ಹಾಗೂ ನೀರು ಮತ್ತು ಪೂರಕ ವಾತಾವರಣ ಇಲ್ಲದ ಭಾಗದಲ್ಲಿ ಈ ಎರಡು ಕಾಂಚಾಣ ಬೆಳೆಗಳು ರೈತರ ಬಾಳಿಗೆ ಬಿಸಿ ತುಪ್ಪವೇ! ಇರಲಿ... ಸಂಬಂಧಿತ ಒಂದು ಮುಖ್ಯ ವಿಚಾರಕ್ಕೆ ಇಳಿಯೋಣಾ. ಅಡಿಕೆ ಮರ ತೆಂಗಿಗಿಂತ ಸ್ವಲ್ಪ ವೇಗವಾಗಿ ಬೆಳೆಯುವಂತದ್ದು. ತೆಂಗಿಗೆ ಅಡಿಕೆಗಿಂತಲೂ ಹೆಚ್ಚು ಗಾಳಿ, ಬೆಳಕು, ಬಿಸಿಲು ಬೇಕು. ಅವು ಅವಶ್ಯಕ ಪ್ರಮಾಣದಲ್ಲಿ ಸಿಕ್ಕಾಗಷ್ಟೇ ತೆಂಗಿನ ಫಸಲು ಭರ್ಜರಿ, ಮರವೂ ಆರೋಗ್ಯಕರ ಮತ್ತು ಲಾಭದಾಯಕ. ಅಡಿಕೆ-ತೆಂಗು ಒಟ್ಟಿಗೆ ನೆಟ್ಟು ದುಪ್ಪಟ್ಟು ಆದಾಯ ಎಣಿಸುವ ಲೆಕ್ಕಾಚಾರ ಹಾಕುವ ಮುನ್ನ ನಾವು ತಾಳಬೇಕು, ತಿಳಿದು ಬೆಳೆಯಬೇಕು. ತೆಂಗು-ಅಡಿಕೆ ಒಟ್ಟಿಗೆ ನೆಟ್ಟರೆ ಏನಾಗುವುದು..? ಏನಾಗುವುದೆಂದರೆ... ಅಡಿಕೆ ಮರಗಳು ತೆಂಗಿಗಿಂತ ಬೇಗ ಬೆಳೆಯುವುದರಿಂದ ತೆಂಗಿಗೆ ಗಾಳಿ-ಬೆಳಕು, ಬಿಸಿಲು ಕೊರತೆಯಾಗುವುದು. ಕಷ್ಟ ಪಟ್ಟು ನೆಟ್ಟು ಬೆಳೆಸಿದ ಆ ಕಲ್ಪವೃಕ್ಷಗಳು ಖಾಲಿ ವೃಕ್ಷಗಳಾಗಿ ಬರೀ ಗೊದ್ಮಟ್ಟೆ, ತೆಂಗಿನ ಗರಿ ಕರುಣಿಸುವವಷ್ಟೇ! ಅಡಿಕೆ ಮತ್ತು ತೆಂಗು ಎರಡನ್ನೂ ಒಟ್ಟಿಗೆ ಬೆಳೆಯುವುದು ಅಸಾಧ್ಯವೂ ಅಲ್ಲ, ತಪ್ಪೂ ಅಲ್ಲ! ಆದರೆ ಅಡಿಕೆ ನೆಡುವುದಕ್ಕೂ ಕನಿಷ್ಠ ನಾಲ್ಕೈದು ವರ್ಷಗಳ ಮೊದಲೇ ಬೆಳೆ-ಬಾಳ್ವೆ ಲೆಕ್ಕಾಚಾರ ಅರಿತು ಸೂಕ್ತ ಅಂತರ ಕೊಟ್ಟು ಉತ್ತಮ ತೆಂಗಿನ ಗಿಡಗಳ ನೆಡಬೇಕು, ಬೆಳೆಸಬೇಕು. ಅನಂತರ ಆ ತೆಂಗಿನ ತೋಟದ ನಡುವೆ ಅವಶ್ಯಕ ಅಂತರ ಕೊಟ್ಟು ಉತ್ತಮ ಅಡಿಕೆ ಸಸಿಗಳನ್ನು ನೆಡಬಹುದು, ಬೆಳೆಸಬಹುದು, ತಾಳಿ ಬೆಳೆದು ಎರಡೆರಡು ಬೆಳೆಗಳ ಕಾಸು ಎಣಿಸುತ್ತಾ ಬಾಳಬಹುದು. ಮುಂದುವರಿದು ಸಾಧ್ಯತೆಗಳ ನೋಡಿಕೊಂಡು ಜಾಯಿಕಾಯಿ, ಲವಂಗ, ಕೋಕೋ, ಕಾಫಿ, ಏಲಕ್ಕಿ, ಕಾಳು ಮೆಣಸು ಇತ್ಯಾದಿ ಸಹ ಬೆಳೆಯಬಹುದು. ಇತ್ತೀಚೆಗಿನ ಇನ್ನೊಂದು ಮಗ್ಗುಲು ಅರಿಯೋಣ. ಇತ್ತೀಚಿನ ವರ್ಷಗಳಲ್ಲಿ ರೈತರು ತಮ್ಮ ಭೂಮಿಗೆಲ್ಲಾ ತೆಂಗು ನೆಡುವ ಬದಲು, ತಮ್ಮ ಹೊಲ-ಜಮೀನುಗಳ ಸುತ್ತಲೂ ತೆಂಗಿನ ಗಿಡಗಳ ನಡುವೆ ಸರಿಸುಮಾರು 20 ಅಡಿ ಅಂತರ ಕೊಟ್ಟು ತೆಂಗು ನೆಟ್ಟು ಬೆಳೆಯುತಿಹರು. ಜಮೀನಿನ ಒಳಭಾಗದಲ್ಲಿ ತಮಗಿಷ್ಟವಾದ, ಅನುಕೂಲವಾದ ಬದುಕು ಬೇಸಾಯ ನಡೆಸುತ್ತಿಹರು. ತೆಂಗಿನ ಮರಗಳ ನಡುವೆ ಅಂತರ ಕಡಿಮೆಯಾದರೂ ಸಹ ತೆಂಗಿನ ಸಾಲು ಒಂದೇ ಇರುವ ಕಾರಣ ಅಂತ ಪೈಪೋಟಿ ಸಮಸ್ಯೆ ಕಾಡುವುದಿಲ್ಲ. ಜಮೀನು ಸುತ್ತಲೂ ತೆಂಗು ಸಾಲು ಬೆಳೆಸುವ ಮಾದರಿ ನೋಡುತ್ತಾ ನಮ್ಮ ಹಲವು ರೈತರೀಗ ತಮ್ಮ ಭೂಮಿ ಹೊರಭಾಗದಲ್ಲಿ ತೆಂಗು ಗಿಡಗಳ ನೆಟ್ಟು, ಅದೇ ಸಮಯಕ್ಕೆ ಒಳಭಾಗದಲ್ಲಿ ಅಡಿಕೆ ಗಿಡಗಳ ನೆಡುತ್ತಿಹರು. ಇದೂ ಸಹ ಒಂದು ದೊಡ್ದ ಯಡವಟ್ಟು. ಅಡಿಕೆ ಸಸಿಗಳು ಸರಾಗವಾಗಿ ಬೆಳೆದಂತೆ ಜಮೀನಿನ ಹೊರಭಾಗದಲ್ಲಿರುವ ತೆಂಗಿನ ಗಿಡಗಳಿಗೆ ಗಾಳಿ, ಬೆಳಕು ಮತ್ತು ಬಿಸಿಲಿನ ಕೊರತೆ ಕಾಡುವುದು. ಅಡಿಕೆಗಿಂತ ನಿಧಾನವಾಗಿ ಬೆಳೆಯುವ ತೆಂಗು ವಿಧಿಯಿಲ್ಲದೇ ತನಗೆ ಅವಶ್ಯಕವಿರುವ ಗಾಳಿ-ಬೆಳಕು, ಬಿಸಿಲು ಹರಸಿ ಹೊರಮೈಗೆ ಗರಿಗಳ ಚಾಚಿ ಬೆಳೆಯುತ್ತಾ ಸಾಗುವುದು. ಹೀಗೆ ವಾರೆಯಾಗಿ ಬೆಳೆಯುತ್ತಾ ಬೇರೆ ರೈತರ ಭೂಮಿಗೋ, ದಾರಿಗೋ ಫಸಲು ಬೀಳುವಂತಾಗುವುದು. ಆಮೇಲೆ ಇದ್ದದ್ದೇ ಜಗಳ! ಹೊರಭಾಗದಲ್ಲಿ ಬೆಳೆಸುವ ಮಾದರಿಯಲ್ಲೂ ತೆಂಗಿನ ಗಿಡಗಳನ್ನ ರೈತರು ತಮ್ಮ ಭೂಮಿಯ ಹೊರಭಾಗದಲ್ಲಿ ನೆಟ್ಟು ನಾಲ್ಕೈದು ವರ್ಷಗಳ ಅನಂತರ ಒಳಭಾಗದಲ್ಲಿ ಅಡಿಕೆ ಬೆಳೆಯಬಹುದು. ನಾಲ್ಕೈದು ವರ್ಷಗಳ ಕಾಲ ಕಾಯುವ ತಾಳ್ಮೆ ಇಲ್ಲದವರು ಹೊರಭಾಗದಲ್ಲಿ ತೆಂಗು ಗಿಡಗಳ ನೆಟ್ಟು ಒಳಭಾಗದಲ್ಲಿ ಅಡಿಕೆ ಗಿಡಗಳ ನೆಡುವಾಗ... ತೆಂಗಿನ ಸಾಲಿಗೆ ಹೊಂದಿಕೊಳ್ಳುವ ಒಂದೆರಡು ಅಡಿಕೆ ಸಾಲುಗಳನ್ನ ನಾಲ್ಕೈದು ವರ್ಷಗಳ ಕಾಲ ಖಾಲಿ ಬಿಟ್ಟು ಅನುಕೂಲಕರ ಬೇರೆ ಬೆಳೆ ಬೆಳೆಯಲು ಆ ಜಾಗ ಬಳಸಿಕೊಳ್ಳುತ್ತಿರಬೇಕು. ನಾಲ್ಕೈದು ವರ್ಷಗಳ ನಂತರ ಆ ಖಾಲಿ ಜಾಗದಲ್ಲೂ ಅಡಿಕೆ ನೆಟ್ಟು ಬೆಳೆಸಿಕೊಳ್ಳಬಹುದು. ಹೀಗೆ ಮಾಡುವುದರಿಂದ ತೆಂಗಿಗೆ ಪೈಪೋಟಿ ಸೃಷ್ಟಿಯಾಗದು. ತೆಂಗಿನ ಮರಗಳೂ ಕಂಬದಂತೆ ನೇರಾ ಬೆಳೆಯುವವು, ಫಸಲು ಬಿಟ್ಟು ನಮ್ಮ ಬೆವರಿಗೆ ಕಾಸು ಕೊಡಿಸುವವು. ಪ್ರಕೃತಿ ಸೂಕ್ಷ್ಮಗಳ ಅರಿತು ಬೆಳೆದರಷ್ಟೇ ತೆಂಗೋ, ಅಡಿಕೆಯೋ, ಮತ್ತೊಂದೋ ಆರೋಗ್ಯಕರವಾಗಿ ಬೆಳೆದು ಕಾಂಚಾಣ ಕರುಣಿಸುವುದು. ಮತ್ತೊಂದು ಮುಖ್ಯ ವಿಚಾರ : ನಮ್ಮ ದಕ್ಷಿಣ ಭಾರತದಲ್ಲಿ ಸೂರ್ಯ ಪೂರ್ವ ದಿಕ್ಕಿನಲ್ಲಿ ಮೂಡಿ ದಕ್ಷಿಣಾಭಿಮುಖವಾಗಿ ಚಲಿಸಿ ಪಶ್ಚಿಮದಲ್ಲಿ ಮುಳುಗುವನು. ಸಮಯ ಮದ್ಯಾಹ್ನ 12 ರ ನಂತರದ ಸೂರ್ಯನ ಆರ್ಭಟ, ಅದರಲ್ಲೂ ಬಿರು ಬೇಸಿಗೆ ಮತ್ತು ಬರಗಾಲದಲ್ಲಿ ಅವನ ಕೋಪ-ತಾಪದ ಅಬ್ಬರ ಅಪಾಯಕಾರಿ. ಮೊದಲೇ ಅಡಿಕೆ ಬೆಳೆ ತಂತು ಬೇರು ಹೊಂದಿರುವ ಬಿಸಿಲು ಮತ್ತು ಬರ ಸಹಿಸಲು ಅಶಕ್ತವಾದ ಕಂಬದಂತ ಬೆಳೆ. ಹಂಗಾಗಿ ಪಶ್ಚಿಮ ಮತ್ತು ದಕ್ಷಿಣ ದಿಕ್ಕಿನಲ್ಲಿ ಕಂಬದಂತೆಯೇ ಬೆಳೆಯುವ ತೆಂಗಿಗಿಂತ ಅಥವಾ ತೆಂಗಿನ ಜೊತೆಗೆ ಹಚ್ಚಸಿರ ಹಾಗೂ ಬಿರು ಬೇಸಿಗೆಯಲ್ಲಿ ಹಸಿರ ಮೈಯ್ಯೊದ್ದಿರುವಂತಹ ಗಿಡಮರಗಳ ಬೆಳೆಸುವುದು ಜಾಣತನದಲ್ಲೇ ಜಾಣತನ. ಇದರಿಂದ ತೋಟಕ್ಕಾಗುವ ಉಪಕಾರ ವರ್ಣಾನಾತೀತ.