ಇವು ದ್ವಿದಳ ಜಾತಿಗೆ ಸೇರಿರುವುದರಿಂದ ಸಾರಜನಕ ಸ್ಥಿರೀಕರಿಸಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತವೆ. ಸಾರಜನಕವಲ್ಲದೇ ಮಣ್ಣಿನಲ್ಲಿರುವ ಸಾವಯವದ ಅಂಶ ಹೆಚ್ಚಿಸಲು ಸಹಕಾರಿ ಮತ್ತು ಮಣ್ಣಿನ ಫಲವತ್ತತೆ, ಭೌತಿಕ, ರಸಾಯನಿಕ ಮತ್ತು ಜೈವಿಕ ಗುಣಧರ್ಮ ಸುಧಾರಿಸಿ ಹೆಚ್ಚು ತೇವಾಂಶ ಹಿಡಿದಿಟ್ಟುಕೊಳ್ಳಲು ಸಹಾಯವಾಗುತ್ತದೆ. ಪ್ರಮುಖ ಬೆಳೆಗೆ ಲಭ್ಯವಾಗದೇ ಇರುವ ಮಣ್ಣಿನಲ್ಲಿನ ಪ್ರಧಾನ ಮತ್ತು ಲಘು ಪೋಷಕಾಂಶಗಳನ್ನು ಹಸಿರೆಲೆ ಗೊಬ್ಬರ ಬೆಳೆ ಹೀರಿಕೊಂಡು ಮರಳಿ ಮಣ್ಣಿಗೆ ಸೇರಿಸುವುದರಿಂದ ಅವನ್ನು ಲಭ್ಯವಾಗುವಂತೆ ಮಾಡುತ್ತವೆ. ಹಸಿರೆಲೆ ಗೊಬ್ಬರದ ಪೊದೆ/ಗಿಡಗಳು ಪದೇ ಪದೇ ಕತ್ತರಿಸಿದರೂ ಕೂಡ ಹೊಸ ಚಿಗುರು ಬಿಟ್ಟು ಬೆಳೆಯುವ ಗುಣಧರ್ಮ ಹೊಂದಿವೆ. ಹಸಿರು ಗೊಬ್ಬರದ ಬೆಳೆಗಳನ್ನು ಇಡೀ ಬೆಳೆಯಾಗಿ ಅಥವಾ ಅಂತರ ಬೆಳೆಯಾಗಿ ವಿವಿಧ ಬೆಳೆಗಳಲ್ಲಿ ಬೆಳೆಯಬಹುದು. ಉದಾ. ಹತ್ತಿ, ಕಬ್ಬು, ತಂಬಾಕು, ಮೆಣಸಿನಕಾಯಿ, ಗೋವಿನ ಜೋಳ, ಭತ್ತ, ಅಡಿಕೆ, ತೆಂಗು ಹಾಗೂ ಹಣ್ಣಿನ ಬೆಳೆಗಳು ಹಸಿರು ಗೊಬ್ಬರ ಮುಗ್ಗು ಹೊಡೆಯುವುದರಿಂದ ಮಣ್ಣಿನಲ್ಲಿ ಉಪಯೋಗಿ ಜೀವಾಣುಗಳು ವೃದ್ಧಿಹೊಂದಿ ಜೈವಿಕ ಕ್ರಿಯೆಯನ್ನು ತ್ವರಿತಗೊಳಿಸುತ್ತವೆ. ಮಣ್ಣಿನ ಕೆಳಸ್ಥರದಲ್ಲಿರುವ ಪೋಷಕಾಂಶಗಳನ್ನು ಹಸಿರು/ಹಸಿರೆಲೆ ಗೊಬ್ಬರದ ಬೆಳೆಗಳು ಹೀರಿಕೊಳ್ಳುವುದರಿಂದ, ಹಸಿರು ಗೊಬ್ಬರವನ್ನು ಮುಗ್ಗು ಹೊಡೆದಾಗ/ ಮಣ್ಣಿಗೆ ಸೇರಿಸಿದಾಗ, ಮಣ್ಣಿನಲ್ಲಿನ ಅಲಭ್ಯ ಪೋಷಕಾಂಶಗಳು ಬೆಳೆಗೆ ಲಭ್ಯವಾಗುತ್ತವೆ. ಮೂಲ: ಸುಧಾರಿತ ಬೇಸಾಯ ಕ್ರಮಗಳು ಸೆಪ್ಟೆಂಬರ್ – 2012 , ಕೃಷಿ ವಿಶ್ವವಿದ್ಯಾಲಯ, ಧಾರವಾಡ ಹಾಗೂ ಕೃಷಿ ವಿಶ್ವವಿದ್ಯಾಲಯ, ರಾಯಚೂರು